ಅನ್ನದಾತನ ಆಕ್ರಂದನಕ್ಕೆ ಹೊಣೆ ಯಾರು?
ರೈತರು ಪಟ್ಟ ಶ್ರಮಗಳಿಗೆ ಕಿಂಚಿತ್ತೂ ಬೆಲೆ ನೀಡದಿದ್ದರೂ ಅವರನ್ನು ಪುಂಖಾನುಪುಂಖವಾಗಿ ಹೊಗಳಿ ಅಟ್ಟಕ್ಕೇರಿಸುವಲ್ಲಿ ನಮ್ಮ ರಾಜಕಾರಣಿಗಳು ಬಹಳ ನಿಸ್ಸೀಮರು. ಕೇವಲ ಮತಗಳನ್ನು ಸೆಳೆಯುವ ಉದ್ದೇಶ, ಅಧಿಕಾರದ ಗದ್ದುಗೆ ಏರುವ ಬಯಕೆ ರಾಜಕಾರಣಿಗಳನ್ನು ಏನು ಬೇಕಾದರೂ ಮಾಡುವಂತೆ ಪ್ರೇರೇಪಿಸುತ್ತದೆ. (ಅಧಿಕಾರ ಸಿಗುತ್ತದೆ ಎಂದಾದರೆ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿ ವರ್ಗಗಳು ಏನು ಮಾಡಲು ಹೇಸುವುದಿಲ್ಲ ಎಂಬುದು ಬೇರೆ ಮಾತು). ಭಾರತ ಇಂದು ಎಷ್ಟೇ ಮುಂದುವರಿದ ರಾಷ್ಟ್ರವಾಗಿ ಇಂದು ಹೊರಹೊಮ್ಮಿದ್ದರೂ, ರೈತರ ಪಾಡು ನಾಯಿ ಪಾಡೇ. ಆಫ್ರಿಕಾ ಖಂಡ ಹಲವು ದೇಶಗಳಲ್ಲಿನ ದೈನ್ಯ ಸ್ಥಿತಿಗೂ ನಮ್ಮ ದೇಶದ ರೈತರ ಸ್ಥಿತಿಗೂ ಹೋಲಿಕೆ ಒಂದೇ. ಅಲ್ಲಿನ ಹಲವು ರಾಷ್ಟ್ರಗಳು ಇನ್ನೂ ಅಭಿವೃದ್ಧಿ ಎಂದರೆ ಏನೆಂದೇ ಅರಿತಿಲ್ಲ. ಭಾರತದ ರೈತರ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆಗಳಿದ್ದರೂ ನಮ್ಮ ರಾಜಕಾರಣಿಗಳಲ್ಲಿ ದೂರದರ್ಶಿತ್ವ ಮತ್ತು ಇಚ್ಛಾಶಕ್ತಿ ಎಂಬುದೇ ಇಲ್ಲ. ಸರ್ಕಾರದ ಅಭಯಕ್ಕಾಗೇ ಭರವಸೆಯ ಮುಖಹೊತ್ತು ಕಾದು ಬಳಲಿ ಬೆಂಡಾಗುವ ನೇಗಿಲಯೋಗಿಗೆ ಅಂತಿಮವಾಗಿ ಸಿಗುವುದು ಶೂನ್ಯ.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿದರೂ ಏಕೆ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ? ಸರ್ಕಾರದ ಹಣ ಹಾಗಾದರೆ ಎಲ್ಲಿ ಹೋಯಿತು? ಸರ್ಕಾರಿ ಅಧಿಕಾರಿಗಳ ಮನೆಗೆ ಏಕಾಏಕಿಯಾಗಿ ದಾಳಿ ಮಾಡಿದರೆ ಉತ್ತರ ಸಿಗುವುದು ಖಂಡಿತ. ಅಧಿಕಾರಿಗಳ ನಾಚಿಕೆಗೇಡಿನ ಕೃತ್ಯಗಳಿಗೆ ರೈತ ಮಾತ್ರ ಮೂಕಸಾಕ್ಷಿಯಾಗಿ ನೋವನ್ನನುಭವಿಸುತ್ತಿದ್ದಾನೆ.
