Saturday 12 September 2009

Love's Lost...?

Here are the Tips.. :-)

Recently my friend delivered me some LOVE TIPS from his own
LOVE's Bank :-)
Here by I have uploaded that in my blog; so that even my comrades could use these tips for their overwhelming success. :) :)


    1. ಪ್ರೀತಿಯಲ್ಲಿ ನಂಬಿಕೆ ಮುಖ್ಯ. ಅದು ಸಂಬಂಧ ಗಟ್ಟಿಮಾಡುತ್ತದೆ.

    2. ಮಾತು ಸುಳ್ಳು ಹೇಳಿದರೂ, ನಲ್ಲನ ಕಣ್ಣು ಸುಳ್ಳು ಹೇಳಲಾರದು

    3. ಮಧ್ಯವಯಸ್ಕ ಮಾನಿನಿಯರೇ ಹೆಚ್ಚು ಪ್ರಚೋದನಕಾರಿ : ಸಮೀಕ್ಷೆ

    4. ಚುಂಬನಕ್ಕೂ ಮುನ್ನ ಬಾಯನ್ನು ಚೆನ್ನಾಗಿ ತೊಳೆದುಕೊಳ್ಳಿ

    5. ಹೊಗಳಿಕೆಗೆ ಕರಗದ ಜೀವಿ ಇಲ್ಲ. ಪ್ರೇಯಸಿಯ ಮನಸಾರೆ ಹೊಗಳಿ

    6. ಪ್ರೀತಿಯಲ್ಲಿ ಪರಸ್ಪರ ಕೊಟ್ಟು ತಗೋ ಪಾಲಿಸಿ ಅನುಸರಿಸಿ,ಆನಂದಿಸಿ

    7. ಪ್ರೀತಿಯಲ್ಲಿ ಕಾಮಕ್ಕಿಂತ ಪರಸ್ಪರ ಆಸರೆಯ ಅಗತ್ಯ ಹೆಚ್ಚು, ಗಮನಿಸಿ

    8. ಸಣ್ಣಪುಟ್ಟ ಕಾಣಿಕೆಗಳೇ ಪ್ರೀತಿಯ ಪ್ರಾಮಾಣಿಕತೆಯ ಸೂಚಕ.

    9. ಪ್ರೇಮದಲ್ಲಿ ಕೊನೆವರೆಗೂ ಜತೆಗಿರುವ ಆತ್ಮವಿಶ್ವಾಸ ಮುಖ್ಯ..

    10.ಹೆಣ್ಣು ಪ್ರೀತಿಸುವುದು ಒಮ್ಮೆ ಮಾತ್ರ. ಗಂಡಿಗೆ ಅದು ಅರ್ಥ ಆಗಬೇಕು.

    11.ಗಂಡಿನ ಕೋಪ, ಹೆಣ್ಣಿನ ಶಾಂತತೆ ಸಮನಾಗಿ ಬೆರೆತರಷ್ಟೇ ಪ್ರೀತಿ ಸಾಧ್ಯ.

    12.ನಿರ್ಮಲ ಪ್ರೇಮದಲ್ಲಿ ಕಾಮಕ್ಕೆ ಆಸ್ಪದವಿಲ್ಲ.ಕಾಮ ಕ್ಷಣಿಕ ಅರಿವಿರಲಿ

    13.ಪ್ರೀತಿ ಸೋ ಹೃದಯಗಳು ಮಗುವಿನಂತೆ ನಿಷ್ಕಪಟವಾಗಿರುತ್ತದೆ.

    14.ನೀವು ಹೆಚ್ಚು ಕಾಲ ಆನಂದವಾಗಿರಬೇಕೆ ಹಾಗಾದ್ರೆ ಪ್ರೀತಿ ಮಾಡಿ.

    15.ಪ್ರೀತಿ ಮಾಡುವುದರಿಂದ ದೈಹಿಕ, ಮಾನಸಿಕ ಸಮತೋಲನ ಸಾಧ್ಯ.

    16.ಪ್ರೇಯಸಿಯನ್ನು ಎಂದೂ ಎಲ್ಲರೆದುರು ಬೈಯಬೇಡಿ. ಅದು ಅಪಾಯ

    17.ಎರಡು ಪ್ರಾಮಾಣಿಕ ಹೃದಯಗಳ ನಡುವೆ ಬೆಸೆಯುವ ಕೊಂಡಿಯೇ ಪ್ರೀತಿ

    18.ಸಂಗಾತಿಯನ್ನು ದಿನಂಪ್ರತಿ ಆಕೆ ಇಷ್ಟಪಡುವ ಹೆಸರಿನಿಂದ ಕರೆಯಿರಿ

    19.ಸಂಗಾತಿಯಲ್ಲಿ ಹಣದ ವಿಚಾರದ ಕುರಿತು ಅಧಿಕ ಚರ್ಚೆ ಒಳಿತಲ್ಲ

    20.ಪ್ರೀತಿಯಲ್ಲಿ ನಿಮ್ಮ ಹಿಂದಿನ ತಪ್ಪುಗಳ ಬಗ್ಗೆ ಚಿಂತಿಸದೆ ಮುಂದುವರಿಯಿರಿ

    21.ಗಾತಿಗೆ ಯಾವುದು ಮುಖ್ಯ ಎಂಬುದನ್ನರಿತು ಅದಕ್ಕೆ ಸ್ಪಂದಿಸಿರಿ

    22.ಸಂಗಾತಿಯ ಭವಿಷ್ಯ, ಯೋಜನೆಗಳ ಕುರಿತು ಚರ್ಚಿಸಿ, ಪ್ರತಿಕ್ರಿಯಿಸಿ

    23.ನಗುಮುಖದೊಂದಿಗೆ ಸದಾ ಸಂಗಾತಿಯನ್ನು ಕಾರ್ಯದಲ್ಲಿ ಹುರಿದುಂಬಿಸಿ\

    24.ಬಾಳಸಂಗಾತಿಯ ಆಯ್ಕೆ, ಇಚ್ಛೆಗಳ ಕುರಿತು ನಿಗಾ ಇರುವುದು ಅತ್ಯಗತ್ಯ

    25.ಪ್ರವಾಸಿ ತಾಣಗಳಿಗೆ ಸಂಗಾತಿಯನ್ನು ಕರೆದೊಯ್ಯುವುದು ಉತ್ತಮ

    26.ಸಂಗಾತಿಗೆ ನೀವು ಭರವಸೆಯ ಆಶಾಕಿರಣವಾಗಿ ಕಾಣುವಂತೆ ವರ್ತಿಸಿ

    27.ಹೆಚ್ಚಿನ ಕಾರ್ಯಕ್ಕೆ ಸಂಗಾತಿಯ ಅಭಿಪ್ರಾಯ ಕೇಳುವುದು ಭರವಸೆದಾಯಕ

    28.ವೈಮನಸ್ಯ ಉಂಟಾದಾಗ ಸಂಗಾತಿಯಲ್ಲಿ 'ಕ್ಷಮೆ' ಕೇಳಲು ಹಿಂಜರಿಯದಿರಿ

    29.ನಕಾರಾತ್ಮಕ ನಡೆ ಪ್ರಣಯ ಜೀವನದಲ್ಲಿ ಒಳಸುಳಿಯದಂತೆ ನೋಡಿಕೊಳ್ಳಿ

    30.ಆಗಾಗ ನಿಮ್ಮ ಸಂಗಾತಿಗೆ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿರಿ

    31.ಮುತ್ತಿಡುವುದು ಯಾವಾಗಲೂ ನಯವಾಗಿರಲಿ ಆಕ್ರಮಣ ಒಳ್ಳೆಯದಲ್ಲ.

    32.ಪ್ರೇಮಿಯ ಬಳಿ ಯಾವ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಬೇಡಿ

    33.ಪ್ರೇಮ ನಿವೇದನೆ ಮಾಡಲು ನೀವು ಎಂದೂ ವಾಮಮಾರ್ಗ ಬಳಸಬೇಡಿ.

    34. ಪ್ರತಿದಿನ ಮುಂಜಾನೆ ನಿಮ್ಮ ಪ್ರೇಯಸಿಯ ಸ್ಮರಿಸಿರಿ. ಮಾತು ಹಿತವಾಗಿರಲಿ.

35. ಆರ್ಥಿಕ ಬಿಕ್ಕಟ್ಟಿನಲ್ಲಿ ದುಂದುವೆಚ್ಚ ಮಾಡದೆ, ಸಂಬಂಧ ಉಳಿಸಿ

36. ಜೊತೆಯಲ್ಲಿ ಕೂತು ಊಟ ಮಾಡಿ, ಸಾಮೀಪ್ಯದಲ್ಲಿ ಪ್ರೀತಿ ಹೆಚ್ಚುತ್ತೆ.

37. ಕಾಮಕೇಳಿಗೆ ಇಳಿಯುವ ಮುನ್ನ ಪ್ರೇಮದಾಟದಲ್ಲಿ ತೊಡಗಿ, ನೋಯಿಸಬೇಡಿ.

38. ಪ್ರೇಮಿ ಉದ್ಯೋಗದಲ್ಲಿದ್ದರೆ ಒತ್ತಡ ನಿವಾರಣೆಗೆ ಪರಸ್ಪರ ಮಾತಾಡಿ.

39. ಗಂಡಿಗೆ ಹೊಗಳುವುದು ಇಷ್ಟ. ಹೆಂಗಸರಿಗೆ ಮಾತು ಕಮ್ಮಿ ಮಾಡಿ ಆಲಿಸಿ

40. ಹೆಣ್ಣು ತನ್ನ ಕಷ್ಟ ಒಂದೇ ಮಾತಿಗೆ ಹೇಳಲ್ಲ. ಸತಾಯಿಸಿ ಕೇಳಿ ಪರಿಹರಿಸಿ.

41. ಹೆಣ್ಣು ಒಂದಲ್ಲ ಒಂದು ಪ್ರೀತಿಸುತ್ತಾಳೆ. ಆಗಾಗ ಪ್ರವಾಸ ಮಾಡಿ ಮರಿಬೇಡಿ

42. ಪ್ರೇಮಪತ್ರ ಬರೆಯಿರಿ. ಇಲ್ಲದಿದ್ದರೆ ಪ್ರೀತಿ ಚೀಟಿಗಳನ್ನು ಪ್ರೇಯಸಿಗೆ ನೀಡಿ.

43. ಮದುವೆ ಪ್ರೀತಿಯ ಕೊನೆ ಹಂತ ಎಂದು ಸುಳ್ಳು ಮಾಡಿ. ಮತ್ತೆ ಪ್ರೇಮಿಸಿ.

44. ಅಚ್ಚರಿಯ ಉಡುಗೊರೆ ಸದಾ ನೆನಪಲ್ಲಿ ಉಳಿಯಬಲ್ಲದು. ಗಿಫ್ಟ್ ನೀಡುತ್ತಿರಿ.

45. ದೈನಂದಿನ ಕೆಲಸದಲ್ಲಿ ಪ್ರೀತಿಗೆ ಪ್ರತ್ಯೇಕ ಸಮಯವಿಡಿ. ಪ್ರೀತಿ ನಿರಂತರ

46. ಲವ್ ಯೂ ಐಲೈಕ್ ಯೂ ರೀತಿ ಸಣ್ಣ ಸಣ್ಣ ಪ್ರೀತಿ ಮಾತು ಸದಾ ಆಡುತ್ತಿರಿ.

47. ಹೆಣ್ಣು ಆಸರೆ ಬಯಸುತ್ತಾಳೆ. ಆದರೆ ಅದೆ ಬಲಹೀನತೆ ಎಂದು ಬಿಂಬಿಸಬೇಡಿ. .

48. ಪ್ರೇಯಸಿಯ ಮನೆ ಅವರೊಡನೆ ಹತ್ತಿರಾಗಿ, ಎಂದೂ ಕೀಳಾಗಿ ನೋಡಬೇಡಿ.

49. ಸಂತೋಷವಾಗಿರುವುದೇ ನಿಮ್ಮ ಸಂಗಾತಿಗೆ ಕೊಡಬಹುದಾದ ದೊಡ್ಡ ಗಿಫ್ಟ್

50. ದಣಿದ ಸಂಗಾತಿಗೆ ಮುದ ನೀಡಲು ಮಲಗುವ ಕೋಣೆ ಸುಂದರವಾಗಿರಿಸಿ

    51. ಹೆಣ್ಣಿನ ಮುಂದೆ ದಡ್ಡರಂತೆ ವರ್ತಿಸಿ.ಪ್ರೇಮದಲ್ಲಿಸೋತರೇ ಗೆಲ್ಲಲು ಸಾಧ್ಯ

    52. ಹಾಡಲು ಬರದಿದ್ದರೂ ಹಾಡುಗಾರರಾಗಿ, ಸಂತಸದ ಗಳಿಗೆಯ ಸೃಷ್ಟಿಸಿ

    53. ಗೊಂದಲವಿದ್ದಾಗ ಸ್ನೇಹಿತರೊಡನೆ ವಿಷಯ ಹಂಚಿಕೊಳ್ಳಿ.ನಿರ್ಧಾರ ನಿಮ್ಮದಾಗಲಿ

    54. ಹುಡುಗರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಆದರ್ಶ ಹೊಂದಬೇಕು

    55. ಸಂಬಂಧಗಳ ಚೆನ್ನಾಗಿ ನಿಭಾಯಿಸಬಲ್ಲ ಮೂಲ ಮಂತ್ರ ವಿಶ್ವಾಸ, ನಂಬಿಕೆ

    56. ಎಲ್ಲಿ ಭಯ, ಶಂಕೆ ಇರುತ್ತೋ ಅಲ್ಲಿಅನುಮಾನ ಹುಟ್ಟುತ್ತೆ. ಪ್ರೀತಿಗೆ ಮಾರಕ

    57. ಪ್ರೀತಿ ಒಳ್ಳೆದಕ್ಕೆ ನಾಂದಿಯಾಗಿ, ಕೆಟ್ಟವರನ್ನು ಒಳ್ಳೆಯವರನ್ನಾಗಿಸುತ್ತದೆ.

    58. ಭಾವನಾತ್ಮಕವಾಗಿ, ದೈಹಿಕವಾಗಿ, ನೈತಿಕವಾಗಿ ಕುಗ್ಗದಂತೆ ಪ್ರೀತಿಸಿ

    59. ನಿಮ್ಮ ಪ್ರೇಮದ ಪ್ರಪಂಚಕ್ಕೆ ವಾಸ್ತವದ ಅರಿವಿರಲಿ. ಎಚ್ಚರ ಮೀರದಿರಲಿ

    60. ಪ್ರೇಮಿಯನ್ನು ಸಂತೋಷಪಡಿಸಲಾಗದಿದ್ದರೂ ಅಡ್ಡಿಯಿಲ್ಲ.ನೋಯಿಸಬೇಡಿ

    61. ಸಂತಸವಿದ್ದಾಗ ಸಂಕಟಗಳ ಹೇಳಬೇಡಿ. ಸಂಕಟ ಹಂಚಿಕೊಳ್ಳದೆ ಕೊರಗಬೇಡಿ

    62. ಹುಡುಗರನ್ನು ಪ್ರಶ್ನಿಸುವುದು ಹುಡುಗಿಯರ ಹುಟ್ಟುಗುಣ. ಸಹಿಸಿರಿ

    63. ಪ್ರೀತಿ ಒಂದು ಹಂತ ದಾಟಿದ ಮೇಲೆ ಜೀವನದ ಬಗ್ಗೆ ಪರಸ್ಪರ ಆಲೋಚಿಸಿ

Sunday 6 September 2009

ಅನ್ನದಾತನ ಆಕ್ರಂದನಕ್ಕೆ ಹೊಣೆ ಯಾರು?

ರೈತರು ಪಟ್ಟ ಶ್ರಮಗಳಿಗೆ ಕಿಂಚಿತ್ತೂ ಬೆಲೆ ನೀಡದಿದ್ದರೂ ಅವರನ್ನು ಪುಂಖಾನುಪುಂಖವಾಗಿ ಹೊಗಳಿ ಅಟ್ಟಕ್ಕೇರಿಸುವಲ್ಲಿ ನಮ್ಮ ರಾಜಕಾರಣಿಗಳು ಬಹಳ ನಿಸ್ಸೀಮರು. ಕೇವಲ ಮತಗಳನ್ನು ಸೆಳೆಯುವ ಉದ್ದೇಶ, ಅಧಿಕಾರದ ಗದ್ದುಗೆ ಏರುವ ಬಯಕೆ ರಾಜಕಾರಣಿಗಳನ್ನು ಏನು ಬೇಕಾದರೂ ಮಾಡುವಂತೆ ಪ್ರೇರೇಪಿಸುತ್ತದೆ. (ಅಧಿಕಾರ ಸಿಗುತ್ತದೆ ಎಂದಾದರೆ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿ ವರ್ಗಗಳು ಏನು ಮಾಡಲು ಹೇಸುವುದಿಲ್ಲ ಎಂಬುದು ಬೇರೆ ಮಾತು). ಭಾರತ ಇಂದು ಎಷ್ಟೇ ಮುಂದುವರಿದ ರಾಷ್ಟ್ರವಾಗಿ ಇಂದು ಹೊರಹೊಮ್ಮಿದ್ದರೂ, ರೈತರ ಪಾಡು ನಾಯಿ ಪಾಡೇ. ಆಫ್ರಿಕಾ ಖಂಡ ಹಲವು ದೇಶಗಳಲ್ಲಿನ ದೈನ್ಯ ಸ್ಥಿತಿಗೂ ನಮ್ಮ ದೇಶದ ರೈತರ ಸ್ಥಿತಿಗೂ ಹೋಲಿಕೆ ಒಂದೇ. ಅಲ್ಲಿನ ಹಲವು ರಾಷ್ಟ್ರಗಳು ಇನ್ನೂ ಅಭಿವೃದ್ಧಿ ಎಂದರೆ ಏನೆಂದೇ ಅರಿತಿಲ್ಲ. ಭಾರತದ ರೈತರ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆಗಳಿದ್ದರೂ ನಮ್ಮ ರಾಜಕಾರಣಿಗಳಲ್ಲಿ ದೂರದರ್ಶಿತ್ವ ಮತ್ತು ಇಚ್ಛಾಶಕ್ತಿ ಎಂಬುದೇ ಇಲ್ಲ. ಸರ್ಕಾರದ ಅಭಯಕ್ಕಾಗೇ ಭರವಸೆಯ ಮುಖಹೊತ್ತು ಕಾದು ಬಳಲಿ ಬೆಂಡಾಗುವ ನೇಗಿಲಯೋಗಿಗೆ ಅಂತಿಮವಾಗಿ ಸಿಗುವುದು ಶೂನ್ಯ.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿದರೂ ಏಕೆ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ? ಸರ್ಕಾರದ ಹಣ ಹಾಗಾದರೆ ಎಲ್ಲಿ ಹೋಯಿತು? ಸರ್ಕಾರಿ ಅಧಿಕಾರಿಗಳ ಮನೆಗೆ ಏಕಾಏಕಿಯಾಗಿ ದಾಳಿ ಮಾಡಿದರೆ ಉತ್ತರ ಸಿಗುವುದು ಖಂಡಿತ. ಅಧಿಕಾರಿಗಳ ನಾಚಿಕೆಗೇಡಿನ ಕೃತ್ಯಗಳಿಗೆ ರೈತ ಮಾತ್ರ ಮೂಕಸಾಕ್ಷಿಯಾಗಿ ನೋವನ್ನನುಭವಿಸುತ್ತಿದ್ದಾನೆ.


