Friday, 24 September 2010
ಲೈಂಗಿಕ ಕಾರ್ಯಕರ್ತರೇ ನಡೆಸುವ ವಿಶಿಷ್ಟ ಹೊಟೇಲ್ ಅರಮನೆಗಳ ನಗರಿ ಮೈಸೂರಿನಲ್ಲಿದೆ. ಅಲ್ಲಿಗೆ ಇತ್ತೀಚಿಗೆ ಭೇಟಿ ನೀಡಿದ್ದೆ.
ಬೆಳಗ್ಗಿನ ಉಪಾಹಾರಕ್ಕೆಂದು ಆ ಹೊಟೇಲ್ ಒಳಗಡೆ ಕಾಲಿಡುತ್ತಿದ್ದಂತೆ, ಎದುರಿಗಿದ್ದ ದೃಶ್ಯ ಸಾಮಾನ್ಯವಾಗಿರಲಿಲ್ಲ. ಹೊಟೇಲ್ ಎದುರುಭಾಗದಲ್ಲೇ ಕುಳಿತಿದ್ದ ಕ್ಯಾಶಿಯರ್ ಗ್ರಾಹಕರನ್ನು ಸ್ವಾಗತಿಸುತ್ತಿದ್ದದ್ದು, ಸರ್ವರ್‌ಗಳು ತಿಂಡಿ-ತಿನಿಸುಗಳನ್ನು ಪೂರೈಸಲು ಸಜ್ಜುಗೊಂಡದ್ದು, ಅಂತೆಯೇ ಬಾಣಸಿಗರು ಎಲ್ಲಾ ತಿಂಡಿ-ತಿನಿಸುಗಳೊಂದಿಗೆ ಸಿದ್ಧಗೊಂಡಿದ್ದದ್ದು ಹೊಟೇಲ್‌ವೊಂದರಲ್ಲಿ ಕಂಡುಬರುವಂತಹ ಸಾಮಾನ್ಯ ದೃಶ್ಯವೇ ಆಗಿತ್ತು. ಆದರೆ ಈ
ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದ ಕಾರ್ಮಿಕರು ಮಾತ್ರ ಸಾಮಾನ್ಯರಾಗಿರಲಿಲ್ಲ. ಸಮಾಜದಲ್ಲೆದುರಾಗಿದ್ದ ಎಲ್ಲಾ ಅಡೆತಡೆಗಳನ್ನು ಹಿಂದಿಕ್ಕಿ ಮುನ್ನುಗ್ಗಿದ ಆ ಕಾರ್ಮಿಕರು ನಿಜಕ್ಕೂ ಅಸಾಮಾನ್ಯರಾಗೇ ಕಂಡುಬಂದಿದ್ದರು.
ವಿಶ್ವವಿಖ್ಯಾತ ಐತಿಹಾಸಿಕ ಮೈಸೂರು ಅರಮನೆಯ ಹಿಂದಿನ ರಸ್ತೆಯ ಅಂತಿಮ ತಿರುವಿನಲ್ಲಿ ನೆಲೆಗೊಂಡಿರುವ ಹೊಟೇಲ್ ’ಆಶೋದಯ’ ಈ ಎಲ್ಲಾ ವಿಭಿನ್ನ, ಅಪರೂಪದ ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಗಿದೆ. ಪುರುಷ-ಸ್ತ್ರೀ ಲೈಂಗಿಕ ಕಾರ್ಯಕರ್ತೆಯರು, ಲಿಂಗಪರಿವರ್ತಿತರು ಮತ್ತು ಮಂಗಳಮುಖಿಯರು ಈ ಹೊಟೇಲ್‌ನ ಕಾರ್ಮಿಕರು! ಈ ಹೊಟೇಲನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ಅವರದ್ದೇ. ಇಲ್ಲಿ ಲೈಂಗಿಕ ಕಾರ್ಯಕರ್ತರ ಜೊತೆಗೆ ಸಾಮಾನ್ಯ ವರ್ಗದ ಜನರು ಕೂಡ ಸರ್ವರ್, ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಸಮಾಜದಿಂದ ಹೊರತಳ್ಳಲ್ಪಟ್ಟ, ಬಹಿಷ್ಕಾರಕ್ಕೊಳಗಾದ ಲೈಂಗಿಕ ಕಾರ್ಯಕರ್ತರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆಶೋದಯ ಎಂಬ ಹೆಸರಿಗೆ ತಕ್ಕಂತೆ ತುಳಿತಕ್ಕೊಳಗಾದ ವರ್ಗದ ಭರವಸೆಯ ಆಶಾಕಿರಣವೇ ‘ಹೊಟೇಲ್ ಆಶೋದಯ.’
ಲೈಂಗಿಕ ಕಾರ್ಯಕರ್ತರೂ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದಲೇ ಆರಂಭವಾದ ’ಆಶೋದಯ’ ಎಂಬ ಸರ್ಕಾರೇತರ ಸಂಸ್ಥೆಯ ಕೂಸು ಈ ’ಹೊಟೇಲ್ ಆಶೋದಯ’. ಸಾಮಾನ್ಯರಂತೆ ನಾವು ಕೂಡ ಹೊಟೇಲ್ ಉದ್ಯಮ ಆರಂಭಿಸಿ ಏಕೆ ನಮ್ಮ ಸಮುದಾಯದ ಜನರಿಗೆ ಹಾಗೂ ಸಾರ್ವಜನಿಕ ವರ್ಗಕ್ಕೆ ನೆರವಾಗರಬಾರದು ಎಂದುಕೊಂಡು ಈ ಹೊಟೇಲನ್ನು ಆರಂಭಿಸಿದೆವು ಎಂದು ವಿವರಣೆ ನೀಡಿದರು ಲೈಂಗಿಕ ಕಾರ್ಯಕರ್ತ ಮತ್ತು ಆಶೋದಯ ಸಂಸ್ಥೆ ಸದಸ್ಯ ಪ್ರಕಾಶ್. ಹೊಟೇಲ್ ಪ್ರಾರಂಭವಾದಲ್ಲಿಂದ ಕ್ಯಾಶಿಯರ್ ಜವಾಬ್ದಾರಿ ಪ್ರಕಾಶ್ ಹೆಗಲ ಮೇಲಿತ್ತಾದರೂ, ಆಶೋದಯದ ಅಂಗ ಸಂಸ್ಥೆ ‘ಅಮೂಲ್ಯ ಜೀವನ್ ನೆಟ್‌ವರ್ಕ್’ನಲ್ಲಿ ಬಿಡುವಿಲ್ಲದ ಕೆಲಸಗಳಿದ್ದ ಕಾರಣ ಕ್ಯಾಶಿಯರ್ ವ್ಯವಹಾರಗಳನ್ನು ಸಾರ್ವಜನಿಕ ವರ್ಗದ ಹಿರಿಯ ನಾಗರಿಕ ತಿಮ್ಮಯ್ಯ ಆಚಾರ್ ಅವರು ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಪ್ರಕಾಶ್ ಕೆಲವೊಮ್ಮೆ ಬಂದು ಕ್ಯಾಶಿಯರ್ ಕೆಲಸ ಮಾಡುವುದರ ಜೊತೆಗೆ, ಸಾಂಬಾರ್ ಹಂಡೆಯಲ್ಲಿ ಸೌಟು ಅಲ್ಲಾಡಿಸುವುದುಂಟು!
ಮುಂಜಾನೆಯಂದ ಸಂಜೆ ೫ ಅಥವಾ ೫.೩೦ರ ತನಕ ಆಶೋದಯ ಹೊಟೇಲ್ ಹಾಗೂ ಕಚೇರಿ ತೆರೆದಿರುತ್ತದೆ. ಆ ಬಳಿಕ ಇಲ್ಲಿನ ಲೈಂಗಿಕ ಕಾರ್ಯಕರ್ತರು ತಮ್ಮ ವೃತ್ತಿಗೆ ತೆರಳುತ್ತಾರೆ. ಹೊಟೇಲ್‌ನಲ್ಲಿ ಕಾರ್ಯ ನಿರ್ವಹಿಸುವ ಒಟ್ಟು ಎಂಟು ಮಂದಿಯಲ್ಲಿ ಐವರು ಲೈಂಗಿಕ ಕಾರ್ಯಕರ್ತರಾಗಿದ್ದು ಹೊಟೇಲ್ ಕೆಲಸಗಳನ್ನು ಒಂದು ಸೇವೆಯಾಗಿ ಸ್ವೀಕರಿಸಿದ್ದಾರೆ. ಇನ್ನುಳಿದ ಮೂರು ಮಂದಿ ಸಾರ್ವಜನಿಕ ವರ್ಗದವರಾಗಿದ್ದು, ಹೊಟೇಲ್ ಕೆಲಸವೇ ಅವರ ವೃತ್ತಿ. ಈ ಎಲ್ಲಾ ಕಾರ್ಮಿಕರು ದಿನಗೂಲಿಯನ್ನೇ ಪಡೆಯುತ್ತಿದ್ದಾರೆ. ಉತ್ತಮ ಲಾಭ ಕಂಡುಬಂದಲ್ಲಿ ಅವರ ಆದಾಯ ಮಟ್ಟವೂ ಏರುತ್ತದೆ.
ಲೈಂಗಿಕ ಕಾರ್ಯಕರ್ತರ ಮೇಲಿನ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶ ಮತ್ತು ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದೇ ವೇದಿಕೆಗೆ ತರುವ ಮಹತ್ವಾಕಾಂಕ್ಷೆ ೨೦೦೪ರಲ್ಲಿ ಆಶೋದಯ ಸಂಸ್ಥೆಯ ಹುಟ್ಟಿಗೆ ನಾಂದಿ ಹಾಡಿತು.
ಡಾ. ಸುಶೇನಾ, ಡಾ. ಸುಂದರ್ ರಾಮನ್, ಸೆಂಥಿಲ್ ಹಾಗೂ ಕಾವೇರಿ ಎಂಬ ನಾಲ್ಕು ಮಂದಿ ನಮ್ಮ ಪ್ರಧಾನ ಸಮಿತಿಯಲ್ಲಿದ್ದರು. ಆರಂಭದಲ್ಲಿ ನಾವೇ ಕೆಲವು ಲೈಂಗಿಕ ಕಾರ್ಯಕರ್ತರು ಈ ಸಂಸ್ಥೆಯಲ್ಲಿದ್ದೆವು ಮತ್ತು ಸಾಮಾನ್ಯ ಸಮುದಾಯದ ಕೆಲವರು ತಾಂತ್ರಿಕ ನೆರವು ನೀಡುತ್ತಿದ್ದರು. ದಿನ ಸಾಗಿದಂತೆ ಮೈಸೂರಿನ ಹಲವು ಲೈಂಗಿಕ ಕಾರ್ಯಕರ್ತ/ರ್ತೆಯರು ನಮ್ಮ ಸಂಸ್ಥೆ ಸೇರಲಾರಂಭಿಸಿದರು ಎಂದು ವಿವರಿಸಿದರು ಆಶೋದಯದ ಉಪ ನಿರ್ದೇಶಕ, ಹೊಟೇಲ್ ಯೋಜನೆಯ ಸಂಯೋಜಕ ಮತ್ತು ಲೈಂಗಿಕ ಕಾರ್ಯಕರ್ತ ಅಕ್ರಂ ಪಾಶಾ.
ಆಶೋದಯ ಅಕ್ಯಾಡೆಮಿಯಲ್ಲಿ ಪಾಶಾ ಅವರು ಶೈಕ್ಷಣಿಕ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವೈಯಕ್ತಿಕ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿನ ಮಹಿಳಾ, ಲಿಂಗಪರಿವರ್ತಿತ ಹಾಗೂ ಪುರುಷ ಲೈಂಗಿಕ ಕಾರ್ಯಕರ್ತರಿಗೆ ಏಡ್ಸ್ ತಡೆಗಟ್ಟುವ ಕುರಿತಾದ ಆರೋಗ್ಯ, ಕಾನೂನು ವಿಚಾರ ಹಾಗೂ ಕೌಶಲ್ಯವೃದ್ಧಿಗೆ ತರಬೇತಿ ನೀಡುತ್ತೇವೆ ಎನ್ನುತ್ತಾರೆ ಪಾಶಾ.
ಏಡ್ಸ್ ಮಹಾಮಾರಿ ಹರಡದಂತೆ ಸಂರಕ್ಷಣಾ ಸೂತ್ರಗಳನ್ನು ಬಳಸಿಕೊಂಡೇ ವೇಶ್ಯಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳುವ ಇಲ್ಲಿನ ಸದಸ್ಯರು, ಕಾಂಡೊಮ್ ಬಳಸದೆ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ಇಲ್ಲಿನ ಕಾರ್ಯಕರ್ತರು ಪಾಲ್ಗೊಳ್ಳುವುದಿಲ್ಲ ಎಂದು ವಾದಿಸುತ್ತಾರೆ. ೨೦೦೪ರಲ್ಲಿ ನಮ್ಮ ಸಂಸ್ಥೆ ಮೂಲಕ ಏಡ್ಸ್ ಪ್ರಮಾಣದ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಅಂದು ಕಂಡುಬಂದಿದ್ದ ಪ್ರಮಾಣ ಯಾವುದೇ ಕಾರಣಕ್ಕೆ ಏರಿಕೆಯಾಗಬಾರದು ಎಂದು ನಾವಂದುಕೊಂಡಿದ್ದೆವು. ನಾವು ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟಿಎಸ್‌ಐ ಜೊತೆ ಆಶೋದಯ ಸಂಸ್ಥೆ ತಾಂತ್ರಿಕ ಸಲಹೆಗಾರ್ತಿ ಫಾತಿಮಾ ಅವರು ಮಾಹಿತಿ ಹಂಚಿಕೊಂಡರು.
ಹೊಟೇಲ್ ಉದ್ಯಮದಿಂದ ಬರುವ ಹೆಚ್ಚಿನ ಹಣವನ್ನು ಆಶೋದಯದ ’ಕೇರ್ ಹೋಂ’ ನಿರ್ವಹಣೆಗೆಂದು ಮೀಸಲಿಡಲಾಗುತ್ತದೆ. ಹೊಟೇಲ್ ಆರಂಭವಾದಂದಿನಿಂದ ಇಂದಿನವರೆಗೆ ಇಲ್ಲಿನ ಹಣವನ್ನು ನಾವು ಶೋಷಿತ ಲೈಂಗಿಕ ಕಾರ್ಯಕರ್ತರ ನೆರವಿಗಾಗಿ ಬಳಸಿಕೊಂಡಿದ್ದೇವೆ. ಹಲವು ಅನಾರೋಗ್ಯ ಪೀಡಿತ ಕಾರ್ಯಕರ್ತರು ನಮ್ಮ ಕೇರ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೊಂದು ಬಾರಿ ವೈದ್ಯರು ಕೇರ್ ಹೋಮ್‌ಗೆ ಭೇಟಿ ನೀಡುತ್ತಿರುತ್ತಾರೆ. ಬಡ ಲೈಂಗಿಕ ಕಾರ್ಯಕರ್ತರಿಗೆ ಕೇರ್ ಹೋಮ್ ಹೊಸ ಬದುಕನ್ನು ಒದಗಿಸಿದೆ ಎಂದು ಆಶೋದಯದ ಕಾರ್ಯವಿಸ್ತರಣೆ ಕುರಿತು ಲೈಂಗಿಕ ಕಾರ್ಯಕರ್ತೆ ನಾಗರತ್ನಮ್ಮ ಅವರು ಮಾಹಿತಿ ನೀಡಿದರು. ಮಂಡ್ಯ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಕೇರ್ ಹೋಮ್ ಕಾರ್ಯ ನಿರ್ವಹಿಸುತ್ತಿದೆ.
ಲೈಂಗಿಕ ಕಾರ್ಯಕರ್ತೆ ಶಶಿಕಲಾ ಅವರಿಗೆ ಆಶೋದಯ ಸೇರುವ ಮುನ್ನ ಕಾಂಡೊಮ್ ಎಂದರೆ ಏನೆಂದೇ ತಿಳಿದಿರಲಿಲ್ಲ. ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಬಳಸಲಾಗುವ ವಿಧಾನಗಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಆದರೆ ಆಶೋದಯ ಸೇರಿದ ಬಳಿಕ ನನಗೆ ಕಾಂಡೊಮ್ ಬಗ್ಗೆ ಅರಿವು ಮೂಡಿಸಿದರು. ಮೊದಲೆಲ್ಲಾ ನಮ್ಮ ಗ್ರಾಹಕರು ಕರೆದ ಕೂಡಲೇ ನಾನು ವೇಶ್ಯಾವಾಟಿಕೆಗೆ ತೆರಳುತ್ತಿದ್ದೆ ಎಂದು ಆಶೋದಯದಿಂದಾದ ಪ್ರಯೋಜನದ ಬಗ್ಗೆ ಶಶಿಕಲಾ ಹೇಳಿಕೊಂಡರು. ಒಂದು ವೇಳೆ ತಮ್ಮ ಗಿರಾಕಿಗಳಲ್ಲಿ ಕಾಂಡೊಮ್ ಇಲ್ಲ ಎಂದಾದರೆ ಈ ಕಾರ್ಯಕರ್ತರೇ ಕಾಂಡೊಮ್ ಇಟ್ಟುಕೊಂಡಿರುತ್ತಾರೆ. ಕಾಂಡೊಮ್ ಬಳಕೆ ಬೇಡ ಎಂದರೆ ನಾವು ಸೆಕ್ಸ್‌ಗೆ ಒಪ್ಪುವುದಿಲ್ಲ ಎನ್ನುತ್ತಾರೆ ಅವರು.
ಹೊಟೇಲ್ ಆಶೋದಯದಲ್ಲಿ ಗ್ರಾಹಕರಿಗೆ ಉಣಬಡಿಸುವ ಜೊತೆಗೆ ಕ್ಯಾಟರಿಂಗ್ ಸೇವೆಯನ್ನೂ ಒದಗಿಸಲಾಗುತ್ತಿದೆ. ಹಲವು ವಿದ್ಯಾಸಂಸ್ಥೆಗಳು, ಪಾಲಿಕೆ ಕಚೇರಿ ಹಾಗೂ ವಿವಿಧ ಕಂಪನಿಗಳಿಗೆ ಇಲ್ಲಿಂದ ಆಹಾರಗಳನ್ನು ಪೂರೈಸಲಾಗುತ್ತಿದೆ. ಅವರ ಈ ಸೇವೆಗೆ ಉತ್ತಮ ಪ್ರತಿಕ್ರಿಯೆಯೂ ಕೇಳಿಬಂದಿದೆ.
ಆರಂಭದ ದಿನಗಳಲ್ಲಿ ಕೇವಲ ಲೈಂಗಿಕ ಕಾರ್ಯಕರ್ತರೇ ಹೊಟೇಲ್ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆದರೆ ಹೊಟೇಲ್‌ನ್ನು ಸಾರ್ವಜನಿಕ ವರ್ಗ ಒಪ್ಪುತ್ತಿದ್ದಂತೆಯೇ ಕೆಲವರು ಇಲ್ಲಿ ಕೆಲಸಕ್ಕಾಗಿ ಮುಂದೆ ಬಂದರು. ಇದು ನಿಜಕ್ಕೂ ನಮ್ಮಲ್ಲಿ ಅಚ್ಚರಿ ತಂದಿತ್ತು. ಸಾರ್ವಜನಿಕ ಹಾಗೂ ಲೈಂಗಿಕ ಕಾರ್ಯಕರ್ತರ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಹೊಟೇಲ್ ಆಶೋದಯದ ಪಾತ್ರ ಬಹುದೊಡ್ಡದು ಎಂದು ಉದ್ಯಮವನ್ನು ಕೊಂಡಾಡಿದರು ಹಿರಿಯ ಸದಸ್ಯೆ ರತ್ನಮ್ಮ. ಮೊದಲು ರತ್ನಮ್ಮ ಅವರೇ ಮುಂದೆ ನಿಂತು ಅಡುಗೆ ಕಾರ್ಯದಿಂದ ಹಿಡಿದು, ಹೊಟೇಲ್ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಅವರು ತಮ್ಮ ಜವಾಬ್ದಾರಿಯನ್ನು ಇತರರಿಗೂ ವಹಿಸಿ ಅವರಿಗೂ ವೇದಿಕೆ ಒದಗಿಸಿದ್ದಾರೆ. ರತ್ನಮ್ಮ ಅವರು ಆಶೋದಯದ ಮಾಜಿ ಅಧ್ಯಕ್ಷೆ ಕೂಡ. ಸದ್ಯ ಯಶೋಧ ಅವರು ಸಂಸ್ಥೆಯಲ್ಲಿ ನಡೆದ ಚುನಾವಣೆ ಮೂಲಕ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಆಶೋದಯ ಹೊಟೇಲ್ ಕಟ್ಟಡದ ಮೇಲ್ಭಾಗದಲ್ಲೇ ಆಶೋದಯ ಸಂಸ್ಥೆಯ ಕಚೇರಿಯಿದ್ದು, ಹೆಚ್ಚಿನೆಲ್ಲಾ ಸದಸ್ಯರು ದಿನಂಪ್ರತಿ ಇಲ್ಲಿಗೆ ಭೇಟಿ ನೀಡಿ ತಮ್ಮ ಅನುಭವ, ನೋವು, ಭಾವನೆ ಹಾಗೂ ಸಮಸ್ಯೆಗಳನ್ನು ಸಂಸ್ಥೆಯ ಇತರ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಈ ವಿಚಾರ ವಿನಿಮಯದಿಂದಾಗಿ ಕಾರ್ಯಕರ್ತರ ಹಲವು ಸಮಸ್ಯೆಗಳಿಗೆ ಪರಿಹಾರ ಪ್ರಾಪ್ತಿಯಾಗಿದೆ. ತಮ್ಮ ಸಂಗಾತಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಕೂಡ ಲೈಂಗಿಕ ಕಾರ್ಯಕರ್ತರು ನಿವಾರಿಸಿಕೊಳ್ಳುವಲ್ಲಿ ಆಶೋದಯ ಸಹಕಾರಿಯಾಗಿದೆ ಎಂದು ಸದಸ್ಯರು ನೆನೆಸಿಕೊಳ್ಳುತ್ತಾರೆ. ಆಶೋದಯದ ಮೂಲಕ ಹೊಸಬದುಕನ್ನು ಕಂಡುಕೊಂಡಿರುವ ಹಲವು ಕಾರ್ಯಕರ್ತರು ಇಂದು ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ ಎಂಬುದು ಇಲ್ಲಿನ ಅಚ್ಚರಿಗಳಲ್ಲೊಂದು. ಮೈಸೂರಿನಲ್ಲಿರುವ ಒಂದು ಆಶೋದಯ ದೇಶದ ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ತಲುಪಲು ಸಾಧ್ಯವಿಲ್ಲ. ಇಂತಹ ಹಲವು ಆಶೋದಯಗಳ ಜನನವಾಗಬೇಕು ಎಂದು ಅಭಿಪ್ರಾಯಪಡುತ್ತಾರೆ ಕಾರ್ಯಕರ್ತ ಜಿನೇಂದ್ರ.
ಅನಾಥ ಮಕ್ಕಳಿಗೆ ರಕ್ಷಣೆ ನೀಡುವುದು, ಅಪರಿಚಿತ, ಅನಾಥ ಲೈಂಗಿಕ ಕಾರ್ಯಕರ್ತರು ನಿಧನ ಹೊಂದಿದಾಗ ಶವಸಂಸ್ಕಾರ ನೆರವೇರಿಸುವುದು ಸೇರಿದಂತೆ ಅಕ್ರಮ ಮಕ್ಕಳ ಸಾಗಣೆ, ಮಕ್ಕಳು (೧೮ ವರ್ಷದಿಂದ ಕೆಳಗೆ) ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ವಿರುದ್ಧವೂ ಧ್ವನಿ ಎತ್ತುವ ಕಾರ್ಯ ಆಶೋದಯ ಸದಸ್ಯರಿಂದ ನಡೆಯುತ್ತಿದೆ. ಕಳೆದ ವರ್ಷ ಭೀಕರ ಮುಸಲಧಾರೆಯಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆಂದೇ ಆಶೋದಯ ರೂ ೫೦,೦೦೦ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿತ್ತು.
ವೇಶ್ಯಾವಾಟಿಕೆ ನಮ್ಮ ವೃತ್ತಿ. ಇದನ್ನು ಸಮಾಜ ಒಪ್ಪಿಕೊಳ್ಳಬೇಕು. ಯಾರೂ ಕೂಡ ನಮ್ಮ ಮೇಲೆ ಕನಿಕರ ತೋರುವ ಅಗತ್ಯವಿಲ್ಲ. ಪ್ರಾಮಾಣಿಕ ಮಾರ್ಗದಲ್ಲೇ ನಾವು ನಮ್ಮ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಒತ್ತಾಯದ ಲೈಂಗಿಕ ಸಂಪರ್ಕಕ್ಕೆ ನಾವು ಮುಂದಾಗಿಲ್ಲ ಮತ್ತು ಯಾರ ಹಣವನ್ನೂ ಕಬಳಿಸಿಲ್ಲ ಎಂದು ಲಿಂಗಪರಿವರ್ತಿತ ಗಿರಿಜಾ ಹೇಳುತ್ತಾರೆ.
ವಿಶ್ವಬ್ಯಾಂಕ್ ನೀಡಿದ್ದ ರೂ. ೧.೫ ಲಕ್ಷ ನೆರವಿನಿಂದ ೨೦೦೮ರಲ್ಲಿ ಹೊಟೇಲ್ ಆಶೋದಯ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಲೈಂಗಿಕ ಕಾರ್ಯಕರ್ತರು ತಮ್ಮ ಮನೋಧರ್ಮವನ್ನೇ ಬದಲಿಸಿಕೊಂಡಿದ್ದಾರೆ. ಹಲವರಲ್ಲಿ ಕೀಳರಿಮೆ ಮಾಯವಾಗಿದೆ. ತಾವೂ ಸಮಾಜದ ಒಂದು ಭಾಗವಾಗಿದ್ದೇವೆ ಎಂಬ ಹರ್ಷ ರಾರಾಜಿಸುತ್ತಿದೆ. ಬದುಕನ್ನು ಕಟ್ಟುವಲ್ಲಿ ಸೋತು ಹೆಣಗಾಡುವ ಲೈಂಗಿಕ ಕಾರ್ಯಕರ್ತರಿಗೆ ಭರವಸೆಯ ಬೆಳಕಿಂಡಿಯಾಗಿರುವ ಮೈಸೂರಿನ ಆಶೋದಯ ಶೋಷಿತ ವರ್ಗಕ್ಕೆ ಹೊಸ ಬದುಕೊಂದನ್ನು ಕಟ್ಟಿಕೊಟ್ಟಿದೆ.
Thursday, 9 September 2010
‘ಅಭಿವೃದ್ಧಿ ಹೆಸರಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ವಿಶೇಷ ವಿತ್ತ ವಲಯ ನಿರ್ಮಾಣಕ್ಕಾಗಿ ಎರಡನೇ ಹಂತದ ೨೦೩೫ ಎಕರೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಕೆಐಎಡಿಬಿ ತನ್ನ ‘ಕರ್ತವ್ಯಕ್ಕೆ ಸಿದ್ಧಗೊಂಡಿದೆ. ಹಳ್ಳಿಗರೂ ಕೂಡ ‘ಯುದ್ಧಕ್ಕೆ ಸಿದ್ಧರಾಗಿದ್ದಾರೆ
ಒಂಜಿ ಸಾಮಾನು ದಾದಾಂಡಲ ದೀಕ ಪಂಡ ಜಾಗ ಇಜ್ಜಿ ಮಾರ್ರೆ... ತೂಲೆ ಇರೆಗ್ ಕೊರ್ನ ಪೆಲಕ್ಕಾಯಿನ್ ಸೊಳೆ ಪಾಡ್ರೆ ತಡ್ಪೆ ಸಮೆತ ಇಜ್ಜಿ (ಏನಾದರೂ ಸಾಮಗ್ರಿ ಇಡೋಣ ಎಂದರೆ ಈಗ ಜಾಗವಿಲ್ಲ... ನಿಮಗೆ ಕೊಟ್ಟ ಹಲಸಿನ ಸೊಳೆಯನ್ನು ಇಡಲು ಒಂದು ತಡ್ಪೆ ಕೂಡ ಇಲ್ಲ) ಎಂದು ಮೇರಿ ಪತ್ರಾವೋ ಅವರು ಅಡುಗೆ ಕೋಣೆ ಬಳಿ ನಿಂತು ತಮ್ಮ ಸೆರಗಿನಿಂದ ಕಣ್ಣೀರನ್ನು ಒರೆಸುತ್ತಿದ್ದ ದೃಶ್ಯವೇ ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ತಂದಿಟ್ಟಿರುವ ಅವಾಂತರಗಳನ್ನು ಬಯಲುಗೊಳಿಸಿದ್ದವು.ಮೇರಿ ಪತ್ರಾವೋ ಗ್ರೆಗರಿ ಪತ್ರಾವೋ ಅವರ ತಾಯಿ. ಏಪ್ರಿಲ್ ೨೮ರಂದು ಕೆಐಎಡಿಬಿ ಅಧಿಕಾರಿಗಳ ನೇತೃತ್ವದಲ್ಲಿ ಮನೆ ಕೆಡವಲು ಮುಂದಾಗಿದ್ದ ಅಧಿಕಾರಿಗಳನ್ನು ಗ್ರೆಗರಿ ಕುಟುಂಬ ಅಂಗಲಾಚಿ ಬೇಡಿಕೊಂಡಿದ್ದರೂ, ಆ ಮನೆಯನ್ನು ನೆಲಸಮಗೊಳಿಸಲಾಗಿತ್ತು. ಕೆಐಎಡಿಬಿ, ಮೇರಿ ಪತ್ರಾವೋ ಸೇರಿದಂತೆ ಅವರ ಕುಟುಂಬದ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪ ಮಾಡಿ ಪ್ರಕರಣವನ್ನೂ ದಾಖಲಿಸಿತ್ತು. ನಾನು ಮನೆಯನ್ನು ಕೆಡವಬೇಡಿ ಎಂದು ವಿರೋಧ ವ್ಯಕ್ತಪಡಿಸಿದಾಗ ಆ ಜನ ನನ್ನ ಕೈಯನ್ನು ಹಿಡಿದು ಎಳೆದಿದ್ದರ ನೋವು ನನಗೆ ಇಂದೂ ಕಾಡುತ್ತಿದೆ ಎಂದು ೭೫ ವರ್ಷದ ಮೇರಿ ಪತ್ರಾವೋ ನೋವು ಹಂಚಿಕೊಂಡರು.
ಸಾವಯವ ಕೃಷಿ ಮೂಲಕ ಜೀವನಕ್ಕೆ ಒಂದು ಪ್ರಾಮಾಣಿಕ ದಾರಿ ಕಂಡುಕೊಂಡಿದ್ದ ಹೋರಾಟ ಮನೋಭಾವದ, ಸ್ವಾವಲಂಬಿ ಕೃಷಿಕ ಗ್ರೆಗರಿ ಪತ್ರಾವೋ. ಆದರೆ ಯಾವಾಗ ಅವರ ಜಮೀನಿನ ಮೇಲೆ ಎಸ್‌ಇಝಡ್, ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ಕರಾಳ ಕಣ್ಣುಗಳು ಬಿದ್ದವೋ ಅಂದಿನಿಂದ ಪತ್ರಾವೋ ಕುಟುಂಬ ನೆಮ್ಮದಿಯಾಗಿ ಉಂಡಿಲ್ಲ. ಅಂತಿಮವಾಗಿ ಇದೇ ವರ್ಷದ ಏಪ್ರಿಲ್ ೨೮ರಂದು ಕೆಐಎಡಿಬಿ ಮನೆ ಕೆಡವಲು ಯಾವುದೇ ಮುಂಚಿತ ಮಾಹಿತಿ ನೀಡದೆ ಮತ್ತು ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಏಕಾಏಕಿಯಾಗಿ ಬಂದು ಪತ್ರಾವೋ ಕುಟುಂಬದ ಮನೆಯನ್ನೇ ಧ್ವಂಸಗೊಳಿಸಿತು. ಗ್ರೆಗರಿ ಪತ್ರಾವೋ ಪ್ರಕಾರ ಮನೆಯ ಪಂಚನಾಮೆಯನ್ನೂ ಮಾಡಲಾಗಿಲ್ಲ. ಮೇರಿ ಪತ್ರಾವೋ ಅವರು ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಪೆಟ್ಟಿಗೆಯಲ್ಲಿದ್ದ ೮೦ ಸಾವಿರ ಹಣ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಾರೆ. ಕನಿಷ್ಠ ಅವುಗಳನ್ನು ಸುಭದ್ರವಾಗಿ ತೆಗೆದಿಟ್ಟುಕೊಳ್ಳಲು ಅವಕಾಶವನ್ನೂ ನೀಡಲಿಲ್ಲ ಎನ್ನುತ್ತಾರೆ ಗ್ರೆಗರಿ ಪತ್ರಾವೋ.
