Saturday 14 June 2008


ಮಂಕು ಬಡಿದವರ ನಡುವೆ...


ಬಹುಶಃ ಭಾರತದಲ್ಲಿ ಭಯೋತ್ಪಾದೆ ಅಟ್ಟಹಾಸಕ್ಕೆ ಕೊನೆಯಿಲ್ಲ ಎಂಬುದು ದೃಢವಾಗುತ್ತಿದೆ. ಇತ್ತೀಚೆಗಿನ ಜೈಪುರ ಸ್ಫೋಟ, ಅದಾದ ನಂತರದ ಕೆಲವೇ ದಿನಗಳಲ್ಲಿ ರಾಜಧಾನಿ ನವದೆಹಲಿಯಲ್ಲಿ ಅಬ್ದುಲ್ ರೆಹಮಾನ್ ಎಂಬ ಬಾಂಗ್ಲಾದೇಶೀ ಮೂಲದ ಹುಜಿ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಕಾರ್ಯಕರ್ತನನ್ನು ಬಂಧಿಸಲಾಯಿತು. ಆ ಸಂದರ್ಭದಲ್ಲಿ ಇಡೀ ದೆಹಲಿಯೇ ಅಚ್ಚರಿ ವ್ಯಕ್ತಪಡಿಸಿದ್ದು ತಿಳಿದೇ ಇದೆ. ನಿಜಹೇಳಬೇಕೆಂದರೆ ನವ ದೆಹಲಿ ರೈಲ್ವೇ ನಿಲ್ದಾಣದ ಚೆಲ್ಮ್ಸ್‌ಫರ್ಡ್ ರಸ್ತೆ ಬಳಿ ಆತನನ್ನು ಪೊಲೀಸರು ಸೆರೆಹಿಡಿದಿದ್ದು ಮಾತ್ರವಲ್ಲ, ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಹುನ್ನಾರ ನಡೆಸಿದ್ದ ಹುಜಿ ಸಂಘಟನೆಯ ಕೃತ್ಯಕ್ಕೂ ಪೊಲೀಸರು ಕತ್ತರಿ ಹಾಕಿದ್ದರು. ಇಲ್ಲದಿದ್ದಲ್ಲಿ ದೆಹಲಿಯೂ ಸ್ಫೋಟದ ಎಲ್ಲಾ ಸಾಧ್ಯತೆಗಳೂ ಇದ್ದವು.
ಇಂದು ಭಯೋತ್ಪಾದಕರ ಮೂಲ ಗುರಿ ಅಮೆರಿಕನ್ನರನ್ನು ಹತ್ತಿಕ್ಕುವಲ್ಲಿ ಆಗಿದ್ದರೂ, ಭಾರತ ಮಾತ್ರ ಭಯೋತ್ಪಾದಕರ ದಾಳದಲ್ಲಿ ಸಿಲುಕಿ ನರಳಾಡುತ್ತಿದೆ. ಭದ್ರತೆ ಹಾಗೂ ರಾಷ್ಟ್ರ ರಕ್ಷಣಾ ವಿಷಯದಲ್ಲಿ ಅಮೆರಿಕಕ್ಕೆ ಸರಿಸಾಟಿ ಯಾರೂ ಇಲ್ಲ. ಆದರೆ ಅದೇ ವಿಷಯ ಭಾರತಕ್ಕೆ ಹೋಲಿಸಿದಾಗ ಫಲಿತಾಂಶ ವ್ಯತಿರಿಕ್ತ. ನಮ್ಮ ರಾಜಕಾರಣಿಗಳಿಗೆ ರಾಷ್ಟ್ರದ ರಕ್ಷಣೆ ಆಗಲಿ ಅಥವಾ ಅಮಾಯಕ ನಾಗರಿಕರ ಹತ್ಯೆ ಎಂದಿಗೂ ಗಮನಿಸಬೇಕಾದ ಅಂಶ ಆಗಿಲ್ಲ. ವೋಟ್ ಬ್ಯಾಂಕ್ ರಾಜಕಾರಣವನ್ನು ಮಾತ್ರ ಮನದಲ್ಲಿಟ್ಟುಕೊಂಡು, ಅಲ್ಪಸಂಖ್ಯಾತರ ಓಲೈಕೆಯಲ್ಲೇ ಮಂತ್ರಿಗಳು (ಶಿವರಾಜ್ ಪಾಟಿಲ್) ಕಾಲ ಕಳೆಯುತ್ತಿದ್ದಾರೆ. ಇಡೀ ಗೃಹಸಚಿವಾಲಯ ಮಾತ್ರ ಕುಂಭಕರ್ಣ ನಿದ್ದೆಯಲ್ಲೇ ದಿನ ದೂಡುತ್ತಿದೆ. ಸಮರ್ಪಕ ರಣತಂತ್ರಗಳ ಮೂಲಕ ಭಯೋತ್ಪಾದಕರ ಕಾಟ ಹತ್ತಿಕ್ಕುವಲ್ಲಿ ಗೃಹ ಸಚಿವರು ಸೋತಿದ್ದಾರೆ. ಆ ಮಧ್ಯೆಯೂ ಅಬು ಸಲೇಂನಂತಹ ಉಗ್ರರನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ, ಇದರಿಂದ ಸರಬ್‌ಜಿತ್‌ನನ್ನು ಭಾರತಕ್ಕೆ ಕರೆತರುವ ವಿಷಯದಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬೆಲ್ಲಾ ಜಾರಿಕೊಳ್ಳುವ 'ಸ್ಪಷ್ಟನೆ ನೀಡುತ್ತಾರೆ' ನಮ್ಮ ಮಹಾನ್ ಗೃಹ ಸಚಿವರು.
ಇನ್ನು ಬಾಂಗ್ಲಾದಿಂದ ಭಾರತಕ್ಕೆ ಬರುವ ಅಕ್ರಮ ವಲಸಿಗರು ದೇಶಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತಿರುವುದು ಯಾರಿಗೂ ಘೋರ ವಿಷಯವಾಗಿ ಪರಿಣಮಿಸಿಯೇ ಇಲ್ಲ. ಇಂದು ರಾಜಸ್ಥಾನದಲ್ಲಿ ಒಂದು ಅಂದಾಜಿನ ಪ್ರಕಾರ ೧೦ ಲಕ್ಷ ಬಾಂಗ್ಲಾ ದೇಶದ ಮಂದಿ ನೆಲೆಸಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇಂತವರನ್ನು ದೇಶದಿಂದ ಮೊದಲು ಓಡಿಸಬೇಕು ಎಂದು ವಾದಿಸುತ್ತಿರವವರ ವಾದವೆಲ್ಲಾ ಪೊಳ್ಳು ಎಂದು ಮಾನವ ಹಕ್ಕುಗಳ ಆಯೋಗದ ಮಂದಿ ವಾದಿಸುತ್ತಾರೆ. ನಫೀಸಾ ಅಲಿ ಅವರಂತಹ 'ಸಮಾಜ ಸುಧಾರಕಿ'ಯರು ಬೇರೆ ದೇಶದ ಮೂಲಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು ಎಂದು ಉದಾರವಾದ ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ದೇಶ ಇಂದು ದುರಂತಗಳ ಗೂಡಾಗಿದ್ದು, ಮೂಲ ಸೌಕರ್ಯ ಬಿಡಿ, ತುತ್ತಿನ ಚೀಲ ತುಂಬಿಸಲೇ ಜನ ಹೆಣಗಾಡುತ್ತಿರುವಾಗ, ನಮ್ಮ ದೇಶದ ದುರವಸ್ಥೆಯನ್ನು ದೂರಮಾಡುವತ್ತ ಕಾರ್ಯೋನ್ಮುಖವಾಗಬೇಕು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಏಕೆಂದರೆ ಇವರು 'ಸಮಾಜ ಸುಧಾರಕರು' ಅಲ್ಲವೇ? ಇನ್ನು ನಮ್ಮ ಮಾನವ ಹಕ್ಕು ಆಯೋಗಕ್ಕೆ ಯಾವ ರೀತಿಯಲ್ಲಿ ಮಂಕು ಬಡಿದಿದೆ ಎಂದು ಅರ್ಥವೇ ಆಗುತ್ತಿಲ್ಲ. ಭಾರತದಲ್ಲಿ ಮಹಾದುರಂತಗಳಿಗೆ ನಾಂದಿ ಹಾಡಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಬಾಂಗ್ಲಾ ದೇಶದ ಉಗ್ರರ ಕೈವಾಡವಿದೆ ಎಂದು ಇಂಟೆಲಿಜೆನ್ಸ್ ಏಜೆನ್ಸಿ ವರದಿ ನೀಡಿದ್ದರೂ ಅದನ್ನು ಮಾನ ಹಕ್ಕುಗಳು ಒಪ್ಪುವ ಸ್ಥಿತಿಯಲ್ಲಿಲ್ಲ. ಇಂಟೆಲಿಜೆನ್ಸ್ ವರದಿ ಯಾವ ಆಧಾರದ ಮೇಲೆ ಈ ವರದಿಗಳನ್ನು ತಯಾರಿಸಿದೆಯೋ ಗೊತ್ತಿಲ್ಲ. ಇದಕ್ಕೆ ಸರಿಯಾದ ಆಧಾರವೂ ಇಲ್ಲ ಎಂದು ಮಾನವ ಹಕ್ಕು ಆಯೋಗದ 'ಮಹಾಪುರುಷ'ರೊಬ್ಬರು ಹೇಳುತ್ತಾರೆ. ಅದೇನೆ ಇರಲಿ, ಹೀಗೆಯೇ 'ದಿವ್ಯ ನಿರ್ಲಕ್ಷ' ವಹಿಸಿದಲ್ಲಿ ಒಂದಲ್ಲಾ ಒಂದು ದಿನ ನಾವೆಲ್ಲರೂ ಇದರ ನೇರ ಪರಿಣಾಮವನ್ನು ಅನುಭವಿಸಲೇ ಬೇಕು. ಈ ಅನುಭವ ಈಗ ಆಗುತ್ತಲೂ ಇದೆ.
ವಿಪರ್ಯಾಸ ಏನೆಂದರೆ ಭಯೋತ್ಪಾದನೆಯಿಂದಾಗಿ ದೇಶದ ಬಹುಭಾಗ ಇಂದು ತತ್ತರಿಸಿ ಹೋಗಿದ್ದರೂ ನಮ್ಮ ಫುಡಾರಿಗಳಿಗೆ ವಿಶೇಷ 'ಆಂಟಿ ಟೆರರಿಸಂ' ಕಾನೂನು ಒಂದನ್ನು ರಚಿಸಬೇಕೆಂದು ಅನ್ನಿಸಿಯೇ ಇಲ್ಲ. ನಿಜಹೇಳಬೇಕೆಂದರೆ ಭಯೋತ್ಪಾದನೆಯನ್ನು ತಡೆಗಟ್ಟಲು ಸಮರ್ಪಕ ರಣತಂತ್ರಗಳನ್ನು ಹೂಡಲೇ ಕೇಂದ್ರ ತಡಕಾಡುತ್ತಿದೆ. ಬಹುತೇಕ ಯುವಕರು ಜಿಹಾದಿ ಜಾಲದಲ್ಲಿ ಸೇರಿಕೊಂಡು ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದರೂ ನಾವಿನ್ನೂ ಏಕೆ ಎಚ್ಚೆತ್ತುಕೊಂಡಿಲ್ಲ? ಇಷ್ಟೆಲ್ಲಾ ಅನಾಹುತಗಳಾಗಿ, ಮುಂಬರುವ ದುರಂತಗಳನ್ನಾದರೂ ತಪ್ಪಿಸುವ ನಿಟ್ಟಿನಲ್ಲಿ ಪೋಟಾ (ಪ್ರಿವೆನ್ಷನ್ ಆಫ್ ಟೆರರಿಸಂ ಆಕ್ಟ್) ಕಾಯ್ದೆ ಜಾರಿಗೆ ತರಬಹುದಲ್ಲವೇ?
