ಬೈಗುಳಗಳ ಬೇಗೆಯಲ್ಲಿ ಬೆಂದು ಹೋದಾಗ...
ಆ ಸೋಷಿಯಲ್ ಮಿಸ್ ಇದ್ದರಲ್ಲ, ಅವರಷ್ಟು ನನಗೆ ಕಾಡಿದವರು ಮತ್ತೊಬ್ಬರಿರಲಿಕ್ಕಿಲ್ಲ. ಅಂದೊಮ್ಮೆ ಕನಸಲ್ಲೂ ಬಂದು ನನ್ನ ಹೆದರಿಸಿ ಹೋಗಿದ್ದರು. ಹೈಸ್ಕೂಲ್ ಜೀವನದಲ್ಲಿನ ಅಜರಾಮರ ನೆನಪುಗಳಲ್ಲಿ ಈ ಮಿಸ್ ಮಹತ್ವದ ಸ್ಥಾನ ಪಡೆದಿದ್ದಾರೆ. ಯಾವಾಗ ನೋಡಿದರೂ ಬೈಗುಳ, ಒಂದೇ ಸಮನೆ ಸಜೆಷನ್ ನೀಡುವುದು, ಎಲ್ಲರ ಎದುರು ನಿಲ್ಲಿಸಿ ಇತಿಹಾಸ ಕೆದಕುವುದು, ಅವತ್ತು ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ ಎಂದು ನನ್ನ ಗೋಳು ಹೊಯ್ಕೊಳ್ಳುತ್ತಲೇ ಇದ್ದರು. ನನಗಂತೂ ಅವರ ಮಾತುಗಳನ್ನು ಕೇಳವುದೆಂದರೆ ಹಸಿ ಹಾಗಲಕಾಯಿ ತಿಂದ ಹಾಗಾಗುತ್ತಿತ್ತು.! ನಾನು ನನ್ನ “ನಾಟಿ” ಮಿತ್ರರು ಮುಂದಿನ ಬೆಂಚಲ್ಲಿ ಕುಳಿತಿದ್ದರೂ ಕಾಮೆಂಟ್ ಪಾಸ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದ ಕಾರಣ ಅವರು ಬೈಯುವುದರಲ್ಲೂ ಅರ್ಥವಿತ್ತು ಬಿಡಿ..!
ಆವತ್ತು ಪೇರೆಂಟ್ಸ್ ಟೀಚರ್‍ಸ್ ಮೀಟಿಂಗ್ ದಿನ. ೧೦ನೇ ಕ್ಲಾಸ್‌ನ ಕೊನೆಯ ಪೇರೆಂಟ್ಸ್ ಮೀಟಿಂಗ್ ಅದು. ನನಗಂತೂ ಹೈಸ್ಕೂಲ್ ಜೀವನದ ಕರಾಳ ದಿನ ಎನ್ನಬಹುದು. ನಮ್ಮ ಕ್ಲಾಸ್ ಟೀಚರ್ ಕನ್ನಡ ಮಿಸ್ ಆಗಿದ್ದರೂ, ಈ ಸೋಷಿಯಲ್ ಇಡೀ ಕ್ಲಾಸ್ ಎದುರೇ “ರಾಘವ್ ಐ ವಾಂಟ್ ಟು ಸ್ಪೀಕ್ ವಿದ್ ಯುರ್ ಪೇರೆಂಟ್ಸ್, ಸೊ ಯು ಮೀಟ್ ಮಿ ಎಟ್ ದ ಟೈಮ್ ಆಫ್ ಮೀಟಿಂಗ್” ಎಂದು ಬಾಂಬ್ ಎಸೆದಿದ್ದರು. ಆಗಲೇ ನನಗೆ ಹೊಟ್ಟೆಯೊಳಗೆ ನಡುಕ ಆರಂಭವಾಗಿತ್ತು. ಹೇಗಾದರು ಮಾಡಿ ಕನ್ನಡ ಮಿಸ್ ಜೊತೆ ಮಾತನಾಡಿಸಿ ತಂದೆಯನ್ನು ಮನೆಗೆ ಕಳುಹಿಸಿ ಬಿಡಬೇಕು ಎಂದು ನಾನು ಆವಾಗಲೇ ಯೋಜನೆ ಹಾಕಿದ್ದೆ. ನೀವು ಕ್ಲಾಸಲ್ಲಿ ಇದ್ದ ಕಾರಣ ನನ್ನ ತಂದೆ ಕನ್ನಡ ಮಿಸ್ ಅನ್ನು ಮಾತನಾಡಿಸಿ ಹೋದರು ಎಂದು ಸಬೂಬು ನೀಡಬಹುದು ಎಂದು ಯೋಚಿಸಿದ್ದೆ. ಆದರೆ ಅಂದು ಆಗಿದ್ದದ್ದೇ ಬೇರೆ...
ಕನ್ನಡ ಮಿಸ್ ತಂದೆ ಬಳಿ ಮಾತನಾಡುತ್ತಿದ್ದರು. “ಏನು ನಿಮ್ಮ ಮಗನಿಗೆ ಕನ್ನಡ ಬಿಟ್ಟು ಉಳಿದ್ರಲ್ಲಿ ಎಲ್ಲಾ ಕಡಿಮೆ ಮಾರ್ಕ್ಸ್ ಇದೆಯಲ್ಲ” ಎಂದು ಒಂದೊಂದೇ ತಗಾದೆ ತೆಗೆಯುತ್ತಾ ಹೋದರು. ಮೀಟಿಂಗ್‌ನಲ್ಲಿ ನನ್ನ ಮಾರ್ಕ್‌ಗಳ ಬಗ್ಗೆ ಮಾತನಾಡುವ ಬದಲು ಈ ಮಿಸ್ ನಾನು ಕ್ಲಾಸ್‌ನಲ್ಲಿ ಏನೆಲ್ಲಾ ಪೀಕಲಾಟಗಳನ್ನು ಮಾಡುತ್ತಿದ್ದೆ ಎಂದು ಹೇಳಲಾರಂಭಿಸಿದರು. ಪಾಪ... ನನ್ನ ತಂದೆಗೆ ಏನು ಹೇಳುವುದೆಂದು ತಿಳಿಯದೆ ನನ್ನನ್ನು ಆಗಾಗ ನೋಡುತ್ತಲೇ ಇದ್ದರು. ತಪ್ಪಿತಸ್ಥನ ಮೋರೆ ಹಾಕಿ ನಾನು ಅವರನ್ನು ನೋಡುತ್ತಿದ್ದೆ.
ಅವರಿಗೆ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಅದಕ್ಕಿಂತ ಮೊದಲು ನನ್ನಲ್ಲಿ ಸಮರ್ಥನೆಗೆ ಉತ್ತರವೂ ಇಲ್ಲ. ಸರಿ, ಮೀಟಿಂಗ್ ಮುಗಿಯಿತು. ಈ ಸೋಷಿಯಲ್ ಮಿಸ್ ಮಾತ್ರ ಬೇರೆ ತರಗತಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರಿಂದ ಆದಷ್ಟು ಬೇಗ ತಂದೆಯನ್ನು ಮನೆಗೆ ಕಳುಹಿಸಿಬಿಡಬೇಕು, ಇಲ್ಲಾಂದ್ರೆ... ನನ್ನದು ಮಾತ್ರವಲ್ಲ ತಂದೆಯನ್ನೂ ತಲೆತಗ್ಗಿಸುವಂತೆ ಮಾಡುತ್ತಾರೆ ಎಂದು ತಿಳಿದಿತ್ತು.
ಮೀಟಿಂಗ್ ಹಾಲ್‌ನಿಂದ ನಾವು ಹೊರಗೆ ಕಾಲಿಡುವುದು...ಎದುರಿನಿಂದ ಸೋಷಿಯಲ್ ಮಿಸ್ ಆಗಮಿಸುವುದು...ಹೋ...! ಅಲ್ಲೇ ಕೈಯನ್ನು ತೊಡೆಗೆ ಬಾರಿಸಿದೆ... ಒಂದು ನಿಮಿಷ ಮೊದಲಾಗಿದ್ದರೆ ಇವರ ಕಣ್ಣಿಂದ ತಪ್ಪಿಸಬಹುದಿತ್ತಲ್ಲ ಎಂದು ಯೋಚಿಸುತ್ತಿದ್ದಂತೆ....“ಓಹ್ ಯುವರ್ ಡ್ಯಾಡ್ ಹ್ಯಾಸ್ ಕಮ್...ವನ್ ಮಿನಿಟ್ ಸರ್ ಐ ವಿಲ್ ಕಮ್ ಟು ಯು ಎಂದು ತಮ್ಮ ಪುಸ್ತಕಗಳನ್ನು ಇಟ್ಟವರೇ... ತಂದೆಯನ್ನು ಎದುರಿಗಿದ್ದ ಕುರ್ಚಿಯಲ್ಲಿ ಕೂರಿಸಿದರು. ನಾನು ಏನೋ ಮಹಾನ್ ತಪ್ಪು ಮಾಡಿದ್ದವನಂತೆ ನಿಧಾನವಾಗಿ ಎರಡೂ ಕಣ್ಣುಗಳನ್ನು ಮಿಟುಕಿಸುತ್ತಾ ಮಿಸ್ಸನ್ನೇ ನೋಡುತ್ತಿದ್ದೆ.
ಶುರುವಾಯಿತು ನೋಡಿ...ಬುಲೆಟ್ಸ್..ಬಾಂಬು...ಎಲ್ಲವೂ ನನ್ನನ್ನು ಅಟ್ಯಾಕ್ ಮಾಡುತ್ತಿದ್ದರೆ...ಅಪ್ಪ ಮಾತ್ರ ನನ್ನ ಮಗ ಹೀಗೆಲ್ಲಾ ಮಾಡಿದ್ದಾನಾ ಎಂದು ಸಪ್ಪೆ ಮೋರೆ ಹಾಕಿ ಏನನ್ನೂ ಹೇಳದೆ ಎಲ್ಲವನ್ನು ಕೇಳುತ್ತಿದ್ದರು.
“ನೋಡಿ ನಿಮ್ಮ ಮಗನಿಗೆ ಸೋಷಿಯಲ್‌ನಲ್ಲಿ ಮಾರ್ಕ್ ನೋಡಿ. 25ರಲ್ಲಿ 11 ಮಾರ್ಕು. ಎಲ್ಲಿಗೆ ಸಾಕು? ನಾಡ್ದು ಪ್ರಿಪರೇಟರಿ ಬೇರೆ ಇದೆ... ಹೀಗೆ ಓದಿದ್ರೆ ಕಾಲೇಜಿಗೆ ಹೋಗುವುದಾದ್ರು ಹೇಗೆ..? ಯಾವಾಗ ನೋಡಿದ್ರೂ ಕ್ಲಾಸಲ್ಲಿ ಮಾತಾಡ್ತಲೇ ಇರ್ತಾನೇ...ನಂಗಂತೂ ಹೇಳಿ ಹೇಳಿ ಸಾಕಾಗಿದೆ... ನಮ್ಮ ಮಾತಿಗೆ ಬೆಲೆಯೇ ಕೊಡುದಿಲ್ಲ. ಪೋಲಿಗಳ ಹಾಗೆ ಉಪದ್ರ ತಡಿಲಿಕ್ಕಾಗುದಿಲ್ಲ” ಎಂದು ತಂದೆಯ ಮುಖದತ್ತ ಬಾಂಬನ್ನು ಎಸೆಯುತ್ತಲೇ ಇದ್ದರು. ನಿಜವಾಗಿಯೂ ತಂದೆಗೆ ಅಂದು ತಲೆತಗ್ಗಿಸಿದ್ದರು. ಒಮ್ಮೆ ನನ್ನ ಮುಖ, ಮತ್ತೊಮ್ಮೆ ತಂದೆಯವರ ಮುಖ ನೋಡುತ್ತಾ ಮಿಸ್ ಕಂಪ್ಲೇಂಟುಗಳ ಸುರಿಮಳೆಯನ್ನೇ ಸುರಿಸಿದ್ದರು. ನನ್ನ ತಂದೆಯ ಸಪ್ಪೆ ಮುಖ.. ಎಲ್ಲರ ಎದುರು ನಿಲ್ಲಿಸಿ ಆ ಬೈಗುಳಗಳಿಂದ ಬೇಸತ್ತಿದ್ದ ನನ್ನ ಮನಸ್ಸು ನಿಜಕ್ಕೂ ಕಡಿದುಹೋದ ಬಾಳೇ ಗಿಡದಂತಾಗಿತ್ತು.. ಕಣ್ಣಲ್ಲಿ ನೀರು ಹರಿಯತೊಡಗಿತು. ಯಾವತ್ತು ಮಿಸ್‌ಗಳು ನನಗೆ ಬೈದಿದ್ದರೂ ನಾನು ಎಂದಿಗೂ ಅತ್ತಿರಲಿಲ್ಲ. ಆದರೆ ಅಪ್ಪನ ಮುಂದೆ...ಅವರ ಮುಖ...ನನ್ನನ್ನು ಗೊಳೋ ಎಂದು ಅಳುವಂತೆ ಮಾಡಿತ್ತು...ಹೊಟ್ಟೆಯೊಳಗಿಂದ ನೇರವಾಗಿ ಬಾಯಿಗೆ ಬರುತ್ತಿದ್ದ ಆ ಅಳುವನ್ನು ನಾನು ಇಂದಿಗೂ ಮರೆತಿಲ್ಲ... ಆ ದಿನ ನಾನು ಒಂದು ಕಡೆ ಕಣ್ಣೀರ ಧಾರೆ ಹರಿಸುತ್ತಿದ್ದರೆ, ಇನ್ನೊಂದು ಬದಿ ಮಿತ್ರ ಮಿಥುನ್ ಕುಮಾರ್ ನೇತ್ರಾವತಿ ನದಿಯನ್ನೇ ಹರಿಸಿದ್ದ. ಆದರೆ ಮಿಸ್ ಮಾತ್ರ ಬೇರೆಯವರಾಗಿದ್ದರು...
ನನಗೆ ಏನೂ ಹೇಳದೆ ಮನೆಗೆ ಹೋಗಿದ್ದ ತಂದೆ ನನಗೆ ಮನೆಯಲ್ಲೂ ಬೈಯಲೂ ಇಲ್ಲ... ಒಂದೆರಡು ಬುದ್ಧಿ ಮಾತನ್ನು ಹೇಳಿದ್ದು ಬಿಟ್ಟರೆ ಮತ್ತೇನನ್ನೂ ಅವರು ಹೇಳಿರಲಿಲ್ಲ... ಆ ದಿನ ನನ್ನನ್ನು ಸೋಷಿಯಲ್ ಮಿಸ್ಸೇ ಸಮಾಧಾನ ಪಡಿಸಿದ್ದರು. ಏಕೆಂದರೆ ಅವರಿಗೆ ನನ್ನ ಮೇಲೆ ಎಷ್ಟೇ ಕೋಪವಿದ್ದರೂ, ಅಷ್ಟೇ ಪ್ರಮಾಣದ ಪ್ರೀತಿಯಿದ್ದಕ್ಕೂ ಅದು ಸಾಕ್ಷಿಯಾಗಿತ್ತು. ಸೋಜಿಗವೆಂದರೆ ಪಿಯುಸಿ ಅಧ್ಯಯನಕ್ಕೆ ನಾನು ಉಜಿರೆ ಕಾಲೇಜಿಗೆ ಸೇರಿದಾಗ ನನ್ನ ಪೊಲಿಟಿಕಲ್ ಸೈನ್ಸ್ ಲೆಕ್ಚರರ್ ಆಗಿ ಇವರೇ ಬಂದಿದ್ದರು... ಆದರೆ ಇಲ್ಲಿದ್ದ ವ್ಯತ್ಯಾಸವೆಂದರೆ ಹೈಸ್ಕೂಲಿನ ದಿನಗಳನ್ನು ಇಲ್ಲಿ ಎಂದಿಗೂ ನಾನು ಪುನರಾವರ್ತಿಸಿರಲಿಲ್ಲ!
