Thursday, 28 January 2010

ಸ್ವಯಂಕೃತ ಅಪರಾಧದ ಫಲವುಂಡ ಪಾಕ್!


ಇದನ್ನು ಪಾಕಿಸ್ತಾನಿಗಳು ಸ್ವಯಂಕೃತವಾಗಿ ತಂದುಕೊಂಡ ದುಸ್ಥಿತಿ ಎನ್ನಬೇಕೇ ಅಥವಾ ಮನೆಗೆ ಬಾ ಅತಿಥಿ ಎಂದು ಆಮಂತ್ರಣ ನೀಡಿ ಕೊನೆಗೆ ಅವರ ಮುಖವನ್ನೂ ನೋಡದೇ ‘ನೀನು ಯಾರು’? ಎಂಬ ಭಾರತದ ಸೋಗಲಾಡಿ ವರ್ತನೆ ಎನ್ನಬೇಕೆ?

ಐಪಿಎಲ್ ಎಂಬ ಆಧುನಿಕ ಕ್ರಿಕೆಟ್‌ನ ಮಹಾಮೇಳದಲ್ಲಿ ತಾನೂ ಭಾಗವಹಿಸಬೇಕೆಂಬ ಅಗಾಧ ಹುಮ್ಮಸ್ಸಿನ ಮುಖ ಹೊತ್ತಿದ್ದ ಪಾಕಿಸ್ತಾನ, ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಮತ್ತು ಪಾಕಿಸ್ತಾನಿ ಆಟಗಾರರು ಇಂದು ಅವಮಾನದ ಮುಖ ಹೊತ್ತು ಅಸಮಾಧಾನದ ಹಾಗೂ ಆಶಾಭಂಗದ ನಿರ್ಜೀವ ಕಳೆಯಿಂದ ಕಾಣುತ್ತಿದ್ದಾರೆ. ಅವರು ಬೇಸರ ವ್ಯಕ್ತಪಡಿಸಿರುವುದನ್ನು ನೋಡಿದರೆ ನೈಜ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಬೇಸರವಾಗದೇ ಇರದು. ಅದೂ ಅಲ್ಲದೆ ಶಹೀದ್ ಅಫ್ರಿದಿಯಂತಹ ಹೇಳಿ ಮಾಡಿಸಿದ ಟಿ-೨೦ ಆಟಗಾರನನ್ನು ಫ್ರಾಂಚೈಸಿಗಳು ನಮಗೆ ಬೇಡ ಎಂದಾಗ, ಅಲ್ಲಿ ಏನೋ ಒಳ ರಾಜಕೀಯ ಇದೆ ಎಂಬ ಅನುಮಾನ ಮೂಡದೇ ಇರಲು ಸಾಧ್ಯವಿಲ್ಲ. ಹಾಗಾದರೆ ಇಲ್ಲಿ ತಪ್ಪು ನಮ್ಮವರದ್ದೇ? ಪಾಕ್ ಆಟಗಾರರಿಗೆ ಐಪಿಎಲ್-೩ರಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿ, ಕೊನೆಗೆ ’ಇಲ್ಲ’ ಎಂದದ್ದು ನಮ್ಮ ತಪ್ಪಾಯಿತೇ?