ಇವೆಲ್ಲದರ ನಡುವೆ ಜಾಗತಿಕ ಶಾಂತಿಯ ನೆಲೆಯಿಂದ ಇಸ್ಲಾಮಿಕ್ ಸಂಸ್ಥೆಗಳಲ್ಲಿ ಒಂದಾದ 'ಜಾಮಿಯಾತ್ ಉಲಾಮ-ಇ-ಹಿಂದ್' ಕೆಲವು ಇತರ ಮುಸ್ಲಿಂ ಸಂಸ್ಥೆಗಳೊಂದಿಗೆ ಭಯೋತ್ಪಾದನೆ ವಿರುದ್ಧ 'ಫತ್ವಾ' ಹೊರಡಿಸಿದ್ದೂ ನಿಜಕ್ಕೂ ಸಂತೋಷದ ವಿಷಯ. ಭಯೋತ್ಪಾದನಾ ಕೃತ್ಯಕ್ಕೆ ಕೇವಲ ಮುಸ್ಲಿಮರನ್ನು ದೂರುವುದು ತಪ್ಪು. ಸಮುದಾಯದ ಇನ್ಯಾರೋ ಕೆಲವರು ಮಾಡಿದ ದುಷ್ಕೃತಕ್ಕೆ ಇಡೀ ಸಮುದಾಯದ ವಿರುದ್ಧವೇ ಆರೊಪ ಹೂಡುವುದು ಪ್ರಜ್ಞಾವಂತ ನಡೆ ಅಲ್ಲ. ಇದರ ಹಿಂದೆ 'ಕಾಣದ ಕೈ'ಗಳೂ ಇರುತ್ತವೆ ಎಂಬುದನ್ನು ನಾವಿಲ್ಲಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಮೂಢನಂಬಿಕೆಗಳಿಂದ ಹೊರಬರಬೇಕು. ಧರ್ಮದ ಹೆಸರಲ್ಲಿ ಇವರು ಧರ್ಮ ಹಾಗೂ ಸಮಾಜ ರಕ್ಷಣೆ ಮಾಡುತ್ತಿದ್ದಾರೆ ಎಂಬುದು ಹಾಸ್ಯಾಸ್ಪದ.
ಒಟ್ಟಾರೆ ನಮ್ಮೊಳಗಿನ ಲೋಪ-ದೋಷಗಳನ್ನು ತಿದ್ದಿಕೊಂಡು, ಸಮರ್ಪಕ ರಣತಂತ್ರಗಳ ಮೂಲಕ ಭಯೋತ್ಪಾದನೆಯ ಮೂಲೋಚ್ಛಾಟನೆ ಸಾಧ್ಯ. ನಮ್ಮ ಜನರ ಅಭಿವೃದ್ಧಿ, ಮೂಲ ಸೌಕರ್ಯಗಳ ಕೊರತೆ ನೀಗಿಸಿ ಸಮಾಜ ರಕ್ಷಣೆಯ ಕಾರ್ಯಕ್ಕೆ ಎಲ್ಲರೂ ಕೈಹಾಕಬೇಕು. ಬೇರೆ ದೇಶದ ಮೂಲ ಸೌಕರ್ಯ ಸರಿ ಪಡಿಸಬೇಕು ಸರಿ, ಆದರೆ ನಮ್ಮ ವ್ಯವಸ್ಥೆಯೇ ಸರಿ ಇಲ್ಲ. ನಮ್ಮಲ್ಲೇ ಕೊರತೆಗಳನ್ನಿಟ್ಟುಕೊಂಡು ಬೇರೆ ದೇಶ ಉದ್ಧಾರ ಮಾಡುತ್ತೇನೆ ಎಂದು ಹೊರಟರೆ, ಅದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ನಫೀಸಾ ಅಲಿ ಹಾಗೂ ಮಾನವ ಹಕ್ಕುಗಳಿಗೆ ಇದು ಅರ್ಥವಾದರೆ ಸಾಕು.

No comments: