Friday 5 December 2008

ನೂರೊಂದು ಕನಸು...ಕನಸಾಗೇ ಉಳಿಯಿತು...

ನನ್ನ ಬಾಡಿದ್ದ ಬದುಕಿಗೆ ಹೊಳೆವ ದೀಪ್ತಿಯಾದವಳು ನೀನು, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು, ಎಲ್ಲರ ನಿಂದನೆಗೆ ಗುರಿಯಾಗಿ, ಕಡಿದ ಬಾಳೆ ಗಿಡದಂತಾಗಿದ್ದ ಈ ಖಾಲಿ ಮನಸ್ಸಿಗೆ ಆತ್ಮವಿಶ್ವಾಸ ತುಂಬಿ ಮತ್ತೆ ನನ್ನಲ್ಲಿ ಹೊಸ ಹುರುಪು ಮೊಳಕೆಯೊಡೆಯುವಂತೆ ಮಾಡಿದ ನನ್ನ ರತ್ನ ನೀನು. ಕೈಯಲ್ಲಿ ಒಂದು ಕೆಲಸವೂ ಇಲ್ಲದೆ, ಭವಿಷ್ಯವೇ ಬರಿದಾಗಿ ಕಾಣುತ್ತಿದ್ದಾಗ, ನಿನ್ನ ಸಂಗಡದಿಂದ ಹೊಸ ಉದ್ಯೋಗ ಪ್ರಾಪ್ತಿಯಾಗುವಂತೆ ಮಾಡಿದ್ದು ನೀನು.

ಆವತ್ತು ಯಾವುದೋ ವಿಷಯಕ್ಕೆ ಎಲ್ಲರೂ ನನ್ನ ಸ್ನೇಹಕ್ಕೆ ತಿಲಾಂಜಲಿ ಇಟ್ಟಾಗ ಮತ್ತೆ ನನ್ನ ಸಮರ್ಥನೆಗೆ ಸಾಥ್ ನೀಡಿದ ಸಂಗಾತಿ ನೀನು. ಬೇರೆ ಕಡೆ ಉದ್ಯೋಗ ನಿಮಿತ್ತ ತೆರಳುವ ವೇಳೆಗೆ ಯಾವೊಬ್ಬನೂ ಬರದೇ ಇದ್ದರೂ, ನನ್ನಲ್ಲಿ ಸ್ಪೂರ್ತಿ ತುಂಬಿ, ಅತ್ಯಂತ ಆದರದಿಂದ ಬೀಳ್ಕೊಟ್ಟು, ಆ ನಿಲ್ದಾಣದಲ್ಲೇ ನಮ್ಮ ಪ್ರೀತಿ ಬಗ್ಗೆ ನೀನು ಒತ್ತಿ ಒತ್ತಿ ಹೇಳುತ್ತಿದ್ದಾಗ, ನೀನು ನನ್ನೊಂದಿಗಿಲ್ಲದಿದ್ದಾಗ ಯಾಕೀ ಉದ್ಯೋಗ ಎಂದಿದ್ದೆ ನಾನು. ನನ್ನ ಕಣ್ಣಿನಿಂದ ಒಂದು ಹನಿ ಉದುರಿದ ಕೂಡಲೇ ಗೊಳೋ ಎಂದು ಅಂತಿದ್ದ ನಿನ್ನನ್ನು ಸಮಾಧಾನ ಪಡಿಸುವಾಗಲೇ ಹೊತ್ತು ಮೀರಿತ್ತು. ಹೇಗೋ ಒಲ್ಲದ ಮನಸ್ಸಿನಿಂದ ಆ ಕ್ಷಣದಲ್ಲಿ ನಾವಿಬ್ಬರೂ ಬೇರ್ಪಡಬೇಕಾಯಿತು.

ಅಂದು ನೀನು ನಿಲ್ದಾಣದಲ್ಲಿ ಅತ್ತಷ್ಟು ಬೇರೆಂದೂ ಅತ್ತಿರಲಿಲ್ಲ ಎಂದು ನೀನು ಫೋನ್‍ನಲ್ಲಿ ಹೇಳುತ್ತಲೇ ಇರುತ್ತಿದ್ದಿ. ನೀನು ಅತ್ತದ್ದಕ್ಕೆ ನನಗೆ ಒಂಚೂರು ಬೇಸರವಿಲ್ಲ. ಏಕೆಂದರೆ ನೀನು ನನ್ನನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತೀಯಾ ಎಂದು ನನಗೆ ಗೊತ್ತು. ಆ ಪ್ರೀತಿ ನಮ್ಮಿಂದ ಒಂದು ಕ್ಷಣವನ್ನೂ ಕಳೆಯುವುದು ಅಶ್ವಮೇಧ ಯಾಗ ಮಾಡಿದಷ್ಟೇ ಕಷ್ಟ ಎಂಬುದು ಒಬ್ಬ ಪ್ರೇಮಿಯಾಗಿ ನನಗೆ ಗೊತ್ತು. ಅದಕ್ಕಾಗಿಯೇ ಅಳುವಷ್ಟು ಅತ್ತು ಬಿಡು ಎಂದು ನಿಧಾನವಾಗಿಯೇ ನಾನು ಸಮಾಧಾನ ಮಾಡಿದ್ದು.

ಅದೇನೆ ಇರಲಿ, 3 ವರ್ಷಗಳ ಮೇಲಾಯ್ತು. ಒಂದು ಬಾರಿಯೂ ನಾನು ಮನೆಗೆ ಹೋಗಿಲ್ಲ. ಕೇವಲ ದೂರವಾಣಿ ಮೂಲಕ ನನ್ನ ಹೆತ್ತವರೊಂದಿಗೆ ಸಂವಹಿಸುತ್ತಿದ್ದೇನೆ. ಅವರಿಗೂ ನನ್ನನ್ನು ನೋಡಬೇಕೆಂಬ ತವಕ. ಆ ತುಡಿತ ನನ್ನಲ್ಲೂ ಇದೆ. ಇಲ್ಲಿಗೆ ಬಂದ ಆರು ತಿಂಗಳೊಳಗೆ ನಾನು ವಾಪಸಾಗಬೇಕೆಂದಿದ್ದೆ. ಅಪ್ಪ ಅಮ್ಮನನ್ನು, ಹಾಗೇ ನಿನ್ನನ್ನು ನೋಡಬೇಕೆಂಬ ಮಹದಾಸೆ ಮನಸ್ಸಿನ ತುತ್ತ ತುದಿಯಲ್ಲಿತ್ತು. ಅದರ ಜೊತೆಗೆ ನಮ್ಮ ಹಳ್ಳಿಗೆ ಹತ್ತಿರವಿದ್ದ ನಗರದ ಬ್ರಾಂಚಿನಲ್ಲೇ ನೀನು ಕೆಲಸ ಮಾಡಬಹುದು. ಟ್ರಾನ್‍ಸ್ಫರ್ ಮಾಡಲು ನನ್ನಿಂದ ಅಡ್ಡಿಯಿಲ್ಲ ಎಂದು ನನ್ನ ಬಾಸ್ ಹೇಳಿದ್ದರು. ಆದರೆ ಅವಕಾಶವನ್ನು ನಾನು ತಿರಸ್ಕರಿಸಿದ್ದೆ.

ಕಾರಣ ನಿನಗೆ ಗೊತ್ತು, ನನಗೆ ಗೊತ್ತು; ಆದರೆ ನಾನು ಫೋನಾಯಿಸಿದಾಗ ಸದಾ ನನ್ನ ಹೆತ್ತವರು ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ಏನೋ ಒಂದು ಉತ್ತರ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಊರಿಗೆ ಬಂದರೆ ನಿನ್ನನ್ನು ನೋಡಲು, ಮಾತನಾಡಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ನೀನೇ ಇಲ್ಲದ ಮೇಲೆ ಯಾವ ಸುಖಕ್ಕಾಗಿ ನಾನು ಬರಬೇಕು? ಹೌದು, ನನ್ನ ಹೆತ್ತವರನ್ನು ನೋಡಬೇಕು. ಅವರನ್ನು ಕಾಣದೆ ವರ್ಷಗಳಾಗಿವೆ. ಆದರೆ ನಿನ್ನನ್ನು ಕಳೆದುಕೊಂಡ ದು:ಖದಲ್ಲಿ ಅಪ್ಪ ಅಮ್ಮನಲ್ಲಿ ನಾನು ಲೋಕಾಭಿರಾಮವಾಗಿ ಹೇಗೆ ಮಾತನಾಡಲು ಸಾಧ್ಯ? ವರ್ಷಗಳ ನಂತರ ಮಗ ಊರಿಗೆ ಬಂದರೂ ನಮ್ಮಲ್ಲಿ ಸರಿಯಾಗಿ ಮಾತನಾಡಿಲ್ಲ ಎಂಬ ಕೊರಗು ಅವರನ್ನು ಕಾಡದೇ ಇರದು. ನಾನು ಬಂದರೆ ಒಂದು ರೀತಿಯಲ್ಲಿ ಅವರಿಗೂ ಬೇಸರ. ಆದರೆ ಹಾಗೆ ಮಾಡಲು ಖಂಡಿತಾ ಒಪ್ಪಿಗೆಯಿಲ್ಲ. ಆದರೆ ನಾನು ಬರದಿರದ ಹಿಂದಿನ ವಾಸ್ತವವನ್ನು ಹೇಗೆ ಅವರಿಗೆ ವಿವರಿಸಲಿ?

ಗೆಳತಿ, ಊರು ಬಿಟ್ಟು ಬಂದಿದ್ದರೂ, ನಿನ್ನ ನೆನೆಯದೇ ಒಂದು ಕ್ಷಣವೂ ಮುಂದುವರಿಯುತ್ತಿರಲಿಲ್ಲ. ನಿನ್ನಲ್ಲಿ ಒಂದಕ್ಷರ ಮಾತನಾಡದಿದ್ದರೂ ನನಗೆ ದಿನದೂಡಲಾಗುತ್ತಿರಲಿಲ್ಲ. ಆದರೆ ದಿನಕಳೆದಂತೆ ನೀನೆ ನನ್ನನ್ನು ದೂರ ಮಾಡಿದೆ. ಏಕೆ ಹೀಗೆ ಮಾಡುತ್ತಿದ್ದಿ ಎಂದು ಕೇಳಿದರೂ ನೀನು ನನ್ನಲ್ಲಿ ಏನನ್ನೂ ಹೇಳಲಿಲ್ಲ. ಅದೊಂದು ದಿನ ಮಾಮೂಲಿಯಂತೆ ನನ್ನ ಇ-ಮೇಲ್ ನೋಡುತ್ತಿದ್ದ ಸಂದರ್ಭದಲ್ಲಿ ನೀನು ಕಳುಹಿಸಿದ್ದ ಆಮತ್ರಣ ಪತ್ರಿಕೆ ನೋಡಿ ದಂಗುಬಡಿದಂತಾಗಿದ್ದೆ ನಾನು! ಎರಡು ದಿನ ಆಫೀಸಿಗೂ ತೆರಳಿರಲಿಲ್ಲ. ನಿನ್ನ ನೆನಪಿನಲ್ಲೇ ದಿನ ದೂಡುತ್ತಿದ್ದ ನನಗೆ ಈ ರೀತಿಯ ಮೋಸ ಏಕೆ ಮಾಡಿದೆ?

ನಿನ್ನಲ್ಲಿ ಉತ್ತರವನ್ನು ನಾನು ಇದುವರೆಗೆ ಕೇಳಿಲ್ಲ. ಆ ಬಳಿಕ ಒಂದು ಬಾರಿಯೂ ನಾವು ಮಾತನಾಡಿಲ್ಲ. ಅದೇಗೋ ನಿನ್ನ ಮದುವೆ ಸಮಾರಂಭದ ಚಿತ್ರಗಳನ್ನು ನಾನು ನೋಡಿದ್ದೆ. ರೇಷ್ಮೆ ಸೀರೆ ಸುತ್ತಿದ್ದ ನಿನ್ನನ್ನು ಮೊದಲ ಬಾರಿ ಸೀರೆಯಲ್ಲಿ ಕಂಡಿದ್ದ ನಾನು ಆ ಸೌಂದರ್ಯವನ್ನು ಹಾಡಿ ಹೊಗಳಬಲ್ಲೆ. ಆದರೆ ಆ ಹಕ್ಕನ್ನು ನಾನಿಂದು ಕಳೆದುಕೊಂಡಿದ್ದೇನೆ ಎಂದು ಅತ್ಯಂತ ನೋವಿನಿಂದ ಹೇಳಿದರೂ, ನಿನ್ನಲ್ಲಿ ಮಾತನಾಡಬೇಕೆಂದು ಮನಸ್ಸು ಹೇಳುತ್ತಿದೆ. ಆದರೆ ಅದು ಅಸಾಧ್ಯ ಎಂದು ಗೊತ್ತಿದ್ದರೂ ನನ್ನ ಮನಸ್ಸೊಪ್ಪುತ್ತಿಲ್ಲ. ನಿನ್ನ ನೋಡಬೇಕು, ನಿನ್ನಲ್ಲಿ ಜಗಳವಾಡಬೇಕೆಂದು ಮನಸ್ಸು ಸಾರಿ ಹೇಳುತ್ತಿದ್ದರೂ, ವಿಧಿ ತನ್ನದೇ ಆಟವಾಡಿದೆ.

ಅಪ್ಪ, ಅಮ್ಮ; ನಾನು ನಿಜವಾಗಿಯೂ ಇದೇ ಕಾರಣಕ್ಕಾಗಿ ಊರಿಗೆ ಬಂದಿಲ್ಲ...ಬರುವ ಯೋಚನೆ ಕೂಡ ಮಾಡಿಲ್ಲ :-(

Thursday 27 November 2008

ನಿಜವಾದ ಭಯೋತ್ಪಾದಕರು ಯಾರು?


ಬಹುಶಃ ಕಳೆದ ರಾತ್ರಿ ಮುಂಬೈಯ ಬಹುತೇಕ ಮಂದಿಗೆ ಕಂಡೂ ಕೇಳರಿಯದ ಕರಾಳ ರಾತ್ರಿ. ಗುಜರಾತ್‌ನಿಂದ ಮೀನುಗಾರರ ದೋಣಿಯಲ್ಲಿ ಜಲಮಾರ್ಗದ ಮೂಲಕ ರಾಜಾರೋಷವಾಗಿ ಮುಂಬೈ ನಗರಿಗೆ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು, ಹಲವು ನಾಗರಿಕರನ್ನು ಹತ್ಯೆಗೈದದ್ದು ಮಾತ್ರವಲ್ಲ, ಇಡೀ ಮುಂಬೈ ನಗರವೇ ತತ್ತರಿಸುವಂತೆ ಮಾಡಿದ್ದಾರೆ.

ಮಾಲೇಗಾಂವ್ ಸ್ಫೋಟದ ಬಳಿಕ ಎರಡನೇ ಬಾರಿ ಉಗ್ರರು ಮುಂಬೈ ನಗರವನ್ನು ಗುರಿಯಾಗಿಸಿದ್ದಾರೆ. ಭಾರತದ ಪ್ರಮುಖ ವಾಣಿಜ್ಯ ನಗರಿ ಉಗ್ರರ ದಾಳದಲ್ಲಿ ಸಿಲುಕಿದೆ. ಎಟಿಎಸ್ ಪಡೆಯ ಮುಖ್ಯಸ್ಥ ಹಾಗೂ ಮಾಲೇಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಕರ್ಕರೆ ಅವರು ಉಗ್ರರೊಂದಿಗಿನ ಹೋರಾಟದಲ್ಲಿ ಬಲಿಯಾಗಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಸಲಾಸ್ಕರ್ ತಮ್ಮ
ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿಯಾಗಿದೆ. ಮತ್ತೊಬ್ಬ ಪೊಲೀಸ್ ಅಮಿತ್ ಕಾಮ್ಟೆ ಅವರೂ ಜೀವ ತೆತ್ತಾಗಿದೆ... ಒಟ್ಟು ಈಗಾಗಲೇ ೧೯ ಪೊಲೀಸರು ಉಗ್ರರೊಂದಿಗಿನ ಕಾಳಗದಲ್ಲಿ ಮೃತಪಟ್ಟಾಗಿದೆ ಎಂದು ವರದಿಯಾಗಿದೆ. ನೂರಾರು ಮಂದಿ ನಾಗರಿಕರು ದಾಳಿಗೆ ಸಿಲುಕಿ, ಹಲವಾರು ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.

ದೆಹಲಿಯಲ್ಲಿರುವ ನಾವು ಮುಂಜಾನೆ ಟಿವಿ ನೋಡುತ್ತಿದ್ದಾಗ ಮುಂಬೈ ಹೊತ್ತಿಉರಿಯುತ್ತಿರುವುದು ಸ್ಪಷ್ಟವಾಗಿತ್ತು. ಉಗ್ರರು ನೂರಾರು ಮಂದಿ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ತಾಜ್ ಹೋಟೆಲ್ ಹೊರಗೆ ಕಾಣುತ್ತಿದ್ದ ದೃಶ್ಯಗಳೆಲ್ಲಾ ಹೃದಯಕಲಕುವಂತಿದ್ದವು. ಪೊಲೀಸರ ವಾಹನವನ್ನೇ ಹೈಜಾಕ್ ಮಾಡಿದ ಉಗ್ರರು ಕಾರಿನೊಳಗಿಂದಲೇ ಗುಂಡಿನ ದಾಳಿ ನಡೆಸುತ್ತಿದ್ದ ದೃಶ್ಯ ಆಧುನಿಕ ಜಗತ್ತಿನ ರಕ್ಕಸರು ರುದ್ರ ನರ್ತನ ನಡೆಸುತ್ತಿರುವಂತಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಯೋಚಿಸದೆ ಪೊಲೀಸರು ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸುತ್ತಿದ್ದರು.

