ಆಸ್ಟ್ರೇಲಿಯದ ಸಿಡ್ನಿ ಓವಲ್‌ನಲ್ಲಿ ಮೊನ್ನೆ ಇಂಗ್ಲೆಂಡ್ ಮಹಿಳೆಯರ ಮೇಲಾಟ. ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಇಂಗ್ಲೆಂಡ್ ತಂಡದ ಮಹಿಳೆಯರು ಹರ್ಷದ ಹೊನಲಲ್ಲಿ ತೇಲುತ್ತಿದ್ದರು. ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ
ಮಣ್ಣು ಮುಕ್ಕಿಸಿ ಮಿನುಗುವ ವಿಶ್ವಕಪ್ ಕಿರೀಟವನ್ನು ಆಂಗ್ಲರು ಮುಡಿಗೇರಿಸಿಕೊಂಡ ಆ ಕ್ಷಣ ವಿಶ್ವ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಮರೆಯಲಾಗದ ಅಪರೂಪದ ಕ್ಷಣ. ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡ ಇದುವರೆಗೆ ಒಂದು ವಿಶ್ವಕಪ್ ಕೂಡಾ ಗೆಲ್ಲಲಾಗದ ವಿಪರ್ಯಾಸದ ನಡುವೆ ಮಹಿಳೆಯರು ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ದಿಗ್ವಿಜಯ ಸಾಧಿಸಿದ್ದು ಇಡೀ ಇಂಗ್ಲೆಂಡ್‌ಗೆ ದಕ್ಕಿದ ಬಹುದೊಡ್ಡ ಕೀರ್ತಿ. ಗೆಲುವಿನ ರನ್ ಬಾರಿಸುತ್ತಿದ್ದಂತೆ ಶಾಲೆಟ್ ಎಡ್ವರ್ಡ್ಸ್ ನೇತೃತ್ವದ ಇಂಗ್ಲೆಂಡ್ ಮಹಿಳೆಯರು ಆಸ್ಟ್ರೇಲಿಯದ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಎಡ್ವರ್ಡ್ಸ್ ಕಣ್ಣಲ್ಲಿ ನೀರು ಹರಿದಿತ್ತು. ಆಕೆಯ ವೃತ್ತಿ ಬದುಕಿನ ಅಪರೂಪದ ಗಳಿಗೆಗೆ ಮಾರ್ಚ್ ೨೨ರಂದು ಓವಲ್ ಸಾಕ್ಷಿಯಾಗಿತ್ತು. ಒಟ್ಟಾರೆ ಮಾಧ್ಯಮಗಳ ನಿರ್ಲಕ್ಷದಿಂದ ನಮ್ಮ ದೇಶದಲ್ಲಿ ಹೇಳುವಷ್ಟರ ಮಟ್ಟಿಗೆ ಸುದ್ದಿಯಾಗದ ಮಹಿಳೆಯರ ವಿಶ್ವಕಪ್ ಯಾವುದೇ ಅಡತಡೆಗಳಿಲ್ಲದೆ ಯಶಸ್ವಿಯಾಗಿ ನಡೆದದ್ದು ಎಲ್ಲರಲ್ಲೂ ಖುಷಿ ತಂದಿದೆ.
ಭಾರತದ ಮಹಿಳಾ ತಂಡ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರೂ ಫೈನಲ್ ತಲುಪುವಲ್ಲಿ ಸಫಲವಾಗಲಿಲ್ಲ. ಹಾಗಿದ್ದರೂ ಟೂರ್ನಿಯಲ್ಲಿ ಭಾರತದ ಮಹಿಳೆಯರ ಸಾಧನೆ ಕಡೆ ಕಣ್ಣು ಹೊರಳಿಸಿದರೆ ಅವರ ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ. ವಿಶ್ವದ ನಂಬರ್ ಒನ್ ಬೌಲರ್ ಜುಲಾನ್ ಗೋಸ್ವಾಮಿ ಸಾರಥ್ಯದ ಭಾರತ ತಂಡದ ಸರಾಸರಿ ನಿರ್ವಹಣೆ ಹೊಸ ಭರವಸೆ ಮೂಡಿಸಿದೆ. ಸೂಪರ್‌ಸಿಕ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ೮೫ ರನ್‌ಗಳಿಗೆ ಕಟ್ಟಿಹಾಕಿ ಬಗ್ಗುಬಡಿದರೂ, ಇನ್ನೊಂದು ವಿಭಾಗದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ, ಫೈನಲ್‌ಗೆ ಮುಖಮಾಡಿದ್ದರಿಂದ ಭಾರತದ ಮುಂದಿದ್ದ ಅವಕಾಶಗಳು ನೆಲಕಚ್ಚಬೇಕಾಯಿತು. ಆದರೆ ಮೂರನೇ ಸ್ಥಾನಕ್ಕಾಗಿ ಆಸ್ಟ್ರೇಲಿಯ ವಿರುದ್ಧ ನಡೆದ ಸೆಣಸಾಟದಲ್ಲಿ ಭಾರತ ಮತ್ತೊಮ್ಮೆ ವಿಜಯದ ನಗೆ ಬೀರಿತ್ತು. ಕಾಂಗರೂಗಳನ್ನು ೧೪೨ ರನ್ನುಗಳಿಗೆ ನಿಯಂತ್ರಿಸಿದ್ದ ಭಾರತದ ಮಹಿಳೆಯರು ಯಶಸ್ವಿಯಾಗಿ ರನ್ ಚೇಸ್ ಮಾಡಿದ್ದರು.
ಭಾರತದ ಮಹಿಳೆಯರು ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಕ್ರಿಕೆಟನ್ನು ದೇವರಂತೆ ಪೂಜಿಸುವ ಭಾರತದಲ್ಲಿ ಅದು ಸುದ್ದಿಯಾಗಲೇ ಇಲ್ಲ. ಪಾಕಿಸ್ತಾನ, ಆಸ್ಟ್ರೇಲಿಯ, ಶ್ರೀಲಂಕಾ, ವೆಸ್ಟ್‌ಇಂಡೀಸ್ ತಂಡಗಳನ್ನು ಭಾರತದ ಮಹಿಳೆಯರು ಸೋಲಿಸಿದರು ಎಂಬುದು ಗಮನಾರ್ಹ ಅಂಶವಾಗಿದ್ದರೂ, ಸುದ್ದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ. ಕಳೆದ ಬಾರಿಯ ವಿಶ್ವಚಾಂಪಿಯನ್ ಕಾಂಗರೂಗಳನ್ನು ಭಾರತ ಎರಡು ಬಾರಿ ಯಶಸ್ವಿಯಾಗಿ ಮಣಿಸಿದರೂ ಮಾಧ್ಯಮಗಳಲ್ಲಿ ಅವು ಬಿತ್ತರವಾದದ್ದು ಕೆಳಸುದ್ದಿಯಾಗಿ ಮಾತ್ರ. ಎಲ್ಲೋ ಒಂದೆರಡು ಮಾಧ್ಯಮಗಳು ೨೦-೨೫ ಸೆಕೆಂಡುಗಳ ಸುದ್ದಿ ನೀಡಿದ್ದು ಬಿಟ್ಟರೆ, ಮಹಿಳೆಯರ ಈ ಸಾಧನೆ ಯಾಕೋ ಮಾಧ್ಯಮಗಳಿಗೆ ಸುದ್ದಿಯಾಗದೇ ಇದ್ದದ್ದು ವಿಪರ್ಯಾಸವೇ ಸರಿ. ನೀವು ಗಮನಿಸಿರಬಹುದು, ವಿಶ್ವಕಪ್ ಕ್ರಿಕೆಟ್ ಮಧ್ಯೆ ಭಾರತ ಪುರುಷರ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿತ್ತು. ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ವರದಿಗಳು ಮಾಧ್ಯಮಗಳಲ್ಲಿ ಸ್ಪರ್ಧೆಗೆ ಬಿದ್ದಂತೆ ಬಿತ್ತರವಾಗುತ್ತಿದ್ದವು.
ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುವ ವಿಶ್ವಕಪ್ ಕ್ರಿಕೆಟ್, ಕ್ರಿಕೆಟ್ ಆಡುವ ಎಲ್ಲಾ ದೇಶದ ಮಹಿಳಾ ಕ್ರಿಕೆಟ್ ಮಣಿಗಳಿಗೆ ತಮ್ಮ ಸಾಮರ್ಥ್ಯ, ಕೌಶಲ್ಯ ಪ್ರದರ್ಶನಕ್ಕೆ ಒಂದು ವೇದಿಕೆಯಾಗುತ್ತದೆ. ಅಪರೂಪಕ್ಕೆ ನಡೆಯುವ ಇಂತಹ ಟೂರ್ನಿಗಳನ್ನು ಸಹಜವಾಗಿ ಜನರು ನೋಡಬಯಸುತ್ತಾರೆ. ಆ ಬಗ್ಗೆ ಹೆಚ್ಚಿನದನ್ನು ತಿಳಿಯಬಯಸುತ್ತಾರೆ ಕೂಡ. ಆದರೆ ‘ಮಹಿಳಾ ಕ್ರಿಕೆಟ್ ಬಗ್ಗೆ ಯಾರು ಕೇಳ್ತಾರೆ ಮಾರಾಯ್ರೆ’ ಅನ್ನುವ ಮಾಧ್ಯಮಗಳ ಪೂರ್ವಗ್ರಹಪೀಡಿತ ಮನೋಭಾವವೇ ಜನರನ್ನೂ ಕೂಡ ಅದರಿಂದ ದೂರ ಉಳಿಯುವಂತೆ ಮಾಡಿವೆ.
ಮಹಿಳಾ ವಿಶ್ವಕಪ್ ಕ್ರಿಕೆಟ್‌ಗೆ ೩೬ ವರ್ಷಗಳ ಇತಿಹಾಸವೇ ಇದೆ. ೧೯೭೩ರಲ್ಲಿ ಆರಂಭವಾದ ಮೊದಲ ವಿಶ್ವಕಪ್ ಇದುವರೆಗೆ ತನ್ನ ಪಯಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದೆ. ಹಾಗೆ ನೋಡಿದರೆ ಪುರುಷರ ವಿಶ್ವಕಪ್ ಆರಂಭವಾದದ್ದು ಮಹಿಳಾ ವಿಶ್ವಕಪ್ ಆದ ಎರಡು ವರ್ಷದ ಬಳಿಕ. ಆದರೆ ‘ಪುರುಷ ಪ್ರಧಾನ’ ಎಂಬ ಮಾತಿಗೆ ತಕ್ಕಂತೆ ಇಂದು ಮುಖ್ಯವಾಹಿನಿಯಲ್ಲಿ ಪ್ರಧಾನವಾಗಿರುವುದು ಪುರುಷರ ಕ್ರಿಕೆಟ್ ಮಾತ್ರ. ಮಹಿಳಾ ಕ್ರಿಕೆಟ್‌ಗೆ ಪುರುಷರ ಕ್ರಿಕೆಟ್‌ಗೆ ನೀಡಿದಷ್ಟು ಆದ್ಯತೆಯನ್ನು ಇದುವೆರೆಗೆ ನೀಡಿಲ್ಲ ಎಂಬುದು ಮಹಿಳೆಯರ ಪಾಲಿಗೆ ಅರಗಿಸಿಕೊಳ್ಳಲಾಗದ ಸತ್ಯವಾದರೂ, ’ಮಹಿಳಾ ಪ್ರಾತಿನಿಧ್ಯ’ ಎಂದು ಮಾತನಾಡುವ ನಮ್ಮಲ್ಲಿನ ಬಹುತೇಕ ಪುರುಷರು ಇಂತಹಾ ವಿಷಯಗಳಲ್ಲಿ ಮೌನವನ್ನೇ ಉತ್ತರವಾಗಿಸುತ್ತಾರೆ.
