ಆ ಮೂರು ದಿನಗಳು ಹೇಗೆ ಕಳೆದುಹೋದವೋ ನನಗಂತೂ ಗೊತ್ತಿಲ್ಲ. ಕಳೆದ ವರ್ಷ ದೀಪಾವಳಿಯಂದು ಸಾಥ್ ನೀಡಿದ್ದ ನೀನು ಈ ಬಾರಿ ನನ್ನನ್ನು ಒಂಟಿಯಾಗುವಂತೆ ಮಾಡಿದ್ದಿ. ನೀನಿಲ್ಲದೆ ಆ ಮೂರು ದಿನಗಳು ಕಾಡಿದ ‘ಒಂಟಿತನ’ ನನ್ನ ಬದುಕಿನಲ್ಲ ಇನ್ಯಾವತ್ತೂ ಬರುವುದು ಬೇಡ. ಒಮ್ಮೆ ಯೋಚಿಸು. ಅಂದಿನ ಆ ದಿನಗಳು ಎಷ್ಟು ಸುಂದರವಾಗಿದ್ದವು. ದೀಪಾವಳಿಯ ಒಂದು ದಿನ ಮುನ್ನವೇ ನೀ ನನ್ನ ಮನೆಗೆ ಬಂದಿದ್ದೆ. ನಿನ್ನ ಆಗಮನಕ್ಕಾಗೇ ತುದಿಗಾಲಲ್ಲಿ ನಿಂತು ಕಾದಿದ್ದ ನಾನು ನೀ ಬಂದ ತಕ್ಷಣವೇ ಸ್ವರ್ಗವೇ ಧರೆಗಿಳಿದು ಬಂತೇನೋ ಅಂದುಕೊಂಡಿದ್ದೆ.
ಅದು ನೀನು ನಮ್ಮ ಮನೆಗೆ ಮೊದಲ ಬಾರಿ ಬಂದದ್ದು. ನಿನ್ನ ಮನದಲ್ಲಿದ್ದ ಗೊಂದಲಗಳನ್ನು ನಾನರ್ಥಮಾಡಿಕೊಂಡಿದ್ದೆ. ಅಂದು ರಾತ್ರಿ ನೀ ಹೇಳಿದ ಒಂದೊಂದು ಮಾತುಗಳು ಇಂದೂ ನನ್ನ ಕಿವಿಯಲ್ಲಿ ಗಿರಕಿಹೊಡೆಯುತ್ತಲೇ ಇವೆ. ಅಮ್ಮ ನಿನ್ನನ್ನು ಹೋಗುವುದು ಬೇಡ ಎಂದಿದ್ದರೂ, ಹಠ ಮಾಡಿ ನೀನು ಬಂದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಅಷ್ಟಕ್ಕೂ ನಮ್ಮಿಬ್ಬರ ನಡುವೆ ಇದ್ದ ಪ್ರೀತಿಯೇ ಎಲ್ಲದಕ್ಕೂ ಸಾಕ್ಷಿಯಾಗಿದ್ದವು. ನಿನಗೆ ಗೊತ್ತೇ, ಅಂದು ನಿನ್ನ ಹೆತ್ತವರಂತೆ ನನ್ನ ಹೆತ್ತವರೂ ಕೂಡ ನೀ ಮನೆಗೆ ಬರುವ ವಿಷಯದ ಬಗ್ಗೆ ಚಕಾರ ಎತ್ತಿದ್ದರು. ಹಾಗಿದ್ದರೂ ಏನೆಲ್ಲಾ ಹೇಳಿ, ಅವರ ಮನವೊಲಿಸಿ, ನಿನ್ನನ್ನು ಮನೆಗೆ ಕರೆತರುವಲ್ಲಿ ನಾನು ಯಶಸ್ವಿಯಾಗಿದ್ದೆ. ಅಪ್ಪನಿಗಿಂತಲೂ ಅಮ್ಮ ನಿನ್ನ ವಿಷಯದ ಕುರಿತಾಗಿ ಬಹಳಷ್ಟು ವಾದ ಮಾಡಿ, ನನ್ನ ನಿರ್ಧಾರ ಬದಲಾಯಿಸಲು ಪ್ರಯತ್ನಿಸಿದ್ದರು. ಆದರೆ ನಾನೂ ಅಷ್ಟೇ ಹಠ ಮಾಡಿ, ವಾದ ಮಾಡಿ ಅವರ ಬಾಯನ್ನು ಮುಚ್ಚಿಸಿದ್ದೆ. ಇಷ್ಟೆಲ್ಲಾ ಮಾಡಿದ್ದು ನಿನಗಾಗಿ. ನಮ್ಮ ಪ್ರೀತಿಗೆ ಯಾವುದೂ ಅಡ್ಡಗಾಲಾಗದಿರಲಿ ಎಂಬ ಕಾರಣಕ್ಕಾಗಿ.
ನೀನು ಗಮನಿಸಿದ್ದೆಯಾ, ನೀನು ಬಂದಿದ್ದ ಎರಡನೇ ದಿನದಂದು ನನ್ನ ಅಮ್ಮನಲ್ಲಿ ಕೋಪದ ಛಾಯೆ ಅಚ್ಚೊತ್ತಿದ್ದದ್ದನ್ನು. ಅಮ್ಮನಿಗೆ ಏಕೆ ಕೋಪ ಬಂದಿತ್ತು ಎಂಬುದು ನನಗಾಗಲೇ ಗೊತ್ತಾಗಿತ್ತು. ಅದನ್ನು ಅವರು ನೀ ಹೋದ ಮಾರನೇ ದಿನ ನನ್ನಲ್ಲಿ ಹೇಳಿದ್ದರು. ಆದರೆ ಆ ಕೋಪ ಏಕೆ ಎಂಬುದು ನಿನಗೆ ಗೊತ್ತಿರಲಿಲ್ಲ. ಬಿಡು, ಆ ವಿಷಯ ಈಗ ಮಾತಾಡಿ ಪ್ರಯೋಜನವಿಲ್ಲ. ಇರಲಿ, ಆ ಮೂರು ದಿನದ ದೀಪಾವಳಿ ನಮ್ಮಿಬ್ಬರ ಬದುಕಿಗೆ ಹೊಸ ಹೊರಪು ನೀರಲಿದೆ ಎಂದು ನಾವು ಕನಸುಕಂಡಿದ್ದು, ರಾತ್ರಿಯ ಹೊತ್ತಲ್ಲಿ ಎಲ್ಲರೂ ಪಟಾಕಿಗಳ ಲೋಕದಲ್ಲಿ ಸಂಭ್ರಮ ಪಡುತ್ತಿದ್ದರೆ ನಾವಿಬ್ಬರೂ ನಮ್ಮ ಭಾವನಾಲೋಕದಲ್ಲಿ ಕನಸ ಕಾಣುತ್ತಾ ಹೊತ್ತು ಕಳೆದಿದ್ದೆವು. ನಮ್ಮ ಭವಿಷ್ಯ, ಉದ್ಯೋಗ ಹಾಗೂ ನಮ್ಮ ಮುಂದಿನ ಜೀವನದ ಬಗ್ಗೆ ಸಾಕಷ್ಟು ಹೊತ್ತು ಮಾತನಾಡುತ್ತಾ ಕಾಲ ಕಳೆದಿದ್ದೆವು. ಆ ಮಾತುಗಳ ಮಧ್ಯೆ ನಾವು ಎಲ್ಲವನ್ನೂ ಮರೆತಿದ್ದೆವು. ನನ್ನ ಹೆತ್ತವರ ಜೊತೆ ದೀಪಾವಳಿ ಆಚರಿಸುವುದನ್ನೂ! ಅದಕ್ಕೆ ಅಂದು ಅಮ್ಮನಿಗೆ ಕೋಪ ಬಂದಿತ್ತು. ಇಷ್ಟೆಲ್ಲಾ ಆಗುವ ಹೊತ್ತಿಗೆ ದೀಪಾವಳಿಯ ಮೂರನೇ ದಿನದ ಅಂತ್ಯವೂ ಹತ್ತಿರವಾಗಿತ್ತು. ಮಾರನೆ ದಿನದ ಬೆಳಗಿನ ಜಾವದ ಬಸ್ಸಲ್ಲಿ ಹೋಗಲು ನೀನು ಅಣಿಯಾಗಿದ್ದೆ. ಹಾಗಾಗಿ ಆ ರಾತ್ರಿ ನನಗೆ ನಿದ್ದೆಯೇ ಬಂದಿರಲಿಲ್ಲ. ನೀನು ನನ್ನಿಂದ ಮಾರು ದೂರದ ಕೋಣೆಯಲ್ಲಿ ಮಲಗಿದ್ದರೂ, ನಮಗಿಬ್ಬರಿಗೂ ನಿದ್ದೆ ಬಂದಿರಲಿಲ್ಲ ಎಂಬುದು ಇಬ್ಬರಿಗೂ ಗೊತ್ತು. ನಮ್ಮಿಬ್ಬರ ಮೊಬೈಲ್‌ಗಳು ಬ್ಯುಸಿಯಾಗಿದ್ದೇ ಇದಕ್ಕೆ ಸಾಕ್ಷಿ.
ಸರಿ ಮಾರನೇ ದಿನ ನೀ ಹೊರಟೆ. ದೀಪಾವಳಿ ಮುಗಿದಿತ್ತು. ಮತ್ತದೇ ಮಾಮೂಲಿ ದಿನಗಳು...ನೀನಲ್ಲಿ; ನಾನಿಲ್ಲಿ... ಎಂದುಕೊಂಡು ಬಸ್ಸು ದೂರಸಾಗಿದ್ದರೂ ನಾನು ಟಾ ಟಾ ಮಾಡುತ್ತಲೇ ಇದ್ದೆ. ಆದರೆ ಈ ವರ್ಷದ ದೀಪಾವಳಿ ನೆನೆಸಿಕೊಂಡಾಗ ನನಗೆ ಕಾಡುತ್ತಿರುವ ವೇದನೆ ಅಷ್ಟಿಷ್ಟಲ್ಲ. ಆ ಮೂರು ದಿನಗಳ ಒಂದು ರಾತ್ರಿಯೂ ಕೂಡ ನನಗೆ ನಿದ್ದೆ ಬಂದಿಲ್ಲ. ಬಂದದ್ದು ಬರೀ ಕಣ್ಣೀರುಗಳು ಮಾತ್ರ. ಏಕೆಂದರೆ ಅಂದು ನಿನ್ನೊಂದಿಗೆ ಆಚರಿಸಿದ ದೀಪಾವಳಿಯೇ ನನ್ನ ಪಾಲಿನ ಕೊನೆಯ ದೀಪಾವಳಿ. ನಮ್ಮ ಬದುಕಿಗೆ ಹೊಸ ಹುರುಪು ನೀಡುವ ದೀಪಾವಳಿ ಇದು ಎಂದು ಆ ರಾತ್ರಿ ಕಂಡಿದ್ದ ಕನಸು ನಿನ್ನೊಂದಿಗೆ ಛಿದ್ರಛಿದ್ರಗೊಂಡಿತ್ತು. ದೀಪಾವಳಿ ಮುಗಿಸಿ ಅಂದು ನೀನು ಹೊರಟ ಆ ಬಸ್ ಅಪಘಾತದಲ್ಲಿ ಮೃತಪಟ್ಟವರ ಎದುರು ಕಣ್ಣೀರ ಹೊಳೆ ಹರಿಸಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ.
ನಿನ್ನನ್ನು ಕಳೆದುಕೊಂಡು ಇಂದಿಗೆ ಒಂದು ವರ್ಷವಾಯಿತು ನೋಡು. ಈ ದೀಪಾವಳಿಯಂದು ಕಾಡಿದಷ್ಟು ನೀನು ಯಾವತ್ತೂ ಕಾಡಿರಲಿಲ್ಲ. ಎಲ್ಲರೂ ಬೆಳಕಿನ ಹಬ್ಬದಲ್ಲಿ ನಿರತರಾಗಿದ್ದಾರೆ ನಾನು ಮಾತ್ರ ಮನೆಯ ಒಂದು ಮೂಲೆಯಲ್ಲೇ ಕುಳಿತಿದ್ದೆ. ಇಂದು ನೀನಿರದಿದ್ದರೂ; ನೀನು ಕಳುಹಿಸಿದ್ದ ಒಂದೊಂದು ಎಸ್‌ಎಂಎಸ್‌ಗಳನ್ನು ನಾನು ಓದದ ದಿನಗಳಿಲ್ಲ. ನನ್ನ ಒಂದೊಂದು ಕೆಲಸದ ಮುಂಚೆ ನಿನ್ನನ್ನು ನೆನೆಯುತ್ತಲೇ ಇದ್ದೇನೆ. ಇಂದು ನಾನು ಉದ್ಯೋಗ ನಿಮಿತ್ತ ಮನೆಯಿಂದ ಎಷ್ಟೋ ದೂರದಲ್ಲಿದ್ದೇನೆ. ಬಹುಶಃ ನೀನಿರುತ್ತಿದ್ದರೆ ನಾನಿಲ್ಲಿ ಖಂಡಿತಾ ಬರುತ್ತಿರಲಿಲ್ಲ. ಆದರೂ ನೀನು ಇಂದಿಗೂ ನನ್ನ ಜೊತೆಯೇ ಇದ್ದೀಯಾ... ಕತ್ತಲೆ ತುಂಬಿದ ಮನದ ಮನೆಗೆ ಭರವಸೆ ತುಂಬುವ ಬೆಳಕಿನ ಹಾಗೆ...