Saturday 27 October 2007

ಐ ರಿಯಲಿ ಲವ್ ಯು...

ಚಳಿಗಾಲದ ಒಂದು ಮುಂಜಾನೆ... ಮಬ್ಬಾದ ವಾತಾವರಣ ಇನ್ನೂ ಮನೆಮಾಡಿತ್ತು. ತಂಪಾದ ಗಾಳಿಯೂ ಬೀಸುತ್ತಿತ್ತು. ಆ ತಂಪು ನನ್ನನ್ನು ಸಂಪೂಂರ್ಣ ಆವರಿಸಿಕೊಂಡಿದ್ದರಿಂದ ಒಂದು ಹಾಟ್ ಕಾಫಿ ಕುಡಿಯೋಣವೆಂದು ಕಾಲ್ಕಿತ್ತವನೇ ಸ್ತಬ್ದನಾಗಿ ನಿಂತೆ! ಕಾಕತಾಳೀಯವೋ ಅಥವಾ ನನ್ನ ಅದೃಷ್ಟವೋ, ಹೊಟೇಲ್ ಹತ್ತಿರವಿದ್ದ ಬಸ್‌ನಿಲ್ದಾಣದಲ್ಲಿ ಆಕೆ ನಿಂತಿದ್ದಳು! ಇದುವರೆಗೆ ಅವಳ ಬಳಿ ಒಂದಕ್ಷರವೂ ಮಾತಾಡಿರಲಿಲ್ಲ. ಆದರೆ ಆ ಅಂದದ ಮೊಗದಿಂದ ಹೊರಬರುತ್ತಿದ್ದ ಒಂದು ನಗೆಯೇ ನನ್ನ ಪಾಲಿನ ಬಹುದೊಡ್ಡ ಆಸ್ತಿಯಾಗಿತ್ತು. ನನ್ನ ಬಗ್ಗೆ ಆಕೆಗೆ ಹೆಚ್ಚೇನೂ ಗೊತ್ತಿಲ್ಲದಿದ್ದರೂ ನಾನು ಆಕೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೆ. ಇದಕ್ಕೆ ಆಕೆಯ ಫ್ರೆಂಡ್ಸ್ ಸಹಾಯ ಮಾಡಿದ್ದನ್ನು ನಾನು ಖಂಡಿತಾ ಮರೆಯಲು ಸಾಧ್ಯವಿಲ್ಲ.

ಆದರೆ ಆಕೆಯನ್ನು ಅಪ್ರೋಚ್ ಮಾಡಬೇಕೆಂಬ ಬೃಹದಾಕಾರದ ಪ್ರಶ್ನೆಗೆ ಮಾತ್ರ ನನ್ನಿಂದ ಇದುವರೆಗೆ ಉತ್ತರ ಕಂಡುಕೊಳ್ಳಲಾಗೇ ಇಲ್ಲ.

ವನ್ ಸೈಡೆಡ್ ಲವ್ ಅಂದ್ರೆ ಬಹುಶಃ ಹಾಗೆ ಇರ್ಬೇಕು ಅಂತ ಅನ್ನಿಸತ್ತೆ. ಆಕೆಯನ್ನು ಮಾತಾಡಿಸಬೇಕು, ಮನಸ್ಸಿನೊಳಗೆ ಅಡಗಿ ಕುಳಿತಿದ್ದ ಭಾವನೆಗಳನ್ನು ಆಕೆಯೊಂದಿಗೆ ಹಂಚಿಕೊಳ್ಳಬೇಕೆಂದು ನಭದೆತ್ತರದಷ್ಟು ಆಸೆಯಿದ್ದರೂ...ಏನೋ ಒಂದು ತರಹದ ತಳಮಳ ನನ್ನನ್ನು ಕಾಡುತ್ತಲೇ ಇತ್ತು. ಆಕೆ ಎದುರು ನಡೆದುಕೊಂಡು ಬರುತ್ತಿದ್ದಾಗ ಕನಿಷ್ಟ ಒಂದು 'ಹಾಯ್' ಅಂತನೂ ಹೇಳಲಾಗದ ತಳಮಳ...! ಮಾತಾಡೋದೋ, ಬೇಡ್ವೋ...?