ಕೃಷಿ ಕುಟುಂಬ ಎಂದ ಮೇಲೆ ಅವರ ಮನೆಯಲ್ಲಿ ಜಾನುವಾರುಗಳು ಸೇರಿದಂತೆ ಕೃಷಿ ಮಾಡಲು ಬೇಕಾದ ಎಲ್ಲಾ ಸಾಮಗ್ರಿಗಳು ಇರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿದ ಕೆಐಎಡಿಬಿ ಅದೇ ದಿನ ಪತ್ರಾವೋ ಕುಟುಂಬವನ್ನು ಎಸ್‌ಇಝಡ್ ಪರ ಕೆಲಸ ಮಾಡುತ್ತಿರುವ ಗುತ್ತೇದಾರ ಯಾದವ ಕೋಟ್ಯಾನ್ ಅವರ ಮನೆಯಲ್ಲಿ ಉಳಿದುಕೊಳ್ಳುವಂತೆ ಸೂಚಿಸಿತು. ಆ ಹೊತ್ತಿಗೆ ಗ್ರೆಗರಿ ಮನೆಯಲ್ಲಿದ್ದ ಸಾಮಗ್ರಿಗಳನ್ನಲ್ಲಾ ಕೋಟ್ಯಾನ್ ನಿವಾಸಕ್ಕೆ ಕೊಂಡೊಯ್ದಾಗಿತ್ತು. ಆದರೆ ಬೇರೆ ಗ್ರಾಮದಲ್ಲಿರುವ ಕೋಟ್ಯಾನ್ ನಿವಾಸಕ್ಕೆ ತೆರಳಲು ನಿರಾಕರಿಸಿದ ಪತ್ರಾವೋ ಆ ರಾತ್ರಿಯಂದು ಧೋ ಎಂದು ಸುರಿಯುತ್ತಿದ್ದ ಮಳೆಯೊಂದಿಗೆ ಮರವೊಂದರ ಅಡಿಯಲ್ಲೇ ದಿನ ಕಳೆದರು. ಪರಿಣಾಮವಾಗಿ ಅಸ್ವಸ್ಥಗೊಂಡಿದ್ದ ಮೇರಿ ಪತ್ರಾವೋ ಮಾರನೇ ದಿನ ಆಸ್ಪತ್ರೆ ಸೇರಿದ್ದರು. ನಂತರದ ೧೫ ದಿನಗಳನ್ನು ನೆಲಸಮಗೊಂಡಿದ್ದ ಮನೆಯ ಬಳಿಯೇ ಇರುವ ಸಣ್ಣ ತಗಡಿನ ಶೆಡ್ಡಲ್ಲೇ ತಮ್ಮ ೨ ಕೋಣ, ೨ ಎತ್ತು, ಆರು ದನ, ೩ ಕರು, ೪ ನಾಯಿ, ೫೦-೬೦ ಕೋಳಿ ಮತ್ತು ೨ ಪ್ರೀತಿಯ ಬೆಕ್ಕುಗಳೊಂದಿಗೆ ಪತ್ರಾವೋ ಕುಟುಂಬ ಅಲ್ಲೇ ದಿನಕಳೆಯಿತು.
ಒಟ್ಟಾರೆ ಪತ್ರಾವೋ ಕುಟುಂಬ ಇಂದು ದಿಕ್ಕಾಪಾಲಾಗಿ, ತಮ್ಮ ಹಳೆ ಮನೆಯ ಬಳಿ ಇರುವ ಶೆಡ್ಡೊಂದರಲ್ಲಿ ದಿನದೂಡುತ್ತಿದೆ. ಆ ಶೆಡ್ಡಿಗೆ ಟಿಎಸ್‌ಐ ಭೇಟಿ ನೀಡಿದ್ದಾಗ ಮನೆ ಮುಂದೆಯೇ ಕೋಳಿಗಳು, ನಾಯಿ, ಬೆಕ್ಕುಗಳು ಅತ್ತಿತ್ತ ಓಡಾಡುತ್ತಿದ್ದವು. ಅವುಗಳಿಗೆ ಉಳಿದುಕೊಳ್ಳಲು ಬೇರೆ ಜಾಗವಿಲ್ಲ.
ನನ್ನ ಜಾಗವನ್ನು ಬಿಟ್ಟು ನಾನು ಎಲ್ಲಿಗೂ ಕದಲುವುದಿಲ್ಲ ಎಂದು ಗ್ರೆಗರಿ ಹೇಳುವುದಕ್ಕೂ ಕಾರಣವಿದೆ. ಅವರು ಮಾಡಿರುವ ಕೃಷಿ ಪ್ರತಿಯೊಬ್ಬ ರೈತನಿಗೂ ಮಾದರಿ ಎಂದರೆ ಅತಿಶಯೋಕ್ತಿ ಎನಿಸದು. ಗ್ರೆಗರಿ ಅವರು ಹೇಳಿದಂತೆಯೇ ಅವರು ತಮ್ಮ ಜಮೀನಿನಲ್ಲಿ ಸುಮಾರು ೪೦೦೦ ಅಡಿಕೆ ಮರ, ೨೫೦ ತೆಂಗಿನ ಮರ, ೨೦೦೦ ವೆನಿಲಾ ಬಳ್ಳಿ, ೨೫೦ ಬಾಳೆಗಿಡ, ೫೦೦ ವೀಳ್ಯದ ಎಲೆ ಬಳ್ಳಿ, ಮೂರು ಕಾಲದಲ್ಲೂ ಬೆಳೆಯಲಾಗುವ ಭತ್ತ, ೧೦೦೦ ಗೇರು ಮರ, ೬೫ ಮಾವಿನ ಮರ, ೫೦-೬೦ ಹಲಸಿನ ಮರ, ೧೫ ಹುಣಸೆ ಮರ, ೨-೩ ಸಂಪಿಗೆ ಮರ, ೫೦ ಪುನರ್ಪುಳಿ ಮರ, ೨೫ ನೊರೆಕ್ಕಾಯಿ ಮರ, ೫೦ ಮಲ್ಲಿಗೆ ಗಿಡ, ೭-೮ ಪಪ್ಪಾಯಿ ಮರ, ೫೦ ಹೆಬ್ಬಲಸು, ೧೨ ಜೀಗುಜ್ಜೆ ಮರ ಸೇರಿದಂತೆ ಹಲವು ಕೃಷಿ ಮಾಡಿದ್ದಾರೆ. ಹಾಗಿರುವಾಗ ಸರ್ಕಾರ ೨.೨೪ ಕೋಟಿ ರೂ ಹಣ ಕೊಟ್ಟರೂ ಅದು ನನಗೆ ಬೇಡ ಎನ್ನುವ ಗ್ರೆಗರಿ ಮಾತಿನಲ್ಲಿ ಖಂಡಿತಾ ತಥ್ಯವಿದೆ.
ಹಾಗೆ ನೋಡಿದರೆ ಏಕ ಬೆಳೆ ಬೆಳೆವ ಅಥವಾ ಬರಡು ಭೂಮಿಯಲ್ಲಿ ಮಾತ್ರ ಕೈಗಾರಿಕೆಗಳನ್ನು ನಡೆಸಬೇಕು ಎಂದು ಕಾನೂನಿದೆ. ಹಾಗಾದರೆ ಈ ಕಾನೂನು ಗ್ರೆಗರಿ ಪತ್ರಾವೋ ಕುಟುಂಬಕ್ಕೆ ಏಕೆ ಅನ್ವಯವಾಗಿಲ್ಲ?
ಅಂತಿಮವಾಗಿ ರೈತನೊಬ್ಬ ದಶಕಗಳಿಂದಲೂ ಭೂಮಿ ನೀಡುವುದಿಲ್ಲ ಎಂದು ಎಸ್‌ಇಝಡ್, ಎಂಆರ್‌ಪಿಎಲ್ ಮತ್ತು ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಇಲಾಖೆ) ವಿರುದ್ಧ ಹೋರಾಟ ನಡೆಸಿದ್ದರ ಫಲವಾಗಿ ದೊರೆತ ಪುರಸ್ಕಾರ ಇದು! ೧೮೮೬ರ ಇಸವಿಯ ಹಂಚನ್ನು ಬಳಸಿ ಕಟ್ಟಿದ್ದ ಮನೆ ಇಂದು ನಾಮಾವಶೇಷವಾಗಿ ನೆಲಸಮಗೊಂಡಿದ್ದರೂ ಕೆಐಎಡಿಬಿ ಮನೆ ಧ್ವಂಸಗೊಳಿಸಲು ಬಳಸಿಕೊಂಡಿದ್ದ ಮಾರ್ಗ ಮಾತ್ರ ನಿಜಕ್ಕೂ ಪ್ರಶ್ನಾರ್ಹ. ಕೆಐಎಡಿಬಿ ಮತ್ತು ಪೊಲೀಸರು ಬಂದಿದ್ದ ವೇಳೆ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಉಲ್ಲಾಸ್ ಭಂಡಾರಿ ಮತ್ತು ರಾಜೇಶ್ ಅಲಿಯಾಸ್ ಜೂನಿಯರ್ ಉಪೇಂದ್ರ ಎಂದು ಖ್ಯಾತಿವೆತ್ತ ಗೂಂಡಾಗಳು ಏತಕ್ಕಾಗಿ ಗ್ರೆಗರಿ ನಿವಾಸದ ಬಳಿ ಬಂದಿದ್ದರು? ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಅವರು ತಮ್ಮ ಕೆಲಸಕ್ಕೆ ಗೂಂಡಾಗಳನ್ನು ಬಳಸಿಕೊಂಡದ್ದು ವಿಡಿಯೋ ಚಿತ್ರೀಕರಣದಲ್ಲೂ ಸಾಬೀತಾಗಿದೆ. ಆದರೆ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಈ ಗೂಂಡಗಳು ಯಾರೆಂದೇ ಗೊತ್ತಿಲ್ಲ!
ಅಭಿವೃದ್ಧಿಗಾಗಿ ಪತ್ರಾವೋ ಕುಟುಂಬ ತನ್ನ ಭೂಮಿಯನ್ನು ಕೊಟ್ಟಿರುವ ಬಗೆಯನ್ನು ಒಮ್ಮೆ ಗಮನಿಸಿ: ಮೇರಿ ಪತ್ರಾವೋ ಅವರು ತೋಕೂರಿನಲ್ಲಿದ್ದ ತಮ್ಮ ೨.೪೦ ಎಕರೆ ಭೂಪ್ರದೇಶವನ್ನು ಕೊಂಕಣ ರೈಲ್ವೇ ಯೋಜನೆಗೆ, ಹಾಗೇ ತಕೂರಿನಲ್ಲಿದ್ದ ೨.೬೨ ಎಕರೆ ಪ್ರದೇಶವನ್ನು ಜಾಸ್ಕೋ ಸಂಸ್ಥೆಗೆಂದು ನೀಡಿದ್ದಾರೆ. ಆದರೆ ಆ ಪ್ರದೇಶವನ್ನು ಬಳಿಕ ನಾಗಾರ್ಜುನ ಯೋಜನೆಗೆ ಹಸ್ತಾಂತರಿಸಲಾಯಿತು. ೧೯೮೪ರಲ್ಲಿ ಕೆಐಎಡಿಬಿ ಎಂಆರ್‌ಪಿಎಲ್‌ಗೆಂದು ಪತ್ರಾವೋ ಅವರ ೧೪.೨೭ ಎಕರೆ ಭೂಮಿಯನ್ನು ನೀಡಲು ನೊಟೀಸ್ ಜಾರಿ ಮಾಡಿತು. ೧೯೯೬ರಲ್ಲಿ ಎಂಆರ್‌ಪಿಎಲ್ ೧೪.೨೭ ಎಕರೆ ಪ್ರದೇಶದಲ್ಲಿನ ೫೨ ಸೆಂಟ್ಸ್ ಜಾಗವನ್ನು ವಶಪಡಿಸಿಕೊಂಡಿತು. ೨೦೦೯ರಲ್ಲಿ ೧.೪೫ ಎಕರೆ ಭೂಪ್ರದೇಶ ಯುಪಿಸಿಎಲ್ (ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್) ಯೋಜನೆಗೆ ನಿಗದಿಯಾಯಿತು. ಈ ಮಧ್ಯೆ ೨೦೦೭ರಲ್ಲಿ ಕೆಐಎಡಿಬಿ ಹಲವು ವಿವಿಧ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಬರುವ ಪೆರ್ಮುದೆ ಹಾಗೂ ಕಳವಾರು ಗ್ರಾಮದ ೧೭೧ ಎಕರೆ ಭೂಪ್ರದೇಶವನ್ನು ಎಸ್‌ಇಝಡ್‌ಗೆ ಹಸ್ತಾಂತರಿಸುವುದಾಗಿ ನೊಟೀಸ್ ಜಾರಿ ಮಾಡಿತು. ಅದರಲ್ಲಿ ಗ್ರೆಗರಿ ಅವರ ಭೂಮಿಗೂ ನೊಟೀಸ್ ಜಾರಿಯಾಗಿತ್ತು. ಆದರೆ ಇಂದು ಅವರ ಮನೆ ನೆಲಸಮಗೊಂಡಿರುವುದು ಎಂಆರ್‌ಪಿಎಲ್ ಯೋಜನೆ ವಿಸ್ತರಣೆಗಾಗಿ.
ಈ ಬಗ್ಗೆ ವಿಶೇಷ ಭೂಸ್ವಾಧೀನ ಅಧಿಕಾರಿ ಕೃಷ್ಣಮೂರ್ತಿ ಅವರಲ್ಲಿ ಕೇಳಿದರೆ, ಎಸ್‌ಇಝಡ್ ಈ ಭೂಮಿಯನ್ನು ನಮಗೆ ಸರಂಡರ್ ಮಾಡಿತು. ಹಾಗಾಗಿ ಇದನ್ನು ಎಆರ್‌ಪಿಎಲ್ ಬಳಸಿಕೊಳ್ಳಲಿದೆ ಎಂದರು. ಒಟ್ಟಾರೆ ಈ ಎಲ್ಲಾ ಭೂ ಹಸ್ತಾಂತರ ಹಾಗೂ ದಶಕಗಳ ಕಾಲದ ಹೋರಾಟದಿಂದ ಕಂಗೆಟ್ಟಿರುವ ಗ್ರೆಗರಿ ತಮ್ಮಲ್ಲಿ ಒಂದು ರಾಶಿ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಕೋರ್ಟು-ಕಚೇರಿ ಎಂದು ಇಂದಿಗೂ ತಿರುಗಾಡುತ್ತಲೇ ಇದ್ದಾರೆ.
ಕೆಐಎಡಿಬಿ ಅಮಾನವೀಯ, ಅನಾಗರಿಕ ವರ್ತನೆಗೆ ಶಿಕ್ಷೆಯಾಗಲೇಬೇಕು, ರೈತನ ಬದುಕಿನ ಸ್ವರೂಪವನ್ನೇ ಹಾಳು ಮಾಡಿದ ಇವರು ಖಂಡಿತಾ ಮನುಷ್ಯರಲ್ಲ, ರಾಕ್ಷಸರು. ರೈತರ ಶಾಪ ಇವರಿಗೆ ತಟ್ಟದೆ ಇರುವುದಿಲ್ಲ ಎಂದು ಗುಡುಗುತ್ತಾರೆ ಪತ್ರಾವೋ. ಪತ್ರಾವೋ ಕುಟುಂಬ ಕರ್ತವ್ಯಕ್ಕೆ ಅಡ್ಡಿಪಡಿಸಿತು ಎಂದು ಕೆಐಎಡಿಬಿ ಮೇರಿ ಪತ್ರಾವೋ ವಿರುದ್ಧ ಕೇಸು ದಾಖಲು ಮಾಡಿದ್ದರೂ, ನಾವು ಕೇಸು ದಾಖಲು ಮಾಡಿಯೇ ಇಲ್ಲ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿ ಎಸ್. ಕೃಷ್ಣಮೂರ್ತಿ ಟಿಎಸ್‌ಐಗೆ ತಿಳಿಸಿದ್ದಾರೆ. ಏಪ್ರಿಲ್ ೨೯ರಂದು ಅವರು ಕೇಸು ದಾಖಲು ಮಾಡಿದ್ದಾರೆಂದೇ ನಾವು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದು ಎನ್ನುತ್ತಾರೆ ಗ್ರೆಗರಿ ಪತ್ರಾವೋ. ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ೨೫ ದಿನಗಳ ನಿರಂತರ ಉಪವಾಸ ಸತ್ಯಾಗ್ರಹ ಮಾಡಿದ್ದ ಗ್ರೆಗರಿ ಮನೆ ಧ್ವಂಸ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ.
ಗಮನಿಸಬೇಕಾದ ಅಂಶ ಎಂದರೆ ಪತ್ರಾವೋ ಕುಟುಂಬ ಭೂಮಿ ಕಳೆದುಕೊಂಡಿರುವುದು ಮೊದಲನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ. ಈ ಹಂತಕ್ಕೆ ಈಗಾಗಲೇ ೧೮೦೦ ಎಕರೆ ಭೂಮಿ ವಶಪಡಿಸಿಕೊಂಡಾಗಿದ್ದು ಅಲ್ಲಿ ದೊಡ್ಡ ಮಟ್ಟದ ಕೈಗಾರಿಕೆಗಳೂ ಆರಂಭವಾಗಿವೆ.
ಎರಡನೇ ಹಂತದಲ್ಲಿ ೨೦೩೫ ಎಕರೆ ಭೂ ಸ್ವಾಧೀನಕ್ಕೆ ಈಗಾಗಲೇ ಕೆಐಎಡಿಬಿ ಸಿದ್ಧತೆ ಮಾಡಿಕೊಂಡಿದ್ದು ಹಲವಾರು ಕುಟುಂಬಗಳು ತಮ್ಮ ಕೃಷಿ ಪ್ರದೇಶಗಳನ್ನು ಕಳೆದುಕೊಳ್ಳಲಿವೆ. ಕುಡುಬಿ ಜನಾಂಗದವರು ನೆಲೆಸಿರುವ ಕುಡುಬಿಪದವಿನಲ್ಲಿನ ೧೫.೩೪ ಎಕರೆ ಭೂಪ್ರದೇಶವನ್ನು ಅದಾಗಲೇ ಎರಡು ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಗಿದೆ. ಆ ಜನಾಂಗದ ಭೂಮಿ ಸೇರಿದಂತೆ ಹಲವು ಕುಟುಂಬಗಳ ಬದುಕೇ ಬಂಜರಾಗಿಬಿಟ್ಟಿದೆ.
