Monday, 27 April 2009

“ಕ್ಯಾಬರೇ ಡ್ಯಾನ್ಸ್”ಗೆ ಬೆವೆತು ಒದ್ದೆಯಾಗಿದ್ದೆ!!


‘ಕ್ಯಾಬರೇ’ ಅನ್ನೋ ಪದಕ್ಕೂ ನನಗೂ ಅವಿನಾಭಾವ ನಂಟು. ಹೈಸ್ಕೂಲ್‌ಗೆ ಹೋಗುತ್ತಿದ್ದ ಸಮಯದಲ್ಲಿ ಟಿವಿಯಲ್ಲಿ ರಾಜ್‌ಕುಮಾರ್ ಬಾಂಡ್ ಸಿನಿಮಾಗಳು ನೋಡಿದಾಗ ಅವುಗಳಲ್ಲಿ ಕ್ಯಾಬರೇ ನೃತ್ಯಗಳಿರುತ್ತಿದ್ದವು. ಆ ವಯಸ್ಸಲ್ಲಿ ಅಂತದ್ದನ್ನು ತಪ್ಪದೇ ನೋಡುತ್ತಲೂ ಇದ್ದೆ. ಈಗಲೂ ನೋಡುವುದಿಲ್ಲ ಎಂದಲ್ಲ;

ಅದಿರಲಿ, ೯ನೇ ಕ್ಲಾಸ್‌ನಲ್ಲಿದ್ದಾಗ ನನ್ನ ಈ ಕ್ಯಾಬರೇ ಪುರಾಣ ದೊಡ್ಡ ಸುದ್ದಿಯೇ ಮಾಡಿತ್ತು. ಕನ್ನಡ ತರಗತಿ ನಡೆಯುತ್ತಿದ್ದ ಸಮಯ. ಮಧ್ಯಾಹ್ನ ೩ ಗಂಟೆಗೆ ಕ್ಲಾಸ್ ಆರಂಭವಾಗಿತ್ತು. ಶಾಲೆಯಲ್ಲಿ ಕನ್ನಡ ಮಾತಾಡುವುದಕ್ಕೆ ಇದ್ದ ಏಕೈಕ ಪಿರಿಡ್ ಅದು. ಉಳಿದ ಕ್ಲಾಸ್‌ನಲ್ಲೆಲ್ಲಾ ನಾವು ಇಂಗ್ಲೀಷ್ ಮಾತಾಡಬೇಕಾದುದು ಕಡ್ಡಾಯವಾಗಿತ್ತು. ನಮ್ಮ ಕನ್ನಡ ಮಿಸ್ ಪಾಠ ಮಾಡುತ್ತಿದ್ದರು. ಆಗ ನಮ್ಮ ಸ್ಕೂಲ್ ಡೇನೂ ಹತ್ತಿರದಲ್ಲಿತ್ತು. ಪಾಠವನ್ನು ಮಧ್ಯದಲ್ಲಿ ನಿಲ್ಲಿಸಿದ ಮಿಸ್ ಒಂದೇ ಬಾರಿ ಸ್ಕೂಲ್ ಡೇ ಬಗ್ಗೆ ಮಾತಾಡತೊಗಿದರು. ನಮಗೆ ಸಿಕ್ಕಿದ್ದೇ ಅವಕಾಶ ಎಂದು ನಾವು ಹರಟೆ ಹೊಡೆಯಲಾಂಭಿಸಿದೆವು. ನಾನು ಎಡಭಾಗದ ಮುಂದಿನ ಬೆಂಚ್‌ನಲ್ಲಿ ಕೂತಿದ್ದೆ. ನಾನು ಪಾಠದ ಮಧ್ಯೆ ಡಿಸ್ಟರ್ಬ್ ಮಾಡುತ್ತಿರುತ್ತೇನೆ ಎಂದೇ ಮುಂದಿನ ಬೆಂಚ್‌ನಲ್ಲಿ ಕೂರಿಸಿದ್ದರು. ನನ್ನ ಜೊತೆ ಅನೀಶ್ ಮತ್ತು ಅಭಿರಾಮ್ (ನನ್ನಂತೆಯೇ ‘ನಾಟಿ ಸ್ಟೂಡೆಂಟ್’ ಎನಿಸಿಕೊಂಡಿದ್ದವರು; ಅಭಿರಾಮ್ ನಮ್ಮಷ್ಟು ನಾಟಿ ಇರಲಿಲ್ಲ) ಕುಳಿತಿದ್ದರು.


ಇತ್ತ ಕನ್ನಡ ಮಿಸ್ “ಡ್ಯಾನ್ಸ್ ಟೀಮ್‌ನಲ್ಲಿರುವವರು ಕ್ಲಾಸ್ ಬಳಿಕ ಪ್ರಾಕ್ಟೀಸ್ ಮಾಡಿ ಬನ್ನಿ” ಎಂದು ಹುಡುಗಿಯರಿಗೆ ಹೇಳಿದರು. ನನ್ನದೇ ಲೋಕದಲ್ಲಿ ತೇಲುತ್ತಿದ್ದ ನನ್ನ ಮನಸ್ಸು ಒಮ್ಮೆಲೆ ನೆಟ್ಟಗಾಯಿತು. ಕಿವಿ ಅತ್ತ ಹೋಯಿತು. “ಯಾವ ಡ್ಯಾನ್ಸ್ ಮಿಸ್... ಯಾವ ಡ್ಯಾನ್ಸ್ ಮಿಸ್...” ಎಂದು ಕೆಲವು ಹುಡುಗರು ಮಿಸ್‌ನಲ್ಲಿ ಬೊಬ್ಬಿಟ್ಟು ಕೇಳಿದಾಗ ಮಿಸ್ “ಸೈಲೆಂಟ್... ಸೈಲೆಂಟ್” ಅಂದು ಬೊಬ್ಬಿಟ್ಟರು! ಸರಿ; ಎಲ್ಲರೂ ಸೈಲೆಂಟ್ ಆದದ್ದೇ ತಡ...ಮಿಸ್ ಇನ್ನೇನು 'ಸೋಲೋ ಡ್ಯಾನ್ಸ್' ಎಂದು ಹೇಳಬೇಕೆನ್ನುವಷ್ಟರಲ್ಲಿ...
ಅದೇನೋ ಗೊತ್ತಿಲ್ಲ...ನಾನು “ಕ್ಯಾಬರೇ ಡ್ಯಾನ್ಸ್” ಎಂದು ಜೋರಾಗಿಯೇ ಇಡೀ ಕ್ಲಾಸ್‌ಗೆ ಕೇಳುವಂತೆ ಬೊಬ್ಬಿಟ್ಟೆ..ಹತ್ತಿರ ಕೂತಿದ್ದ ಅನೀಶ್ ಮುಸಿ ಮುಸಿ ನಗುತ್ತಾ ನನ್ನ ತೊಡೆಗೇ ಒಂದು ಬಾರಿಸಿದ. “ಅಯ್ಯೋ ಎಂಥಾ ಅಧ್ವಾನವಾಯ್ತು” ಅಂದು ನಾನು ಅಲ್ಲೇ ಬೆವರಿ ಹೋದೆ..

ಈ ಕನ್ನಡ ಮಿಸ್‌ಗೆ ಕೋಪ ಮೂಗಿನ ತುದಿಗೇರಿತ್ತು. ಆಗಲೇ ಅವರ ಮೂಗು ಉದ್ದವಾಗಿ ಕಡು ಕೆಂಪಾಗಿತ್ತು! ನನಗಂತೂ ಮೈಯೆಲ್ಲಾ ನಡುಗಲು ಆರಂಭಿಸಿದ್ದೇ ತಡ... “ಸ್ಟ್ಯಾಂಡ್ ಅಪ್ ರಾಘವ” ಎಂದು ಮಿಸ್ ನನ್ನನ್ನು ದುರುಗುಟ್ಟಿಸಿ ನೋಡಿದರು. ತಗೋ...ಶುರುವಾಯ್ತು ಬೈಗುಳಗಳ ಸುರಿಮಳೆ... ಪೂರ್ತಿ ಪಿರಿಡ್ ಕೈಮೇಲೆ ಮಾಡಿ ನಿಲ್ಲಿಸಿದರು. ಮೊದಲೇ ಹೆದರಿ ಬೆವರಿದ್ದೆ...ಇದರ ಜೊತೆ ಕೈಯನ್ನೂ ಮೇಲೆ ಮಾಡಬೇಕು ಎಂದು ಪನಿಶ್‌ಮೆಂಟ್ ಬೇರೆ. ಹಾಗಾಗಿ ನನ್ನ ಕಂಕುಳುಗಳೂ ಬೆವೆತು ಒದ್ದೆಯಾಗಿ ಹೋಗಿದ್ದವು.

ಆದರೆ ಈ ಮಿಸ್ ಬೇರೆ ಮಿಸ್‌ಗಳಂತೆ ಬಟ್ಟೆ ಒಗೆದಂತೆ ಒಗೆಯಲಿಲ್ಲ. ಇನ್ನೇನು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದ ಹುಡುಗಿಯರು ಬೇರೆ ಕ್ಲಾಸ್‌ನಲ್ಲಿದ್ದರು. ಅವರ ಮಧ್ಯೆ...ಚೀ..ಚೀ..ಕ್ಯಾಬರೇ ಎಂದರೆ ಹೇಗಾಗಬೇಡ...!? ಅಂತೂ ನಾನು “ಕ್ಯಾಬರೇ” ಅಂದಿದ್ದು ಇನ್ನು ಏನೇನು ಫಜೀತಿಯನ್ನು ಸೃಷ್ಟಿಲಿದೆಯೋ ಎಂದು ಭಯಭೀತನಾಗಿದ್ದೆ. ಅತ್ತ ಅಪ್ಪ ಅಮ್ಮನ ಭಯ ಬೇರೆ.. ಎಲ್ಲಿಯಾದರೂ ಮನೆಯಲ್ಲಿ ಈ ಬಗ್ಗೆ ಹೇಳಿದರೆ...ಅನ್ನುವ ಭಯ...ಈ ಮಧ್ಯೆ ಕ್ಲಾಸ್‌ನಲ್ಲಿದ್ದ ಹುಡುಗಿಯರನ್ನೂ ಗಮನಿದೇ ಎನೋ ಅಸಭ್ಯವಾಯಿತೋ ಎಂದು ನಾಚಿಕೆಯೂ ಆಯಿತು.

ಸರಿ ಕ್ಲಾಸ್ ಮುಗಿಯಿತು... ಎಲ್ಲರೂ ನನ್ನನ್ನು ನೋಡಿ ನಕ್ಕರು...ಎನೋ ಒಂದು ಒಳ್ಳೆ ಎಂಟರ್‌ಟೈನ್‌ಮೆಂಟ್ ಕೊಟ್ಟೆ ಅನ್ನುವ ಹಾಗೆ...ನನಗಂತೂ ಪೇರೆಂಟ್ಸ್ ಮೀಟಿಂಗ್‌ನಲ್ಲಿ ಇದನ್ನೆಲ್ಲಾ ಹೇಳಿದರೆ ಏನು ಮಾಡುವುದು ಅನ್ನುವ ಚಿಂತೆಯಾದರೆ...ಇವರಿಗೆಲ್ಲಾ ಖುಷಿ...
ನಂತರ ನೇರ ಮಿಸ್ ಬಳಿ ಹೋದವನು “ಸಾರಿ ಮಿಸ್” ಅಂದೆ...ನಿಜವಾಗಲೂ ಮಿಸ್ ಪಾಪ...ನನಗೆ ಏನೂ ಹೇಳಿಲಿಲ್ಲ...ಇನ್ನು ಹಾಗೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರು.. ಓಹ್...ಅಬ್ಬಾ ಬದುಕಿದೆ..ಎಂದು ದೊಡ್ಡ ಉಸಿರು ಬಿಟ್ಟೆ ...ಖುಷಿಯಲ್ಲಿ ಉಬ್ಬಿ ಹೋದೆ...ನಗುತ್ತಲೇ ಮನೆಗೆ ಹೋದೆ...

(ಪೇರೆಂಟ್ಸ್ ಮೀಟಿಂಗ್‌ನಲ್ಲಿ ಸೋಷಿಯಲ್ ಮಿಸ್ ನನ್ನ ಇತಿಹಾಸ ಕೆದಕಿದ್ದು, ನಾನು ಅಪ್ಪನ ಮುಂದೆ ಗೊಳೋ ಎಂದು ಅತ್ತಿದ್ದು, ಅಪ್ಪನ ಮುಖ ಚಪ್ಪೆಯಾದದ್ದು... ಈ ಬಗ್ಗೆ ಮುಂದೆ ಹೇಳುತ್ತೇನೆ)
ಮೂತ್ರ ಬರುತ್ತಿದ್ದದ್ದು ಅರ್ಧಕ್ಕೆ ನಿಂತಿತು!!

ಅವು ನಾನು ಉಜಿರೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳು. ನಮ್ಮ ತರಗತಿಯ ‘ನಾಟಿ ಬಾಯ್ಸ್’ ಸೆಕ್ಷನ್‌ನಲ್ಲಿ ಮಹತ್ತರವಾದ ಸ್ಥಾನವನ್ನೇ ಪಡೆದಿದ್ದ ನಾನು ಮಿಸ್ ಹಾಗೂ ಸರ್‌ಗಳ ಕೈಯಿಂದ ಬೈಗುಳಗಳನ್ನು ತಿನ್ನದ ದಿನಗಳೇ ಇರುತ್ತಿರಲಿಲ್ಲ. ಪಾಠ ಮಾಡುವಾಗ ಒಂದಲ್ಲಾ ಒಂದು ಕಮೆಂಟ್ ಪಾಸ್ ಮಾಡುತ್ತಾ ಅದರಲ್ಲೇ ತೃಪ್ತಿ ಪಡುತ್ತಿದ್ದ ನನಗೆ ಸಿಗುತ್ತಿದ್ದ ಮಾರ್ಕ್ಸ್ ನೋಡಿ ಮನೆಯಲ್ಲಿ ಮಾತ್ರವಲ್ಲ; ಮಿಸ್‌ಗಳ ಕೈಯಿಂದಲೂ ಸದಾ ಮಂಗಳಾರತಿ ತಪ್ಪುತ್ತಿರಲಿಲ್ಲ.

ಈ ಮಿಸ್‌ಗಳ ಪಾಠ ಕೇಳವುದೇ ಒಂದು ಮಹಾ ಬೋರಿಂಗ್ ಎನಿಸುತ್ತಿದ್ದಾಗ; ಇನ್ನಿವರು ಆನ್ ಸಂಡೆ ಐ ಆಮ್ ಟೇಕಿಂಗ್ ಸ್ಪೆಷಲ್ ಕ್ಲಾಸ್ ಎಂದರೆ ಎಷ್ಟು ಉರಿಯಬೇಡ...? ಆಯ್ತು ಮಿಸ್ ಹೇಳಿದ ಮೇಲೆ ಹೋಗಲ್ಲಾ ಅನ್ನೋಕಾಗುತ್ತಾ? ಹೋಗದಿದ್ದರೆ ಅಮ್ಮನ ಬೆತ್ತದ ರುಚಿ ತಪ್ಪಿಸಲಾಗುತ್ತಾ?


ಸರಿ, ಧರ್ಮಸ್ಥಳದಿಂದ ಬಸ್ಸು ಹತ್ತಿ ಉಜಿರೆಗೆ ಹೋಗಿ ಆ ಒಂದು ಸಂಡೆ ಕ್ಲಾಸಲ್ಲಿ ಕೂತದ್ದಾಯಿತು. ಶುರುವಾಯಿತು ಸೈನ್ಸ್ ಕ್ಲಾಸ್. ಮೊದಲೇ ಸದಾ ಆ ಮಿಸ್‌ನ ಕ್ಲಾಸ್ ಬೋರ್ ಅನಿಸ್ತಿತ್ತು. ಇನ್ನು ಸ್ಪೆಷಲ್ ಕ್ಲಾಸ್ ಅಂದ್ರೆ; ಅಯ್ಯೋ ಕೇಳೋದು ಬೇಡ... ಸಿಲೆಬಸ್ ಮುಗಿಸ್ಬೇಕು ಅನ್ನುವ ಭರದಲ್ಲಿ ಅವರಿದ್ದರೆ...ನಮ್ಮದೇ ಲೋಕದಲ್ಲಿ ನಾವೊಂದಿಷ್ಟು ಪೋಕ್ರಿಗಳು... ನಾನು ಯಾವತ್ತೂ ಪಾಠ ಕೇಳುವುದಿಲ್ಲ ಅನ್ನುವುದು ಅವರಿಗೆ ಗೊತ್ತಿತ್ತು. ಯಾಕೆಂದರೆ ಅವರು ಕೇಳುವ ಒಂದು ಪ್ರಶ್ನೆಗೂ ನನ್ನಲ್ಲಿ ಉತ್ತರ ಇರುತ್ತಿರಲಿಲ್ಲ. ಆ ಸೈನ್ಸ್ ಕೂಡ ಎಷ್ಟು ಓದಿದ್ರೂ ನನ್ನ ಮಂಡೆಗೆ ಹತ್ತುತ್ತಿರಲಿಲ್ಲ.

ಹಾಗೇ ಪಾಠ ನಡೀತಾ ಇತ್ತು. ನಾನು ಮಧ್ಯದ ಸಾಲಿನ ನಾಲಕ್ನೇ ಬೆಂಚಿನಲ್ಲಿ ಕೂತಿದ್ದೆ. ನಾನು ಮತ್ತು ನನ್ನ ಪಕ್ಕ ಕೂತಿದ್ದವ ಏನೋ ದೀರ್ಘ ಸಂಭಾಷಣೆಯಲ್ಲಿ ತೊಡಗಿದ್ದೆವು. ನಾನು ಕಿಸ ಕಿಸ ನಗುತ್ತಲೂ ಇದ್ದೆ. ಇಷ್ಟು ಸಾಕಲ್ವಾ ಮಿಸ್‌ಗೆ...?
ರಾಘವ್ ಸ್ಟ್ಯಾಂಡ್ ಅಪ್...! ಒಮ್ಮೆ ತರಗತಿಯಲ್ಲಿ ಮೌನ.. ನಾನು ಯಾವತ್ತಿನಂತೆ ನಿಂತೆ..ಹೀಗೆ ನಿಂತು ಸಾಕಷ್ಟು ಅಭ್ಯಾಸವೂ ಇತ್ತು. ಆದರೆ ಈ ಬಾರಿ ಬೈಗುಳಗಳ ದಾಟಿ ಮಾತ್ರ ಬೇರೆಯದೇ ಆಗಿತ್ತು. ಅಬ್ಬಾ ಆ ಬೈಗುಳಗಳು ಹೇಗಿತ್ತು ಎಂದರೆ; ತರಗತಿಯಲ್ಲಿನ ನನ್ನ ಸಾಧನೆಗಳ ಇತಿಹಾಸವನ್ನೆಲ್ಲಾ ಒಂದೊಂದೆ ಹೆಕ್ಕಿ ತೆಗೆದು; ಒಳ್ಳೆ ಬಟ್ಟೆ ಒಗೆದ ಹಾಗೆ ಒಗೆದರು (ಆದರೆ ಕೊಳೆ ಮಾತ್ರ ಹೋಗದು ಎಂಬುದು ಅವರಿಗೆ ಗೊತ್ತಿರಲಿಲ್ಲವೇನೋ?). ನಾನು ಬಾಹುಬಲಿ ಮೂರ್ತಿಯಂತೆ ಉದ್ದಕ್ಕೆ ನಿಂತಿದ್ದೆ(ಬಟ್ಟೆ ಹಾಕಿದ್ದೆ). ಆದರೆ ಇವರ ಬೈಗಳು ಮಾತ್ರ ನಿಲ್ಲಲೇ ಇಲ್ಲ. ನಂಗೂ ಸಾಕಾಗಿ ಹೋಯಿತು. ನನ್ನ ಅಪ್ಪ ಅಮ್ಮ ಕೂಡ ಆ ರೀತಿ ಬೈದಿರಲಿಕ್ಕಿಲ್ಲ.

ಅಯ್ಯೋ ಸಾಕಪ್ಪಾ ಸಾಕು... “ನೀನು ಹಾಗೆ, ನೀನು ಹೀಗೆ...ನೀನೂ ಹಾಳಾಗುದಲ್ದೆ ಇದ್ದವರನ್ನೂ ಹಾಳು ಮಾಡ್ತ್ಯಾ..ಮೊನ್ನೆ ಎಕ್ಸಾಮ್‌ನಲ್ಲಿ ಮಾರ್ಕ್ ಎಷ್ಟು ಗೊತ್ತಾ ನಿಂಗೆ? ನಾವು ನಮ್ಮ ಎಲ್ಲಾ ಕೆಲಸ ಬಿಟ್ಟು ಬಂದು ನಿಮಗೆ ಒಳ್ಳೆದಾಗಲಿ (?) ಅಂತ ಸ್ಪೆಷಲ್ ಕ್ಲಾಸ್ ತಗೋಂಡ್ರೆ, ನೀನು ಮಾತ್ರ ಯಾವುದೇ ಚಿಂತೆ ಇಲ್ಲದೆ ಬೇರೆಯವರಿಗೂ ಉಪದ್ರ ಕೊಡ್ತ್ಯಲ್ಲಾ......” ಅಬ್ಬಾ.. ನನಿಗಂತೂ ಕಿವಿ ತೂತಾಗುತ್ತಿದೆಯೇನೋ ಅನ್ನಿಸಿತು.
ಆದರೆ ಅವರು ಒಂದು ಮಾತು ಹೇಳಿದಾಗಲಂತೂ ನನ್ನ ಎದೆ ಡವಕ್ಕಾಯಿತು.
“ನಾಡ್ದು ಪೇರೆಂಟ್ಸ್ ಮೀಟಿಂಗ್ ಬಂದಾಗ ನಿನ್ನ ಅಪ್ಪನತ್ರ ಮಾತಾಡ್ತೇನೇ...”
“ಅಯ್ಯೋ ದೇವರೇ ಬಂತಲ್ಲಾ ನನಗೆ ಕೇಡುಗಾಲ” ಎಂದು ಯೋಚಿಸುತ್ತಿದ್ದ ನನಗೆ ಆ ರಾತ್ರಿ ನಿದ್ದೆ ಕೂಡ ಬಂದಿರ್‍ಲಿಲ್ಲ. ಅವತ್ತಿಡೀ ಆ ಮಿಸ್‌ನ ಮಂಗಳಾರತಿಯೇ ನನ್ನ ಕಣ್ಮುಂದೆ ಬಂದು ಓಡಾಡುತ್ತಿತ್ತು. ಕ್ಲಾಸಿನುದ್ದಕ್ಕೂ ನಾನು ನಿಂತುಕೊಂಡೇ ಇದ್ದೆ. ೩೦ ನಿಮಿಷಗಳ ಆ ಪ್ರಹಸನದ ಬಳಿಕ ಮಿಸ್ ಪಾಠ ಮುಂದುವರಿಸಿದ್ರು.. ಶಾಲೆ ಬಿಟ್ಟು ಮನೆಗೆ ಹೋಗ್ಬೇಕಾದ್ರೆ ನನ್ನ ಫ್ರೆಂಡ್ಸ್ ಎಲ್ಲಾ; ಅಂತೂ ಕ್ಲಾಸ್‌ನಲ್ಲಿ ನಮಿಗೆ ನಿದ್ದೆ ಬಾರದ ಹಾಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾಗ; ಮನಸ್ಸಿನ ಒಂದು ಮೂಲೆಯಲ್ಲಿ ಹೆಮ್ಮೆಯೆನಿಸದೇ ಇರಲಿಲ್ಲ!

ಆಯ್ತು.. ಸೋಮವಾರ ಬೆಳಿಗ್ಗೆ ಶಾಲೆಗೆ ಬೇಗ ಬಂದಿದ್ದೆ. ನನ್ನ ಕ್ಲಾಸ್‌ಮೇಟ್ ಸುಧಾಕರ್ ಮತ್ತು ನಾನು ಹೆಚ್ಚಾಗಿ ೮ ಗಂಟೆಗೆ ಸ್ಕೂಲ್‌ಗೆ ಬರುತ್ತಿದ್ದೆವು. ಬಂದವ ನಾನು ಮೊದಲು ಟಾಯ್ಲೆಟ್‌ಗೆ ಮೂತ್ರ ಹೊಯ್ಯಲು ಹೋಗುತ್ತಿದ್ದೆ. ಮೂತ್ರ ಹೊಯ್ಯುತ್ತಿದ್ದಾಗಲೇ ಈ ಸುಧಾಕರ ಬಂದು; “ಹೇ ರಾಘವ ಮಿಸ್ ಈಸ್ ಕಾಲಿಂಗ್ ಯು” ಎಂದು ಮತ್ತೊಂದು ಶಾಕ್ ನೀಡಿದ. ಅವತ್ತು ಬೆಳಗ್ಗೆ ಮಿಸ್‌ನ ನೋಡಿದ್ರೂ ನಾನು ಗುಡ್‌ಮಾರ್ನಿಂಗ್ ಹೇಳಿರಲಿಲ್ಲ. ಹಿಂದಿನ ದಿನದ ಸಿಟ್ಟು ಇನ್ನೂ ಆರದಿರದಿದ್ದಾಗ; ಮಿಸ್‌ಗೆ ‘ಗುಡ್ ಮಾರ್ನಿಗ್’ ಬೇಕೆಂದೇ ನಾನು ಹೇಳಿರಲಿಲ್ಲ. ಅಷ್ಟು ಸಾಕಲ್ವಾ ಮಿಸ್‌ಗೆ...ತಗೋಳಿ...ಡಿಪಾರ್ಟ್‌ಮೆಂಟ್‌ಗೆ ನನ್ನ ಕರೆಸಿದರು. ಇತ್ತ ಅರ್ಧ ಮೂತ್ರ ಬಂದದ್ದು, ಹಾಗೇ ಬಾಕಿಯಾಯ್ತು.. ಮುಂದೆ ಮೂತ್ರ ಬರೆಲೇ ಇಲ್ಲ. ಪ್ಯಾಂಟ್ ಝಿಪ್ ಹಾಕಿ ಸೀದಾ ಡಿಪಾರ್ಟ್‌ಮೆಂಟ್‌ಗೆ ಹೋದೆ.

