ಬಹಿಷ್ಕೃತರ ಬದುಕಿನ ಬೆಳಕಿಂಡಿ
ಲೈಂಗಿಕ ಕಾರ್ಯಕರ್ತರೇ ನಡೆಸುವ ವಿಶಿಷ್ಟ ಹೊಟೇಲ್ ಅರಮನೆಗಳ ನಗರಿ ಮೈಸೂರಿನಲ್ಲಿದೆ. ಅಲ್ಲಿಗೆ ಇತ್ತೀಚಿಗೆ ಭೇಟಿ ನೀಡಿದ್ದೆ.
ಬೆಳಗ್ಗಿನ ಉಪಾಹಾರಕ್ಕೆಂದು ಆ ಹೊಟೇಲ್ ಒಳಗಡೆ ಕಾಲಿಡುತ್ತಿದ್ದಂತೆ, ಎದುರಿಗಿದ್ದ ದೃಶ್ಯ ಸಾಮಾನ್ಯವಾಗಿರಲಿಲ್ಲ. ಹೊಟೇಲ್ ಎದುರುಭಾಗದಲ್ಲೇ ಕುಳಿತಿದ್ದ ಕ್ಯಾಶಿಯರ್ ಗ್ರಾಹಕರನ್ನು ಸ್ವಾಗತಿಸುತ್ತಿದ್ದದ್ದು, ಸರ್ವರ್‌ಗಳು ತಿಂಡಿ-ತಿನಿಸುಗಳನ್ನು ಪೂರೈಸಲು ಸಜ್ಜುಗೊಂಡದ್ದು, ಅಂತೆಯೇ ಬಾಣಸಿಗರು ಎಲ್ಲಾ ತಿಂಡಿ-ತಿನಿಸುಗಳೊಂದಿಗೆ ಸಿದ್ಧಗೊಂಡಿದ್ದದ್ದು ಹೊಟೇಲ್‌ವೊಂದರಲ್ಲಿ ಕಂಡುಬರುವಂತಹ ಸಾಮಾನ್ಯ ದೃಶ್ಯವೇ ಆಗಿತ್ತು. ಆದರೆ ಈ
ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದ ಕಾರ್ಮಿಕರು ಮಾತ್ರ ಸಾಮಾನ್ಯರಾಗಿರಲಿಲ್ಲ. ಸಮಾಜದಲ್ಲೆದುರಾಗಿದ್ದ ಎಲ್ಲಾ ಅಡೆತಡೆಗಳನ್ನು ಹಿಂದಿಕ್ಕಿ ಮುನ್ನುಗ್ಗಿದ ಆ ಕಾರ್ಮಿಕರು ನಿಜಕ್ಕೂ ಅಸಾಮಾನ್ಯರಾಗೇ ಕಂಡುಬಂದಿದ್ದರು.
ವಿಶ್ವವಿಖ್ಯಾತ ಐತಿಹಾಸಿಕ ಮೈಸೂರು ಅರಮನೆಯ ಹಿಂದಿನ ರಸ್ತೆಯ ಅಂತಿಮ ತಿರುವಿನಲ್ಲಿ ನೆಲೆಗೊಂಡಿರುವ ಹೊಟೇಲ್ ’ಆಶೋದಯ’ ಈ ಎಲ್ಲಾ ವಿಭಿನ್ನ, ಅಪರೂಪದ ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಗಿದೆ. ಪುರುಷ-ಸ್ತ್ರೀ ಲೈಂಗಿಕ ಕಾರ್ಯಕರ್ತೆಯರು, ಲಿಂಗಪರಿವರ್ತಿತರು ಮತ್ತು ಮಂಗಳಮುಖಿಯರು ಈ ಹೊಟೇಲ್‌ನ ಕಾರ್ಮಿಕರು! ಈ ಹೊಟೇಲನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ಅವರದ್ದೇ. ಇಲ್ಲಿ ಲೈಂಗಿಕ ಕಾರ್ಯಕರ್ತರ ಜೊತೆಗೆ ಸಾಮಾನ್ಯ ವರ್ಗದ ಜನರು ಕೂಡ ಸರ್ವರ್, ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಸಮಾಜದಿಂದ ಹೊರತಳ್ಳಲ್ಪಟ್ಟ, ಬಹಿಷ್ಕಾರಕ್ಕೊಳಗಾದ ಲೈಂಗಿಕ ಕಾರ್ಯಕರ್ತರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆಶೋದಯ ಎಂಬ ಹೆಸರಿಗೆ ತಕ್ಕಂತೆ ತುಳಿತಕ್ಕೊಳಗಾದ ವರ್ಗದ ಭರವಸೆಯ ಆಶಾಕಿರಣವೇ ‘ಹೊಟೇಲ್ ಆಶೋದಯ.’