ಪೆರ್ಮುದೆ ಗ್ರಾಮದಲ್ಲಿನ ಸುಮಾರು ೭ ಎಕರೆ ಪ್ರದೇಶದಲ್ಲಿ ಅತ್ಯಂತ ಸುಂದರ ಮಾದರಿಯಲ್ಲಿ ಕೃಷಿ ಮಾಡಿಕೊಂಡಿರುವ ಲಾರೆನ್ಸ್ ಅವರ ಮನೆ ಬಳಿ ತೆರಳಿದರೆ ಹಚ್ಚಹಸಿರು ಎದ್ದುಕಾಣುತ್ತದೆ. ಅವರು ಮಾಡಿರುವ ಕೃಷಿ ನಮಗೆಲ್ಲಾ ಮಾದರಿ ಎಂದು ಹೇಳುವ ಪೆರ್ಮುದೆಯ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಉಪಾಧ್ಯಾಯರು ನಾನು ಖಂಡಿತಾ ಈ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅದೇನೆ ಆಗಲಿ ನಾವು ಹೋರಾಟಕ್ಕೆ ಸಿದ್ಧ ಎನ್ನುತ್ತಾರೆ. ನಮ್ಮ ಮಾತುಕತೆಯನ್ನು ಗಮನಿಸುತ್ತಿದ್ದ ಉಪಾಧ್ಯಾಯರ ೮೩ ವರ್ಷದ ತಾಯಿ ವರದ ಅವರು, ನಾನು ಸತ್ತರೆ ಇಲ್ಲೇ ಸಾಯುವುದು. ನನ್ನ ಪ್ರಾಣವನ್ನಾದರೂ ನೀಡುವೆ, ಆದರೆ ಭೂಮಿಯನ್ನಲ್ಲ. ಇದೇನು ಅವರ ಅಪ್ಪನ ಮನೆ ಆಸ್ತಿಯಾ ಎಂದು ಪ್ರಶ್ನಿಸಿದರು. ಆದರೆ ಕೆಐಎಡಿಬಿ ಪ್ರಕಾರ ಇಲ್ಲಿರುವುದು ಫಲವತ್ತಾದ ಭೂಮಿ ಅಲ್ಲ. ಬೆಟ್ಟಗುಡ್ಡಗಳಿಂದ ಕೂಡಿದ್ದ ಭೂಮಿಯಲ್ಲಿ ನೀವೆಂತಹ ಕೃಷಿ ಮಾಡುತ್ತೀರಿ ಎಂಬುದು ಕೆಐಎಡಿಬಿ ಅಧಿಕಾರಿಗಳ ಪ್ರಶ್ನೆ. ಆದರೆ ವಾಸ್ತವ ಹಾಗಿಲ್ಲ, ಅದು ಫಲವತ್ತಾದ ಜಾಗವೇ ಎಂಬುದು ಕೆಐಎಡಿಬಿಗೂ ಗೊತ್ತು, ಎಸ್‌ಇಝಡ್‌ಗೂ ಗೊತ್ತು. ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಕುಟುಂಬಗಳಿಗೂ ಗತಿಯೂ ಗ್ರೆಗರಿ ಪತ್ರಾವೋ ಕುಟುಂಬಕ್ಕೇ ಉಂಟಾದ ಗತಿಯಾದಲ್ಲಿ ಅಚ್ಚರಿಯೇನಿಲ್ಲ ಬಿಡಿ.
ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನ!
ಎಂಎಸ್‌ಇಝಡ್ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳು ಅಂದರೆ ಕೈಗಾರಿಕೆಗಳಿಗೆ ಭೂಮಿ ನೀಡಿರುವ ಕುಟುಂಬದವರಿಗೆ ಉದ್ಯೋಗ ನೀಡಲಿದ್ದೇವೆ ಎಂದು ಎಸ್‌ಇಝಡ್ ಭರವಸೆ ನೀಡಿತ್ತು. ಇದಕ್ಕಾಗಿ ೧೦ನೇ ತರಗತಿ ಪಾಸಾಗಿರುವ ಅಲ್ಲಿನ ಕುಟುಂಬದ ಮಕ್ಕಳಿಗೆ ಮಂಗಳೂರಿನ ಯೆಯ್ಯಾಡಿ ಬಳಿ ಇರುವ ಕೆಪಿಟಿ (ಕರ್ನಾಟಕ ಪಾಲಿಟೆಕ್ನಿಕ್)ಯಲ್ಲಿ ವಿಶೇಷವಾಗಿ ಸ್ಪೆಷಲ್ ಕೋರ್ಸಸ್ ಇನ್ ಕೆಮಿಕಲ್, ಮೆಕ್ಯನಿಕಲ್ ಅಂಡ್ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಷಯದಲ್ಲಿ ಮೂರು ವರ್ಷಗಳ ತರಬೇತಿ ಶಿಕ್ಷಣವನ್ನು ನೀಡುತ್ತಿದೆ. ಈಗಾಗಲೇ ಶಿಕ್ಷಣದ ೫ ಸೆಮೆಸ್ಟರ್‌ಗಳು ಮುಗಿದಿದ್ದು ಒಂದು ಸೆಮೆಸ್ಟರ್ ಬಾಕಿ ಇದೆ. ಆದರೆ ಸಮಸ್ಯೆ ತಲೆದೋರಿರುವುದು ಶಿಕ್ಷಣದಲ್ಲಲ್ಲ. ಆದರೆ ನೀಡಿದ್ದ ಉದ್ಯೋಗ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಲಿದೆ ಎಂಬುದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿದೆ.
ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮಾತನಾಡಿಸಲೆಂದು ಟಿಎಸ್‌ಐ ‘ಕೆಪಿಟಿಗೆ ಭೇಟಿ ನೀಡಿದ್ದಾಗ ಅಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಆ ಕಾಲೇಜಿನ ಪ್ರಾಂಶುಪಾಲರಲ್ಲಿ ಕೇಳಿದಾಗ, ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ ಎಂದರು.
ಎಲ್ಲಾ ಮಕ್ಕಳಿಗೆ ಉದ್ಯೋಗ ದೊರಕುವುದು ಸಾಧ್ಯವಿಲ್ಲ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆ. ಎಸ್‌ಇಝಡ್ ತನ್ನ ನಿರೀಕ್ಷೆಯ ಪ್ರಮಾಣದಷ್ಟು ಅಭಿವೃದ್ಧಿ ಸಾಧಿಸಲು ವಿಫಲವಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ನೀಡಲಾಗುತ್ತಿರುವ ಶಿಕ್ಷಣದ ಅವಧಿಯೂ ಕೊನೆಗೊಳ್ಳುವ ದಿನಗಳು ದೂರವಿಲ್ಲ. ಹಾಗಾಗಿ ಮನನೊಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಎಸ್‌ಇಝಡ್ ನೇರ ಹೊಣೆಯಾಗಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸಿದ ‘ಕೆಪಿಟಿಯ ಓರ್ವ ಸಿಬ್ಬಂದಿ.
ಕಾಲೇಜು ನೀಡಿರುವ ದಾಖಲೆ ಪ್ರಕಾರ ಇಲ್ಲಿ ಎಂಎಸ್‌ಇಝಡ್ ವ್ಯಾಪ್ತಿಗೆ ಒಳಪಟ್ಟ ೪೦೯ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ೩೧೯ ವಿದ್ಯಾರ್ಥಿ ಮತ್ತು ೮೯ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಟಿಎಸ್‌ಐ ಭೇಟಿ ನೀಡಿದ್ದ ಒಂದು ದಿನದ ನಂತರ ಅಂದರೆ ಜುಲೈ ೨೭ರಂದು ತಮ್ಮ ತರಗತಿ ಬಹಿಷ್ಕಾರ ಹಿಂತೆಗೆದುಕೊಂಡಿದ್ದರು. ಪೆರ್ಮುದೆಯ ಸಂಯುಕ್ತ ಹಿತರಕ್ಷಣಾ ಸಮಿತಿ, ಎಸ್‌ಇಝಡ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಮುಖ್ಯಮಂತ್ರಿಯವರ ಆಪ್ತಸಹಾಯಕ ಹಾಗೂ ಎಂಎಸ್‌ಇಝಡ್‌ನ ನಿರ್ದೇಶಕ ಮತ್ತು ಸಂಯೋಜಕ ಐ.ಎಸ್.ಎನ್. ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹಾಗೇ ಇನ್ನು ೧೦-೧೨ ದಿನಗಳೊಳಗಾಗಿ ತಾವು ಅಲ್ಲಿಗೆ ಬರುವುದಾಗಿಯೂ ಅವರು ಹೇಳಿದ್ದರು ಎನ್ನಲಾಗಿದೆ.
ಟಿಎಸ್‌ಐಗೆ ಮಾಹಿತಿ ನೀಡಿದ ಸಿಬ್ಬಂದಿ ಪ್ರಕಾರ ಎಂಎಸ್‌ಇಝಡ್ ವಿದ್ಯಾರ್ಥಿಗಳಿಗೆ ಎಂಎಸ್‌ಇಝಡ್‌ನಲ್ಲಿ ಬಿಟ್ಟರೆ ಬೇರೆಲ್ಲೂ ಕೆಲಸ ಸಿಗುವುದು ತುಂಬಾ ಕಷ್ಟದ ಮಾತು. ಏಕೆಂದರೆ ಅವರಲ್ಲಿ ಕೈಗಾರಿಕೆಗೆ ಬೇಕಾಗುವ ಕೌಶಲ್ಯ ಇಲ್ಲ. ಹಾಗೇ ಅವರಿಗೆ ಕಡಿಮೆ ಅಂಕಗಳನ್ನು ನೀಡಬಾರದು ಎಂದು ಎಸ್‌ಇಝಡ್ ತಾಕೀತು ಮಾಡಿದೆ. ಒಟ್ಟಾರೆ ಕೆಪಿಟಿಯಲ್ಲಿ ಬೋಧಿಸುತ್ತಿರುವ ಉಪನ್ಯಾಸಕರು ಈ ಕೆಲಸಕ್ಕೆ ಹೆಚ್ಚುವರಿ ವೇತನ ಪಡೆಯುತ್ತಿದ್ದಾರೆ. ಸಂಸ್ಥೆಗೂ ಕೂಡ ಲಾಭವಾಗಿದೆ. ನಷ್ಟವಾಗುವುದು ಮಾತ್ರ ಖಂಡಿತಾ ವಿದ್ಯಾರ್ಥಿಗಳಿಗೆ. ಏಕೆಂದರೆ ಇಲ್ಲಿನ ಸರ್ಟಿಫಿಕೇಟ್‌ನ್ನು ಹಿಡಿದುಕೊಂಡು ಹೋದರೆ ಖಂಡಿತ ಅವರಿಗೆ ಬೇರೆ ಕಡೆ ಉದ್ಯೋಗ ಸಿಗದು. ಇದು ಎಸ್‌ಇಝಡ್ ಅಧಿಕಾರಿಗಳು ಗ್ರಾಮಸ್ಥರು ಹಳ್ಳಿ ಜನರನ್ನು ತಮ್ಮ ವಿರುದ್ಧ ತಿರುಗಿಬೀಳದಂತೆ ಮಾಡಿಕೊಂಡಿರುವ ತಂತ್ರವಷ್ಟೇ.
ಒಟ್ಟಾರೆ ಕಡಲೂರಿನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಅಭಿವೃದ್ಧಿಯ ಹೆಸರಲ್ಲಿ ಹಳ್ಳಿಗರು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕೆಪಿಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿಬಿಟ್ಟಿದೆ. ಅದರ ನಡುವೆಯೇ ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು, ತೆಂಕ ಎಕ್ಕಾರಿನ ನಿವಾಸಿಗಳು ತಮ್ಮ ಮನೆಬಿಟ್ಟುಕೊಡಲು ಸಜ್ಜುಗೊಳ್ಳಬೇಕಿದೆ. ಮಂಗಳೂರಿನ ಹಳ್ಳಿಗಾಡಿನಲ್ಲಿ ಉಬ್ಬುಬ್ಬಿ ವಿಶಾಲವಾಗಿ ಹರಡಿ ಹೋಗಿದ್ದ ಹಚ್ಚಹಸಿರಿನ ವಸುಂಧರೆ ಎಸ್‌ಇಝಡ್, ಎಂಆರ್‌ಪಿಎಲ್ ಸೇರಿದಂತೆ ಕೈಗಾರಿಕಾ ಕಂಪನಿಗಳ ಕಬಂಧಬಾಹುಗಳಲ್ಲಿ ಸಿಲುಕಿ ತನ್ನ ದಿನಗಳನ್ನು ಎಣಿಸಿಕೊಳ್ಳಬೇಕಿದೆ.
Thursday, 28 January 2010
ಇದನ್ನು ಪಾಕಿಸ್ತಾನಿಗಳು ಸ್ವಯಂಕೃತವಾಗಿ ತಂದುಕೊಂಡ ದುಸ್ಥಿತಿ ಎನ್ನಬೇಕೇ ಅಥವಾ ಮನೆಗೆ ಬಾ ಅತಿಥಿ ಎಂದು ಆಮಂತ್ರಣ ನೀಡಿ ಕೊನೆಗೆ ಅವರ ಮುಖವನ್ನೂ ನೋಡದೇ ‘ನೀನು ಯಾರು’? ಎಂಬ ಭಾರತದ ಸೋಗಲಾಡಿ ವರ್ತನೆ ಎನ್ನಬೇಕೆ?
ಐಪಿಎಲ್ ಎಂಬ ಆಧುನಿಕ ಕ್ರಿಕೆಟ್‌ನ ಮಹಾಮೇಳದಲ್ಲಿ ತಾನೂ ಭಾಗವಹಿಸಬೇಕೆಂಬ ಅಗಾಧ ಹುಮ್ಮಸ್ಸಿನ ಮುಖ ಹೊತ್ತಿದ್ದ ಪಾಕಿಸ್ತಾನ, ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಮತ್ತು ಪಾಕಿಸ್ತಾನಿ ಆಟಗಾರರು ಇಂದು ಅವಮಾನದ ಮುಖ ಹೊತ್ತು ಅಸಮಾಧಾನದ ಹಾಗೂ ಆಶಾಭಂಗದ ನಿರ್ಜೀವ ಕಳೆಯಿಂದ ಕಾಣುತ್ತಿದ್ದಾರೆ. ಅವರು ಬೇಸರ ವ್ಯಕ್ತಪಡಿಸಿರುವುದನ್ನು ನೋಡಿದರೆ ನೈಜ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಬೇಸರವಾಗದೇ ಇರದು. ಅದೂ ಅಲ್ಲದೆ ಶಹೀದ್ ಅಫ್ರಿದಿಯಂತಹ ಹೇಳಿ ಮಾಡಿಸಿದ ಟಿ-೨೦ ಆಟಗಾರನನ್ನು ಫ್ರಾಂಚೈಸಿಗಳು ನಮಗೆ ಬೇಡ ಎಂದಾಗ, ಅಲ್ಲಿ ಏನೋ ಒಳ ರಾಜಕೀಯ ಇದೆ ಎಂಬ ಅನುಮಾನ ಮೂಡದೇ ಇರಲು ಸಾಧ್ಯವಿಲ್ಲ. ಹಾಗಾದರೆ ಇಲ್ಲಿ ತಪ್ಪು ನಮ್ಮವರದ್ದೇ? ಪಾಕ್ ಆಟಗಾರರಿಗೆ ಐಪಿಎಲ್-೩ರಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿ, ಕೊನೆಗೆ ’ಇಲ್ಲ’ ಎಂದದ್ದು ನಮ್ಮ ತಪ್ಪಾಯಿತೇ?
ಹಾಗೆ ನೋಡಿದರೆ ಸದಾ ತಮ್ಮ ತಪ್ಪನ್ನು ಮರೆಮಾಚುವ ಪಾಕಿಸ್ತಾನಿಗಳು ಐಪಿಎಲ್ ೨ರಲ್ಲಿ ಭಾಗವಹಿಸಿರಲಿಲ್ಲ. ಏಕೆ? ಅದಕ್ಕೆ ಕಾರಣಗಳೇನು ಎಂಬುದು ಇಡೀ ಲೋಕಕ್ಕೆ ಗೊತ್ತು. ಹಾಗಾದರೆ ನಾವು (ಪಾಕಿಸ್ತಾನ) ಐಪಿಎಲ್‌ನಲ್ಲಿ ಭಾಗವಹಿಸುವುದು ಸಮಯೋಚಿತವೇ? ಪರಿಸ್ಥಿತಿ ಇಂದು ಸುಧಾರಿಸಿದೆಯೇ? ಎಂಬುದರ ಬಗ್ಗೆ ಯೋಚಿಸಿ, ಮೆದುಳಿಗೆ ಕೊಂಚ ಕೆಲಸ ಕೊಟ್ಟಿದ್ದರೆ, ಪಾಕಿಸ್ತಾನದ ಮಂದಿ ಅವಮಾನ ಎಂದು ಘೀಳಿಡುವ ಅವಶ್ಯಕತೆಯೇ ಬರುತ್ತಿತ್ತೇ...?