ಬೆಳಗ್ಗಿನ ಮುಹೂರ್ತ: ೮-೪೦ರ ಸಮಯ.
ಅವತ್ತಿನ ಸೇವೆ ಆರಂಭ...

“ಟೀಚರ್‍ಸ್‌ಗೆ ರೆಸ್ಪೆಕ್ಟ್ ಕೊಡಲಿಕ್ಕೆ ಬರದವ್ನು ನೀನೆಂಥ ಸಂಸ್ಕೃತಿ ಕಲ್ತಿದ್ದಿ? ಬಾರೀ ಸಿಟ್ಟು ಬರ್ತದಲ್ಲಾ ನಿಂಗೆ? ಮಿಸ್ ಬಂದ್ರೆ ಗುಡ್ ಮಾರ್ನಿಂಗ್ ಹೇಳದಷ್ಟು ದೊಡ್ಡ ಜನಾ ಆಗಿದ್ಯಾ ನೀನು...?” ಹಾಗೇ ಬೈದು ಬೈದು...ಗಂಟೆ ಒಂಭತ್ತಾಗಿತ್ತು.. ಬೇರೆ ಕ್ಲಾಸ್‌ನವರು ಬಂದವ್ರೆಲ್ಲಾ ನನ್ನನ್ನು ನೋಡುತ್ತಲೇ ಇದ್ದರು.. ಆ ದಿನ ನನಗೆ ನಿಜವಾಗಲೂ ನಾಚಿಕೆಯಾಗಿತ್ತು...ನಾನು ಜೋರಾಗಿ ಅತ್ತಿದ್ದೆ ಕೂಡ...
“ಹೋಗಿ ಹೆಡ್‌ಮಾಸ್ಟರ್ ಹತ್ತಿರ ಮಾತಾಡು” ಎಂದರು ಮಿಸ್..
ನೇರ ಎಚ್.ಎಂ. ಬಳಿ ಹೋದಾಗ, ಅವರು “ನಾನು ನಿನ್ನ ಅಪ್ಪನತ್ರ ಹೇಳ್ತೇನೆ” ಅಂದವರು ಮನೆ ನಂಬರ್ ಕೇಳಿದರು.. ಅಯ್ಯೋ... ನನಗೆ ಭಯವಾಗಿ ಹೋಗಿತ್ತು. ಮನೆಯಲ್ಲಿ ಫೋನ್ ಇಲ್ಲ ಎಂದು ಸುಳ್ಳು ಹೇಳಿದೆ. “ಗೋ ಗೋ...ಗೋ ಟು ಕ್ಲಾಸ್...ಗೆಟ್ ಲಾಸ್ಟ್...” ಅಂತ ಎಚ್.ಎಂ. ಹೇಳಿದಾಗ ಆ ನಂತರ ಹೋದವನು..ದಿನವಿಡೀ ಯಾವ ಕಾರಣಕ್ಕೂ ಟೀಚರ್‍ಸ್ ಡಿಪಾರ್ಟ್‌ಮೆಂಟ್‌ಗೆ ಮುಖ ಕೂಡ ಹಾಕಿರಲಿಲ್ಲ..
ಇವರೂ ಆಡುತ್ತಿರುವುದು ಕ್ರಿಕೆಟ್ ಅಲ್ಲವೇ?


ಆಸ್ಟ್ರೇಲಿಯದ ಸಿಡ್ನಿ ಓವಲ್‌ನಲ್ಲಿ ಮೊನ್ನೆ ಇಂಗ್ಲೆಂಡ್ ಮಹಿಳೆಯರ ಮೇಲಾಟ. ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಇಂಗ್ಲೆಂಡ್ ತಂಡದ ಮಹಿಳೆಯರು ಹರ್ಷದ ಹೊನಲಲ್ಲಿ ತೇಲುತ್ತಿದ್ದರು. ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ
ಮಣ್ಣು ಮುಕ್ಕಿಸಿ ಮಿನುಗುವ ವಿಶ್ವಕಪ್ ಕಿರೀಟವನ್ನು ಆಂಗ್ಲರು ಮುಡಿಗೇರಿಸಿಕೊಂಡ ಆ ಕ್ಷಣ ವಿಶ್ವ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಮರೆಯಲಾಗದ ಅಪರೂಪದ ಕ್ಷಣ. ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡ ಇದುವರೆಗೆ ಒಂದು ವಿಶ್ವಕಪ್ ಕೂಡಾ ಗೆಲ್ಲಲಾಗದ ವಿಪರ್ಯಾಸದ ನಡುವೆ ಮಹಿಳೆಯರು ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ದಿಗ್ವಿಜಯ ಸಾಧಿಸಿದ್ದು ಇಡೀ ಇಂಗ್ಲೆಂಡ್‌ಗೆ ದಕ್ಕಿದ ಬಹುದೊಡ್ಡ ಕೀರ್ತಿ. ಗೆಲುವಿನ ರನ್ ಬಾರಿಸುತ್ತಿದ್ದಂತೆ ಶಾಲೆಟ್ ಎಡ್ವರ್ಡ್ಸ್ ನೇತೃತ್ವದ ಇಂಗ್ಲೆಂಡ್ ಮಹಿಳೆಯರು ಆಸ್ಟ್ರೇಲಿಯದ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಎಡ್ವರ್ಡ್ಸ್ ಕಣ್ಣಲ್ಲಿ ನೀರು ಹರಿದಿತ್ತು. ಆಕೆಯ ವೃತ್ತಿ ಬದುಕಿನ ಅಪರೂಪದ ಗಳಿಗೆಗೆ ಮಾರ್ಚ್ ೨೨ರಂದು ಓವಲ್ ಸಾಕ್ಷಿಯಾಗಿತ್ತು. ಒಟ್ಟಾರೆ ಮಾಧ್ಯಮಗಳ ನಿರ್ಲಕ್ಷದಿಂದ ನಮ್ಮ ದೇಶದಲ್ಲಿ ಹೇಳುವಷ್ಟರ ಮಟ್ಟಿಗೆ ಸುದ್ದಿಯಾಗದ ಮಹಿಳೆಯರ ವಿಶ್ವಕಪ್ ಯಾವುದೇ ಅಡತಡೆಗಳಿಲ್ಲದೆ ಯಶಸ್ವಿಯಾಗಿ ನಡೆದದ್ದು ಎಲ್ಲರಲ್ಲೂ ಖುಷಿ ತಂದಿದೆ.


ಭಾರತದ ಮಹಿಳಾ ತಂಡ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರೂ ಫೈನಲ್ ತಲುಪುವಲ್ಲಿ ಸಫಲವಾಗಲಿಲ್ಲ. ಹಾಗಿದ್ದರೂ ಟೂರ್ನಿಯಲ್ಲಿ ಭಾರತದ ಮಹಿಳೆಯರ ಸಾಧನೆ ಕಡೆ ಕಣ್ಣು ಹೊರಳಿಸಿದರೆ ಅವರ ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ. ವಿಶ್ವದ ನಂಬರ್ ಒನ್ ಬೌಲರ್ ಜುಲಾನ್ ಗೋಸ್ವಾಮಿ ಸಾರಥ್ಯದ ಭಾರತ ತಂಡದ ಸರಾಸರಿ ನಿರ್ವಹಣೆ ಹೊಸ ಭರವಸೆ ಮೂಡಿಸಿದೆ. ಸೂಪರ್‌ಸಿಕ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ೮೫ ರನ್‌ಗಳಿಗೆ ಕಟ್ಟಿಹಾಕಿ ಬಗ್ಗುಬಡಿದರೂ, ಇನ್ನೊಂದು ವಿಭಾಗದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ, ಫೈನಲ್‌ಗೆ ಮುಖಮಾಡಿದ್ದರಿಂದ ಭಾರತದ ಮುಂದಿದ್ದ ಅವಕಾಶಗಳು ನೆಲಕಚ್ಚಬೇಕಾಯಿತು. ಆದರೆ ಮೂರನೇ ಸ್ಥಾನಕ್ಕಾಗಿ ಆಸ್ಟ್ರೇಲಿಯ ವಿರುದ್ಧ ನಡೆದ ಸೆಣಸಾಟದಲ್ಲಿ ಭಾರತ ಮತ್ತೊಮ್ಮೆ ವಿಜಯದ ನಗೆ ಬೀರಿತ್ತು. ಕಾಂಗರೂಗಳನ್ನು ೧೪೨ ರನ್ನುಗಳಿಗೆ ನಿಯಂತ್ರಿಸಿದ್ದ ಭಾರತದ ಮಹಿಳೆಯರು ಯಶಸ್ವಿಯಾಗಿ ರನ್ ಚೇಸ್ ಮಾಡಿದ್ದರು.

ಭಾರತದ ಮಹಿಳೆಯರು ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಕ್ರಿಕೆಟನ್ನು ದೇವರಂತೆ ಪೂಜಿಸುವ ಭಾರತದಲ್ಲಿ ಅದು ಸುದ್ದಿಯಾಗಲೇ ಇಲ್ಲ. ಪಾಕಿಸ್ತಾನ, ಆಸ್ಟ್ರೇಲಿಯ, ಶ್ರೀಲಂಕಾ, ವೆಸ್ಟ್‌ಇಂಡೀಸ್ ತಂಡಗಳನ್ನು ಭಾರತದ ಮಹಿಳೆಯರು ಸೋಲಿಸಿದರು ಎಂಬುದು ಗಮನಾರ್ಹ ಅಂಶವಾಗಿದ್ದರೂ, ಸುದ್ದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ. ಕಳೆದ ಬಾರಿಯ ವಿಶ್ವಚಾಂಪಿಯನ್ ಕಾಂಗರೂಗಳನ್ನು ಭಾರತ ಎರಡು ಬಾರಿ ಯಶಸ್ವಿಯಾಗಿ ಮಣಿಸಿದರೂ ಮಾಧ್ಯಮಗಳಲ್ಲಿ ಅವು ಬಿತ್ತರವಾದದ್ದು ಕೆಳಸುದ್ದಿಯಾಗಿ ಮಾತ್ರ. ಎಲ್ಲೋ ಒಂದೆರಡು ಮಾಧ್ಯಮಗಳು ೨೦-೨೫ ಸೆಕೆಂಡುಗಳ ಸುದ್ದಿ ನೀಡಿದ್ದು ಬಿಟ್ಟರೆ, ಮಹಿಳೆಯರ ಈ ಸಾಧನೆ ಯಾಕೋ ಮಾಧ್ಯಮಗಳಿಗೆ ಸುದ್ದಿಯಾಗದೇ ಇದ್ದದ್ದು ವಿಪರ್ಯಾಸವೇ ಸರಿ. ನೀವು ಗಮನಿಸಿರಬಹುದು, ವಿಶ್ವಕಪ್ ಕ್ರಿಕೆಟ್ ಮಧ್ಯೆ ಭಾರತ ಪುರುಷರ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿತ್ತು. ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ವರದಿಗಳು ಮಾಧ್ಯಮಗಳಲ್ಲಿ ಸ್ಪರ್ಧೆಗೆ ಬಿದ್ದಂತೆ ಬಿ
ತ್ತರವಾಗುತ್ತಿದ್ದವು.

ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುವ ವಿಶ್ವಕಪ್ ಕ್ರಿಕೆಟ್, ಕ್ರಿಕೆಟ್ ಆಡುವ ಎಲ್ಲಾ ದೇಶದ ಮಹಿಳಾ ಕ್ರಿಕೆಟ್ ಮಣಿಗಳಿಗೆ ತಮ್ಮ ಸಾಮರ್ಥ್ಯ, ಕೌಶಲ್ಯ ಪ್ರದರ್ಶನಕ್ಕೆ ಒಂದು ವೇದಿಕೆಯಾಗುತ್ತದೆ. ಅಪರೂಪಕ್ಕೆ ನಡೆಯುವ ಇಂತಹ ಟೂರ್ನಿಗಳನ್ನು ಸಹಜವಾಗಿ ಜನರು ನೋಡಬಯಸುತ್ತಾರೆ. ಆ ಬಗ್ಗೆ ಹೆಚ್ಚಿನದನ್ನು ತಿಳಿಯಬಯಸುತ್ತಾರೆ ಕೂಡ. ಆದರೆ ‘ಮಹಿಳಾ ಕ್ರಿಕೆಟ್ ಬಗ್ಗೆ ಯಾರು ಕೇಳ್ತಾರೆ ಮಾರಾಯ್ರೆ’ ಅನ್ನುವ ಮಾಧ್ಯಮಗಳ ಪೂರ್ವಗ್ರಹಪೀಡಿತ ಮನೋಭಾವವೇ ಜನರನ್ನೂ ಕೂಡ ಅದರಿಂದ ದೂರ ಉಳಿಯುವಂತೆ ಮಾಡಿವೆ.

ಮಹಿಳಾ ವಿಶ್ವಕಪ್ ಕ್ರಿಕೆಟ್‌ಗೆ ೩೬ ವರ್ಷಗಳ ಇತಿಹಾಸವೇ ಇದೆ. ೧೯೭೩ರಲ್ಲಿ ಆರಂಭವಾದ ಮೊದಲ ವಿಶ್ವಕಪ್ ಇದುವರೆಗೆ ತನ್ನ ಪಯಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದೆ. ಹಾಗೆ ನೋಡಿದರೆ ಪುರುಷರ ವಿಶ್ವಕಪ್ ಆರಂಭವಾದದ್ದು ಮಹಿಳಾ ವಿಶ್ವಕಪ್ ಆದ ಎರಡು ವರ್ಷದ ಬಳಿಕ. ಆದರೆ ‘ಪುರುಷ ಪ್ರಧಾನ’ ಎಂಬ ಮಾತಿಗೆ ತಕ್ಕಂತೆ ಇಂದು ಮುಖ್ಯವಾಹಿನಿಯಲ್ಲಿ ಪ್ರಧಾನವಾಗಿರುವುದು ಪುರುಷರ ಕ್ರಿಕೆಟ್ ಮಾತ್ರ. ಮಹಿಳಾ ಕ್ರಿಕೆಟ್‌ಗೆ ಪುರುಷರ ಕ್ರಿಕೆಟ್‌ಗೆ ನೀಡಿದಷ್ಟು ಆದ್ಯತೆಯನ್ನು ಇದುವೆರೆಗೆ ನೀಡಿಲ್ಲ ಎಂಬುದು ಮಹಿಳೆಯರ ಪಾಲಿಗೆ ಅರಗಿಸಿಕೊಳ್ಳಲಾಗದ ಸತ್ಯವಾದರೂ, ’ಮಹಿಳಾ ಪ್ರಾತಿನಿಧ್ಯ’ ಎಂದು ಮಾತನಾಡುವ ನಮ್ಮಲ್ಲಿನ ಬಹುತೇಕ ಪುರುಷರು ಇಂತಹಾ ವಿಷಯಗಳಲ್ಲಿ ಮೌನವನ್ನೇ ಉತ್ತರವಾಗಿಸುತ್ತಾರೆ.

ಭಾರತೀಯ ಕ್ರಿಕೆಟ್‌ನ್ನು ಶ್ರೀಮಂತಗೊಳಿಸಿದ ಕೀರ್ತಿ ಕೇವಲ ಪುರುಷ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ. ಮಹಿಳೆಯರದ್ದು ಇದರಲ್ಲಿ ಪಾಲಿದೆ ಎಂಬುದಕ್ಕೆ ಜಾಗತಿಕ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರು ಮಾಡಿದ ಸಾಧನೆಯತ್ತ ದೃಷ್ಟಿಹಾಯಿಸಿದರೆ ಅರ್ಥವಾಗುತ್ತದೆ. ಪ್ರಸ್ತುತ ಭಾರತ ತಂಡದ ನಾಯಕಿ ಜುಲಾನ್ ಗೋಸ್ವಾಮಿ ಅವರು ಈಗ ವಿಶ್ವದ ನಂಬರ್ ಒನ್ ಬೌಲರ್ ಆಗಿದ್ದಾರೆ. ಹಾಗೇ ಉಪಯುಕ್ತ ಆಲ್‌ರೌಂಡರ್ ಆಗಿರುವ ಗೋಸ್ವಾಮಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನ ಪಡೆದಿದ್ದಾರೆ. ಮಿಥಾಲಿ ರಾಜ್ ೩೦೦೦ ಸಾವಿರ ರನ್ ಗಡಿದಾಟಿಸಿದ ವಿಶ್ವದ ಐದನೇ ಆಟಗಾರ್ತಿ ಹಾಗೂ ಐಸಿಸಿ ರ್‍ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಟಗಾರ್ತಿ ರುಮೇಲಿ ದಾರ್. ವಿಶ್ವಕಪ್ ಟೂರ್ನಿ ಬಳಿಕ ಐಸಿಸಿ ಬಿಡುಗಡೆ ಮಾಡಿದ ವಿಶ್ವ ಕಪ್ ೧೧ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿರುವುದೂ ಗಮನಾರ್ಹ ಅಂಶ. ಮಿಥಾಲಿ ರಾಜ್ ಹಾಗೂ ಪ್ರಿಯಾಂಕಾ ರಾಯ್ ಸ್ಥಾನ ಪಡೆದ ಆ ಇಬ್ಬರು ಆಟಗಾರರು.

ವರ್ಷದಿಂದ ವರ್ಷಕ್ಕೆ ಭಾರತ ಮಹಿಳಾ ಕ್ರಿಕೆಟ್ ಭರವಸೆ ಮೂಡಿಸುತ್ತಿದ್ದರೂ ಎಲ್ಲೋ ಒಂದು ಕಡೆ ನಾವು ಆ ವಿಭಾಗವನ್ನು ಕಡೆಗಣಿಸುತ್ತಿದ್ದೇವೆ ಎಂಬ ಭಾವನೆ ಕಾಡುತ್ತಿದೆ.

ವಿಶ್ವಕಪ್ ಗೆಲ್ಲದಿದ್ದರೂ ತೃಪ್ತಿದಾಯಕ ಪ್ರದರ್ಶನ ತೋರಿದ್ದಾರೆ ಎಂಬ ಮಾತ್ರಕ್ಕಾದರೂ ನಮ್ಮ ಮಾಧ್ಯಮಗಳು ಈ ಆಟಗಾರರನ್ನು ಗುರುತಿಸಬಹುದಿತ್ತು. ಆದರೆ ಇಲ್ಲಿಯವರೆಗೆ ಒಂದು ಮಾಧ್ಯಮದಲ್ಲಾಗಲಿ, ಒಬ್ಬ ಆಟಗಾರ್ತಿಯ ಸಂದರ್ಶನ ಕೂಡ ಬಿತ್ತರವಾಗಿಲ್ಲ, ಪ್ರಕಟವಾಗಿಲ್ಲ. ಇಂಗ್ಲೆಂಡ್ ಮಹಿಳೆಯರು ಉನ್ನತ ಮಟ್ಟದ ಪ್ರದರ್ಶನ ತೋರಲು ಅಲ್ಲಿ ದೊರಕಿರುವ ಪ್ರೋತ್ಸಾಹವೂ ಪ್ರಮುಖ ಕಾರಣ. ಆದರೆ ಭಾರತದಲ್ಲಿ ಹೆಚ್ಚಿನ ಮಂದಿಗೆ ವಿಶ್ವಕಪ್ ಕ್ರಿಕೆಟ್ ಆಸ್ಟ್ರೇಲಿಯದಲ್ಲಿ ನಡೆಯುತ್ತಿದೆ ಎಂದು ತಿಳಿದದ್ದೇ ಇಎಸ್‌ಪಿನ್ ಹಾಗೂ ಸ್ಟಾರ್ ಚಾನೆಲ್‌ಗಳಲ್ಲಿ ಕ್ರಿಕೆಟ್ ನೇರ ಪ್ರಸಾರ ಕಂಡ ನಂತರ! ಈ ದುರಂತಕ್ಕೆ ನಗಬೇಕೋ, ಅಳಬೇಕೋ ಎಂದು ತಿಳಿಯುತ್ತಿಲ್ಲ.

ಒಂದು ವೇಳೆ ಅದೇ ಪುರುಷರ ತಂಡವಾಗಿದ್ದರೆ, ಅದೇನು ಸುದ್ದಿ, ಸಂದರ್ಶನ...ಇಡೀ ಸುದ್ದಿ ವಾಹಿನಿಗಳು ಆಟಗಾರರ ಬೆನ್ನುಬೀಳುತ್ತಿದ್ದವು. ಬೇಕಾದರೆ ಭಾರತ ಪುರುಷರ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ನಿಂದ ವಾಪಸಾಗುವಾಗ ವಿಮಾನ ನಿಲ್ದಾಣದಲ್ಲೇ ಮಾಧ್ಯಮಗಳು ಮೈಕ್ ಹಿಡಿದು ಕಾಯುವುದನ್ನು ಕಾಣಬಹುದು.

ಮತ್ತೊಂದು ಬೇಸರದ ಸಂಗತಿ ಎಂದರೆ ನಮ್ಮ ಬಹುತೇಕ ಮಾಧ್ಯಮಗಳು ಆಸ್ಟ್ರೇಲಿಯದಲ್ಲಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದ್ದರೂ ತಮ್ಮ ಯಾವುದೇ ಪ್ರತಿನಿಧಿಯನ್ನು ಅಲ್ಲಿಗೆ ಕಳುಹಿಸಿಲ್ಲ. ಅದೇ ನ್ಯೂಜಿಲೆಂಡ್‌ನಲ್ಲಿ ಮಾಧ್ಯಮಗಳ ಪ್ರವಾಹವೇ ಹರಿದಿದೆ! ಮಹಿಳಾ ಕ್ರಿಕೆಟ್-ಪುರುಷರ ಕ್ರಿಕೆಟ್‌ಗೆ ಇದೇ ವ್ಯತ್ಯಾಸ!

ಮಾಧ್ಯಮಗಳ ಹೊಣೆಗೇಡಿ ವರ್ತನೆಯೂ ಒಂದು ರೀತಿಯಲ್ಲಿ ಪ್ರತಿಭೆಗಳ ಕೊಲೆಗೆ ಕಾರಣವಾಗುತ್ತವೆ ಎಂಬುದನ್ನು ನಾವು ಒಪ್ಪಲೇಬೇಕು. ಒಟ್ಟಾರೆ ಮಹಿಳಾ ಹಾಕಿಯಲ್ಲಿ ನಿರೀಕ್ಷಿತ ಪ್ರಮಾಣದ ಸಾಧನೆ ತೋರದೆ ತತ್ತರಿಸಿಹೋಗಿರುವ ಭಾರತ ಕನಿಷ್ಠ ಕ್ರಿಕೆಟ್‌ನಲ್ಲಾದರೂ ಭರವಸೆಯ ಪ್ರದರ್ಶನ ನೀಡುತ್ತಿದೆ ಎಂಬ ಸಂತೋಷಕ್ಕಾದರೂ ಈ ಕ್ರಿಕೆಟ್ ಮಣಿಗಳನ್ನು ನಾವು ಪ್ರೋತ್ಸಾಹಿಸಬೇಕಾದ ಕಾಲ ಕೂಡಿ ಬಂದಿದೆ. ಬಿಸಿಸಿಐ ಹಾಗೂ ಸರ್ಕಾರವೂ ಈ ಬಗ್ಗೆ ಚಿಂತಿಸಬೇಕಿದೆ. ಬ್ಯಾಟಿಂಗ್ ತಂತ್ರಗಾರಿಕೆ, ಕ್ಷೇತ್ರರಕ್ಷಣೆಯಲ್ಲಿ ಸುಧಾರಣೆ ಹಾಗೂ ಬೌಲಿಂಗ್ ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಲು ಸಾಕಷ್ಟು ತರಬೇತಿ ಹಾಗೂ ಹೆಚ್ಚುವರಿ ಪಂದ್ಯಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದರ ಜೊತೆ ಮಾಧ್ಯಮಗಳೂ ತಮ್ಮ ಕರ್ತವ್ಯ ಮೆರೆಯಬೇಕಿದೆ. ಆದರೆ ಕೇವಲ ಟಿಆರ್‌ಪಿಯತ್ತ ಕಣ್ಣಿಟ್ಟೇ ಸುದ್ದಿ ಮಾಡುವ ಮಾಧ್ಯಮಗಳಿಗೆ ಇದು ಅರ್ಥವಾಗುವುದೇ?

Thursday, 5 February 2009

ಬುಸುಗುಡುವ ದ್ವೇಷಾಗ್ನಿ ನಡುವೆ ಪ್ರೀತಿ...