ಲೈಂಗಿಕ ಕಾರ್ಯಕರ್ತರೂ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದಲೇ ಆರಂಭವಾದ ’ಆಶೋದಯ’ ಎಂಬ ಸರ್ಕಾರೇತರ ಸಂಸ್ಥೆಯ ಕೂಸು ಈ ’ಹೊಟೇಲ್ ಆಶೋದಯ’. ಸಾಮಾನ್ಯರಂತೆ ನಾವು ಕೂಡ ಹೊಟೇಲ್ ಉದ್ಯಮ ಆರಂಭಿಸಿ ಏಕೆ ನಮ್ಮ ಸಮುದಾಯದ ಜನರಿಗೆ ಹಾಗೂ ಸಾರ್ವಜನಿಕ ವರ್ಗಕ್ಕೆ ನೆರವಾಗರಬಾರದು ಎಂದುಕೊಂಡು ಈ ಹೊಟೇಲನ್ನು ಆರಂಭಿಸಿದೆವು ಎಂದು ವಿವರಣೆ ನೀಡಿದರು ಲೈಂಗಿಕ ಕಾರ್ಯಕರ್ತ ಮತ್ತು ಆಶೋದಯ ಸಂಸ್ಥೆ ಸದಸ್ಯ ಪ್ರಕಾಶ್. ಹೊಟೇಲ್ ಪ್ರಾರಂಭವಾದಲ್ಲಿಂದ ಕ್ಯಾಶಿಯರ್ ಜವಾಬ್ದಾರಿ ಪ್ರಕಾಶ್ ಹೆಗಲ ಮೇಲಿತ್ತಾದರೂ, ಆಶೋದಯದ ಅಂಗ ಸಂಸ್ಥೆ ‘ಅಮೂಲ್ಯ ಜೀವನ್ ನೆಟ್‌ವರ್ಕ್’ನಲ್ಲಿ ಬಿಡುವಿಲ್ಲದ ಕೆಲಸಗಳಿದ್ದ ಕಾರಣ ಕ್ಯಾಶಿಯರ್ ವ್ಯವಹಾರಗಳನ್ನು ಸಾರ್ವಜನಿಕ ವರ್ಗದ ಹಿರಿಯ ನಾಗರಿಕ ತಿಮ್ಮಯ್ಯ ಆಚಾರ್ ಅವರು ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಪ್ರಕಾಶ್ ಕೆಲವೊಮ್ಮೆ ಬಂದು ಕ್ಯಾಶಿಯರ್ ಕೆಲಸ ಮಾಡುವುದರ ಜೊತೆಗೆ, ಸಾಂಬಾರ್ ಹಂಡೆಯಲ್ಲಿ ಸೌಟು ಅಲ್ಲಾಡಿಸುವುದುಂಟು!
ಮುಂಜಾನೆಯಂದ ಸಂಜೆ ೫ ಅಥವಾ ೫.೩೦ರ ತನಕ ಆಶೋದಯ ಹೊಟೇಲ್ ಹಾಗೂ ಕಚೇರಿ ತೆರೆದಿರುತ್ತದೆ. ಆ ಬಳಿಕ ಇಲ್ಲಿನ ಲೈಂಗಿಕ ಕಾರ್ಯಕರ್ತರು ತಮ್ಮ ವೃತ್ತಿಗೆ ತೆರಳುತ್ತಾರೆ. ಹೊಟೇಲ್‌ನಲ್ಲಿ ಕಾರ್ಯ ನಿರ್ವಹಿಸುವ ಒಟ್ಟು ಎಂಟು ಮಂದಿಯಲ್ಲಿ ಐವರು ಲೈಂಗಿಕ ಕಾರ್ಯಕರ್ತರಾಗಿದ್ದು ಹೊಟೇಲ್ ಕೆಲಸಗಳನ್ನು ಒಂದು ಸೇವೆಯಾಗಿ ಸ್ವೀಕರಿಸಿದ್ದಾರೆ. ಇನ್ನುಳಿದ ಮೂರು ಮಂದಿ ಸಾರ್ವಜನಿಕ ವರ್ಗದವರಾಗಿದ್ದು, ಹೊಟೇಲ್ ಕೆಲಸವೇ ಅವರ ವೃತ್ತಿ. ಈ ಎಲ್ಲಾ ಕಾರ್ಮಿಕರು ದಿನಗೂಲಿಯನ್ನೇ ಪಡೆಯುತ್ತಿದ್ದಾರೆ. ಉತ್ತಮ ಲಾಭ ಕಂಡುಬಂದಲ್ಲಿ ಅವರ ಆದಾಯ ಮಟ್ಟವೂ ಏರುತ್ತದೆ.
ಲೈಂಗಿಕ ಕಾರ್ಯಕರ್ತರ ಮೇಲಿನ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶ ಮತ್ತು ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದೇ ವೇದಿಕೆಗೆ ತರುವ ಮಹತ್ವಾಕಾಂಕ್ಷೆ ೨೦೦೪ರಲ್ಲಿ ಆಶೋದಯ ಸಂಸ್ಥೆಯ ಹುಟ್ಟಿಗೆ ನಾಂದಿ ಹಾಡಿತು.
ಡಾ. ಸುಶೇನಾ, ಡಾ. ಸುಂದರ್ ರಾಮನ್, ಸೆಂಥಿಲ್ ಹಾಗೂ ಕಾವೇರಿ ಎಂಬ ನಾಲ್ಕು ಮಂದಿ ನಮ್ಮ ಪ್ರಧಾನ ಸಮಿತಿಯಲ್ಲಿದ್ದರು. ಆರಂಭದಲ್ಲಿ ನಾವೇ ಕೆಲವು ಲೈಂಗಿಕ ಕಾರ್ಯಕರ್ತರು ಈ ಸಂಸ್ಥೆಯಲ್ಲಿದ್ದೆವು ಮತ್ತು ಸಾಮಾನ್ಯ ಸಮುದಾಯದ ಕೆಲವರು ತಾಂತ್ರಿಕ ನೆರವು ನೀಡುತ್ತಿದ್ದರು. ದಿನ ಸಾಗಿದಂತೆ ಮೈಸೂರಿನ ಹಲವು ಲೈಂಗಿಕ ಕಾರ್ಯಕರ್ತ/ರ್ತೆಯರು ನಮ್ಮ ಸಂಸ್ಥೆ ಸೇರಲಾರಂಭಿಸಿದರು ಎಂದು ವಿವರಿಸಿದರು ಆಶೋದಯದ ಉಪ ನಿರ್ದೇಶಕ, ಹೊಟೇಲ್ ಯೋಜನೆಯ ಸಂಯೋಜಕ ಮತ್ತು ಲೈಂಗಿಕ ಕಾರ್ಯಕರ್ತ ಅಕ್ರಂ ಪಾಶಾ.
ಆಶೋದಯ ಅಕ್ಯಾಡೆಮಿಯಲ್ಲಿ ಪಾಶಾ ಅವರು ಶೈಕ್ಷಣಿಕ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವೈಯಕ್ತಿಕ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿನ ಮಹಿಳಾ, ಲಿಂಗಪರಿವರ್ತಿತ ಹಾಗೂ ಪುರುಷ ಲೈಂಗಿಕ ಕಾರ್ಯಕರ್ತರಿಗೆ ಏಡ್ಸ್ ತಡೆಗಟ್ಟುವ ಕುರಿತಾದ ಆರೋಗ್ಯ, ಕಾನೂನು ವಿಚಾರ ಹಾಗೂ ಕೌಶಲ್ಯವೃದ್ಧಿಗೆ ತರಬೇತಿ ನೀಡುತ್ತೇವೆ ಎನ್ನುತ್ತಾರೆ ಪಾಶಾ.
ಏಡ್ಸ್ ಮಹಾಮಾರಿ ಹರಡದಂತೆ ಸಂರಕ್ಷಣಾ ಸೂತ್ರಗಳನ್ನು ಬಳಸಿಕೊಂಡೇ ವೇಶ್ಯಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳುವ ಇಲ್ಲಿನ ಸದಸ್ಯರು, ಕಾಂಡೊಮ್ ಬಳಸದೆ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ಇಲ್ಲಿನ ಕಾರ್ಯಕರ್ತರು ಪಾಲ್ಗೊಳ್ಳುವುದಿಲ್ಲ ಎಂದು ವಾದಿಸುತ್ತಾರೆ. ೨೦೦೪ರಲ್ಲಿ ನಮ್ಮ ಸಂಸ್ಥೆ ಮೂಲಕ ಏಡ್ಸ್ ಪ್ರಮಾಣದ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಅಂದು ಕಂಡುಬಂದಿದ್ದ ಪ್ರಮಾಣ ಯಾವುದೇ ಕಾರಣಕ್ಕೆ ಏರಿಕೆಯಾಗಬಾರದು ಎಂದು ನಾವಂದುಕೊಂಡಿದ್ದೆವು. ನಾವು ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟಿಎಸ್‌ಐ ಜೊತೆ ಆಶೋದಯ ಸಂಸ್ಥೆ ತಾಂತ್ರಿಕ ಸಲಹೆಗಾರ್ತಿ ಫಾತಿಮಾ ಅವರು ಮಾಹಿತಿ ಹಂಚಿಕೊಂಡರು.
ಹೊಟೇಲ್ ಉದ್ಯಮದಿಂದ ಬರುವ ಹೆಚ್ಚಿನ ಹಣವನ್ನು ಆಶೋದಯದ ’ಕೇರ್ ಹೋಂ’ ನಿರ್ವಹಣೆಗೆಂದು ಮೀಸಲಿಡಲಾಗುತ್ತದೆ. ಹೊಟೇಲ್ ಆರಂಭವಾದಂದಿನಿಂದ ಇಂದಿನವರೆಗೆ ಇಲ್ಲಿನ ಹಣವನ್ನು ನಾವು ಶೋಷಿತ ಲೈಂಗಿಕ ಕಾರ್ಯಕರ್ತರ ನೆರವಿಗಾಗಿ ಬಳಸಿಕೊಂಡಿದ್ದೇವೆ. ಹಲವು ಅನಾರೋಗ್ಯ ಪೀಡಿತ ಕಾರ್ಯಕರ್ತರು ನಮ್ಮ ಕೇರ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೊಂದು ಬಾರಿ ವೈದ್ಯರು ಕೇರ್ ಹೋಮ್‌ಗೆ ಭೇಟಿ ನೀಡುತ್ತಿರುತ್ತಾರೆ. ಬಡ ಲೈಂಗಿಕ ಕಾರ್ಯಕರ್ತರಿಗೆ ಕೇರ್ ಹೋಮ್ ಹೊಸ ಬದುಕನ್ನು ಒದಗಿಸಿದೆ ಎಂದು ಆಶೋದಯದ ಕಾರ್ಯವಿಸ್ತರಣೆ ಕುರಿತು ಲೈಂಗಿಕ ಕಾರ್ಯಕರ್ತೆ ನಾಗರತ್ನಮ್ಮ ಅವರು ಮಾಹಿತಿ ನೀಡಿದರು. ಮಂಡ್ಯ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಕೇರ್ ಹೋಮ್ ಕಾರ್ಯ ನಿರ್ವಹಿಸುತ್ತಿದೆ.
ಲೈಂಗಿಕ ಕಾರ್ಯಕರ್ತೆ ಶಶಿಕಲಾ ಅವರಿಗೆ ಆಶೋದಯ ಸೇರುವ ಮುನ್ನ ಕಾಂಡೊಮ್ ಎಂದರೆ ಏನೆಂದೇ ತಿಳಿದಿರಲಿಲ್ಲ. ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಬಳಸಲಾಗುವ ವಿಧಾನಗಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಆದರೆ ಆಶೋದಯ ಸೇರಿದ ಬಳಿಕ ನನಗೆ ಕಾಂಡೊಮ್ ಬಗ್ಗೆ ಅರಿವು ಮೂಡಿಸಿದರು. ಮೊದಲೆಲ್ಲಾ ನಮ್ಮ ಗ್ರಾಹಕರು ಕರೆದ ಕೂಡಲೇ ನಾನು ವೇಶ್ಯಾವಾಟಿಕೆಗೆ ತೆರಳುತ್ತಿದ್ದೆ ಎಂದು ಆಶೋದಯದಿಂದಾದ ಪ್ರಯೋಜನದ ಬಗ್ಗೆ ಶಶಿಕಲಾ ಹೇಳಿಕೊಂಡರು. ಒಂದು ವೇಳೆ ತಮ್ಮ ಗಿರಾಕಿಗಳಲ್ಲಿ ಕಾಂಡೊಮ್ ಇಲ್ಲ ಎಂದಾದರೆ ಈ ಕಾರ್ಯಕರ್ತರೇ ಕಾಂಡೊಮ್ ಇಟ್ಟುಕೊಂಡಿರುತ್ತಾರೆ. ಕಾಂಡೊಮ್ ಬಳಕೆ ಬೇಡ ಎಂದರೆ ನಾವು ಸೆಕ್ಸ್‌ಗೆ ಒಪ್ಪುವುದಿಲ್ಲ ಎನ್ನುತ್ತಾರೆ ಅವರು.
ಹೊಟೇಲ್ ಆಶೋದಯದಲ್ಲಿ ಗ್ರಾಹಕರಿಗೆ ಉಣಬಡಿಸುವ ಜೊತೆಗೆ ಕ್ಯಾಟರಿಂಗ್ ಸೇವೆಯನ್ನೂ ಒದಗಿಸಲಾಗುತ್ತಿದೆ. ಹಲವು ವಿದ್ಯಾಸಂಸ್ಥೆಗಳು, ಪಾಲಿಕೆ ಕಚೇರಿ ಹಾಗೂ ವಿವಿಧ ಕಂಪನಿಗಳಿಗೆ ಇಲ್ಲಿಂದ ಆಹಾರಗಳನ್ನು ಪೂರೈಸಲಾಗುತ್ತಿದೆ. ಅವರ ಈ ಸೇವೆಗೆ ಉತ್ತಮ ಪ್ರತಿಕ್ರಿಯೆಯೂ ಕೇಳಿಬಂದಿದೆ.
ಆರಂಭದ ದಿನಗಳಲ್ಲಿ ಕೇವಲ ಲೈಂಗಿಕ ಕಾರ್ಯಕರ್ತರೇ ಹೊಟೇಲ್ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆದರೆ ಹೊಟೇಲ್‌ನ್ನು ಸಾರ್ವಜನಿಕ ವರ್ಗ ಒಪ್ಪುತ್ತಿದ್ದಂತೆಯೇ ಕೆಲವರು ಇಲ್ಲಿ ಕೆಲಸಕ್ಕಾಗಿ ಮುಂದೆ ಬಂದರು. ಇದು ನಿಜಕ್ಕೂ ನಮ್ಮಲ್ಲಿ ಅಚ್ಚರಿ ತಂದಿತ್ತು. ಸಾರ್ವಜನಿಕ ಹಾಗೂ ಲೈಂಗಿಕ ಕಾರ್ಯಕರ್ತರ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಹೊಟೇಲ್ ಆಶೋದಯದ ಪಾತ್ರ ಬಹುದೊಡ್ಡದು ಎಂದು ಉದ್ಯಮವನ್ನು ಕೊಂಡಾಡಿದರು ಹಿರಿಯ ಸದಸ್ಯೆ ರತ್ನಮ್ಮ. ಮೊದಲು ರತ್ನಮ್ಮ ಅವರೇ ಮುಂದೆ ನಿಂತು ಅಡುಗೆ ಕಾರ್ಯದಿಂದ ಹಿಡಿದು, ಹೊಟೇಲ್ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಅವರು ತಮ್ಮ ಜವಾಬ್ದಾರಿಯನ್ನು ಇತರರಿಗೂ ವಹಿಸಿ ಅವರಿಗೂ ವೇದಿಕೆ ಒದಗಿಸಿದ್ದಾರೆ. ರತ್ನಮ್ಮ ಅವರು ಆಶೋದಯದ ಮಾಜಿ ಅಧ್ಯಕ್ಷೆ ಕೂಡ. ಸದ್ಯ ಯಶೋಧ ಅವರು ಸಂಸ್ಥೆಯಲ್ಲಿ ನಡೆದ ಚುನಾವಣೆ ಮೂಲಕ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಆಶೋದಯ ಹೊಟೇಲ್ ಕಟ್ಟಡದ ಮೇಲ್ಭಾಗದಲ್ಲೇ ಆಶೋದಯ ಸಂಸ್ಥೆಯ ಕಚೇರಿಯಿದ್ದು, ಹೆಚ್ಚಿನೆಲ್ಲಾ ಸದಸ್ಯರು ದಿನಂಪ್ರತಿ ಇಲ್ಲಿಗೆ ಭೇಟಿ ನೀಡಿ ತಮ್ಮ ಅನುಭವ, ನೋವು, ಭಾವನೆ ಹಾಗೂ ಸಮಸ್ಯೆಗಳನ್ನು ಸಂಸ್ಥೆಯ ಇತರ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಈ ವಿಚಾರ ವಿನಿಮಯದಿಂದಾಗಿ ಕಾರ್ಯಕರ್ತರ ಹಲವು ಸಮಸ್ಯೆಗಳಿಗೆ ಪರಿಹಾರ ಪ್ರಾಪ್ತಿಯಾಗಿದೆ. ತಮ್ಮ ಸಂಗಾತಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಕೂಡ ಲೈಂಗಿಕ ಕಾರ್ಯಕರ್ತರು ನಿವಾರಿಸಿಕೊಳ್ಳುವಲ್ಲಿ ಆಶೋದಯ ಸಹಕಾರಿಯಾಗಿದೆ ಎಂದು ಸದಸ್ಯರು ನೆನೆಸಿಕೊಳ್ಳುತ್ತಾರೆ. ಆಶೋದಯದ ಮೂಲಕ ಹೊಸಬದುಕನ್ನು ಕಂಡುಕೊಂಡಿರುವ ಹಲವು ಕಾರ್ಯಕರ್ತರು ಇಂದು ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ ಎಂಬುದು ಇಲ್ಲಿನ ಅಚ್ಚರಿಗಳಲ್ಲೊಂದು. ಮೈಸೂರಿನಲ್ಲಿರುವ ಒಂದು ಆಶೋದಯ ದೇಶದ ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ತಲುಪಲು ಸಾಧ್ಯವಿಲ್ಲ. ಇಂತಹ ಹಲವು ಆಶೋದಯಗಳ ಜನನವಾಗಬೇಕು ಎಂದು ಅಭಿಪ್ರಾಯಪಡುತ್ತಾರೆ ಕಾರ್ಯಕರ್ತ ಜಿನೇಂದ್ರ.
ಅನಾಥ ಮಕ್ಕಳಿಗೆ ರಕ್ಷಣೆ ನೀಡುವುದು, ಅಪರಿಚಿತ, ಅನಾಥ ಲೈಂಗಿಕ ಕಾರ್ಯಕರ್ತರು ನಿಧನ ಹೊಂದಿದಾಗ ಶವಸಂಸ್ಕಾರ ನೆರವೇರಿಸುವುದು ಸೇರಿದಂತೆ ಅಕ್ರಮ ಮಕ್ಕಳ ಸಾಗಣೆ, ಮಕ್ಕಳು (೧೮ ವರ್ಷದಿಂದ ಕೆಳಗೆ) ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ವಿರುದ್ಧವೂ ಧ್ವನಿ ಎತ್ತುವ ಕಾರ್ಯ ಆಶೋದಯ ಸದಸ್ಯರಿಂದ ನಡೆಯುತ್ತಿದೆ. ಕಳೆದ ವರ್ಷ ಭೀಕರ ಮುಸಲಧಾರೆಯಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆಂದೇ ಆಶೋದಯ ರೂ ೫೦,೦೦೦ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿತ್ತು.