ಈ ಬಾರಿ ಮಳೆ ಬಂದಿಲ್ಲ. ಉತ್ತರ ಭಾರತದಲ್ಲಂತೂ ಬರದ ಕರಿಛಾಯೆಗೆ ರೈತರು ಬೇಸತ್ತುಹೋಗಿದ್ದಾರೆ. ಇತ್ತೀಚೆಗೆ ದೆಹಲಿಯ ದಿಲ್ಶದ್ ಗಾರ್ಡನ್‌ನಲ್ಲಿ ಸುಖಬೀರ್ ಎಂಬ ರೈತನೊಬ್ಬ ಬಸ್ಸಿನಲ್ಲಿ ಸಿಕ್ಕಿದ್ದ. ವಿಪರೀತ ಸೆಕೆಯಲ್ಲಿ ಇಬ್ಬರೂ ಬೆಂದುಹೋಗಿದ್ದೆವು. ಕಳೆದ ವರ್ಷದಷ್ಟೂ ಈ ಬಾರಿ ಮಳೆ ಬರಲಿಲ್ಲವಲ್ಲ ಎಂದು ಮಾತಿಗಿಳಿದಾಗ ಆತ, “ಒಂದೆಡೆ ಮಳೆಯೂ ಬರುವುದಿಲ್ಲ, ಇನ್ನೊಂದೆಡೆ ಸರ್ಕಾರಕ್ಕೆ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರದ ಯಾವೊಂದು ಯೋಜನೆಯೂ ನಮ್ಮ ಹಳ್ಳಿಯನ್ನೂ ತಲುಪಿಯೇ ಇಲ್ಲ” ಎಂದು ಗೋಗರೆದಿದ್ದ. ಅವರ ಹಳ್ಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಒಬ್ಬ ರೈತ ಬೆಳೆ ನಷ್ಟ, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಹೆಂಡತಿಗೆ ವಿಷನೀಡಿದ್ದರೂ, ಆಕೆ ಬದುಕಿದ್ದಳು. ಆದರೆ ಆಕೆಯ ಮುಂದಿನ ಬದುಕು ಏನೆಂದು ಕೇಳಿದ್ದಕ್ಕೆ ಈತನಲ್ಲಿ ಉತ್ತರವಿರಲ್ಲ. ಸದ್ಯಕ್ಕೆ ಸ್ಥಳೀಯರು ಆಕೆಗೆ ನೆರವಾಗಿದ್ದಾರೆ. ಆದರೆ ಭವಿಷ್ಯದಲ್ಲಿ ಆಕೆಗೆ ಗತಿ ಏನು? ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ.


ಉತ್ತರಭಾರತದ ಹಲವೆಡೆ ಜೂನ್‌ನಿಂದ ಆಗಸ್ಟ್‌ವರೆಗೆ ಸಾಮಾನ್ಯ ಸರಾಸರಿಗಿಂತ ಶೇಕಡಾ ೩೦ರಷ್ಟು ಕಡಿಮೆ ಮಳೆಯಾಗಿದೆ ಎಂದು ವರದಿಯೊಂದು ಹೇಳಿದೆ. ಆದರೆ ಉತ್ತರ ಪ್ರದೇಶದ ನತದೃಷ್ಟ ಸ್ಥಿತಿ ಹೇಗಿದೆ ಎಂದರೆ ಈ ಬಾರಿ ಶೇಕಡಾ ೬೦ರಷ್ಟು ಕಡಿಮೆ ಮಳೆಯಾಗಿದ್ದು ಇಲ್ಲಿನ ರೈತರು ಕಂಗಾಲಾಗಿ ಹೋಗಿದ್ದು, ಅವರ ದೇಹದಲ್ಲೆಲ್ಲಾ ನಿರಾಶೆಯ ದಟ್ಟ ಕಾರ್ಮೋಡ ಕವಿದಿದೆ. ಉತ್ತರ ಪ್ರದೇಶದ ಅನ್ನದಾತರು ಒಂದೆಡೆ ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಮಾಯಾವತಿ ಅವರ ‘ಮಹತ್ವಾಕಾಂಕ್ಷೆ’ಯ ಸುಮಾರು ೫೦ ಕೋಟಿ ರೂ ವೆಚ್ಚದ ಪ್ರತಿಮೆ ನೋಯ್ಡಾ ಬಳಿ ನಿರ್ಮಾಣವಾಗುತ್ತಿದೆ. ಇನ್ನೊಂದು ವಿಚಾರ ಎಂದರೆ ದೆಹಲಿಯಲ್ಲಿರುವ ಮಾಯಾವತಿ ಅವರ ನಿವಾಸ ‘ಕೇವಲ’ ನೂರು ಕೋಟಿ ಖರ್ಚಿನಲ್ಲಿ ನಿರ್ಮಾಣವಾಗಿದೆ. ರಾಜರ ಅರೆಮನೆಗಳಿಗೇನೂ ಕಮ್ಮಿಯಿಲ್ಲದಂತಿದೆ ಆ ಮನೆ. ಅದು ಅವರ ವೈಯಕ್ತಿಕ ವಿಚಾರ ಬಿಡಿ! ಆದರೆ ಈಗಿರುವ ಬರ ಪರಿಸ್ಥಿತಿಗೆ ನಗ್ನ ಸಾಕ್ಷಿಯಾಗಿರುವ ಇಲ್ಲಿನ ರೈತರ ಬವಣೆ ಕೇಳುವವರು ಯಾರು? ಮಳೆ ಬರಬೇಕಿದ್ದ ಸಂದರ್ಭದಲ್ಲಿ ಬಿರುಬಿಸಿಲು ಒಬ್ಬೊಬ್ಬ ರೈತರ ಬದುಕನ್ನೇ ಕಿತ್ತುತಿನ್ನುತ್ತಿದೆ. ಒಟ್ಟಾರೆ ಬರ ಪರಿಸ್ಥಿತಿಯಲ್ಲಿ ಬದುಕು ಹೇಳತೀರದಂತಾಗಿದ್ದು, ಹಲವು ಮಂದಿ ಈಗಾಗಲೇ ಬೇರೆಡೆಗೆ ವಲಸೆ ಹೋಗಿಯಾಗಿದೆ.

ಒಂದು ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸುಮಾರು ೧,೦೦,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಕೈಗೊಂಡರೂ ರೈತರ ಸಾವಿನ ಸಂಖ್ಯೆ ಇಳಿಮುಖ ಕಂಡಿಲ್ಲ ಎಂದಾದರೆ ಇದರ ಅರ್ಥ ಯಾವುದೇ ಯೋಜನೆಯಾಗಲೀ ರೈತರಿಗೆ ತಲುಪುತ್ತಿಲ್ಲ ಎಂಬುದು. ಉಳಿದ ರಾಜ್ಯಗಳಂತೆ ಕರ್ನಾಟಕ ರೈತರು ಕಡುಸಂಕಟದಲ್ಲಿ ಜೀವನಸಾಗಿಸುತ್ತಿದ್ದಾರೆ. ಸರ್ಕಾರೀ ಮೂಲಗಳೇ ಮಾಹಿತಿ ನೀಡಿರುವಂತೆ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ಉಂಟಾದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮವಾಗಿ ೧೩೮೭ ಕೋಟಿ ರೂ ಹಣ ನಷ್ಟವಾಗಿದೆ. ಅನಾವೃಷ್ಟಿಗೆ ಅಂದಾಜು ೮೭೧ ಕೋಟಿ ರೂ ನಷ್ಟವಾಗಿದ್ದರೆ, ೫೧೬ ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಈ ಮಧ್ಯೆ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಕ್ರಮವಾಗಿ ೩೯೪ ಕೋಟಿ ರೂ ಹಾಗೂ ೩೧೭ ಕೋಟಿ ರೂ ಹಣ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳೇ ತಿಳಿಸಿದ್ದಾರೆ. ಇವೆಲ್ಲದರ ನಡುವೆ ಸರ್ಕಾರ ಇತ್ತೀಚೆಗೆ ೨೦ ಜಿಲ್ಲೆಗಳು ಮತ್ತು ೮೬ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಕರ್ನಾಟಕದ ಸದ್ಯದ ಪರಿಸ್ಥಿತಿ ಅತ್ಯಂತ ಹೀನಾಯವಾಗಿಬಿಟ್ಟಿದೆ ಎಂಬುದು ಇದರಿಂದಲೇ ಸ್ಪಷ್ಟವಾಗಿದೆ.

ಈ ಬಾರಿಯ ಆರ್ಥಿಕ ವರ್ಷದ ಐದು ತಿಂಗಳಲ್ಲೇ ೫೦ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಆತ್ಮಹತ್ಯೆಯ ಅತಿಎಹಚ್ಚು ಪ್ರಕರಣಗಳು ದಾಖಲಾಗಿದ್ದು, ಶಿವಮೊಗ್ಗದಲ್ಲಿ ೭, ತುಮಕೂರು ೬, ಬೆಳಗಾವಿ ಮತ್ತು ಹಾಸನ ೫, ಚಿಕ್ಕಮಗಳೂರು, ಬೀದರ್, ದಾವಣೆಗೆರೆ ಮತ್ತು ಬಿಜಾಪುರದಲ್ಲಿ ೩, ಚಿತ್ರದುರ್ಗ, ದಕ್ಷಿಣಕನ್ನಡ ೨ ಹಾಗೂ ಮೈಸೂರಿನಲ್ಲಿ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ! ಕಳೆದ ಒಂಬತ್ತು ವರ್ಷಗಳಿಂದ ಕರ್ನಾಟಕ ಬರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕ್ಕೆ ಈ ಬಾರಿಯ ಬರ ಇನ್ನಷ್ಟು ಘಾಸಿಗೋಳಿಸಿರುವುದು ದುರಂತ. ೨೦೦೮-೦೯ರಲ್ಲಿ ಸುಮಾರು ೩೩೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಗಳಲ್ಲಿ ದಾಖಲಾಗಿದ್ದು, ಸದ್ಯದ ವಿಪರೀತ ಬರ ಪರಿಸ್ಥಿತಿಯಿಂದಾಗಿ ಈ ಸಂಖ್ಯೆ ಇನ್ನಷ್ಟು ಏರಲಿದೆ ಎಂಬ ಆತಂಕ ಕಾಡತೊಡಗಿದೆ.

ಹಾಗೆಂದ ಮಾತ್ರಕ್ಕೆ ರೈತರ ಆತ್ಮಹತ್ಯೆಗೆ ಸಂಪೂರ್ಣ ಸರ್ಕಾರವೇ ಹೊಣೆ ಎಂದೆನ್ನಲಾಗದು. ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಹಳ್ಳಿಗಳ ನಿರ್ಲಕ್ಷಿಸುವ ಅಧಿಕಾರಶಾಹಿಯ ದುರ್ವರ್ತನೆಗಳು, ಕೆಲವೊಮ್ಮೆ ತಮ್ಮ ಇತಿ-ಮಿತಿ ಅರಿಯದೆ ತಂದುಕೊಂಡ ಆರ್ಥಿಕ ಹೊರೆಗಳು ರೈತರ ಆತ್ಮಹತ್ಯೆಗಳಿಗೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಾವುಗಳನ್ನು ತಪ್ಪಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮಾತ್ರ ಇಂದಿಗೂ ಪ್ರಶ್ನಾರ್ಹವಾಗೇ ಉಳಿದಿವೆ. ಸರ್ಕಾರದ ಚಿಂತನೆ, ಯೋಜನೆಗಳು ಸಕಾಲದಲ್ಲಿ ರೈತರನ್ನು ತಲುಪುವಂತಾಗಿದ್ದಾರೆ ಈ ಪರಿಯ ಅನಾಹುತ ಇಂದು ನಮ್ಮ ಕಣ್ಣಮುಂದಿರುತ್ತಿರಲಿಲ್ಲ. ಹಾಗೆ ನೋಡಿದರೆ ದೇಶದಲ್ಲಿನ ಕೋಟ್ಯಾಧಿಪತಿ ಉದ್ಯಮಿಗಳು, ಎಲ್ಲ ಪಕ್ಷಗಳು, ಪ್ರತಿಯೊಬ್ಬ ರಾಜಕಾರಣಿ, ಏರ್‌ಕಂಡಿಷನ್ ಕೋಣೆಯಲ್ಲಿ ಕುಳಿತು ಭಾರತ ಪ್ರಕಾಶಿಸುತ್ತಿದೆ ಎಂದು ಬೊಬ್ಬಿಡುವ ಕಾರ್ಪೊರೇಟ್‌ಗಳು, ನಗರಗಳಲ್ಲಿ ಕುಳಿತು ಝಗಮಗಿಸುವ ಬದುಕಿನೊಂದಿಗೆ ಥಳಥಳಿಸುತ್ತಿರುವ ನಾವು, ಈ ಸಮಾಜ, ವ್ಯವಸ್ಥೆ ಎಲ್ಲರೂ ಅನ್ನದಾತನ ಆಕ್ರಂದನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ನೇರ ಹೊಣೆ. ಇದು ವಾಸ್ತವ ಮತ್ತು ಎಲ್ಲರೂ ಒಪ್ಪಲೇಬೇಕಾದ ಸತ್ಯ.

ಗ್ರಾಮೀಣ ಭಾರತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರಿಂದಲೇ ಇಂದು ಎಲ್ಲಾ ಕರಾಳ ವಿಪರ್ಯಾಸಗಳಿಗೂ ನಾವು ಸಾಕ್ಷಿಯಾಗುತ್ತಿದ್ದೇವೆ. ಗ್ರಾಮೀಣ ಭಾರತೀಯರನ್ನು ನಾವು ಎಲ್ಲಿರವರೆಗೆ ಕೆಟ್ಟದಾಗಿ ಕಾಣುತ್ತೇವೆ ಎಂದರೆ ನಮ್ಮ ಮನೆ ನಾಯಿಗೂ, ಬಡ ನಿರ್ಗತಿಕನಿಗೂ ವ್ಯತ್ಯಾಸವೇ ಇರುವುದಿಲ್ಲ. ನಮ್ಮ ನಡೆ, ವರ್ತನೆಗಳೇ ನಗರ ಮತ್ತು ಗ್ರಾಮಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿರುವುದು. ಅದೆಲ್ಲಾ ಇರಲಿ, ಇನ್ನು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಮಾಡುತ್ತೇವೆ ಎಂಬ ಭಾವ ಇಂದಿನ ಯುವಜನಾಂಗದಲ್ಲಂತೂ ಖಂಡಿತಾ ಇಲ್ಲ. ಎಲ್ಲ ಹೆತ್ತವರೂ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದೇ ಬಯಸುತ್ತಾರೆ. ಅದಕ್ಕಾಗಿ ಲಕ್ಷಗಟ್ಟಲೆ ಹಣಸುರಿಯಲು ತಯಾರಾಗಿರುತ್ತಾರೆ. ಆದರೆ ಯಾರೊಬ್ಬನೂ ತನ್ನ ಮಗ ಯಶಸ್ವಿ ಕೃಷಿಕ ಆಗಬೇಕೆಂದು ಬಯಸುವುದೇ ಇಲ್ಲ. ಏಕೆಂದರೆ ಎಲ್ಲಿಯವರೆಗೆ ನಮ್ಮ ದೇಶದ ರೈತರೂ ಮುಖ್ಯವಾಹಿನಿಗೆ ಬರುವುದಿಲ್ಲವೋ, ಎಲ್ಲಿಯವೆರೆಗೆ ನಮ್ಮ ರೈತರನ್ನು ‘ನಮ್ಮವರೆಂದು’ ಸ್ವೀಕರಿಸುವುದಿಲ್ಲವೋ, ಎಲ್ಲಿಯವೆರೆಗೆ ನಗರ-ಗ್ರಾಮಗಳ ಅಂತರ ಕಡಿಮೆಯಾಗುವುದಿಲ್ಲವೋ, ಎಲ್ಲಿಯವರೆಗೆ ರೈತ ಆತ್ಮಹತ್ಯೆ ಕೊನೆಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಕೃಷಿ ಎಂದರೆ ಎಲ್ಲರಿಗೂ ಅಲರ್ಜಿಯಾಗಿಯೇ ಇರಲಿದೆ ಮತ್ತು ರೈತನ ಮಗ ರೈತನಾಗಿಯೇ ಇರುತ್ತಾನೆ. ನಮ್ಮ ‘ನ್ಯಾಯ’ವೂ ಇದೇ!!