ಹಾಗೆ ನೋಡಿದರೆ ಸದಾ ತಮ್ಮ ತಪ್ಪನ್ನು ಮರೆಮಾಚುವ ಪಾಕಿಸ್ತಾನಿಗಳು ಐಪಿಎಲ್ ೨ರಲ್ಲಿ ಭಾಗವಹಿಸಿರಲಿಲ್ಲ. ಏಕೆ? ಅದಕ್ಕೆ ಕಾರಣಗಳೇನು ಎಂಬುದು ಇಡೀ ಲೋಕಕ್ಕೆ ಗೊತ್ತು. ಹಾಗಾದರೆ ನಾವು (ಪಾಕಿಸ್ತಾನ) ಐಪಿಎಲ್‌ನಲ್ಲಿ ಭಾಗವಹಿಸುವುದು ಸಮಯೋಚಿತವೇ? ಪರಿಸ್ಥಿತಿ ಇಂದು ಸುಧಾರಿಸಿದೆಯೇ? ಎಂಬುದರ ಬಗ್ಗೆ ಯೋಚಿಸಿ, ಮೆದುಳಿಗೆ ಕೊಂಚ ಕೆಲಸ ಕೊಟ್ಟಿದ್ದರೆ, ಪಾಕಿಸ್ತಾನದ ಮಂದಿ ಅವಮಾನ ಎಂದು ಘೀಳಿಡುವ ಅವಶ್ಯಕತೆಯೇ ಬರುತ್ತಿತ್ತೇ...?

೨೦೦೮ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಐಪಿಎಲ್- ೨ರಿಂದ ಪಾಕ್ ಆಟಗಾರರನ್ನು ಹೊರಗಿಟ್ಟಾಗಲೇ ಪಾಕ್ ಕ್ರಿಕೆಟ್ ಸಂಸ್ಥೆಗೆ ’ಬುದ್ಧಿ’ ಬರಬೇಕಿತ್ತು ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿತ್ತು. ಐಪಿಲ್ ಭಾರತದ ಕೂಸು, ಇದರಲ್ಲಿ ನಮ್ಮ ತಕರಾರು ಬೇಡ. ಉತ್ತಮ ದ್ವಿಪಕ್ಷೀಯ ಸಂಬಂಧದಿಂದ ಎಲ್ಲವೂ ಒಳ್ಳೆಯಾದದರೆ ಆ ಬಳಿಕವಷ್ಟೇ ಐಪಿಎಲ್‌ನಲ್ಲಿ ಭಾಗವಹಿಸುವಿಕೆ ಎಂದು ಪಾಕ್ ಚಿಂತನೆ ನಡೆಸಬಹುದಿತ್ತು. ಆದರೆ ಇಂದು ಭಾರತ-ಪಾಕ್ ಸಂಬಂಧ ಹಳಸಿದೆ. ರಾಜತಾಂತ್ರಿಕ ಹಾಗೂ ಸಾರ್ವಜನಿಕವಾಗೇ ದ್ವೇಷಾಗ್ನಿ ಉಕ್ಕಿ ಹರಿಯುತ್ತಿದೆ. ಮುಂಬೈ ದಾಳಿ ಬಗ್ಗೆ ಪಾಕಿಸ್ತಾನದ ಕೈವಾಡದ ಬಗ್ಗೆ ಪುರಾವೆಗಳು ಲಭ್ಯವಿದ್ದರೂ ಪಾಕ್ ಸರ್ಕಾರ ಜವಾಬ್ದಾರಿ ಹೊತ್ತಿಲ್ಲ. ಅಂಗೈಯಲ್ಲಿ ಹುಣ್ಣಿಟ್ಟುಕೊಂಡು ಮುಚ್ಚಿಡಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ವಾಸ್ತವವನ್ನು ಅರಿಯಬೇಕಿತ್ತು. ಐಪಿಲ್‌ಗೆ ಬರುತ್ತೀರಾ ಎಂದು ನಮ್ಮವರು ಆಹ್ವಾನವಿಟ್ಟಾಗ, ನೋ, ಥ್ಯಾಂಕ್ಸ್ ಎಂದಿದ್ದರೆ ಅದು ಪ್ರಬುದ್ಧ ನಡೆ ಎನಿಸುತ್ತಿತ್ತು.

ಇನ್ನು ರಾಜತಾಂತ್ರಿಕ ಹಿನ್ನೆಲೆಯಲ್ಲಿ ನೋಡಿದರೆ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡ ಇದೆ ಎಂಬುದನ್ನು ಅಮೆರಿಕದ ಫೆಡರಲ್ ತನಿಖಾ ಏಜೆನ್ಸಿಗಳು ಸಾರಿ ಹೇಳಿವೆ. ಕಂಬಿಗಳ ಹಿಂದೆ ಕುಳಿತಿರುವ ಅಜ್ಮಲ್ ಅಮೀರ್ ಕಸಬ್ ಎಂಬ ನರಭಕ್ಷಕ ’ಅರೆ ಹುಚ್ಚ’ನಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೂ, ನೂರಾರು ಮಂದಿ ಅಮಾಯಕರ ಪ್ರಾಣವನ್ನೇ ಕಿತ್ತುಕೊಂಡ, ಮುಗ್ಧ ಜೀವಗಳನ್ನು ಅನಾಥರನ್ನಾಗಿ ಮಾಡಿದ್ದನ್ನು ಮರೆಯಲು ಸಾಧ್ಯವಿದೆಯೇ? ಅಮಾಯಕರನ್ನು ಕ್ಷಣಕ್ಷಣವೂ ದುಃಖದ ಕರಾಳ ಕಡಲಲ್ಲಿ ನೊಂದು ಬೆಂದು ಬೆಂಡಾಗುವಂತೆ ಮಾಡಿದ ‘ಜಿಹಾದಿ’ ಉಗ್ರರನ್ನು ಬಗಲಲ್ಲಿಟ್ಟುಕೊಂಡೇ ‘ತಮಾಷೆ’ ನೋಡುತ್ತಿರುವ ಪಾಕಿಸ್ತಾನಿಗಳು ಭಾರತದ ಮಂದಿ ನಮ್ಮನ್ನು ಅವಮಾನ ಮಾಡಿದ್ದಾರೆ ಎಂದು ಲೋಕದಲ್ಲೆಲ್ಲಾ ಬೊಬ್ಬೆ ಇಟ್ಟರೆ ಭಾರತೀಯರು ಮೈ ಪರಚಿಕೊಳ್ಳದೆ ಇನ್ನೇನು ತಾನೆ ಮಾಡಲು ಸಾಧ್ಯ?

ಆದರೆ ಎಲ್ಲದಕ್ಕೂ ಪಾಕ್ ಕ್ರಿಕೆಟ್ ಸಂಸ್ಥೆ ಅಥವಾ ಪಾಕ್ ಆಟಗಾರರನ್ನು ದೂರುವುದೂ ಇಲ್ಲಿ ಸಮಂಜಸ ಎನಿಸದು. ಏಕೆಂದರೆ ಪಾಕ್ ಆಟಗಾರರೊಂದಿಗೆ ಆಗಲೀ ಅಥವಾ ಕ್ರಿಕೆಟ್ ಮಂಡಳಿ ನಡುವೆ ಇಲ್ಲಿ ಬಿಕ್ಕಟ್ಟಿರುವುದಲ್ಲ. ರಾಜತಾಂತ್ರಿಕ ನೆಲೆಯಲ್ಲಿ ಭಾರತ-ಪಾಕ್ ಸಂಬಂಧ ನೆಲಕಚ್ಚಿದೆ ಹಾಗೂ ಮುಖ್ಯವಾಗಿ ೨೬/೧೧ರ ನರಮೇಧದ ಬಳಿಕ ಪಾಕ್ ಮೇಲಿನ ಭಾರತೀಯರ ಮನೋಧರ್ಮ ಬದಲಾಗಿದೆ. ಆ ನೆಲೆಯಲ್ಲಿ ನೋಡಿದರೆ ಪಾಕ್ ರಾಜತಾಂತ್ರಿಕ ನಾಯಕರೇ ಸದ್ಯದ ಮಟ್ಟಿಗೆ ಭಾರತದಲ್ಲಿ ಕ್ರಿಕೆಟ್ ಬೇಡ ಎಂದೇ ಪ್ರತಿಕ್ರಿಯಿಸಬೇಕಿತ್ತು. ಆದರೆ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸದೆ, ನಿರ್ಧಾರ ತೆಗೆದುಕೊಂಡು, ಈಗ ಐಪಿಎಲ್ ಫ್ರಾಂಚೈಸಿಗಳು ನಮ್ಮನ್ನು ಅವಮಾನ ಮಾಡಿದರು, ಇಲ್ಲಿ ನವದೆಹಲಿಯ ಕೈವಾಡ ಇದೆ ಎಂದು ಹುಚ್ಚೆದ್ದು ಅಪವಾದ ಹೊರಿಸಿದರೆ ಪರಿಣಾಮ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಪಾಕ್ ನಾಯಕರು ಅರಿತಿದ್ದಾರಾ?