ಆದರೆ ಇಷ್ಟೆಲ್ಲಾ ಆಗುತ್ತಿರುವಾಗ ನಮ್ಮ ಮನೆಯ ಹೊರಗಿನಿಂದ ಜಯಘೋಷಗಳ ಸದ್ದು ಕೇಳಿಬರುತ್ತಿತು. ದೆಹಲಿಯಲ್ಲಿ ಇನ್ನೊಂದು ದಿನದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಯಾವುದೋ ಪಕ್ಷದ ಕಾರ್ಯಕರ್ತರು ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗೇ ಅಟ್ಟಹಾಸದ ಮೂಲಕವೇ ನಡೆಸುತ್ತಿದ್ದರು. ಅದೇ ಹೊತ್ತಿಗೆ ನನ್ನ ಮೊಬೈಲ್ ಒಂದು ಮೆಸೇಜ್ ಕೂಡ ಬಂತು. ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನೆಷ್ಟು ಹೆಣಗಳು ಉರುಳುತ್ತವೋ ಎಂಬುದನ್ನು ನಾವು ಕಾದುನೋಡಬೇಕಷ್ಟೆ ಎಂದೆಲ್ಲಾ ಮೆಸೇಜ್ ತುಂಬಿಹೋಗಿತ್ತು. ಸರಿ ಆ ಮೆಸೇಜ್ ಒತ್ತಟ್ಟಿಗಿರಲಿ, ಇದುವೆರೆಗೆ ಮಾಧ್ಯಮಗಳಲ್ಲಿ ನೋಡಿದ್ದ ಕೆಸರೆರೆಚಾಟಗಳನ್ನು ಎಸ್‌ಎಂಎಸ್‌ನಲ್ಲೂ ಓದುವ ದುರ್ಗತಿ ಬಂತೇ ಎಂದು ಆಶ್ಚರ್ಯವಾಯಿತು. ಹೌದು ಇನ್ನೆರಡು ದಿನಗಳಲ್ಲಿ ಚುನಾವಣೆ ಇರುವಾಗ ಮುಂಬೈನಲ್ಲಿ ಉಗ್ರರ ದಾಳಿಯಿಂದ ನಡುಗಿ ಹೋಗಿದ್ದರೆ, ಪ್ರತಿ ಪಕ್ಷಗಳಿಗೆ ಇದಕ್ಕಿಂತ ಸಂತೋಷದ ಸುದ್ದಿ ಬೇರೇನಿದೆ ತಾನೆ? ಚುನವಣಾ ಪ್ರಚಾರದಾದ್ಯಂತ ಇದು ಆಡಳಿತ ಸರ್ಕಾರದ ವೈಫಲ್ಯ ಎಂದು ಅದನ್ನೇ ಎತ್ತಿಹಿಡಿಯುತ್ತಾ, ಇಂತಹ ಬರ್ಬರ ಸ್ಥಿತಿಯಲ್ಲೂ ಅದನ್ನೇ ಚುನಾವಣಾ ಅಸ್ತ್ರವನ್ನಾಗಿ, ಜನಸಾಮಾನ್ಯರನ್ನು ಓಲೈಸುವ ಈ ಕೀಳು ಮಟ್ಟದ ರಾಜಕೀಯ ಫುಡಾರಿಗಳು ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ, ನಮ್ಮ ದೇಶದ ಅಮಾಯಕರು ಇನ್ನೆಷ್ಟು ಜನರು ನೆತ್ತರ ಹೊಳೆಯನ್ನು ಹರಿಸಬೇಕಿದೆ ಎಂಬೆಲ್ಲಾ ಕರಾಳ ಪ್ರಶ್ನೆಗಳು ಮನದಲ್ಲಿ ಮೂಡದೇ ಇರಲಿಲ್ಲ. ಮೊನ್ನೆತಾನೆ ಮಾಲೇಗಾಂವ್ ಸ್ಫೋಟ ಸಂಭವಿಸಿ ಇಡೀ ಮಹಾರಾಷ್ಟ್ರವೇ ನಲುಗಿಹೋಗಿತ್ತು. ಉಗ್ರ ನಿಗ್ರಹ ದಳ ನಡೆಸಿದ ತನಿಖೆ ಮೂಲಕ ಕೆಲವು ಸ್ವಯಂಘೋಷಿತ ಸ್ವಾಮೀಜಿಗಳು ಈ ಉಗ್ರಕೃತ್ಯವನ್ನು ನಡೆಸಿದ್ದು ಎಂದು ತಿಳಿದು ಬಂದ ಕೂಡಲೇ ಕಾಂಗ್ರೆಸ್‌ನ ಹಲವು ಮಂದಿಯಲ್ಲಿ ಹರ್ಷದ ಹೊನಲು ಮೂಡಿತ್ತು. ಇನ್ನೇನು ಸಾರ್ವತ್ರಿಕ ಚುನಾವಣೆ ದೂರದಲ್ಲೇನಿಲ್ಲ. ಹಾಗೇ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿದ್ದ ಕಾರಣ ಕಾಂಗ್ರೆಸ್ ಮಂದಿಗೆ ‘ಹಿಂದೂ ಭಯೋತ್ಪಾದನೆ’ಯೇ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ಇಷ್ಟು ದಿನಗಳ ಕಾಲ ‘ಇಸ್ಲಾ ಭಯೋತ್ಪಾದನೆ’ ಎಂದು ಬೊಬ್ಬಿಡುತ್ತಿದ್ದ ಮಂದಿಯ ವಿರುದ್ಧ ಧ್ವನಿಯೆತ್ತಲು ಕಾಂಗ್ರೆಸ್ ಇದು ದೊಡ್ಡ ಉಡುಗೊರೆಯಾಗೇ ದೊರೆಯಿತು.

ಒಟ್ಟಾರೆ ಭಯೋತ್ಪಾದಕರೆಂಬ ಆಧುನಿಕ ಯುಗದ ರಾಕ್ಷಸರ ನಡುವೆ, ಜಡ ವ್ಯವಸ್ಥೆಗೆ ಅಂಟಿಕೊಂಡು ನಾಚೆಕೆಗೇಡಿನ ರಾಜಕೀಯದ ನಡುವೆ, ಬರೀ ಸ್ವಾರ್ಥ, ಅಧಿಕಾರ ದಾಹದಿಂದ ಯಾರ ಬೆನ್ನಿಗೂ ಚೂರಿ ಹಾಕಲು ತಯಾರಾಗಿರುವ, ಜನಸಾಮಾನ್ಯ ಧ್ವನಿಯಗಿರುತ್ತೇವೆ ಎಂದು ಪ್ರಮಾಣ ವಚನ ಮಾಡಿ, ಜನಸಾಮಾನ್ಯರಿಗೆ ಧ್ವನಿ ಎತ್ತದಂತೇ ಮಾಡುವ, ಐದು ವರ್ಷದುದ್ದಕ್ಕೂ ತಮ್ಮ ಜೇಬನ್ನು ಬೇಕಾದಷ್ಟು ತುಂಬಿಸಿ, ದೇಶದ ನಿರ್ಗತಿಕ ಮಂದಿಯ ಜೀವದೊಂದಿಗೆ ಪ್ರತಿದಿನ, ಪ್ರತಿಕ್ಷಣವೂ ಆಟವಾಡುವ ಜಗತ್ತಿನ ಅತಿಕೆಟ್ಟ, ಅತ್ಯಂತ ಹೇಸಿಗೆಯ ಜೀವನ ನಡೆಸುತ್ತಿರುವ ಮಹಾನ್ ರಾಜಕಾರಣಿಗಳ ನಡುವೆ ಇಂದು ನಾವು ಬದುಕುತ್ತಿದ್ದೇವೆ.

ಕಳೆದ ಆರೇಳು ತಿಂಗಳಿನಿಂದ ಇಡೀ ರಾಷ್ಟ್ರವೇ ಭಯೋತ್ಪಾಕರ ನಿರಂತರ ದಾಳಿಯಿಂದ ಕಂಗೆಟ್ಟುಹೋಗಿದ್ದರೂ, ಯಾವೊಬ್ಬ ಜನಪ್ರತಿನಿಧಿ ಕೂಡ ಜನಸಾಮಾನ್ಯನ ಬದುಕಿನ ಬಗ್ಗೆ ಯೋಚಿಸಿಲ್ಲ. ದಾಳಿಗಳಲ್ಲಿ ಗಾಯಗೊಂಡ, ಮೃತಪಟ್ಟ ಮಂದಿಯ ಕುಟುಂಬಕ್ಕೆ ಸಾವಿರಗಟ್ಟಲೆ ಸಹಾಯಧನ ಘೋಷಿಸಿ, ಅದನ್ನೂ ನೀಡದೇ, ಈಗ ಮತ್ತೊಂದು ಉದ್ರ ದಾಳಿ ನಡೆದಾಗ ಮತ್ತೆ ಅದೇ ರಾಗ ಎಳೆಯುತ್ತಿದ್ದಾರೆ. ಅತ್ತ ಮುಂಬೈನಲ್ಲಿ ಅಮಾಯಕ ಮಂದಿಯ ಮಾರಣಹೋಮವಾಗುತ್ತಿದ್ದರೆ ಇತ್ತ ರಾಜಕೀಯ ಫುಡಾರಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸದ್ಯ ಬಿಜೆಪಿ, ಕಾಂಗ್ರೆಸ್ ಇಬ್ಬರಿಗೂ ಭಯೋತ್ಪಾದನೆಯೇ ಚುನಾವಣೆಯ ಪ್ರಮುಖ ಅಸ್ತ್ರ. ಆದರೆ ಇವರ ‘ಬ್ಲೇಮ್ ಗೇಮ್’ನ ಮಧ್ಯೆ ನರಳುತ್ತಿರುವವರು ಏನೂ ಅರಿಯದ ಅಮಾಯಕರು. ಈಗ ಹೇಳಿ ನಿಜವಾದ ಭಯೋತ್ಪಾದಕರು ಯಾರೆಂಬುದನ್ನು?

Thursday 30 October 2008

ನೀನಿರದ ದೀಪಾವಳಿಯೇತಕೆ?

ಮೂರು ದಿನಗಳು ಹೇಗೆ ಕಳೆದುಹೋದವೋ ನನಗಂತೂ ಗೊತ್ತಿಲ್ಲ. ಕಳೆದ ವರ್ಷ ದೀಪಾವಳಿಯಂದು ಸಾಥ್ ನೀಡಿದ್ದ ನೀನು ಈ ಬಾರಿ ನನ್ನನ್ನು ಒಂಟಿಯಾಗುವಂತೆ ಮಾಡಿದ್ದಿ. ನೀನಿಲ್ಲದೆ ಆ ಮೂರು ದಿನಗಳು ಕಾಡಿದ ‘ಒಂಟಿತನ’ ನನ್ನ ಬದುಕಿನಲ್ಲ ಇನ್ಯಾವತ್ತೂ ಬರುವುದು ಬೇಡ. ಒಮ್ಮೆ ಯೋಚಿಸು. ಅಂದಿನ ಆ ದಿನಗಳು ಎಷ್ಟು ಸುಂದರವಾಗಿದ್ದವು. ದೀಪಾವಳಿಯ ಒಂದು ದಿನ ಮುನ್ನವೇ ನೀ ನನ್ನ ಮನೆಗೆ ಬಂದಿದ್ದೆ. ನಿನ್ನ ಆಗಮನಕ್ಕಾಗೇ ತುದಿಗಾಲಲ್ಲಿ ನಿಂತು ಕಾದಿದ್ದ ನಾನು ನೀ ಬಂದ ತಕ್ಷಣವೇ ಸ್ವರ್ಗವೇ ಧರೆಗಿಳಿದು ಬಂತೇನೋ ಅಂದುಕೊಂಡಿದ್ದೆ.

ಅದು ನೀನು ನಮ್ಮ ಮನೆಗೆ ಮೊದಲ ಬಾರಿ ಬಂದದ್ದು. ನಿನ್ನ ಮನದಲ್ಲಿದ್ದ ಗೊಂದಲಗಳನ್ನು ನಾನರ್ಥಮಾಡಿಕೊಂಡಿದ್ದೆ. ಅಂದು ರಾತ್ರಿ ನೀ ಹೇಳಿದ ಒಂದೊಂದು ಮಾತುಗಳು ಇಂದೂ ನನ್ನ ಕಿವಿಯಲ್ಲಿ ಗಿರಕಿಹೊಡೆಯುತ್ತಲೇ ಇವೆ. ಅಮ್ಮ ನಿನ್ನನ್ನು ಹೋಗುವುದು ಬೇಡ ಎಂದಿದ್ದರೂ, ಹಠ ಮಾಡಿ ನೀನು ಬಂದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಅಷ್ಟಕ್ಕೂ ನಮ್ಮಿಬ್ಬರ ನಡುವೆ ಇದ್ದ ಪ್ರೀತಿಯೇ ಎಲ್ಲದಕ್ಕೂ ಸಾಕ್ಷಿಯಾಗಿದ್ದವು. ನಿನಗೆ ಗೊತ್ತೇ, ಅಂದು ನಿನ್ನ ಹೆತ್ತವರಂತೆ ನನ್ನ ಹೆತ್ತವರೂ ಕೂಡ ನೀ ಮನೆಗೆ ಬರುವ ವಿಷಯದ ಬಗ್ಗೆ ಚಕಾರ ಎತ್ತಿದ್ದರು. ಹಾಗಿದ್ದರೂ ಏನೆಲ್ಲಾ ಹೇಳಿ, ಅವರ ಮನವೊಲಿಸಿ, ನಿನ್ನನ್ನು ಮನೆಗೆ ಕರೆತರುವಲ್ಲಿ ನಾನು ಯಶಸ್ವಿಯಾಗಿದ್ದೆ. ಅಪ್ಪನಿಗಿಂತಲೂ ಅಮ್ಮ ನಿನ್ನ ವಿಷಯದ ಕುರಿತಾಗಿ ಬಹಳಷ್ಟು ವಾದ ಮಾಡಿ, ನನ್ನ ನಿರ್ಧಾರ ಬದಲಾಯಿಸಲು ಪ್ರಯತ್ನಿಸಿದ್ದರು. ಆದರೆ ನಾನೂ ಅಷ್ಟೇ ಹಠ ಮಾಡಿ, ವಾದ ಮಾಡಿ ಅವರ ಬಾಯನ್ನು ಮುಚ್ಚಿಸಿದ್ದೆ. ಇಷ್ಟೆಲ್ಲಾ ಮಾಡಿದ್ದು ನಿನಗಾಗಿ. ನಮ್ಮ ಪ್ರೀತಿಗೆ ಯಾವುದೂ ಅಡ್ಡಗಾಲಾಗದಿರಲಿ ಎಂಬ ಕಾರಣಕ್ಕಾಗಿ.

ನೀನು ಗಮನಿಸಿದ್ದೆಯಾ, ನೀನು ಬಂದಿದ್ದ ಎರಡನೇ ದಿನದಂದು ನನ್ನ ಅಮ್ಮನಲ್ಲಿ ಕೋಪದ ಛಾಯೆ ಅಚ್ಚೊತ್ತಿದ್ದದ್ದನ್ನು. ಅಮ್ಮನಿಗೆ ಏಕೆ ಕೋಪ ಬಂದಿತ್ತು ಎಂಬುದು ನನಗಾಗಲೇ ಗೊತ್ತಾಗಿತ್ತು. ಅದನ್ನು ಅವರು ನೀ ಹೋದ ಮಾರನೇ ದಿನ ನನ್ನಲ್ಲಿ ಹೇಳಿದ್ದರು. ಆದರೆ ಆ ಕೋಪ ಏಕೆ ಎಂಬುದು ನಿನಗೆ ಗೊತ್ತಿರಲಿಲ್ಲ. ಬಿಡು, ಆ ವಿಷಯ ಈಗ ಮಾತಾಡಿ ಪ್ರಯೋಜನವಿಲ್ಲ. ಇರಲಿ, ಆ ಮೂರು ದಿನದ ದೀಪಾವಳಿ ನಮ್ಮಿಬ್ಬರ ಬದುಕಿಗೆ ಹೊಸ ಹೊರಪು ನೀರಲಿದೆ ಎಂದು ನಾವು ಕನಸುಕಂಡಿದ್ದು, ರಾತ್ರಿಯ ಹೊತ್ತಲ್ಲಿ ಎಲ್ಲರೂ ಪಟಾಕಿಗಳ ಲೋಕದಲ್ಲಿ ಸಂಭ್ರಮ ಪಡುತ್ತಿದ್ದರೆ ನಾವಿಬ್ಬರೂ ನಮ್ಮ ಭಾವನಾಲೋಕದಲ್ಲಿ ಕನಸ ಕಾಣುತ್ತಾ ಹೊತ್ತು ಕಳೆದಿದ್ದೆವು. ನಮ್ಮ ಭವಿಷ್ಯ, ಉದ್ಯೋಗ ಹಾಗೂ ನಮ್ಮ ಮುಂದಿನ ಜೀವನದ ಬಗ್ಗೆ ಸಾಕಷ್ಟು ಹೊತ್ತು ಮಾತನಾಡುತ್ತಾ ಕಾಲ ಕಳೆದಿದ್ದೆವು. ಆ ಮಾತುಗಳ ಮಧ್ಯೆ ನಾವು ಎಲ್ಲವನ್ನೂ ಮರೆತಿದ್ದೆವು. ನನ್ನ ಹೆತ್ತವರ ಜೊತೆ ದೀಪಾವಳಿ ಆಚರಿಸುವುದನ್ನೂ! ಅದಕ್ಕೆ ಅಂದು ಅಮ್ಮನಿಗೆ ಕೋಪ ಬಂದಿತ್ತು. ಇಷ್ಟೆಲ್ಲಾ ಆಗುವ ಹೊತ್ತಿಗೆ ದೀಪಾವಳಿಯ ಮೂರನೇ ದಿನದ ಅಂತ್ಯವೂ ಹತ್ತಿರವಾಗಿತ್ತು. ಮಾರನೆ ದಿನದ ಬೆಳಗಿನ ಜಾವದ ಬಸ್ಸಲ್ಲಿ ಹೋಗಲು ನೀನು ಅಣಿಯಾಗಿದ್ದೆ. ಹಾಗಾಗಿ ಆ ರಾತ್ರಿ ನನಗೆ ನಿದ್ದೆಯೇ ಬಂದಿರಲಿಲ್ಲ. ನೀನು ನನ್ನಿಂದ ಮಾರು ದೂರದ ಕೋಣೆಯಲ್ಲಿ ಮಲಗಿದ್ದರೂ, ನಮಗಿಬ್ಬರಿಗೂ ನಿದ್ದೆ ಬಂದಿರಲಿಲ್ಲ ಎಂಬುದು ಇಬ್ಬರಿಗೂ ಗೊತ್ತು. ನಮ್ಮಿಬ್ಬರ ಮೊಬೈಲ್‌ಗಳು ಬ್ಯುಸಿಯಾಗಿದ್ದೇ ಇದಕ್ಕೆ ಸಾಕ್ಷಿ.

ಸರಿ ಮಾರನೇ ದಿನ ನೀ ಹೊರಟೆ. ದೀಪಾವಳಿ ಮುಗಿದಿತ್ತು. ಮತ್ತದೇ ಮಾಮೂಲಿ ದಿನಗಳು...ನೀನಲ್ಲಿ; ನಾನಿಲ್ಲಿ... ಎಂದುಕೊಂಡು ಬಸ್ಸು ದೂರಸಾಗಿದ್ದರೂ ನಾನು ಟಾ ಟಾ ಮಾಡುತ್ತಲೇ ಇದ್ದೆ.
ಆದರೆ ಈ ವರ್ಷದ ದೀಪಾವಳಿ ನೆನೆಸಿಕೊಂಡಾಗ ನನಗೆ ಕಾಡುತ್ತಿರುವ ವೇದನೆ ಅಷ್ಟಿಷ್ಟಲ್ಲ. ಆ ಮೂರು ದಿನಗಳ ಒಂದು ರಾತ್ರಿಯೂ ಕೂಡ ನನಗೆ ನಿದ್ದೆ ಬಂದಿಲ್ಲ. ಬಂದದ್ದು ಬರೀ ಕಣ್ಣೀರುಗಳು ಮಾತ್ರ. ಏಕೆಂದರೆ ಅಂದು ನಿನ್ನೊಂದಿಗೆ ಆಚರಿಸಿದ ದೀಪಾವಳಿಯೇ ನನ್ನ ಪಾಲಿನ ಕೊನೆಯ ದೀಪಾವಳಿ. ನಮ್ಮ ಬದುಕಿಗೆ ಹೊಸ ಹುರುಪು ನೀಡುವ ದೀಪಾವಳಿ ಇದು ಎಂದು ಆ ರಾತ್ರಿ ಕಂಡಿದ್ದ ಕನಸು ನಿನ್ನೊಂದಿಗೆ ಛಿದ್ರಛಿದ್ರಗೊಂಡಿತ್ತು. ದೀಪಾವಳಿ ಮುಗಿಸಿ ಅಂದು ನೀನು ಹೊರಟ ಆ ಬಸ್ ಅಪಘಾತದಲ್ಲಿ ಮೃತಪಟ್ಟವರ ಎದುರು ಕಣ್ಣೀರ ಹೊಳೆ ಹರಿಸಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ.