Saturday 20 June 2009

HOPE STILL ON THE HEAD…

ಅಬ್ಬಬ್ಬಾ ಎಂಥ ಮಾರಾಯ್ರೆ... ಏನು ಸೆಕೆ ಅಂತೀರಿ..? ಅಯ್ಯಯ್ಯೋ ಇದು ಬಾರೀ ಕಷ್ಟವಪ್ಪಾ. ಹೊಸದಾಗಿ ಈ ದೆಹಲಿಗೆ ಬಂದವರಿಗಂತೂ ಇಂತಹ ವಿಚಿತ್ರ ಸೆಕೆಯನ್ನು ಅನುಭವಿಸುವುದು ತೀರಾ ಕಷ್ಟ. ಅದರಲ್ಲಿ ನೀವಿನ್ನು ನೋಯ್ಡಾದಲ್ಲಿ ಬಂದು ನೆಲೆಸಲು ನಿರ್ಧರಿಸಿದರಂತೂ ಬಿಸಿಯ ಬೇಗೆಯನ್ನು ತಡೆಯಲಾರದೆ ಒಮ್ಮೆ ನಮ್ಮ ಊರಿಗೆ ಓಡಿ ಹೋಗುವ ಅಂಥ ಅನಿಸದಿದ್ದರೆ ಮತ್ತೆ ನೋಡೋಣ...



ಕಳೆದ ವರ್ಷ ಇದೇ ಹೊತ್ತಿಗೆ ದೆಹಲಿ ಹಾಗೂ ಉತ್ತರ ಭಾರತದ ಹಲವೆಡೆ ಒಳ್ಳೆ ಮಳೆಯಾಗಿತ್ತು. ಹಾಗಾಗಿ ಅಂಥಾ ವಿಪರೀತವಾದ ದೇಹವನ್ನೆಲ್ಲಾ ವಿಚಿತ್ರವಾಗಿ ಕಾಡುವಂತಹ ಸೆಕೆಯನ್ನು ಅನುಭವಿಸಬೇಕಾದಂಥ ದುರ್ಗತಿ ನಮಗೆ ಕಾಡಿರಲಿಲ್ಲ. ಸೆಕೆ ಪ್ರಮಾಣ ಅತ್ಯಂತ ಅಧಿಕ ಮಟ್ಟದಲ್ಲಿರುವಂಥ ಜೂನ್, ಜುಲೈನಂಥ ತಿಂಗಳಲ್ಲೂ ಒಳ್ಳೆ ಮಳೆಯಾಗಿದ್ದರಿಂದ ರಜಾಯಿ ಹೊದ್ದು ಮಲಗಿದ್ದ ನೆನಪು ಇನ್ನೂ ಇದೆ. ಆದರೆ ಇಂದು ಅದು ಯಾವುದರಾ ಅನುಭವ ಇದುವೆರೆಗೆ ಆಗೇ ಇಲ್ಲ. ಅದೂ ಅಲ್ಲದೆ ನೋಯ್ಡಾಕ್ಕೆ ಬಂದ ನಂತರ ಇಲ್ಲಿನ ಬರಡು ಬದುಕು, ಮರುಭೂಮಿಯಲ್ಲಿ ಇದ್ದಂಥ ಅನುಭವ ನಿಜಕ್ಕೂ ಹೊರಗಿನಿಂದ ಬಂದ ಜನರನ್ನು ವಾಪಸು ಊರಿಗೆ ಹೆಜ್ಜೆ ಹಾಕಲು ಪ್ರೇರೇಪಿಸಿದರೆ ಅದರಲ್ಲಿ ಅಚ್ಚರಿ ಪಡಬೇಕಾದದ್ದು ಏನೂ ಇಲ್ಲ ಬಿಡಿ. ನೋಯ್ಡಾ ಒಂದು ಮಹಾನ್ ಸಿಟಿ ಎಂದು ಕಂಡು ಬಂದರೂ ಇಲ್ಲಿರುವುದು ಬರೀ ಕಾಂಕ್ರಿಟ್ ಕಾಡು ಮಾತ್ರ. ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ಮುಗಿಲು ಮುಟ್ಟಿದ ಅಪಾರ್ಟ್‌ಮೆಂಟ್ ಕಟ್ಟಡಗಳು, ಮಿನುಗುವ ಶಿಪ್ರಾ ಮಾಲ್, ಜನರ ಸುಳಿಯಲ್ಲಿ ಹುದುಗಿಹೋಗಿರುವ ಅಟ್ಟಾ ಮಾರ್ಕೆಟ್ ಹಾಗೂ ಗ್ರೇಟ್ ಇಂಡಿಯಾ ಮಾಲ್...ಹೋ ನಾನು ರೋಮನ್ ಸಿಟಿಯಲ್ಲಿದ್ದೇನೋ ಎಂದು ಕಂಡು ಬಂದರೂ ದೆಹಲಿ ನೀಡಿದ Liveliness and refreshingly different scenario ಒಂದು ಕ್ಷಣವೂ ನನಗೆ ಇಲ್ಲಿ ಕಂಡುಬರಲಿಲ್ಲ. ಎಲ್ಲವೂ ಖಾಲಿ ಖಾಲಿ... ಕೆಲವೊಮ್ಮೆ ಮನಸ್ಸಿಗೆ ಖುಷಿ ನೀಡುವ ಮದ್ರಾಸ್ ಕೆಫೆ ಬಿಟ್ಟರೆ, ದುಬಾರಿ ಬೆಲೆಗಳ ದಿನಸಿಗಳು ಇಲ್ಲಿ ಯಾವಾಗಲೂ ನನ್ನ ಜೇಬನ್ನು ಮುಟ್ಟಿ ನೋಡುವಂತೆ ಮಾಡುತ್ತವೆ.


ದೆಹಲಿಯಲ್ಲಿದ್ದಾಗ ತರಕಾರಿ, ಮನೆ ಸಾಮಾನು ಸೇರಿದಂತೆ ಎಲ್ಲವೂ ತುಂಬಾ ಚೀಪ್ ಹಾಗೂ ಕೈಗೆಟಕುವಂಥ ಬೆಲೆಯಲ್ಲಿ ದೊರಕುತ್ತಿದ್ದವು. ಆದರೆ ಇಲ್ಲಿ ಹಾಗಿಲ್ಲ. ಸದಾ ಸನಿಹದಲ್ಲೇ ಇರುವ, ಈಗ ವಿಷವಾಗಿ ಹರಿಯುತ್ತಿರುವ ಯಮುನಾ ನದಿಯ ವಾಸನೆಯನ್ನು ಮೂಗಿನೊಳಗೆ ಎಳೆದುಕೊಂಡೆ ಏಳಬೇಕಾದ ದುಸ್ಥಿತಿ ನಮ್ಮದು. ಯಾರಾದರೂ ಯಮುನಾ ಇಂದಿಗೂ ಜೀವನದಿಯಾಗಿ ಹರಿಯುತ್ತಿದ್ದಾಳೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರೆ ಒಮ್ಮೆ ಇಲ್ಲಿ ಬಂದು ಇಣುಕುಹಾಕಿ ನೋಡಿ. ವಾಸ್ತವದ ಕಹಿಸತ್ಯಗಳು ಹಾಗೂ ಯಮುನಾಳ ಇಂದಿನ ನಿಜಮುಖ ಇಂದು ಬಯಲಾಗಿದೆ. Thanks to man made Developments! ಯಮುನಾಳನ್ನು ಅಕ್ಷರಶಃ ಅತ್ಯಾಚಾರ ಮಾಡಲಾಗಿದೆ ಎಂದರೂ ಖಂಡಿತಾ ತಪ್ಪೇನಿಲ್ಲ. ವಿಶಾಲವಾಗಿ ನದಿ ಹರಿಯಬೇಕಿದ್ದ ಪ್ರದೇಶಗಳಲ್ಲೆಲ್ಲಾ ಇಂದು ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿದ್ದು, ಮುಂಬರುವ ದುರಂತಕ್ಕೆ ನಾವಿಂದೇ ಸಾಕ್ಷಿಯಾಗಬೇಕಾದ ಅನಿವಾರ್ಯ ಸ್ಥಿತಿ ನಮ್ಮಮುಂದೆ ನಿಂತು ರುದ್ರ ನರ್ತನವಾಡುತ್ತಿದೆ.
ಈಗ ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ ನನಗೆ ಇಂದಿಗೂ ದೆಹಲಿ ಬೋರ್ ಹೊಡೆಸಿರಲಿಲ್ಲ. ಯಾವತ್ತೂ ಅತ್ತಿತ್ತ ತಿರುಗಾಡುತ್ತಲೇ ಇದ್ದೆ. ಸಿರಿಫೋರ್ಟ್ ಸಾಂಸ್ಕೃತಿಕ ಅಡ್ಡೆ, ಇಂಡಿಯಾ ಗೇಟ್, ಕುತುಬ್ ಮಿನಾರ್, ಸೆಲೆಕ್ಟ್ ಸಿಟಿ ಮೆಟ್ರೋ ಮಾಲ್, ಕಲ್ಕಾಜಿಯ ಮರೆಯಲಾಗದ ಅಲಕಾನಂದ ಮಾರ್ಕೆಟ್, ತನ್ನ ಸ್ವಾದವನ್ನು ಇಂದಿಗೂ ಕಟ್ಟಿಕೊಡುವ ಕಲ್ಕಾಜಿ ಛೋಲೆ ಬಟೋರೆ, ಆ ಜ್ಯೂಸ್ ಅಂಗಡಿ, ಕುಚ್ಚಿಲಕ್ಕಿ ನೀಡಿ ಊರಿನ ಊಟ ನೆನಪಿಸುತ್ತಿದ್ದ ಕೇರಳ ಅಂಕಲ್ ಶಶಿ ಕುಮಾರ್, ದೆಹಲಿಗೆ ಮೊದಲು ಬಂದಾಗ ನಮಗೆ ಮನೆ ತೋರಿಸಿದ್ದ ಸೊಂಟ ಮುರುಕ ಹಾಗೂ ಅವನ ಹೆಂಡತಿ ಮಾರಿಮುತ್ತು, ನಮ್ಮ ಮನೆ ಓನರ್ ರಾಜ್ ಕುಮಾರ್ ಭಯ್ಯ, ಮನೆಯಿಂದ 4 ಕಿ.ಮೀ ದೂರದಲ್ಲಿದ್ದ ನೆಹರೂ ಪ್ಲೇಸ್ ಮತ್ತು ಕಾಂಪ್ಲೆಕ್ಸ್ಸ್, ಮೋಹನ್ ಸಿಂಗ್ ಮಾರ್ಕೆಟ್‌ನ ತಮಿಳು ಡಾಬಾ, ರಾಜಕೀಯಕ್ಕೆ ಹೆಸರುವಾಸಿಯಾದ ದೆಹಲಿ ಕರ್ನಾಟಕ ಸಂಘ, ವೈವಿಧ್ಯೆತೆಯ ಈ ಮುಖವಾಗಿದ್ದ ಲಜ್‌ಪತ್‌ನಗರ್ ಸೆಂಟ್ರಲ್ ಮಾರ್ಕೆಟ್,.. ಅಯ್ಯೋ ಹೇಳಿ ಸುಖವಿಲ್ಲ..ಅವುಗಳ ದರ್ಶನ ಯಾವತ್ತೂ ಆಗುತ್ತಿತ್ತು. ಒಂದು ರೀತಿಯ freshness ಇತ್ತು. ಸಮಯ ಕಳೆಯಲು ಸಾಕಷ್ಟು ಹಾದಿಗಳೂ ಇದ್ದವು.

ಆದರೆ ಇಂದು ಯಾಕೋ ಮನಸ್ಸು ಖಾಲಿ ಹೊಡೆಯುತ್ತಿದೆ. ಇಡೀ ದೇಹವೇ ಬೇಸರದಲ್ಲಿ ಬೆಂದು ಹೋದ ಅನುಭವವಾಗುತ್ತಿದೆ. ಆದರೂ ಬಂದದ್ದು ಬರಲಿ ಎಂದು ದಿನದೂಡುತ್ತಲೇ ಇದ್ದೇನೆ. ಬಿರು ಬಿಸಿಲಿನಲ್ಲೂ ಬತ್ತದ ಭರವಸೆಯಂತೆ... ;)

Monday 15 June 2009

ಯೆಡ್ಡಿಯವರ "ಸ್ವಾಮಿ"ನಿಷ್ಠೆ


ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಒಂದಲ್ಲಾ ಒಂದು ವಿವಾದ ಅಥವಾ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದ ಸದಾ ಪತ್ರಿಕೆಗಳಿಗೆ ಆಹಾರವಾಗುವ ಯೆಡ್ಡಿ, ತಮ್ಮ ‘ಸ್ವಾಮಿ’ ನಿಷ್ಠೆಯಿಂದಲೂ ಹೆಸರುವಾಸಿ. ಅದೇನೋ ನಮ್ಮ ಮುಖ್ಯಮಂತ್ರಿಗಳಿಗೆ ಸ್ವಾಮೀಜಿಗಳೆಂದರೆ ಎಲ್ಲಿಲ್ಲದ ಗೌರವ, ಅಭಿಮಾನ. ಯಾವುದಾದರೂ ಕ್ಷೇತ್ರ ಅಭಿವೃದ್ಧಿ ಆಗಬೇಕೆಂದಿದ್ದರೆ ಅದನ್ನು ಸ್ವಾಮೀಜಿವರ್ಯರಿಗೆ ಅರ್ಪಿಸಿಬಿಡುವಷ್ಟು ಉದಾರವಾದಿ (ಆ ಮೂಲಕ ತಾನು ಅಸಮರ್ಥ ಎಂದು ತೋರಿಸಿಕೊಳ್ಳುವವರೆಗೆ). ಸ್ವಾಮೀಜಿಗಳನ್ನು ಕಂಡರೆ ಸಾಕು ಓಡಿ ಹೋಗಿ ಕೈಮುಗಿದು ಅವರ ಆಶಿರ್ವಾದ ತೆಗೆದುಕೊಳ್ಳದಿದ್ದರೆ ಅವರಿಗೆ ಬಹುಶಃ ದಿನವಿಡೀ ನಿದ್ದೆಬಾರದು. ಹಣದ ರಾಶಿಯನ್ನೇ ಒಂದಲ್ಲಾ ಒಂದು ರೀತಿಯಲ್ಲಿ ಕೊಳ್ಳೆಹೊಡೆದು ದುಡ್ಡು ಮಾಡಿರುವ ಮಠ, ಮಠಾಧಿಪತಿಗಳಿಗೆ ರಾಜ್ಯದ ಬೊಕ್ಕಸದಿಂದ ಬೇಕಾಬಿಟ್ಟಿಯಾಗಿ ಧನಸಹಾಯ ಮಾಡುವ ಯೆಡಿಯೂರಪ್ಪನವರು ಈಚೆಗಷ್ಟೇ ಸರ್ಕಾರಿ ದುಡ್ಡಲ್ಲಿ ವರ್ಷಾಚರಣೆ ಆಚರಿಸಿದ್ದಾರೆ. ಮೊದಲ ಆರು ತಿಂಗಳನ್ನು ‘ಆಪರೇಷನ್ ಕಮಲ’ದಲ್ಲಿ ತೊಡಗಿಸಿಕೊಂಡ ಯೆಡ್ಡಿ ಕುಟುಂಬ, ನಂತರದ ಆರು ತಿಂಗಳನ್ನು ಲೋಕಸಭಾ ಚುನಾವಣೆಯಲ್ಲೇ ಕಳೆಯಿತು. ಆ ಮಧ್ಯೆಯೇ ಸಾವಿರಾರು ಕೋಟಿ. ರೂ.ಗಳ ಯೋಜನೆಯನ್ನು ನಿರಂತರವಾಗಿ ಘೋಷಿಸುತ್ತಲೇ ಬಂದ ಮುಖ್ಯಮಂತ್ರಿ ಅವರಲ್ಲಿ, ಯಾವೆಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ನೀವೇ ಕೇಳಿ.
ಅದೇನೆ ಇರಲಿ, ಯೆಡ್ಡಿಯವರ ‘ಸ್ವಾಮೀಜಿ’ ಪ್ರೀತಿ ಕುರಿತು ಕೆಲವು ಚಿತ್ರಗಳು ಇಲ್ಲಿವೆ. ಒಮ್ಮೆ ನೋಡಿ.









Thursday 21 May 2009

ಬಯಕೆ ಈಡೇರಿದಾಗ...

ಈ ಉಪ್ಪಿಟ್ಟು ತಿನ್ನುವ ಗೀಳು ನನ್ನಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬುದು ಈಗಲೂ ಅರ್ಥವಾಗದ ಒಗಟು. ಊರಲ್ಲಿದ್ದಾಗ ಯಾವತ್ತೂ ಉಪ್ಪಿಟ್ಟು (ಸಜ್ಜಿಗೆ) ತಿನ್ನಬೇಕೆಂಬ ಹೆಬ್ಬಯಕೆ ಮನದಲ್ಲಿ ಮನೆಮಾಡಿರಲಿಲ್ಲ. ಆದರೆ ದೆಹಲಿಗೆ ಬಂದ ನಂತರ ಯಾಕೋ ಈ ಉಪ್ಪಿಟ್ಟಿಗೂ ನನಗೂ ಭಾರೀ ನಂಟು ಬೆಳದಂತಿದೆ. ಊರಿನಿಂದ ದೂರವಿದ್ದೇನೆ ಎಂಬ ಕಾರಣಕ್ಕೋ ಅಥವಾ ಮೋಹನ್ಸಿಂಗ್ ಮಾರ್ಕೆಟ್ ಬಳಿ ಇರುವ ತಮಿಳು ಡಾಬಾದ ಉಪ್ಮಾ ಮೋಡಿಯೋ ಅಥವಾ ಕರ್ನಾಟಕ ಸಂಘದ ಅಟ್ರಾಕ್ಟಿವ್ ಉಪ್ಮಾವೋ...ಈಗಲೂ ಅರ್ಥವಾಗುತ್ತಿಲ್ಲ. ಆದರೆ ಅಮ್ಮ ಮನೆಯಲ್ಲಿ ಮಾಡಿದ್ದರೂ ನಾನು ಉಪ್ಪಿಟ್ಟು ತಿನ್ನುತ್ತಿದ್ದದ್ದು ತೀರಾ ಅಪರೂಪ. ಬೆಳಗ್ಗಿನ ಉಪಹಾರಕ್ಕಂತೂ ಉಪ್ಪಿಟ್ಟು ಮಾಡಿಬಿಟ್ಟರೆ ಮನೆಯಲ್ಲಿ ಇಡೀ ರಂಪವೇ ಮಾಡಿಬಿಡುತ್ತಿದ್ದೆ. ಹಾಗಿದ್ದಾಗ ಉಪ್ಪಿಟ್ಟಿನ ಮೇಲೆ ಅಪಾರ ಪ್ರೀತಿ ಹುಟ್ಟಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.