೨೦೦೮ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಐಪಿಎಲ್- ೨ರಿಂದ ಪಾಕ್ ಆಟಗಾರರನ್ನು ಹೊರಗಿಟ್ಟಾಗಲೇ ಪಾಕ್ ಕ್ರಿಕೆಟ್ ಸಂಸ್ಥೆಗೆ ’ಬುದ್ಧಿ’ ಬರಬೇಕಿತ್ತು ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿತ್ತು. ಐಪಿಲ್ ಭಾರತದ ಕೂಸು, ಇದರಲ್ಲಿ ನಮ್ಮ ತಕರಾರು ಬೇಡ. ಉತ್ತಮ ದ್ವಿಪಕ್ಷೀಯ ಸಂಬಂಧದಿಂದ ಎಲ್ಲವೂ ಒಳ್ಳೆಯಾದದರೆ ಆ ಬಳಿಕವಷ್ಟೇ ಐಪಿಎಲ್‌ನಲ್ಲಿ ಭಾಗವಹಿಸುವಿಕೆ ಎಂದು ಪಾಕ್ ಚಿಂತನೆ ನಡೆಸಬಹುದಿತ್ತು. ಆದರೆ ಇಂದು ಭಾರತ-ಪಾಕ್ ಸಂಬಂಧ ಹಳಸಿದೆ. ರಾಜತಾಂತ್ರಿಕ ಹಾಗೂ ಸಾರ್ವಜನಿಕವಾಗೇ ದ್ವೇಷಾಗ್ನಿ ಉಕ್ಕಿ ಹರಿಯುತ್ತಿದೆ. ಮುಂಬೈ ದಾಳಿ ಬಗ್ಗೆ ಪಾಕಿಸ್ತಾನದ ಕೈವಾಡದ ಬಗ್ಗೆ ಪುರಾವೆಗಳು ಲಭ್ಯವಿದ್ದರೂ ಪಾಕ್ ಸರ್ಕಾರ ಜವಾಬ್ದಾರಿ ಹೊತ್ತಿಲ್ಲ. ಅಂಗೈಯಲ್ಲಿ ಹುಣ್ಣಿಟ್ಟುಕೊಂಡು ಮುಚ್ಚಿಡಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ವಾಸ್ತವವನ್ನು ಅರಿಯಬೇಕಿತ್ತು. ಐಪಿಲ್‌ಗೆ ಬರುತ್ತೀರಾ ಎಂದು ನಮ್ಮವರು ಆಹ್ವಾನವಿಟ್ಟಾಗ, ನೋ, ಥ್ಯಾಂಕ್ಸ್ ಎಂದಿದ್ದರೆ ಅದು ಪ್ರಬುದ್ಧ ನಡೆ ಎನಿಸುತ್ತಿತ್ತು.
ಇನ್ನು ರಾಜತಾಂತ್ರಿಕ ಹಿನ್ನೆಲೆಯಲ್ಲಿ ನೋಡಿದರೆ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡ ಇದೆ ಎಂಬುದನ್ನು ಅಮೆರಿಕದ ಫೆಡರಲ್ ತನಿಖಾ ಏಜೆನ್ಸಿಗಳು ಸಾರಿ ಹೇಳಿವೆ. ಕಂಬಿಗಳ ಹಿಂದೆ ಕುಳಿತಿರುವ ಅಜ್ಮಲ್ ಅಮೀರ್ ಕಸಬ್ ಎಂಬ ನರಭಕ್ಷಕ ’ಅರೆ ಹುಚ್ಚ’ನಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೂ, ನೂರಾರು ಮಂದಿ ಅಮಾಯಕರ ಪ್ರಾಣವನ್ನೇ ಕಿತ್ತುಕೊಂಡ, ಮುಗ್ಧ ಜೀವಗಳನ್ನು ಅನಾಥರನ್ನಾಗಿ ಮಾಡಿದ್ದನ್ನು ಮರೆಯಲು ಸಾಧ್ಯವಿದೆಯೇ? ಅಮಾಯಕರನ್ನು ಕ್ಷಣಕ್ಷಣವೂ ದುಃಖದ ಕರಾಳ ಕಡಲಲ್ಲಿ ನೊಂದು ಬೆಂದು ಬೆಂಡಾಗುವಂತೆ ಮಾಡಿದ ‘ಜಿಹಾದಿ’ ಉಗ್ರರನ್ನು ಬಗಲಲ್ಲಿಟ್ಟುಕೊಂಡೇ ‘ತಮಾಷೆ’ ನೋಡುತ್ತಿರುವ ಪಾಕಿಸ್ತಾನಿಗಳು ಭಾರತದ ಮಂದಿ ನಮ್ಮನ್ನು ಅವಮಾನ ಮಾಡಿದ್ದಾರೆ ಎಂದು ಲೋಕದಲ್ಲೆಲ್ಲಾ ಬೊಬ್ಬೆ ಇಟ್ಟರೆ ಭಾರತೀಯರು ಮೈ ಪರಚಿಕೊಳ್ಳದೆ ಇನ್ನೇನು ತಾನೆ ಮಾಡಲು ಸಾಧ್ಯ?
ಆದರೆ ಎಲ್ಲದಕ್ಕೂ ಪಾಕ್ ಕ್ರಿಕೆಟ್ ಸಂಸ್ಥೆ ಅಥವಾ ಪಾಕ್ ಆಟಗಾರರನ್ನು ದೂರುವುದೂ ಇಲ್ಲಿ ಸಮಂಜಸ ಎನಿಸದು. ಏಕೆಂದರೆ ಪಾಕ್ ಆಟಗಾರರೊಂದಿಗೆ ಆಗಲೀ ಅಥವಾ ಕ್ರಿಕೆಟ್ ಮಂಡಳಿ ನಡುವೆ ಇಲ್ಲಿ ಬಿಕ್ಕಟ್ಟಿರುವುದಲ್ಲ. ರಾಜತಾಂತ್ರಿಕ ನೆಲೆಯಲ್ಲಿ ಭಾರತ-ಪಾಕ್ ಸಂಬಂಧ ನೆಲಕಚ್ಚಿದೆ ಹಾಗೂ ಮುಖ್ಯವಾಗಿ ೨೬/೧೧ರ ನರಮೇಧದ ಬಳಿಕ ಪಾಕ್ ಮೇಲಿನ ಭಾರತೀಯರ ಮನೋಧರ್ಮ ಬದಲಾಗಿದೆ. ಆ ನೆಲೆಯಲ್ಲಿ ನೋಡಿದರೆ ಪಾಕ್ ರಾಜತಾಂತ್ರಿಕ ನಾಯಕರೇ ಸದ್ಯದ ಮಟ್ಟಿಗೆ ಭಾರತದಲ್ಲಿ ಕ್ರಿಕೆಟ್ ಬೇಡ ಎಂದೇ ಪ್ರತಿಕ್ರಿಯಿಸಬೇಕಿತ್ತು. ಆದರೆ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸದೆ, ನಿರ್ಧಾರ ತೆಗೆದುಕೊಂಡು, ಈಗ ಐಪಿಎಲ್ ಫ್ರಾಂಚೈಸಿಗಳು ನಮ್ಮನ್ನು ಅವಮಾನ ಮಾಡಿದರು, ಇಲ್ಲಿ ನವದೆಹಲಿಯ ಕೈವಾಡ ಇದೆ ಎಂದು ಹುಚ್ಚೆದ್ದು ಅಪವಾದ ಹೊರಿಸಿದರೆ ಪರಿಣಾಮ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಪಾಕ್ ನಾಯಕರು ಅರಿತಿದ್ದಾರಾ?
ಇನ್ನು ಆಸ್ಟ್ರೇಲಿಯದಲ್ಲಿ ಭಾರತೀಯರ ವಿರುದ್ಧ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಶಿವಸೇನೆ ಆಸ್ಟ್ರೇಲಿಯದ ಆಟಗಾರರು ಐಪಿಎಲ್‌ನಲ್ಲಿ ಅದು ಹೇಗೆ ಆಟವಾಡುತ್ತಾರೋ ನಾವೂ ನೋಡುತ್ತೇವೆ ಎಂಬ ಸವಾಲು ಹಾಕಿದ್ದಾರೆ. ಒಂದುವೇಳೆ ಅವರು ಪಾಲ್ಗೊಂಡದ್ದೇ ಆದಲ್ಲಿ ಮುಂಬೈನಲ್ಲಿ ಹಿಂಸಾಚಾರ ನಡೆಯುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿವೆ. ಹಾಗಾಗಿ ದ್ವೇಷಾಗ್ನಿಯ ಜ್ವಾಲೆ ಭುಗಿಲೆದ್ದ ಇಂದಿನ ದಿನಗಳಲ್ಲಿ ಪಾಕಿಸ್ತಾನವೂ ಎಚ್ಚೆತ್ತುಕೊಳ್ಳಬೇಕಿತ್ತು. ಬದಲಾಗಿ ತನ್ನ ಬುಡವನ್ನೇ ನೆಟ್ಟಗಿಟ್ಟುಕೊಳ್ಳದಿರುವ ಪಾಕ್, ಭಾರತದ ತಪ್ಪನ್ನೇ ವೈಭವಿಸಿ ಮಾತನಾಡಿದರೆ, ಅದು ಮುರ್ಖತನದ ಪರಮಾವಧಿ ಎನ್ನದೆ ವಿಧಿಯಿಲ್ಲ.
ಐಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ೧೧ ಕ್ರಿಕೆಟ್ ಆಟಗಾರರಿಗೆ ಯಾವೊಬ್ಬ ಪ್ರಾಂಚೈಸಿಯೂ ಮಣೆ ಹಾಕದಿರುವುದು ‘ರಾಷ್ಟ್ರೀಯ ಅವಮಾನ’ ಎಂದಿರುವ ಪಾಕಿಸ್ತಾನಕ್ಕೆ, ಆಟಗಾರರನ್ನು ಖರೀದಿಸುವುದು ಪ್ರಾಂಚೈಸಿಗಳಿಗೆ ಬಿಟ್ಟ ವಿಚಾರ ಎಂಬ ಸಾಮಾನ್ಯ ವಿಷಯವೂ ಗೊತ್ತ್ತಿಲ್ಲವೇ? ಆಸ್ಟ್ರೇಲಿಯದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವ ಬಗ್ಗೆಯೇ ಬಿಕ್ಕಟ್ಟು ಉಂಟಾಗಿರುವಾಗ ಇನ್ನೊಂದು ಬಿಕ್ಕಟ್ಟು ಉಂಟಾದರೇನು ಮಾಡುವುದು? ಎನ್ನುವ ಭಯ ಫ್ರಾಂಚೈಸಿಗಳಿಗೂ ಇತ್ತು. ಜೊತೆಗೆ ಭದ್ರತೆ ಸಮಸ್ಯೆ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ಐಪಿಎಲ್ ನಡೆಯಬೇಕೆಂಬ ಉದ್ದೇಶದಿಂದಲೇ ಪಾಕ್ ಆಟಗಾರರನ್ನು ಫ್ರಾಂಚೈಸಿಗಳು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವಿಚಾರ ಪಾಕಿಸ್ತಾನಕ್ಕೂ ತಿಳಿದೇ ಇರುತ್ತದೆ. ಭಯೋತ್ಪಾದನೆಯಿಂದ ದಿಕ್ಕೆಟ್ಟಿರುವ ಭಾರತಕ್ಕೆ ಪಾಕ್ ಮೇಲೆ ಸಹಜವಾಗಿಯೇ ದ್ವೇಷವಿದೆ ಎಂಬ ತೆರೆದ ವಾಸ್ತವಗಳು ಪಾಕಿಗಳಿಗೆ ತಿಳಿದಿರಲಿಲ್ಲವೇ?
ಅಷ್ಟಕ್ಕೂ ಐಪಿಎಲ್ ಆಟಗಾರರ ಖರೀದಿಯಲ್ಲಿನ ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಿದ್ದು ಇಲ್ಲಿ ಪಾಕಿಸ್ತಾನವೇ ಎಂಬುದೂ ಕಣ್ಣೆದುರಿಗಿನ ವಾಸ್ತವ. ಭಾರತದ ವರ್ತನೆ ನಿಜಕ್ಕೂ ಖಂಡನಾರ್ಹ. ಏಟಿಗೆ ಇದಿರೇಟು ನೀಡಿಯೇ ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಕ್ರೀಡಾ ಸಚಿವ ಇಜಾಸ್ ಜಕ್ರಾನಿ, ಯಾವ ಉದ್ದೇಶವಿಟ್ಟುಕೊಂಡು ಆ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಅವರೇ ಬಲ್ಲರು. ಆದರೆ ಪಾಕಿಸ್ತಾನದ ಇಂದಿನ ವಾಸ್ತವವನ್ನು ಎದುರಿಗಿಟ್ಟು ವಿಶ್ಲೇಷಿಸಿದ್ದರೆ ಅವರು ಖಂಡಿತಾ ಆ ಬಗೆಯ ಹೇಳಿಕೆ ನೀಡುತ್ತಿರಲಿಲ್ಲ. ತಮ್ಮೊಳಗಿನ ಸಮಸ್ಯೆ ಏನು ಎಂಬುದನ್ನು ಪರಾಮರ್ಶಿಸಿ ಅವಲೋಕಿಸಿದ್ದರೆ ಆ ಮಟ್ಟಿನ ಬೇಜವಾಬ್ದಾರಿಯ ಮಾತು ನಾಲಗೆಯಿಂದ ಹೊರಚಿಮ್ಮುತ್ತಿರಲಿಲ್ಲ!
ಪಾಕ್ ಕ್ರೀಡಾ ಸಚಿವರಿಗೆ ಒಂದು ಪ್ರಶ್ನೆ. ಒಂದು ವೇಳೇ ಇಂದಿನ ಬಿಕ್ಕಟ್ಟಿನ ದಿನಗಳಲ್ಲಿ ಪಾಕಿಸ್ತಾನದಲ್ಲೇ ನೀವು ಐಪಿಎಲ್ ಮಾದರಿಯ ಪಿಪಿಎಲ್ ಆರಂಭ ಮಾಡಿದರೆ ಹೇಗಿರಬಹುದು? ನಿಮ್ಮ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ನೀಡುತ್ತೇವೆ ಎಂದು ಆಹ್ವಾನ ನೀಡಿದರೂ ಅದೆಷ್ಟು ದೇಶದ ಆಟಗಾರರು ಆಹ್ವಾನವನ್ನು ಖುಷಿಯಿಂದ ಒಪ್ಪಿಯಾರು? ಶ್ರೀಲಂಕಾ ಆಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಳೆದ ವರ್ಷದ ಘಟನೆ ನೆನೆಸಿಕೊಂಡರೆ ಜೀವದ ಬಗ್ಗೆ ಭಯವಿದ್ದವನು ಪಾಕಿಸ್ತಾನಕ್ಕೆ ಬರಲಾದರೂ ಸಾಧ್ಯವಿದೆಯೇ? ಇಂದಿನ ಜಟಿಲ ಬಿಕ್ಕಟ್ಟು ಹಾಗೂ ಅಭದ್ರತೆಯ ಕರಿನೆರಳ ಪಾಕಿಸ್ತಾನದಲ್ಲಿ ಕ್ರಿಕೆಟ್ ಬಿಡಿ, ಯಾವ ಆಟವನ್ನಾಡಲೂ ವಿದೇಶಿಗರು ಬಯಸುವುದಿಲ್ಲ. ಈ ವಿಷಯವನ್ನು ಇಜಾಸ್ ಅವರು ನೆನಪಿಟ್ಟುಕೊಳ್ಳಲಿ. ಭಾರತಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ಉಸುರುವ ಬದಲು ನಿಮ್ಮಲ್ಲಿನ ಬಿಕ್ಕಟ್ಟು ನಿವಾರಣೆ ಬಗೆ ಹೇಗೆ ಎಂಬ ಬಗ್ಗೆ ಯೋಚಿಸಿ ಅಥವಾ ಸಂಬಂಧಪಟ್ಟವರಿಗೆ ಆ ಕುರಿತು ಬುದ್ಧಿ ಹೇಳಿ.
ಇವೆಲ್ಲದರ ನಡುವೆ, ಪಾಕಿಸ್ತಾನದಲ್ಲಿ ಭಾರತದ ವಿರುದ್ಧ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಕೇಬಲ್ ಟಿವಿ ಮಾಲೀಕರೂ ಐಪಿಎಲ್‌ನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಸರಿಯಾಗಿ ಪಾಕಿಸ್ತಾನ ಕಬಡ್ಡಿ ಫೆಡರೇಷನ್ (ಪಿಕೆಬಿ) ಭಾರತದ ಕಬಡ್ಡಿ ಪ್ರವಾಸವನ್ನು ರದ್ದುಗೊಳಿಸಿದೆ. ಭಾರತಕ್ಕೆ ಬರುವುದಿಲ್ಲ ಎಂದು ‘ಪಿಕೆಬಿ’ ಖಂಡತುಂಡವಾಗಿ ಹೇಳಿದೆ. ಜೊತೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಜಹೀರ್ ಅಬ್ಬಾಸ್ ಪಾಕ್ ಹಾಕಿ ತಂಡ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿರುವ ’ಹಾಕಿ ವಿಶ್ವಕಪ್’ನಿಂದ ಹೊರಗುಳಿಯಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕ್ರೀಡಾ ಸಚಿವ ಇಜಾಸ್ ಜಖ್ರಾನಿ ಅವರಲ್ಲಿ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ. ಒಟ್ಟಾರೆ ಪಾಕಿಸ್ತಾನದ ಸ್ವಯಂಕೃತ ಅಪರಾಧ, ಐಪಿಎಲ್ ಸಂಘಟಕರ ತರಾತುರಿಯ ನಿರ್ಧಾರ, ಪಾಕ್ ನಾಯಕರ ಬೇಜವಾಬ್ದಾರಿ ಹೇಳಿಕೆ, ಕ್ರೀಡೆಯಲ್ಲಿ ರಾಜಕೀಯದ ನುಸುಳುವಿಕೆ... ಈ ಎಲ್ಲಾ ವಿಷಜಂತುಗಳು ದ್ವಿಪಕ್ಷೀಯ ಸಂಬಂಧ ಸುಧಾರಣೆ ಎಂಬ ಪದಕ್ಕೇ ಕಲ್ಲೆಸೆದಿವೆ...
Saturday, 12 September 2009
Here are the Tips.. :-)
Recently my friend delivered me some LOVE TIPS from his own
LOVE's Bank :-)
Here by I have uploaded that in my blog; so that even my comrades could use these tips for their overwhelming success. :) :)
1. ಪ್ರೀತಿಯಲ್ಲಿ ನಂಬಿಕೆ ಮುಖ್ಯ. ಅದು ಸಂಬಂಧ ಗಟ್ಟಿಮಾಡುತ್ತದೆ.
2. ಮಾತು ಸುಳ್ಳು ಹೇಳಿದರೂ, ನಲ್ಲನ ಕಣ್ಣು ಸುಳ್ಳು ಹೇಳಲಾರದು
3. ಮಧ್ಯವಯಸ್ಕ ಮಾನಿನಿಯರೇ ಹೆಚ್ಚು ಪ್ರಚೋದನಕಾರಿ : ಸಮೀಕ್ಷೆ
4. ಚುಂಬನಕ್ಕೂ ಮುನ್ನ ಬಾಯನ್ನು ಚೆನ್ನಾಗಿ ತೊಳೆದುಕೊಳ್ಳಿ
5. ಹೊಗಳಿಕೆಗೆ ಕರಗದ ಜೀವಿ ಇಲ್ಲ. ಪ್ರೇಯಸಿಯ ಮನಸಾರೆ ಹೊಗಳಿ
6. ಪ್ರೀತಿಯಲ್ಲಿ ಪರಸ್ಪರ ಕೊಟ್ಟು ತಗೋ ಪಾಲಿಸಿ ಅನುಸರಿಸಿ,ಆನಂದಿಸಿ
7. ಪ್ರೀತಿಯಲ್ಲಿ ಕಾಮಕ್ಕಿಂತ ಪರಸ್ಪರ ಆಸರೆಯ ಅಗತ್ಯ ಹೆಚ್ಚು, ಗಮನಿಸಿ
8. ಸಣ್ಣಪುಟ್ಟ ಕಾಣಿಕೆಗಳೇ ಪ್ರೀತಿಯ ಪ್ರಾಮಾಣಿಕತೆಯ ಸೂಚಕ.
9. ಪ್ರೇಮದಲ್ಲಿ ಕೊನೆವರೆಗೂ ಜತೆಗಿರುವ ಆತ್ಮವಿಶ್ವಾಸ ಮುಖ್ಯ..
10.ಹೆಣ್ಣು ಪ್ರೀತಿಸುವುದು ಒಮ್ಮೆ ಮಾತ್ರ. ಗಂಡಿಗೆ ಅದು ಅರ್ಥ ಆಗಬೇಕು.
11.ಗಂಡಿನ ಕೋಪ, ಹೆಣ್ಣಿನ ಶಾಂತತೆ ಸಮನಾಗಿ ಬೆರೆತರಷ್ಟೇ ಪ್ರೀತಿ ಸಾಧ್ಯ.
12.ನಿರ್ಮಲ ಪ್ರೇಮದಲ್ಲಿ ಕಾಮಕ್ಕೆ ಆಸ್ಪದವಿಲ್ಲ.ಕಾಮ ಕ್ಷಣಿಕ ಅರಿವಿರಲಿ
13.ಪ್ರೀತಿ ಸೋ ಹೃದಯಗಳು ಮಗುವಿನಂತೆ ನಿಷ್ಕಪಟವಾಗಿರುತ್ತದೆ.
14.ನೀವು ಹೆಚ್ಚು ಕಾಲ ಆನಂದವಾಗಿರಬೇಕೆ ಹಾಗಾದ್ರೆ ಪ್ರೀತಿ ಮಾಡಿ.
15.ಪ್ರೀತಿ ಮಾಡುವುದರಿಂದ ದೈಹಿಕ, ಮಾನಸಿಕ ಸಮತೋಲನ ಸಾಧ್ಯ.
16.ಪ್ರೇಯಸಿಯನ್ನು ಎಂದೂ ಎಲ್ಲರೆದುರು ಬೈಯಬೇಡಿ. ಅದು ಅಪಾಯ
17.ಎರಡು ಪ್ರಾಮಾಣಿಕ ಹೃದಯಗಳ ನಡುವೆ ಬೆಸೆಯುವ ಕೊಂಡಿಯೇ ಪ್ರೀತಿ
18.ಸಂಗಾತಿಯನ್ನು ದಿನಂಪ್ರತಿ ಆಕೆ ಇಷ್ಟಪಡುವ ಹೆಸರಿನಿಂದ ಕರೆಯಿರಿ
19.ಸಂಗಾತಿಯಲ್ಲಿ ಹಣದ ವಿಚಾರದ ಕುರಿತು ಅಧಿಕ ಚರ್ಚೆ ಒಳಿತಲ್ಲ
20.ಪ್ರೀತಿಯಲ್ಲಿ ನಿಮ್ಮ ಹಿಂದಿನ ತಪ್ಪುಗಳ ಬಗ್ಗೆ ಚಿಂತಿಸದೆ ಮುಂದುವರಿಯಿರಿ
21.ಗಾತಿಗೆ ಯಾವುದು ಮುಖ್ಯ ಎಂಬುದನ್ನರಿತು ಅದಕ್ಕೆ ಸ್ಪಂದಿಸಿರಿ
22.ಸಂಗಾತಿಯ ಭವಿಷ್ಯ, ಯೋಜನೆಗಳ ಕುರಿತು ಚರ್ಚಿಸಿ, ಪ್ರತಿಕ್ರಿಯಿಸಿ
23.ನಗುಮುಖದೊಂದಿಗೆ ಸದಾ ಸಂಗಾತಿಯನ್ನು ಕಾರ್ಯದಲ್ಲಿ ಹುರಿದುಂಬಿಸಿ\
24.ಬಾಳಸಂಗಾತಿಯ ಆಯ್ಕೆ, ಇಚ್ಛೆಗಳ ಕುರಿತು ನಿಗಾ ಇರುವುದು ಅತ್ಯಗತ್ಯ
25.ಪ್ರವಾಸಿ ತಾಣಗಳಿಗೆ ಸಂಗಾತಿಯನ್ನು ಕರೆದೊಯ್ಯುವುದು ಉತ್ತಮ
26.ಸಂಗಾತಿಗೆ ನೀವು ಭರವಸೆಯ ಆಶಾಕಿರಣವಾಗಿ ಕಾಣುವಂತೆ ವರ್ತಿಸಿ
27.ಹೆಚ್ಚಿನ ಕಾರ್ಯಕ್ಕೆ ಸಂಗಾತಿಯ ಅಭಿಪ್ರಾಯ ಕೇಳುವುದು ಭರವಸೆದಾಯಕ
28.ವೈಮನಸ್ಯ ಉಂಟಾದಾಗ ಸಂಗಾತಿಯಲ್ಲಿ 'ಕ್ಷಮೆ' ಕೇಳಲು ಹಿಂಜರಿಯದಿರಿ
29.ನಕಾರಾತ್ಮಕ ನಡೆ ಪ್ರಣಯ ಜೀವನದಲ್ಲಿ ಒಳಸುಳಿಯದಂತೆ ನೋಡಿಕೊಳ್ಳಿ
30.ಆಗಾಗ ನಿಮ್ಮ ಸಂಗಾತಿಗೆ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿರಿ
31.ಮುತ್ತಿಡುವುದು ಯಾವಾಗಲೂ ನಯವಾಗಿರಲಿ ಆಕ್ರಮಣ ಒಳ್ಳೆಯದಲ್ಲ.
32.ಪ್ರೇಮಿಯ ಬಳಿ ಯಾವ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಬೇಡಿ
33.ಪ್ರೇಮ ನಿವೇದನೆ ಮಾಡಲು ನೀವು ಎಂದೂ ವಾಮಮಾರ್ಗ ಬಳಸಬೇಡಿ.
34. ಪ್ರತಿದಿನ ಮುಂಜಾನೆ ನಿಮ್ಮ ಪ್ರೇಯಸಿಯ ಸ್ಮರಿಸಿರಿ. ಮಾತು ಹಿತವಾಗಿರಲಿ.
35. ಆರ್ಥಿಕ ಬಿಕ್ಕಟ್ಟಿನಲ್ಲಿ ದುಂದುವೆಚ್ಚ ಮಾಡದೆ, ಸಂಬಂಧ ಉಳಿಸಿ
36. ಜೊತೆಯಲ್ಲಿ ಕೂತು ಊಟ ಮಾಡಿ, ಸಾಮೀಪ್ಯದಲ್ಲಿ ಪ್ರೀತಿ ಹೆಚ್ಚುತ್ತೆ.
37. ಕಾಮಕೇಳಿಗೆ ಇಳಿಯುವ ಮುನ್ನ ಪ್ರೇಮದಾಟದಲ್ಲಿ ತೊಡಗಿ, ನೋಯಿಸಬೇಡಿ.
38. ಪ್ರೇಮಿ ಉದ್ಯೋಗದಲ್ಲಿದ್ದರೆ ಒತ್ತಡ ನಿವಾರಣೆಗೆ ಪರಸ್ಪರ ಮಾತಾಡಿ.
39. ಗಂಡಿಗೆ ಹೊಗಳುವುದು ಇಷ್ಟ. ಹೆಂಗಸರಿಗೆ ಮಾತು ಕಮ್ಮಿ ಮಾಡಿ ಆಲಿಸಿ
40. ಹೆಣ್ಣು ತನ್ನ ಕಷ್ಟ ಒಂದೇ ಮಾತಿಗೆ ಹೇಳಲ್ಲ. ಸತಾಯಿಸಿ ಕೇಳಿ ಪರಿಹರಿಸಿ.
41. ಹೆಣ್ಣು ಒಂದಲ್ಲ ಒಂದು ಪ್ರೀತಿಸುತ್ತಾಳೆ. ಆಗಾಗ ಪ್ರವಾಸ ಮಾಡಿ ಮರಿಬೇಡಿ
42. ಪ್ರೇಮಪತ್ರ ಬರೆಯಿರಿ. ಇಲ್ಲದಿದ್ದರೆ ಪ್ರೀತಿ ಚೀಟಿಗಳನ್ನು ಪ್ರೇಯಸಿಗೆ ನೀಡಿ.
43. ಮದುವೆ ಪ್ರೀತಿಯ ಕೊನೆ ಹಂತ ಎಂದು ಸುಳ್ಳು ಮಾಡಿ. ಮತ್ತೆ ಪ್ರೇಮಿಸಿ.
44. ಅಚ್ಚರಿಯ ಉಡುಗೊರೆ ಸದಾ ನೆನಪಲ್ಲಿ ಉಳಿಯಬಲ್ಲದು. ಗಿಫ್ಟ್ ನೀಡುತ್ತಿರಿ.
45. ದೈನಂದಿನ ಕೆಲಸದಲ್ಲಿ ಪ್ರೀತಿಗೆ ಪ್ರತ್ಯೇಕ ಸಮಯವಿಡಿ. ಪ್ರೀತಿ ನಿರಂತರ
46. ಲವ್ ಯೂ ಐಲೈಕ್ ಯೂ ರೀತಿ ಸಣ್ಣ ಸಣ್ಣ ಪ್ರೀತಿ ಮಾತು ಸದಾ ಆಡುತ್ತಿರಿ.
47. ಹೆಣ್ಣು ಆಸರೆ ಬಯಸುತ್ತಾಳೆ. ಆದರೆ ಅದೆ ಬಲಹೀನತೆ ಎಂದು ಬಿಂಬಿಸಬೇಡಿ. .
48. ಪ್ರೇಯಸಿಯ ಮನೆ ಅವರೊಡನೆ ಹತ್ತಿರಾಗಿ, ಎಂದೂ ಕೀಳಾಗಿ ನೋಡಬೇಡಿ.49. ಸಂತೋಷವಾಗಿರುವುದೇ ನಿಮ್ಮ ಸಂಗಾತಿಗೆ ಕೊಡಬಹುದಾದ ದೊಡ್ಡ ಗಿಫ್ಟ್
50. ದಣಿದ ಸಂಗಾತಿಗೆ ಮುದ ನೀಡಲು ಮಲಗುವ ಕೋಣೆ ಸುಂದರವಾಗಿರಿಸಿ
51. ಹೆಣ್ಣಿನ ಮುಂದೆ ದಡ್ಡರಂತೆ ವರ್ತಿಸಿ.ಪ್ರೇಮದಲ್ಲಿಸೋತರೇ ಗೆಲ್ಲಲು ಸಾಧ್ಯ
52. ಹಾಡಲು ಬರದಿದ್ದರೂ ಹಾಡುಗಾರರಾಗಿ, ಸಂತಸದ ಗಳಿಗೆಯ ಸೃಷ್ಟಿಸಿ
53. ಗೊಂದಲವಿದ್ದಾಗ ಸ್ನೇಹಿತರೊಡನೆ ವಿಷಯ ಹಂಚಿಕೊಳ್ಳಿ.ನಿರ್ಧಾರ ನಿಮ್ಮದಾಗಲಿ
54. ಹುಡುಗರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಆದರ್ಶ ಹೊಂದಬೇಕು
55. ಸಂಬಂಧಗಳ ಚೆನ್ನಾಗಿ ನಿಭಾಯಿಸಬಲ್ಲ ಮೂಲ ಮಂತ್ರ ವಿಶ್ವಾಸ, ನಂಬಿಕೆ
56. ಎಲ್ಲಿ ಭಯ, ಶಂಕೆ ಇರುತ್ತೋ ಅಲ್ಲಿಅನುಮಾನ ಹುಟ್ಟುತ್ತೆ. ಪ್ರೀತಿಗೆ ಮಾರಕ
57. ಪ್ರೀತಿ ಒಳ್ಳೆದಕ್ಕೆ ನಾಂದಿಯಾಗಿ, ಕೆಟ್ಟವರನ್ನು ಒಳ್ಳೆಯವರನ್ನಾಗಿಸುತ್ತದೆ.
58. ಭಾವನಾತ್ಮಕವಾಗಿ, ದೈಹಿಕವಾಗಿ, ನೈತಿಕವಾಗಿ ಕುಗ್ಗದಂತೆ ಪ್ರೀತಿಸಿ
59. ನಿಮ್ಮ ಪ್ರೇಮದ ಪ್ರಪಂಚಕ್ಕೆ ವಾಸ್ತವದ ಅರಿವಿರಲಿ. ಎಚ್ಚರ ಮೀರದಿರಲಿ
60. ಪ್ರೇಮಿಯನ್ನು ಸಂತೋಷಪಡಿಸಲಾಗದಿದ್ದರೂ ಅಡ್ಡಿಯಿಲ್ಲ.ನೋಯಿಸಬೇಡಿ
61. ಸಂತಸವಿದ್ದಾಗ ಸಂಕಟಗಳ ಹೇಳಬೇಡಿ. ಸಂಕಟ ಹಂಚಿಕೊಳ್ಳದೆ ಕೊರಗಬೇಡಿ
62. ಹುಡುಗರನ್ನು ಪ್ರಶ್ನಿಸುವುದು ಹುಡುಗಿಯರ ಹುಟ್ಟುಗುಣ. ಸಹಿಸಿರಿ
63. ಪ್ರೀತಿ ಒಂದು ಹಂತ ದಾಟಿದ ಮೇಲೆ ಜೀವನದ ಬಗ್ಗೆ ಪರಸ್ಪರ ಆಲೋಚಿಸಿ
Sunday, 6 September 2009
ರೈತರು ಪಟ್ಟ ಶ್ರಮಗಳಿಗೆ ಕಿಂಚಿತ್ತೂ ಬೆಲೆ ನೀಡದಿದ್ದರೂ ಅವರನ್ನು ಪುಂಖಾನುಪುಂಖವಾಗಿ ಹೊಗಳಿ ಅಟ್ಟಕ್ಕೇರಿಸುವಲ್ಲಿ ನಮ್ಮ ರಾಜಕಾರಣಿಗಳು ಬಹಳ ನಿಸ್ಸೀಮರು. ಕೇವಲ ಮತಗಳನ್ನು ಸೆಳೆಯುವ ಉದ್ದೇಶ, ಅಧಿಕಾರದ ಗದ್ದುಗೆ ಏರುವ ಬಯಕೆ ರಾಜಕಾರಣಿಗಳನ್ನು ಏನು ಬೇಕಾದರೂ ಮಾಡುವಂತೆ ಪ್ರೇರೇಪಿಸುತ್ತದೆ. (ಅಧಿಕಾರ ಸಿಗುತ್ತದೆ ಎಂದಾದರೆ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿ ವರ್ಗಗಳು ಏನು ಮಾಡಲು ಹೇಸುವುದಿಲ್ಲ ಎಂಬುದು ಬೇರೆ ಮಾತು). ಭಾರತ ಇಂದು ಎಷ್ಟೇ ಮುಂದುವರಿದ ರಾಷ್ಟ್ರವಾಗಿ ಇಂದು ಹೊರಹೊಮ್ಮಿದ್ದರೂ, ರೈತರ ಪಾಡು ನಾಯಿ ಪಾಡೇ. ಆಫ್ರಿಕಾ ಖಂಡ ಹಲವು ದೇಶಗಳಲ್ಲಿನ ದೈನ್ಯ ಸ್ಥಿತಿಗೂ ನಮ್ಮ ದೇಶದ ರೈತರ ಸ್ಥಿತಿಗೂ ಹೋಲಿಕೆ ಒಂದೇ. ಅಲ್ಲಿನ ಹಲವು ರಾಷ್ಟ್ರಗಳು ಇನ್ನೂ ಅಭಿವೃದ್ಧಿ ಎಂದರೆ ಏನೆಂದೇ ಅರಿತಿಲ್ಲ. ಭಾರತದ ರೈತರ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆಗಳಿದ್ದರೂ ನಮ್ಮ ರಾಜಕಾರಣಿಗಳಲ್ಲಿ ದೂರದರ್ಶಿತ್ವ ಮತ್ತು ಇಚ್ಛಾಶಕ್ತಿ ಎಂಬುದೇ ಇಲ್ಲ. ಸರ್ಕಾರದ ಅಭಯಕ್ಕಾಗೇ ಭರವಸೆಯ ಮುಖಹೊತ್ತು ಕಾದು ಬಳಲಿ ಬೆಂಡಾಗುವ ನೇಗಿಲಯೋಗಿಗೆ ಅಂತಿಮವಾಗಿ ಸಿಗುವುದು ಶೂನ್ಯ.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿದರೂ ಏಕೆ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ? ಸರ್ಕಾರದ ಹಣ ಹಾಗಾದರೆ ಎಲ್ಲಿ ಹೋಯಿತು? ಸರ್ಕಾರಿ ಅಧಿಕಾರಿಗಳ ಮನೆಗೆ ಏಕಾಏಕಿಯಾಗಿ ದಾಳಿ ಮಾಡಿದರೆ ಉತ್ತರ ಸಿಗುವುದು ಖಂಡಿತ. ಅಧಿಕಾರಿಗಳ ನಾಚಿಕೆಗೇಡಿನ ಕೃತ್ಯಗಳಿಗೆ ರೈತ ಮಾತ್ರ ಮೂಕಸಾಕ್ಷಿಯಾಗಿ ನೋವನ್ನನುಭವಿಸುತ್ತಿದ್ದಾನೆ.
ಈ ಬಾರಿ ಮಳೆ ಬಂದಿಲ್ಲ. ಉತ್ತರ ಭಾರತದಲ್ಲಂತೂ ಬರದ ಕರಿಛಾಯೆಗೆ ರೈತರು ಬೇಸತ್ತುಹೋಗಿದ್ದಾರೆ. ಇತ್ತೀಚೆಗೆ ದೆಹಲಿಯ ದಿಲ್ಶದ್ ಗಾರ್ಡನ್‌ನಲ್ಲಿ ಸುಖಬೀರ್ ಎಂಬ ರೈತನೊಬ್ಬ ಬಸ್ಸಿನಲ್ಲಿ ಸಿಕ್ಕಿದ್ದ. ವಿಪರೀತ ಸೆಕೆಯಲ್ಲಿ ಇಬ್ಬರೂ ಬೆಂದುಹೋಗಿದ್ದೆವು. ಕಳೆದ ವರ್ಷದಷ್ಟೂ ಈ ಬಾರಿ ಮಳೆ ಬರಲಿಲ್ಲವಲ್ಲ ಎಂದು ಮಾತಿಗಿಳಿದಾಗ ಆತ, “ಒಂದೆಡೆ ಮಳೆಯೂ ಬರುವುದಿಲ್ಲ, ಇನ್ನೊಂದೆಡೆ ಸರ್ಕಾರಕ್ಕೆ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರದ ಯಾವೊಂದು ಯೋಜನೆಯೂ ನಮ್ಮ ಹಳ್ಳಿಯನ್ನೂ ತಲುಪಿಯೇ ಇಲ್ಲ” ಎಂದು ಗೋಗರೆದಿದ್ದ. ಅವರ ಹಳ್ಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಒಬ್ಬ ರೈತ ಬೆಳೆ ನಷ್ಟ, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಹೆಂಡತಿಗೆ ವಿಷನೀಡಿದ್ದರೂ, ಆಕೆ ಬದುಕಿದ್ದಳು. ಆದರೆ ಆಕೆಯ ಮುಂದಿನ ಬದುಕು ಏನೆಂದು ಕೇಳಿದ್ದಕ್ಕೆ ಈತನಲ್ಲಿ ಉತ್ತರವಿರಲ್ಲ. ಸದ್ಯಕ್ಕೆ ಸ್ಥಳೀಯರು ಆಕೆಗೆ ನೆರವಾಗಿದ್ದಾರೆ. ಆದರೆ ಭವಿಷ್ಯದಲ್ಲಿ ಆಕೆಗೆ ಗತಿ ಏನು? ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ.
ಉತ್ತರಭಾರತದ ಹಲವೆಡೆ ಜೂನ್‌ನಿಂದ ಆಗಸ್ಟ್‌ವರೆಗೆ ಸಾಮಾನ್ಯ ಸರಾಸರಿಗಿಂತ ಶೇಕಡಾ ೩೦ರಷ್ಟು ಕಡಿಮೆ ಮಳೆಯಾಗಿದೆ ಎಂದು ವರದಿಯೊಂದು ಹೇಳಿದೆ. ಆದರೆ ಉತ್ತರ ಪ್ರದೇಶದ ನತದೃಷ್ಟ ಸ್ಥಿತಿ ಹೇಗಿದೆ ಎಂದರೆ ಈ ಬಾರಿ ಶೇಕಡಾ ೬೦ರಷ್ಟು ಕಡಿಮೆ ಮಳೆಯಾಗಿದ್ದು ಇಲ್ಲಿನ ರೈತರು ಕಂಗಾಲಾಗಿ ಹೋಗಿದ್ದು, ಅವರ ದೇಹದಲ್ಲೆಲ್ಲಾ ನಿರಾಶೆಯ ದಟ್ಟ ಕಾರ್ಮೋಡ ಕವಿದಿದೆ. ಉತ್ತರ ಪ್ರದೇಶದ ಅನ್ನದಾತರು ಒಂದೆಡೆ ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಮಾಯಾವತಿ ಅವರ ‘ಮಹತ್ವಾಕಾಂಕ್ಷೆ’ಯ ಸುಮಾರು ೫೦ ಕೋಟಿ ರೂ ವೆಚ್ಚದ ಪ್ರತಿಮೆ ನೋಯ್ಡಾ ಬಳಿ ನಿರ್ಮಾಣವಾಗುತ್ತಿದೆ. ಇನ್ನೊಂದು ವಿಚಾರ ಎಂದರೆ ದೆಹಲಿಯಲ್ಲಿರುವ ಮಾಯಾವತಿ ಅವರ ನಿವಾಸ ‘ಕೇವಲ’ ನೂರು ಕೋಟಿ ಖರ್ಚಿನಲ್ಲಿ ನಿರ್ಮಾಣವಾಗಿದೆ. ರಾಜರ ಅರೆಮನೆಗಳಿಗೇನೂ ಕಮ್ಮಿಯಿಲ್ಲದಂತಿದೆ ಆ ಮನೆ. ಅದು ಅವರ ವೈಯಕ್ತಿಕ ವಿಚಾರ ಬಿಡಿ! ಆದರೆ ಈಗಿರುವ ಬರ ಪರಿಸ್ಥಿತಿಗೆ ನಗ್ನ ಸಾಕ್ಷಿಯಾಗಿರುವ ಇಲ್ಲಿನ ರೈತರ ಬವಣೆ ಕೇಳುವವರು ಯಾರು? ಮಳೆ ಬರಬೇಕಿದ್ದ ಸಂದರ್ಭದಲ್ಲಿ ಬಿರುಬಿಸಿಲು ಒಬ್ಬೊಬ್ಬ ರೈತರ ಬದುಕನ್ನೇ ಕಿತ್ತುತಿನ್ನುತ್ತಿದೆ. ಒಟ್ಟಾರೆ ಬರ ಪರಿಸ್ಥಿತಿಯಲ್ಲಿ ಬದುಕು ಹೇಳತೀರದಂತಾಗಿದ್ದು, ಹಲವು ಮಂದಿ ಈಗಾಗಲೇ ಬೇರೆಡೆಗೆ ವಲಸೆ ಹೋಗಿಯಾಗಿದೆ.
ಒಂದು ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸುಮಾರು ೧,೦೦,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಕೈಗೊಂಡರೂ ರೈತರ ಸಾವಿನ ಸಂಖ್ಯೆ ಇಳಿಮುಖ ಕಂಡಿಲ್ಲ ಎಂದಾದರೆ ಇದರ ಅರ್ಥ ಯಾವುದೇ ಯೋಜನೆಯಾಗಲೀ ರೈತರಿಗೆ ತಲುಪುತ್ತಿಲ್ಲ ಎಂಬುದು. ಉಳಿದ ರಾಜ್ಯಗಳಂತೆ ಕರ್ನಾಟಕ ರೈತರು ಕಡುಸಂಕಟದಲ್ಲಿ ಜೀವನಸಾಗಿಸುತ್ತಿದ್ದಾರೆ. ಸರ್ಕಾರೀ ಮೂಲಗಳೇ ಮಾಹಿತಿ ನೀಡಿರುವಂತೆ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ಉಂಟಾದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮವಾಗಿ ೧೩೮೭ ಕೋಟಿ ರೂ ಹಣ ನಷ್ಟವಾಗಿದೆ. ಅನಾವೃಷ್ಟಿಗೆ ಅಂದಾಜು ೮೭೧ ಕೋಟಿ ರೂ ನಷ್ಟವಾಗಿದ್ದರೆ, ೫೧೬ ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಈ ಮಧ್ಯೆ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಕ್ರಮವಾಗಿ ೩೯೪ ಕೋಟಿ ರೂ ಹಾಗೂ ೩೧೭ ಕೋಟಿ ರೂ ಹಣ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳೇ ತಿಳಿಸಿದ್ದಾರೆ. ಇವೆಲ್ಲದರ ನಡುವೆ ಸರ್ಕಾರ ಇತ್ತೀಚೆಗೆ ೨೦ ಜಿಲ್ಲೆಗಳು ಮತ್ತು ೮೬ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಕರ್ನಾಟಕದ ಸದ್ಯದ ಪರಿಸ್ಥಿತಿ ಅತ್ಯಂತ ಹೀನಾಯವಾಗಿಬಿಟ್ಟಿದೆ ಎಂಬುದು ಇದರಿಂದಲೇ ಸ್ಪಷ್ಟವಾಗಿದೆ.
ಈ ಬಾರಿಯ ಆರ್ಥಿಕ ವರ್ಷದ ಐದು ತಿಂಗಳಲ್ಲೇ ೫೦ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಆತ್ಮಹತ್ಯೆಯ ಅತಿಎಹಚ್ಚು ಪ್ರಕರಣಗಳು ದಾಖಲಾಗಿದ್ದು, ಶಿವಮೊಗ್ಗದಲ್ಲಿ ೭, ತುಮಕೂರು ೬, ಬೆಳಗಾವಿ ಮತ್ತು ಹಾಸನ ೫, ಚಿಕ್ಕಮಗಳೂರು, ಬೀದರ್, ದಾವಣೆಗೆರೆ ಮತ್ತು ಬಿಜಾಪುರದಲ್ಲಿ ೩, ಚಿತ್ರದುರ್ಗ, ದಕ್ಷಿಣಕನ್ನಡ ೨ ಹಾಗೂ ಮೈಸೂರಿನಲ್ಲಿ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ! ಕಳೆದ ಒಂಬತ್ತು ವರ್ಷಗಳಿಂದ ಕರ್ನಾಟಕ ಬರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕ್ಕೆ ಈ ಬಾರಿಯ ಬರ ಇನ್ನಷ್ಟು ಘಾಸಿಗೋಳಿಸಿರುವುದು ದುರಂತ. ೨೦೦೮-೦೯ರಲ್ಲಿ ಸುಮಾರು ೩೩೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಗಳಲ್ಲಿ ದಾಖಲಾಗಿದ್ದು, ಸದ್ಯದ ವಿಪರೀತ ಬರ ಪರಿಸ್ಥಿತಿಯಿಂದಾಗಿ ಈ ಸಂಖ್ಯೆ ಇನ್ನಷ್ಟು ಏರಲಿದೆ ಎಂಬ ಆತಂಕ ಕಾಡತೊಡಗಿದೆ.
ಹಾಗೆಂದ ಮಾತ್ರಕ್ಕೆ ರೈತರ ಆತ್ಮಹತ್ಯೆಗೆ ಸಂಪೂರ್ಣ ಸರ್ಕಾರವೇ ಹೊಣೆ ಎಂದೆನ್ನಲಾಗದು. ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಹಳ್ಳಿಗಳ ನಿರ್ಲಕ್ಷಿಸುವ ಅಧಿಕಾರಶಾಹಿಯ ದುರ್ವರ್ತನೆಗಳು, ಕೆಲವೊಮ್ಮೆ ತಮ್ಮ ಇತಿ-ಮಿತಿ ಅರಿಯದೆ ತಂದುಕೊಂಡ ಆರ್ಥಿಕ ಹೊರೆಗಳು ರೈತರ ಆತ್ಮಹತ್ಯೆಗಳಿಗೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಾವುಗಳನ್ನು ತಪ್ಪಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮಾತ್ರ ಇಂದಿಗೂ ಪ್ರಶ್ನಾರ್ಹವಾಗೇ ಉಳಿದಿವೆ. ಸರ್ಕಾರದ ಚಿಂತನೆ, ಯೋಜನೆಗಳು ಸಕಾಲದಲ್ಲಿ ರೈತರನ್ನು ತಲುಪುವಂತಾಗಿದ್ದಾರೆ ಈ ಪರಿಯ ಅನಾಹುತ ಇಂದು ನಮ್ಮ ಕಣ್ಣಮುಂದಿರುತ್ತಿರಲಿಲ್ಲ. ಹಾಗೆ ನೋಡಿದರೆ ದೇಶದಲ್ಲಿನ ಕೋಟ್ಯಾಧಿಪತಿ ಉದ್ಯಮಿಗಳು, ಎಲ್ಲ ಪಕ್ಷಗಳು, ಪ್ರತಿಯೊಬ್ಬ ರಾಜಕಾರಣಿ, ಏರ್‌ಕಂಡಿಷನ್ ಕೋಣೆಯಲ್ಲಿ ಕುಳಿತು ಭಾರತ ಪ್ರಕಾಶಿಸುತ್ತಿದೆ ಎಂದು ಬೊಬ್ಬಿಡುವ ಕಾರ್ಪೊರೇಟ್‌ಗಳು, ನಗರಗಳಲ್ಲಿ ಕುಳಿತು ಝಗಮಗಿಸುವ ಬದುಕಿನೊಂದಿಗೆ ಥಳಥಳಿಸುತ್ತಿರುವ ನಾವು, ಈ ಸಮಾಜ, ವ್ಯವಸ್ಥೆ ಎಲ್ಲರೂ ಅನ್ನದಾತನ ಆಕ್ರಂದನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ನೇರ ಹೊಣೆ. ಇದು ವಾಸ್ತವ ಮತ್ತು ಎಲ್ಲರೂ ಒಪ್ಪಲೇಬೇಕಾದ ಸತ್ಯ.
ಗ್ರಾಮೀಣ ಭಾರತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರಿಂದಲೇ ಇಂದು ಎಲ್ಲಾ ಕರಾಳ ವಿಪರ್ಯಾಸಗಳಿಗೂ ನಾವು ಸಾಕ್ಷಿಯಾಗುತ್ತಿದ್ದೇವೆ. ಗ್ರಾಮೀಣ ಭಾರತೀಯರನ್ನು ನಾವು ಎಲ್ಲಿರವರೆಗೆ ಕೆಟ್ಟದಾಗಿ ಕಾಣುತ್ತೇವೆ ಎಂದರೆ ನಮ್ಮ ಮನೆ ನಾಯಿಗೂ, ಬಡ ನಿರ್ಗತಿಕನಿಗೂ ವ್ಯತ್ಯಾಸವೇ ಇರುವುದಿಲ್ಲ. ನಮ್ಮ ನಡೆ, ವರ್ತನೆಗಳೇ ನಗರ ಮತ್ತು ಗ್ರಾಮಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿರುವುದು. ಅದೆಲ್ಲಾ ಇರಲಿ, ಇನ್ನು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಮಾಡುತ್ತೇವೆ ಎಂಬ ಭಾವ ಇಂದಿನ ಯುವಜನಾಂಗದಲ್ಲಂತೂ ಖಂಡಿತಾ ಇಲ್ಲ. ಎಲ್ಲ ಹೆತ್ತವರೂ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದೇ ಬಯಸುತ್ತಾರೆ. ಅದಕ್ಕಾಗಿ ಲಕ್ಷಗಟ್ಟಲೆ ಹಣಸುರಿಯಲು ತಯಾರಾಗಿರುತ್ತಾರೆ. ಆದರೆ ಯಾರೊಬ್ಬನೂ ತನ್ನ ಮಗ ಯಶಸ್ವಿ ಕೃಷಿಕ ಆಗಬೇಕೆಂದು ಬಯಸುವುದೇ ಇಲ್ಲ. ಏಕೆಂದರೆ ಎಲ್ಲಿಯವರೆಗೆ ನಮ್ಮ ದೇಶದ ರೈತರೂ ಮುಖ್ಯವಾಹಿನಿಗೆ ಬರುವುದಿಲ್ಲವೋ, ಎಲ್ಲಿಯವೆರೆಗೆ ನಮ್ಮ ರೈತರನ್ನು ‘ನಮ್ಮವರೆಂದು’ ಸ್ವೀಕರಿಸುವುದಿಲ್ಲವೋ, ಎಲ್ಲಿಯವೆರೆಗೆ ನಗರ-ಗ್ರಾಮಗಳ ಅಂತರ ಕಡಿಮೆಯಾಗುವುದಿಲ್ಲವೋ, ಎಲ್ಲಿಯವರೆಗೆ ರೈತ ಆತ್ಮಹತ್ಯೆ ಕೊನೆಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಕೃಷಿ ಎಂದರೆ ಎಲ್ಲರಿಗೂ ಅಲರ್ಜಿಯಾಗಿಯೇ ಇರಲಿದೆ ಮತ್ತು ರೈತನ ಮಗ ರೈತನಾಗಿಯೇ ಇರುತ್ತಾನೆ. ನಮ್ಮ ‘ನ್ಯಾಯ’ವೂ ಇದೇ!!