ನಿನ್ನನ್ನು ಕಳೆದುಕೊಂಡು ಇಂದಿಗೆ ಒಂದು ವರ್ಷವಾಯಿತು ನೋಡು. ಈ ದೀಪಾವಳಿಯಂದು ಕಾಡಿದಷ್ಟು ನೀನು ಯಾವತ್ತೂ ಕಾಡಿರಲಿಲ್ಲ. ಎಲ್ಲರೂ ಬೆಳಕಿ
ನ ಹಬ್ಬದಲ್ಲಿ ನಿರತರಾಗಿದ್ದಾರೆ ನಾನು ಮಾತ್ರ ಮನೆಯ ಒಂದು ಮೂಲೆಯಲ್ಲೇ ಕುಳಿತಿದ್ದೆ. ಇಂದು ನೀನಿರದಿದ್ದರೂ; ನೀನು ಕಳುಹಿಸಿದ್ದ ಒಂದೊಂದು ಎಸ್‌ಎಂಎಸ್‌ಗಳನ್ನು ನಾನು ಓದದ ದಿನಗಳಿಲ್ಲ. ನನ್ನ ಒಂದೊಂದು ಕೆಲಸದ ಮುಂಚೆ ನಿನ್ನನ್ನು ನೆನೆಯುತ್ತಲೇ ಇದ್ದೇನೆ. ಇಂದು ನಾನು ಉದ್ಯೋಗ ನಿಮಿತ್ತ ಮನೆಯಿಂದ ಎಷ್ಟೋ ದೂರದಲ್ಲಿದ್ದೇನೆ. ಬಹುಶಃ ನೀನಿರುತ್ತಿದ್ದರೆ ನಾನಿಲ್ಲಿ ಖಂಡಿತಾ ಬರುತ್ತಿರಲಿಲ್ಲ. ಆದರೂ ನೀನು ಇಂದಿಗೂ ನನ್ನ ಜೊತೆಯೇ ಇದ್ದೀಯಾ... ಕತ್ತಲೆ ತುಂಬಿದ ಮನದ ಮನೆಗೆ ಭರವಸೆ ತುಂಬುವ ಬೆಳಕಿನ ಹಾಗೆ...

Friday 19 September 2008

ಹೀಗೊಂದು ಸ್ವಾತಂತ್ರ್ಯಗಾಥೆ...

ಅದು 104 ವರ್ಷದ ಹಿರಿಯ ಜೀವ. 66 ವರ್ಷಗಳ ಹಿಂದೆ ಗಾಂಧೀಜಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆಕೊಟ್ಟಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಎನ್.ಎಚ್. ಹುಚ್ಚುರಾಯಪ್ಪ 'ಕ್ವಿಟ್ ಇಂಡಿಯಾ' ಚಳವಳಿಗೆ ಧುಮುಕಿದ್ದರು. ಅಂದಿನಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಹೋರಾಟವನ್ನೇ ಜೀವನವಾಗಿಸಿಕೊಂಡಿದ್ದ ಹುಚ್ಚುರಾಯಪ್ಪ, ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಕೂಡ ಒಂದು ಹೋರಾಟ ಮಾಡಿದರು.

ಇದು ಒಂಥರ ವಿಚಿತ್ರವಾದ ಹೋರಾಟ. ಅವರು ಕರ್ನಾಟಕದಿಂದ ನವದೆಹಲಿಗೆ ಹೊರಟಿದ್ದು, ದೇಶದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ್ದ ಚಹಾಕೂಟದಲ್ಲಿ ಭಾಗವಹಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹ್ವಾನದ ಮೇರೆಗೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೇ ಸೇರಿರುವ ಹುಚ್ಚುರಾಯಪ್ಪ ಅವರನ್ನು ವಿಮಾನದ ಮೂಲಕ ನವದೆಹಲಿಗೆ ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಕಚೇರಿ ತಿಳಿಸಿತು. ಅದರೆ, ಕೊನೆಯ ಕ್ಷಣದಲ್ಲಿ ನಿಮ್ಮ ಪ್ರಯಾಣದ ವ್ಯವಸ್ಥೆ ನೀವು ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಕಚೇರಿ ಕೈತೊಳೆದುಕೊಂಡಿತು. ಕೊನೆಗೆ ತಮ್ಮ ಸಹಾಯಕ್ಕಾಗಿ ಮಗನನ್ನು ಕರೆದುಕೊಂಡು ರೈಲು ಹತ್ತಿದ ಹಿರಿಯ ಜೀವ ನವದೆಹಲಿ ತಲುಪಿತು.

ಇವರಂತೆಯೇ ಕರ್ನಾಟಕದಿಂದ ಇನ್ನೂ ನಾಲ್ವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಪತಿ ಭವನದಲ್ಲಿನ ವಿಶೇಷ ಚಹಾಕೂಟಕ್ಕೆ ಆಗಮಿಸಿದ್ದರು. ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹುಚ್ಚುರಾಯಪ್ಪ ಅವರಂತೆ ಬಿ. ಶಂಭುಶೆಟ್ಟಿ, ಚನ್ನಪ್ಪಗೌಡ, ಸಿ.ಎಂ ಪಾಲಾಕ್ಷಪ್ಪ ಹಾಗೂ ಎಸ್.ಐ. ಅರುಲ್‌ದಾಸ್ ಕೂಡ ರಾಜಧಾನಿಗೆ ಬಂದಿಳಿದಿದ್ದರು. ಇವರೆಲ್ಲರ ಜೊತೆ ಸಹಾಯಕ್ಕಾಗಿ ಒಬ್ಬೊಬ್ಬರು ಸಂಬಂಧಿಕರು ಕೂಡ ದೆಹಲಿಗೆ ಬಂದಿದ್ದರು. ಅದು ಸ್ವಂತ ಖರ್ಚಿನಲ್ಲಿ! ರಾಷ್ಟ್ರಪತಿಗಳ ಜೊತೆಗೆ ಚಹಾಕೂಟಕ್ಕೆ ಬನ್ನಿ ಎಂದು ಆಹ್ವಾನಿಸಿದ ಕೇಂದ್ರ ಸರ್ಕಾರವಾಗಲೀ ಅಥವಾ ಅವರನ್ನು ಕಳುಹಿಸಿದ ರಾಜ್ಯ ಸರ್ಕಾರವಾಗಲೀ ವಿಮಾನ ಬಿಡಿ (ಸ್ವಾತಂತ್ರ್ಯ ಹೋರಾಟಗಾರರು ವಿಮಾನಗಳಲ್ಲಿ ಹಾರಾಡಲು ಅರ್ಹರಲ್ಲ. ಏನಿದ್ದರೂ ಖಾದಿ ತೊಟ್ಟ 'ದೇಶಭಕ್ತರು' ಮಾತ್ರ ಸರ್ಕಾರಿ ದುಡ್ಡಿನಲ್ಲಿ ವಿಮಾನವೇರಿ ಹಾರಾಡಲು ಅರ್ಹರು!) ಕನಿಷ್ಠ ಹತ್ತು ರೈಲು ಟಿಕೆಟುಗಳನ್ನು ಖರೀದಿಸಿ ಇವರನ್ನು ದೆಹಲಿಗೆ ಕಳುಹಿಸುವ ಔದಾರ್ಯವನ್ನೂ ತೋರಲಿಲ್ಲ.

ಅದೇ ರೀತಿ ದೇಶದೆಲ್ಲೆಡೆಯಿಂದ ಒಟ್ಟು 294 ಮಂದಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಈ ವರ್ಷದ ಚಹಾ ಕೂಟಕ್ಕೆ ಆಹ್ವಾನಿಸಲಾಗಿತ್ತು. ಪ್ರತಿ ವರ್ಷ ಆಗಸ್ಟ್ 9ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ರಾಷ್ಟ್ರಪತಿಗಳು ಚಹಾಕೂಟಕ್ಕೆ ಆಹ್ವಾನಿಸುವುದು ಸಂಪ್ರದಾಯ. ಆ ಸಂಪ್ರದಾಯದ ಸವಿ ಅನುಭವಿಸಲು ಬಂದವರ ಪೈಕಿ ಹೆಚ್ಚಿನ ಪಕ್ಷ ಎಲ್ಲರ ಕಥೆ ಕೂಡ ಇದೇ ಇರಬಹುದು. ಹೀಗೆ ಪಡಬಾರದ ಪಾಡು ಪಟ್ಟು ರಾಜಧಾನಿಯಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಿಸಲು ಬಂದವರಿಗೆ ಸಿಕ್ಕಿದ್ದಾದರೂ ಏನು? ಸುಮಾರು ಎರಡು ಗಂಟೆಗಳಷ್ಟು ಕಾಲ ನಡೆದ ಆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಶಾಲು ಹೊದಿಸಿ, ವಾಚೊಂದನ್ನು ನೀಡಿ ಸನ್ಮಾನಿಸಲಾಯಿತು. ಉಳಿದಂತೆ ಇವರ ಆಗುಹೋಗುಗಳನ್ನು ಕೇಳುವವರು ಯಾರೂ ಇರಲಿಲ್ಲ. ರಾಷ್ಟ್ರಪತಿಗಳೊಂದಿಗೆ ಚಹಾಕೂಟದಲ್ಲಿ ಭಾಗವಹಿಸಲು ಇವರೆಷ್ಟು ಅರ್ಹರು? ಎಂಬ ಪ್ರಶ್ನೆ ಕೂಡ ಈಗಿನ ಕುಡಿಮೀಸೆಯ ಹುಡುಗರಲ್ಲಿ ಮೂಡಬಹುದು. ಅದು ಅರ್ಥವಾಗಬೇಕಿದ್ದರೆ ಒಮ್ಮೆ ಈ ಹಿರಿಯರ ಜೀವನದತ್ತ ಇಣುಕು ನೋಟ ಹರಿಸಬೇಕು.

81ರ ಹರೆಯದ ಸಿ.ಎಂ. ಪಾಲಾಕ್ಷಪ್ಪ, ವೃತ್ತಿಯಲ್ಲಿ ಆಯುರ್ವೇದ ವೈದ್ಯ. 1947ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬೆಂಗಳೂರು ಸೆಂಟ್ರಲ್ ಜೈಲು ಸೇರಿದರು. ಪಾಲಾಕ್ಷಪ್ಪನವರು ಮತ್ತೆ ಬಿಡುಗಡೆಯ ಭಾಗ್ಯ ಕಂಡಿದ್ದು ಕರ್ನಾಟಕ ಏಕೀಕರಣದ ನಂತರ. ನಿಜಲಿಂಗಪ್ಪ, ಹೆಚ್.ಟಿ ದಯಾಳ್, ಕೆ.ಟಿ ಭಾಷ್ಯಂ ಇವರೆಲ್ಲರ ನಿಕಟ ಸಂಪರ್ಕ ಹೊಂದಿದ್ದವರು ಪಾಲಾಕ್ಷಪ್ಪ. ಬಿಡುಗಡೆಯ ನಂತರ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಹೊಂದಿದ್ದ ಈ ಸ್ವಾತಂತ್ರ್ಯ ಸೇನಾನಿಗೆ ಇಂದಿನ ಧನಬಲ, ತೋಳ್ಬಲ ಹಾಗೂ ಅಧಿಕಾರ ಲಾಲಸೆಯ ರಾಜಕಾರಣವನ್ನು ಕಂಡಾಗ, ಅಂದು ತಾವು ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಕಳಕಳಿಯಿದೆ. ಆದರೆ, ಇವರ ಬಗ್ಗೆ ಕಳಕಳಿ ತೋರಿಸುವವರು...? ಅಂದಹಾಗೆ ಸಿ.ಎಂ ಪಾಲಾಕ್ಷಪ್ಪ ಇಂದಿಗೂ ವಾಸವಿರುವುದು ಬಾಡಿಗೆ ಮನೆಯಲ್ಲೇ! ಸುಮಾರು 200ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ ಬಳಿಕ 2005ರಲ್ಲಿ ರಾಜ್ಯ ಸರ್ಕಾರದಿಂದ ಅವರಿಗೆ ಪಿಂಚಣಿ ಮಂಜೂರಾಗಿದೆ!

90 ಹರೆಯದ ಉಡುಪಿ ಮೂಲದ ಶಂಭುಶೆಟ್ಟಿ ಅವರು 1932ರಲ್ಲೇ ಸ್ವಾತಂತ್ರ ಹೋರಾಟಕ್ಕೆ ಕಾಲಿಟ್ಟವರು. ನಂತರ ಹಿಂದಿರುಗಿ ನೋಡಲಿಲ್ಲ. ಏಳನೇ ವರ್ಷಕ್ಕೆ ಶಾಲೆ ತೊರೆದ ಅವರು ಎರಡು ಬಾರಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ಆದರೆ ಜೈಲಿನಲ್ಲಿ ಕಳೆದ ದಿನಗಳನ್ನು ಅಷ್ಟೇ ರೋಚಕವಾಗಿ ವಿವರಿಸುತ್ತಾರೆ ಶಂಭು ಶೆಟ್ಟಿ. 'ಒಂದು ವಿಶ್ವವಿದ್ಯಾಲಯದಲ್ಲಿನ ಅನುಭವ ಜೈಲಿನಿಂದ ಪಡೆದೆ. ಭಾಷಣ ಹಾಗೂ ಇತರ ಸಕ್ರಿಯ ಚಟುವಟಿಕೆಗಳು ನಮ್ಮ ಹೋರಾಟಕ್ಕೆ ಇನ್ನಷ್ಟು ಇಂಬು ನೀಡಿದ್ದವು ಎಂದು ಅಂದಿನ ದಿನಗಳ ಮೆಲುಕು ಹಾಕುತ್ತಾರೆ ಶೆಟ್ಟರು. ಆದರೆ ಅವರ ಹೋರಾಟ ಮಾತ್ರ ಮುಂದುವರಿಯುತ್ತಲೇ ಇದೆ...

ಎಂಬತ್ತೊಂದರ ಹರೆಯದ ಚನ್ನಪ್ಪಗೌಡ ನವಲಗುಂದ ತಾಲ್ಲೂಕಿನ ಸಿರಕೊಲ ಗ್ರಾಮದವರು. ಇನ್ನು ಕೋಲಾರದ ಕೆ.ಜಿ.ಎಫ್.ನ ಅರುಲ್‌ದಾಸ್ ಕೂಡ ಎಂಬತ್ತರ ಗಡಿ ದಾಟಿದ ವಯೋವೃದ್ಧ ಸ್ವಾತಂತ್ರ್ಯ ಸೇನಾನಿ. ಇವರಿಬ್ಬರೂ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಮರೆತು ದೇಶಕ್ಕಾಗಿ ಅರ್ಪಿಸಿಕೊಂಡ ಹಿರಿಯರು.

ಹೀಗೆ ಈ ಹಿರಿಯರ ಬದುಕಿನಲ್ಲಿ ಇಣುಕು ನೋಟ ಹರಿಸಿದಾಗ ಮಾತ್ರ ಇವರೆಷ್ಟು ಅಮೂಲ್ಯ ಸಂಪತ್ತು ಎನ್ನುವುದು ಅರ್ಥವಾಗುತ್ತದೆ. ಆದರೆ, ಚಹಾಕೂಟದ ಹೆಸರಲ್ಲಿ ಅವರನ್ನು ಹೀಗೆ ಮತ್ತೊಂದು 'ಸ್ವಾತಂತ್ರ್ಯ' ಹೋರಾಟಕ್ಕೆ ಇಳಿಸಿದ್ದು ಮಾತ್ರ ವಿಪರ್ಯಾಸ ಎಂದೇ ಹೇಳಬೇಕು. ಯಾವುದೋ ಒಂದು ಸಂಪ್ರದಾಯದ ಹೆಸರಲ್ಲಿ ಅಂತಹ ವಯೋವೃದ್ಧ ಹೋರಾಟಗಾರರನ್ನು, ಅವರದೇ ಖರ್ಚಿನಲ್ಲಿ ರೈಲು ಹತ್ತಿಸುವ ಈ ವಿಪರ್ಯಾಸಕ್ಕೆ ಯಾರನ್ನು ಹೊಣೆ ಮಾಡಬೇಕು? ಅದೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರಕ್ಕೆ ಸೇರಿದ 104 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹೀಗೆ ನಡೆಸಿಕೊಂಡಿದ್ದು ಸಂಸ್ಕೃತಿ ವಾರಸುದಾರರಿಗೆ ಶೋಭೆ ತರುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಇದು ನಿಮಗೆ ಅರ್ಥವಾದೀತೆ?

Wednesday 17 September 2008

ಓಸಿಯನ್ 'ಟಾಕೀಸ್'ನಲ್ಲಿ 'ಗುಲಾಬಿ'ಯ ಕಂಪು


ಅದು ನವದೆಹಲಿಯ ಸಿರಿಫೋರ್ಟ್ ಸಾಂಸ್ಕೃತಿಕ ಸಮುಚ್ಛಯ. ಅಲ್ಲಿ ಜಪಾನ್, ಕೊರಿಯಾ, ಇಸ್ರೇಲ್, ಪಾಕಿಸ್ತಾನ, ಶ್ರೀಲಂಕಾ, ಅಮೆರಿಕ, ಇಂಡೋನೇಷಿಯಾ, ಮೊರೊಕ್ಕೊ, ಈಜಿಪ್ಟ್, ಹಾಂಗ್‌ಕಾಂಗ್, ಸಿರಿಯಾ, ಫ್ರಾನ್ಸ್, ಭಾರತ ಸೇರಿದಂತೆ ಹತ್ತಾರು ದೇಶಗಳ 200ಕ್ಕಿಂತಲೂ ಅಧಿಕ ಚಲನಚಿತ್ರಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಕಲಾತ್ಮಕತೆಯಲ್ಲಿ ಅವೆಲ್ಲಾ ಒಂದಕ್ಕಿಂತ ಒಂದು ಹೆಚ್ಚೇ ಎನ್ನಿ. ಜುಲೈ 10ರಿಂದ ಆರಂಭವಾಗಿದ್ದ ಸಿನಿಮಾ ಉತ್ಸವದಲ್ಲಿ ಬರೀ ಚಿತ್ರಗಳು ಮಾತ್ರವಲ್ಲ ನಾನಾ ದೇಶಗಳ, ಬಗೆಬಗೆಯ ಭಾಷೆಯ ಜನರು ನೆರೆದಿದ್ದರು. ಇಂಗ್ಲಿಷ್ ಬಾರದ ಅದೆಷ್ಟೋ ದೇಶದ ಜನರೂ ಇದ್ದುದ್ದರಿಂದ 'ಸಾಮಾನ್ಯ ಸಂವಹನ ಭಾಷೆ'ಯಾಗಲು ಇಂಗ್ಲಿಷ್‌ಗೆ ಕೂಡಾ ಅಲ್ಲಿ ಕಷ್ಟವೇ ಆಗಿತ್ತು. 'ಓಸಿಯನ್ಸ್ ಸಿನಿಫ್ಯಾನ್ ಚಲಚಿತ್ರೋತ್ಸವ' ಅಂದರೆ ಹಾಗೆಯೇ. ಅಲ್ಲಿ ಭಾಷೆಯ ಗಡಿ ಇಲ್ಲ; ಇದ್ದಿದ್ದರೆ ಕನ್ನಡ ಈ ಚಿತ್ರೋತ್ಸವದಲ್ಲಿ ಮೆರೆಯುವ ಸಾಧ್ಯತೆಯಿತ್ತೇ?