ಪ್ರಿಯೆ,


ನಾಡಿದ್ದು ಫೆಬ್ರವರಿ ೧೪. ಅದು ಪ್ರೇಮಿಗಳಿಗಾಗಿ ಮೀಸಲಾದ ದಿನ ಅಂತ ಹೇಳ್ತಾರೆ. ಆದರೆ ಈ ಪತ್ರವನ್ನು ಆ ದಿನದ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆಂದು ತಿಳಿದುಕೊಳ್ಳಬೇಡ. ಏಕೆಂದರೆ ನಿನಗೇ ಗೊತ್ತು ನನಗೆ ಇಂತಹಾ ದಿನಾಚರಣೆಗಳು ಇಷ್ಟವಿಲ್ಲವೆಂಬುದು. ಪ್ರತಿದಿನವೂ ನಾವು ಪ್ರೀತಿಯನ್ನು ಪೂಜಿಸಿ ಆಚರಿಸುತ್ತಿರುವಾಗ ಇನ್ನು ಪ್ರತ್ಯೇಕ ದಿನ ಬೇಡ ಅಂತ ನೀನು ಕೂಡ ಹೇಳಿದ್ದೆ. ಹಾ...ಅದಿರಲಿ, ನಿನಗೊಂದು ವಿಷಯ ಹೇಳ್ಬೇಕು. ಅದನ್ನು ಈ ಪತ್ರದ ಮೂಲಕವೇ ಹೇಳ್ಬೇಕು ಅಂತ ಈ ಪತ್ರ ಬರೆಯುತ್ತಿದ್ದೇನೆ.

ಮೊನ್ನೆ ಹೀಗೆ ಆಫೀಸ್‌ನಲ್ಲಿ ಕುಳಿತಿದ್ದಾಗ ಥಟ್ಟನೆ ನನ್ನ ಜಿ-ಮೇಲ್ ಚಾಟ್ ಬಾಕ್ಸ್‌ನಲ್ಲಿ ಪ್ರೀತಿ ಕುರಿತ ಒಂದು ಸಾಲು ಬಂದು ಕೂತಿತು. ಆ ಸಾಲು ಏನೆಂದರೆ; “ಯಾವಾಗ್ಲೂ ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ ಮಾತ್ರ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತೆ”. ‘ಪ್ರೀತಿ’ ಎಂಬ ಎರಡಕ್ಷರದ ಮಾತೇ ನಮ್ಮಿಬ್ಬರ ನಡುವೆ ಕೋಟಿ ಭಾವನೆಗಳನ್ನು ಹುಟ್ಟಿಸಿರುವಾಗ ಕಾಲೇಜಿನಲ್ಲಿ ಒಟ್ಟಿಗೆ ಕಲಿಯುತ್ತಿದ್ದ ಓರ್ವ ಗೆಳತಿ ಕಳುಹಿಸಿದ್ದ ಆ ಸಾಲು ನನ್ನ ಮನವನ್ನು ಆಕರ್ಷಿಸಿತ್ತು.
ಹೌದು ಅದೇ ಶಾಶ್ವತ ಪ್ರೀತಿ. ಅಲ್ಲಿರುವುದು ಸ್ವಾರ್ಥವೆಂದರೆ ಏನೆಂದೇ ಅರಿಯದ, ನಿಷ್ಕಲ್ಮಷ ಭಾವನೆಯ ಸಂಚಾರ. ಅಲ್ಲಿ ಸೃಷ್ಟಿಯಾಗುವುದು ಮನಸ್ಸು ಮನಸ್ಸುಗಳ ನಡುವಿನ ಹಚ್ಚಹಸುರಿನ ನೈಜ ಪ್ರೀತಿ ಅಷ್ಟೆ.

ಹಾಗಾದರೆ ಇಂತಹ ಒಂದು ಅತ್ಯಂತ ಸುಲಲಿತ, ವರ್ಣನೆಗೂ ಮೀರಿದ, ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರೀತಿ ನಮ್ಮ ಕೈಗೆಟಕದಾಗಿರುವುದು ಏಕೆ? ಆ ಎರಡಕ್ಷರದ ಪ್ರೀತಿ ಬಹುದೂರದಲ್ಲಿ ನಿಂತು ಜನರೊಂದಿಗೆ ಆಟವಾಡುತ್ತಿರುವಾದದರೂ ಏಕೆ? ಬಿಸಿಲ್ಗುದುರೆಯಂತೆ ಕಾಡುತ್ತಿರುವುದು ಏಕೆ? ಮರೀಚಿಕೆಯಾಗಿ ಮನಸ್ಸಿಗೆ ನೋವುಣಿಸುತ್ತಿರುವುದು ಏಕೆ? ಇತಿಹಾಸವನ್ನೆಲ್ಲಾ ಮರೆತು ಸಂತಸದ ಭವಿಷ್ಯಕ್ಕೆ ನಾಂದಿ ಹಾಡುವ ಪ್ರೀತಿಯ ಹಿಂದೆ ಸಾವಿರಾರು ಮೈಲಿಗಟ್ಟಲೆ ಅಹರ್ನಿಶಿ ಓಡಿ ಬಂದಿದ್ದರೂ ನಮ್ಮ ಕೈಗೆ ಏಕೆ ಸಿಕ್ಕಿಲ್ಲ?

ಕಾಲ ಇಷ್ಟು ಬದಲಾಗಿದ್ದರೂ, ಜಗತ್ತಿನಲ್ಲಿ ಹಿಂದೆಂದೂ ಕಂಡರಿಯದಷ್ಟು ಪರಿವರ್ತನೆಯಾಗಿದ್ದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಅರಿಯುವಷ್ಟು ದೊಡ್ಡವರಾಗಿದ್ದರೂ, ಕೆಲವು ಕಟ್ಟುಪಾಡುಗಳಿಂದ ಹೊರಬರದಿರುವುದು ಅಥವಾ ಯಾರೋ ನಮ್ಮ ಪೂರ್ವಜರು ಹಾಕಿದ ಗೆರೆಯನ್ನು ದಾಟಿ ಮುನ್ನುಗ್ಗದಿರುವುದು ಇಂತಹುದಕ್ಕೆ ಕಾರಣವಾಗಿರಬಹುದೇ?

ವಿಶ್ವದೆಲ್ಲೆಡೆ ಹೊತ್ತಿ ಉರಿಯುತ್ತಿರುವ ಎಲ್ಲಾ ಘರ್ಷಣೆ, ಅನಾಹುತ, ವೈರತ್ವ ಅಥವಾ ಇನ್ಯಾವುದೇ ಪರಿಯ ವಿಪರೀತಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಪ್ರೀತಿಯಿಂದ ಖಂಡಿತಾ ಸಾಧ್ಯವಿದೆ. ಅದನ್ನು ಸಾಧಿಸಲು ಇಂದು ಸಾವಿರಾರು ಮನಸ್ಸುಗಳು ತುಡಿಯುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹುಳಿ ಹಿಂಡುವ ಕಾರ್ಯ, ಇನ್ನಷ್ಟು ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.

ಮೊನ್ನೆ ಮುಂಬೈನಲ್ಲಿ ಭಯೋತ್ಪಾದಕರು ರುದ್ರನರ್ತನಗೈದು ನೂರಾರು ಜನರನ್ನು ಬಲಿತೆಗೆದುಕೊಂಡಿದ್ದಾಗ ಮನಸ್ಸು ಕರಗಿ ಹೋಗಿತ್ತು. ಜೀವ ತೆತ್ತ ಅಮಾಯಕರ ಮೇಲೆ ಅಗಾಧ ಕನಿಕರ, ಪ್ರೀತಿ ಮೂಡಿತ್ತು. ಅದೇ ಹೊತ್ತಿಗೆ ಹಿಂದೂ-ಮುಸ್ಲಿಂ ನಡುವೆ ಅಂತರ ಮಾತ್ರ ಹೆಚ್ಚುತ್ತಲೇ ಹೋಗಿತ್ತು. ಇನ್ನು ಕಂಧಮಾಲ್, ಮಂಗಳೂರಿನಲ್ಲಿ ಮತಾಂತರ ವಿಷಯವಾಗಿ ಹಿಂದೂ-ಕ್ರಿಶ್ಚಿಯನ್ ಸಮುದಾಯದ ನಡುವೆ ದ್ವೇಷಾಗ್ನಿ ಹೊತ್ತಿ ಉರಿಯಿತು. ಹಲವಾರು ಮಂದಿ ಈ ಅಗ್ನಿಯಲ್ಲಿ ಹೊತ್ತಿ ಉರಿದರು. ಈ ಎರಡು ಸಮುದಾಯದ ನಡುವೆ ಬಹಳ ಆಳಕ್ಕೆ ಇಳಿದಿದ್ದ ದ್ವೇಷ ಇಂದು ಇನ್ನಷ್ಟು ಆಳಕ್ಕೆ ಇಳಿದಿದೆ. ಹಲವು ಮಂದಿ ಮೂಲಭೂತವಾದಿ ಸಂಘಟನೆಗಳನ್ನು ಹಿಗ್ಗಾ-ಮುಗ್ಗ ಜರೆಯುತ್ತಾ ಹೋದರೇ ವಿನಾ ಯಾರೂ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಲಿಲ್ಲ. ಅದೇನೆಂದರೆ ಜನಸಾಮಾನ್ಯರು ಕೂಡ ಏಕೆ ಇಂತಹ ದ್ವೇಷಾಗ್ನಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ ಎಂಬುದು? ಈಗ ಪ್ರೀತಿ, ಸಹಬಾಳ್ವೆ ಎಂಬುದು ಇಲ್ಲಿ ಗಗನಕುಸುಮವಾಗಿದ್ದು, ಕೋಮುದ್ವೇಷದ ಕೆಂಪು ಜ್ವಾಲೆ ವಿಸ್ತಾರವಾಗಿ ಹರಡಿದೆ.

ಇನ್ನು ಗಡಿ ವಿಷಯಗಳತ್ತ ಮುಖ ಮಾಡಿದರೆ ಅಲ್ಲೂ ಪ್ರೀತಿ, ಪ್ರೇಮ ಎಂಬುದು ಮಾಯವಾಗಿದೆ ಅನ್ನಿಸುವುದಕ್ಕಿಂತ, ಪ್ರೀತಿ, ಪ್ರೇಮವನ್ನು ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದನಿಸುತ್ತದೆ. ಅಲ್ಲೂ ಸಂಘಟನೆಗಳದ್ದೇ ಪಾರಮ್ಯ. ಏನೂ ಅರಿಯದ ಮುಗ್ಧ ಮಂದಿಯ ತಲೆಯಲ್ಲಿ ದ್ವೇಷದ ಬೀಜ ಬಿತ್ತುವ ಕರಾಳ ಜಾಲ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಂಬಿಕೆಗೆ ಅನರ್ಹವಾದ ಮಾತೇನಲ್ಲ.

ನಾನು ನಿನಗೆ ಹೇಳ ಹೊರಟಿರುವುದೇನೆಂದರೆ, ಮತ-ಧರ್ಮ-ಬಣ್ಣದ ಹೆಸರಲ್ಲಿ ಮನುಷ್ಯ ಮನುಷ್ಯರ ನಡುವೆ ದ್ವೇಷದ ಬೆಂಕಿ ರೌದ್ರಾವತಾರ ತಾಳಿ, ದೇಶದೆಲ್ಲೆಡೆ ಹಬ್ಬಿ ಹೊಗೆಯಾಡುತ್ತಿರುವಾಗ ಪರಸ್ಪರ ನಂಬುಗೆಯ, ಸಹಬಾಳ್ವೆಯ ಪ್ರೀತಿ ನಮ್ಮ ಜನರಲ್ಲಿ ಮಾಯವಾಗಿ ಹೋಗಿದೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನಮ್ಮಿಬ್ಬರ ಪ್ರೀತಿ ಮುನ್ನುಗ್ಗುತ್ತಿದೆ. ಇದುವರೆಗೆ ನಮ್ಮ ಪ್ರೀತಿಗೆ ಜಾತಿ-ಧರ್ಮವೆಂಬ ಕೊಳ್ಳಿ ದೆವ್ವದ ಕೆಂಗಣ್ಣು ಬಿದ್ದಿರಲಿಲ್ಲ. ಆದರೆ ಈಗಾಗುತ್ತಿರುವ ಬೆಳವಣಿಗೆ ನಮ್ಮನ್ನು ಎಚ್ಚರಿಸಿದೆ. ನಮ್ಮಿಬ್ಬರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ, ಬಾಹ್ಯ ಕರಾಳ ಶಕ್ತಿಗಳು ನಮಗೇನಾದರೂ ಮಾಡಬಹುದು. ಆದರೆ ಅದಕ್ಕೆ ಬಗ್ಗಬೇಕಾಗೇನೂ ಇಲ್ಲ. ಹಾಗಾಗಿ ನೀನು ಹೆದರುವ ಅಗತ್ಯವಿಲ್ಲ. ಕೆಲವು ತಿಂಗಳಲ್ಲಿ ನಾನೂ ನೀನಿದ್ದಲ್ಲಿಗೆ ಬರುತ್ತೇನೆ. ಅಷ್ಟು ದಿನ ಧೈರ್ಯದಿಂದಿರು... ಏಕೆಂದರೆ ನಮ್ಮದು ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ...

ಇಂತಿ ನಿನ್ನವ
ರಾಘು

Wednesday, 21 January 2009

ಯಕ್ಷಗಾನ ನೋಡೆಂದು ಮನ ಚಂಡೆ ಬಾರಿಸಿದಾಗ

ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ ತಂದೆ ಫೋನ್ ಮಾಡಿದರು. ಸರಿ, ಹಾಗೆ ಮಾತನಾಡುತ್ತಿದ್ದೆ. ಅವರು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಯಕ್ಷಗಾನದ ಚೆಂಡೆಯ ಇಂಪು ತಂದೆಯವರ ಮಾತಿನ ಕಂಪಿನೊಂದಿಗೆ ನವಿರಾಗಿ ಕೇಳುತ್ತಿತ್ತು. ನಿಜಹೇಳಬೇಕೆಂದರೆ ಯಕ್ಷಗಾನಕ್ಕಿಂತ ಚೆಂಡೆ ಬಡಿಯುವುದನ್ನು ಕೇಳುವುದರಲ್ಲೇ ನಾನು ಹೆಚ್ಚು ಆನಂದವನ್ನು ಕಾಣುತ್ತೇನೆ. ಅದೇನೋ ಗೊತ್ತಿಲ್ಲ. ಚಿಕ್ಕಂದಿನಲ್ಲಿ ಅಪ್ಪ-ಅಮ್ಮನ ಒತ್ತಾಯಕ್ಕೆ ರಾತ್ರಿಯಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಚೆಂಡೆ ಶಬ್ದವನ್ನು ಆಲಿಸುತ್ತಿದ್ದೆಯೇ ವಿನಾ ರಂಗದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಆ ಪೌರಾಣಿಕ ಪ್ರಸಂಗಗಳು ಅರ್ಥವಾಗುತ್ತಲೂ ಇರಲಿಲ್ಲ. ಅದು ಬೇರೆ ಪ್ರಶ್ನೆ ಬಿಡಿ.


ತಂದೆ ಕಾರ್ಯನಿಮಿತ್ತ ಯಕ್ಷಗಾನ ನಡೆಯುತ್ತ್ತಿದ್ದ ಸ್ಥಳದ ಬಳಿ ಬಂದಿದ್ದರೂ ಅವರು ಯಕ್ಷಗಾನ ನೋಡಲು ತೆರಳಿರಲಿಲ್ಲ. ಆದರೆ ಆ ಭಾಗವತಿಗೆ ಹಾಗೂ ಚೆಂಡೆಯ ಶಬ್ದ ಮಾತ್ರ ಇಡೀ ಊರಿಗೆ ಕೇಳುತ್ತಿತ್ತು. ತಂದೆಯ ಫೋನ್‌ನ ಮೂಲಕ ಆ ಆನಂದವನ್ನು ನಾನು ಪಡೆಯುವಂತವನಾಗಿದ್ದೆ. ಆ ಹಳ್ಳಿಯಲ್ಲಿದ್ದ ಯಕ್ಷಗಾನ ಅಭಿಮಾನಿಗಳ ಆಸೆ ಪೂರೈಸುತ್ತಿದ್ದ ಯಕ್ಷಗಾನ ತಂಡಕ್ಕೆ ಅಲ್ಲಿನ ನಾಗರಿಕರು ಅಭಿನಂದನೆ ಸಲ್ಲಿಸಿದ್ದರೂ ನಾನು ಕೂಡ ಇಲ್ಲಿ ಬರೆಯುವ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಕನಿಷ್ಠ ಕೆಲವು ನಿಮಿಷಗಳ ಮಟ್ಟಿಗಾದರೂ ಈ ಗಿಜಿಗುಡುವ ಯಾಂತ್ರಿಕ ಜೀವನದ ನಡುವೆ ಒಂದಿಷ್ಟು ಹೊತ್ತು ನನ್ನ ಮನಸ್ಸನ್ನು ಶಾಂತಗೊಳಿಸಿದ್ದಕ್ಕೆ. ಮುಖ್ಯವಾಗಿ ನಾನು ನನ್ನ ತಂದೆಗೆ ಥ್ಯಾಂಕ್ಸ್ ಹೇಳಬೇಕು. ಫೋನ್ ಮಾಡಿ ಆ ಯಕ್ಷಗಾನದ ವೈಭವವನ್ನು ನನ್ನ ಕಿವಿ ಹಾಗೂ ಕಣ್ಣ ಮುಂದಿರಿಸಿದ್ದಕ್ಕೆ.

ಅದೆಷ್ಟು ದಿನವಾಯಿತು ನೋಡಿ... ಯಕ್ಷಗಾದ ಸವಿಯುಣದೆ ವರ್ಷಗಳೇ ಕಳೆದಿವೆ. ಶಾಲೆಗೆ,
ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ಯಾವತ್ತೂ ಯಕ್ಷಗಾನ ನೋಡಬೇಕೆಂದು ಈ ಪರಿಯ ಆಸಕ್ತಿ ನನ್ನ ಮನದಲ್ಲಿ ಮೂಡಿರಲಿಲ್ಲ. ನಮ್ಮ ಸಾಂಪ್ರದಾಯಿಕ ಕಲೆಗಳ ಬಗ್ಗೆ ನಿರ್ಲಕ್ಷವಹಿಸುವ ಯುವಜನಾಂಗದವರಲ್ಲಿ ಅಂದು ನಾನೂ ಒಬ್ಬನಾಗಿದ್ದೆ. ಹಾಗಿದ್ದರೂ ಚಂಡೆ ಶಬ್ದ ಕೇಳಬೇಕೆಂದು ಯಾವತ್ತೂ ಅನಿಸುತ್ತಿತ್ತು.

ಗೀಗ ಯಕ್ಷಗಾನವನ್ನು, ಆ ಚಂಡೆಯ ನಿನಾದವನ್ನು ಸದಾ ಕೇಳಬೇಕೆಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿದೆ. ಎರಡು ವರ್ಷವಾಯಿತು. ಒಂದು ಪ್ರಸಂಗವನ್ನೂ ಸರಿಯಾಗಿ ನೋಡಿಲ್ಲ. ಕಳೆದ ವರ್ಷ ದೆಹಲಿಯಲ್ಲಿ ಕನ್ನಡ ಯಕ್ಷಗಾನ ಏರ್ಪಡಿಸಿದ್ದರು. ಆದರೆ ಅದು ಯಾಕೋ ನನ್ನ ಮನಸ್ಸಿಗೆ ಅಷ್ಟರಮಟ್ಟಿಗೆ ತೃಪ್ತಿ ನೀಡಿರಲಿಲ್ಲ.

ಅದಿರಲಿ. ತಂದೆಯ ಬಳಿ ಮಾತನಾಡಿದ ಬಳಿಕ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗಳಿ
ಗೆ ಈಗಲೂ ನನಗೆ ಉತ್ತರ ಕಂಡುಕೊಳ್ಳಲಾಗುತ್ತಿಲ್ಲ. ಅದೇಕೆ ಯಕ್ಷಗಾನದ ಮೇಲೆ ಈ ಪರಿಯ ಆಸಕ್ತಿ ಮೂಡಿದೆ? ಯಕ್ಷಗಾನವನ್ನು ಒಮ್ಮೆ ನೋಡಿ ನನ್ನ ಹಸಿವನ್ನು ನೀಗಿಸಿಕೊಳ್ಳಬೇಕೆಂದು ಯಾಕೆ ಮನಸ್ಸು ಹಾತೊರೆಯುತ್ತಿದೆ? ಈ ಒಲವಿನ ಭಾವನೆ ಅದೇಕೆ ಅಂದು ಬಂದಿರಲಿಲ್ಲ? ಬಹುಶಃ ಪೇಟೆಯ ಬದುಕು ನನ್ನ ಮನವನ್ನು ಆ ರೀತಿ ಪರಿವರ್ತಿಸಿರಬಹುದೇ?

ಥಳಥಳಿಸುವ ಮಾಲ್‌ಗಳು, ಸಾಂಪ್ರದಾಯಿಕ ಬದುಕು ಏನೆಂಬುದನ್ನೇ ಮರೆತಿರುವ ಮೂಢರು, ಕೇವಲ ಸ್ವಹಿತಾಸಕ್ತಿಗಾಗಿ ಬೇರೆಯವರ ಬೆನ್ನು ಬಗ್ಗಿಸುವ ಕಾರ್ಪೊರೇಟ್‌ಗಳು, ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕೆಂದು ತನ್ನತನವನ್ನೇ ಮರೆಯುವ ‘ಪ್ರಜ್ಞಾವಂತರು’, ಹವಾನಿಯಂತ್ರಿತ ಗಾಜಿನ ಕೊಠಡಿಯಲ್ಲಿ ಕುಳಿತು ಭಾರತ ಹಳ್ಳಿಗಳು ಅಭಿವೃದ್ಧಿಯಾಗುತ್ತಿವೆ ಎನ್ನುವ ಮಹಾನ್ ಚಿಂತಕರು... ಇವರೆಲ್ಲರ ನಡುವೆ ಬದುಕು ಸಾಗಿಸುತ್ತಿರುವ ನಮ್ಮಂಥವರು...

ಬಹುಶಃ ಇಂತಹ ವಿಚಿತ್ರಗಳ ನಡುವೆ ದಿನದೂಡುವಾಗ ಮನಸ್ಸು ರಿಫ್ರೆಶ್ ಆಗಬೇಕೆಂಬ ಬಯಕೆಯಿಂದ ಯಕ್ಷಗಾನ ನೋಡಲೇಬೇಕೆಂದು ಹಂಬಲ ಮನದಲ್ಲಿ ಆವರಸಿತೇನೋ... ಮುಂದೆ ಹೋದಂತೇ ಇನ್ನು ಏನೆಲ್ಲಾ ಬಯಕೆಗಳು ಮನದಲ್ಲಿ ಮೂಡುತ್ತವೆಯೋ... ಕುತೂಹಲದಿಂದ ಕಾದುನೋಡುತ್ತಿದ್ದೇನೆ...

Friday, 5 December 2008

ನೂರೊಂದು ಕನಸು...ಕನಸಾಗೇ ಉಳಿಯಿತು...

ನನ್ನ ಬಾಡಿದ್ದ ಬದುಕಿಗೆ ಹೊಳೆವ ದೀಪ್ತಿಯಾದವಳು ನೀನು, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು, ಎಲ್ಲರ ನಿಂದನೆಗೆ ಗುರಿಯಾಗಿ, ಕಡಿದ ಬಾಳೆ ಗಿಡದಂತಾಗಿದ್ದ ಈ ಖಾಲಿ ಮನಸ್ಸಿಗೆ ಆತ್ಮವಿಶ್ವಾಸ ತುಂಬಿ ಮತ್ತೆ ನನ್ನಲ್ಲಿ ಹೊಸ ಹುರುಪು ಮೊಳಕೆಯೊಡೆಯುವಂತೆ ಮಾಡಿದ ನನ್ನ ರತ್ನ ನೀನು. ಕೈಯಲ್ಲಿ ಒಂದು ಕೆಲಸವೂ ಇಲ್ಲದೆ, ಭವಿಷ್ಯವೇ ಬರಿದಾಗಿ ಕಾಣುತ್ತಿದ್ದಾಗ, ನಿನ್ನ ಸಂಗಡದಿಂದ ಹೊಸ ಉದ್ಯೋಗ ಪ್ರಾಪ್ತಿಯಾಗುವಂತೆ ಮಾಡಿದ್ದು ನೀನು.