ವೇಶ್ಯಾವಾಟಿಕೆ ನಮ್ಮ ವೃತ್ತಿ. ಇದನ್ನು ಸಮಾಜ ಒಪ್ಪಿಕೊಳ್ಳಬೇಕು. ಯಾರೂ ಕೂಡ ನಮ್ಮ ಮೇಲೆ ಕನಿಕರ ತೋರುವ ಅಗತ್ಯವಿಲ್ಲ. ಪ್ರಾಮಾಣಿಕ ಮಾರ್ಗದಲ್ಲೇ ನಾವು ನಮ್ಮ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಒತ್ತಾಯದ ಲೈಂಗಿಕ ಸಂಪರ್ಕಕ್ಕೆ ನಾವು ಮುಂದಾಗಿಲ್ಲ ಮತ್ತು ಯಾರ ಹಣವನ್ನೂ ಕಬಳಿಸಿಲ್ಲ ಎಂದು ಲಿಂಗಪರಿವರ್ತಿತ ಗಿರಿಜಾ ಹೇಳುತ್ತಾರೆ.
ವಿಶ್ವಬ್ಯಾಂಕ್ ನೀಡಿದ್ದ ರೂ. ೧.೫ ಲಕ್ಷ ನೆರವಿನಿಂದ ೨೦೦೮ರಲ್ಲಿ ಹೊಟೇಲ್ ಆಶೋದಯ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಲೈಂಗಿಕ ಕಾರ್ಯಕರ್ತರು ತಮ್ಮ ಮನೋಧರ್ಮವನ್ನೇ ಬದಲಿಸಿಕೊಂಡಿದ್ದಾರೆ. ಹಲವರಲ್ಲಿ ಕೀಳರಿಮೆ ಮಾಯವಾಗಿದೆ. ತಾವೂ ಸಮಾಜದ ಒಂದು ಭಾಗವಾಗಿದ್ದೇವೆ ಎಂಬ ಹರ್ಷ ರಾರಾಜಿಸುತ್ತಿದೆ. ಬದುಕನ್ನು ಕಟ್ಟುವಲ್ಲಿ ಸೋತು ಹೆಣಗಾಡುವ ಲೈಂಗಿಕ ಕಾರ್ಯಕರ್ತರಿಗೆ ಭರವಸೆಯ ಬೆಳಕಿಂಡಿಯಾಗಿರುವ ಮೈಸೂರಿನ ಆಶೋದಯ ಶೋಷಿತ ವರ್ಗಕ್ಕೆ ಹೊಸ ಬದುಕೊಂದನ್ನು ಕಟ್ಟಿಕೊಟ್ಟಿದೆ.
Friday 24 September 2010
Subscribe to:
Post Comments (Atom)
3 comments:
Very good, and nice article,,, thanks for Good informative post..
ಧನ್ಯವಾದಗಳು...
ತು೦ಬಾ ಉತ್ತಮ ಮಾಹಿತಿ, ಇ೦ತಹ ಪ್ರಯತ್ನ ಇನ್ನಷ್ಟು ಆಗಬೇಕು.
ಆಶೋದಯ ಒಂದು ಅತ್ಯುತ್ತಮ ಪ್ರಯತ್ನ. ಮಾನಸಿಕವಾಗಿ ನೊಂದವರಿಗೆ ಮನೋ ಧೈರ್ಯ ತುಂಬುವ ಪ್ರಯತ್ನ. ಈ ಬಾರಿ ಅರಮನೆ ನಗರಿಗೆ ಹೋದಾಗ ಇಲ್ಲೇ ನನ್ನ ಉಪಹಾರ.
ಮಿತ್ರರೇ, ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.
Post a Comment