ಈ ಬಾರಿಯ 10ನೇ 'ಓಸಿಯನ್ (ಅರಬ್ ಹಾಗೂ ಏಷ್ಯಾ) ಚಲನಚಿತ್ರೋತ್ಸವ' ಕೂಡಾ ವಿಶೇಷತೆ ಮೆರೆಯದೆ ಇರಲಿಲ್ಲ. ಆದರೆ ಕನ್ನಡಿಗರಾದ ನಮಗೆ ಎಲ್ಲಕ್ಕಿಂತ ವಿಶೇಷವಾಗಿ ಕಂಡದ್ದು, ಕನ್ನಡದ ಇಬ್ಬರು ಪ್ರತಿಭಾವಂತರು ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದದ್ದು.

'ಗಿರೀಶ್ ಕಾಸರವಳ್ಳಿ' ಅವರ 'ಗುಲಾಬಿ ಟಾಕೀಸ್' ಭಾರತೀಯ ಚಿತ್ರಗಳ ವಿಭಾಗದಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿಗೆ ಪಾತ್ರವಾಯಿತು. ಕಾಸರವಳ್ಳಿ ಚಿತ್ರ ಅಂದಮೇಲೆ ಪ್ರಶಸ್ತಿ ಸಿಗದೆ ಇರುವುದು ಹೇಗೆ ಹೇಳಿ? ಈ ಮೊದಲೇ ಅವರ ಹಿಂದಿನ ಕೆಲವು ಚಿತ್ರಗಳಿಗೆ ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರಕಿದ್ದವು. ಈಗ 'ಗುಲಾಬಿ ಟಾಕೀಸ್'ನ ಸರದಿ. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದವರು ತಮ್ಮ ಅದ್ಭುತ ನಟನಾ ಶಕ್ತಿಯ ಮೂಲಕ ಕನ್ನಡಿಗರ ಮನೆ-ಮನಗಳನ್ನು ಗೆದ್ದಿರುವ ಹಿರಿಯ ನಟಿ ಉಮಾಶ್ರೀ.

ಸಿರಿಫೋರ್ಟ್‌ನಲ್ಲಿ 'ಗುಲಾಬಿ ಟಾಕೀಸ್' ಪ್ರದರ್ಶನಗೊಂಡಾಗ ಚಿತ್ರ ವೀಕ್ಷಿಸಲು ಬೆರಳೆಣಿಕೆಯಷ್ಟು ಕನ್ನಡಿಗರು (ಇತರ ಭಾಷಿಗರನ್ನು ಹೊರತುಪಡಿಸಿ) ಕೂಡಾ ಇರಲಿಲ್ಲ. ಆದರೆ ಕಾಸರವಳ್ಳಿ ಅವರು ತೆರೆಯ ಮೇಲೆ ಮೂಡಿಸಿದ ದೃಶ್ಯಕಾವ್ಯ ಆಸ್ವಾದಿಸಲು ಇತರ ಭಾಷಿಕರಿಗೆ ಯಾವುದೇ ಅಡ್ಡಿಯಾಗಲಿಲ್ಲ.

11 ದಿನಗಳ ಕಾಲ ನವದೆಹಲಿಯ ಸಿರಿಫೋರ್ಟ್‌ನಲ್ಲಿ ನಡೆದ ಚಿತ್ರೋತ್ಸವಕ್ಕೆ ತೆರೆ ಎಳೆಯುವ ದಿನದ ಆ ಸುಂದರ ಸಂಜೆಯಂದು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಪ್ರಶಸ್ತಿ ಪಡೆದ ಚಿತ್ರದ ನಿರ್ಮಾಪಕ ಬಸಂತ್ ಕುಮಾರ್ ಪಾಟಿಲ್ ಸಂತಸ ಹಂಚಿಕೊಂಡರು. "ಚಿತ್ರಕ್ಕೆ ಪ್ರಶಸ್ತಿ ದೊರಕಿದ್ದು ನಿಜವಾಗಿಯೂ ಖುಷಿ ತಂದಿದೆ. ನಮ್ಮೆಲ್ಲರ ಪರಿಶ್ರಮಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರು ಚಿತ್ರ ಮೆಚ್ಚಿದರು. ಪ್ರಶಸ್ತಿಗಿಂತ ಜನರ ಪ್ರಶಂಸೆಗಳು ನನಗೆ ಸಂತಸ ನೀಡಿದೆ" ಎಂದು ನುಡಿದರು.

ಚಿತ್ರದ ತಂತ್ರಜ್ಞರಾದಿಯಾಗಿ ಎಲ್ಲರೂ ಹೇಳುವಂತೆ, ಪ್ರಧಾನ ಭೂಮಿಕೆಯಲ್ಲಿರುವ ಉಮಾಶ್ರೀ ಅವರ ನಟನೆಯಂತೂ ಅತ್ಯದ್ಭುತ. ಕರಾವಳಿಯ ಮೀನುಗಾರ ಕುಟುಂಬದ ಮುಸ್ಲಿಂ ಮಹಿಳೆ ಗುಲಾಬಿ (ಗುಲ್‌ನಾಬಿ) ಪಾತ್ರದಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಅವರು ಮುಗ್ಧತೆ ಮತ್ತು ಗಾಂಭೀರ್ಯ ಮೇಳೈಸಿದ ಪಾತ್ರವನ್ನು ನಿರ್ವಹಿಸುವಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ. ಅವರ ಆ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ದೊರಕಿದೆ. ಕಾಸರವಳ್ಳಿ ಅವರ ಹಿಂದಿನ ಹಲವು ಚಿತ್ರಗಳಲ್ಲಿದ್ದಂತೆ ಇಲ್ಲಿ ಕೂಡ ಮಹಿಳಾ ಪ್ರಾತಿನಿಧ್ಯವೇ ಎದ್ದು ಕಾಣುತ್ತದೆ. ಎಂತಹ ಸಂಕಷ್ಟದ ಸಂದರ್ಭವನ್ನೂ ನಿಭಾಯಿಸುವ ತಾಕತ್ತು ಮಹಿಳೆಗೆ ಕರಗತ ಎಂಬುದನ್ನು 'ಗುಲಾಬಿ' ಪಾತ್ರದ ಮೂಲಕ ನಿರೂಪಿಸಿದ್ದಾರೆ. ಸಂಪೂರ್ಣ ಸಿನಿಮಾ 'ಕುಂದಗನ್ನಡ'ದಲ್ಲಿದ್ದರೂ, ಉಮಾಶ್ರೀ ಸೇರಿದಂತೆ ಇತರ ನಟರ ಸಂಭಾಷಣೆ ನವಿರಾಗಿ ಮೂಡಿಬಂದಿದೆ. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, "ಇಂದು ನನಗೆ ಈ ಪ್ರಶಸ್ತಿ ಬಂದಿದೆ ಎಂದರೆ ಅದಕ್ಕೆ ನಿರ್ದೇಶಕರೇ ಕಾರಣ. ಇಡೀ ಕರ್ನಾಟಕದ ಜನತೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ" ಎಂದಾಗ ಅವರ ಮೊಗದಲ್ಲಿ ಸಂತೃಪ್ತಿಯ ಕಳೆ ಎದ್ದು ಕಾಣುತ್ತಿತ್ತು.

ಗುಲಾಬಿ ಪಾತ್ರದ ಕುರಿತು ಮಾತನಾಡಿದ ಕಾಸರವಳ್ಳಿ ಅವರು, "ಗುಲಾಬಿಯ ಒಂಟಿತನ, ಪ್ರೇಮ-ಪ್ರೀತಿಯ ಹಪಹಪಿಯನ್ನು ಇಲ್ಲಿ ಬಿಂಬಿಸಲಾಗಿದೆ. ಒಂದು ಯಂತ್ರದ (ಟಿವಿ) ಮೂಲಕ ಆಕೆ ಇಡೀ ಸಮುದಾಯವನ್ನು ಆಕರ್ಷಿಸುತ್ತಾಳೆ. ಹೀಗೆ ಆಕೆ ತನ್ನ ಗಂಡನ ಪ್ರೀತಿ, ಊರಿನ ಪ್ರೀತಿ, ಸಮುದಾಯದ ಪ್ರೀತಿಗೂ ಪಾತ್ರಳಾಗುತ್ತಾಳೆ. ಆದರೆ ಅದೇ ಯಂತ್ರ ಸಮಾಜ ವಿಭಜನೆಗೂ ಇಲ್ಲಿ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ನಾನು 'ಇಮೇಜ್ ಮೇಕಿಂಗ್' ಪ್ರಕ್ರಿಯೆಯ ರಾಜಕೀಯತೆಯನ್ನು ಜನರಿಗೆ ತೋರಿಸುವ ಯತ್ನ ಮಾಡಿದ್ದೇನೆ" ಎಂದು ಹೇಳುತ್ತಾರೆ.

ಕೇವಲ ಗುಲಾಬಿಯ ನೋವು-ನಲಿವುಗಳು ಮಾತ್ರವಲ್ಲ, ಹಳ್ಳಿಯ ಜನರ ಹಾಗೂ ಅವರ ಕೌಟುಂಬಿಕ ಬದುಕಿನ ಚಿತ್ರಣವನ್ನು ಕಾಸರವಳ್ಳಿ ಅವರು ನೈಜತೆಯಿಂದ ಚಿತ್ರಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತ ಪುರುಷರಿಗೆ ಕೌಟುಂಬಿಕ ಜೀವನ ನಿಭಾಯಿಸಲಾಗದೆ ಸಂಕಷ್ಟ ಎದುರಾಗುವುದು, ಪತ್ನಿ ಹಾಗೂ ಮಕ್ಕಳು ಬಡತನದ ಬೇಗೆಯಲ್ಲಿ ಸಿಲುಕಿ ಒದ್ದಾಡುವುದು, ಹಾಗೇ ಆ ಸಂದರ್ಭದಲ್ಲಿ ವಾಸಣ್ಣ ಅಥವಾ ಸುಲೈಮಾನ್ ಪರವಾಗಿ ದುಡಿಯುವುದೋ ಎಂಬ ತುಮುಲಗಳು ಗಂಡಂದಿರ ಮನದಲ್ಲಿ ಸೃಷ್ಟಿಯಾಗುವಂಥ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಕಾಸರವಳ್ಳಿ ಯಶಸ್ವಿಯಾಗಿದ್ದಾರೆ.

ಚಿತ್ರದುದ್ದಕ್ಕೂ ಜಾಗತೀಕರಣದ ಪರಿಣಾಮಗಳು ಸೂಚ್ಯವಾಗಿ ಒಡಮೂಡಿದೆ. ಇದರ ಜೊತೆಗೆ ದುಬೈನಲ್ಲಿ ನೆಲೆಸಿದ್ದು, ಹಳ್ಳಿಯಲ್ಲಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದ ಸುಲೈಮಾನ್ ಹಾಗೂ ಅದೇ ಹಳ್ಳಿಯಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ನಿರತನಾಗಿದ್ದ ವಾಸಣ್ಣ ಇವರಿಬ್ಬರಿಂದಲೂ ಹಳ್ಳಿ ಜನರು ಶೋಷಣೆಗೊಳಗಾಗುವುದನ್ನು ವಿವಿಧ ಸನ್ನಿವೇಶಗಳಲ್ಲಿ ತೆರೆದಿಡಲಾಗಿದೆ.

ತಮ್ಮ ಪರಿಧಿಯೊಳಗೆ ಬದುಕನ್ನು ಕಂಡುಕೊಳ್ಳಲಾರದ ಮಾನವನ ಅನಿಶ್ಚಿತತೆಯನ್ನು ಬಿಂಬಿಸುವುದರ ಜೊತೆಗೆ ಹಳ್ಳಿಯಲ್ಲಿನ ಅತೃಪ್ತಿ ಮತೀಯ ಸಂಘರ್ಷಕ್ಕೆ ಕಾರಣವಾಗುವ ಬಗೆಯನ್ನು ಚಿತ್ರದಲ್ಲಿ ಕಾಣಬಹುದು. "ಒಂದು ಸಂಕೀರ್ಣವಾದ ಚಿತ್ರಕಥೆ ಬರೆದು, ಸಮಾಜದ ಎಲ್ಲಾ ಮುಖಗಳನ್ನು ಅನಾವರಣಗೊಳಿಸಿದ್ದೇನೆ" ಎನ್ನುವ ಕಾಸರವಳ್ಳಿ, "ಇಲ್ಲಿ ಹಿಂದೂಗಳೆಲ್ಲರೂ ಕೆಟ್ಟವರು ಅಥವಾ ಒಳ್ಳೆಯವರು ಹಾಗೂ ಮುಸ್ಲಿಮರೆಲ್ಲಾ ಕೆಟ್ಟವರು ಅಥವಾ ಒಳ್ಳೆಯವರು ಎಂದು ಚಿತ್ರಿಸಲಾಗಿಲ್ಲ. ಗುಲಾಬಿಯನ್ನು ಊರಿನಿಂದ ಹೊರ ಅಟ್ಟಿದ್ದು ಆರ್ಥಿಕ ಕಾರಣದಿಂದಾಗಿಯೇ ವಿನಾ ಆಕೆ ಮುಸ್ಲಿಂ ಎಂದಲ್ಲ. ಆಕೆಯ ಗಂಡನೂ ಹಲವು ಅನ್ಯಾಯಗಳನ್ನು ಮಾಡಿದ್ದಾನೆ. ಆಕೆಯನ್ನು ಓಡಿಸುವ ಹಿಂದೆ ಹಳ್ಳಿಯ ಆರ್ಥಿಕತೆಯ ಕಾರಣವೂ ಇದೆ. ಮತ್ತೊಂದು ವಿಚಾರ ಏನೆಂದರೆ ನೋಡುಗರು ಮುಸ್ಲಿಮರಿಂದಲೇ ಇಂದು ಜಗತ್ತಿನಲ್ಲಿ ಎಲ್ಲಾ ಅನ್ಯಾಯಗಳು ನಡೆಯುತ್ತಿವೆ ಎಂದು ಯೋಚಿಸಿದರೆ ಅವರಿಗೆ ಈ ಸಿನಿಮಾವೇ ಒಂದು ದೊಡ್ಡ ಅಪರಾಧವಾಗಿ ಕಾಣಬಹುದು' ಎಂದು ವಿವರಣೆ ನೀಡುತ್ತಾರೆ.

ಒಟ್ಟಾರೆ ಕನ್ನಡ ಸಿನಿಮಾವೊಂದು ಇಂದು ಮತ್ತೊಮ್ಮೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ್ದಾರೆ ಗಿರೀಶ್ ಕಾಸರವಳ್ಳಿ. ಕಾಸರವಳ್ಳಿ ಅವರ ಚಿತ್ರಕ್ಕೆ ಅಂತರ್ ರಾಷ್ಟ್ರೀಯ ಪ್ರಶಸ್ತಿ ಲಭಿಸುತ್ತಿರುವುದು ಇದು ಮೊದಲನೇ ಬಾರಿ ಅಲ್ಲದಿದ್ದರೂ, ಉಮಾಶ್ರೀ ಅವರ ಪರಿಶ್ರಮಕ್ಕೆ ತಕ್ಕ ಫಲವೆಂಬಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರೆತಿದ್ದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅಂದಹಾಗೆ 'ಓಸಿಯನ್ಸ್ ಸಿನಿಫ್ಯಾನ್' ಚಲಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ತೀರ್ಪುಗಾರರು ಹಾಗೂ ಸಿನಿಮಾ ಪ್ರಿಯರ ಮನಮೆಚ್ಚಿದ 'ಗುಲಾಬಿ ಟಾಕೀಸ್' ಕಲಾತ್ಮಕ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಬಾಚಿಕೊಂಡಿದ್ದರೂ ಚಿತ್ರ ವೀಕ್ಷಿಸುವಾಗ ಇದು ಯಾವುದೇ ಕಮರ್ಷಿಯಲ್ ಚಿತ್ರಕ್ಕೆ ಕಡಿಮೆಯಿಲ್ಲದಂತೆ ತೋರುವುದು ಮಾತ್ರ ನಿಜ.

------------------------------------------------------------------------------------------------------------------------

ಕಾಸರವಳ್ಳಿ ಅವರು ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ...

ಈ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರಾ?

ಸಿನಿಮಾ ಮಾಡಿದಾಗ ಅದು ಚೆನ್ನಾಗಿದೆಯೋ ಅಥವಾ ಕೆಟ್ಟದಾಗಿದೆಯೋ ನನಗೆ ಗೊತ್ತಾಗುವುದಿಲ್ಲ. ಚಿತ್ರ ವೀಕ್ಷಿಸಿದ ಬಳಿಕ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೂ, ಇನ್ನು ಕೆಲವರು ಅತ್ಯದ್ಭುತವಾಗಿದೆ ಎಂದು ಬೆನ್ನು ತಟ್ಟಿದರು. ಪ್ರಕಾಶ್ ಬೆಳವಾಡಿ, ಜಿ.ಎಸ್. ಭಾಸ್ಕರ್ ಮತ್ತು ಪಿ. ಶೇಷಾದ್ರಿ ಅವರು ಸೇರಿದಂತೆ ಕೆಲವರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಆ ನಂತರ ಚಲನಚಿತ್ರೋತ್ಸವಗಳಿಗೂ ನಾನು ಈ ಚಿತ್ರವನ್ನು ಕಳುಹಿಸಿದೆ. ಖ್ಯಾತ ವಿಮರ್ಶಕರಾದ ವಿದ್ಯಾರ್ಥಿ ಚಟರ್ಜಿ, ಪ್ರಸನ್ನ ರಾಮಸ್ವಾಮಿ ಅವರು ಹಲವು ವರ್ಷಗಳ ನಂತರ ಅತ್ಯದ್ಭುತ ಚಿತ್ರ ನೀಡಿದ್ದೀರಿ ಎಂದು ಶ್ಲಾಘಿಸಿದರು. ಮೊದಲ ಸ್ಕ್ರೀನಿಂಗ್ ನೋಡಿದ ನಂತರ ಕೆಲವು ಪ್ರೇಕ್ಷಕರಿಂದ ಇವತ್ತಿನ ಸಂದರ್ಭಕ್ಕೆ ಚಿತ್ರ ಯೋಗ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಅಂದೇ ಉಮಾಶ್ರೀ ಅವರಿಗೆ ಪ್ರಶಸ್ತಿ ಬರಬಹುದೇನೋ ಅಂದುಕೊಂಡೆ.

ಕರಾವಳಿ ಪ್ರದೇಶದಲ್ಲಿ ಚಿತ್ರ ಮಾಡುವಾಗ ಎಂತಹ ಸವಾಲಿತ್ತು?

ನಿಜ ಹೇಳಬೇಕೆಂದ್ರೆ ನಮಗೆ ಕರಾವಳಿ ಪ್ರದೇಶದ ಬಗ್ಗೆ ಹೆಚ್ಚಿನ ಪರಿಚಯ ಇರಲಿಲ್ಲ. ಇಂತಹ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಂಡು ಚಿತ್ರ ಮಾಡುವುದು ಸವಾಲೇ ಆಗಿತ್ತು.

'ಗುಲಾಬಿ' ಪಾತ್ರಕ್ಕೆ ಉಮಾಶ್ರೀ ಅವರ ಆಯ್ಕೆಗೆ ಕಾರಣ?