ಆವತ್ತು ಯಾವುದೋ ವಿಷಯಕ್ಕೆ ಎಲ್ಲರೂ ನನ್ನ ಸ್ನೇಹಕ್ಕೆ ತಿಲಾಂಜಲಿ ಇಟ್ಟಾಗ ಮತ್ತೆ ನನ್ನ ಸಮರ್ಥನೆಗೆ ಸಾಥ್ ನೀಡಿದ ಸಂಗಾತಿ ನೀನು. ಬೇರೆ ಕಡೆ ಉದ್ಯೋಗ ನಿಮಿತ್ತ ತೆರಳುವ ವೇಳೆಗೆ ಯಾವೊಬ್ಬನೂ ಬರದೇ ಇದ್ದರೂ, ನನ್ನಲ್ಲಿ ಸ್ಪೂರ್ತಿ ತುಂಬಿ, ಅತ್ಯಂತ ಆದರದಿಂದ ಬೀಳ್ಕೊಟ್ಟು, ಆ ನಿಲ್ದಾಣದಲ್ಲೇ ನಮ್ಮ ಪ್ರೀತಿ ಬಗ್ಗೆ ನೀನು ಒತ್ತಿ ಒತ್ತಿ ಹೇಳುತ್ತಿದ್ದಾಗ, ನೀನು ನನ್ನೊಂದಿಗಿಲ್ಲದಿದ್ದಾಗ ಯಾಕೀ ಉದ್ಯೋಗ ಎಂದಿದ್ದೆ ನಾನು. ನನ್ನ ಕಣ್ಣಿನಿಂದ ಒಂದು ಹನಿ ಉದುರಿದ ಕೂಡಲೇ ಗೊಳೋ ಎಂದು ಅಂತಿದ್ದ ನಿನ್ನನ್ನು ಸಮಾಧಾನ ಪಡಿಸುವಾಗಲೇ ಹೊತ್ತು ಮೀರಿತ್ತು. ಹೇಗೋ ಒಲ್ಲದ ಮನಸ್ಸಿನಿಂದ ಆ ಕ್ಷಣದಲ್ಲಿ ನಾವಿಬ್ಬರೂ ಬೇರ್ಪಡಬೇಕಾಯಿತು.

ಅಂದು ನೀನು ನಿಲ್ದಾಣದಲ್ಲಿ ಅತ್ತಷ್ಟು ಬೇರೆಂದೂ ಅತ್ತಿರಲಿಲ್ಲ ಎಂದು ನೀನು ಫೋನ್‍ನಲ್ಲಿ ಹೇಳುತ್ತಲೇ ಇರುತ್ತಿದ್ದಿ. ನೀನು ಅತ್ತದ್ದಕ್ಕೆ ನನಗೆ ಒಂಚೂರು ಬೇಸರವಿಲ್ಲ. ಏಕೆಂದರೆ ನೀನು ನನ್ನನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತೀಯಾ ಎಂದು ನನಗೆ ಗೊತ್ತು. ಆ ಪ್ರೀತಿ ನಮ್ಮಿಂದ ಒಂದು ಕ್ಷಣವನ್ನೂ ಕಳೆಯುವುದು ಅಶ್ವಮೇಧ ಯಾಗ ಮಾಡಿದಷ್ಟೇ ಕಷ್ಟ ಎಂಬುದು ಒಬ್ಬ ಪ್ರೇಮಿಯಾಗಿ ನನಗೆ ಗೊತ್ತು. ಅದಕ್ಕಾಗಿಯೇ ಅಳುವಷ್ಟು ಅತ್ತು ಬಿಡು ಎಂದು ನಿಧಾನವಾಗಿಯೇ ನಾನು ಸಮಾಧಾನ ಮಾಡಿದ್ದು.

ಅದೇನೆ ಇರಲಿ, 3 ವರ್ಷಗಳ ಮೇಲಾಯ್ತು. ಒಂದು ಬಾರಿಯೂ ನಾನು ಮನೆಗೆ ಹೋಗಿಲ್ಲ. ಕೇವಲ ದೂರವಾಣಿ ಮೂಲಕ ನನ್ನ ಹೆತ್ತವರೊಂದಿಗೆ ಸಂವಹಿಸುತ್ತಿದ್ದೇನೆ. ಅವರಿಗೂ ನನ್ನನ್ನು ನೋಡಬೇಕೆಂಬ ತವಕ. ಆ ತುಡಿತ ನನ್ನಲ್ಲೂ ಇದೆ. ಇಲ್ಲಿಗೆ ಬಂದ ಆರು ತಿಂಗಳೊಳಗೆ ನಾನು ವಾಪಸಾಗಬೇಕೆಂದಿದ್ದೆ. ಅಪ್ಪ ಅಮ್ಮನನ್ನು, ಹಾಗೇ ನಿನ್ನನ್ನು ನೋಡಬೇಕೆಂಬ ಮಹದಾಸೆ ಮನಸ್ಸಿನ ತುತ್ತ ತುದಿಯಲ್ಲಿತ್ತು. ಅದರ ಜೊತೆಗೆ ನಮ್ಮ ಹಳ್ಳಿಗೆ ಹತ್ತಿರವಿದ್ದ ನಗರದ ಬ್ರಾಂಚಿನಲ್ಲೇ ನೀನು ಕೆಲಸ ಮಾಡಬಹುದು. ಟ್ರಾನ್‍ಸ್ಫರ್ ಮಾಡಲು ನನ್ನಿಂದ ಅಡ್ಡಿಯಿಲ್ಲ ಎಂದು ನನ್ನ ಬಾಸ್ ಹೇಳಿದ್ದರು. ಆದರೆ ಅವಕಾಶವನ್ನು ನಾನು ತಿರಸ್ಕರಿಸಿದ್ದೆ.

ಕಾರಣ ನಿನಗೆ ಗೊತ್ತು, ನನಗೆ ಗೊತ್ತು; ಆದರೆ ನಾನು ಫೋನಾಯಿಸಿದಾಗ ಸದಾ ನನ್ನ ಹೆತ್ತವರು ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ಏನೋ ಒಂದು ಉತ್ತರ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಊರಿಗೆ ಬಂದರೆ ನಿನ್ನನ್ನು ನೋಡಲು, ಮಾತನಾಡಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ನೀನೇ ಇಲ್ಲದ ಮೇಲೆ ಯಾವ ಸುಖಕ್ಕಾಗಿ ನಾನು ಬರಬೇಕು? ಹೌದು, ನನ್ನ ಹೆತ್ತವರನ್ನು ನೋಡಬೇಕು. ಅವರನ್ನು ಕಾಣದೆ ವರ್ಷಗಳಾಗಿವೆ. ಆದರೆ ನಿನ್ನನ್ನು ಕಳೆದುಕೊಂಡ ದು:ಖದಲ್ಲಿ ಅಪ್ಪ ಅಮ್ಮನಲ್ಲಿ ನಾನು ಲೋಕಾಭಿರಾಮವಾಗಿ ಹೇಗೆ ಮಾತನಾಡಲು ಸಾಧ್ಯ? ವರ್ಷಗಳ ನಂತರ ಮಗ ಊರಿಗೆ ಬಂದರೂ ನಮ್ಮಲ್ಲಿ ಸರಿಯಾಗಿ ಮಾತನಾಡಿಲ್ಲ ಎಂಬ ಕೊರಗು ಅವರನ್ನು ಕಾಡದೇ ಇರದು. ನಾನು ಬಂದರೆ ಒಂದು ರೀತಿಯಲ್ಲಿ ಅವರಿಗೂ ಬೇಸರ. ಆದರೆ ಹಾಗೆ ಮಾಡಲು ಖಂಡಿತಾ ಒಪ್ಪಿಗೆಯಿಲ್ಲ. ಆದರೆ ನಾನು ಬರದಿರದ ಹಿಂದಿನ ವಾಸ್ತವವನ್ನು ಹೇಗೆ ಅವರಿಗೆ ವಿವರಿಸಲಿ?

ಗೆಳತಿ, ಊರು ಬಿಟ್ಟು ಬಂದಿದ್ದರೂ, ನಿನ್ನ ನೆನೆಯದೇ ಒಂದು ಕ್ಷಣವೂ ಮುಂದುವರಿಯುತ್ತಿರಲಿಲ್ಲ. ನಿನ್ನಲ್ಲಿ ಒಂದಕ್ಷರ ಮಾತನಾಡದಿದ್ದರೂ ನನಗೆ ದಿನದೂಡಲಾಗುತ್ತಿರಲಿಲ್ಲ. ಆದರೆ ದಿನಕಳೆದಂತೆ ನೀನೆ ನನ್ನನ್ನು ದೂರ ಮಾಡಿದೆ. ಏಕೆ ಹೀಗೆ ಮಾಡುತ್ತಿದ್ದಿ ಎಂದು ಕೇಳಿದರೂ ನೀನು ನನ್ನಲ್ಲಿ ಏನನ್ನೂ ಹೇಳಲಿಲ್ಲ. ಅದೊಂದು ದಿನ ಮಾಮೂಲಿಯಂತೆ ನನ್ನ ಇ-ಮೇಲ್ ನೋಡುತ್ತಿದ್ದ ಸಂದರ್ಭದಲ್ಲಿ ನೀನು ಕಳುಹಿಸಿದ್ದ ಆಮತ್ರಣ ಪತ್ರಿಕೆ ನೋಡಿ ದಂಗುಬಡಿದಂತಾಗಿದ್ದೆ ನಾನು! ಎರಡು ದಿನ ಆಫೀಸಿಗೂ ತೆರಳಿರಲಿಲ್ಲ. ನಿನ್ನ ನೆನಪಿನಲ್ಲೇ ದಿನ ದೂಡುತ್ತಿದ್ದ ನನಗೆ ಈ ರೀತಿಯ ಮೋಸ ಏಕೆ ಮಾಡಿದೆ?

ನಿನ್ನಲ್ಲಿ ಉತ್ತರವನ್ನು ನಾನು ಇದುವರೆಗೆ ಕೇಳಿಲ್ಲ. ಆ ಬಳಿಕ ಒಂದು ಬಾರಿಯೂ ನಾವು ಮಾತನಾಡಿಲ್ಲ. ಅದೇಗೋ ನಿನ್ನ ಮದುವೆ ಸಮಾರಂಭದ ಚಿತ್ರಗಳನ್ನು ನಾನು ನೋಡಿದ್ದೆ. ರೇಷ್ಮೆ ಸೀರೆ ಸುತ್ತಿದ್ದ ನಿನ್ನನ್ನು ಮೊದಲ ಬಾರಿ ಸೀರೆಯಲ್ಲಿ ಕಂಡಿದ್ದ ನಾನು ಆ ಸೌಂದರ್ಯವನ್ನು ಹಾಡಿ ಹೊಗಳಬಲ್ಲೆ. ಆದರೆ ಆ ಹಕ್ಕನ್ನು ನಾನಿಂದು ಕಳೆದುಕೊಂಡಿದ್ದೇನೆ ಎಂದು ಅತ್ಯಂತ ನೋವಿನಿಂದ ಹೇಳಿದರೂ, ನಿನ್ನಲ್ಲಿ ಮಾತನಾಡಬೇಕೆಂದು ಮನಸ್ಸು ಹೇಳುತ್ತಿದೆ. ಆದರೆ ಅದು ಅಸಾಧ್ಯ ಎಂದು ಗೊತ್ತಿದ್ದರೂ ನನ್ನ ಮನಸ್ಸೊಪ್ಪುತ್ತಿಲ್ಲ. ನಿನ್ನ ನೋಡಬೇಕು, ನಿನ್ನಲ್ಲಿ ಜಗಳವಾಡಬೇಕೆಂದು ಮನಸ್ಸು ಸಾರಿ ಹೇಳುತ್ತಿದ್ದರೂ, ವಿಧಿ ತನ್ನದೇ ಆಟವಾಡಿದೆ.

ಅಪ್ಪ, ಅಮ್ಮ; ನಾನು ನಿಜವಾಗಿಯೂ ಇದೇ ಕಾರಣಕ್ಕಾಗಿ ಊರಿಗೆ ಬಂದಿಲ್ಲ...ಬರುವ ಯೋಚನೆ ಕೂಡ ಮಾಡಿಲ್ಲ :-(

Thursday, 27 November 2008

ನಿಜವಾದ ಭಯೋತ್ಪಾದಕರು ಯಾರು?


ಬಹುಶಃ ಕಳೆದ ರಾತ್ರಿ ಮುಂಬೈಯ ಬಹುತೇಕ ಮಂದಿಗೆ ಕಂಡೂ ಕೇಳರಿಯದ ಕರಾಳ ರಾತ್ರಿ. ಗುಜರಾತ್‌ನಿಂದ ಮೀನುಗಾರರ ದೋಣಿಯಲ್ಲಿ ಜಲಮಾರ್ಗದ ಮೂಲಕ ರಾಜಾರೋಷವಾಗಿ ಮುಂಬೈ ನಗರಿಗೆ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು, ಹಲವು ನಾಗರಿಕರನ್ನು ಹತ್ಯೆಗೈದದ್ದು ಮಾತ್ರವಲ್ಲ, ಇಡೀ ಮುಂಬೈ ನಗರವೇ ತತ್ತರಿಸುವಂತೆ ಮಾಡಿದ್ದಾರೆ.

ಮಾಲೇಗಾಂವ್ ಸ್ಫೋಟದ ಬಳಿಕ ಎರಡನೇ ಬಾರಿ ಉಗ್ರರು ಮುಂಬೈ ನಗರವನ್ನು ಗುರಿಯಾಗಿಸಿದ್ದಾರೆ. ಭಾರತದ ಪ್ರಮುಖ ವಾಣಿಜ್ಯ ನಗರಿ ಉಗ್ರರ ದಾಳದಲ್ಲಿ ಸಿಲುಕಿದೆ. ಎಟಿಎಸ್ ಪಡೆಯ ಮುಖ್ಯಸ್ಥ ಹಾಗೂ ಮಾಲೇಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಕರ್ಕರೆ ಅವರು ಉಗ್ರರೊಂದಿಗಿನ ಹೋರಾಟದಲ್ಲಿ ಬಲಿಯಾಗಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಸಲಾಸ್ಕರ್ ತಮ್ಮ
ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿಯಾಗಿದೆ. ಮತ್ತೊಬ್ಬ ಪೊಲೀಸ್ ಅಮಿತ್ ಕಾಮ್ಟೆ ಅವರೂ ಜೀವ ತೆತ್ತಾಗಿದೆ... ಒಟ್ಟು ಈಗಾಗಲೇ ೧೯ ಪೊಲೀಸರು ಉಗ್ರರೊಂದಿಗಿನ ಕಾಳಗದಲ್ಲಿ ಮೃತಪಟ್ಟಾಗಿದೆ ಎಂದು ವರದಿಯಾಗಿದೆ. ನೂರಾರು ಮಂದಿ ನಾಗರಿಕರು ದಾಳಿಗೆ ಸಿಲುಕಿ, ಹಲವಾರು ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.

ದೆಹಲಿಯಲ್ಲಿರುವ ನಾವು ಮುಂಜಾನೆ ಟಿವಿ ನೋಡುತ್ತಿದ್ದಾಗ ಮುಂಬೈ ಹೊತ್ತಿಉರಿಯುತ್ತಿರುವುದು ಸ್ಪಷ್ಟವಾಗಿತ್ತು. ಉಗ್ರರು ನೂರಾರು ಮಂದಿ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ತಾಜ್ ಹೋಟೆಲ್ ಹೊರಗೆ ಕಾಣುತ್ತಿದ್ದ ದೃಶ್ಯಗಳೆಲ್ಲಾ ಹೃದಯಕಲಕುವಂತಿದ್ದವು. ಪೊಲೀಸರ ವಾಹನವನ್ನೇ ಹೈಜಾಕ್ ಮಾಡಿದ ಉಗ್ರರು ಕಾರಿನೊಳಗಿಂದಲೇ ಗುಂಡಿನ ದಾಳಿ ನಡೆಸುತ್ತಿದ್ದ ದೃಶ್ಯ ಆಧುನಿಕ ಜಗತ್ತಿನ ರಕ್ಕಸರು ರುದ್ರ ನರ್ತನ ನಡೆಸುತ್ತಿರುವಂತಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಯೋಚಿಸದೆ ಪೊಲೀಸರು ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸುತ್ತಿದ್ದರು.

ಆದರೆ ಇಷ್ಟೆಲ್ಲಾ ಆಗುತ್ತಿರುವಾಗ ನಮ್ಮ ಮನೆಯ ಹೊರಗಿನಿಂದ ಜಯಘೋಷಗಳ ಸದ್ದು ಕೇಳಿಬರುತ್ತಿತು. ದೆಹಲಿಯಲ್ಲಿ ಇನ್ನೊಂದು ದಿನದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಯಾವುದೋ ಪಕ್ಷದ ಕಾರ್ಯಕರ್ತರು ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗೇ ಅಟ್ಟಹಾಸದ ಮೂಲಕವೇ ನಡೆಸುತ್ತಿದ್ದರು. ಅದೇ ಹೊತ್ತಿಗೆ ನನ್ನ ಮೊಬೈಲ್ ಒಂದು ಮೆಸೇಜ್ ಕೂಡ ಬಂತು. ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನೆಷ್ಟು ಹೆಣಗಳು ಉರುಳುತ್ತವೋ ಎಂಬುದನ್ನು ನಾವು ಕಾದುನೋಡಬೇಕಷ್ಟೆ ಎಂದೆಲ್ಲಾ ಮೆಸೇಜ್ ತುಂಬಿಹೋಗಿತ್ತು. ಸರಿ ಆ ಮೆಸೇಜ್ ಒತ್ತಟ್ಟಿಗಿರಲಿ, ಇದುವೆರೆಗೆ ಮಾಧ್ಯಮಗಳಲ್ಲಿ ನೋಡಿದ್ದ ಕೆಸರೆರೆಚಾಟಗಳನ್ನು ಎಸ್‌ಎಂಎಸ್‌ನಲ್ಲೂ ಓದುವ ದುರ್ಗತಿ ಬಂತೇ ಎಂದು ಆಶ್ಚರ್ಯವಾಯಿತು. ಹೌದು ಇನ್ನೆರಡು ದಿನಗಳಲ್ಲಿ ಚುನಾವಣೆ ಇರುವಾಗ ಮುಂಬೈನಲ್ಲಿ ಉಗ್ರರ ದಾಳಿಯಿಂದ ನಡುಗಿ ಹೋಗಿದ್ದರೆ, ಪ್ರತಿ ಪಕ್ಷಗಳಿಗೆ ಇದಕ್ಕಿಂತ ಸಂತೋಷದ ಸುದ್ದಿ ಬೇರೇನಿದೆ ತಾನೆ? ಚುನವಣಾ ಪ್ರಚಾರದಾದ್ಯಂತ ಇದು ಆಡಳಿತ ಸರ್ಕಾರದ ವೈಫಲ್ಯ ಎಂದು ಅದನ್ನೇ ಎತ್ತಿಹಿಡಿಯುತ್ತಾ, ಇಂತಹ ಬರ್ಬರ ಸ್ಥಿತಿಯಲ್ಲೂ ಅದನ್ನೇ ಚುನಾವಣಾ ಅಸ್ತ್ರವನ್ನಾಗಿ, ಜನಸಾಮಾನ್ಯರನ್ನು ಓಲೈಸುವ ಈ ಕೀಳು ಮಟ್ಟದ ರಾಜಕೀಯ ಫುಡಾರಿಗಳು ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ, ನಮ್ಮ ದೇಶದ ಅಮಾಯಕರು ಇನ್ನೆಷ್ಟು ಜನರು ನೆತ್ತರ ಹೊಳೆಯನ್ನು ಹರಿಸಬೇಕಿದೆ ಎಂಬೆಲ್ಲಾ ಕರಾಳ ಪ್ರಶ್ನೆಗಳು ಮನದಲ್ಲಿ ಮೂಡದೇ ಇರಲಿಲ್ಲ. ಮೊನ್ನೆತಾನೆ ಮಾಲೇಗಾಂವ್ ಸ್ಫೋಟ ಸಂಭವಿಸಿ ಇಡೀ ಮಹಾರಾಷ್ಟ್ರವೇ ನಲುಗಿಹೋಗಿತ್ತು. ಉಗ್ರ ನಿಗ್ರಹ ದಳ ನಡೆಸಿದ ತನಿಖೆ ಮೂಲಕ ಕೆಲವು ಸ್ವಯಂಘೋಷಿತ ಸ್ವಾಮೀಜಿಗಳು ಈ ಉಗ್ರಕೃತ್ಯವನ್ನು ನಡೆಸಿದ್ದು ಎಂದು ತಿಳಿದು ಬಂದ ಕೂಡಲೇ ಕಾಂಗ್ರೆಸ್‌ನ ಹಲವು ಮಂದಿಯಲ್ಲಿ ಹರ್ಷದ ಹೊನಲು ಮೂಡಿತ್ತು. ಇನ್ನೇನು ಸಾರ್ವತ್ರಿಕ ಚುನಾವಣೆ ದೂರದಲ್ಲೇನಿಲ್ಲ. ಹಾಗೇ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿದ್ದ ಕಾರಣ ಕಾಂಗ್ರೆಸ್ ಮಂದಿಗೆ ‘ಹಿಂದೂ ಭಯೋತ್ಪಾದನೆ’ಯೇ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ಇಷ್ಟು ದಿನಗಳ ಕಾಲ ‘ಇಸ್ಲಾ ಭಯೋತ್ಪಾದನೆ’ ಎಂದು ಬೊಬ್ಬಿಡುತ್ತಿದ್ದ ಮಂದಿಯ ವಿರುದ್ಧ ಧ್ವನಿಯೆತ್ತಲು ಕಾಂಗ್ರೆಸ್ ಇದು ದೊಡ್ಡ ಉಡುಗೊರೆಯಾಗೇ ದೊರೆಯಿತು.

ಒಟ್ಟಾರೆ ಭಯೋತ್ಪಾದಕರೆಂಬ ಆಧುನಿಕ ಯುಗದ ರಾಕ್ಷಸರ ನಡುವೆ, ಜಡ ವ್ಯವಸ್ಥೆಗೆ ಅಂಟಿಕೊಂಡು ನಾಚೆಕೆಗೇಡಿನ ರಾಜಕೀಯದ ನಡುವೆ, ಬರೀ ಸ್ವಾರ್ಥ, ಅಧಿಕಾರ ದಾಹದಿಂದ ಯಾರ ಬೆನ್ನಿಗೂ ಚೂರಿ ಹಾಕಲು ತಯಾರಾಗಿರುವ, ಜನಸಾಮಾನ್ಯ ಧ್ವನಿಯಗಿರುತ್ತೇವೆ ಎಂದು ಪ್ರಮಾಣ ವಚನ ಮಾಡಿ, ಜನಸಾಮಾನ್ಯರಿಗೆ ಧ್ವನಿ ಎತ್ತದಂತೇ ಮಾಡುವ, ಐದು ವರ್ಷದುದ್ದಕ್ಕೂ ತಮ್ಮ ಜೇಬನ್ನು ಬೇಕಾದಷ್ಟು ತುಂಬಿಸಿ, ದೇಶದ ನಿರ್ಗತಿಕ ಮಂದಿಯ ಜೀವದೊಂದಿಗೆ ಪ್ರತಿದಿನ, ಪ್ರತಿಕ್ಷಣವೂ ಆಟವಾಡುವ ಜಗತ್ತಿನ ಅತಿಕೆಟ್ಟ, ಅತ್ಯಂತ ಹೇಸಿಗೆಯ ಜೀವನ ನಡೆಸುತ್ತಿರುವ ಮಹಾನ್ ರಾಜಕಾರಣಿಗಳ ನಡುವೆ ಇಂದು ನಾವು ಬದುಕುತ್ತಿದ್ದೇವೆ.

ಕಳೆದ ಆರೇಳು ತಿಂಗಳಿನಿಂದ ಇಡೀ ರಾಷ್ಟ್ರವೇ ಭಯೋತ್ಪಾಕರ ನಿರಂತರ ದಾಳಿಯಿಂದ ಕಂಗೆಟ್ಟುಹೋಗಿದ್ದರೂ, ಯಾವೊಬ್ಬ ಜನಪ್ರತಿನಿಧಿ ಕೂಡ ಜನಸಾಮಾನ್ಯನ ಬದುಕಿನ ಬಗ್ಗೆ ಯೋಚಿಸಿಲ್ಲ. ದಾಳಿಗಳಲ್ಲಿ ಗಾಯಗೊಂಡ, ಮೃತಪಟ್ಟ ಮಂದಿಯ ಕುಟುಂಬಕ್ಕೆ ಸಾವಿರಗಟ್ಟಲೆ ಸಹಾಯಧನ ಘೋಷಿಸಿ, ಅದನ್ನೂ ನೀಡದೇ, ಈಗ ಮತ್ತೊಂದು ಉದ್ರ ದಾಳಿ ನಡೆದಾಗ ಮತ್ತೆ ಅದೇ ರಾಗ ಎಳೆಯುತ್ತಿದ್ದಾರೆ. ಅತ್ತ ಮುಂಬೈನಲ್ಲಿ ಅಮಾಯಕ ಮಂದಿಯ ಮಾರಣಹೋಮವಾಗುತ್ತಿದ್ದರೆ ಇತ್ತ ರಾಜಕೀಯ ಫುಡಾರಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸದ್ಯ ಬಿಜೆಪಿ, ಕಾಂಗ್ರೆಸ್ ಇಬ್ಬರಿಗೂ ಭಯೋತ್ಪಾದನೆಯೇ ಚುನಾವಣೆಯ ಪ್ರಮುಖ ಅಸ್ತ್ರ. ಆದರೆ ಇವರ ‘ಬ್ಲೇಮ್ ಗೇಮ್’ನ ಮಧ್ಯೆ ನರಳುತ್ತಿರುವವರು ಏನೂ ಅರಿಯದ ಅಮಾಯಕರು. ಈಗ ಹೇಳಿ ನಿಜವಾದ ಭಯೋತ್ಪಾದಕರು ಯಾರೆಂಬುದನ್ನು?