ಉಪ್ಪಿಟ್ಟಿನ ಮೇಲಿರುವ ಈ ಪರಿಯ ಮೋಡಿಗೆ ಕಳೆದ ಭಾನುವಾರವೂ ಸಾಕ್ಷಿಯಾಯಿತು. ಆವತ್ತು ಬೆಳಗ್ಗಿನಿಂದ ಎಲ್ಲಾದರೂ ಉಪ್ಪಿಟ್ಟು ತಿನ್ನಲೇಬೇಕೆಂದು ಹೊಟ್ಟೆ, ಮನಸ್ಸು ಬೊಬ್ಬಿಡುತ್ತಲೇ ಇದ್ದವು. ಅದಕ್ಕೆ ಸರಿಯಾಗಿ ಬೆಳಗ್ಗೆ ತಿಂಡಿಯೂ ತಿಂದಿರಲಿಲ್ಲ. ಮಧ್ಯಾಹ್ನ ವಿಜಯ ಕರ್ನಾಟಕದ ವಿನಾಯಕ ಭಟ್ಟರ ಮನೆಯಲ್ಲಿ ಮಧ್ಯಾಹ್ನದ ಭೋಜನ ಮಾಡಿದ್ದೆ. ಜೊತೆಗೆ ಸುನಿಲ್ ಕೂಡ ಇದ್ದ.
ಸಂಜೆ ಹೊತ್ತಿಗೆ ದೆಹಲಿಯ ಕನ್ನಡಭವನದಲ್ಲಿ ಆ ದಿನ tv9 ಶಿವಪ್ರಸಾದ್ ಜೊತೆ ಹರಟುತ್ತಿದ್ದಾಗ ಅವರಲ್ಲಿ ಹೇಳಿಯೇ ಬಿಟ್ಟೆ. “ನೋಡಿ ನನಗೆ ನಿಜವಾಗ್ಲೂ ಉಪ್ಪಿಟ್ಟು ತಿನ್ನಬೇಕೆಂದು ಮನಸ್ಸಾಗುತ್ತಿದೆ. ನಡ್ರೀ ಶಿವಪ್ರಸಾದ್ ಎಲ್ಲಿಯಾದ್ರೂ ಹೋಗಿ ಬರೋಣ ಅಂತ...” ಅದಕ್ಕೆ ಅವರು ನೀನ್ಯಾಕೋ ಪ್ರಶಾಂತ್ ನಾಥು ಥರಾ ಆಡ್ತಿದ್ಯಾ ಅಂಥ ನಕ್ಕಿ ಸುಮ್ಮನಾದ್ರು. ಸರಿ, ಸದ್ಯ ಯಾರೂ ಬರುವ ಯೋಚನೆಯಲ್ಲಿಲ್ಲ ಅಂಥ ನಾನೂ ಸುಮ್ಮನಾದೆ. ಮೂಗಿನ ತುದಿಯಲ್ಲಿದ್ದ ಆ ಆಸೆಯನ್ನ ಮತ್ತೆ ಹೊಟ್ಟೆಯಲ್ಲೇ ಹಾಕಿಕೊಂಡಿದ್ದೆ.

ಸ್ವಲ್ಪ ಹೊತ್ತಿನ ಬಳಿಕ ಸೋನಿಯಾ ಮೇಡಂ ಅನ್ನು ಮೀಟ್ ಮಾಡಲು ಹೋಗಿದ್ದ, ಗುಲ್ಬರ್ಗಾದಲ್ಲಿ ಬಿಜೆಪಿ ರೇವೂ ನಾಯಕ್ ವಿರುದ್ಧ ಗೆಲುವಿನ ನಗೆ ಬೀರಿದ್ದ ಮಲ್ಲಿಕಾರ್ಜುನ ಖರ್ಗೆ ಕಾರಿಂದಿಳಿದು ನಿಧಾನವಾಗಿ ಒಂದೊಂದೇ ಹೆಜ್ಜೆ ಹಾಕುತ್ತಾ ಪತ್ರಕರ್ತರೊಂದಿಗೆ ಮಾತಿಗಿಳಿದರು. ಆ ಬಳಿಕ ಕನ್ನಡ ಭವನದ ಉಪಾಹಾರ ಹಾಲ್‌ನಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ, ಕಣ್ಣ ಮುಂದೆ ಉಪ್ಪಿಟ್ಟು ಪ್ರತ್ಯಕ್ಷವಾಗಬೇಕೆ? ರೋಗಿ ಬಯಸಿದ್ದೂ...ವೈದ್ಯ ನೀಡಿದ್ದೂ..ಎಂದು ಹತ್ತಿರದಲ್ಲಿದ್ದ ಜೋಶಿ ಅವರು ಹೇಳಿ ನಗತೊಡಗಿದರು. ಅತ್ತ ಶಿವಪ್ರಸಾದ ಅವರೂ ಕೂಡ, "ಅದಕ್ಕೆ ಹೇಳೋದು, ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದು ಉಪ್ಪಿಟ್ಟು ಮೆಲ್ಲುತ್ತಿದ್ದರು. ಹತ್ತಿರವೇ ಸವಿಯುತ್ತಿದ್ದ ವಿನಾಯಕ ಭಟ್ಟರು, “ಸಜ್ಜನರ ಸಹವಾಸ ಸಜ್ಜಿಗೆ ಸವಿದಂತೆ” ಎಂದು ವಿ.ಕ. ಶೈಲಿಯಲ್ಲೇ ಪ್ರಾಸ ಹುಡುಕಿಕೊಂಡೇ ಜೋಕ್ ಮಾಡಿದರು. ಇತ್ತ ಖರ್ಗೆ ಅವರ ಬೈಟ್‌ಗೆ ಕಾಯುತ್ತಿದ್ದ ETv ಶ್ರೀನಿವಾಸ ಗೌಡರು, “ಮಗ ಬೇಕಾದಷ್ಟು ತಿನ್ನು” ಅಂತ ಹುರಿದುಂಬಿಸಿದರು. ಇವೆಲ್ಲದರ ಮಧ್ಯೆ “ಇವತ್ತಿನ ಉಪ್ಪಿಟ್ಟು ಭಾರೀ ಚೆನ್ನಾಗಿದೆ” ಎಂದು ವಿನಾಯಕ ಭಟ್ಟರು ಹೊಗಳಿದ್ದಕ್ಕೆ, ಖರ್ಗೆ ಅವರು “ಹೋ” ಎಂದು ನಕ್ಕಿ ಕನ್ನಡಭವನದ ತಿಂಡಿಗೆ ಸರ್ಟಿಫಿಕೇಟ್ ನೀಡಿದವರಲ್ಲಿ ನೀವೇ ಮೊದಲಿಗರು ಎಂದು ಹೇಳಿಯೇ ಬಿಟ್ಟರು. ಒಟ್ಟಾರೆ ಖರ್ಗೆ ಅವರಿಗೆ ಕನ್ನಡಭವನದ ತಿಂಡಿ ತಿನಿಸುಗಳು ಇಷ್ಟವಾಗಿಲ್ಲ ಎಂದಾಯಿತು. ಬಿಡಿ, ಅವರಿಗೆ ಇಷ್ಟವಾದರೇನು, ಬಿಟ್ಟರೇನು... ಅವರ ಕಣ್ಣು ಇದ್ದದ್ದಂತೂ ಉಪ್ಪಿಟ್ಟಿನ ಮೇಲಲ್ಲ. ಬದಲಾಗಿ ಕೇಂದ್ರದಲ್ಲಿನ ಮಂತ್ರಿಗಿರಿ ಮೇಲೆ! ನಾವೆಲ್ಲರಂತೂ ಎರಡೆರಡು ಬಾರಿ ಉಪ್ಪಿಟ್ಟಿನ ರುಚಿ ಸವಿದೆವು.

ಏನೇ ಆಗಲಿ, ಉಪ್ಪಿಟ್ಟು ತಿನ್ನಬೇಕೆಂಬ ಆಕಾಶದಷ್ಟಿದ್ದ ಬಯಕೆಯನ್ನು ಈಡೇರಿಸದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ...?

Tuesday 5 May 2009

ಬೈಗುಳ ಬೇಗೆಯಲ್ಲಿ ಬೆಂದು ಹೋದಾಗ...

ಆ ಸೋಷಿಯಲ್ ಮಿಸ್ ಇದ್ದರಲ್ಲ, ಅವರಷ್ಟು ನನಗೆ ಕಾಡಿದವರು ಮತ್ತೊಬ್ಬರಿರಲಿಕ್ಕಿಲ್ಲ. ಅಂದೊಮ್ಮೆ ಕನಸಲ್ಲೂ ಬಂದು ನನ್ನ ಹೆದರಿಸಿ ಹೋಗಿದ್ದರು. ಹೈಸ್ಕೂಲ್ ಜೀವನದಲ್ಲಿನ ಅಜರಾಮರ ನೆನಪುಗಳಲ್ಲಿ ಈ ಮಿಸ್ ಮಹತ್ವದ ಸ್ಥಾನ ಪಡೆದಿದ್ದಾರೆ. ಯಾವಾಗ ನೋಡಿದರೂ ಬೈಗುಳ, ಒಂದೇ ಸಮನೆ ಸಜೆಷನ್ ನೀಡುವುದು, ಎಲ್ಲರ ಎದುರು ನಿಲ್ಲಿಸಿ ಇತಿಹಾಸ ಕೆದಕುವುದು, ಅವತ್ತು ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ ಎಂದು ನನ್ನ ಗೋಳು ಹೊಯ್ಕೊಳ್ಳುತ್ತಲೇ ಇದ್ದರು. ನನಗಂತೂ ಅವರ ಮಾತುಗಳನ್ನು ಕೇಳವುದೆಂದರೆ ಹಸಿ ಹಾಗಲಕಾಯಿ ತಿಂದ ಹಾಗಾಗುತ್ತಿತ್ತು.! ನಾನು ನನ್ನ “ನಾಟಿ” ಮಿತ್ರರು ಮುಂದಿನ ಬೆಂಚಲ್ಲಿ ಕುಳಿತಿದ್ದರೂ ಕಾಮೆಂಟ್ ಪಾಸ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದ ಕಾರಣ ಅವರು ಬೈಯುವುದರಲ್ಲೂ ಅರ್ಥವಿತ್ತು ಬಿಡಿ..!

ಆವತ್ತು ಪೇರೆಂಟ್ಸ್ ಟೀಚರ್‍ಸ್ ಮೀಟಿಂಗ್ ದಿನ. ೧೦ನೇ ಕ್ಲಾಸ್‌ನ ಕೊನೆಯ ಪೇರೆಂಟ್ಸ್ ಮೀಟಿಂಗ್ ಅದು. ನನಗಂತೂ ಹೈಸ್ಕೂಲ್ ಜೀವನದ ಕರಾಳ ದಿನ ಎನ್ನಬಹುದು. ನಮ್ಮ ಕ್ಲಾಸ್ ಟೀಚರ್ ಕನ್ನಡ ಮಿಸ್ ಆಗಿದ್ದರೂ, ಈ ಸೋಷಿಯಲ್ ಇಡೀ ಕ್ಲಾಸ್ ಎದುರೇ “ರಾಘವ್ ಐ ವಾಂಟ್ ಟು ಸ್ಪೀಕ್ ವಿದ್ ಯುರ್ ಪೇರೆಂಟ್ಸ್, ಸೊ ಯು ಮೀಟ್ ಮಿ ಎಟ್ ದ ಟೈಮ್ ಆಫ್ ಮೀಟಿಂಗ್” ಎಂದು ಬಾಂಬ್ ಎಸೆದಿದ್ದರು. ಆಗಲೇ ನನಗೆ ಹೊಟ್ಟೆಯೊಳಗೆ ನಡುಕ ಆರಂಭವಾಗಿತ್ತು. ಹೇಗಾದರು ಮಾಡಿ ಕನ್ನಡ ಮಿಸ್ ಜೊತೆ ಮಾತನಾಡಿಸಿ ತಂದೆಯನ್ನು ಮನೆಗೆ ಕಳುಹಿಸಿ ಬಿಡಬೇಕು ಎಂದು ನಾನು ಆವಾಗಲೇ ಯೋಜನೆ ಹಾಕಿದ್ದೆ. ನೀವು ಕ್ಲಾಸಲ್ಲಿ ಇದ್ದ ಕಾರಣ ನನ್ನ ತಂದೆ ಕನ್ನಡ ಮಿಸ್ ಅನ್ನು ಮಾತನಾಡಿಸಿ ಹೋದರು ಎಂದು ಸಬೂಬು ನೀಡಬಹುದು ಎಂದು ಯೋಚಿಸಿದ್ದೆ. ಆದರೆ ಅಂದು ಆಗಿದ್ದದ್ದೇ ಬೇರೆ...

ಕನ್ನಡ ಮಿಸ್ ತಂದೆ ಬಳಿ ಮಾತನಾಡುತ್ತಿದ್ದರು. “ಏನು ನಿಮ್ಮ ಮಗನಿಗೆ ಕನ್ನಡ ಬಿಟ್ಟು ಉಳಿದ್ರಲ್ಲಿ ಎಲ್ಲಾ ಕಡಿಮೆ ಮಾರ್ಕ್ಸ್ ಇದೆಯಲ್ಲ” ಎಂದು ಒಂದೊಂದೇ ತಗಾದೆ ತೆಗೆಯುತ್ತಾ ಹೋದರು. ಮೀಟಿಂಗ್‌ನಲ್ಲಿ ನನ್ನ ಮಾರ್ಕ್‌ಗಳ ಬಗ್ಗೆ ಮಾತನಾಡುವ ಬದಲು ಈ ಮಿಸ್ ನಾನು ಕ್ಲಾಸ್‌ನಲ್ಲಿ ಏನೆಲ್ಲಾ ಪೀಕಲಾಟಗಳನ್ನು ಮಾಡುತ್ತಿದ್ದೆ ಎಂದು ಹೇಳಲಾರಂಭಿಸಿದರು. ಪಾಪ... ನನ್ನ ತಂದೆಗೆ ಏನು ಹೇಳುವುದೆಂದು ತಿಳಿಯದೆ ನನ್ನನ್ನು ಆಗಾಗ ನೋಡುತ್ತಲೇ ಇದ್ದರು. ತಪ್ಪಿತಸ್ಥನ ಮೋರೆ ಹಾಕಿ ನಾನು ಅವರನ್ನು ನೋಡುತ್ತಿದ್ದೆ.
ಅವರಿಗೆ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಅದಕ್ಕಿಂತ ಮೊದಲು ನನ್ನಲ್ಲಿ ಸಮರ್ಥನೆಗೆ ಉತ್ತರವೂ ಇಲ್ಲ. ಸರಿ, ಮೀಟಿಂಗ್ ಮುಗಿಯಿತು. ಈ ಸೋಷಿಯಲ್ ಮಿಸ್ ಮಾತ್ರ ಬೇರೆ ತರಗತಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರಿಂದ ಆದಷ್ಟು ಬೇಗ ತಂದೆಯನ್ನು ಮನೆಗೆ ಕಳುಹಿಸಿಬಿಡಬೇಕು, ಇಲ್ಲಾಂದ್ರೆ... ನನ್ನದು ಮಾತ್ರವಲ್ಲ ತಂದೆಯನ್ನೂ ತಲೆತಗ್ಗಿಸುವಂತೆ ಮಾಡುತ್ತಾರೆ ಎಂದು ತಿಳಿದಿತ್ತು.

ಮೀಟಿಂಗ್ ಹಾಲ್‌ನಿಂದ ನಾವು ಹೊರಗೆ ಕಾಲಿಡುವುದು...ಎದುರಿನಿಂದ ಸೋಷಿಯಲ್ ಮಿಸ್ ಆಗಮಿಸುವುದು...ಹೋ...! ಅಲ್ಲೇ ಕೈಯನ್ನು ತೊಡೆಗೆ ಬಾರಿಸಿದೆ... ಒಂದು ನಿಮಿಷ ಮೊದಲಾಗಿದ್ದರೆ ಇವರ ಕಣ್ಣಿಂದ ತಪ್ಪಿಸಬಹುದಿತ್ತಲ್ಲ ಎಂದು ಯೋಚಿಸುತ್ತಿದ್ದಂತೆ....“ಓಹ್ ಯುವರ್ ಡ್ಯಾಡ್ ಹ್ಯಾಸ್ ಕಮ್...ವನ್ ಮಿನಿಟ್ ಸರ್ ಐ ವಿಲ್ ಕಮ್ ಟು ಯು ಎಂದು ತಮ್ಮ ಪುಸ್ತಕಗಳನ್ನು ಇಟ್ಟವರೇ... ತಂದೆಯನ್ನು ಎದುರಿಗಿದ್ದ ಕುರ್ಚಿಯಲ್ಲಿ ಕೂರಿಸಿದರು. ನಾನು ಏನೋ ಮಹಾನ್ ತಪ್ಪು ಮಾಡಿದ್ದವನಂತೆ ನಿಧಾನವಾಗಿ ಎರಡೂ ಕಣ್ಣುಗಳನ್ನು ಮಿಟುಕಿಸುತ್ತಾ ಮಿಸ್ಸನ್ನೇ ನೋಡುತ್ತಿದ್ದೆ.
ಶುರುವಾಯಿತು ನೋಡಿ...ಬುಲೆಟ್ಸ್..ಬಾಂಬು...ಎಲ್ಲವೂ ನನ್ನನ್ನು ಅಟ್ಯಾಕ್ ಮಾಡುತ್ತಿದ್ದರೆ...ಅಪ್ಪ ಮಾತ್ರ ನನ್ನ ಮಗ ಹೀಗೆಲ್ಲಾ ಮಾಡಿದ್ದಾನಾ ಎಂದು ಸಪ್ಪೆ ಮೋರೆ ಹಾಕಿ ಏನನ್ನೂ ಹೇಳದೆ ಎಲ್ಲವನ್ನು ಕೇಳುತ್ತಿದ್ದರು.

“ನೋಡಿ ನಿಮ್ಮ ಮಗನಿಗೆ ಸೋಷಿಯಲ್‌ನಲ್ಲಿ ಮಾರ್ಕ್ ನೋಡಿ. 25ರಲ್ಲಿ 11 ಮಾರ್ಕು. ಎಲ್ಲಿಗೆ ಸಾಕು? ನಾಡ್ದು ಪ್ರಿಪರೇಟರಿ ಬೇರೆ ಇದೆ... ಹೀಗೆ ಓದಿದ್ರೆ ಕಾಲೇಜಿಗೆ ಹೋಗುವುದಾದ್ರು ಹೇಗೆ..? ಯಾವಾಗ ನೋಡಿದ್ರೂ ಕ್ಲಾಸಲ್ಲಿ ಮಾತಾಡ್ತಲೇ ಇರ್ತಾನೇ...ನಂಗಂತೂ ಹೇಳಿ ಹೇಳಿ ಸಾಕಾಗಿದೆ... ನಮ್ಮ ಮಾತಿಗೆ ಬೆಲೆಯೇ ಕೊಡುದಿಲ್ಲ. ಪೋಲಿಗಳ ಹಾಗೆ ಉಪದ್ರ ತಡಿಲಿಕ್ಕಾಗುದಿಲ್ಲ” ಎಂದು ತಂದೆಯ ಮುಖದತ್ತ ಬಾಂಬನ್ನು ಎಸೆಯುತ್ತಲೇ ಇದ್ದರು. ನಿಜವಾಗಿಯೂ ತಂದೆಗೆ ಅಂದು ತಲೆತಗ್ಗಿಸಿದ್ದರು. ಒಮ್ಮೆ ನನ್ನ ಮುಖ, ಮತ್ತೊಮ್ಮೆ ತಂದೆಯವರ ಮುಖ ನೋಡುತ್ತಾ ಮಿಸ್ ಕಂಪ್ಲೇಂಟುಗಳ ಸುರಿಮಳೆಯನ್ನೇ ಸುರಿಸಿದ್ದರು. ನನ್ನ ತಂದೆಯ ಸಪ್ಪೆ ಮುಖ.. ಎಲ್ಲರ ಎದುರು ನಿಲ್ಲಿಸಿ ಆ ಬೈಗುಳಗಳಿಂದ ಬೇಸತ್ತಿದ್ದ ನನ್ನ ಮನಸ್ಸು ನಿಜಕ್ಕೂ ಕಡಿದುಹೋದ ಬಾಳೇ ಗಿಡದಂತಾಗಿತ್ತು.. ಕಣ್ಣಲ್ಲಿ ನೀರು ಹರಿಯತೊಡಗಿತು. ಯಾವತ್ತು ಮಿಸ್‌ಗಳು ನನಗೆ ಬೈದಿದ್ದರೂ ನಾನು ಎಂದಿಗೂ ಅತ್ತಿರಲಿಲ್ಲ. ಆದರೆ ಅಪ್ಪನ ಮುಂದೆ...ಅವರ ಮುಖ...ನನ್ನನ್ನು ಗೊಳೋ ಎಂದು ಅಳುವಂತೆ ಮಾಡಿತ್ತು...ಹೊಟ್ಟೆಯೊಳಗಿಂದ ನೇರವಾಗಿ ಬಾಯಿಗೆ ಬರುತ್ತಿದ್ದ ಆ ಅಳುವನ್ನು ನಾನು ಇಂದಿಗೂ ಮರೆತಿಲ್ಲ... ಆ ದಿನ ನಾನು ಒಂದು ಕಡೆ ಕಣ್ಣೀರ ಧಾರೆ ಹರಿಸುತ್ತಿದ್ದರೆ, ಇನ್ನೊಂದು ಬದಿ ಮಿತ್ರ ಮಿಥುನ್ ಕುಮಾರ್ ನೇತ್ರಾವತಿ ನದಿಯನ್ನೇ ಹರಿಸಿದ್ದ. ಆದರೆ ಮಿಸ್ ಮಾತ್ರ ಬೇರೆಯವರಾಗಿದ್ದರು...

ನನಗೆ ಏನೂ ಹೇಳದೆ ಮನೆಗೆ ಹೋಗಿದ್ದ ತಂದೆ ನನಗೆ ಮನೆಯಲ್ಲೂ ಬೈಯಲೂ ಇಲ್ಲ... ಒಂದೆರಡು ಬುದ್ಧಿ ಮಾತನ್ನು ಹೇಳಿದ್ದು ಬಿಟ್ಟರೆ ಮತ್ತೇನನ್ನೂ ಅವರು ಹೇಳಿರಲಿಲ್ಲ... ಆ ದಿನ ನನ್ನನ್ನು ಸೋಷಿಯಲ್ ಮಿಸ್ಸೇ ಸಮಾಧಾನ ಪಡಿಸಿದ್ದರು. ಏಕೆಂದರೆ ಅವರಿಗೆ ನನ್ನ ಮೇಲೆ ಎಷ್ಟೇ ಕೋಪವಿದ್ದರೂ, ಅಷ್ಟೇ ಪ್ರಮಾಣದ ಪ್ರೀತಿಯಿದ್ದಕ್ಕೂ ಅದು ಸಾಕ್ಷಿಯಾಗಿತ್ತು. ಸೋಜಿಗವೆಂದರೆ ಪಿಯುಸಿ ಅಧ್ಯಯನಕ್ಕೆ ನಾನು ಉಜಿರೆ ಕಾಲೇಜಿಗೆ ಸೇರಿದಾಗ ನನ್ನ ಪೊಲಿಟಿಕಲ್ ಸೈನ್ಸ್ ಲೆಕ್ಚರರ್ ಆಗಿ ಇವರೇ ಬಂದಿದ್ದರು... ಆದರೆ ಇಲ್ಲಿದ್ದ ವ್ಯತ್ಯಾಸವೆಂದರೆ ಹೈಸ್ಕೂಲಿನ ದಿನಗಳನ್ನು ಇಲ್ಲಿ ಎಂದಿಗೂ ನಾನು ಪುನರಾವರ್ತಿಸಿರಲಿಲ್ಲ!
ಸೋಷಿಯಲ್ ಮಿಸ್ ಇಂದಿಗೂ ನನ್ನ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದಾರೆ. ಅವರಿಗೀಗ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Monday 27 April 2009

“ಕ್ಯಾಬರೇ ಡ್ಯಾನ್ಸ್”ಗೆ ಬೆವೆತು ಒದ್ದೆಯಾಗಿದ್ದೆ!!


‘ಕ್ಯಾಬರೇ’ ಅನ್ನೋ ಪದಕ್ಕೂ ನನಗೂ ಅವಿನಾಭಾವ ನಂಟು. ಹೈಸ್ಕೂಲ್‌ಗೆ ಹೋಗುತ್ತಿದ್ದ ಸಮಯದಲ್ಲಿ ಟಿವಿಯಲ್ಲಿ ರಾಜ್‌ಕುಮಾರ್ ಬಾಂಡ್ ಸಿನಿಮಾಗಳು ನೋಡಿದಾಗ ಅವುಗಳಲ್ಲಿ ಕ್ಯಾಬರೇ ನೃತ್ಯಗಳಿರುತ್ತಿದ್ದವು. ಆ ವಯಸ್ಸಲ್ಲಿ ಅಂತದ್ದನ್ನು ತಪ್ಪದೇ ನೋಡುತ್ತಲೂ ಇದ್ದೆ. ಈಗಲೂ ನೋಡುವುದಿಲ್ಲ ಎಂದಲ್ಲ;

ಅದಿರಲಿ, ೯ನೇ ಕ್ಲಾಸ್‌ನಲ್ಲಿದ್ದಾಗ ನನ್ನ ಈ ಕ್ಯಾಬರೇ ಪುರಾಣ ದೊಡ್ಡ ಸುದ್ದಿಯೇ ಮಾಡಿತ್ತು. ಕನ್ನಡ ತರಗತಿ ನಡೆಯುತ್ತಿದ್ದ ಸಮಯ. ಮಧ್ಯಾಹ್ನ ೩ ಗಂಟೆಗೆ ಕ್ಲಾಸ್ ಆರಂಭವಾಗಿತ್ತು. ಶಾಲೆಯಲ್ಲಿ ಕನ್ನಡ ಮಾತಾಡುವುದಕ್ಕೆ ಇದ್ದ ಏಕೈಕ ಪಿರಿಡ್ ಅದು. ಉಳಿದ ಕ್ಲಾಸ್‌ನಲ್ಲೆಲ್ಲಾ ನಾವು ಇಂಗ್ಲೀಷ್ ಮಾತಾಡಬೇಕಾದುದು ಕಡ್ಡಾಯವಾಗಿತ್ತು. ನಮ್ಮ ಕನ್ನಡ ಮಿಸ್ ಪಾಠ ಮಾಡುತ್ತಿದ್ದರು. ಆಗ ನಮ್ಮ ಸ್ಕೂಲ್ ಡೇನೂ ಹತ್ತಿರದಲ್ಲಿತ್ತು. ಪಾಠವನ್ನು ಮಧ್ಯದಲ್ಲಿ ನಿಲ್ಲಿಸಿದ ಮಿಸ್ ಒಂದೇ ಬಾರಿ ಸ್ಕೂಲ್ ಡೇ ಬಗ್ಗೆ ಮಾತಾಡತೊಗಿದರು. ನಮಗೆ ಸಿಕ್ಕಿದ್ದೇ ಅವಕಾಶ ಎಂದು ನಾವು ಹರಟೆ ಹೊಡೆಯಲಾಂಭಿಸಿದೆವು. ನಾನು ಎಡಭಾಗದ ಮುಂದಿನ ಬೆಂಚ್‌ನಲ್ಲಿ ಕೂತಿದ್ದೆ. ನಾನು ಪಾಠದ ಮಧ್ಯೆ ಡಿಸ್ಟರ್ಬ್ ಮಾಡುತ್ತಿರುತ್ತೇನೆ ಎಂದೇ ಮುಂದಿನ ಬೆಂಚ್‌ನಲ್ಲಿ ಕೂರಿಸಿದ್ದರು. ನನ್ನ ಜೊತೆ ಅನೀಶ್ ಮತ್ತು ಅಭಿರಾಮ್ (ನನ್ನಂತೆಯೇ ‘ನಾಟಿ ಸ್ಟೂಡೆಂಟ್’ ಎನಿಸಿಕೊಂಡಿದ್ದವರು; ಅಭಿರಾಮ್ ನಮ್ಮಷ್ಟು ನಾಟಿ ಇರಲಿಲ್ಲ) ಕುಳಿತಿದ್ದರು.


ಇತ್ತ ಕನ್ನಡ ಮಿಸ್ “ಡ್ಯಾನ್ಸ್ ಟೀಮ್‌ನಲ್ಲಿರುವವರು ಕ್ಲಾಸ್ ಬಳಿಕ ಪ್ರಾಕ್ಟೀಸ್ ಮಾಡಿ ಬನ್ನಿ” ಎಂದು ಹುಡುಗಿಯರಿಗೆ ಹೇಳಿದರು. ನನ್ನದೇ ಲೋಕದಲ್ಲಿ ತೇಲುತ್ತಿದ್ದ ನನ್ನ ಮನಸ್ಸು ಒಮ್ಮೆಲೆ ನೆಟ್ಟಗಾಯಿತು. ಕಿವಿ ಅತ್ತ ಹೋಯಿತು. “ಯಾವ ಡ್ಯಾನ್ಸ್ ಮಿಸ್... ಯಾವ ಡ್ಯಾನ್ಸ್ ಮಿಸ್...” ಎಂದು ಕೆಲವು ಹುಡುಗರು ಮಿಸ್‌ನಲ್ಲಿ ಬೊಬ್ಬಿಟ್ಟು ಕೇಳಿದಾಗ ಮಿಸ್ “ಸೈಲೆಂಟ್... ಸೈಲೆಂಟ್” ಅಂದು ಬೊಬ್ಬಿಟ್ಟರು! ಸರಿ; ಎಲ್ಲರೂ ಸೈಲೆಂಟ್ ಆದದ್ದೇ ತಡ...ಮಿಸ್ ಇನ್ನೇನು 'ಸೋಲೋ ಡ್ಯಾನ್ಸ್' ಎಂದು ಹೇಳಬೇಕೆನ್ನುವಷ್ಟರಲ್ಲಿ...
ಅದೇನೋ ಗೊತ್ತಿಲ್ಲ...ನಾನು “ಕ್ಯಾಬರೇ ಡ್ಯಾನ್ಸ್” ಎಂದು ಜೋರಾಗಿಯೇ ಇಡೀ ಕ್ಲಾಸ್‌ಗೆ ಕೇಳುವಂತೆ ಬೊಬ್ಬಿಟ್ಟೆ..ಹತ್ತಿರ ಕೂತಿದ್ದ ಅನೀಶ್ ಮುಸಿ ಮುಸಿ ನಗುತ್ತಾ ನನ್ನ ತೊಡೆಗೇ ಒಂದು ಬಾರಿಸಿದ. “ಅಯ್ಯೋ ಎಂಥಾ ಅಧ್ವಾನವಾಯ್ತು” ಅಂದು ನಾನು ಅಲ್ಲೇ ಬೆವರಿ ಹೋದೆ..

ಈ ಕನ್ನಡ ಮಿಸ್‌ಗೆ ಕೋಪ ಮೂಗಿನ ತುದಿಗೇರಿತ್ತು. ಆಗಲೇ ಅವರ ಮೂಗು ಉದ್ದವಾಗಿ ಕಡು ಕೆಂಪಾಗಿತ್ತು! ನನಗಂತೂ ಮೈಯೆಲ್ಲಾ ನಡುಗಲು ಆರಂಭಿಸಿದ್ದೇ ತಡ... “ಸ್ಟ್ಯಾಂಡ್ ಅಪ್ ರಾಘವ” ಎಂದು ಮಿಸ್ ನನ್ನನ್ನು ದುರುಗುಟ್ಟಿಸಿ ನೋಡಿದರು. ತಗೋ...ಶುರುವಾಯ್ತು ಬೈಗುಳಗಳ ಸುರಿಮಳೆ... ಪೂರ್ತಿ ಪಿರಿಡ್ ಕೈಮೇಲೆ ಮಾಡಿ ನಿಲ್ಲಿಸಿದರು. ಮೊದಲೇ ಹೆದರಿ ಬೆವರಿದ್ದೆ...ಇದರ ಜೊತೆ ಕೈಯನ್ನೂ ಮೇಲೆ ಮಾಡಬೇಕು ಎಂದು ಪನಿಶ್‌ಮೆಂಟ್ ಬೇರೆ. ಹಾಗಾಗಿ ನನ್ನ ಕಂಕುಳುಗಳೂ ಬೆವೆತು ಒದ್ದೆಯಾಗಿ ಹೋಗಿದ್ದವು.

ಆದರೆ ಈ ಮಿಸ್ ಬೇರೆ ಮಿಸ್‌ಗಳಂತೆ ಬಟ್ಟೆ ಒಗೆದಂತೆ ಒಗೆಯಲಿಲ್ಲ. ಇನ್ನೇನು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದ ಹುಡುಗಿಯರು ಬೇರೆ ಕ್ಲಾಸ್‌ನಲ್ಲಿದ್ದರು. ಅವರ ಮಧ್ಯೆ...ಚೀ..ಚೀ..ಕ್ಯಾಬರೇ ಎಂದರೆ ಹೇಗಾಗಬೇಡ...!? ಅಂತೂ ನಾನು “ಕ್ಯಾಬರೇ” ಅಂದಿದ್ದು ಇನ್ನು ಏನೇನು ಫಜೀತಿಯನ್ನು ಸೃಷ್ಟಿಲಿದೆಯೋ ಎಂದು ಭಯಭೀತನಾಗಿದ್ದೆ. ಅತ್ತ ಅಪ್ಪ ಅಮ್ಮನ ಭಯ ಬೇರೆ.. ಎಲ್ಲಿಯಾದರೂ ಮನೆಯಲ್ಲಿ ಈ ಬಗ್ಗೆ ಹೇಳಿದರೆ...ಅನ್ನುವ ಭಯ...ಈ ಮಧ್ಯೆ ಕ್ಲಾಸ್‌ನಲ್ಲಿದ್ದ ಹುಡುಗಿಯರನ್ನೂ ಗಮನಿದೇ ಎನೋ ಅಸಭ್ಯವಾಯಿತೋ ಎಂದು ನಾಚಿಕೆಯೂ ಆಯಿತು.

ಸರಿ ಕ್ಲಾಸ್ ಮುಗಿಯಿತು... ಎಲ್ಲರೂ ನನ್ನನ್ನು ನೋಡಿ ನಕ್ಕರು...ಎನೋ ಒಂದು ಒಳ್ಳೆ ಎಂಟರ್‌ಟೈನ್‌ಮೆಂಟ್ ಕೊಟ್ಟೆ ಅನ್ನುವ ಹಾಗೆ...ನನಗಂತೂ ಪೇರೆಂಟ್ಸ್ ಮೀಟಿಂಗ್‌ನಲ್ಲಿ ಇದನ್ನೆಲ್ಲಾ ಹೇಳಿದರೆ ಏನು ಮಾಡುವುದು ಅನ್ನುವ ಚಿಂತೆಯಾದರೆ...ಇವರಿಗೆಲ್ಲಾ ಖುಷಿ...
ನಂತರ ನೇರ ಮಿಸ್ ಬಳಿ ಹೋದವನು “ಸಾರಿ ಮಿಸ್” ಅಂದೆ...ನಿಜವಾಗಲೂ ಮಿಸ್ ಪಾಪ...ನನಗೆ ಏನೂ ಹೇಳಿಲಿಲ್ಲ...ಇನ್ನು ಹಾಗೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರು.. ಓಹ್...ಅಬ್ಬಾ ಬದುಕಿದೆ..ಎಂದು ದೊಡ್ಡ ಉಸಿರು ಬಿಟ್ಟೆ ...ಖುಷಿಯಲ್ಲಿ ಉಬ್ಬಿ ಹೋದೆ...ನಗುತ್ತಲೇ ಮನೆಗೆ ಹೋದೆ...

(ಪೇರೆಂಟ್ಸ್ ಮೀಟಿಂಗ್‌ನಲ್ಲಿ ಸೋಷಿಯಲ್ ಮಿಸ್ ನನ್ನ ಇತಿಹಾಸ ಕೆದಕಿದ್ದು, ನಾನು ಅಪ್ಪನ ಮುಂದೆ ಗೊಳೋ ಎಂದು ಅತ್ತಿದ್ದು, ಅಪ್ಪನ ಮುಖ ಚಪ್ಪೆಯಾದದ್ದು... ಈ ಬಗ್ಗೆ ಮುಂದೆ ಹೇಳುತ್ತೇನೆ)
ಮೂತ್ರ ಬರುತ್ತಿದ್ದದ್ದು ಅರ್ಧಕ್ಕೆ ನಿಂತಿತು!!

ಅವು ನಾನು ಉಜಿರೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳು. ನಮ್ಮ ತರಗತಿಯ ‘ನಾಟಿ ಬಾಯ್ಸ್’ ಸೆಕ್ಷನ್‌ನಲ್ಲಿ ಮಹತ್ತರವಾದ ಸ್ಥಾನವನ್ನೇ ಪಡೆದಿದ್ದ ನಾನು ಮಿಸ್ ಹಾಗೂ ಸರ್‌ಗಳ ಕೈಯಿಂದ ಬೈಗುಳಗಳನ್ನು ತಿನ್ನದ ದಿನಗಳೇ ಇರುತ್ತಿರಲಿಲ್ಲ. ಪಾಠ ಮಾಡುವಾಗ ಒಂದಲ್ಲಾ ಒಂದು ಕಮೆಂಟ್ ಪಾಸ್ ಮಾಡುತ್ತಾ ಅದರಲ್ಲೇ ತೃಪ್ತಿ ಪಡುತ್ತಿದ್ದ ನನಗೆ ಸಿಗುತ್ತಿದ್ದ ಮಾರ್ಕ್ಸ್ ನೋಡಿ ಮನೆಯಲ್ಲಿ ಮಾತ್ರವಲ್ಲ; ಮಿಸ್‌ಗಳ ಕೈಯಿಂದಲೂ ಸದಾ ಮಂಗಳಾರತಿ ತಪ್ಪುತ್ತಿರಲಿಲ್ಲ.

ಈ ಮಿಸ್‌ಗಳ ಪಾಠ ಕೇಳವುದೇ ಒಂದು ಮಹಾ ಬೋರಿಂಗ್ ಎನಿಸುತ್ತಿದ್ದಾಗ; ಇನ್ನಿವರು ಆನ್ ಸಂಡೆ ಐ ಆಮ್ ಟೇಕಿಂಗ್ ಸ್ಪೆಷಲ್ ಕ್ಲಾಸ್ ಎಂದರೆ ಎಷ್ಟು ಉರಿಯಬೇಡ...? ಆಯ್ತು ಮಿಸ್ ಹೇಳಿದ ಮೇಲೆ ಹೋಗಲ್ಲಾ ಅನ್ನೋಕಾಗುತ್ತಾ? ಹೋಗದಿದ್ದರೆ ಅಮ್ಮನ ಬೆತ್ತದ ರುಚಿ ತಪ್ಪಿಸಲಾಗುತ್ತಾ?


ಸರಿ, ಧರ್ಮಸ್ಥಳದಿಂದ ಬಸ್ಸು ಹತ್ತಿ ಉಜಿರೆಗೆ ಹೋಗಿ ಆ ಒಂದು ಸಂಡೆ ಕ್ಲಾಸಲ್ಲಿ ಕೂತದ್ದಾಯಿತು. ಶುರುವಾಯಿತು ಸೈನ್ಸ್ ಕ್ಲಾಸ್. ಮೊದಲೇ ಸದಾ ಆ ಮಿಸ್‌ನ ಕ್ಲಾಸ್ ಬೋರ್ ಅನಿಸ್ತಿತ್ತು. ಇನ್ನು ಸ್ಪೆಷಲ್ ಕ್ಲಾಸ್ ಅಂದ್ರೆ; ಅಯ್ಯೋ ಕೇಳೋದು ಬೇಡ... ಸಿಲೆಬಸ್ ಮುಗಿಸ್ಬೇಕು ಅನ್ನುವ ಭರದಲ್ಲಿ ಅವರಿದ್ದರೆ...ನಮ್ಮದೇ ಲೋಕದಲ್ಲಿ ನಾವೊಂದಿಷ್ಟು ಪೋಕ್ರಿಗಳು... ನಾನು ಯಾವತ್ತೂ ಪಾಠ ಕೇಳುವುದಿಲ್ಲ ಅನ್ನುವುದು ಅವರಿಗೆ ಗೊತ್ತಿತ್ತು. ಯಾಕೆಂದರೆ ಅವರು ಕೇಳುವ ಒಂದು ಪ್ರಶ್ನೆಗೂ ನನ್ನಲ್ಲಿ ಉತ್ತರ ಇರುತ್ತಿರಲಿಲ್ಲ. ಆ ಸೈನ್ಸ್ ಕೂಡ ಎಷ್ಟು ಓದಿದ್ರೂ ನನ್ನ ಮಂಡೆಗೆ ಹತ್ತುತ್ತಿರಲಿಲ್ಲ.

ಹಾಗೇ ಪಾಠ ನಡೀತಾ ಇತ್ತು. ನಾನು ಮಧ್ಯದ ಸಾಲಿನ ನಾಲಕ್ನೇ ಬೆಂಚಿನಲ್ಲಿ ಕೂತಿದ್ದೆ. ನಾನು ಮತ್ತು ನನ್ನ ಪಕ್ಕ ಕೂತಿದ್ದವ ಏನೋ ದೀರ್ಘ ಸಂಭಾಷಣೆಯಲ್ಲಿ ತೊಡಗಿದ್ದೆವು. ನಾನು ಕಿಸ ಕಿಸ ನಗುತ್ತಲೂ ಇದ್ದೆ. ಇಷ್ಟು ಸಾಕಲ್ವಾ ಮಿಸ್‌ಗೆ...?
ರಾಘವ್ ಸ್ಟ್ಯಾಂಡ್ ಅಪ್...! ಒಮ್ಮೆ ತರಗತಿಯಲ್ಲಿ ಮೌನ.. ನಾನು ಯಾವತ್ತಿನಂತೆ ನಿಂತೆ..ಹೀಗೆ ನಿಂತು ಸಾಕಷ್ಟು ಅಭ್ಯಾಸವೂ ಇತ್ತು. ಆದರೆ ಈ ಬಾರಿ ಬೈಗುಳಗಳ ದಾಟಿ ಮಾತ್ರ ಬೇರೆಯದೇ ಆಗಿತ್ತು. ಅಬ್ಬಾ ಆ ಬೈಗುಳಗಳು ಹೇಗಿತ್ತು ಎಂದರೆ; ತರಗತಿಯಲ್ಲಿನ ನನ್ನ ಸಾಧನೆಗಳ ಇತಿಹಾಸವನ್ನೆಲ್ಲಾ ಒಂದೊಂದೆ ಹೆಕ್ಕಿ ತೆಗೆದು; ಒಳ್ಳೆ ಬಟ್ಟೆ ಒಗೆದ ಹಾಗೆ ಒಗೆದರು (ಆದರೆ ಕೊಳೆ ಮಾತ್ರ ಹೋಗದು ಎಂಬುದು ಅವರಿಗೆ ಗೊತ್ತಿರಲಿಲ್ಲವೇನೋ?). ನಾನು ಬಾಹುಬಲಿ ಮೂರ್ತಿಯಂತೆ ಉದ್ದಕ್ಕೆ ನಿಂತಿದ್ದೆ(ಬಟ್ಟೆ ಹಾಕಿದ್ದೆ). ಆದರೆ ಇವರ ಬೈಗಳು ಮಾತ್ರ ನಿಲ್ಲಲೇ ಇಲ್ಲ. ನಂಗೂ ಸಾಕಾಗಿ ಹೋಯಿತು. ನನ್ನ ಅಪ್ಪ ಅಮ್ಮ ಕೂಡ ಆ ರೀತಿ ಬೈದಿರಲಿಕ್ಕಿಲ್ಲ.

ಅಯ್ಯೋ ಸಾಕಪ್ಪಾ ಸಾಕು... “ನೀನು ಹಾಗೆ, ನೀನು ಹೀಗೆ...ನೀನೂ ಹಾಳಾಗುದಲ್ದೆ ಇದ್ದವರನ್ನೂ ಹಾಳು ಮಾಡ್ತ್ಯಾ..ಮೊನ್ನೆ ಎಕ್ಸಾಮ್‌ನಲ್ಲಿ ಮಾರ್ಕ್ ಎಷ್ಟು ಗೊತ್ತಾ ನಿಂಗೆ? ನಾವು ನಮ್ಮ ಎಲ್ಲಾ ಕೆಲಸ ಬಿಟ್ಟು ಬಂದು ನಿಮಗೆ ಒಳ್ಳೆದಾಗಲಿ (?) ಅಂತ ಸ್ಪೆಷಲ್ ಕ್ಲಾಸ್ ತಗೋಂಡ್ರೆ, ನೀನು ಮಾತ್ರ ಯಾವುದೇ ಚಿಂತೆ ಇಲ್ಲದೆ ಬೇರೆಯವರಿಗೂ ಉಪದ್ರ ಕೊಡ್ತ್ಯಲ್ಲಾ......” ಅಬ್ಬಾ.. ನನಿಗಂತೂ ಕಿವಿ ತೂತಾಗುತ್ತಿದೆಯೇನೋ ಅನ್ನಿಸಿತು.
ಆದರೆ ಅವರು ಒಂದು ಮಾತು ಹೇಳಿದಾಗಲಂತೂ ನನ್ನ ಎದೆ ಡವಕ್ಕಾಯಿತು.
“ನಾಡ್ದು ಪೇರೆಂಟ್ಸ್ ಮೀಟಿಂಗ್ ಬಂದಾಗ ನಿನ್ನ ಅಪ್ಪನತ್ರ ಮಾತಾಡ್ತೇನೇ...”
“ಅಯ್ಯೋ ದೇವರೇ ಬಂತಲ್ಲಾ ನನಗೆ ಕೇಡುಗಾಲ” ಎಂದು ಯೋಚಿಸುತ್ತಿದ್ದ ನನಗೆ ಆ ರಾತ್ರಿ ನಿದ್ದೆ ಕೂಡ ಬಂದಿರ್‍ಲಿಲ್ಲ. ಅವತ್ತಿಡೀ ಆ ಮಿಸ್‌ನ ಮಂಗಳಾರತಿಯೇ ನನ್ನ ಕಣ್ಮುಂದೆ ಬಂದು ಓಡಾಡುತ್ತಿತ್ತು. ಕ್ಲಾಸಿನುದ್ದಕ್ಕೂ ನಾನು ನಿಂತುಕೊಂಡೇ ಇದ್ದೆ. ೩೦ ನಿಮಿಷಗಳ ಆ ಪ್ರಹಸನದ ಬಳಿಕ ಮಿಸ್ ಪಾಠ ಮುಂದುವರಿಸಿದ್ರು.. ಶಾಲೆ ಬಿಟ್ಟು ಮನೆಗೆ ಹೋಗ್ಬೇಕಾದ್ರೆ ನನ್ನ ಫ್ರೆಂಡ್ಸ್ ಎಲ್ಲಾ; ಅಂತೂ ಕ್ಲಾಸ್‌ನಲ್ಲಿ ನಮಿಗೆ ನಿದ್ದೆ ಬಾರದ ಹಾಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾಗ; ಮನಸ್ಸಿನ ಒಂದು ಮೂಲೆಯಲ್ಲಿ ಹೆಮ್ಮೆಯೆನಿಸದೇ ಇರಲಿಲ್ಲ!

ಆಯ್ತು.. ಸೋಮವಾರ ಬೆಳಿಗ್ಗೆ ಶಾಲೆಗೆ ಬೇಗ ಬಂದಿದ್ದೆ. ನನ್ನ ಕ್ಲಾಸ್‌ಮೇಟ್ ಸುಧಾಕರ್ ಮತ್ತು ನಾನು ಹೆಚ್ಚಾಗಿ ೮ ಗಂಟೆಗೆ ಸ್ಕೂಲ್‌ಗೆ ಬರುತ್ತಿದ್ದೆವು. ಬಂದವ ನಾನು ಮೊದಲು ಟಾಯ್ಲೆಟ್‌ಗೆ ಮೂತ್ರ ಹೊಯ್ಯಲು ಹೋಗುತ್ತಿದ್ದೆ. ಮೂತ್ರ ಹೊಯ್ಯುತ್ತಿದ್ದಾಗಲೇ ಈ ಸುಧಾಕರ ಬಂದು; “ಹೇ ರಾಘವ ಮಿಸ್ ಈಸ್ ಕಾಲಿಂಗ್ ಯು” ಎಂದು ಮತ್ತೊಂದು ಶಾಕ್ ನೀಡಿದ. ಅವತ್ತು ಬೆಳಗ್ಗೆ ಮಿಸ್‌ನ ನೋಡಿದ್ರೂ ನಾನು ಗುಡ್‌ಮಾರ್ನಿಂಗ್ ಹೇಳಿರಲಿಲ್ಲ. ಹಿಂದಿನ ದಿನದ ಸಿಟ್ಟು ಇನ್ನೂ ಆರದಿರದಿದ್ದಾಗ; ಮಿಸ್‌ಗೆ ‘ಗುಡ್ ಮಾರ್ನಿಗ್’ ಬೇಕೆಂದೇ ನಾನು ಹೇಳಿರಲಿಲ್ಲ. ಅಷ್ಟು ಸಾಕಲ್ವಾ ಮಿಸ್‌ಗೆ...ತಗೋಳಿ...ಡಿಪಾರ್ಟ್‌ಮೆಂಟ್‌ಗೆ ನನ್ನ ಕರೆಸಿದರು. ಇತ್ತ ಅರ್ಧ ಮೂತ್ರ ಬಂದದ್ದು, ಹಾಗೇ ಬಾಕಿಯಾಯ್ತು.. ಮುಂದೆ ಮೂತ್ರ ಬರೆಲೇ ಇಲ್ಲ. ಪ್ಯಾಂಟ್ ಝಿಪ್ ಹಾಕಿ ಸೀದಾ ಡಿಪಾರ್ಟ್‌ಮೆಂಟ್‌ಗೆ ಹೋದೆ.

ಬೆಳಗ್ಗಿನ ಮುಹೂರ್ತ: ೮-೪೦ರ ಸಮಯ.
ಅವತ್ತಿನ ಸೇವೆ ಆರಂಭ...

“ಟೀಚರ್‍ಸ್‌ಗೆ ರೆಸ್ಪೆಕ್ಟ್ ಕೊಡಲಿಕ್ಕೆ ಬರದವ್ನು ನೀನೆಂಥ ಸಂಸ್ಕೃತಿ ಕಲ್ತಿದ್ದಿ? ಬಾರೀ ಸಿಟ್ಟು ಬರ್ತದಲ್ಲಾ ನಿಂಗೆ? ಮಿಸ್ ಬಂದ್ರೆ ಗುಡ್ ಮಾರ್ನಿಂಗ್ ಹೇಳದಷ್ಟು ದೊಡ್ಡ ಜನಾ ಆಗಿದ್ಯಾ ನೀನು...?” ಹಾಗೇ ಬೈದು ಬೈದು...ಗಂಟೆ ಒಂಭತ್ತಾಗಿತ್ತು.. ಬೇರೆ ಕ್ಲಾಸ್‌ನವರು ಬಂದವ್ರೆಲ್ಲಾ ನನ್ನನ್ನು ನೋಡುತ್ತಲೇ ಇದ್ದರು.. ಆ ದಿನ ನನಗೆ ನಿಜವಾಗಲೂ ನಾಚಿಕೆಯಾಗಿತ್ತು...ನಾನು ಜೋರಾಗಿ ಅತ್ತಿದ್ದೆ ಕೂಡ...
“ಹೋಗಿ ಹೆಡ್‌ಮಾಸ್ಟರ್ ಹತ್ತಿರ ಮಾತಾಡು” ಎಂದರು ಮಿಸ್..
ನೇರ ಎಚ್.ಎಂ. ಬಳಿ ಹೋದಾಗ, ಅವರು “ನಾನು ನಿನ್ನ ಅಪ್ಪನತ್ರ ಹೇಳ್ತೇನೆ” ಅಂದವರು ಮನೆ ನಂಬರ್ ಕೇಳಿದರು.. ಅಯ್ಯೋ... ನನಗೆ ಭಯವಾಗಿ ಹೋಗಿತ್ತು. ಮನೆಯಲ್ಲಿ ಫೋನ್ ಇಲ್ಲ ಎಂದು ಸುಳ್ಳು ಹೇಳಿದೆ. “ಗೋ ಗೋ...ಗೋ ಟು ಕ್ಲಾಸ್...ಗೆಟ್ ಲಾಸ್ಟ್...” ಅಂತ ಎಚ್.ಎಂ. ಹೇಳಿದಾಗ ಆ ನಂತರ ಹೋದವನು..ದಿನವಿಡೀ ಯಾವ ಕಾರಣಕ್ಕೂ ಟೀಚರ್‍ಸ್ ಡಿಪಾರ್ಟ್‌ಮೆಂಟ್‌ಗೆ ಮುಖ ಕೂಡ ಹಾಕಿರಲಿಲ್ಲ..
ಇವರೂ ಆಡುತ್ತಿರುವುದು ಕ್ರಿಕೆಟ್ ಅಲ್ಲವೇ?