ನಮ್ಮಲ್ಲಿ ಕೆಲವರು ಉಮಾಶ್ರೀ ಅವರು ಕೇವಲ ಕಾಮಿಡಿ ಪಾತ್ರಕ್ಕೆ ಮಾತ್ರ ಯೋಗ್ಯರು ಎಂದು ಅವರ ಹಿನ್ನೆಲೆ ತಿಳಿಯದೆ ವಾದಿಸುತ್ತಾರೆ. ಒಳ್ಳೆ ಪಾತ್ರ ಮಾಡಿಕೊಂಡು ಬಂದಿದ್ದರೂ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿದ್ದರೆ ಅದು ನಿರ್ದೇಶಕನ ತಪ್ಪು. ನಾನು ಮೊದಲು ನೋಡುವುದೇನೆಂದರೆ ಭಾವನೆಯನ್ನು ಹೊರ ಚೆಲ್ಲಬಹುದಾದ ಮುಖಲಕ್ಷಣ ಹಾಗೂ ಬಾಡಿ ಲಾಂಗ್ವೇಜ್. ಜೊತೆಗೆ ರಂಗಭೂಮಿ ಹಿನ್ನೆಲೆ ಹಾಗೂ ಪಾತ್ರ ನಿಭಾಯಿಸುವ ಚಾಕಚಕ್ಯತೆ ಕೂಡ ಉಮಾಶ್ರೀ ಅವರಲ್ಲಿತ್ತು.

ಚಿತ್ರ ಸಂಪೂರ್ಣವಾಗಿ 'ಕುಂದಗನ್ನಡ' ಭಾಷೆಯಲ್ಲಿದೆ. ಕಲಾವಿದರಿಗೆ ಈ ಭಾಷೆ ಮೊದಲೇ ತಿಳಿದಿತ್ತೇ?

ಚಿತ್ರದಲ್ಲಿ ನಾಲ್ಕು ನಟರು ಬಿಟ್ಟರೆ ಉಳಿದವರು ಕುಂದಾಪುರದವರೇ. ಎಂ.ಡಿ. ಪಲ್ಲವಿ ಅವರು ನೇತ್ರುವಿನ ಪಾತ್ರದಲ್ಲಿದ್ದರೆ, ಕೆ.ಜಿ. ಕೃಷ್ಣಮೂರ್ತಿ ಅವರು ಗುಲಾಬಿ ಗಂಡನ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಕೆಲಸ ಸುಲಭವಾಗಲು ಭಂಡಾರ್ಕ್ಸರ್ ಕಾಲೇಜಿನ ಹುಡುಗಿಯೊಬ್ಬಳೂ ಸಹಾಯ ಮಾಡಿದಳು. ಸಂಭಾಷಣೆ ಯಾವ ರೀತಿ ಇರಬೇಕು ಎಂಬ ಬಗ್ಗೆ ಆಕೆ ನಟರಿಗೆ ಸತತವಾಗಿ ಹೇಳಿಕೊಡುತ್ತಿದ್ದಳು. ಇನ್ನು ಡಬ್ಬಿಂಗ್ ಸಮಯದಲ್ಲಿ ನಟ ರಘು ಪಾಂಡೇಶ್ವರ್ ಕೂಡ ಯಾವ ರೀತಿಯಲ್ಲಿ ಮಾತನಾಡಬೇಕೆಂದು ತಿಳಿಹೇಳುತ್ತಿದ್ದರು. ಇಲ್ಲಿ ಒಂದು ಮಾತ್ರ ಸ್ಪಷ್ಟ. ಭಾಷೆ ಬಗ್ಗೆ ಎಚ್ಚರ ಇದ್ದವರು ಯಾವುದೇ ಭಾಷೆಯನ್ನು ಕೂಡ ಬೇಗ ಕಲಿಯುತ್ತಾರೆ. ಎಚ್ಚರ ಇಲ್ಲದಿದ್ದರೆ ಕೊನೆಯವರಿಗೂ ಅದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಒಟ್ಟಾರೆ 'ಇಗೋ' ಬಿಟ್ಟು ನಿಜ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ.

'ಗುಲಾಬಿ ಟಾಕೀಸ್'ಗೆ ಪ್ರೇರಣೆ...?

2006ರ ಓಸಿಯನ್ ಚಲನಚಿತ್ರೋತ್ಸವದಲ್ಲಿ ನನ್ನ 'ನಾಯಿ ನೆರಳು' ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲಿ ನಾನು ಹೊರಗಿನ ಲಾಬಿಯಲ್ಲಿ ಕುಳಿತಿದ್ದೆ. ಹೀಗೆ ಯೋಚಿಸುತ್ತಿದ್ದಾಗ ಥಟ್ಟನೆ ಮೀನುಗಾರರ ಸಮಸ್ಯೆ ಬಗ್ಗೆ ಚಿತ್ರ ಮಾಡಬೇಕೆಂದು ಲೆಕ್ಕಹಾಕಿದೆ. 'ಇಮೇಜ್ ಮೇಕಿಂಗ್' ಹೇಗೆ ನಮ್ಮಲ್ಲಿ ಪೂರ್ವಸಿದ್ಧವಾದ ನಂಬಿಕೆ ಹಾಗೂ ಅನಿಸಿಕೆಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ತೋರಿಸುವ ಉದ್ದೇಶದಿಂದ 'ಗುಲಾಬಿ ಟಾಕೀಸ್'ನ್ನು ಮಾಡುವ ಕೆಲಸಕ್ಕೆ ಕೈಹಾಕಿದೆ.

ನಿಮ್ಮ ಹೆಚ್ಚಿನ ಎಲ್ಲಾ` ಚಿತ್ರಗಳಂತೆ ಇದೂ ಸ್ತ್ರೀ ಪ್ರಧಾನ ಚಿತ್ರ.... ಇದಕ್ಕೆ ನಿರ್ದಿಷ್ಟ ಕಾರಣವೇನಾದರು ಇದೆಯೇ?

ನಿರ್ದಿಷ್ಟ ಕಾರಣ ಅಂತ ಹೇಳುವುದು ಕಷ್ಟ. ಅವರ ತಾಳ್ಮೆಯ ಶಕ್ತಿ, ಸಮಸ್ಯೆ ನಿರ್ವಹಿಸುವ ರೀತಿ, ಸೋಲಬಾರದು ಅನ್ನೋ ಒತ್ತಾಸೆಯಿಂದ ಅವರು ಗೆಲ್ಲುತ್ತಾ ಸಾಗುವುದು ನನಗೆ ಇಷ್ಟವಾಗುತ್ತವೆ. ಗುಲಾಬಿಯೂ ಹಾಗೇ. ಊರಿನಿಂದ ಆಕೆಯನ್ನು ಹೊರದಬ್ಬಿದರೂ, 'ಎಲ್ಲಿಯ ತನಕ ಹೆಂಗಸರು ಬಸಿರಾಗುತ್ತಾರೋ ಅಲ್ಲಿಯತನಕ ನನ್ನ ಸೂಲಗಿತ್ತಿಯ ಕೆಲಸಕ್ಕೆ ದಕ್ಕೆ ಬಾರದು. ನಾನು ಹೆದರೋದಿಲ್ಲ, ಬೇರೆ ಕಡೆ ಹೋಗಿ ನನ್ನ ಕೆಲಸ ಮಾಡಿ ಬದುಕುತ್ತೇನೆ' ಎಂದು ಧೈರ್ಯದಿಂದ ನುಡಿಯುತ್ತಾಳೆ. ಈ ಕೆಚ್ಚು ನನ್ನ ಮನ ತಟ್ಟಿತು.


Monday 7 July 2008

Dream's lost


It happened again. The dreams and expectations of Indian Cricket Fans yet again with the wind. Kirsten’s men failed to show their supremacy in the crucial final of the 2008 Asia Cup held at National Stadium Karachi last week. On the other hand spinner Ajantha Mendis, made complete turnaround in the match one handed and made Indian’s to loose the battle horribly.

But Question remains unanswered that why Indian’s fails make the success story in the decisive final matches? Since 1999, Indian Cricket team has lost 18 Finals out of 22 and they managed to win only two Final matches, which is really hard to believe!

Ok, leave those stats aside, when we look at the fact about what went wrong in the Asia Cup final, Question occurs in the mind, did inexperience and irresponsibility cost India much? Did Dhoni made a mistake by choosing batting second in flat batting track, by knowing the fact that track would help the spinners later on the day. It was a gift to Srilankan’s to bowl under lights with two full time spinners. It was a pressure game and it’s not easy to bat against the experienced bowling attack and that too with two full time spinners rocking at the moment and also by noticing the reality that India doesn’t have a great record by chasing in the crucial final matches, Dhoni made a mistake by bowling first.

Those things are history now, but it’s a fact to be noted. Yes, Indian batsman’s are faced Mendis for the first time, but was there a need for Sehwag to go against him without reading his bowling ability. At that moment, Sehwag was well settled, and it was his duty to carry on the innings. But his irresponsible shot and dismissal paved the way for India’s disaster in the Karachi Final. And, this refers to Suresh Raina too because, throughout the tournament he was the man, who was in tremendous form, could have carried a credible innings with Dhoni. But there was no batsman to help Dhoni to complete the proceedings. Although there was much depth in Indian batting line up, no one couldn’t do it for India yet again, showed Indian batsmen’s inability to handle pressure especially in the final battle's.

Thursday 3 July 2008

ಪದ್ಮಪ್ರಿಯ ಹುಟ್ಟು ಹಾಕಿದ ಪ್ರಶ್ನೆಗಳಿಗೆ ಉತ್ತರ...?