ಇನ್ನು ಆಸ್ಟ್ರೇಲಿಯದಲ್ಲಿ ಭಾರತೀಯರ ವಿರುದ್ಧ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಶಿವಸೇನೆ ಆಸ್ಟ್ರೇಲಿಯದ ಆಟಗಾರರು ಐಪಿಎಲ್‌ನಲ್ಲಿ ಅದು ಹೇಗೆ ಆಟವಾಡುತ್ತಾರೋ ನಾವೂ ನೋಡುತ್ತೇವೆ ಎಂಬ ಸವಾಲು ಹಾಕಿದ್ದಾರೆ. ಒಂದುವೇಳೆ ಅವರು ಪಾಲ್ಗೊಂಡದ್ದೇ ಆದಲ್ಲಿ ಮುಂಬೈನಲ್ಲಿ ಹಿಂಸಾಚಾರ ನಡೆಯುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿವೆ. ಹಾಗಾಗಿ ದ್ವೇಷಾಗ್ನಿಯ ಜ್ವಾಲೆ ಭುಗಿಲೆದ್ದ ಇಂದಿನ ದಿನಗಳಲ್ಲಿ ಪಾಕಿಸ್ತಾನವೂ ಎಚ್ಚೆತ್ತುಕೊಳ್ಳಬೇಕಿತ್ತು. ಬದಲಾಗಿ ತನ್ನ ಬುಡವನ್ನೇ ನೆಟ್ಟಗಿಟ್ಟುಕೊಳ್ಳದಿರುವ ಪಾಕ್, ಭಾರತದ ತಪ್ಪನ್ನೇ ವೈಭವಿಸಿ ಮಾತನಾಡಿದರೆ, ಅದು ಮುರ್ಖತನದ ಪರಮಾವಧಿ ಎನ್ನದೆ ವಿಧಿಯಿಲ್ಲ.

ಐಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ೧೧ ಕ್ರಿಕೆಟ್ ಆಟಗಾರರಿಗೆ ಯಾವೊಬ್ಬ ಪ್ರಾಂಚೈಸಿಯೂ ಮಣೆ ಹಾಕದಿರುವುದು ‘ರಾಷ್ಟ್ರೀಯ ಅವಮಾನ’ ಎಂದಿರುವ ಪಾಕಿಸ್ತಾನಕ್ಕೆ, ಆಟಗಾರರನ್ನು ಖರೀದಿಸುವುದು ಪ್ರಾಂಚೈಸಿಗಳಿಗೆ ಬಿಟ್ಟ ವಿಚಾರ ಎಂಬ ಸಾಮಾನ್ಯ ವಿಷಯವೂ ಗೊತ್ತ್ತಿಲ್ಲವೇ? ಆಸ್ಟ್ರೇಲಿಯದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವ ಬಗ್ಗೆಯೇ ಬಿಕ್ಕಟ್ಟು ಉಂಟಾಗಿರುವಾಗ ಇನ್ನೊಂದು ಬಿಕ್ಕಟ್ಟು ಉಂಟಾದರೇನು ಮಾಡುವುದು? ಎನ್ನುವ ಭಯ ಫ್ರಾಂಚೈಸಿಗಳಿಗೂ ಇತ್ತು. ಜೊತೆಗೆ ಭದ್ರತೆ ಸಮಸ್ಯೆ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ಐಪಿಎಲ್ ನಡೆಯಬೇಕೆಂಬ ಉದ್ದೇಶದಿಂದಲೇ ಪಾಕ್ ಆಟಗಾರರನ್ನು ಫ್ರಾಂಚೈಸಿಗಳು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವಿಚಾರ ಪಾಕಿಸ್ತಾನಕ್ಕೂ ತಿಳಿದೇ ಇರುತ್ತದೆ. ಭಯೋತ್ಪಾದನೆಯಿಂದ ದಿಕ್ಕೆಟ್ಟಿರುವ ಭಾರತಕ್ಕೆ ಪಾಕ್ ಮೇಲೆ ಸಹಜವಾಗಿಯೇ ದ್ವೇಷವಿದೆ ಎಂಬ ತೆರೆದ ವಾಸ್ತವಗಳು ಪಾಕಿಗಳಿಗೆ ತಿಳಿದಿರಲಿಲ್ಲವೇ?
ಅಷ್ಟಕ್ಕೂ ಐಪಿಎಲ್ ಆಟಗಾರರ ಖರೀದಿಯಲ್ಲಿನ ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಿದ್ದು ಇಲ್ಲಿ ಪಾಕಿಸ್ತಾನವೇ ಎಂಬುದೂ ಕಣ್ಣೆದುರಿಗಿನ ವಾಸ್ತವ. ಭಾರತದ ವರ್ತನೆ ನಿಜಕ್ಕೂ ಖಂಡನಾರ್ಹ. ಏಟಿಗೆ ಇದಿರೇಟು ನೀಡಿಯೇ ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಕ್ರೀಡಾ ಸಚಿವ ಇಜಾಸ್ ಜಕ್ರಾನಿ, ಯಾವ ಉದ್ದೇಶವಿಟ್ಟುಕೊಂಡು ಆ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಅವರೇ ಬಲ್ಲರು. ಆದರೆ ಪಾಕಿಸ್ತಾನದ ಇಂದಿನ ವಾಸ್ತವವನ್ನು ಎದುರಿಗಿಟ್ಟು ವಿಶ್ಲೇಷಿಸಿದ್ದರೆ ಅವರು ಖಂಡಿತಾ ಆ ಬಗೆಯ ಹೇಳಿಕೆ ನೀಡುತ್ತಿರಲಿಲ್ಲ. ತಮ್ಮೊಳಗಿನ ಸಮಸ್ಯೆ ಏನು ಎಂಬುದನ್ನು ಪರಾಮರ್ಶಿಸಿ ಅವಲೋಕಿಸಿದ್ದರೆ ಆ ಮಟ್ಟಿನ ಬೇಜವಾಬ್ದಾರಿಯ ಮಾತು ನಾಲಗೆಯಿಂದ ಹೊರಚಿಮ್ಮುತ್ತಿರಲಿಲ್ಲ!

ಪಾಕ್ ಕ್ರೀಡಾ ಸಚಿವರಿಗೆ ಒಂದು ಪ್ರಶ್ನೆ. ಒಂದು ವೇಳೇ ಇಂದಿನ ಬಿಕ್ಕಟ್ಟಿನ ದಿನಗಳಲ್ಲಿ ಪಾಕಿಸ್ತಾನದಲ್ಲೇ ನೀವು ಐಪಿಎಲ್ ಮಾದರಿಯ ಪಿಪಿಎಲ್ ಆರಂಭ ಮಾಡಿದರೆ ಹೇಗಿರಬಹುದು? ನಿಮ್ಮ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ನೀಡುತ್ತೇವೆ ಎಂದು ಆಹ್ವಾನ ನೀಡಿದರೂ ಅದೆಷ್ಟು ದೇಶದ ಆಟಗಾರರು ಆಹ್ವಾನವನ್ನು ಖುಷಿಯಿಂದ ಒಪ್ಪಿಯಾರು? ಶ್ರೀಲಂಕಾ ಆಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಳೆದ ವರ್ಷದ ಘಟನೆ ನೆನೆಸಿಕೊಂಡರೆ ಜೀವದ ಬಗ್ಗೆ ಭಯವಿದ್ದವನು ಪಾಕಿಸ್ತಾನಕ್ಕೆ ಬರಲಾದರೂ ಸಾಧ್ಯವಿದೆಯೇ? ಇಂದಿನ ಜಟಿಲ ಬಿಕ್ಕಟ್ಟು ಹಾಗೂ ಅಭದ್ರತೆಯ ಕರಿನೆರಳ ಪಾಕಿಸ್ತಾನದಲ್ಲಿ ಕ್ರಿಕೆಟ್ ಬಿಡಿ, ಯಾವ ಆಟವನ್ನಾಡಲೂ ವಿದೇಶಿಗರು ಬಯಸುವುದಿಲ್ಲ. ಈ ವಿಷಯವನ್ನು ಇಜಾಸ್ ಅವರು ನೆನಪಿಟ್ಟುಕೊಳ್ಳಲಿ. ಭಾರತಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ಉಸುರುವ ಬದಲು ನಿಮ್ಮಲ್ಲಿನ ಬಿಕ್ಕಟ್ಟು ನಿವಾರಣೆ ಬಗೆ ಹೇಗೆ ಎಂಬ ಬಗ್ಗೆ ಯೋಚಿಸಿ ಅಥವಾ ಸಂಬಂಧಪಟ್ಟವರಿಗೆ ಆ ಕುರಿತು ಬುದ್ಧಿ ಹೇಳಿ.

ಇವೆಲ್ಲದರ ನಡುವೆ, ಪಾಕಿಸ್ತಾನದಲ್ಲಿ ಭಾರತದ ವಿರುದ್ಧ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಕೇಬಲ್ ಟಿವಿ ಮಾಲೀಕರೂ ಐಪಿಎಲ್‌ನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಸರಿಯಾಗಿ ಪಾಕಿಸ್ತಾನ ಕಬಡ್ಡಿ ಫೆಡರೇಷನ್ (ಪಿಕೆಬಿ) ಭಾರತದ ಕಬಡ್ಡಿ ಪ್ರವಾಸವನ್ನು ರದ್ದುಗೊಳಿಸಿದೆ. ಭಾರತಕ್ಕೆ ಬರುವುದಿಲ್ಲ ಎಂದು ‘ಪಿಕೆಬಿ’ ಖಂಡತುಂಡವಾಗಿ ಹೇಳಿದೆ. ಜೊತೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಜಹೀರ್ ಅಬ್ಬಾಸ್ ಪಾಕ್ ಹಾಕಿ ತಂಡ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿರುವ ’ಹಾಕಿ ವಿಶ್ವಕಪ್’ನಿಂದ ಹೊರಗುಳಿಯಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕ್ರೀಡಾ ಸಚಿವ ಇಜಾಸ್ ಜಖ್ರಾನಿ ಅವರಲ್ಲಿ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ. ಒಟ್ಟಾರೆ ಪಾಕಿಸ್ತಾನದ ಸ್ವಯಂಕೃತ ಅಪರಾಧ, ಐಪಿಎಲ್ ಸಂಘಟಕರ ತರಾತುರಿಯ ನಿರ್ಧಾರ, ಪಾಕ್ ನಾಯಕರ ಬೇಜವಾಬ್ದಾರಿ ಹೇಳಿಕೆ, ಕ್ರೀಡೆಯಲ್ಲಿ ರಾಜಕೀಯದ ನುಸುಳುವಿಕೆ... ಈ ಎಲ್ಲಾ ವಿಷಜಂತುಗಳು ದ್ವಿಪಕ್ಷೀಯ ಸಂಬಂಧ ಸುಧಾರಣೆ ಎಂಬ ಪದಕ್ಕೇ ಕಲ್ಲೆಸೆದಿವೆ...

No comments: