Friday 19 September 2008

ಹೀಗೊಂದು ಸ್ವಾತಂತ್ರ್ಯಗಾಥೆ...

ಅದು 104 ವರ್ಷದ ಹಿರಿಯ ಜೀವ. 66 ವರ್ಷಗಳ ಹಿಂದೆ ಗಾಂಧೀಜಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆಕೊಟ್ಟಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಎನ್.ಎಚ್. ಹುಚ್ಚುರಾಯಪ್ಪ 'ಕ್ವಿಟ್ ಇಂಡಿಯಾ' ಚಳವಳಿಗೆ ಧುಮುಕಿದ್ದರು. ಅಂದಿನಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಹೋರಾಟವನ್ನೇ ಜೀವನವಾಗಿಸಿಕೊಂಡಿದ್ದ ಹುಚ್ಚುರಾಯಪ್ಪ, ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಕೂಡ ಒಂದು ಹೋರಾಟ ಮಾಡಿದರು.

ಇದು ಒಂಥರ ವಿಚಿತ್ರವಾದ ಹೋರಾಟ. ಅವರು ಕರ್ನಾಟಕದಿಂದ ನವದೆಹಲಿಗೆ ಹೊರಟಿದ್ದು, ದೇಶದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ್ದ ಚಹಾಕೂಟದಲ್ಲಿ ಭಾಗವಹಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹ್ವಾನದ ಮೇರೆಗೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೇ ಸೇರಿರುವ ಹುಚ್ಚುರಾಯಪ್ಪ ಅವರನ್ನು ವಿಮಾನದ ಮೂಲಕ ನವದೆಹಲಿಗೆ ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಕಚೇರಿ ತಿಳಿಸಿತು. ಅದರೆ, ಕೊನೆಯ ಕ್ಷಣದಲ್ಲಿ ನಿಮ್ಮ ಪ್ರಯಾಣದ ವ್ಯವಸ್ಥೆ ನೀವು ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಕಚೇರಿ ಕೈತೊಳೆದುಕೊಂಡಿತು. ಕೊನೆಗೆ ತಮ್ಮ ಸಹಾಯಕ್ಕಾಗಿ ಮಗನನ್ನು ಕರೆದುಕೊಂಡು ರೈಲು ಹತ್ತಿದ ಹಿರಿಯ ಜೀವ ನವದೆಹಲಿ ತಲುಪಿತು.

ಇವರಂತೆಯೇ ಕರ್ನಾಟಕದಿಂದ ಇನ್ನೂ ನಾಲ್ವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಪತಿ ಭವನದಲ್ಲಿನ ವಿಶೇಷ ಚಹಾಕೂಟಕ್ಕೆ ಆಗಮಿಸಿದ್ದರು. ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹುಚ್ಚುರಾಯಪ್ಪ ಅವರಂತೆ ಬಿ. ಶಂಭುಶೆಟ್ಟಿ, ಚನ್ನಪ್ಪಗೌಡ, ಸಿ.ಎಂ ಪಾಲಾಕ್ಷಪ್ಪ ಹಾಗೂ ಎಸ್.ಐ. ಅರುಲ್‌ದಾಸ್ ಕೂಡ ರಾಜಧಾನಿಗೆ ಬಂದಿಳಿದಿದ್ದರು. ಇವರೆಲ್ಲರ ಜೊತೆ ಸಹಾಯಕ್ಕಾಗಿ ಒಬ್ಬೊಬ್ಬರು ಸಂಬಂಧಿಕರು ಕೂಡ ದೆಹಲಿಗೆ ಬಂದಿದ್ದರು. ಅದು ಸ್ವಂತ ಖರ್ಚಿನಲ್ಲಿ! ರಾಷ್ಟ್ರಪತಿಗಳ ಜೊತೆಗೆ ಚಹಾಕೂಟಕ್ಕೆ ಬನ್ನಿ ಎಂದು ಆಹ್ವಾನಿಸಿದ ಕೇಂದ್ರ ಸರ್ಕಾರವಾಗಲೀ ಅಥವಾ ಅವರನ್ನು ಕಳುಹಿಸಿದ ರಾಜ್ಯ ಸರ್ಕಾರವಾಗಲೀ ವಿಮಾನ ಬಿಡಿ (ಸ್ವಾತಂತ್ರ್ಯ ಹೋರಾಟಗಾರರು ವಿಮಾನಗಳಲ್ಲಿ ಹಾರಾಡಲು ಅರ್ಹರಲ್ಲ. ಏನಿದ್ದರೂ ಖಾದಿ ತೊಟ್ಟ 'ದೇಶಭಕ್ತರು' ಮಾತ್ರ ಸರ್ಕಾರಿ ದುಡ್ಡಿನಲ್ಲಿ ವಿಮಾನವೇರಿ ಹಾರಾಡಲು ಅರ್ಹರು!) ಕನಿಷ್ಠ ಹತ್ತು ರೈಲು ಟಿಕೆಟುಗಳನ್ನು ಖರೀದಿಸಿ ಇವರನ್ನು ದೆಹಲಿಗೆ ಕಳುಹಿಸುವ ಔದಾರ್ಯವನ್ನೂ ತೋರಲಿಲ್ಲ.

ಅದೇ ರೀತಿ ದೇಶದೆಲ್ಲೆಡೆಯಿಂದ ಒಟ್ಟು 294 ಮಂದಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಈ ವರ್ಷದ ಚಹಾ ಕೂಟಕ್ಕೆ ಆಹ್ವಾನಿಸಲಾಗಿತ್ತು. ಪ್ರತಿ ವರ್ಷ ಆಗಸ್ಟ್ 9ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ರಾಷ್ಟ್ರಪತಿಗಳು ಚಹಾಕೂಟಕ್ಕೆ ಆಹ್ವಾನಿಸುವುದು ಸಂಪ್ರದಾಯ. ಆ ಸಂಪ್ರದಾಯದ ಸವಿ ಅನುಭವಿಸಲು ಬಂದವರ ಪೈಕಿ ಹೆಚ್ಚಿನ ಪಕ್ಷ ಎಲ್ಲರ ಕಥೆ ಕೂಡ ಇದೇ ಇರಬಹುದು. ಹೀಗೆ ಪಡಬಾರದ ಪಾಡು ಪಟ್ಟು ರಾಜಧಾನಿಯಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಿಸಲು ಬಂದವರಿಗೆ ಸಿಕ್ಕಿದ್ದಾದರೂ ಏನು? ಸುಮಾರು ಎರಡು ಗಂಟೆಗಳಷ್ಟು ಕಾಲ ನಡೆದ ಆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಶಾಲು ಹೊದಿಸಿ, ವಾಚೊಂದನ್ನು ನೀಡಿ ಸನ್ಮಾನಿಸಲಾಯಿತು. ಉಳಿದಂತೆ ಇವರ ಆಗುಹೋಗುಗಳನ್ನು ಕೇಳುವವರು ಯಾರೂ ಇರಲಿಲ್ಲ. ರಾಷ್ಟ್ರಪತಿಗಳೊಂದಿಗೆ ಚಹಾಕೂಟದಲ್ಲಿ ಭಾಗವಹಿಸಲು ಇವರೆಷ್ಟು ಅರ್ಹರು? ಎಂಬ ಪ್ರಶ್ನೆ ಕೂಡ ಈಗಿನ ಕುಡಿಮೀಸೆಯ ಹುಡುಗರಲ್ಲಿ ಮೂಡಬಹುದು. ಅದು ಅರ್ಥವಾಗಬೇಕಿದ್ದರೆ ಒಮ್ಮೆ ಈ ಹಿರಿಯರ ಜೀವನದತ್ತ ಇಣುಕು ನೋಟ ಹರಿಸಬೇಕು.

81ರ ಹರೆಯದ ಸಿ.ಎಂ. ಪಾಲಾಕ್ಷಪ್ಪ, ವೃತ್ತಿಯಲ್ಲಿ ಆಯುರ್ವೇದ ವೈದ್ಯ. 1947ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬೆಂಗಳೂರು ಸೆಂಟ್ರಲ್ ಜೈಲು ಸೇರಿದರು. ಪಾಲಾಕ್ಷಪ್ಪನವರು ಮತ್ತೆ ಬಿಡುಗಡೆಯ ಭಾಗ್ಯ ಕಂಡಿದ್ದು ಕರ್ನಾಟಕ ಏಕೀಕರಣದ ನಂತರ. ನಿಜಲಿಂಗಪ್ಪ, ಹೆಚ್.ಟಿ ದಯಾಳ್, ಕೆ.ಟಿ ಭಾಷ್ಯಂ ಇವರೆಲ್ಲರ ನಿಕಟ ಸಂಪರ್ಕ ಹೊಂದಿದ್ದವರು ಪಾಲಾಕ್ಷಪ್ಪ. ಬಿಡುಗಡೆಯ ನಂತರ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಹೊಂದಿದ್ದ ಈ ಸ್ವಾತಂತ್ರ್ಯ ಸೇನಾನಿಗೆ ಇಂದಿನ ಧನಬಲ, ತೋಳ್ಬಲ ಹಾಗೂ ಅಧಿಕಾರ ಲಾಲಸೆಯ ರಾಜಕಾರಣವನ್ನು ಕಂಡಾಗ, ಅಂದು ತಾವು ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಕಳಕಳಿಯಿದೆ. ಆದರೆ, ಇವರ ಬಗ್ಗೆ ಕಳಕಳಿ ತೋರಿಸುವವರು...? ಅಂದಹಾಗೆ ಸಿ.ಎಂ ಪಾಲಾಕ್ಷಪ್ಪ ಇಂದಿಗೂ ವಾಸವಿರುವುದು ಬಾಡಿಗೆ ಮನೆಯಲ್ಲೇ! ಸುಮಾರು 200ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ ಬಳಿಕ 2005ರಲ್ಲಿ ರಾಜ್ಯ ಸರ್ಕಾರದಿಂದ ಅವರಿಗೆ ಪಿಂಚಣಿ ಮಂಜೂರಾಗಿದೆ!

90 ಹರೆಯದ ಉಡುಪಿ ಮೂಲದ ಶಂಭುಶೆಟ್ಟಿ ಅವರು 1932ರಲ್ಲೇ ಸ್ವಾತಂತ್ರ ಹೋರಾಟಕ್ಕೆ ಕಾಲಿಟ್ಟವರು. ನಂತರ ಹಿಂದಿರುಗಿ ನೋಡಲಿಲ್ಲ. ಏಳನೇ ವರ್ಷಕ್ಕೆ ಶಾಲೆ ತೊರೆದ ಅವರು ಎರಡು ಬಾರಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ಆದರೆ ಜೈಲಿನಲ್ಲಿ ಕಳೆದ ದಿನಗಳನ್ನು ಅಷ್ಟೇ ರೋಚಕವಾಗಿ ವಿವರಿಸುತ್ತಾರೆ ಶಂಭು ಶೆಟ್ಟಿ. 'ಒಂದು ವಿಶ್ವವಿದ್ಯಾಲಯದಲ್ಲಿನ ಅನುಭವ ಜೈಲಿನಿಂದ ಪಡೆದೆ. ಭಾಷಣ ಹಾಗೂ ಇತರ ಸಕ್ರಿಯ ಚಟುವಟಿಕೆಗಳು ನಮ್ಮ ಹೋರಾಟಕ್ಕೆ ಇನ್ನಷ್ಟು ಇಂಬು ನೀಡಿದ್ದವು ಎಂದು ಅಂದಿನ ದಿನಗಳ ಮೆಲುಕು ಹಾಕುತ್ತಾರೆ ಶೆಟ್ಟರು. ಆದರೆ ಅವರ ಹೋರಾಟ ಮಾತ್ರ ಮುಂದುವರಿಯುತ್ತಲೇ ಇದೆ...