ತನ್ನದೇ ಹೊಸ ಬದುಕನ್ನು ರೂಪಿಸಿಕೊಳ್ಳಲು ಹೊರಟ ಮಹಿಳೆಯೊಬ್ಬರನ್ನು ಸಮಾಜ, ರಾಜಕೀಯ, ಮಾಧ್ಯಮಗಳ ಹಸಿವು ನುಂಗಿ ಹಾಕಿದ ದಾರುಣ ಘಟನೆಯಿದು. ಸ್ವಲ್ಪ ಮಾನವೀಯತೆ, ವಿವೇಚನೆ ತೋರಿದ್ದಲ್ಲಿ ಆ ಜೀವ ಉಳಿದು ಬಿಡುತ್ತಿತ್ತು. ಆದರೆ, ಅದಕ್ಕೆ ಯಾರೂ ಅವಕಾಶ ಮಾಡಿಕೊಡಲಿಲ್ಲ. ಕೊನೆಗೆ ಹೊಸ ಬದುಕಿನ ಹೊಂಗನಸಿನ ನಡುವೆಯೇ ಆ ಜೀವ ನೇಣಿಗೆ ಶರಣಾಯಿತು.
ಕರ್ನಾಟಕದ ಉಡುಪಿಯಲ್ಲಿ ಪ್ರಾರಂಭವಾದ ಈ ಪ್ರಕರಣ ರಾಷ್ಟ್ರದ ರಾಜಧಾನಿ ದೆಹಲಿವರೆಗೂ ಬರಬಹುದು ಎಂದು ಯಾರಿಗೂ ಅನಿಸಿರಲಿಲ್ಲ. ಇದುವರೆಗೆ ಸುದ್ದಿಯಾಗದಿದ್ದ ದೆಹಲಿಯ ಯಾವುದೋ ಮೂಲೆಯಲ್ಲಿರುವ ದ್ವಾರಕಾದ ಶಮಾ ಅಪಾರ್ಟ್‌ಮೆಂಟ್ ಇಂದು ಕರ್ನಾಟಕದ ಬಹುತೇಕ ನಾಗರಿಕರಿಗೆ ಅಪರಿಚಿತವೇನಲ್ಲ. ಒಟ್ಟಾರೆ ರಾಜ್ಯದೆಲ್ಲೆಡೆ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಉಡುಪಿ ಶಾಸಕ, ಬಿಜೆಪಿಯ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಪ್ರಕರಣ ನವದೆಹಲಿಯಲ್ಲಿ ದುರಂತ ಅಂತ್ಯ ಕಾಣುವುದರೊಂದಿಗೆ ಸಾಕಷ್ಟು ಕುತೂಹಲ ಹಾಗೂ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.
ಈಗ ಪ್ರಕರಣದ ಕೇಂದ್ರಬಿಂದುವಾಗಿ ಹೊರಹೊಮ್ಮಿರುವ ಅತುಲ್ ರಾವ್, ಮೂಲತಃ ಶಾಸಕ ರಘುಪತಿ ಭಟ್‌ಗೆ ಪರಮಾಪ್ತನಾಗಿದ್ದ. ಆ ಹಿನ್ನೆಲೆಯಲ್ಲಿಯೇ ಅವರ ಪತ್ನಿಗೂ ಆತ ಆತ್ಮೀಯನಾಗಿದ್ದು. ಆತನೊಂದಿಗೆ ಸೇರಿ, ತನ್ನದೇ ಅಪಹರಣದ ನಾಟಕವಾಡಿ ಮನೆತೊರೆದು ಹೊರಟ ಪದ್ಮಪ್ರಿಯ ಉಡುಪಿಯಿಂದ ಗೋವಾಕ್ಕೆ ತೆರಳಿದ್ದು, ನಂತರ ಅಲ್ಲಿಂದ ದೆಹಲಿಗೆ ತಲುಪಿದ್ದು, ದ್ವಾರಕಾದ ಶಮಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದು, ಕೊನೆಗೆ ಜೂನ್ 15ರಂದು ಆತ್ಮಹತ್ಯೆಗೆ ಶರಣಾಗಿದ್ದು... ಇವೆಲ್ಲಾ ಈಗ ಇತಿಹಾಸ. ಆದರೆ ಆಕೆಯ ಆತ್ಮಹತ್ಯೆಯೊಂದಿಗೆ ಎಲ್ಲವೂ ಮುಗಿದು ಹೋಯಿತೆ? ಖಂಡಿತಾ ಇಲ್ಲ. ಈ ಪ್ರಕರಣದೊಳಗೆ ಹುದುಗಿರುವ ನಿಗೂಢಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕಷ್ಟು ಪ್ರಶ್ನೆಗಳು ಹುಟ್ಟುವುದಂತೂ ಖಚಿತ.
ಹಲವು ಗೊಂದಲಗಳ ನಡುವೆ ನವದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಜೂನ್ 16ರಂದು ಪದ್ಮಪ್ರಿಯ ದೇಹದ ಮರಣೋತ್ತರ ಪರೀಕ್ಷೆ ಆರಂಭವಾದ ನಂತರ ಅಲ್ಲಿಗೆ ಭೇಟಿ ನೀಡಿದ ಪತಿ ರಘುಪತಿ ಭಟ್ ಮಾಧ್ಯಮಗಳ ಮುಂದೆ ಏಕಾಏಕಿ ದಾಳಿ ಮಾಡಿದ್ದು ಅತುಲ್ ವಿರುದ್ಧ. ನನ್ನ ಪತ್ನಿಯನ್ನು ಬಲವಂತವಾಗಿ ದೆಹಲಿಗೆ ಕರೆತಂದುದೇ ಅತುಲ್. ಆಕೆಯನ್ನು ಮರುಳು ಮಾಡಿ ಈ ದುರಂತಕ್ಕೆ ಕಾರಣನಾದವನು ಅವನೇ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇಂದಿಗೂ ನಾನವಳ ಮೇಲೆ ಅಪಾರ ನಂಬಿಕೆ, ಪ್ರೀತಿ ಇರಿಸಿದ್ದೇನೆ. ಆಕೆ ಬೇರೆಯವರೊಂದಿಗೆ ಹೋಗುವಂತಹ ಮಹಿಳೆ ಅಲ್ಲ ಎಂಬುದಾಗಿ ಕಣ್ಣೀರಿಟ್ಟರು.
ಸರಿ, ತನ್ನ ಧರ್ಮಪತ್ನಿಯ ಮೇಲೆ ಭಟ್ ಇರಿಸಿರುವ ನಂಬಿಕೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬುದನ್ನು ಒಪ್ಪತಕ್ಕದ್ದೇ. ಆದರೆ ಉಡುಪಿಯಿಂದ ದೆಹಲಿಯವರೆಗೆ ಒಬ್ಬ ಮಹಿಳೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಬರಲು ಸಾಧ್ಯವೇ? ಅದೂ ಪ್ರಭಾವಿ ಕುಟುಂಬಕ್ಕೆ ಸೇರಿದ ಪದ್ಮಪ್ರಿಯರಂಥ ಮಹಿಳೆಯನ್ನು! ದೆಹಲಿಯ ದ್ವಾರಕದಲ್ಲಿರುವ ಶಮಾ ಅಪಾರ್ಟ್‌ಮೆಂಟ್‌ಗೆ ಭೇಟಿಯಿತ್ತಾಗ ದೊರೆತ ಮಾಹಿತಿ ಹಾಗೂ ದಾಖಲೆಗಳು ಈ ಪ್ರಕರಣದ ದಾರುಣ ಅಂತ್ಯಕ್ಕೆ ಅತುಲ್ ಒಬ್ಬನೇ ಕಾರಣನಲ್ಲ ಎಂಬುದನ್ನು ಸ್ವಷ್ಟವಾಗಿ ಹೇಳುತ್ತವೆ.
ಅತುಲ್ ಉಡುಪಿಯಿಂದ ಪದ್ಮಪ್ರಿಯ ಅವರನ್ನು ದೆಹಲಿಗೆ ಕರೆದುಕೊಂಡು ಬಂದಿದ್ದೇನೋ ನಿಜ. ಆದರೆ ಬಲವಂತವಾಗಿ ಅಲ್ಲ. ಇದಕ್ಕೆ ಪದ್ಮಪ್ರಿಯರ ಸಮ್ಮತಿಯೂ ಇತ್ತು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಅತುಲ್ ಸ್ಥಳೀಯರಲ್ಲಿ ಪದ್ಮಪ್ರಿಯ ತನ್ನ ಪತ್ನಿ ಎಂದೇ ಹೇಳಿಕೊಂಡಿದ್ದ. ಆ ಹೊತ್ತಿಗೆ ಅತುಲ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದಿದ್ದ ಕಾರಣ ಸ್ಥಳೀಯರು ಪದ್ಮಪ್ರಿಯ ಆತನ ಪತ್ನಿ ಎಂದೇ ಭಾವಿಸಿದ್ದರು. ಹೀಗೆ ಆಡಳಿತ ಪಕ್ಷದ ಪ್ರಭಾವಿ ಶಾಸಕರೊಬ್ಬರ ಪತ್ನಿಯನ್ನು ಅತುಲ್ ತನ್ನ ಪತ್ನಿ ಎಂದು ಧೈರ್ಯವಾಗಿ ತಿಳಿಸಿರುವುದು ಹಾಗೂ ಇದಕ್ಕೆ ಪದ್ಮಪ್ರಿಯ ಅವರ ಸಮ್ಮತಿ ಇದ್ದಿದ್ದನ್ನು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಯೋಜನೆ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಅತುಲ್ ಮೇ 22ರಂದೇ ದ್ವಾರಕಾದ ಶಮಾ ಅಪಾರ್ಟ್‌ಮೆಂಟ್ ಮಾಲೀಕ ಲಖ್ವೀಂದರ್ ಸಿಂಗ್‌ನೊಂದಿಗೆ ವಾಸ್ತವ್ಯ ದಾಖಲೆ ಪತ್ರ (ರೆಂಟ್ ಅಗ್ರೀಮೆಂಟ್) ಮಾಡಿಕೊಂಡಿದ್ದಾನೆ. ಜೊತೆಗೆ ಈ ದಾಖಲೆ ಪತ್ರದಲ್ಲಿ ಪ್ರೇಮ್ ಲಾಲ್ ಹಾಗೂ ಸುನಿಲ್ ಕೆ. ಆರ್. ಶರ್ಮ ಎಂಬ ಇಬ್ಬರು ಸಾಕ್ಷಿದಾರರು ಸಹಿ ಮಾಡಿದ್ದಾರೆ. ಮುಂಗಡ ಬಾಡಿಗೆ (ರನ್ನಿಂಗ್ ಮಂತ್ ರೆಂಟ್) ಸೇರಿದಂತೆ ತಿಂಗಳ ಬಾಡಿಗೆ ಎಂದು ಒಟ್ಟು 26,200 ರೂ. ಹಾಗೂ ಸ್ಟ್ಯಾಂಪ್ ಡ್ಯೂಟಿ ಎಂದು 3,320 ರೂ.ಗಳನ್ನು ಅತುಲ್ ಶಮಾ ಅಪಾರ್ಟ್‌ಮೆಂಟ್ ಮಾಲೀಕ ಲಖ್ವಿಂದರ್ ಸಿಂಗ್‌ಗೆ ನೀಡಿ, ಪದ್ಮಪ್ರಿಯ ಅವರ ದೆಹಲಿ ವಾಸಕ್ಕೆ ಅಪಹರಣ ನಾಟಕಕ್ಕಿಂತ ಮೊದಲೇ ಸಿದ್ಧತೆ ನಡೆಸಿದ್ದ ಎಂದು ದಾಖಲೆಗಳು ದೃಢಪಡಿಸುತ್ತವೆ.
ಇವೆಲ್ಲಾ ಸಾಲದು ಎಂಬಂತೆ ಅತುಲ್ ತನ್ನ 'ಮಡದಿ'ಗೆ (ಅತುಲ್ ಹೇಳಿದ್ದ ಪ್ರಕಾರ) ದೆಹಲಿಯಲ್ಲಿ ಓಡಾಡಲು ಕಾರು ಬೇಕೆಂದು ಡಿಎಲ್ 2ಸಿಡಿ 6949 ನಂಬರಿನ 'ವ್ಯಾಗನ್ ಆರ್' ಕಾರೊಂದನ್ನು ಖರೀದಿಸಿದ್ದ. ದ್ವಾರಕಾ ಅಪಾರ್ಟ್‌ಮೆಂಟ್‌ನ ತನ್ನ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದ ಮಾರ್ಕೆಟ್ ಒಂದರಲ್ಲಿ ಪರಿಚಯವಾದ ಮಂಜಿತ್ ಮೋಟಾರ್‍ಸ್‌ನ ಮೆಕ್ಯಾನಿಕ್ ಬಳಿ ತನಗೆ ಕಾರೊಂದರ ಅಗತ್ಯವಿದೆ ಎಂದು ತಿಳಿಸಿದ ಅತುಲ್, ದ್ವಾರಕಾ ಮೋಟಾರ್‍ಸ್ ಹಾಗೂ ಫೈನಾನ್ಸ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದಾನೆ.
ಮೆಕ್ಯಾನಿಕ್ ಮೂಲಕ ದ್ವಾರಕಾ ಬಳಿ ಇರುವ ದ್ವಾರಕಾ ಮೋಟಾರ್‍ಸ್ ಹಾಗೂ ಫೈನಾನ್ಸ್‌ಗೆ ಜೂನ್ 2ರಂದು ಆಗಮಿಸಿದ ಅತುಲ್ ಕಾರು ಖರೀದಿ ವ್ಯವಹಾರ ನಡೆಸಿದ್ದಾನೆ. ಜೊತೆಗೆ ಫೈನಾನ್ಸ್ ಮಾಲೀಕನಿಗೆ ಮುಂಗಡವಾಗಿ 10,000 ರೂ. ನೀಡಿದ್ದಾನೆ. ನಂತರ ಜೂನ್ 12ರಂದು ದ್ವಾರಕಾ ಫೈನಾನ್ಸ್‌ಗೆ ಅತುಲ್ ಹಾಗೂ ಪದ್ಮಪ್ರಿಯ ತೆರಳಿ ಮಾತುಕತೆ ನಡೆಸಿ, ಕಾರಿನ ಸಂಪೂರ್ಣ ವೆಚ್ಚ ಪಾವತಿಸಿದ್ದಾರೆ. ಫೈನಾನ್ಸ್ ಮಾಲೀಕ ಹೇಳುವ ಪ್ರಕಾರ ಅತ್ಯಂತ ಗಡಿಬಿಡಿಯಿಂದಿದ್ದ ಅತುಲ್, ತಾನು ಈಗಲೇ ಬೆಂಗಳೂರಿಗೆ ಹೋಗಬೇಕಿದೆ, ಆದಷ್ಟು ಬೇಗ ಎಲ್ಲಾ ವ್ಯವಹಾರಗಳನ್ನು ಮುಗಿಸಬೇಕು ಎಂದು ಹೇಳುತ್ತಿದ್ದ. ಮಂಜಿತ್ ಮೋಟಾರ್‌ನ ಮೆಕ್ಯಾನಿಕ್ ಕಾರನ್ನು ಅದೇ ದಿನ 12:40ಕ್ಕೆ ಅಪಾರ್ಟ್‌ಮೆಂಟ್‌ಗೆ ಕೊಂಡೊಯ್ದಿದ್ದು, ಕಾರನ್ನು ಪದ್ಮಪ್ರಿಯ ಅವರಿಗೆ ಹಸ್ತಾಂತರಿಸಿ ತೆರಳಿದ್ದಾನೆ. ಈ ಕಾರು ವ್ಯವಹಾರದ ಕುರಿತಾದ ಎಲ್ಲಾ ಮಾಹಿತಿಗಳು, ದಾಖಲೆಗಳು ಟಿಎಸ್‌ಐ ಬಳಿ ಇವೆ.
ಒಟ್ಟಾರೆ ಈ ಎಲ್ಲಾ ಅಂಶಗಳಿಂದ ಬಹಳ ಹಿಂದಿನಿಂದಲೇ ಪದ್ಮಪ್ರಿಯ ದೆಹಲಿಯಲ್ಲಿ ಬಂದು ನೆಲೆಸಲು ತಯಾರಿ ನಡೆಸಿದ್ದರು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಮತ್ತೊಂದು ಅಚ್ಚರಿಯ ಅಂಶ ಏನೆಂದರೆ ಜೂನ್ 15ರಂದು ಡಿಎಲ್ 4ಸಿಎವೈ 6666 ನಂಬರ್ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ 10 ಗಂಟೆಗೆ ಫ್ಲ್ಯಾಟ್ ನಂಬರ್ 20ಕ್ಕೆ ಆಗಮಿಸಿದ್ದು, 12 ಗಂಟೆಯವರೆಗೆ ಅಲ್ಲೇ ಇದ್ದ ಎಂದು ರಿಜಿಸ್ಟರ್ ಹೇಳುತ್ತದೆ. ಆ ವ್ಯಕ್ತಿಯ ಬಗ್ಗೆ ಗಾರ್ಡ್ ಬಳಿ ಕೇಳಿದಾಗ, ಆತ ಯಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾನೆ. ಅದೇ ದಿನ ಪದ್ಮಪ್ರಿಯ ನೇಣು ಹಾಕಿಕೊಂಡಿದ್ದು!
ಅದೇ 15ರಂದು ಅಪರಾಹ್ನ 2:30ಕ್ಕೆ ಅತುಲ್ ಆಗಮಿಸಿದ್ದು, 30 ನಿಮಿಷಗಳ ಕಾಲ ಪದ್ಮಪ್ರಿಯ ಜೊತೆ ಮಾತುಕತೆ ನಡೆಸಿದ್ದಾನೆ. ರಿಜಿಸ್ಟರ್‌ನಲ್ಲಿ ಅತುಲ್+3 ಎಂದು ದಾಖಲಾಗಿತ್ತು. ಆದರೆ ಗಾರ್ಡ್ ಹೇಳುವ ಪ್ರಕಾರ ಅತುಲ್ ಜೊತೆ ಇಬ್ಬರು ವ್ಯಕ್ತಿಗಳು ಮಾತ್ರ ಇದ್ದರು. ಆದರೆ ಆ ವ್ಯಕ್ತಿಗಳು ಯಾರೆಂದು ಇದುವರೆಗೆ ತಿಳಿದುಬಂದಿಲ್ಲ. ಈ ಮುನ್ನ ಪೊಲೀಸರಲ್ಲಿ ಅತುಲ್ ಜೊತೆ ಇನ್ನು ಮೂವರು ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು ಎಂದು ಹೇಳಲಾಗುತ್ತಿರುವ ಬಗ್ಗೆ ಕೇಳಿದಾಗ, ಪೊಲೀಸರು ಅತುಲ್ ಒಬ್ಬನೇ ತೆರಳಿದ್ದಾನೆ ಎಂದು ಉತ್ತರಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಯಾರು ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ.
ಕರ್ನಾಟಕದ ಗೃಹ ಸಚಿವ ವಿ.ಎಸ್. ಆಚಾರ್ಯ ಜೂನ್ 16ರಂದು ಪದ್ಮಪ್ರಿಯ ಮರಣೋತ್ತರ ಪರೀಕ್ಷೆ ನಡೆಯುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದರು. ಆಚಾರ್ಯ ಬಳಿ, ಕೋಲಾರದ ಮಾಲೂರಿನಲ್ಲಿ ಪತ್ತೆಯಾಗಿದ್ದಾರೆ ಎಂಬ ತಪ್ಪು ಮಾಹಿತಿಯಿಂದ ಪದ್ಮಪ್ರಿಯ ಅವರಿಗೆ ಶಾಕ್ ಆಗಿರಬಹುದಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ, ಶಾಕ್ ಹೇಗೆ ಆಗುತ್ತದೆ? ಅವರು (ಪದ್ಮಪ್ರಿಯ) ದೆಹಲಿಯಲ್ಲಿ ಇರುವ ವಿಷಯ ಪೊಲೀಸರಿಗೆ ಗೊತ್ತಾಗಿದೆ ಎಂದು ತಿಳಿದ ಮೇಲೆ ಪದ್ಮಪ್ರಿಯ ಅವರಿಗೆ ಶಾಕ್ ಆಗಿರಬಹುದು. ದುರದೃಷ್ಟವಷಾತ್ ಅವರು ಆತ್ಮಹತ್ಯೆಗೆ ಶರಣಾದರು. ಇಟ್ಸ್ ನಾಟ್ ಇನ್ ಎನಿಬಡೀಸ್ ಹ್ಯಾಂಡ್ಸ್ ಎಂಬ ವಿವೇಚನಾರಹಿತ ಉತ್ತರ ನೀಡಿದ್ದರು. ಕರ್ನಾಟಕದ ಸರ್ಕಾರ, ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ಸ್ವಲ್ಪ ವಿವೇಚನೆ ತೋರಿದ್ದರೆ ಪದ್ಮಪ್ರಿಯ ನೇಣಿಗೆ ಶರಣಾಗುತ್ತಿರಲಿಲ್ಲ. ಟಿಎಸ್‌ಐಗೆ ತಿಳಿದ ಮಾಹಿತಿಯ ಪ್ರಕಾರ ಪದ್ಮಪ್ರಿಯ ದೆಹಲಿಯಲ್ಲಿ ಇರುವ ವಿಷಯ ಜೂನ್ 13ರಂದೇ ಅತುಲ್ ಮೂಲಕ ರಘುಪತಿ ಭಟ್ ಮತ್ತು ಅವರ ಗೆಳೆಯರಿಗೆ ಗೊತ್ತಾಗಿದೆ. ಆ ಕ್ಷಣದಿಂದಲೇ ಮೊಬೈಲ್ ಮೂಲಕ ಪದ್ಮಪ್ರಿಯ ಮೇಲೆ ಒತ್ತಡ ಹೇರುವ ತಂತ್ರ ಕೂಡ ಆರಂಭವಾಗಿದೆ. ಈ ತಂತ್ರಕ್ಕೆ ಅತುಲ್ ಅವರನ್ನು ಸಾಧನವಾಗಿ ಬಳಸಿಕೊಳ್ಳಲಾಗಿದೆ. ಆಗ ಮಾಧ್ಯಮದವರನ್ನು ದಾರಿ ತಪ್ಪಿಸುವ ಸಲುವಾಗಿ 'ಮಾಲೂರು ನಾಟಕ'ದ ಬಲೆ ಹೆಣೆಯಲಾಯಿತು. ಬಿಜೆಪಿ ಸರ್ಕಾರ ಈ ಪ್ರಕರಣವನ್ನು 'ತನ್ನ ಪ್ರತಿಷ್ಠೆ' ಎಂದುಕೊಂಡು ಅತಿಯಾಗಿ ವರ್ತಿಸಿದ್ದು, ಮಾಧ್ಯಮಗಳು ಮುಗಿಬಿದ್ದದ್ದು, ರಘುಪತಿ ಭಟ್- ವಿ.ಎಸ್. ಆಚಾರ್ಯ ಒತ್ತಡದ ತಂತ್ರ ಹೇರಿದ್ದರಿಂದಲೇ ಪದ್ಮಪ್ರಿಯ ನೇಣಿಗೆ ಶರಣಾದದ್ದು.
'ಮಾಲೂರು ನಾಟಕ'ದ ಬದಲಾಗಿ ಪ್ರಕರಣದ ಕುರಿತು ಆಗ ಪೊಲೀಸರು ಮೌನವಹಿಸಿದ್ದರೆ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿ ಆ ಪರಿಯ ಅಲೆ ಎಬ್ಬಿಸುತ್ತಿರಲಿಲ್ಲ. ಇದು ಪದ್ಮಪ್ರಿಯ ಸಾವಿಗೆ ಒಂದು ಕಾರಣವೂ ಹೌದು ಎಂಬ ಅನೇಕರ ವಾದವನ್ನೂ ಇಲ್ಲಿ ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಪದ್ಮಪ್ರಿಯ ಅವರ ಫ್ಲ್ಯಾಟ್‌ಗೆ ಪೊಲೀಸರು ತೆರಳಿದ್ದ ಸಂದರ್ಭದಲ್ಲಿ ಕನ್ನಡ ಸುದ್ದಿ ವಾಹಿನಿಯೊಂದು ಬಿತ್ತರವಾಗುತ್ತಿತ್ತು ಎಂಬುದನ್ನು ಪೊಲೀಸರೇ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ ಜೂನ್ 14ರಂದು ಮಾಧ್ಯಮಗಳ ಕಣ್ಣಿಗೆ ಮಣ್ಣೆರೆಚಲು ಹೂಡಿದ 'ಮಾಲೂರು ಪ್ರಹಸನ' ಪದ್ಮಪ್ರಿಯ ಅವರ ದುರಂತ ಅಂತ್ಯದಲ್ಲಿ ಹೆಚ್ಚಿನ ಪಾತ್ರವಹಿಸಿತು.
ಜೂನ್ 15ರ ರಾತ್ರಿ 2.30ರ ಸುಮಾರಿಗೆ ಪದ್ಮಪ್ರಿಯ ಅವರ ಮೃತ ದೇಹ ವೀಕ್ಷಿಸಿದ್ದ ಗೃಹಸಚಿವ ವಿ.ಎಸ್. ಆಚಾರ್ಯ ಅವರು ಹೇಳುವ ಪ್ರಕಾರ, ಒಂದು ವೇಳೆ 2-10 ಗಂಟೆಗಳ ಮುನ್ನವೇ ನೇಣಿಗೆ ಶರಣಾಗಿದ್ದಾರೆ ಎಂದಾದರೆ, ಅತುಲ್ ಆ ದಿನ 2.30 ಕ್ಕೆ ಪದ್ಮಪ್ರಿಯ ಬಳಿ ತೆರಳಿ ಮಾಡಿದ್ದಾದರೂ ಏನು? ಪೊಲೀಸರು ಆತನನ್ನು ಪದ್ಮಪ್ರಿಯ ಬಳಿ ಹೋಗುವಂತೆ ಹೇಳಿ ಕಂಡುಕೊಂಡ ಸತ್ಯವಾದರೂ ಏನು? ಆ ದಿನ ಅತುಲ್ ಒಬ್ಬನನ್ನೇ (ರಿಜಿಸ್ಟರ್‌ನಲ್ಲಿ ಅತುಲ್+3 ಎಂದು ದಾಖಲಾಗಿದೆ) ಅಪಾರ್ಟ್‌ಮೆಂಟ್ ಫ್ಲ್ಯಾಟ್‌ಗೆ ಕಳುಹಿಸಿದ್ದು ಏಕೆ? ಆ 30 ನಿಮಿಷಗಳ ನಡುವೆ ಅತುಲ್, ಪದ್ಮಪ್ರಿಯ ಜೊತೆ ಮಾತುಕತೆ ನಡೆಸಿದ್ದಾನೆ ಎಂದಾದರೆ, ಕರ್ನಾಟಕ ಪೊಲೀಸರು ದೆಹಲಿ ಪೊಲೀಸರ ಸಹಾಯದಿಂದ ಅದೇ ಹೊತ್ತಿನಲ್ಲಿ ಪದ್ಮಪ್ರಿಯ ಅವರನ್ನು ವಶಕ್ಕೆ ತೆಗೆದುಕೊಳ್ಳಬಹುದಿತ್ತಲ್ಲವೇ? ಇಲ್ಲಿ ಹುಟ್ಟುವ ಇನ್ನೊಂದು ಪ್ರಶ್ನೆಯೆಂದರೆ, ಅತುಲ್ ಮೂಲಕ ತನ್ನನ್ನು (ಪದ್ಮಪ್ರಿಯ ಅವರನ್ನು) ಕರೆದೊಯ್ಯುವ ಹುನ್ನಾರ ಕರ್ನಾಟಕ ಪೊಲೀಸರದ್ದು ಎಂಬ ವಿಷಯದ ಅರಿವಾಗಿ, ಭಯಬೀತರಾದ ಪದ್ಮಪ್ರಿಯ, ಆ ಬಳಿಕ ಆತ್ಮಹತ್ಯೆ ಮಾಡಿಕೊಂಡರೆ? ಉತ್ತರಗಳು ಮಾತ್ರ ಇನ್ನೂ ನಿಗೂಢವಾಗೇ ಇದೆ.
ಪತಿ ರಘುಪತಿ ಭಟ್ ಅವರಿಂದ ಸಂಪೂರ್ಣ ದೂರವಾಗಿ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಗಟ್ಟಿ ನಿರ್ಧಾರ ಮಾಡಿಯೇ ಪದ್ಮಪ್ರಿಯ ದೆಹಲಿಗೆ ಬಂದದ್ದು. ಅದಕ್ಕೆ ಅತುಲ್ ನೆರವಾಗಿದ್ದಾರೆ. ಇನ್ನು ಪೊಲೀಸ್ ಮೂಲಗಳು ಹೇಳುವ ಪ್ರಕಾರ ಅವರಿಬ್ಬರಿಗೆ ಆತ್ಮೀಯ ಸಂಬಂಧ ಇತ್ತು. ಅದು ಅವರವರ ವೈಯಕ್ತಿಕ ಪ್ರಶ್ನೆಗಳು. ಆದರೆ, ಒಬ್ಬ ಮಹಿಳೆ ತನ್ನ ಪತಿಯ ಮೇಲಿನ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡು ತನ್ನದೇ ಆದ ಹೊಸ ಬದುಕಿಗಾಗಿ ಹಂಬಲಿಸಿದ್ದನ್ನು ತಪ್ಪು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆ ವಿಷಯ ಸ್ಪಷ್ಟವಾದ ಮೇಲೆ ಅಂತಹ ಒಬ್ಬ ದಿಟ್ಟ ಮಹಿಳೆಯ ಮೇಲೆ ಒಂದು ರಾಜ್ಯ ಸರ್ಕಾರವೇ ಒತ್ತಡ ಹೇರಿ ಬಲವಂತವಾಗಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು ಮಾತ್ರ ಹೇಯ ಕೃತ್ಯ.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಪದ್ಮಪ್ರಿಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬದುಕಿದ್ದಾಗ ಸಂಬಂಧಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿಯೊಬ್ಬ, ಪತ್ನಿ ಹೆಣವಾದ ಮೇಲೆ ಕಣ್ಣೀರಿನ ಹೊಳೆ ಹರಿಸಿ, ಶವಕ್ಕೆ ಬೆಂಕಿಯಿಟ್ಟೂ ಆಗಿದೆ. ಆದರೀಗ, ಕೇವಲ ಅತುಲ್ ಒಬ್ಬನನ್ನೇ ಈ ಸಾವಿಗೆ ಕಾರಣ ಎಂದು ಬೊಟ್ಟು ಮಾಡುವ ಬದಲು, ಪದ್ಮಪ್ರಿಯ ಅವರು ಅತುಲ್‌ನೊಂದಿಗೆ ದೆಹಲಿಗೆ ಬಂದು ನೆಲೆಸುವಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು ಏಕೆ? ಎಂಬುದರ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ಆ ತನಿಖೆ ಮಾಡಿ, ನಂತರ ಹೊರಬೀಳುವ ಸತ್ಯವನ್ನು ಅರಗಿಸಿಕೊಳ್ಳುವ ತಾಕತ್ತು ಬಿಜೆಪಿ ಸರ್ಕಾರಕ್ಕಿದೆಯೇ?

Saturday 14 June 2008


ಮಂಕು ಬಡಿದವರ ನಡುವೆ...


ಬಹುಶಃ ಭಾರತದಲ್ಲಿ ಭಯೋತ್ಪಾದೆ ಅಟ್ಟಹಾಸಕ್ಕೆ ಕೊನೆಯಿಲ್ಲ ಎಂಬುದು ದೃಢವಾಗುತ್ತಿದೆ. ಇತ್ತೀಚೆಗಿನ ಜೈಪುರ ಸ್ಫೋಟ, ಅದಾದ ನಂತರದ ಕೆಲವೇ ದಿನಗಳಲ್ಲಿ ರಾಜಧಾನಿ ನವದೆಹಲಿಯಲ್ಲಿ ಅಬ್ದುಲ್ ರೆಹಮಾನ್ ಎಂಬ ಬಾಂಗ್ಲಾದೇಶೀ ಮೂಲದ ಹುಜಿ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಕಾರ್ಯಕರ್ತನನ್ನು ಬಂಧಿಸಲಾಯಿತು. ಆ ಸಂದರ್ಭದಲ್ಲಿ ಇಡೀ ದೆಹಲಿಯೇ ಅಚ್ಚರಿ ವ್ಯಕ್ತಪಡಿಸಿದ್ದು ತಿಳಿದೇ ಇದೆ. ನಿಜಹೇಳಬೇಕೆಂದರೆ ನವ ದೆಹಲಿ ರೈಲ್ವೇ ನಿಲ್ದಾಣದ ಚೆಲ್ಮ್ಸ್‌ಫರ್ಡ್ ರಸ್ತೆ ಬಳಿ ಆತನನ್ನು ಪೊಲೀಸರು ಸೆರೆಹಿಡಿದಿದ್ದು ಮಾತ್ರವಲ್ಲ, ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಹುನ್ನಾರ ನಡೆಸಿದ್ದ ಹುಜಿ ಸಂಘಟನೆಯ ಕೃತ್ಯಕ್ಕೂ ಪೊಲೀಸರು ಕತ್ತರಿ ಹಾಕಿದ್ದರು. ಇಲ್ಲದಿದ್ದಲ್ಲಿ ದೆಹಲಿಯೂ ಸ್ಫೋಟದ ಎಲ್ಲಾ ಸಾಧ್ಯತೆಗಳೂ ಇದ್ದವು.
ಇಂದು ಭಯೋತ್ಪಾದಕರ ಮೂಲ ಗುರಿ ಅಮೆರಿಕನ್ನರನ್ನು ಹತ್ತಿಕ್ಕುವಲ್ಲಿ ಆಗಿದ್ದರೂ, ಭಾರತ ಮಾತ್ರ ಭಯೋತ್ಪಾದಕರ ದಾಳದಲ್ಲಿ ಸಿಲುಕಿ ನರಳಾಡುತ್ತಿದೆ. ಭದ್ರತೆ ಹಾಗೂ ರಾಷ್ಟ್ರ ರಕ್ಷಣಾ ವಿಷಯದಲ್ಲಿ ಅಮೆರಿಕಕ್ಕೆ ಸರಿಸಾಟಿ ಯಾರೂ ಇಲ್ಲ. ಆದರೆ ಅದೇ ವಿಷಯ ಭಾರತಕ್ಕೆ ಹೋಲಿಸಿದಾಗ ಫಲಿತಾಂಶ ವ್ಯತಿರಿಕ್ತ. ನಮ್ಮ ರಾಜಕಾರಣಿಗಳಿಗೆ ರಾಷ್ಟ್ರದ ರಕ್ಷಣೆ ಆಗಲಿ ಅಥವಾ ಅಮಾಯಕ ನಾಗರಿಕರ ಹತ್ಯೆ ಎಂದಿಗೂ ಗಮನಿಸಬೇಕಾದ ಅಂಶ ಆಗಿಲ್ಲ. ವೋಟ್ ಬ್ಯಾಂಕ್ ರಾಜಕಾರಣವನ್ನು ಮಾತ್ರ ಮನದಲ್ಲಿಟ್ಟುಕೊಂಡು, ಅಲ್ಪಸಂಖ್ಯಾತರ ಓಲೈಕೆಯಲ್ಲೇ ಮಂತ್ರಿಗಳು (ಶಿವರಾಜ್ ಪಾಟಿಲ್) ಕಾಲ ಕಳೆಯುತ್ತಿದ್ದಾರೆ. ಇಡೀ ಗೃಹಸಚಿವಾಲಯ ಮಾತ್ರ ಕುಂಭಕರ್ಣ ನಿದ್ದೆಯಲ್ಲೇ ದಿನ ದೂಡುತ್ತಿದೆ. ಸಮರ್ಪಕ ರಣತಂತ್ರಗಳ ಮೂಲಕ ಭಯೋತ್ಪಾದಕರ ಕಾಟ ಹತ್ತಿಕ್ಕುವಲ್ಲಿ ಗೃಹ ಸಚಿವರು ಸೋತಿದ್ದಾರೆ. ಆ ಮಧ್ಯೆಯೂ ಅಬು ಸಲೇಂನಂತಹ ಉಗ್ರರನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ, ಇದರಿಂದ ಸರಬ್‌ಜಿತ್‌ನನ್ನು ಭಾರತಕ್ಕೆ ಕರೆತರುವ ವಿಷಯದಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬೆಲ್ಲಾ ಜಾರಿಕೊಳ್ಳುವ 'ಸ್ಪಷ್ಟನೆ ನೀಡುತ್ತಾರೆ' ನಮ್ಮ ಮಹಾನ್ ಗೃಹ ಸಚಿವರು.
ಇನ್ನು ಬಾಂಗ್ಲಾದಿಂದ ಭಾರತಕ್ಕೆ ಬರುವ ಅಕ್ರಮ ವಲಸಿಗರು ದೇಶಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತಿರುವುದು ಯಾರಿಗೂ ಘೋರ ವಿಷಯವಾಗಿ ಪರಿಣಮಿಸಿಯೇ ಇಲ್ಲ. ಇಂದು ರಾಜಸ್ಥಾನದಲ್ಲಿ ಒಂದು ಅಂದಾಜಿನ ಪ್ರಕಾರ ೧೦ ಲಕ್ಷ ಬಾಂಗ್ಲಾ ದೇಶದ ಮಂದಿ ನೆಲೆಸಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇಂತವರನ್ನು ದೇಶದಿಂದ ಮೊದಲು ಓಡಿಸಬೇಕು ಎಂದು ವಾದಿಸುತ್ತಿರವವರ ವಾದವೆಲ್ಲಾ ಪೊಳ್ಳು ಎಂದು ಮಾನವ ಹಕ್ಕುಗಳ ಆಯೋಗದ ಮಂದಿ ವಾದಿಸುತ್ತಾರೆ. ನಫೀಸಾ ಅಲಿ ಅವರಂತಹ 'ಸಮಾಜ ಸುಧಾರಕಿ'ಯರು ಬೇರೆ ದೇಶದ ಮೂಲಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು ಎಂದು ಉದಾರವಾದ ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ದೇಶ ಇಂದು ದುರಂತಗಳ ಗೂಡಾಗಿದ್ದು, ಮೂಲ ಸೌಕರ್ಯ ಬಿಡಿ, ತುತ್ತಿನ ಚೀಲ ತುಂಬಿಸಲೇ ಜನ ಹೆಣಗಾಡುತ್ತಿರುವಾಗ, ನಮ್ಮ ದೇಶದ ದುರವಸ್ಥೆಯನ್ನು ದೂರಮಾಡುವತ್ತ ಕಾರ್ಯೋನ್ಮುಖವಾಗಬೇಕು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಏಕೆಂದರೆ ಇವರು 'ಸಮಾಜ ಸುಧಾರಕರು' ಅಲ್ಲವೇ? ಇನ್ನು ನಮ್ಮ ಮಾನವ ಹಕ್ಕು ಆಯೋಗಕ್ಕೆ ಯಾವ ರೀತಿಯಲ್ಲಿ ಮಂಕು ಬಡಿದಿದೆ ಎಂದು ಅರ್ಥವೇ ಆಗುತ್ತಿಲ್ಲ. ಭಾರತದಲ್ಲಿ ಮಹಾದುರಂತಗಳಿಗೆ ನಾಂದಿ ಹಾಡಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಬಾಂಗ್ಲಾ ದೇಶದ ಉಗ್ರರ ಕೈವಾಡವಿದೆ ಎಂದು ಇಂಟೆಲಿಜೆನ್ಸ್ ಏಜೆನ್ಸಿ ವರದಿ ನೀಡಿದ್ದರೂ ಅದನ್ನು ಮಾನ ಹಕ್ಕುಗಳು ಒಪ್ಪುವ ಸ್ಥಿತಿಯಲ್ಲಿಲ್ಲ. ಇಂಟೆಲಿಜೆನ್ಸ್ ವರದಿ ಯಾವ ಆಧಾರದ ಮೇಲೆ ಈ ವರದಿಗಳನ್ನು ತಯಾರಿಸಿದೆಯೋ ಗೊತ್ತಿಲ್ಲ. ಇದಕ್ಕೆ ಸರಿಯಾದ ಆಧಾರವೂ ಇಲ್ಲ ಎಂದು ಮಾನವ ಹಕ್ಕು ಆಯೋಗದ 'ಮಹಾಪುರುಷ'ರೊಬ್ಬರು ಹೇಳುತ್ತಾರೆ. ಅದೇನೆ ಇರಲಿ, ಹೀಗೆಯೇ 'ದಿವ್ಯ ನಿರ್ಲಕ್ಷ' ವಹಿಸಿದಲ್ಲಿ ಒಂದಲ್ಲಾ ಒಂದು ದಿನ ನಾವೆಲ್ಲರೂ ಇದರ ನೇರ ಪರಿಣಾಮವನ್ನು ಅನುಭವಿಸಲೇ ಬೇಕು. ಈ ಅನುಭವ ಈಗ ಆಗುತ್ತಲೂ ಇದೆ.
ವಿಪರ್ಯಾಸ ಏನೆಂದರೆ ಭಯೋತ್ಪಾದನೆಯಿಂದಾಗಿ ದೇಶದ ಬಹುಭಾಗ ಇಂದು ತತ್ತರಿಸಿ ಹೋಗಿದ್ದರೂ ನಮ್ಮ ಫುಡಾರಿಗಳಿಗೆ ವಿಶೇಷ 'ಆಂಟಿ ಟೆರರಿಸಂ' ಕಾನೂನು ಒಂದನ್ನು ರಚಿಸಬೇಕೆಂದು ಅನ್ನಿಸಿಯೇ ಇಲ್ಲ. ನಿಜಹೇಳಬೇಕೆಂದರೆ ಭಯೋತ್ಪಾದನೆಯನ್ನು ತಡೆಗಟ್ಟಲು ಸಮರ್ಪಕ ರಣತಂತ್ರಗಳನ್ನು ಹೂಡಲೇ ಕೇಂದ್ರ ತಡಕಾಡುತ್ತಿದೆ. ಬಹುತೇಕ ಯುವಕರು ಜಿಹಾದಿ ಜಾಲದಲ್ಲಿ ಸೇರಿಕೊಂಡು ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದರೂ ನಾವಿನ್ನೂ ಏಕೆ ಎಚ್ಚೆತ್ತುಕೊಂಡಿಲ್ಲ? ಇಷ್ಟೆಲ್ಲಾ ಅನಾಹುತಗಳಾಗಿ, ಮುಂಬರುವ ದುರಂತಗಳನ್ನಾದರೂ ತಪ್ಪಿಸುವ ನಿಟ್ಟಿನಲ್ಲಿ ಪೋಟಾ (ಪ್ರಿವೆನ್ಷನ್ ಆಫ್ ಟೆರರಿಸಂ ಆಕ್ಟ್) ಕಾಯ್ದೆ ಜಾರಿಗೆ ತರಬಹುದಲ್ಲವೇ?
ಇವೆಲ್ಲದರ ನಡುವೆ ಜಾಗತಿಕ ಶಾಂತಿಯ ನೆಲೆಯಿಂದ ಇಸ್ಲಾಮಿಕ್ ಸಂಸ್ಥೆಗಳಲ್ಲಿ ಒಂದಾದ 'ಜಾಮಿಯಾತ್ ಉಲಾಮ-ಇ-ಹಿಂದ್' ಕೆಲವು ಇತರ ಮುಸ್ಲಿಂ ಸಂಸ್ಥೆಗಳೊಂದಿಗೆ ಭಯೋತ್ಪಾದನೆ ವಿರುದ್ಧ 'ಫತ್ವಾ' ಹೊರಡಿಸಿದ್ದೂ ನಿಜಕ್ಕೂ ಸಂತೋಷದ ವಿಷಯ. ಭಯೋತ್ಪಾದನಾ ಕೃತ್ಯಕ್ಕೆ ಕೇವಲ ಮುಸ್ಲಿಮರನ್ನು ದೂರುವುದು ತಪ್ಪು. ಸಮುದಾಯದ ಇನ್ಯಾರೋ ಕೆಲವರು ಮಾಡಿದ ದುಷ್ಕೃತಕ್ಕೆ ಇಡೀ ಸಮುದಾಯದ ವಿರುದ್ಧವೇ ಆರೊಪ ಹೂಡುವುದು ಪ್ರಜ್ಞಾವಂತ ನಡೆ ಅಲ್ಲ. ಇದರ ಹಿಂದೆ 'ಕಾಣದ ಕೈ'ಗಳೂ ಇರುತ್ತವೆ ಎಂಬುದನ್ನು ನಾವಿಲ್ಲಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಮೂಢನಂಬಿಕೆಗಳಿಂದ ಹೊರಬರಬೇಕು. ಧರ್ಮದ ಹೆಸರಲ್ಲಿ ಇವರು ಧರ್ಮ ಹಾಗೂ ಸಮಾಜ ರಕ್ಷಣೆ ಮಾಡುತ್ತಿದ್ದಾರೆ ಎಂಬುದು ಹಾಸ್ಯಾಸ್ಪದ.
ಒಟ್ಟಾರೆ ನಮ್ಮೊಳಗಿನ ಲೋಪ-ದೋಷಗಳನ್ನು ತಿದ್ದಿಕೊಂಡು, ಸಮರ್ಪಕ ರಣತಂತ್ರಗಳ ಮೂಲಕ ಭಯೋತ್ಪಾದನೆಯ ಮೂಲೋಚ್ಛಾಟನೆ ಸಾಧ್ಯ. ನಮ್ಮ ಜನರ ಅಭಿವೃದ್ಧಿ, ಮೂಲ ಸೌಕರ್ಯಗಳ ಕೊರತೆ ನೀಗಿಸಿ ಸಮಾಜ ರಕ್ಷಣೆಯ ಕಾರ್ಯಕ್ಕೆ ಎಲ್ಲರೂ ಕೈಹಾಕಬೇಕು. ಬೇರೆ ದೇಶದ ಮೂಲ ಸೌಕರ್ಯ ಸರಿ ಪಡಿಸಬೇಕು ಸರಿ, ಆದರೆ ನಮ್ಮ ವ್ಯವಸ್ಥೆಯೇ ಸರಿ ಇಲ್ಲ. ನಮ್ಮಲ್ಲೇ ಕೊರತೆಗಳನ್ನಿಟ್ಟುಕೊಂಡು ಬೇರೆ ದೇಶ ಉದ್ಧಾರ ಮಾಡುತ್ತೇನೆ ಎಂದು ಹೊರಟರೆ, ಅದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ನಫೀಸಾ ಅಲಿ ಹಾಗೂ ಮಾನವ ಹಕ್ಕುಗಳಿಗೆ ಇದು ಅರ್ಥವಾದರೆ ಸಾಕು.

Thursday 27 March 2008

ಈತನಿಗೆ ಇನ್ನಾರು ಸಾಟಿ?

ಕನ್ನಡದ ಕಂಪು ಅವರ ಹೃದಯದಲ್ಲೇ ಬೇರೂರಿತ್ತು. ಕನ್ನಡ ಭಾಷೆಯಲ್ಲಿ ಅವರಿಗಿದ್ದ ಹಿಡಿತವನ್ನು ಕಂಡೇ ನಾನಂದು ನಿಬ್ಬರಗಾಗಿದ್ದೆ. ಕನ್ನಡ ಭಾಷೆಯನ್ನು ಬಲ್ಲವ ಸುಲಲಿತವಾಗಿ ಕನ್ನಡ ಮಾತನಾಡಿದರೆ ಅದರಲ್ಲಿ ಅಂಥದ್ದೇನೂ ವಿಶೇಷ ಇಲ್ಲ ಬಿಡಿ ಎಂದನಿಸುವುದು ನಿಜ. ಆದರೆ ನಾನೀಗ ಹೇಳಲು ಹೊರಟಿರುವುದು ಒಬ್ಬ ಕನ್ನಡಿಗನ ಕುರಿತಾಗಿಯಂತೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವರು ಒಬ್ಬ ಭಾರತದವರೇ ಅಲ್ಲ! ಅವರು ಸದ್ಯ ಇರುವುದು ಜರ್ಮನಿಯಲ್ಲಿ. ಹೊರದೇಶದವರಾಗಿದ್ದರೂ, ವಿಶೇಷವಾಗಿ ಹೇಳಬೇಕೆಂದರೆ ಭಾರತದ ಸಂಸ್ಕೃತಿ, ಸಂಪ್ರದಾಯ, ಭಾಷೆ, ನುಡಿ-ನಾಡು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕನ್ನಡ ಭಾಷೆಯನ್ನು ಅರಳು ಹುರಿದಂತೆ ಮಾತನಾಡುವ ಅವರು ಕನ್ನಡ ನಾಡಿನ ಹಿರಿ-ಕಿರಿಯ ಸಾಹಿತಿಗಳು ಹಾಗೂ ಅವರ ಕುರಿತಾಗಿ ಹೆಚ್ಚಿನದೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಕನ್ನಡ ಸಾಹಿತ್ಯ ಅವರ ನಾಲಿಗೆಯಲ್ಲಿ ಸತ್ವಯುತವಾಗಿ ಹರಿದಾಡುತ್ತಿದೆ! ಅವರ ಮಹತ್ಸಾಧನೆಗಳ ಬಗ್ಗೆ ಇಣುಕು ಹಾಕುತ್ತಾ ಹೋದರೆ ಇನ್ನೂ ಒಂದು ಆಶ್ಚರ್ಯಕಾರಿ ಸತ್ಯ ನಿಮ್ಮ ಕಣ್ಮುಂದೆ ಬಂದು ಕುಳಿತುಕೊಳ್ಳುತ್ತದೆ. ಹೌದು, ಅವರು ಕನ್ನಡ ಭಾಷೆಯಲ್ಲೇ ಡಾಕ್ಟರೇಟ್ ಪದವಿ ಗಳಿಸಿದ್ದಾರೆ!!
ಹೆಸರು ರಾಬರ್ಟ್ ಜೆಯ್ದೆನ್ ಬೊಸ್. ದೇಶ ನೆದರ್ ಲ್ಯಾಂಡ್(ಹಾಲೆಂಡ್). ಹುಟ್ಟಿದ್ದು ಕೆನಡಾದಲ್ಲಿ. ತಂದೆ ಹಾಲೆಂಡ್ನವರಾದರೆ ತಾಯಿ ಇಂಡೋನೇಷಿಯಾದವರು. ಸರಿ, ಮೂರು ದೇಶಗಳ ರಕ್ತ ಅವರ ದೇಹದಲ್ಲಿ ಹರಿಯುತ್ತಿದ್ದರೂ, ಅವರ ಮೈಯಲ್ಲಿ ಕನ್ನಡದ ರಕ್ತ ಪ್ರಕಾಶಮಾನವಾಗಿ ಮಿಂಚುತ್ತಿದೆ ಎನ್ನಲಡ್ಡಿಯಿಲ್ಲ ಬಿಡಿ. ಕಳೆದ ವರ್ಷ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಈ ವ್ಯಕ್ತಿಯ ಜೊತೆ ಮಾತನಾಡುವ ಭಾಗ್ಯ ನನ್ನದಾಗಿತ್ತು. ಒಂದೇ ಸಮನೆ ಕನ್ನಡದಲ್ಲಿ ಉಸುರುತ್ತಿದ್ದ ಅವರ ಮಾತುಗಳೇ ನನ್ನ ಹುಬ್ಬೇರಿಸುವಂತೆ ಮಾಡಿತ್ತು.
ರಾಬರ್ಟ್ ಅವರು ಜೈನ ಧರ್ಮಕ್ಕೆ ಮತಾಂತರ ಹೊಂದಿದ ವ್ಯಕ್ತಿ. ಜೈನ ಧರ್ಮದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಅಭಿಲಾಷೆ ಅವರದ್ದು. ಪ್ರಸ್ತುತ ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಧಾರ್ಮಿಕ ದಾರ್ಶನಿಕತೆಗಳ ಅಡಿಪಾಯವಿರುವ ``ಇಂದಾಲಜಿ'' ಎಂಬ ವಿಷಯದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ವೀರಶೈವ, ಜೈನತತ್ವಗಳ ಬಗ್ಗೆ ಅತಿಯಾದ ಆಸಕ್ತಿ ಹಾಗೂ ಗೌರವ ಹೊಂದಿದ್ದಾರೆ.
ಜರ್ಮನಿಯ ಮ್ಯೂನಿಕ್ನಲ್ಲಿ 1989ರಂದು ``ಕನ್ನಡ ಗದ್ಯ ಸಾಹಿತ್ಯದಲ್ಲಿ ಇರುವ ಸಂಸ್ಕೃತಿಯ ವೈಶಿಷ್ಟ್ಯದ ಕಥಾವಸ್ತುಗಳು'' ಎಂಬ ವಿಷಯದ ಕುರಿತು ಡಾಕ್ಟರೇಟ್ ಪದವಿ ಗಳಿಸಿದ ಅವರು, ಹಾಲೆಂಡ್ ನ ಯೂಟ್ರೆಕ್ಟ್ನಲ್ಲಿ ಇದ್ದ ಕೋಟದ ಪರಮೇಶ್ವರ ಐತಾಳ್ ಅವರಿಂದ ಕನ್ನಡ ಅಭ್ಯಸಿಸಿದರು. ಜೈನ ಧರ್ಮದ ಮೇಲಿನ ಆಸಕ್ತಿ ಅವರನ್ನು ಜೈನ ಧರ್ಮವನ್ನು ಕಲಿಯಲು ಪ್ರೇರೇಪಿಸಿತು.
ಶಿವರಾಮ ಕಾರಂತರ ''ಮೂಕಜ್ಜಿಯ ಕನಸುಗಳು'', ''ಹುಚ್ಚುಮನಸ್ಸಿನ ಹತ್ತುಮುಖಗಳು'', ''ಮೈಮನಗಳ ಸುಳಿಯಲ್ಲಿ'', ಕೃತಿಗಳನ್ನು ಎಂದು ಎದೆಯುಬ್ಬಿಸಿ ಹೇಳುವ ರಾಬರ್ಟ್ ಅವರಿಗೆ ಕಾರಂತರ ''ಚೋಮನ ದುಡಿ'' ಹೃದಯಕ್ಕೆ ಬಾರೀ ಹತ್ತಿರವಾಗಿದೆಯಂತೆ. ಹೌದು, ಕಾರಂತರ ಕಾದಂಬರಿಗಳೆಂದರೇ ಎಂಥವರೂ ಪ್ರೀತಿಸುತ್ತಾರೆ ಅಲ್ಲವೇ.
''ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ನಾನು ಹಾ.ಮಾ. ನಾಯಕರ ಬಳಿ ಹೋಗುತ್ತಿದ್ದೆ. ನಾನು ಇಂದು ಈ ಇಷ್ಟು ಕನ್ನಡ ಮಾತನಾಡುತ್ತೇನೆ ಎಂದರೆ ಅದರಲ್ಲಿ ನಾಯಕರ ಪಾತ್ರ ಬಹುಮುಖ್ಯವಾದುದು'' ಎಂದು ನಗು ನಗುತ್ತಾ ಅತ್ಯಂತ ಖುಷಿಯಿಂದ ಅವರು ಹೇಳುತ್ತಿದ್ದಾಗ, ಅಯ್ಯೋ, ನನ್ನ ಕನ್ನಡ ಮಾಷ್ಟ್ರು ಇವರೇ ಆಗಬಾರದೇ ಎಂದು ನನಗನಿಸಿದ್ದು ಖಂಡಿತಾ ಸುಳ್ಳಲ್ಲ!
ಒಟ್ಟು ಒಂಭತ್ತು ಭಾಷೆಗಳಲ್ಲಿ ಹಿಡಿತ ಸಾಧಿಸಿರುವ ಇವರಿಗೆ, ಸಂಸ್ಕೃತ, ಕನ್ನಡ, ಪ್ರಾಕೃತ, ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ಉರ್ದು ಹಾಗೂ ಪಾಲಿ ಭಾಷೆಗಳನ್ನು ಮಾತನಾಡುತ್ತಾರೆ. ನಾನು ತುಳುನಾಡಿನವನಾದ್ದರಿಂದ, ತುಳು ಬರುತ್ತಾ ಎಂದು ಕೇಳಿದರೆ, ``ಒಂತೆ ಒಂತೆ ಬರ್ಪುಂಡು, ಆಂಡ ಪಾತೆರುಜಿ ಆತೆ'' ಎಂದು ಮುಗುಳ್ನಗಬೇಕೆ??
ಇಂದಿನ ಆಧುನಿಕ ಯುಗದಲ್ಲೂ ನಮ್ಮಲ್ಲಿ ಸಾಂಪ್ರದಾಯಿಕ ಮಡಿವಂತರಿಗೇನೂ ಕಡಿಮೆ ಇಲ್ಲ ಬಿಡಿ. ತಮ್ಮದೇ ಆದ ವಿಚಿತ್ರ ಕಟ್ಟುಪಾಡುಗಳನ್ನು ಈಗಲೂ ಅನುಸರಿಕೊಂಡು ಹೋಗುತ್ತಿರುವರು ನಮ್ಮ ನಡುವೆಯೇ ಇದ್ದಾರೆ. ಇಂಥವರಿಂದ ಸಮಾಜದ ಕೆಳವರ್ಗದ ಹಾಗೂ ಇನ್ನಿತರ ವರ್ಗದ ಜನರು ಇಂದಿಗೂ ನೋವನ್ನು ಅನುಭವಿಸುವುದು ಇದ್ದದ್ದೇ. ಅಂತರಂಗದ ಮಡಿವಂತಿಕೆಯನ್ನು ಕಾಯ್ದುಕೊಳ್ಳದಿದ್ದರೂ, ತೋರಿಕೆಯ ಮಡಿವಂತಿಗೆ ದುಂಬಾಲು ಬಿದ್ದು ಸಾಮಾನ್ಯ ವರ್ಗದವರನ್ನು ನೀಚ ದೃಷ್ಟಿಯಿಂದ ಕಾಣುವ 'ಸ್ವಯಂಘೋಷಿತ' ಮಡಿವಂತರಿಂದ ರಾಬರ್ಟ್ ಅವರಿಗೂ ನೋವುಂಟಾಗಿದೆ! ಆದರೆ ಇವರಿಗೆ ಆದದ್ದು ಕೊಂಚ ಬೇರೆ ರೀತಿಯ ಅನುಭವ.
ಒಮ್ಮೆ ಮಾಧ್ವ ಸಿದ್ಧಾಂತದ ಕುರಿತು ಅವರು ಮಾತನಾಡುತ್ತಿದ್ದಾಗ, ಕೆಲವು ಸಾಂಪ್ರದಾಯಿಕ ಮಡಿವಂತರು, ''ಮುಂದಿನ ಜನ್ಮದಲ್ಲಿ ನೀವು ಮಾಧ್ವರಾಗಿ ಹುಟ್ಟಿಬನ್ನಿ. ಆಮೇಲೆ ಮಾಧ್ವ ಸಿದ್ಧಾಂತದ ಕುರಿತು ಮಾತನಾಡುವಿರಂತೆ'' ಎಂದು ತೆಗಳಿದ್ದನ್ನು ಅತ್ಯಂತ ಬೇಸರದಿಂದ ಹೇಳುತ್ತಾರೆ.
ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಕಲಿಯಲು ಆಸಕ್ತಿ ತೋರಿತಾಗ ಆತನ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೆ ಹೊರತು, ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದಾಗ, ನಿರಾಶೆ ಹಾಗೂ ಕೊರಗು ಅವರ ಮೊಗದಲ್ಲಿ ಅಚ್ಚೊತ್ತಿ ಕೂತಿತ್ತು.
ಅದೇನೆ ಇರಲಿ, ವಿದೇಶಿಗನೊಬ್ಬ ಕನ್ನಡವನ್ನು ಇಷ್ಟು ಸುಂದರವಾಗಿ, ಸ್ವಚ್ಛಂದವಾಗಿ, ಅಷ್ಟೇ ಕೋಮಲ ಧ್ವನಿಯಿಂದ ಮಾತನಾಡುತ್ತಾನೆ ಎಂದಾದರೆ, ನಮ್ಮ ನಡವಳಿಕೆ ಬಗ್ಗೆ ಪ್ರಶ್ನೆ ಮೂಡದೆ ಖಂಡಿತಾ ಇರದು. ಕನ್ನಡ ನಮ್ಮ ಮಾತೃಭಾಷೆ. ಆದರೆ ಪಾಶ್ಚಾತ್ಯರ ಇಂಗ್ಲಿಷ್ ಭಾಷೆಗೆ ನಾವು ಸೋತಾಗಿದೆ. ಹೌದು, ಇಂದು ಇಂಗ್ಲಿಷ್ ಬೇಕು. ಆದರೆ ನಮಗೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದರೂ ನಾವು ಕಣ್ಮುಚ್ಚಿ ಕುಳಿತಿದ್ದೇವೆ ಎಂದರೆ ಅದಕ್ಕೆ ಏನನ್ನಬೇಕು? ಇದು ನಮ್ಮ ಸ್ವಂತಿಕೆಯ ಪ್ರಶ್ನೆ. ನಮ್ಮವರು ರಾಬರ್ಟ್ ರಂಥವರನ್ನು ನೋಡಿ ಕಲಿವಂಥದ್ದು ಸಾಕಷ್ಟಿದೆ.
ಮಸ್ತಕಾಭಿಷೇಕದ ದಿನದಂದು ರತ್ನಗಿರಿ ಬೆಟ್ಟದಲ್ಲಿ ಮಿಂದು ಮೊಳಗುತ್ತಿದ್ದ ಗೊಮ್ಮಟ ಒಂದು ಕಡೆ ಸಂತೋಷ ಕುಣಿದಾಡಿದಂತೆ ಕಂಡುಬರುತ್ತಿದ್ದರೆ, ಇತ್ತ ನಾನು, ವಿದೇಶದಿಂದ ಬಂದ, ಅಷ್ಟೇ ಆತ್ಮೀಯನಂತೆ ಕಂಡು ಬಂದ, ಆಕಸ್ಮಿಕವಾಗಿ ಭೇಟಿ ಮಾಡಿದ ರಾಬರ್ಟ್ ಅವರೊಂದಿಗೆ ಮಾತುಕತೆ ನಡೆಸಿ ಮನದೊಳಗೇ ಹರ್ಷಚಕಿತನಾಗಿ ನಲಿದಾಡುತ್ತಿದ್ದೆ.

Thursday 28 February 2008

Home Alone!


Bangalore: killer city!

Safety of women in the city is going out of reach day by day

Tension for home alone ladies, murder, investigation, crime news in media with huge font have been growing to be a regular activity in silicon city.
“Subramani calling...” her mobile was ringing impatiently. Subramani was trying to call his wife Geetha however but at the result did not differ. Neither she picked the call nor did she call him back. Conceiving with the idea that she might have gone to her parents Subramani kept quite. But he was unaware that his expectation would go absolutely wrong.
She was Geetha, a 33-year-old housewife who was found strangled to death at her residence in Bangalore. Her gold ornaments were missing as were the jewelry s kept in the cupboard and Rs 9,000 cash. As her husband Subrahmani and kids were also ignorant of the fact that their mother had been killed, spent almost 4 hours playing in front of the house.
People say Bangalore is burning and to some extent it’s true. As Bangalore is becoming a terror hub, the people are getting tensed each and every day. With that the serial murders of home alone women, condition turn out to be even worse.
To the shock of Bangaloreans’ day after it happened again! Yet another home-alone woman found murdered in Bangalore. This time it was of Geethalakshmi Islur a forty years old lonely woman. She was an employee at a remand home. But as you think it was not a murder for currency and gold. Valuables in the house were untouched. As the investigations revealed her own family was involved in a civil dispute!
“It was not a murder for gain. The internal disputes with acquaintance resulted in murder. But we got clues about the killers involved in the murder, and you can expect them soon” said Bangalore South, DCP, S. Ravi to TSI.
Although this murder was not a ‘murder of gain’, it is an accepted fact that 90% of the women in the city are killed for gain! Last year Bangalore witnessed 48 women murders, 58 dowry deaths, 290 harassment cases and 62 rapes! No wonder city is big time on erroneous corridor.
“We have already taken several steps to provide safety to public and police’s are patrolling in every area of the city. ‘Hoysala’ patrol team also working hard for the safety of public” the DCP added.
But as the safety of women is going out of reach day by day the harassments, murders of home alone women are increasing at an enormous rate. The effectiveness of night patrolling has been questioned by the public as slaughters are getting their work done easily.
It is already proved Bangalore is not a safe ecstasy for women as it is developing into a most terrible city. Not only house wives even the BPO lady staff, college going girls are also becoming prey of the eve teasers and road Romeos. Bangalore records the highest number of dowry deaths in the state and unaccountable rape and eve banter. It is the time to ponder. If you still argue Bangalore is an out of harm's way city for women, you are wrong.
First it was Asha Krishnamurthy, strangled to death at her residence in Sheshadripuram on 2007 november 26th. Geetha was the 6th women got slaughted and Geethalakshmi was the 7th. In between 2007 november 26th to 21st february 2008, totally 7 home alone women murders have been taken place in the city.
The Police might have successfully caught some of the accused... But one question is left unanswered- Do those children get their Mothers back?

Wednesday 6 February 2008

Behold Those Days.....


My friend Sunil (Now working in a TV channel) has created a Blog recently which attracted me a lot. It's really a surprising package from him to reunite those class mates, even I can say bench mates and the close ones like him. The main aim of the blog is to bring back those huge memories of college days, the funny things what all we did in those gorgeous days of Life.
The word 'memory' itself brings pleasant feeling to the mind, where one runs towards the place from where he can get flashbacks of his life. Now let me tell you the meaning of the word memory. Psychology says that Memory is a organisms ability to store, retain and subsequently retrieve the information.
Every one will have his own memory power and based on his mental power one can grasp anything deep earth. But as u know once we go back to the earlier days of life, truly it brings a light smile, a gesture of happiness, bit of cry and a slight angry too. Totally I can say that our body language will be completely different from the normal depending upon the flashback we go.
Now let me have a fast run towards flashbacks of my college days. Waaav!! I miss them a lot. I dont know whether they miss me or not. But I miss my close ones and some of my class mates, and not to forget my intimate lecturer's. Me now being alone, with no facial contacts with my friends, always tend to remember my college days, especially the final degree year, at the time I go to sleep. You see, with a free mind, its a nice time to have a journey towards the sweet heaven (so that you can get a wonderful sleep). Because the world will be sleeping (except the robbers, Lovers and some 'special' stupids) at that moment and you will be free from all the pressures, irritations, and your mind will be saying "cool man calm down, now let me to go somewhere else where you can get extra joy, happy which makes you breathe a sigh of relief". Yes, your mind says the right thing, and with no hesitation say yes to that. Yes!! your journey starts now. Take a cool breath, just start thinking your past sweet days which you spent with your friends, intimates, parents, relatives. Yes, you are entering into your own fascinating world of dreams (not excactly dreams but still we can say it as past memorable dreams). You are not aware of anything outside happenings and your body will be covered in a blanket!!
Its just a minute to take you to enter into the new world and there you will be blessed to see your same old friends talking to you, enjoying the greatest time with you and yourself being a part of whole enjoyment. See, here you can observe that in a day you will be moved into 3 dissimilar worlds. One is the world of reality, second is the world past memory and finally the world when you go to sleep. Here I can assure you that atleast 2 of them will give you bundle happiness, tremendous joys, package of relief ness and incredible delight and finally a kind of jubilation starts in your mind. I can also say it as a sort satisfaction.
Why Make A Journey To The Other Side Of The World When The World Has Come To You?"