"ಅವ್ಳು ನನ್ನ ನೋಡಿದ್ರೆ ಮಾತ್ರ ಮಾತದ್ಸೋಣ. ಇಲ್ಲಂದ್ರೆ ಬೇಡ..
...ನಾನೇ ಹೋಗಿ ಮಾತಾಡಿದ್ರೆ ಅವಳು ಏನು ತಿಳ್ಕೊಳ್ತಾಳೋ ಅನ್ನೋ ಭಯ.. ಯಾಕಂದ್ರೆ ಫರ್ಸ್ಟ್ ಇಂಪ್ರೆಶ್ಶನ್ ವರ್ಸ್ಟ್ ಇಂಪ್ರೆಶ್ಶನ್ ಆಗ್ಬಾರದಲ್ವಾ"?
ನಿತ್ಯವೂ ಈ ರೀತಿಯ ಗೊಂದಲಗಳಿಂದ ಮನಸ್ಸಿಡೀ ಚಿಂತೆಗಳ ಮಹಾಸಾಗರವಾಗಿತ್ತು!

ಬಿಡಿ, ವಿಷಯಕ್ಕೆ ಬರೋಣ...
ಹೊಟೇಲ್‌ಗೆ ಹೋಗಬೇಕೆಂದಿದ್ದ ನನಗೆ ಅವಳನ್ನು ಕಂಡಾಕ್ಷಣ ಸಾವಿರ ಯೋಚನೆಗಳು ಮನಸ್ಸಲ್ಲಿ ಉದ್ಭವಿಸಲು ಆರಂಭವಾದವು. ಅಷ್ಟು ಹೊತ್ತು ಚಳಿಯಲ್ಲಿ ನಡುಗುತ್ತಿದ್ದ ಮೈ ಒಂದೇ ಸಮನೆ ಬೆವರಿ ಹೋಗಿತ್ತು!! ಹೊಟ್ಟೆಯಲ್ಲಿ ನಡುಕವೂ ಪ್ರಾರಂಭವಾಗಿತ್ತು. ಇದುವರೆಗೆ ಈ ರೀತಿಯ ತಾಕಲಾಟ ಮನಸ್ಸಿಗಾಗಿರಲಿಲ್ಲ. ಬಹುಶಃ ಆಕೆ ಬಸ್ಸಿಗಾಗಿ ಕಾದು ನಿಂತಿದ್ದಳೆಂದು ನಾನಂದುಕೊಂಡಿದ್ದೆ. ಎನೇ ಇರಲಿ, ಅವಳ ಸೌಂದರ್ಯವನ್ನು ಅನುಭವಿಸುವಂಥಾ ಮಹದವಕಾಶ ನನಗೊದಗಿಬಂದಿತ್ತು.

ಸರಿ, ಮನಸ್ಸನ್ನು ಬಿಗಿ ಮಾಡಿದೆ. ಸಣ್ಣ ಸಣ್ಣ ಹೆಜ್ಜಯಿಡಲು ಆರಂಭಿಸಿದೆ. ಅವಳನ್ನು ಇಂದು ಮಾತಾಡಿಸಲೇ ಬೇಕು ಎಂದು ಮನದೊಳಗೆ ತೀರ್ಮಾನವೂ ಮಾಡಿದೆ. ಹಾಗೇ ಹತ್ತಿರ ಹತ್ತಿರ ಬಂದದ್ದೇ ತಡ ಈ ಹಾಳಾದ ಮೊಬೈಲ್ ರಿಂಗಣಿಸಲು ಆರಂಭಿಸಿತು. ರಿಸೀವ್ ಮಾಡೊದು ಬೇಡ ಅಂದ್ರೆ ಅದು ಮನೆಯಿಂದ ಬಂದ ಕಾಲ್ ಆಗಿತ್ತು. ಓಕೆ ಎಂದು ಕಾಲ್ ರಿಸೀವ್ ಮಾಡಿ ಮಾತಾಡಲಾರಂಭಿಸಿದೆ.
... ಅಮ್ಮ!

ಎಂತ ಮಗಾ?
ಹೇಂಗಿದ್ದೆ?
ಎಲ್ಲಾ ಆರಾಮವಾ?
ಕಾರ್ಯಕ್ರಮ ಹೇಂಗಿದ್ದು?

ಏನೆಲ್ಲಾ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಪ್ರತಿಯೊಂದಕ್ಕೂ ಉತ್ತರಿಸಿ, ಮಾತಿಗೆ ವಿರಾಮ ಹಾಕಿದಾಗ ಆಗಲೇ ಮಹತ್ವದ 15 ನಿಮಿಷಗಳು ಕಳೆದುಹೋಗಿದ್ದವು! ಆಕೆಯೂ ಅಲ್ಲಿಂದ ಮಾಯವಾಗಿದ್ದಳು! ನಿಂತಲ್ಲಿಂದ ಆಕೆ ಮಾಯವಾದದ್ದು ನಂಗೆ ಅರಿವೇ ಆಗಲಿಲ್ಲ:-(

ಅಮ್ಮನೊಂದಿಗೆ ಮಾತನಾಡಿದೆ ಅನ್ನೋ ಖುಷಿ ಒಂದೆಡೆಯಾದರೆ, ಅವಳು ಹೋದಳಲ್ಲ ಅನ್ನೋ ಬೇಸರ ಇನ್ನೊಂದು ಕಡೆ.