ಎಂಬತ್ತೊಂದರ ಹರೆಯದ ಚನ್ನಪ್ಪಗೌಡ ನವಲಗುಂದ ತಾಲ್ಲೂಕಿನ ಸಿರಕೊಲ ಗ್ರಾಮದವರು. ಇನ್ನು ಕೋಲಾರದ ಕೆ.ಜಿ.ಎಫ್.ನ ಅರುಲ್‌ದಾಸ್ ಕೂಡ ಎಂಬತ್ತರ ಗಡಿ ದಾಟಿದ ವಯೋವೃದ್ಧ ಸ್ವಾತಂತ್ರ್ಯ ಸೇನಾನಿ. ಇವರಿಬ್ಬರೂ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಮರೆತು ದೇಶಕ್ಕಾಗಿ ಅರ್ಪಿಸಿಕೊಂಡ ಹಿರಿಯರು.

ಹೀಗೆ ಈ ಹಿರಿಯರ ಬದುಕಿನಲ್ಲಿ ಇಣುಕು ನೋಟ ಹರಿಸಿದಾಗ ಮಾತ್ರ ಇವರೆಷ್ಟು ಅಮೂಲ್ಯ ಸಂಪತ್ತು ಎನ್ನುವುದು ಅರ್ಥವಾಗುತ್ತದೆ. ಆದರೆ, ಚಹಾಕೂಟದ ಹೆಸರಲ್ಲಿ ಅವರನ್ನು ಹೀಗೆ ಮತ್ತೊಂದು 'ಸ್ವಾತಂತ್ರ್ಯ' ಹೋರಾಟಕ್ಕೆ ಇಳಿಸಿದ್ದು ಮಾತ್ರ ವಿಪರ್ಯಾಸ ಎಂದೇ ಹೇಳಬೇಕು. ಯಾವುದೋ ಒಂದು ಸಂಪ್ರದಾಯದ ಹೆಸರಲ್ಲಿ ಅಂತಹ ವಯೋವೃದ್ಧ ಹೋರಾಟಗಾರರನ್ನು, ಅವರದೇ ಖರ್ಚಿನಲ್ಲಿ ರೈಲು ಹತ್ತಿಸುವ ಈ ವಿಪರ್ಯಾಸಕ್ಕೆ ಯಾರನ್ನು ಹೊಣೆ ಮಾಡಬೇಕು? ಅದೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರಕ್ಕೆ ಸೇರಿದ 104 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹೀಗೆ ನಡೆಸಿಕೊಂಡಿದ್ದು ಸಂಸ್ಕೃತಿ ವಾರಸುದಾರರಿಗೆ ಶೋಭೆ ತರುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಇದು ನಿಮಗೆ ಅರ್ಥವಾದೀತೆ?

1 comment:

Sowrabha said...

ಬಹಳ ಅರ್ಥಪೂರ್ಣ ಲೇಖನ ರಾಘವ . ಇದನ್ನು ಯಾವ ಪತ್ರಿಕೆಗೂ ಕಲಿಸಿಲ್ಲವಾ? ಇದು ಬಹಳ ಮಂದಿ ಓದಬೇಕಾದಂಥದ್ದು. ಲೇಖನದ ಶೈಲಿಯ ಬಗ್ಗೆ ಹೇಳಬೇಕಾದರೆ ತುಂಬ ಪ್ರಾಕ್ಟಿಕಲ್ ಆಗಿ , ನೇರವಾಗಿ , ಭಾವನೆ ಮತ್ತು ಚಿಂತನೆಗಳ ನಡುವಿನ ಸಮತೋಲನ ಕಾಯ್ದುಕೊಂಡ ಲೇಖನ.