Saturday, 20 June 2009
ಅಬ್ಬಬ್ಬಾ ಎಂಥ ಮಾರಾಯ್ರೆ... ಏನು ಸೆಕೆ ಅಂತೀರಿ..? ಅಯ್ಯಯ್ಯೋ ಇದು ಬಾರೀ ಕಷ್ಟವಪ್ಪಾ. ಹೊಸದಾಗಿ ಈ ದೆಹಲಿಗೆ ಬಂದವರಿಗಂತೂ ಇಂತಹ ವಿಚಿತ್ರ ಸೆಕೆಯನ್ನು ಅನುಭವಿಸುವುದು ತೀರಾ ಕಷ್ಟ. ಅದರಲ್ಲಿ ನೀವಿನ್ನು ನೋಯ್ಡಾದಲ್ಲಿ ಬಂದು ನೆಲೆಸಲು ನಿರ್ಧರಿಸಿದರಂತೂ ಬಿಸಿಯ ಬೇಗೆಯನ್ನು ತಡೆಯಲಾರದೆ ಒಮ್ಮೆ ನಮ್ಮ ಊರಿಗೆ ಓಡಿ ಹೋಗುವ ಅಂಥ ಅನಿಸದಿದ್ದರೆ ಮತ್ತೆ ನೋಡೋಣ...
ಕಳೆದ ವರ್ಷ ಇದೇ ಹೊತ್ತಿಗೆ ದೆಹಲಿ ಹಾಗೂ ಉತ್ತರ ಭಾರತದ ಹಲವೆಡೆ ಒಳ್ಳೆ ಮಳೆಯಾಗಿತ್ತು. ಹಾಗಾಗಿ ಅಂಥಾ ವಿಪರೀತವಾದ ದೇಹವನ್ನೆಲ್ಲಾ ವಿಚಿತ್ರವಾಗಿ ಕಾಡುವಂತಹ ಸೆಕೆಯನ್ನು ಅನುಭವಿಸಬೇಕಾದಂಥ ದುರ್ಗತಿ ನಮಗೆ ಕಾಡಿರಲಿಲ್ಲ. ಸೆಕೆ ಪ್ರಮಾಣ ಅತ್ಯಂತ ಅಧಿಕ ಮಟ್ಟದಲ್ಲಿರುವಂಥ ಜೂನ್, ಜುಲೈನಂಥ ತಿಂಗಳಲ್ಲೂ ಒಳ್ಳೆ ಮಳೆಯಾಗಿದ್ದರಿಂದ ರಜಾಯಿ ಹೊದ್ದು ಮಲಗಿದ್ದ ನೆನಪು ಇನ್ನೂ ಇದೆ. ಆದರೆ ಇಂದು ಅದು ಯಾವುದರಾ ಅನುಭವ ಇದುವೆರೆಗೆ ಆಗೇ ಇಲ್ಲ. ಅದೂ ಅಲ್ಲದೆ ನೋಯ್ಡಾಕ್ಕೆ ಬಂದ ನಂತರ ಇಲ್ಲಿನ ಬರಡು ಬದುಕು, ಮರುಭೂಮಿಯಲ್ಲಿ ಇದ್ದಂಥ ಅನುಭವ ನಿಜಕ್ಕೂ ಹೊರಗಿನಿಂದ ಬಂದ ಜನರನ್ನು ವಾಪಸು ಊರಿಗೆ ಹೆಜ್ಜೆ ಹಾಕಲು ಪ್ರೇರೇಪಿಸಿದರೆ ಅದರಲ್ಲಿ ಅಚ್ಚರಿ ಪಡಬೇಕಾದದ್ದು ಏನೂ ಇಲ್ಲ ಬಿಡಿ. ನೋಯ್ಡಾ ಒಂದು ಮಹಾನ್ ಸಿಟಿ ಎಂದು ಕಂಡು ಬಂದರೂ ಇಲ್ಲಿರುವುದು ಬರೀ ಕಾಂಕ್ರಿಟ್ ಕಾಡು ಮಾತ್ರ. ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ಮುಗಿಲು ಮುಟ್ಟಿದ ಅಪಾರ್ಟ್‌ಮೆಂಟ್ ಕಟ್ಟಡಗಳು, ಮಿನುಗುವ ಶಿಪ್ರಾ ಮಾಲ್, ಜನರ ಸುಳಿಯಲ್ಲಿ ಹುದುಗಿಹೋಗಿರುವ ಅಟ್ಟಾ ಮಾರ್ಕೆಟ್ ಹಾಗೂ ಗ್ರೇಟ್ ಇಂಡಿಯಾ ಮಾಲ್...ಹೋ ನಾನು ರೋಮನ್ ಸಿಟಿಯಲ್ಲಿದ್ದೇನೋ ಎಂದು ಕಂಡು ಬಂದರೂ ದೆಹಲಿ ನೀಡಿದ Liveliness and refreshingly different scenario ಒಂದು ಕ್ಷಣವೂ ನನಗೆ ಇಲ್ಲಿ ಕಂಡುಬರಲಿಲ್ಲ. ಎಲ್ಲವೂ ಖಾಲಿ ಖಾಲಿ... ಕೆಲವೊಮ್ಮೆ ಮನಸ್ಸಿಗೆ ಖುಷಿ ನೀಡುವ ಮದ್ರಾಸ್ ಕೆಫೆ ಬಿಟ್ಟರೆ, ದುಬಾರಿ ಬೆಲೆಗಳ ದಿನಸಿಗಳು ಇಲ್ಲಿ ಯಾವಾಗಲೂ ನನ್ನ ಜೇಬನ್ನು ಮುಟ್ಟಿ ನೋಡುವಂತೆ ಮಾಡುತ್ತವೆ.
ದೆಹಲಿಯಲ್ಲಿದ್ದಾಗ ತರಕಾರಿ, ಮನೆ ಸಾಮಾನು ಸೇರಿದಂತೆ ಎಲ್ಲವೂ ತುಂಬಾ ಚೀಪ್ ಹಾಗೂ ಕೈಗೆಟಕುವಂಥ ಬೆಲೆಯಲ್ಲಿ ದೊರಕುತ್ತಿದ್ದವು. ಆದರೆ ಇಲ್ಲಿ ಹಾಗಿಲ್ಲ. ಸದಾ ಸನಿಹದಲ್ಲೇ ಇರುವ, ಈಗ ವಿಷವಾಗಿ ಹರಿಯುತ್ತಿರುವ ಯಮುನಾ ನದಿಯ ವಾಸನೆಯನ್ನು ಮೂಗಿನೊಳಗೆ ಎಳೆದುಕೊಂಡೆ ಏಳಬೇಕಾದ ದುಸ್ಥಿತಿ ನಮ್ಮದು. ಯಾರಾದರೂ ಯಮುನಾ ಇಂದಿಗೂ ಜೀವನದಿಯಾಗಿ ಹರಿಯುತ್ತಿದ್ದಾಳೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರೆ ಒಮ್ಮೆ ಇಲ್ಲಿ ಬಂದು ಇಣುಕುಹಾಕಿ ನೋಡಿ. ವಾಸ್ತವದ ಕಹಿಸತ್ಯಗಳು ಹಾಗೂ ಯಮುನಾಳ ಇಂದಿನ ನಿಜಮುಖ ಇಂದು ಬಯಲಾಗಿದೆ. Thanks to man made Developments! ಯಮುನಾಳನ್ನು ಅಕ್ಷರಶಃ ಅತ್ಯಾಚಾರ ಮಾಡಲಾಗಿದೆ ಎಂದರೂ ಖಂಡಿತಾ ತಪ್ಪೇನಿಲ್ಲ. ವಿಶಾಲವಾಗಿ ನದಿ ಹರಿಯಬೇಕಿದ್ದ ಪ್ರದೇಶಗಳಲ್ಲೆಲ್ಲಾ ಇಂದು ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿದ್ದು, ಮುಂಬರುವ ದುರಂತಕ್ಕೆ ನಾವಿಂದೇ ಸಾಕ್ಷಿಯಾಗಬೇಕಾದ ಅನಿವಾರ್ಯ ಸ್ಥಿತಿ ನಮ್ಮಮುಂದೆ ನಿಂತು ರುದ್ರ ನರ್ತನವಾಡುತ್ತಿದೆ.
ಈಗ ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ ನನಗೆ ಇಂದಿಗೂ ದೆಹಲಿ ಬೋರ್ ಹೊಡೆಸಿರಲಿಲ್ಲ. ಯಾವತ್ತೂ ಅತ್ತಿತ್ತ ತಿರುಗಾಡುತ್ತಲೇ ಇದ್ದೆ. ಸಿರಿಫೋರ್ಟ್ ಸಾಂಸ್ಕೃತಿಕ ಅಡ್ಡೆ, ಇಂಡಿಯಾ ಗೇಟ್, ಕುತುಬ್ ಮಿನಾರ್, ಸೆಲೆಕ್ಟ್ ಸಿಟಿ ಮೆಟ್ರೋ ಮಾಲ್, ಕಲ್ಕಾಜಿಯ ಮರೆಯಲಾಗದ ಅಲಕಾನಂದ ಮಾರ್ಕೆಟ್, ತನ್ನ ಸ್ವಾದವನ್ನು ಇಂದಿಗೂ ಕಟ್ಟಿಕೊಡುವ ಕಲ್ಕಾಜಿ ಛೋಲೆ ಬಟೋರೆ, ಆ ಜ್ಯೂಸ್ ಅಂಗಡಿ, ಕುಚ್ಚಿಲಕ್ಕಿ ನೀಡಿ ಊರಿನ ಊಟ ನೆನಪಿಸುತ್ತಿದ್ದ ಕೇರಳ ಅಂಕಲ್ ಶಶಿ ಕುಮಾರ್, ದೆಹಲಿಗೆ ಮೊದಲು ಬಂದಾಗ ನಮಗೆ ಮನೆ ತೋರಿಸಿದ್ದ ಸೊಂಟ ಮುರುಕ ಹಾಗೂ ಅವನ ಹೆಂಡತಿ ಮಾರಿಮುತ್ತು, ನಮ್ಮ ಮನೆ ಓನರ್ ರಾಜ್ ಕುಮಾರ್ ಭಯ್ಯ, ಮನೆಯಿಂದ 4 ಕಿ.ಮೀ ದೂರದಲ್ಲಿದ್ದ ನೆಹರೂ ಪ್ಲೇಸ್ ಮತ್ತು ಕಾಂಪ್ಲೆಕ್ಸ್ಸ್, ಮೋಹನ್ ಸಿಂಗ್ ಮಾರ್ಕೆಟ್‌ನ ತಮಿಳು ಡಾಬಾ, ರಾಜಕೀಯಕ್ಕೆ ಹೆಸರುವಾಸಿಯಾದ ದೆಹಲಿ ಕರ್ನಾಟಕ ಸಂಘ, ವೈವಿಧ್ಯೆತೆಯ ಈ ಮುಖವಾಗಿದ್ದ ಲಜ್‌ಪತ್‌ನಗರ್ ಸೆಂಟ್ರಲ್ ಮಾರ್ಕೆಟ್,.. ಅಯ್ಯೋ ಹೇಳಿ ಸುಖವಿಲ್ಲ..ಅವುಗಳ ದರ್ಶನ ಯಾವತ್ತೂ ಆಗುತ್ತಿತ್ತು. ಒಂದು ರೀತಿಯ freshness ಇತ್ತು. ಸಮಯ ಕಳೆಯಲು ಸಾಕಷ್ಟು ಹಾದಿಗಳೂ ಇದ್ದವು.
ಆದರೆ ಇಂದು ಯಾಕೋ ಮನಸ್ಸು ಖಾಲಿ ಹೊಡೆಯುತ್ತಿದೆ. ಇಡೀ ದೇಹವೇ ಬೇಸರದಲ್ಲಿ ಬೆಂದು ಹೋದ ಅನುಭವವಾಗುತ್ತಿದೆ. ಆದರೂ ಬಂದದ್ದು ಬರಲಿ ಎಂದು ದಿನದೂಡುತ್ತಲೇ ಇದ್ದೇನೆ. ಬಿರು ಬಿಸಿಲಿನಲ್ಲೂ ಬತ್ತದ ಭರವಸೆಯಂತೆ... ;)
Monday, 15 June 2009
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಒಂದಲ್ಲಾ ಒಂದು ವಿವಾದ ಅಥವಾ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದ ಸದಾ ಪತ್ರಿಕೆಗಳಿಗೆ ಆಹಾರವಾಗುವ ಯೆಡ್ಡಿ, ತಮ್ಮ ‘ಸ್ವಾಮಿ’ ನಿಷ್ಠೆಯಿಂದಲೂ ಹೆಸರುವಾಸಿ. ಅದೇನೋ ನಮ್ಮ ಮುಖ್ಯಮಂತ್ರಿಗಳಿಗೆ ಸ್ವಾಮೀಜಿಗಳೆಂದರೆ ಎಲ್ಲಿಲ್ಲದ ಗೌರವ, ಅಭಿಮಾನ. ಯಾವುದಾದರೂ ಕ್ಷೇತ್ರ ಅಭಿವೃದ್ಧಿ ಆಗಬೇಕೆಂದಿದ್ದರೆ ಅದನ್ನು ಸ್ವಾಮೀಜಿವರ್ಯರಿಗೆ ಅರ್ಪಿಸಿಬಿಡುವಷ್ಟು ಉದಾರವಾದಿ (ಆ ಮೂಲಕ ತಾನು ಅಸಮರ್ಥ ಎಂದು ತೋರಿಸಿಕೊಳ್ಳುವವರೆಗೆ). ಸ್ವಾಮೀಜಿಗಳನ್ನು ಕಂಡರೆ ಸಾಕು ಓಡಿ ಹೋಗಿ ಕೈಮುಗಿದು ಅವರ ಆಶಿರ್ವಾದ ತೆಗೆದುಕೊಳ್ಳದಿದ್ದರೆ ಅವರಿಗೆ ಬಹುಶಃ ದಿನವಿಡೀ ನಿದ್ದೆಬಾರದು. ಹಣದ ರಾಶಿಯನ್ನೇ ಒಂದಲ್ಲಾ ಒಂದು ರೀತಿಯಲ್ಲಿ ಕೊಳ್ಳೆಹೊಡೆದು ದುಡ್ಡು ಮಾಡಿರುವ ಮಠ, ಮಠಾಧಿಪತಿಗಳಿಗೆ ರಾಜ್ಯದ ಬೊಕ್ಕಸದಿಂದ ಬೇಕಾಬಿಟ್ಟಿಯಾಗಿ ಧನಸಹಾಯ ಮಾಡುವ ಯೆಡಿಯೂರಪ್ಪನವರು ಈಚೆಗಷ್ಟೇ ಸರ್ಕಾರಿ ದುಡ್ಡಲ್ಲಿ ವರ್ಷಾಚರಣೆ ಆಚರಿಸಿದ್ದಾರೆ. ಮೊದಲ ಆರು ತಿಂಗಳನ್ನು ‘ಆಪರೇಷನ್ ಕಮಲ’ದಲ್ಲಿ ತೊಡಗಿಸಿಕೊಂಡ ಯೆಡ್ಡಿ ಕುಟುಂಬ, ನಂತರದ ಆರು ತಿಂಗಳನ್ನು ಲೋಕಸಭಾ ಚುನಾವಣೆಯಲ್ಲೇ ಕಳೆಯಿತು. ಆ ಮಧ್ಯೆಯೇ ಸಾವಿರಾರು ಕೋಟಿ. ರೂ.ಗಳ ಯೋಜನೆಯನ್ನು ನಿರಂತರವಾಗಿ ಘೋಷಿಸುತ್ತಲೇ ಬಂದ ಮುಖ್ಯಮಂತ್ರಿ ಅವರಲ್ಲಿ, ಯಾವೆಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ನೀವೇ ಕೇಳಿ.
ಅದೇನೆ ಇರಲಿ, ಯೆಡ್ಡಿಯವರ ‘ಸ್ವಾಮೀಜಿ’ ಪ್ರೀತಿ ಕುರಿತು ಕೆಲವು ಚಿತ್ರಗಳು ಇಲ್ಲಿವೆ. ಒಮ್ಮೆ ನೋಡಿ.