ಸೋಷಿಯಲ್ ಮಿಸ್ ಇಂದಿಗೂ ನನ್ನ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದಾರೆ. ಅವರಿಗೀಗ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
Tuesday, 5 May 2009
Subscribe to:
Post Comments (Atom)
6 comments:
ಹದಿ ಹರೆಯದ ದಿನಗಳಲ್ಲಿನ ಮಿಸ್‍ಗಳು ಮಿಸ್ಸ್ ಆಗುವುದು ಕಷ್ಟ! ಕಾಲೇಜಿನಲ್ಲಿ ಆ ಮಿಸ್ಸು ಏನು ಮಾಡಿದರು ಎನ್ನುವುದು ಕುತೂಹಲ!
ಒಲವಿನಿಂದ
ಬಾನಾಡಿ
ರಾಘವ
ನೆನಪುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಾಗ ಸಿಗುವ ಅನುಭೂತಿ ವಿಶಿಷ್ಟ. ಇದು ಎಲ್ಲರ ಜೀವನದಲ್ಲೂ ನಡೆಯುವ೦ಥಾದ್ದೇ ಆದರೂ ನೀವು ಅದನ್ನು ಚೆನ್ನಾಗಿ ನಿರೂಪಿಸಿ ನಮ್ಮ ಮು೦ದಿಟ್ಟಿದ್ದೀರಿ. ಮುಂದುವರಿಸಿ ಕಾಲೇಜು ದಿನಗಳ ಅವಾ೦ತರಗಳ ಸ೦ಪುಟವನ್ನು.
ಆ ಮಿಸ್ ಕಾಲೇಜಿನಲ್ಲೂ 'ನನ್ನ ಇತಿಹಾಸ' ಹೇಳುತ್ತಿದ್ದರು ಬಾನಾಡಿ ಅವರೇ... ನಗುವ ಸರದಿ ನನ್ನ ಕ್ಲಾಸ್ ಮೇಟ್ ಗಳದ್ದಾಗಿತ್ತು.. :)
Anyway Thanks a lot for the comment.
ಪರಾಂಜಪೆ ಅವರೇ ತಪ್ಪದೆ ಕಾಮೆಂಟಿಸುವ ನಿಮಗೂ ಒಂದು ಸಲಾಮ್...
bhari laikadu bhava!
ರಾಘವ ....
ನಿಮ್ಮ ಈ ಘಟನೆ ಓದಿ ನನಗೂ ನನ್ನ ಹೈಸ್ಕೂಲ್ ದಿನಗಳನ್ನು ನೆನಪಿಗೆ ಬಂದಿತು..
ನನ್ನ ಬ್ಲಾಗಿನಲ್ಲಿ "ಶಿವಾರ್ಪಣ" ಅಂತ ಲೇಖನ ಬರೆದಿದ್ದೇನೆ ದಯವಿಟ್ಟು ಓದಿ...
ನಿಮ್ಮ ತಂದೆಯವರು ನಿಮ್ಮನ್ನು ಬಯ್ದು ಬಿಟ್ಟಿದ್ದರೆ...
ನಿಮ್ಮ ಮನಸ್ಸಿಗೆ ಇಷ್ಟೊಂದು ನಾಟುತ್ತಿರಲಿಲ್ಲ....
ಕೆಲವು ಹಿರಿಯರು ಹಾಗೆ...
ಮೌನವಾಗಿ ತಿಳಿಹೇಳುತ್ತಾರೆ...
ಧನ್ಯವಾದಗಳು...
ಪ್ರಕಾಶ್ ಹೆಗ್ಡೆ ಅವರೇ ನಿಮ್ಮ ಮಾತು ಖಂಡಿತಾ ಒಪ್ಪುತ್ತೇನೆ... ಏಕೆಂದರೆ ನನಗೆ ಅಂಥಾ ಸುಮಾರು ಅನುಭವವಾಗಿವೆ...
Post a Comment