ಭಾರತೀಯ ಕ್ರಿಕೆಟ್‌ನ್ನು ಶ್ರೀಮಂತಗೊಳಿಸಿದ ಕೀರ್ತಿ ಕೇವಲ ಪುರುಷ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ. ಮಹಿಳೆಯರದ್ದು ಇದರಲ್ಲಿ ಪಾಲಿದೆ ಎಂಬುದಕ್ಕೆ ಜಾಗತಿಕ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರು ಮಾಡಿದ ಸಾಧನೆಯತ್ತ ದೃಷ್ಟಿಹಾಯಿಸಿದರೆ ಅರ್ಥವಾಗುತ್ತದೆ. ಪ್ರಸ್ತುತ ಭಾರತ ತಂಡದ ನಾಯಕಿ ಜುಲಾನ್ ಗೋಸ್ವಾಮಿ ಅವರು ಈಗ ವಿಶ್ವದ ನಂಬರ್ ಒನ್ ಬೌಲರ್ ಆಗಿದ್ದಾರೆ. ಹಾಗೇ ಉಪಯುಕ್ತ ಆಲ್‌ರೌಂಡರ್ ಆಗಿರುವ ಗೋಸ್ವಾಮಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನ ಪಡೆದಿದ್ದಾರೆ. ಮಿಥಾಲಿ ರಾಜ್ ೩೦೦೦ ಸಾವಿರ ರನ್ ಗಡಿದಾಟಿಸಿದ ವಿಶ್ವದ ಐದನೇ ಆಟಗಾರ್ತಿ ಹಾಗೂ ಐಸಿಸಿ ರ್‍ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಟಗಾರ್ತಿ ರುಮೇಲಿ ದಾರ್. ವಿಶ್ವಕಪ್ ಟೂರ್ನಿ ಬಳಿಕ ಐಸಿಸಿ ಬಿಡುಗಡೆ ಮಾಡಿದ ವಿಶ್ವ ಕಪ್ ೧೧ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿರುವುದೂ ಗಮನಾರ್ಹ ಅಂಶ. ಮಿಥಾಲಿ ರಾಜ್ ಹಾಗೂ ಪ್ರಿಯಾಂಕಾ ರಾಯ್ ಸ್ಥಾನ ಪಡೆದ ಆ ಇಬ್ಬರು ಆಟಗಾರರು.
ವರ್ಷದಿಂದ ವರ್ಷಕ್ಕೆ ಭಾರತ ಮಹಿಳಾ ಕ್ರಿಕೆಟ್ ಭರವಸೆ ಮೂಡಿಸುತ್ತಿದ್ದರೂ ಎಲ್ಲೋ ಒಂದು ಕಡೆ ನಾವು ಆ ವಿಭಾಗವನ್ನು ಕಡೆಗಣಿಸುತ್ತಿದ್ದೇವೆ ಎಂಬ ಭಾವನೆ ಕಾಡುತ್ತಿದೆ.
ವಿಶ್ವಕಪ್ ಗೆಲ್ಲದಿದ್ದರೂ ತೃಪ್ತಿದಾಯಕ ಪ್ರದರ್ಶನ ತೋರಿದ್ದಾರೆ ಎಂಬ ಮಾತ್ರಕ್ಕಾದರೂ ನಮ್ಮ ಮಾಧ್ಯಮಗಳು ಈ ಆಟಗಾರರನ್ನು ಗುರುತಿಸಬಹುದಿತ್ತು. ಆದರೆ ಇಲ್ಲಿಯವರೆಗೆ ಒಂದು ಮಾಧ್ಯಮದಲ್ಲಾಗಲಿ, ಒಬ್ಬ ಆಟಗಾರ್ತಿಯ ಸಂದರ್ಶನ ಕೂಡ ಬಿತ್ತರವಾಗಿಲ್ಲ, ಪ್ರಕಟವಾಗಿಲ್ಲ. ಇಂಗ್ಲೆಂಡ್ ಮಹಿಳೆಯರು ಉನ್ನತ ಮಟ್ಟದ ಪ್ರದರ್ಶನ ತೋರಲು ಅಲ್ಲಿ ದೊರಕಿರುವ ಪ್ರೋತ್ಸಾಹವೂ ಪ್ರಮುಖ ಕಾರಣ. ಆದರೆ ಭಾರತದಲ್ಲಿ ಹೆಚ್ಚಿನ ಮಂದಿಗೆ ವಿಶ್ವಕಪ್ ಕ್ರಿಕೆಟ್ ಆಸ್ಟ್ರೇಲಿಯದಲ್ಲಿ ನಡೆಯುತ್ತಿದೆ ಎಂದು ತಿಳಿದದ್ದೇ ಇಎಸ್‌ಪಿನ್ ಹಾಗೂ ಸ್ಟಾರ್ ಚಾನೆಲ್‌ಗಳಲ್ಲಿ ಕ್ರಿಕೆಟ್ ನೇರ ಪ್ರಸಾರ ಕಂಡ ನಂತರ! ಈ ದುರಂತಕ್ಕೆ ನಗಬೇಕೋ, ಅಳಬೇಕೋ ಎಂದು ತಿಳಿಯುತ್ತಿಲ್ಲ.
ಒಂದು ವೇಳೆ ಅದೇ ಪುರುಷರ ತಂಡವಾಗಿದ್ದರೆ, ಅದೇನು ಸುದ್ದಿ, ಸಂದರ್ಶನ...ಇಡೀ ಸುದ್ದಿ ವಾಹಿನಿಗಳು ಆಟಗಾರರ ಬೆನ್ನುಬೀಳುತ್ತಿದ್ದವು. ಬೇಕಾದರೆ ಭಾರತ ಪುರುಷರ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ನಿಂದ ವಾಪಸಾಗುವಾಗ ವಿಮಾನ ನಿಲ್ದಾಣದಲ್ಲೇ ಮಾಧ್ಯಮಗಳು ಮೈಕ್ ಹಿಡಿದು ಕಾಯುವುದನ್ನು ಕಾಣಬಹುದು.
ಮತ್ತೊಂದು ಬೇಸರದ ಸಂಗತಿ ಎಂದರೆ ನಮ್ಮ ಬಹುತೇಕ ಮಾಧ್ಯಮಗಳು ಆಸ್ಟ್ರೇಲಿಯದಲ್ಲಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದ್ದರೂ ತಮ್ಮ ಯಾವುದೇ ಪ್ರತಿನಿಧಿಯನ್ನು ಅಲ್ಲಿಗೆ ಕಳುಹಿಸಿಲ್ಲ. ಅದೇ ನ್ಯೂಜಿಲೆಂಡ್‌ನಲ್ಲಿ ಮಾಧ್ಯಮಗಳ ಪ್ರವಾಹವೇ ಹರಿದಿದೆ! ಮಹಿಳಾ ಕ್ರಿಕೆಟ್-ಪುರುಷರ ಕ್ರಿಕೆಟ್‌ಗೆ ಇದೇ ವ್ಯತ್ಯಾಸ!
ಮಾಧ್ಯಮಗಳ ಹೊಣೆಗೇಡಿ ವರ್ತನೆಯೂ ಒಂದು ರೀತಿಯಲ್ಲಿ ಪ್ರತಿಭೆಗಳ ಕೊಲೆಗೆ ಕಾರಣವಾಗುತ್ತವೆ ಎಂಬುದನ್ನು ನಾವು ಒಪ್ಪಲೇಬೇಕು. ಒಟ್ಟಾರೆ ಮಹಿಳಾ ಹಾಕಿಯಲ್ಲಿ ನಿರೀಕ್ಷಿತ ಪ್ರಮಾಣದ ಸಾಧನೆ ತೋರದೆ ತತ್ತರಿಸಿಹೋಗಿರುವ ಭಾರತ ಕನಿಷ್ಠ ಕ್ರಿಕೆಟ್‌ನಲ್ಲಾದರೂ ಭರವಸೆಯ ಪ್ರದರ್ಶನ ನೀಡುತ್ತಿದೆ ಎಂಬ ಸಂತೋಷಕ್ಕಾದರೂ ಈ ಕ್ರಿಕೆಟ್ ಮಣಿಗಳನ್ನು ನಾವು ಪ್ರೋತ್ಸಾಹಿಸಬೇಕಾದ ಕಾಲ ಕೂಡಿ ಬಂದಿದೆ. ಬಿಸಿಸಿಐ ಹಾಗೂ ಸರ್ಕಾರವೂ ಈ ಬಗ್ಗೆ ಚಿಂತಿಸಬೇಕಿದೆ. ಬ್ಯಾಟಿಂಗ್ ತಂತ್ರಗಾರಿಕೆ, ಕ್ಷೇತ್ರರಕ್ಷಣೆಯಲ್ಲಿ ಸುಧಾರಣೆ ಹಾಗೂ ಬೌಲಿಂಗ್ ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಲು ಸಾಕಷ್ಟು ತರಬೇತಿ ಹಾಗೂ ಹೆಚ್ಚುವರಿ ಪಂದ್ಯಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದರ ಜೊತೆ ಮಾಧ್ಯಮಗಳೂ ತಮ್ಮ ಕರ್ತವ್ಯ ಮೆರೆಯಬೇಕಿದೆ. ಆದರೆ ಕೇವಲ ಟಿಆರ್‌ಪಿಯತ್ತ ಕಣ್ಣಿಟ್ಟೇ ಸುದ್ದಿ ಮಾಡುವ ಮಾಧ್ಯಮಗಳಿಗೆ ಇದು ಅರ್ಥವಾಗುವುದೇ?
No comments:
Post a Comment