Monday 27 April 2009

“ಕ್ಯಾಬರೇ ಡ್ಯಾನ್ಸ್”ಗೆ ಬೆವೆತು ಒದ್ದೆಯಾಗಿದ್ದೆ!!


‘ಕ್ಯಾಬರೇ’ ಅನ್ನೋ ಪದಕ್ಕೂ ನನಗೂ ಅವಿನಾಭಾವ ನಂಟು. ಹೈಸ್ಕೂಲ್‌ಗೆ ಹೋಗುತ್ತಿದ್ದ ಸಮಯದಲ್ಲಿ ಟಿವಿಯಲ್ಲಿ ರಾಜ್‌ಕುಮಾರ್ ಬಾಂಡ್ ಸಿನಿಮಾಗಳು ನೋಡಿದಾಗ ಅವುಗಳಲ್ಲಿ ಕ್ಯಾಬರೇ ನೃತ್ಯಗಳಿರುತ್ತಿದ್ದವು. ಆ ವಯಸ್ಸಲ್ಲಿ ಅಂತದ್ದನ್ನು ತಪ್ಪದೇ ನೋಡುತ್ತಲೂ ಇದ್ದೆ. ಈಗಲೂ ನೋಡುವುದಿಲ್ಲ ಎಂದಲ್ಲ;

ಅದಿರಲಿ, ೯ನೇ ಕ್ಲಾಸ್‌ನಲ್ಲಿದ್ದಾಗ ನನ್ನ ಈ ಕ್ಯಾಬರೇ ಪುರಾಣ ದೊಡ್ಡ ಸುದ್ದಿಯೇ ಮಾಡಿತ್ತು. ಕನ್ನಡ ತರಗತಿ ನಡೆಯುತ್ತಿದ್ದ ಸಮಯ. ಮಧ್ಯಾಹ್ನ ೩ ಗಂಟೆಗೆ ಕ್ಲಾಸ್ ಆರಂಭವಾಗಿತ್ತು. ಶಾಲೆಯಲ್ಲಿ ಕನ್ನಡ ಮಾತಾಡುವುದಕ್ಕೆ ಇದ್ದ ಏಕೈಕ ಪಿರಿಡ್ ಅದು. ಉಳಿದ ಕ್ಲಾಸ್‌ನಲ್ಲೆಲ್ಲಾ ನಾವು ಇಂಗ್ಲೀಷ್ ಮಾತಾಡಬೇಕಾದುದು ಕಡ್ಡಾಯವಾಗಿತ್ತು. ನಮ್ಮ ಕನ್ನಡ ಮಿಸ್ ಪಾಠ ಮಾಡುತ್ತಿದ್ದರು. ಆಗ ನಮ್ಮ ಸ್ಕೂಲ್ ಡೇನೂ ಹತ್ತಿರದಲ್ಲಿತ್ತು. ಪಾಠವನ್ನು ಮಧ್ಯದಲ್ಲಿ ನಿಲ್ಲಿಸಿದ ಮಿಸ್ ಒಂದೇ ಬಾರಿ ಸ್ಕೂಲ್ ಡೇ ಬಗ್ಗೆ ಮಾತಾಡತೊಗಿದರು. ನಮಗೆ ಸಿಕ್ಕಿದ್ದೇ ಅವಕಾಶ ಎಂದು ನಾವು ಹರಟೆ ಹೊಡೆಯಲಾಂಭಿಸಿದೆವು. ನಾನು ಎಡಭಾಗದ ಮುಂದಿನ ಬೆಂಚ್‌ನಲ್ಲಿ ಕೂತಿದ್ದೆ. ನಾನು ಪಾಠದ ಮಧ್ಯೆ ಡಿಸ್ಟರ್ಬ್ ಮಾಡುತ್ತಿರುತ್ತೇನೆ ಎಂದೇ ಮುಂದಿನ ಬೆಂಚ್‌ನಲ್ಲಿ ಕೂರಿಸಿದ್ದರು. ನನ್ನ ಜೊತೆ ಅನೀಶ್ ಮತ್ತು ಅಭಿರಾಮ್ (ನನ್ನಂತೆಯೇ ‘ನಾಟಿ ಸ್ಟೂಡೆಂಟ್’ ಎನಿಸಿಕೊಂಡಿದ್ದವರು; ಅಭಿರಾಮ್ ನಮ್ಮಷ್ಟು ನಾಟಿ ಇರಲಿಲ್ಲ) ಕುಳಿತಿದ್ದರು.


ಇತ್ತ ಕನ್ನಡ ಮಿಸ್ “ಡ್ಯಾನ್ಸ್ ಟೀಮ್‌ನಲ್ಲಿರುವವರು ಕ್ಲಾಸ್ ಬಳಿಕ ಪ್ರಾಕ್ಟೀಸ್ ಮಾಡಿ ಬನ್ನಿ” ಎಂದು ಹುಡುಗಿಯರಿಗೆ ಹೇಳಿದರು. ನನ್ನದೇ ಲೋಕದಲ್ಲಿ ತೇಲುತ್ತಿದ್ದ ನನ್ನ ಮನಸ್ಸು ಒಮ್ಮೆಲೆ ನೆಟ್ಟಗಾಯಿತು. ಕಿವಿ ಅತ್ತ ಹೋಯಿತು. “ಯಾವ ಡ್ಯಾನ್ಸ್ ಮಿಸ್... ಯಾವ ಡ್ಯಾನ್ಸ್ ಮಿಸ್...” ಎಂದು ಕೆಲವು ಹುಡುಗರು ಮಿಸ್‌ನಲ್ಲಿ ಬೊಬ್ಬಿಟ್ಟು ಕೇಳಿದಾಗ ಮಿಸ್ “ಸೈಲೆಂಟ್... ಸೈಲೆಂಟ್” ಅಂದು ಬೊಬ್ಬಿಟ್ಟರು! ಸರಿ; ಎಲ್ಲರೂ ಸೈಲೆಂಟ್ ಆದದ್ದೇ ತಡ...ಮಿಸ್ ಇನ್ನೇನು 'ಸೋಲೋ ಡ್ಯಾನ್ಸ್' ಎಂದು ಹೇಳಬೇಕೆನ್ನುವಷ್ಟರಲ್ಲಿ...
ಅದೇನೋ ಗೊತ್ತಿಲ್ಲ...ನಾನು “ಕ್ಯಾಬರೇ ಡ್ಯಾನ್ಸ್” ಎಂದು ಜೋರಾಗಿಯೇ ಇಡೀ ಕ್ಲಾಸ್‌ಗೆ ಕೇಳುವಂತೆ ಬೊಬ್ಬಿಟ್ಟೆ..ಹತ್ತಿರ ಕೂತಿದ್ದ ಅನೀಶ್ ಮುಸಿ ಮುಸಿ ನಗುತ್ತಾ ನನ್ನ ತೊಡೆಗೇ ಒಂದು ಬಾರಿಸಿದ. “ಅಯ್ಯೋ ಎಂಥಾ ಅಧ್ವಾನವಾಯ್ತು” ಅಂದು ನಾನು ಅಲ್ಲೇ ಬೆವರಿ ಹೋದೆ..

ಈ ಕನ್ನಡ ಮಿಸ್‌ಗೆ ಕೋಪ ಮೂಗಿನ ತುದಿಗೇರಿತ್ತು. ಆಗಲೇ ಅವರ ಮೂಗು ಉದ್ದವಾಗಿ ಕಡು ಕೆಂಪಾಗಿತ್ತು! ನನಗಂತೂ ಮೈಯೆಲ್ಲಾ ನಡುಗಲು ಆರಂಭಿಸಿದ್ದೇ ತಡ... “ಸ್ಟ್ಯಾಂಡ್ ಅಪ್ ರಾಘವ” ಎಂದು ಮಿಸ್ ನನ್ನನ್ನು ದುರುಗುಟ್ಟಿಸಿ ನೋಡಿದರು. ತಗೋ...ಶುರುವಾಯ್ತು ಬೈಗುಳಗಳ ಸುರಿಮಳೆ... ಪೂರ್ತಿ ಪಿರಿಡ್ ಕೈಮೇಲೆ ಮಾಡಿ ನಿಲ್ಲಿಸಿದರು. ಮೊದಲೇ ಹೆದರಿ ಬೆವರಿದ್ದೆ...ಇದರ ಜೊತೆ ಕೈಯನ್ನೂ ಮೇಲೆ ಮಾಡಬೇಕು ಎಂದು ಪನಿಶ್‌ಮೆಂಟ್ ಬೇರೆ. ಹಾಗಾಗಿ ನನ್ನ ಕಂಕುಳುಗಳೂ ಬೆವೆತು ಒದ್ದೆಯಾಗಿ ಹೋಗಿದ್ದವು.