ಕೊನೆಗೂ ಸಿಹಿ-ಕಹಿಗಳ ಮಿಶ್ರಣಗಳೊಂದಿಗೆ ಬಿಸಿ ಬಿಸಿ ಕಾಫಿ ಕುಡಿಯಲೆಂದು ಹೋಟೆಲಿಗೆ ನುಗ್ಗಿಯೇ ಬಿಟ್ಟೆ.
ಆದರೆ ಅಲ್ಲಿಯೂ ಆಕೆ ಪ್ರತ್ಯಕ್ಷವಾಗಬೇಕೆ...?

ನನ್ನ ದುರದೃಷ್ಟವೋ ಅವಳ ಅದೃಷ್ಟವೋ ನಾ ಕಾಣೆ.

ಅವಳಂದು ಇದ್ದದ್ದು ಬೇರೆ ಯಾರ ಜೊತೆಗೂ ಅಲ್ಲ ಖುದ್ದು ಆ ಹುಡುಗನ ಜೊತೆಗೇನೆ..!

ನನಗಿದು ತಡವಾಗಿ ತಿಳಿಯಿತಾದರೂ, ವಿಷಯ ತಿಳೀತಲ್ಲ ಅನ್ನೋದೆ ಸಂತೊಷ. ದಿನವಿಡಿ ಆ ಪುಣ್ಯಾತ್ಮ ಯಾರಿರಬಹುದೆಂದು ಸಾವಿರ ಭಾರಿ ಯೋಚನೆ ಮಾಡಿದ್ದೆ. ಆ ಟೈಮ್ ನಿಜವಾಗಿಯೂ ವೇಸ್ಟ್ ಆಯ್ತು.. ಆದರೂ ಪರವಾಗಿಲ್ಲ. ಜೀವನದಲ್ಲಿ ಇಂಥದ್ದೆಲ್ಲ ಇದ್ದದ್ದೇ ಎಂದು ನನ್ನ ಸ್ನೇಹಿತರು ಬೆನ್ನು ತಟ್ಟಿದರು.

ದಿನ ಕಳೆದಂತೆ ಆಕೆಯ ಮೇಲಿದ್ದ ಭಾವನೆಗಳೂಬುಡ ಕಡಿದ ಬಾಳೆ ಗಿಡದಂತೆ ಸತ್ತು ಹೋಯಿತು.

ಅಂದು ಆಕೆ ಬಸ್ಸಿಗಾಗಿ ಕಾಯುತ್ತಿದ್ದಳೇನೋ ಎಂದು ನಾನಂದುಕೊಂಡಿದ್ದು ಸುಳ್ಳಾಯ್ತು... ತನ್ನ ಪ್ರೇಮಿಗಾಗಿ ಕಾದಿದ್ದ ಆಕೆ ಹೋಟೆಲ್‌ನಿಂದ ಹೊರಟವಳೇ ಆತನ ಬೈಕ್‌ನಲ್ಲಿ ಕುಳಿತು ಎರಡು ಭುಜಗಳನ್ನೂ ಹಿಡಿದಾಗಲಂತೂ.... ಏನು ಹೇಳಬೇಕೆಂದು ನನಗೆ ತೋಚುತ್ತಿಲ್ಲ... ನಾನೇ ಇಂಗು ತಿಂದ ಮಂಗನಾದೆ ಅಷ್ಟೇ.

ಒಂದು ರೀತಿಯಲ್ಲಿ ಅಂದು ಅಮ್ಮ ಫೋನ್ ಮಾಡಿದ್ದು ಒಳೆಯದೇ ಆಗಿತ್ತು. ಆದರೆ ಮಾಯಾಜಿಂಕೆಯಂತಿದ್ದ ಆಕೆಯ ಬಳಿ ಮಾತಾಡಲಾಗಲಿಲ್ಲವೆಂದು ಅಮ್ಮನಿಗೆ ಹಿಡಿ ಶಾಪ ಹಾಕಿದ್ದೆ.

I am so sorry.... ರಿಯಲಿ ಐ ಲವ್ ಯು ಅಮ್ಮ....

Friday 24 August 2007

ಕರುಣಾಜನಕ ಕಥೆ ಹೇಳುವ
ಬಾಸುಂಡೆ ಗುರುತು...
.
ಕೆಲಸ ದೊರೆಯಿತು ಎಂದು ನಗುಮುಖದಿಂದ ಅರಬ್ ದೇಶಗಳಿಗೆ ತೆರಳುವವರಲ್ಲಿ ಎಷ್ಟು ಮಂದಿ ನಗುಮುಖದಿಂದಲೇ ದುಡಿಯುತ್ತಿದ್ದಾರೆ? ಮೂಲಗಳ ಪ್ರಕಾರ ಅಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಯಾತನೆಯೇ ದಿನನಿತ್ಯದ ಸಂಗಾತಿ!