ಆಸ್ಟ್ರೇಲಿಯದ ಸಿಡ್ನಿ ಓವಲ್‌ನಲ್ಲಿ ಮೊನ್ನೆ ಇಂಗ್ಲೆಂಡ್ ಮಹಿಳೆಯರ ಮೇಲಾಟ. ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಇಂಗ್ಲೆಂಡ್ ತಂಡದ ಮಹಿಳೆಯರು ಹರ್ಷದ ಹೊನಲಲ್ಲಿ ತೇಲುತ್ತಿದ್ದರು. ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ
ಮಣ್ಣು ಮುಕ್ಕಿಸಿ ಮಿನುಗುವ ವಿಶ್ವಕಪ್ ಕಿರೀಟವನ್ನು ಆಂಗ್ಲರು ಮುಡಿಗೇರಿಸಿಕೊಂಡ ಆ ಕ್ಷಣ ವಿಶ್ವ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಮರೆಯಲಾಗದ ಅಪರೂಪದ ಕ್ಷಣ. ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡ ಇದುವರೆಗೆ ಒಂದು ವಿಶ್ವಕಪ್ ಕೂಡಾ ಗೆಲ್ಲಲಾಗದ ವಿಪರ್ಯಾಸದ ನಡುವೆ ಮಹಿಳೆಯರು ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ದಿಗ್ವಿಜಯ ಸಾಧಿಸಿದ್ದು ಇಡೀ ಇಂಗ್ಲೆಂಡ್‌ಗೆ ದಕ್ಕಿದ ಬಹುದೊಡ್ಡ ಕೀರ್ತಿ. ಗೆಲುವಿನ ರನ್ ಬಾರಿಸುತ್ತಿದ್ದಂತೆ ಶಾಲೆಟ್ ಎಡ್ವರ್ಡ್ಸ್ ನೇತೃತ್ವದ ಇಂಗ್ಲೆಂಡ್ ಮಹಿಳೆಯರು ಆಸ್ಟ್ರೇಲಿಯದ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಎಡ್ವರ್ಡ್ಸ್ ಕಣ್ಣಲ್ಲಿ ನೀರು ಹರಿದಿತ್ತು. ಆಕೆಯ ವೃತ್ತಿ ಬದುಕಿನ ಅಪರೂಪದ ಗಳಿಗೆಗೆ ಮಾರ್ಚ್ ೨೨ರಂದು ಓವಲ್ ಸಾಕ್ಷಿಯಾಗಿತ್ತು. ಒಟ್ಟಾರೆ ಮಾಧ್ಯಮಗಳ ನಿರ್ಲಕ್ಷದಿಂದ ನಮ್ಮ ದೇಶದಲ್ಲಿ ಹೇಳುವಷ್ಟರ ಮಟ್ಟಿಗೆ ಸುದ್ದಿಯಾಗದ ಮಹಿಳೆಯರ ವಿಶ್ವಕಪ್ ಯಾವುದೇ ಅಡತಡೆಗಳಿಲ್ಲದೆ ಯಶಸ್ವಿಯಾಗಿ ನಡೆದದ್ದು ಎಲ್ಲರಲ್ಲೂ ಖುಷಿ ತಂದಿದೆ.


ಭಾರತದ ಮಹಿಳಾ ತಂಡ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರೂ ಫೈನಲ್ ತಲುಪುವಲ್ಲಿ ಸಫಲವಾಗಲಿಲ್ಲ. ಹಾಗಿದ್ದರೂ ಟೂರ್ನಿಯಲ್ಲಿ ಭಾರತದ ಮಹಿಳೆಯರ ಸಾಧನೆ ಕಡೆ ಕಣ್ಣು ಹೊರಳಿಸಿದರೆ ಅವರ ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ. ವಿಶ್ವದ ನಂಬರ್ ಒನ್ ಬೌಲರ್ ಜುಲಾನ್ ಗೋಸ್ವಾಮಿ ಸಾರಥ್ಯದ ಭಾರತ ತಂಡದ ಸರಾಸರಿ ನಿರ್ವಹಣೆ ಹೊಸ ಭರವಸೆ ಮೂಡಿಸಿದೆ. ಸೂಪರ್‌ಸಿಕ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ೮೫ ರನ್‌ಗಳಿಗೆ ಕಟ್ಟಿಹಾಕಿ ಬಗ್ಗುಬಡಿದರೂ, ಇನ್ನೊಂದು ವಿಭಾಗದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ, ಫೈನಲ್‌ಗೆ ಮುಖಮಾಡಿದ್ದರಿಂದ ಭಾರತದ ಮುಂದಿದ್ದ ಅವಕಾಶಗಳು ನೆಲಕಚ್ಚಬೇಕಾಯಿತು. ಆದರೆ ಮೂರನೇ ಸ್ಥಾನಕ್ಕಾಗಿ ಆಸ್ಟ್ರೇಲಿಯ ವಿರುದ್ಧ ನಡೆದ ಸೆಣಸಾಟದಲ್ಲಿ ಭಾರತ ಮತ್ತೊಮ್ಮೆ ವಿಜಯದ ನಗೆ ಬೀರಿತ್ತು. ಕಾಂಗರೂಗಳನ್ನು ೧೪೨ ರನ್ನುಗಳಿಗೆ ನಿಯಂತ್ರಿಸಿದ್ದ ಭಾರತದ ಮಹಿಳೆಯರು ಯಶಸ್ವಿಯಾಗಿ ರನ್ ಚೇಸ್ ಮಾಡಿದ್ದರು.

ಭಾರತದ ಮಹಿಳೆಯರು ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಕ್ರಿಕೆಟನ್ನು ದೇವರಂತೆ ಪೂಜಿಸುವ ಭಾರತದಲ್ಲಿ ಅದು ಸುದ್ದಿಯಾಗಲೇ ಇಲ್ಲ. ಪಾಕಿಸ್ತಾನ, ಆಸ್ಟ್ರೇಲಿಯ, ಶ್ರೀಲಂಕಾ, ವೆಸ್ಟ್‌ಇಂಡೀಸ್ ತಂಡಗಳನ್ನು ಭಾರತದ ಮಹಿಳೆಯರು ಸೋಲಿಸಿದರು ಎಂಬುದು ಗಮನಾರ್ಹ ಅಂಶವಾಗಿದ್ದರೂ, ಸುದ್ದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ. ಕಳೆದ ಬಾರಿಯ ವಿಶ್ವಚಾಂಪಿಯನ್ ಕಾಂಗರೂಗಳನ್ನು ಭಾರತ ಎರಡು ಬಾರಿ ಯಶಸ್ವಿಯಾಗಿ ಮಣಿಸಿದರೂ ಮಾಧ್ಯಮಗಳಲ್ಲಿ ಅವು ಬಿತ್ತರವಾದದ್ದು ಕೆಳಸುದ್ದಿಯಾಗಿ ಮಾತ್ರ. ಎಲ್ಲೋ ಒಂದೆರಡು ಮಾಧ್ಯಮಗಳು ೨೦-೨೫ ಸೆಕೆಂಡುಗಳ ಸುದ್ದಿ ನೀಡಿದ್ದು ಬಿಟ್ಟರೆ, ಮಹಿಳೆಯರ ಈ ಸಾಧನೆ ಯಾಕೋ ಮಾಧ್ಯಮಗಳಿಗೆ ಸುದ್ದಿಯಾಗದೇ ಇದ್ದದ್ದು ವಿಪರ್ಯಾಸವೇ ಸರಿ. ನೀವು ಗಮನಿಸಿರಬಹುದು, ವಿಶ್ವಕಪ್ ಕ್ರಿಕೆಟ್ ಮಧ್ಯೆ ಭಾರತ ಪುರುಷರ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿತ್ತು. ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ವರದಿಗಳು ಮಾಧ್ಯಮಗಳಲ್ಲಿ ಸ್ಪರ್ಧೆಗೆ ಬಿದ್ದಂತೆ ಬಿ
ತ್ತರವಾಗುತ್ತಿದ್ದವು.

ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುವ ವಿಶ್ವಕಪ್ ಕ್ರಿಕೆಟ್, ಕ್ರಿಕೆಟ್ ಆಡುವ ಎಲ್ಲಾ ದೇಶದ ಮಹಿಳಾ ಕ್ರಿಕೆಟ್ ಮಣಿಗಳಿಗೆ ತಮ್ಮ ಸಾಮರ್ಥ್ಯ, ಕೌಶಲ್ಯ ಪ್ರದರ್ಶನಕ್ಕೆ ಒಂದು ವೇದಿಕೆಯಾಗುತ್ತದೆ. ಅಪರೂಪಕ್ಕೆ ನಡೆಯುವ ಇಂತಹ ಟೂರ್ನಿಗಳನ್ನು ಸಹಜವಾಗಿ ಜನರು ನೋಡಬಯಸುತ್ತಾರೆ. ಆ ಬಗ್ಗೆ ಹೆಚ್ಚಿನದನ್ನು ತಿಳಿಯಬಯಸುತ್ತಾರೆ ಕೂಡ. ಆದರೆ ‘ಮಹಿಳಾ ಕ್ರಿಕೆಟ್ ಬಗ್ಗೆ ಯಾರು ಕೇಳ್ತಾರೆ ಮಾರಾಯ್ರೆ’ ಅನ್ನುವ ಮಾಧ್ಯಮಗಳ ಪೂರ್ವಗ್ರಹಪೀಡಿತ ಮನೋಭಾವವೇ ಜನರನ್ನೂ ಕೂಡ ಅದರಿಂದ ದೂರ ಉಳಿಯುವಂತೆ ಮಾಡಿವೆ.

ಮಹಿಳಾ ವಿಶ್ವಕಪ್ ಕ್ರಿಕೆಟ್‌ಗೆ ೩೬ ವರ್ಷಗಳ ಇತಿಹಾಸವೇ ಇದೆ. ೧೯೭೩ರಲ್ಲಿ ಆರಂಭವಾದ ಮೊದಲ ವಿಶ್ವಕಪ್ ಇದುವರೆಗೆ ತನ್ನ ಪಯಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದೆ. ಹಾಗೆ ನೋಡಿದರೆ ಪುರುಷರ ವಿಶ್ವಕಪ್ ಆರಂಭವಾದದ್ದು ಮಹಿಳಾ ವಿಶ್ವಕಪ್ ಆದ ಎರಡು ವರ್ಷದ ಬಳಿಕ. ಆದರೆ ‘ಪುರುಷ ಪ್ರಧಾನ’ ಎಂಬ ಮಾತಿಗೆ ತಕ್ಕಂತೆ ಇಂದು ಮುಖ್ಯವಾಹಿನಿಯಲ್ಲಿ ಪ್ರಧಾನವಾಗಿರುವುದು ಪುರುಷರ ಕ್ರಿಕೆಟ್ ಮಾತ್ರ. ಮಹಿಳಾ ಕ್ರಿಕೆಟ್‌ಗೆ ಪುರುಷರ ಕ್ರಿಕೆಟ್‌ಗೆ ನೀಡಿದಷ್ಟು ಆದ್ಯತೆಯನ್ನು ಇದುವೆರೆಗೆ ನೀಡಿಲ್ಲ ಎಂಬುದು ಮಹಿಳೆಯರ ಪಾಲಿಗೆ ಅರಗಿಸಿಕೊಳ್ಳಲಾಗದ ಸತ್ಯವಾದರೂ, ’ಮಹಿಳಾ ಪ್ರಾತಿನಿಧ್ಯ’ ಎಂದು ಮಾತನಾಡುವ ನಮ್ಮಲ್ಲಿನ ಬಹುತೇಕ ಪುರುಷರು ಇಂತಹಾ ವಿಷಯಗಳಲ್ಲಿ ಮೌನವನ್ನೇ ಉತ್ತರವಾಗಿಸುತ್ತಾರೆ.

ಭಾರತೀಯ ಕ್ರಿಕೆಟ್‌ನ್ನು ಶ್ರೀಮಂತಗೊಳಿಸಿದ ಕೀರ್ತಿ ಕೇವಲ ಪುರುಷ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ. ಮಹಿಳೆಯರದ್ದು ಇದರಲ್ಲಿ ಪಾಲಿದೆ ಎಂಬುದಕ್ಕೆ ಜಾಗತಿಕ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರು ಮಾಡಿದ ಸಾಧನೆಯತ್ತ ದೃಷ್ಟಿಹಾಯಿಸಿದರೆ ಅರ್ಥವಾಗುತ್ತದೆ. ಪ್ರಸ್ತುತ ಭಾರತ ತಂಡದ ನಾಯಕಿ ಜುಲಾನ್ ಗೋಸ್ವಾಮಿ ಅವರು ಈಗ ವಿಶ್ವದ ನಂಬರ್ ಒನ್ ಬೌಲರ್ ಆಗಿದ್ದಾರೆ. ಹಾಗೇ ಉಪಯುಕ್ತ ಆಲ್‌ರೌಂಡರ್ ಆಗಿರುವ ಗೋಸ್ವಾಮಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನ ಪಡೆದಿದ್ದಾರೆ. ಮಿಥಾಲಿ ರಾಜ್ ೩೦೦೦ ಸಾವಿರ ರನ್ ಗಡಿದಾಟಿಸಿದ ವಿಶ್ವದ ಐದನೇ ಆಟಗಾರ್ತಿ ಹಾಗೂ ಐಸಿಸಿ ರ್‍ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಟಗಾರ್ತಿ ರುಮೇಲಿ ದಾರ್. ವಿಶ್ವಕಪ್ ಟೂರ್ನಿ ಬಳಿಕ ಐಸಿಸಿ ಬಿಡುಗಡೆ ಮಾಡಿದ ವಿಶ್ವ ಕಪ್ ೧೧ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿರುವುದೂ ಗಮನಾರ್ಹ ಅಂಶ. ಮಿಥಾಲಿ ರಾಜ್ ಹಾಗೂ ಪ್ರಿಯಾಂಕಾ ರಾಯ್ ಸ್ಥಾನ ಪಡೆದ ಆ ಇಬ್ಬರು ಆಟಗಾರರು.

ವರ್ಷದಿಂದ ವರ್ಷಕ್ಕೆ ಭಾರತ ಮಹಿಳಾ ಕ್ರಿಕೆಟ್ ಭರವಸೆ ಮೂಡಿಸುತ್ತಿದ್ದರೂ ಎಲ್ಲೋ ಒಂದು ಕಡೆ ನಾವು ಆ ವಿಭಾಗವನ್ನು ಕಡೆಗಣಿಸುತ್ತಿದ್ದೇವೆ ಎಂಬ ಭಾವನೆ ಕಾಡುತ್ತಿದೆ.

ವಿಶ್ವಕಪ್ ಗೆಲ್ಲದಿದ್ದರೂ ತೃಪ್ತಿದಾಯಕ ಪ್ರದರ್ಶನ ತೋರಿದ್ದಾರೆ ಎಂಬ ಮಾತ್ರಕ್ಕಾದರೂ ನಮ್ಮ ಮಾಧ್ಯಮಗಳು ಈ ಆಟಗಾರರನ್ನು ಗುರುತಿಸಬಹುದಿತ್ತು. ಆದರೆ ಇಲ್ಲಿಯವರೆಗೆ ಒಂದು ಮಾಧ್ಯಮದಲ್ಲಾಗಲಿ, ಒಬ್ಬ ಆಟಗಾರ್ತಿಯ ಸಂದರ್ಶನ ಕೂಡ ಬಿತ್ತರವಾಗಿಲ್ಲ, ಪ್ರಕಟವಾಗಿಲ್ಲ. ಇಂಗ್ಲೆಂಡ್ ಮಹಿಳೆಯರು ಉನ್ನತ ಮಟ್ಟದ ಪ್ರದರ್ಶನ ತೋರಲು ಅಲ್ಲಿ ದೊರಕಿರುವ ಪ್ರೋತ್ಸಾಹವೂ ಪ್ರಮುಖ ಕಾರಣ. ಆದರೆ ಭಾರತದಲ್ಲಿ ಹೆಚ್ಚಿನ ಮಂದಿಗೆ ವಿಶ್ವಕಪ್ ಕ್ರಿಕೆಟ್ ಆಸ್ಟ್ರೇಲಿಯದಲ್ಲಿ ನಡೆಯುತ್ತಿದೆ ಎಂದು ತಿಳಿದದ್ದೇ ಇಎಸ್‌ಪಿನ್ ಹಾಗೂ ಸ್ಟಾರ್ ಚಾನೆಲ್‌ಗಳಲ್ಲಿ ಕ್ರಿಕೆಟ್ ನೇರ ಪ್ರಸಾರ ಕಂಡ ನಂತರ! ಈ ದುರಂತಕ್ಕೆ ನಗಬೇಕೋ, ಅಳಬೇಕೋ ಎಂದು ತಿಳಿಯುತ್ತಿಲ್ಲ.

ಒಂದು ವೇಳೆ ಅದೇ ಪುರುಷರ ತಂಡವಾಗಿದ್ದರೆ, ಅದೇನು ಸುದ್ದಿ, ಸಂದರ್ಶನ...ಇಡೀ ಸುದ್ದಿ ವಾಹಿನಿಗಳು ಆಟಗಾರರ ಬೆನ್ನುಬೀಳುತ್ತಿದ್ದವು. ಬೇಕಾದರೆ ಭಾರತ ಪುರುಷರ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ನಿಂದ ವಾಪಸಾಗುವಾಗ ವಿಮಾನ ನಿಲ್ದಾಣದಲ್ಲೇ ಮಾಧ್ಯಮಗಳು ಮೈಕ್ ಹಿಡಿದು ಕಾಯುವುದನ್ನು ಕಾಣಬಹುದು.

ಮತ್ತೊಂದು ಬೇಸರದ ಸಂಗತಿ ಎಂದರೆ ನಮ್ಮ ಬಹುತೇಕ ಮಾಧ್ಯಮಗಳು ಆಸ್ಟ್ರೇಲಿಯದಲ್ಲಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದ್ದರೂ ತಮ್ಮ ಯಾವುದೇ ಪ್ರತಿನಿಧಿಯನ್ನು ಅಲ್ಲಿಗೆ ಕಳುಹಿಸಿಲ್ಲ. ಅದೇ ನ್ಯೂಜಿಲೆಂಡ್‌ನಲ್ಲಿ ಮಾಧ್ಯಮಗಳ ಪ್ರವಾಹವೇ ಹರಿದಿದೆ! ಮಹಿಳಾ ಕ್ರಿಕೆಟ್-ಪುರುಷರ ಕ್ರಿಕೆಟ್‌ಗೆ ಇದೇ ವ್ಯತ್ಯಾಸ!

ಮಾಧ್ಯಮಗಳ ಹೊಣೆಗೇಡಿ ವರ್ತನೆಯೂ ಒಂದು ರೀತಿಯಲ್ಲಿ ಪ್ರತಿಭೆಗಳ ಕೊಲೆಗೆ ಕಾರಣವಾಗುತ್ತವೆ ಎಂಬುದನ್ನು ನಾವು ಒಪ್ಪಲೇಬೇಕು. ಒಟ್ಟಾರೆ ಮಹಿಳಾ ಹಾಕಿಯಲ್ಲಿ ನಿರೀಕ್ಷಿತ ಪ್ರಮಾಣದ ಸಾಧನೆ ತೋರದೆ ತತ್ತರಿಸಿಹೋಗಿರುವ ಭಾರತ ಕನಿಷ್ಠ ಕ್ರಿಕೆಟ್‌ನಲ್ಲಾದರೂ ಭರವಸೆಯ ಪ್ರದರ್ಶನ ನೀಡುತ್ತಿದೆ ಎಂಬ ಸಂತೋಷಕ್ಕಾದರೂ ಈ ಕ್ರಿಕೆಟ್ ಮಣಿಗಳನ್ನು ನಾವು ಪ್ರೋತ್ಸಾಹಿಸಬೇಕಾದ ಕಾಲ ಕೂಡಿ ಬಂದಿದೆ. ಬಿಸಿಸಿಐ ಹಾಗೂ ಸರ್ಕಾರವೂ ಈ ಬಗ್ಗೆ ಚಿಂತಿಸಬೇಕಿದೆ. ಬ್ಯಾಟಿಂಗ್ ತಂತ್ರಗಾರಿಕೆ, ಕ್ಷೇತ್ರರಕ್ಷಣೆಯಲ್ಲಿ ಸುಧಾರಣೆ ಹಾಗೂ ಬೌಲಿಂಗ್ ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಲು ಸಾಕಷ್ಟು ತರಬೇತಿ ಹಾಗೂ ಹೆಚ್ಚುವರಿ ಪಂದ್ಯಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದರ ಜೊತೆ ಮಾಧ್ಯಮಗಳೂ ತಮ್ಮ ಕರ್ತವ್ಯ ಮೆರೆಯಬೇಕಿದೆ. ಆದರೆ ಕೇವಲ ಟಿಆರ್‌ಪಿಯತ್ತ ಕಣ್ಣಿಟ್ಟೇ ಸುದ್ದಿ ಮಾಡುವ ಮಾಧ್ಯಮಗಳಿಗೆ ಇದು ಅರ್ಥವಾಗುವುದೇ?

Thursday 5 February 2009

ಬುಸುಗುಡುವ ದ್ವೇಷಾಗ್ನಿ ನಡುವೆ ಪ್ರೀತಿ...


ಪ್ರಿಯೆ,


ನಾಡಿದ್ದು ಫೆಬ್ರವರಿ ೧೪. ಅದು ಪ್ರೇಮಿಗಳಿಗಾಗಿ ಮೀಸಲಾದ ದಿನ ಅಂತ ಹೇಳ್ತಾರೆ. ಆದರೆ ಈ ಪತ್ರವನ್ನು ಆ ದಿನದ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆಂದು ತಿಳಿದುಕೊಳ್ಳಬೇಡ. ಏಕೆಂದರೆ ನಿನಗೇ ಗೊತ್ತು ನನಗೆ ಇಂತಹಾ ದಿನಾಚರಣೆಗಳು ಇಷ್ಟವಿಲ್ಲವೆಂಬುದು. ಪ್ರತಿದಿನವೂ ನಾವು ಪ್ರೀತಿಯನ್ನು ಪೂಜಿಸಿ ಆಚರಿಸುತ್ತಿರುವಾಗ ಇನ್ನು ಪ್ರತ್ಯೇಕ ದಿನ ಬೇಡ ಅಂತ ನೀನು ಕೂಡ ಹೇಳಿದ್ದೆ. ಹಾ...ಅದಿರಲಿ, ನಿನಗೊಂದು ವಿಷಯ ಹೇಳ್ಬೇಕು. ಅದನ್ನು ಈ ಪತ್ರದ ಮೂಲಕವೇ ಹೇಳ್ಬೇಕು ಅಂತ ಈ ಪತ್ರ ಬರೆಯುತ್ತಿದ್ದೇನೆ.

ಮೊನ್ನೆ ಹೀಗೆ ಆಫೀಸ್‌ನಲ್ಲಿ ಕುಳಿತಿದ್ದಾಗ ಥಟ್ಟನೆ ನನ್ನ ಜಿ-ಮೇಲ್ ಚಾಟ್ ಬಾಕ್ಸ್‌ನಲ್ಲಿ ಪ್ರೀತಿ ಕುರಿತ ಒಂದು ಸಾಲು ಬಂದು ಕೂತಿತು. ಆ ಸಾಲು ಏನೆಂದರೆ; “ಯಾವಾಗ್ಲೂ ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ ಮಾತ್ರ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತೆ”. ‘ಪ್ರೀತಿ’ ಎಂಬ ಎರಡಕ್ಷರದ ಮಾತೇ ನಮ್ಮಿಬ್ಬರ ನಡುವೆ ಕೋಟಿ ಭಾವನೆಗಳನ್ನು ಹುಟ್ಟಿಸಿರುವಾಗ ಕಾಲೇಜಿನಲ್ಲಿ ಒಟ್ಟಿಗೆ ಕಲಿಯುತ್ತಿದ್ದ ಓರ್ವ ಗೆಳತಿ ಕಳುಹಿಸಿದ್ದ ಆ ಸಾಲು ನನ್ನ ಮನವನ್ನು ಆಕರ್ಷಿಸಿತ್ತು.
ಹೌದು ಅದೇ ಶಾಶ್ವತ ಪ್ರೀತಿ. ಅಲ್ಲಿರುವುದು ಸ್ವಾರ್ಥವೆಂದರೆ ಏನೆಂದೇ ಅರಿಯದ, ನಿಷ್ಕಲ್ಮಷ ಭಾವನೆಯ ಸಂಚಾರ. ಅಲ್ಲಿ ಸೃಷ್ಟಿಯಾಗುವುದು ಮನಸ್ಸು ಮನಸ್ಸುಗಳ ನಡುವಿನ ಹಚ್ಚಹಸುರಿನ ನೈಜ ಪ್ರೀತಿ ಅಷ್ಟೆ.

ಹಾಗಾದರೆ ಇಂತಹ ಒಂದು ಅತ್ಯಂತ ಸುಲಲಿತ, ವರ್ಣನೆಗೂ ಮೀರಿದ, ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರೀತಿ ನಮ್ಮ ಕೈಗೆಟಕದಾಗಿರುವುದು ಏಕೆ? ಆ ಎರಡಕ್ಷರದ ಪ್ರೀತಿ ಬಹುದೂರದಲ್ಲಿ ನಿಂತು ಜನರೊಂದಿಗೆ ಆಟವಾಡುತ್ತಿರುವಾದದರೂ ಏಕೆ? ಬಿಸಿಲ್ಗುದುರೆಯಂತೆ ಕಾಡುತ್ತಿರುವುದು ಏಕೆ? ಮರೀಚಿಕೆಯಾಗಿ ಮನಸ್ಸಿಗೆ ನೋವುಣಿಸುತ್ತಿರುವುದು ಏಕೆ? ಇತಿಹಾಸವನ್ನೆಲ್ಲಾ ಮರೆತು ಸಂತಸದ ಭವಿಷ್ಯಕ್ಕೆ ನಾಂದಿ ಹಾಡುವ ಪ್ರೀತಿಯ ಹಿಂದೆ ಸಾವಿರಾರು ಮೈಲಿಗಟ್ಟಲೆ ಅಹರ್ನಿಶಿ ಓಡಿ ಬಂದಿದ್ದರೂ ನಮ್ಮ ಕೈಗೆ ಏಕೆ ಸಿಕ್ಕಿಲ್ಲ?

ಕಾಲ ಇಷ್ಟು ಬದಲಾಗಿದ್ದರೂ, ಜಗತ್ತಿನಲ್ಲಿ ಹಿಂದೆಂದೂ ಕಂಡರಿಯದಷ್ಟು ಪರಿವರ್ತನೆಯಾಗಿದ್ದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಅರಿಯುವಷ್ಟು ದೊಡ್ಡವರಾಗಿದ್ದರೂ, ಕೆಲವು ಕಟ್ಟುಪಾಡುಗಳಿಂದ ಹೊರಬರದಿರುವುದು ಅಥವಾ ಯಾರೋ ನಮ್ಮ ಪೂರ್ವಜರು ಹಾಕಿದ ಗೆರೆಯನ್ನು ದಾಟಿ ಮುನ್ನುಗ್ಗದಿರುವುದು ಇಂತಹುದಕ್ಕೆ ಕಾರಣವಾಗಿರಬಹುದೇ?

ವಿಶ್ವದೆಲ್ಲೆಡೆ ಹೊತ್ತಿ ಉರಿಯುತ್ತಿರುವ ಎಲ್ಲಾ ಘರ್ಷಣೆ, ಅನಾಹುತ, ವೈರತ್ವ ಅಥವಾ ಇನ್ಯಾವುದೇ ಪರಿಯ ವಿಪರೀತಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಪ್ರೀತಿಯಿಂದ ಖಂಡಿತಾ ಸಾಧ್ಯವಿದೆ. ಅದನ್ನು ಸಾಧಿಸಲು ಇಂದು ಸಾವಿರಾರು ಮನಸ್ಸುಗಳು ತುಡಿಯುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹುಳಿ ಹಿಂಡುವ ಕಾರ್ಯ, ಇನ್ನಷ್ಟು ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.

ಮೊನ್ನೆ ಮುಂಬೈನಲ್ಲಿ ಭಯೋತ್ಪಾದಕರು ರುದ್ರನರ್ತನಗೈದು ನೂರಾರು ಜನರನ್ನು ಬಲಿತೆಗೆದುಕೊಂಡಿದ್ದಾಗ ಮನಸ್ಸು ಕರಗಿ ಹೋಗಿತ್ತು. ಜೀವ ತೆತ್ತ ಅಮಾಯಕರ ಮೇಲೆ ಅಗಾಧ ಕನಿಕರ, ಪ್ರೀತಿ ಮೂಡಿತ್ತು. ಅದೇ ಹೊತ್ತಿಗೆ ಹಿಂದೂ-ಮುಸ್ಲಿಂ ನಡುವೆ ಅಂತರ ಮಾತ್ರ ಹೆಚ್ಚುತ್ತಲೇ ಹೋಗಿತ್ತು. ಇನ್ನು ಕಂಧಮಾಲ್, ಮಂಗಳೂರಿನಲ್ಲಿ ಮತಾಂತರ ವಿಷಯವಾಗಿ ಹಿಂದೂ-ಕ್ರಿಶ್ಚಿಯನ್ ಸಮುದಾಯದ ನಡುವೆ ದ್ವೇಷಾಗ್ನಿ ಹೊತ್ತಿ ಉರಿಯಿತು. ಹಲವಾರು ಮಂದಿ ಈ ಅಗ್ನಿಯಲ್ಲಿ ಹೊತ್ತಿ ಉರಿದರು. ಈ ಎರಡು ಸಮುದಾಯದ ನಡುವೆ ಬಹಳ ಆಳಕ್ಕೆ ಇಳಿದಿದ್ದ ದ್ವೇಷ ಇಂದು ಇನ್ನಷ್ಟು ಆಳಕ್ಕೆ ಇಳಿದಿದೆ. ಹಲವು ಮಂದಿ ಮೂಲಭೂತವಾದಿ ಸಂಘಟನೆಗಳನ್ನು ಹಿಗ್ಗಾ-ಮುಗ್ಗ ಜರೆಯುತ್ತಾ ಹೋದರೇ ವಿನಾ ಯಾರೂ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಲಿಲ್ಲ. ಅದೇನೆಂದರೆ ಜನಸಾಮಾನ್ಯರು ಕೂಡ ಏಕೆ ಇಂತಹ ದ್ವೇಷಾಗ್ನಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ ಎಂಬುದು? ಈಗ ಪ್ರೀತಿ, ಸಹಬಾಳ್ವೆ ಎಂಬುದು ಇಲ್ಲಿ ಗಗನಕುಸುಮವಾಗಿದ್ದು, ಕೋಮುದ್ವೇಷದ ಕೆಂಪು ಜ್ವಾಲೆ ವಿಸ್ತಾರವಾಗಿ ಹರಡಿದೆ.

ಇನ್ನು ಗಡಿ ವಿಷಯಗಳತ್ತ ಮುಖ ಮಾಡಿದರೆ ಅಲ್ಲೂ ಪ್ರೀತಿ, ಪ್ರೇಮ ಎಂಬುದು ಮಾಯವಾಗಿದೆ ಅನ್ನಿಸುವುದಕ್ಕಿಂತ, ಪ್ರೀತಿ, ಪ್ರೇಮವನ್ನು ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದನಿಸುತ್ತದೆ. ಅಲ್ಲೂ ಸಂಘಟನೆಗಳದ್ದೇ ಪಾರಮ್ಯ. ಏನೂ ಅರಿಯದ ಮುಗ್ಧ ಮಂದಿಯ ತಲೆಯಲ್ಲಿ ದ್ವೇಷದ ಬೀಜ ಬಿತ್ತುವ ಕರಾಳ ಜಾಲ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಂಬಿಕೆಗೆ ಅನರ್ಹವಾದ ಮಾತೇನಲ್ಲ.

ನಾನು ನಿನಗೆ ಹೇಳ ಹೊರಟಿರುವುದೇನೆಂದರೆ, ಮತ-ಧರ್ಮ-ಬಣ್ಣದ ಹೆಸರಲ್ಲಿ ಮನುಷ್ಯ ಮನುಷ್ಯರ ನಡುವೆ ದ್ವೇಷದ ಬೆಂಕಿ ರೌದ್ರಾವತಾರ ತಾಳಿ, ದೇಶದೆಲ್ಲೆಡೆ ಹಬ್ಬಿ ಹೊಗೆಯಾಡುತ್ತಿರುವಾಗ ಪರಸ್ಪರ ನಂಬುಗೆಯ, ಸಹಬಾಳ್ವೆಯ ಪ್ರೀತಿ ನಮ್ಮ ಜನರಲ್ಲಿ ಮಾಯವಾಗಿ ಹೋಗಿದೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನಮ್ಮಿಬ್ಬರ ಪ್ರೀತಿ ಮುನ್ನುಗ್ಗುತ್ತಿದೆ. ಇದುವರೆಗೆ ನಮ್ಮ ಪ್ರೀತಿಗೆ ಜಾತಿ-ಧರ್ಮವೆಂಬ ಕೊಳ್ಳಿ ದೆವ್ವದ ಕೆಂಗಣ್ಣು ಬಿದ್ದಿರಲಿಲ್ಲ. ಆದರೆ ಈಗಾಗುತ್ತಿರುವ ಬೆಳವಣಿಗೆ ನಮ್ಮನ್ನು ಎಚ್ಚರಿಸಿದೆ. ನಮ್ಮಿಬ್ಬರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ, ಬಾಹ್ಯ ಕರಾಳ ಶಕ್ತಿಗಳು ನಮಗೇನಾದರೂ ಮಾಡಬಹುದು. ಆದರೆ ಅದಕ್ಕೆ ಬಗ್ಗಬೇಕಾಗೇನೂ ಇಲ್ಲ. ಹಾಗಾಗಿ ನೀನು ಹೆದರುವ ಅಗತ್ಯವಿಲ್ಲ. ಕೆಲವು ತಿಂಗಳಲ್ಲಿ ನಾನೂ ನೀನಿದ್ದಲ್ಲಿಗೆ ಬರುತ್ತೇನೆ. ಅಷ್ಟು ದಿನ ಧೈರ್ಯದಿಂದಿರು... ಏಕೆಂದರೆ ನಮ್ಮದು ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ...

ಇಂತಿ ನಿನ್ನವ
ರಾಘು