ಆದರೆ ಈ ಮಿಸ್ ಬೇರೆ ಮಿಸ್‌ಗಳಂತೆ ಬಟ್ಟೆ ಒಗೆದಂತೆ ಒಗೆಯಲಿಲ್ಲ. ಇನ್ನೇನು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದ ಹುಡುಗಿಯರು ಬೇರೆ ಕ್ಲಾಸ್‌ನಲ್ಲಿದ್ದರು. ಅವರ ಮಧ್ಯೆ...ಚೀ..ಚೀ..ಕ್ಯಾಬರೇ ಎಂದರೆ ಹೇಗಾಗಬೇಡ...!? ಅಂತೂ ನಾನು “ಕ್ಯಾಬರೇ” ಅಂದಿದ್ದು ಇನ್ನು ಏನೇನು ಫಜೀತಿಯನ್ನು ಸೃಷ್ಟಿಲಿದೆಯೋ ಎಂದು ಭಯಭೀತನಾಗಿದ್ದೆ. ಅತ್ತ ಅಪ್ಪ ಅಮ್ಮನ ಭಯ ಬೇರೆ.. ಎಲ್ಲಿಯಾದರೂ ಮನೆಯಲ್ಲಿ ಈ ಬಗ್ಗೆ ಹೇಳಿದರೆ...ಅನ್ನುವ ಭಯ...ಈ ಮಧ್ಯೆ ಕ್ಲಾಸ್‌ನಲ್ಲಿದ್ದ ಹುಡುಗಿಯರನ್ನೂ ಗಮನಿದೇ ಎನೋ ಅಸಭ್ಯವಾಯಿತೋ ಎಂದು ನಾಚಿಕೆಯೂ ಆಯಿತು.

ಸರಿ ಕ್ಲಾಸ್ ಮುಗಿಯಿತು... ಎಲ್ಲರೂ ನನ್ನನ್ನು ನೋಡಿ ನಕ್ಕರು...ಎನೋ ಒಂದು ಒಳ್ಳೆ ಎಂಟರ್‌ಟೈನ್‌ಮೆಂಟ್ ಕೊಟ್ಟೆ ಅನ್ನುವ ಹಾಗೆ...ನನಗಂತೂ ಪೇರೆಂಟ್ಸ್ ಮೀಟಿಂಗ್‌ನಲ್ಲಿ ಇದನ್ನೆಲ್ಲಾ ಹೇಳಿದರೆ ಏನು ಮಾಡುವುದು ಅನ್ನುವ ಚಿಂತೆಯಾದರೆ...ಇವರಿಗೆಲ್ಲಾ ಖುಷಿ...
ನಂತರ ನೇರ ಮಿಸ್ ಬಳಿ ಹೋದವನು “ಸಾರಿ ಮಿಸ್” ಅಂದೆ...ನಿಜವಾಗಲೂ ಮಿಸ್ ಪಾಪ...ನನಗೆ ಏನೂ ಹೇಳಿಲಿಲ್ಲ...ಇನ್ನು ಹಾಗೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರು.. ಓಹ್...ಅಬ್ಬಾ ಬದುಕಿದೆ..ಎಂದು ದೊಡ್ಡ ಉಸಿರು ಬಿಟ್ಟೆ ...ಖುಷಿಯಲ್ಲಿ ಉಬ್ಬಿ ಹೋದೆ...ನಗುತ್ತಲೇ ಮನೆಗೆ ಹೋದೆ...

(ಪೇರೆಂಟ್ಸ್ ಮೀಟಿಂಗ್‌ನಲ್ಲಿ ಸೋಷಿಯಲ್ ಮಿಸ್ ನನ್ನ ಇತಿಹಾಸ ಕೆದಕಿದ್ದು, ನಾನು ಅಪ್ಪನ ಮುಂದೆ ಗೊಳೋ ಎಂದು ಅತ್ತಿದ್ದು, ಅಪ್ಪನ ಮುಖ ಚಪ್ಪೆಯಾದದ್ದು... ಈ ಬಗ್ಗೆ ಮುಂದೆ ಹೇಳುತ್ತೇನೆ)

10 comments:

PARAANJAPE K.N. said...

ರಾಘವ,
ಕ್ಯಾಬರೇ ಡ್ಯಾನ್ಸಿನ ಕಥೆ ಚೆನ್ನಾಗಿದೆ. ನಿಮ್ಮ ಲೇಖನ ನನ್ನ ಶಾಲಾದಿನಗಳ ನೆನಪಿನ ಜೋಳಿಗೆಯನ್ನು ಕೆದಕಿತು. ಮು೦ದಿನ ಪ್ರಹಸನ ವಿಳ೦ಬವಿಲ್ಲದೇ ಬರಲಿ. ಓದುವ ಖುಷಿ ನನ್ನದು.