ಮಧ್ಯಾಹ್ನ 12 ಗಂಟೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ. ದುಬೈಯಿಂದ ಆಗಮಿಸಿದ ವಿಮಾನವೊಂದರಿಂದ ಇಳಿದ ಪ್ರಯಾಣಿಕರೆಲ್ಲರೂ ತಮ್ಮ ಗುರಿಯತ್ತ ಹೆಜ್ಜೆ ಹಾಕಿದರು. ಆದರೆ, ಅದೇ ವಿಮಾನದಲ್ಲಿ ಅರೆ ಜೀವಾವಸ್ಥೆಯಲ್ಲಿದ್ದು ಗಾಲಿ ಕುರ್ಚಿಯ ಮೇಲೆ ಕುಳಿತು, ತೀರಾ ಕುಗ್ಗಿ ಹೋಗಿದ್ದ ಮಹಿಳೆಯೊಬ್ಬರು ಅಲ್ಲಿನ ಕಸ್ಟಮ್ಸ್ ಅಧಿಕಾರಿ ಆನ್ಸೆಂಟ್ ಥಾಮಸ್ ಬಳಿ ಬಂದು 'ಸಾರ್ ನನಗೆ ನಡೆಯಲೂ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೀರಾ?' ಎಂದು ಗೋಗರೆದಳು. ಆಕೆಯ ಮೈ-ಕೈ ಮೇಲೆಲ್ಲಾ ಎದ್ದು ಕಾಣುತ್ತಿದ್ದ ಸುಟ್ಟ ಗಾಯಗಳು-ಬಾಸುಂಡೆಗಳನ್ನು ಕಂಡ ಥಾಮಸ್ ಕೂಡಲೇ ಕಾರ್ಯ ಪ್ರವೃತ್ತರಾದರು. ಮುರುಟಿ ಹೋಗಿದ್ದ ಆ ಜೀವ ಮುಂಬೈನ ಹೋಲಿ ಸ್ಪಿರಿಟ್ ಆಸ್ಪತ್ರೆ ಸೇರಿತು.
ಇದು ಯಾವುದೋ ಒಂದು ಸಿನೆಮಾದ ದೃಶ್ಯ ಎಂದುಕೊಂಡಿರಾ? ಖಂಡಿತ ಅಲ್ಲ. ಇದೊಂದು ಜೀವಂತ 'ಚಿತ್ರಕಥೆ'. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬ ಊರಿನ ಸುಮತಿ ಕ್ರಿಸ್ತಾಬೆಲ್ ಕೋಟ್ಯಾನ್ ಅವರ ಜೀವನದ ದುರಂತ ಕಥೆ. ಅಬುಧಾಬಿಯಲ್ಲಿ ನೆಲೆಸಿರುವ ಉಡುಪಿ ಮೂಲದ ದೀಪಕ್ ಲೂಯಿಸ್ ಹಾಗೂ ಸರಿತಾ ಲೂಯಿಸ್‌ರ ಮನೆಯಲ್ಲಿ ಕೆಲಸದ ಆಳಾಗಿ ಸೇರಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯನ್ನು ಅನುಭವಿಸಿ ಜೀವನದ ಕರಾಳ ದಿನಗಳನ್ನು ಕಂಡ ಸುಮತಿ ಕೋಟ್ಯಾನ್ ಅವರ ನೊಂದ ಜೀವನದ ವಾಸ್ತವ ಸತ್ಯ.
ಬಹುಶಃ ಸುಮತಿ ಕೋಟ್ಯಾನ್ ಅವರ ಕಥೆ ಕರಾವಳಿಯಲ್ಲಿ ಈಗ ಜನಜನಿತ. ಆದರೆ ಆ ಕಥೆಯ ಮುಂದಿನ ಭಾಗ ಮಾತ್ರ ಹೆಚ್ಚಿನವರಿಗೆ ಗೊತ್ತಿಲ್ಲ. ಬನ್ನಿ, ಭೂತದ ಮೇಲೊಂದು ಕಿರು ನೋಟ ಹರಿಸೋಣ. ಸುಮತಿ ದಂಪತಿಗೆ ಒಬ್ಬ ಮಗ. ಆತನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬುದೇ ಅವರ ಮಹದುದ್ದೇಶ. ಆದರೆ ಅತಿಯಾದ ಬಡತನ ಹಾಗೂ ದಾರಿದ್ರ್ಯ ಸುಮತಿ ಅವರನ್ನು ದುಡಿಯಲು ತೆರಳುವಂತೆ ಪ್ರೇರೇಪಿಸಿತು. ಸುಮತಿ ಹೇಳುವ ಪ್ರಕಾರ ಉಡುಪಿ ಮೂಲದ ಲೂಯಿಸ್ ದಂಪತಿಗಳಿಗೆ ಮೊದಲಿನಿಂದಲೇ ಆಕೆಯ ಪರಿಚಯವಿತ್ತು. ಆದ ಕಾರಣ ದುಬೈನಲ್ಲಿ ನೆಲೆಸಿರುವ ಲೂಯಿಸ್ ದಂಪತಿಗಳು ಸುಮತಿ ಅವರನ್ನು ತಮ್ಮ ಮನೆಕೆಲಸದಾಕೆಯಾಗಿ ನೇಮಿಸಿದರು.