Unknown said...
This comment has been removed by the author.
Unknown said...

ತುಂಬಾನೇ ಚೆನ್ನಾಗಿದೆ. ನಿಜವಾಗಲು school days ನೆನಪಿಗೆ ಬರತ್ತೆ ನಿಮ್ಮ ಈ ಲೇಖನ ಓದಿದರೆ. ಮುಂದಿನ ಲೇಖನಗಳಿಗಾಗಿ ಕಾಯ್ತಾ ಇರ್ತೀನಿ.

ನವ್ಯ..

ಇಂಚರ said...

'Kya'bare purana...!

Sowrabha said...

ಚೆನ್ನಾಗಿ ಬರೆದಿದ್ದೀರ ರಾಘವ್.ನಿನ್ನೆ ಅನ್ನುವುದು ಇಂದಿನ ಮಟ್ಟಿಗೆ ನಾಳೆಗಳಷ್ಟೇ ದೊಡ್ಡ ವಿಸ್ಮಯ.

Sowrabha said...
This comment has been removed by the author.
Unknown said...

ರಾಘವ್ ಅವರೇ, ನಿಮ್ಮ ಬಾಲಪ್ರತಿಭೆಯ ವಿಚಾರ ಓದುತ್ತಲೇ ನನ್ನದೇ ಒಂದು ಪ್ರಸಂಗ ನೆನಪಾಗುತ್ತಿದೆ. ನಾನಾಗ 8ನೇ ತರಗತಿ. ಇಷ್ಟು ದಿನ ಜೊತೆಯಲ್ಲಿಯೇ, ನಮ್ಮಂತೆಯೇ ಆಡುತ್ತಿದ್ದ ಹುಡುಗಿಯರು 'ಬೇರೆ ಪ್ರಪಂಚದ ಪ್ರಾಣಿಗಳಂತೆ' ಭಾಸವಾಗುತ್ತಿದ್ದ ಕಾಲ ಅದು. ಆಗ ಕನ್ನಡ ಸಿನೆಮಾಗಳಿಗೆ ಎಲ್ಲಿಲ್ಲದ ಮಾದಕತೆ ತಂದಿದ್ದ ಸಿಲ್ಕ್ ಸ್ಮೀತಾ ಸಮಯ ಸಿಕ್ಕಾಗ ನನ್ನ ಕನಸುಗಳಿಗೂ ಭೇಟಿ ನೀಡುತ್ತಿದ್ದಳು. ಒಮ್ಮೆ ಶುಕ್ರವಾರದ ಚಿತ್ರಪುರವಣಿಯಲ್ಲಿ ಪ್ರಕಟವಾಗಿದ್ದ ಸಿಲ್ಕ್ ನ ಫೋಟೋ ಒಂದನ್ನು ಹಾಸಿಗೆ ದಿಂಬಿನ ಕೆಳಗಿಟ್ಟುಕೊಂಡಿದ್ದು.....ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದಿದ್ದು.... ಇದ್ದ ಚಿಕ್ಕಮನೆಯಲ್ಲಿಯೇ ಅಮ್ಮನ ಮುಖ ತಪ್ಪಿಸಿಕೊಂಡು ಓಡಾಡಿದ್ದು.... ನಿಮ್ಮ ಕಥೆ ಇವೆಲ್ಲವನ್ನೂ ಮತ್ತೊಮ್ಮೆ ಜೀವಂತವಾಗಿಸಿತು. the time of puberty has gifted everyone such 'hot' and sweet memories... i think.....ಅರುಣ್ ಕಾಸರಗುಪ್ಪೆ

ಚಿತ್ರಾ ಸಂತೋಷ್ said...

ಎಂಥದ್ದು ಮಾರಾಯ? ಭಾಳ ಬರ್ಕಂತೀಯಾ..ಕ್ಯಾಬರೆ ಡ್ಯಾನ್ಸ್ಉ..ಸೂಪರ್ರು! ಈ ಥರದ ನಿನ್ನ ಬರವಣಿಗೆ ಶೈಲಿ ಚೆನ್ನಾಗಿದೆ ರಾಘವ. ಹೇಳೋದನ್ನು ನೇರವಾಗಿ ತಮಾಷೆಯಾಗಿ ಹೇಳಿದ್ದೀಯಾ ಗುಡ್! ಶುಭವಾಗಲಿ..

-ಚಿತ್ರಾ

ಶ್ರೀನಿವಾಸಗೌಡ said...

kybare ge bartiya....

Arun Shetty said...

School days are really memorable.... Your article refreshhed those sweet memories....