ಆದರೆ ಮುಂದೆ ನಡೆದದ್ದೇ ಬೇರೆ. ಸುಮತಿಯನ್ನು ಪ್ರಾಣಿಗಿಂತ ಕಡೆಯಾಗಿ ಕಂಡು ಚಿತ್ರಹಿಂಸೆ ನೀಡಲು ಶುರುಮಾಡಿದ ಲೂಯಿಸ್ ದಂಪತಿಗಳು ಆಕೆ ಏನೇ ಮಾಡಿದರೂ ಅದರಲ್ಲಿ ಕೊಂಕು ಹುಡುಕಲಾರಂಭಿಸಿದರು. ಬಾಸುಂಡೆ ಬರುವಂತೆ ಹೊಡೆದು ಇಸ್ತ್ರಿ ಪೆಟ್ಟಿಗೆಯನ್ನು ಬೆನ್ನಿನ ಮೇಲಿಟ್ಟು ಕ್ರೂರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಚಿತ್ರಹಿಂಸೆಯ ಪರಮಾವಧಿಗೆ ಸುಮತಿ ಅವರ ಬೆನ್ನೇ ಸಾಕ್ಷಿ. ಆ ಸುಟ್ಟ ಗಾಯಗಳು, ಸೋತು ಸುಣ್ಣವಾದ ಮುಖ, ಶಿಥಿಲಗೊಂಡ ದೇಹವೇ ಆಕೆಯ ದುರಂತ ಕಥೆಯ ಒಂದೊಂದು ಸಾಲನ್ನೂ ಹೇಳುತ್ತವೆ.
ದುಬೈಗೆ ಹೋಗುವ ಮುನ್ನ ಸುಮತಿಗೆ ತಿಂಗಳಿಗೆ ೮,೦೦೦ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಲಾಗಿತ್ತಂತೆ. ಆದರೆ, ನಂತರ ದೊರಕಿದ್ದು ಬೇಕಾದಷ್ಟು ಹಿಂಸೆ ಹಾಗೂ ತಿಂಗಳಿಗೆ ರೂ. ೬,೦೦೦ ಸಂಬಳ ಮಾತ್ರ. ಸುಮತಿ ಹೇಳುವ ಪ್ರಕಾರ ಲೂಯಿಸ್ ದಂಪತಿ ಈ ವಿಕೃತ 'ಸಂಪ್ರದಾಯ'ವನ್ನು ಹಲವಾರು ತಿಂಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಸುಮತಿ ಕೋಟ್ಯಾನ್ ಅವರ ಪ್ರತಿ ಹೇಳಿಕೆಯನ್ನೂ ಅಲ್ಲಗಳೆಯುವ ಲೂಯಿಸ್ ದಂಪತಿ 'ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ' ಎನ್ನುತ್ತಾರೆ. ಸುಮತಿ ಅವರ ಮಾತುಗಳನ್ನೆಲ್ಲಾ 'ಸುಳ್ಳು' ಎಂದು ಹೇಳುವ ಲೂಯಿಸ್ ದಂಪತಿ ಪ್ರಕರಣಕ್ಕೆ ಅಂದೇ ತಿರುವು ನೀಡಿದ್ದರು. ಒಂದು ವೇಳೆ ಸುಮತಿ ಅವರು ಹೇಳಿರುವುದೆಲ್ಲಾ ಸುಳ್ಳೇ ಆಗಿದ್ದರೆ ಆಕೆ ಈ ನರಕಯಾತನೆಯನ್ನು ಯಾರಿಂದ ಯಾಕಾಗಿ ಅನುಭವಿಸಿದಳು ಎಂಬ ಪ್ರಶ್ನೆ ಮೂಡುವುದು ಸಹಜ.
ಊರಿನ ಕೆಲವರು, 'ಮೃದು ಸ್ವಭಾವದ ಸುಮತಿಗೆ ಊರಿನಲ್ಲಿ ಯಾರೊಂದಿಗೂ ವೈರತ್ವವಿರಲಿಲ್ಲ. ಆಕೆಯೂ ಯಾರೊಂದಿಗೂ ಕೆಟ್ಟ ರೀತಿಯಲ್ಲಿ ವರ್ತಿಸಿರಲಿಲ್ಲ. ಇನ್ನು ಅಬುಧಾಬಿಗೆ ಹೋಗಿ ಬೇರೆಯವರೊಂದಿಗೆ ವೈರತ್ವ ಸಾಧಿಸುವುದೆಂದರೆ ನಂಬಲಸಾಧ್ಯ. ದುಡ್ಡಿನ ಮದವಿರುವ ಲೂಯಿಸ್ ದಂಪತಿಗಳೇ ಏನೋ ಹುನ್ನಾರ ನಡೆಸಿದ್ದಾರೆ' ಎಂಬುದಾಗಿ ಹೇಳುತ್ತಾರೆ.
ಈ ನಡುವೆ ಸುಮತಿ ದಂಪತಿ ಲೂಯಿಸ್ ದಂಪತಿ ವಿರುದ್ಧ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ಕಾನೂನಿನ ಮೊರೆ ಹೋಗಿದ್ದಾರೆ. ಇತ್ತೀಚಿಗೆ ಕಾರ್ಕಳದ ಪೊಲೀಸರು ಶಿರ್ವಾ ಮಂಚಕಲ್ ಪಿಲಾರ್‌ಕಾನಾದ ಸರಿತಾ ಲೂಯಿಸ್ ಮನೆಗೆ ತೆರಳಿ ಪಡಿತರ ಚೀಟಿಯನ್ನು ಪರಿಶೀಲಿಸಿದಾಗ ಸರಿತಾಳ ಹೆಸರು ಇಲ್ಲದಿರುವುದು ಗಮನಕ್ಕೆ ಬಂದಿದೆ. ಪೋಲಿಸರ ಹೇಳಿಕೆಯಂತೆ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ಭಾರತೀಯ ಪ್ರಜೆಯಾಗಿ ಪ್ರಕರಣ ಮುನ್ನಡೆಸಲು ಅಸಾಧ್ಯ. ಇನ್ನು ಸರಿತಾ ಲೂಯಿಸ್ ಭಾರತೀಯ ಪ್ರಜೆಯಲ್ಲ ಎಂದಾದರೆ ಆಕೆಗೆ ಪಾಸ್‌ಪೋರ್ಟ್‌ಗಾಗಿ ಪಿಸಿಸಿ ಎಲ್ಲಿಂದ ದೊರೆಯಿತು...? ಸರಿತಾ ಲೂಯಿಸ್ ಬಳಿ ಯಾವ ದೇಶದ ಪಾಸ್‌ಪೋರ್ಟ್ ಇದೆ? ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಆಕೆಯ ಊರಿನವರು ಸರಿತಾ ಶಿರ್ವಾ ಮಂಚಕಲ್‌ನಲ್ಲೇ ಹುಟ್ಟಿ ಬೆಳೆದವರು ಎಂದು ಹೇಳುತ್ತಾರೆ.
ಸತತವಾಗಿ ಆರು ತಿಂಗಳುಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸುಮತಿ ದಂಪತಿಗೆ ಈ ಬೆಳವಣಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ. ಈಗಾಗಲೇ ಸಾಕಷ್ಟು ನೊಂದಿರುವ ಈ ಬಡ ಜೀವಗಳ ಭವಿಷ್ಯವೇನು?
ಸದ್ಯ ಕಾರ್ಕಳದಲ್ಲಿ ನೆಲೆಸಿರುವ ಸುಮತಿ ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಬೆನ್ನಿನಲ್ಲಿರುವ ಸುಟ್ಟಗಾಯದ ನೋವುಗಳು ಇನ್ನೂ ಮಾಸಿಲ್ಲ. ಮಲ್ಲಿಗೆ ಕಟ್ಟಿ ಅದರಿಂದ ಬರುವ ಕೂಲಿಯೇ ಅವರ ಜೀವನಕ್ಕೆ
ಆಧಾರ. ಗಂಡ ಜೇಸುದಾಸ್ ಕೋಟ್ಯಾನ್ ಮಲ್ಲಿಗೆ ಕಟ್ಟುವುದರೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದಾರೆ. ಅದಲ್ಲದೇ ಮನೆಯಲ್ಲಿ ಸೂಕ್ತವಾದ ವಿದ್ಯುತ್ ವ್ಯವಸ್ಥೆಯೂ ಇಲ್ಲ. ಇನ್ನು ಕೆಲವು ಅಗತ್ಯ ಸಂದರ್ಭಗಳಲ್ಲಿ ನರೆಮನೆಯವರು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ.
ಈ ನಡುವೆ ಸುಮತಿ ಅವರಿಗೆ ನ್ಯಾಯದೊರಕಿಸಿ ಕೊಡಲು ಮುಂಬೈನಲ್ಲಿರುವ ಫೆಡರೇಶನ್ ಆಫ್ ಮಹಾರಾಷ್ಟ್ರಾಸ್ ಕೆನರಾ ಕೆಥೋಲಿಕ್ ಅಸೋಸಿಯೇಷನ್‌ನ ಸಂಚಾಲಕರಾಗಿರುವ ರೋನ್ಸ್ ಬಂಟ್ವಾಳ್, ಜಾಗೃತಾ ಮತ್ತು ಭ್ರಷ್ಟಾಚಾರ ಪತ್ತೆ, ನಿರ್ಮೂಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಅಪರಾಧ ಪ್ರತಿಬಂಧಕ ಸಂಸ್ಥೆಯ ಅಂತರ್ ರಾಷ್ಟ್ರೀಯ ಕಾರ್ಯದರ್ಶಿ ರೋಲ್ಯಾಂಡ್ ಟಿ. ಸ್ಟಾಲಿನ್ ಸೇರಿದಂತೆ ಹಲವರು ಪ್ರಯತ್ನ ನಡೆಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರೋನ್ಸ್ ಬಂಟ್ವಾಳ್, "ಸುಮತಿ ಅವರು ಭಾರತಕ್ಕೆ ಆಗಮಿಸಿ ಈಗಾಗಲೇ ಆರು ತಿಂಗಳು ಕಳೆದಿದೆ. ಆದರೆ ಪ್ರಕರಣ ಯಾವುದೇ ಬದಲಾವಣೆ ಕಂಡಿಲ್ಲ. ಈ ನಿಟ್ಟಿನಲ್ಲಿ ಸುಮತಿ ಅವರ ಪರ ಹೋರಾಡಲು ಇತರ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಆದ್ದರಿಂದ ಕಾರ್ಕಳದಲ್ಲಿ ನಾವು ಸುಮತಿ ಅವರೊಂದಿಗೆ ಸದ್ಯದಲ್ಲೇ ಪ್ರತಿಭಟನೆಯನ್ನು ನಡೆಸಲಿದ್ದೇವೆ" ಎಂದು ತಿಳಿಸಿದ್ದಾರೆ.
ಏನೇ ಇರಲಿ, ನ್ಯಾಯದೇವತೆ ಇನ್ನೂ ಇವರಿಂದ ಬಹು ದೂರ ನಿಂತು ಆಟವಾಡಿಸುತ್ತಲೇ ಇದ್ದಾಳೆ.
ಅರಬ್ ದೇಶಗಳಲ್ಲಿ ಇದು ಮಾಮೂಲಿ ಕಥೆ!

ಇಂದು ಮಸ್ಕತ್, ಕುವೈಟ್, ದುಬೈ ಹಾಗೂ ಅಬುಧಾಬಿ ಸೇರಿದಂತೆ ಇನ್ನಿತರ ಗಲ್ಫ್ದೇಶಗಳಿಗೆ ತೆರಳಿ ದುಡಿಯುತ್ತಿರುವ ಕರಾವಳಿಯ ಮಂದಿ ಅನೇಕರಿದ್ದಾರೆ. ಈ ಬಗ್ಗೆ ತಿಳಿದಿರುವ ಮುಂಬೈ ಮೂಲದ ವ್ಯಕ್ತಿಯೊಬ್ಬರ ಪ್ರಕಾರ ಗಲ್ಫ್ದೇಶಗಳಲ್ಲಿರುವ ಕರಾವಳಿಗರ ಸಂಖ್ಯೆ ಸುಮಾರುಮೂರು ಲಕ್ಷ! ಮತ್ತೊಂದು ಕುತೂಹಲಕರ ಅಂಶವೆಂದರೆ ಇವರಲ್ಲಿ ಬಹಳಷ್ಟು ಮಂದಿ ಅನಧಿಕೃತವಾಗಿ ಬಂದುನೆಲೆಸಿದವರು!ಒಟ್ಟಾರೆ ಕರ್ನಾಟಕದಿಂದ ಗಲ್ಫ್ ದೇಶಗಳಿಗೆ ಕೆಲಸಕ್ಕೆಂದು ತೆರಳಿ ಮನೆಕೆಲಸದ ಆಳಾಗಿ ದುಡಿಯುತ್ತಿರುವ ಮಹಿಳೆಯರು ಅನೇಕರಿದ್ದು ಸುಮತಿ ಅವರಂತೆ ಇವರೂ ಹಿಂಸೆ ಅನುಭವಿಸುತ್ತಿದ್ದಾರೆ.ಈ ಬಗ್ಗೆ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಟಿಎಸ್‌ಐ ಜೊತೆ ಮಾತನಾಡಿ, “ಗಲ್ಫ್ ದೇಶದಲ್ಲಿರುವರಾಜ್ಯದ ಜನರ ಕೂಗು ಮುಗಿಲೆತ್ತರಕ್ಕೆ ಸಾಗಿದೆ.ರಾಜ್ಯದ ಕೆಲವು ಮಹಿಳೆಯರು ಅತ್ಯಾಚಾರಕ್ಕೂಒಳಗಾಗಿದ್ದಾರೆ. ಆದರೆ ಭವಿಷ್ಯದ ದೃಷ್ಟಿಯಿಂದ ಈ ವಿಷಯವನ್ನು ಅವರು ಯಾರಲ್ಲೂ ಬಹಿರಂಗಪಡಿಸಿಲ್ಲ. ಅದಲ್ಲದೇ ಪೊಲೀಸರಲ್ಲೂ ಈ ಬಗ್ಗೆದೂರನ್ನು ನೀಡುತ್ತಿಲ್ಲ” ಎಂದು ಹೇಳುತ್ತಾರೆ. ಹಾಗೆಯೇ ಇಂತಹ ಪರಿಸ್ಥಿತಿಯ ಅರಿವಿರುವಅಬುಧಾಬಿಯ ಇನ್ನೊಬ್ಬರು “ನಿಮಗೆ ಈ ಒಂದು ಪ್ರಕರಣ ಬಹುದೊಡ್ಡದೆಂದು ಅನಿಸಬಹುದು. ಆದರೆ ಅರಬ್ದೇಶಗಳಲ್ಲಿ ಇವೆಲ್ಲ ಸಾಮಾನ್ಯ. ಇಲ್ಲಿನ ಶ್ರೀಮಂತರ ಮನೆಯಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಒಂದೊಂದು ಗೋಳಿನ ಕಥೆಯಿದೆ. ಯಾವುದೇ ರಕ್ಷಣೆ ಪಡೆಯದ ಈ ಮಹಿಳೆಯರಿಗೆ ಔಷಧಿಯ ಖರ್ಚು ಕೂಡಾ ಮನೆಯವರಿಂದ ಸಿಗುತ್ತಿಲ್ಲ” ಎನ್ನುತ್ತಾರೆ. ಹಾಗಿದ್ದರೆ ಬಡವರು ಜೀವನ ಸಾಗಿಸುವುದು ಸಿರಿವಂತರಿಂದ ಶೋಷಣೆಗೆ ಒಳಗಾಗುವ ಸಲುವಾಗಿಯೇ, ಇದಕ್ಕೆಲ್ಲಾ ಕೊನೆ ಎಂದು?

ಮೌನದ ಮಾತು - ಈ ಬ್ಲಾಗು ನನಗ್ಯಾಕೆ?



ಮನದಾಳದಿಂದ ಆವರಿಸುವ ಮೌನದ ಮಾತುಗಳು ಒಂದೇ ಎರಡೇ? ಅಯ್ಯೋ.. ಸಾವಿರಾರು ನೆನಪುಗಳು, ಕೋಟಿ ಭಾವನೆಗಳು, ಲೆಕ್ಕವಿಲ್ಲದಷ್ಟು ಕನಸುಗಳು... ಹೀಗೆ ಇವೆಲ್ಲವೂ ಸದಾ ಮನದಲ್ಲಿ ತಮ್ಮ ಪ್ರಯಾಣ ಮಾಡುತ್ತಲೇ ಇರುತ್ತವೆ. ಅವುಗಳನ್ನು ನಾನಿಲ್ಲಿ ಅಭಿವ್ಯಕ್ತ ಪಡಿಸಿದರೆ ಏನೋ ನನ್ನ ಮನಸ್ಸೆಂಬ ಸಾಗರಕ್ಕೆ ನೆಮ್ಮದಿಯಾಗಬಹುದು ಎಂಬ ಆಶಯದಿಂದ ಈ ಬ್ಲಾಗನ್ನು ನಾನು ಆರಂಭಿಸುತ್ತಿದ್ದೇನೆ.
ಸ್ನೇಹಿತರೇ ನೀವು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ. ನಿಮ್ಮ ಯಾವುದೇ comments ಇದ್ದರೂ ಇಲ್ಲಿ ವ್ಯಕ್ತಪಡಿಸಿ.




ಇತೀ ನಿಮ್ಮವ,
ರಾಘವ ಶರ್ಮ
ನವದೆಹಲಿ