ಈ ಬಾರಿ ಮಳೆ ಬಂದಿಲ್ಲ. ಉತ್ತರ ಭಾರತದಲ್ಲಂತೂ ಬರದ ಕರಿಛಾಯೆಗೆ ರೈತರು ಬೇಸತ್ತುಹೋಗಿದ್ದಾರೆ. ಇತ್ತೀಚೆಗೆ ದೆಹಲಿಯ ದಿಲ್ಶದ್ ಗಾರ್ಡನ್‌ನಲ್ಲಿ ಸುಖಬೀರ್ ಎಂಬ ರೈತನೊಬ್ಬ ಬಸ್ಸಿನಲ್ಲಿ ಸಿಕ್ಕಿದ್ದ. ವಿಪರೀತ ಸೆಕೆಯಲ್ಲಿ ಇಬ್ಬರೂ ಬೆಂದುಹೋಗಿದ್ದೆವು. ಕಳೆದ ವರ್ಷದಷ್ಟೂ ಈ ಬಾರಿ ಮಳೆ ಬರಲಿಲ್ಲವಲ್ಲ ಎಂದು ಮಾತಿಗಿಳಿದಾಗ ಆತ, “ಒಂದೆಡೆ ಮಳೆಯೂ ಬರುವುದಿಲ್ಲ, ಇನ್ನೊಂದೆಡೆ ಸರ್ಕಾರಕ್ಕೆ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರದ ಯಾವೊಂದು ಯೋಜನೆಯೂ ನಮ್ಮ ಹಳ್ಳಿಯನ್ನೂ ತಲುಪಿಯೇ ಇಲ್ಲ” ಎಂದು ಗೋಗರೆದಿದ್ದ. ಅವರ ಹಳ್ಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಒಬ್ಬ ರೈತ ಬೆಳೆ ನಷ್ಟ, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಹೆಂಡತಿಗೆ ವಿಷನೀಡಿದ್ದರೂ, ಆಕೆ ಬದುಕಿದ್ದಳು. ಆದರೆ ಆಕೆಯ ಮುಂದಿನ ಬದುಕು ಏನೆಂದು ಕೇಳಿದ್ದಕ್ಕೆ ಈತನಲ್ಲಿ ಉತ್ತರವಿರಲ್ಲ. ಸದ್ಯಕ್ಕೆ ಸ್ಥಳೀಯರು ಆಕೆಗೆ ನೆರವಾಗಿದ್ದಾರೆ. ಆದರೆ ಭವಿಷ್ಯದಲ್ಲಿ ಆಕೆಗೆ ಗತಿ ಏನು? ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ.
ಉತ್ತರಭಾರತದ ಹಲವೆಡೆ ಜೂನ್‌ನಿಂದ ಆಗಸ್ಟ್‌ವರೆಗೆ ಸಾಮಾನ್ಯ ಸರಾಸರಿಗಿಂತ ಶೇಕಡಾ ೩೦ರಷ್ಟು ಕಡಿಮೆ ಮಳೆಯಾಗಿದೆ ಎಂದು ವರದಿಯೊಂದು ಹೇಳಿದೆ. ಆದರೆ ಉತ್ತರ ಪ್ರದೇಶದ ನತದೃಷ್ಟ ಸ್ಥಿತಿ ಹೇಗಿದೆ ಎಂದರೆ ಈ ಬಾರಿ ಶೇಕಡಾ ೬೦ರಷ್ಟು ಕಡಿಮೆ ಮಳೆಯಾಗಿದ್ದು ಇಲ್ಲಿನ ರೈತರು ಕಂಗಾಲಾಗಿ ಹೋಗಿದ್ದು, ಅವರ ದೇಹದಲ್ಲೆಲ್ಲಾ ನಿರಾಶೆಯ ದಟ್ಟ ಕಾರ್ಮೋಡ ಕವಿದಿದೆ. ಉತ್ತರ ಪ್ರದೇಶದ ಅನ್ನದಾತರು ಒಂದೆಡೆ ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಮಾಯಾವತಿ ಅವರ ‘ಮಹತ್ವಾಕಾಂಕ್ಷೆ’ಯ ಸುಮಾರು ೫೦ ಕೋಟಿ ರೂ ವೆಚ್ಚದ ಪ್ರತಿಮೆ ನೋಯ್ಡಾ ಬಳಿ ನಿರ್ಮಾಣವಾಗುತ್ತಿದೆ. ಇನ್ನೊಂದು ವಿಚಾರ ಎಂದರೆ ದೆಹಲಿಯಲ್ಲಿರುವ ಮಾಯಾವತಿ ಅವರ ನಿವಾಸ ‘ಕೇವಲ’ ನೂರು ಕೋಟಿ ಖರ್ಚಿನಲ್ಲಿ ನಿರ್ಮಾಣವಾಗಿದೆ. ರಾಜರ ಅರೆಮನೆಗಳಿಗೇನೂ ಕಮ್ಮಿಯಿಲ್ಲದಂತಿದೆ ಆ ಮನೆ. ಅದು ಅವರ ವೈಯಕ್ತಿಕ ವಿಚಾರ ಬಿಡಿ! ಆದರೆ ಈಗಿರುವ ಬರ ಪರಿಸ್ಥಿತಿಗೆ ನಗ್ನ ಸಾಕ್ಷಿಯಾಗಿರುವ ಇಲ್ಲಿನ ರೈತರ ಬವಣೆ ಕೇಳುವವರು ಯಾರು? ಮಳೆ ಬರಬೇಕಿದ್ದ ಸಂದರ್ಭದಲ್ಲಿ ಬಿರುಬಿಸಿಲು ಒಬ್ಬೊಬ್ಬ ರೈತರ ಬದುಕನ್ನೇ ಕಿತ್ತುತಿನ್ನುತ್ತಿದೆ. ಒಟ್ಟಾರೆ ಬರ ಪರಿಸ್ಥಿತಿಯಲ್ಲಿ ಬದುಕು ಹೇಳತೀರದಂತಾಗಿದ್ದು, ಹಲವು ಮಂದಿ ಈಗಾಗಲೇ ಬೇರೆಡೆಗೆ ವಲಸೆ ಹೋಗಿಯಾಗಿದೆ.
ಒಂದು ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸುಮಾರು ೧,೦೦,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಕೈಗೊಂಡರೂ ರೈತರ ಸಾವಿನ ಸಂಖ್ಯೆ ಇಳಿಮುಖ ಕಂಡಿಲ್ಲ ಎಂದಾದರೆ ಇದರ ಅರ್ಥ ಯಾವುದೇ ಯೋಜನೆಯಾಗಲೀ ರೈತರಿಗೆ ತಲುಪುತ್ತಿಲ್ಲ ಎಂಬುದು. ಉಳಿದ ರಾಜ್ಯಗಳಂತೆ ಕರ್ನಾಟಕ ರೈತರು ಕಡುಸಂಕಟದಲ್ಲಿ ಜೀವನಸಾಗಿಸುತ್ತಿದ್ದಾರೆ. ಸರ್ಕಾರೀ ಮೂಲಗಳೇ ಮಾಹಿತಿ ನೀಡಿರುವಂತೆ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ಉಂಟಾದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮವಾಗಿ ೧೩೮೭ ಕೋಟಿ ರೂ ಹಣ ನಷ್ಟವಾಗಿದೆ. ಅನಾವೃಷ್ಟಿಗೆ ಅಂದಾಜು ೮೭೧ ಕೋಟಿ ರೂ ನಷ್ಟವಾಗಿದ್ದರೆ, ೫೧೬ ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಈ ಮಧ್ಯೆ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಕ್ರಮವಾಗಿ ೩೯೪ ಕೋಟಿ ರೂ ಹಾಗೂ ೩೧೭ ಕೋಟಿ ರೂ ಹಣ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳೇ ತಿಳಿಸಿದ್ದಾರೆ. ಇವೆಲ್ಲದರ ನಡುವೆ ಸರ್ಕಾರ ಇತ್ತೀಚೆಗೆ ೨೦ ಜಿಲ್ಲೆಗಳು ಮತ್ತು ೮೬ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಕರ್ನಾಟಕದ ಸದ್ಯದ ಪರಿಸ್ಥಿತಿ ಅತ್ಯಂತ ಹೀನಾಯವಾಗಿಬಿಟ್ಟಿದೆ ಎಂಬುದು ಇದರಿಂದಲೇ ಸ್ಪಷ್ಟವಾಗಿದೆ.
ಈ ಬಾರಿಯ ಆರ್ಥಿಕ ವರ್ಷದ ಐದು ತಿಂಗಳಲ್ಲೇ ೫೦ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಆತ್ಮಹತ್ಯೆಯ ಅತಿಎಹಚ್ಚು ಪ್ರಕರಣಗಳು ದಾಖಲಾಗಿದ್ದು, ಶಿವಮೊಗ್ಗದಲ್ಲಿ ೭, ತುಮಕೂರು ೬, ಬೆಳಗಾವಿ ಮತ್ತು ಹಾಸನ ೫, ಚಿಕ್ಕಮಗಳೂರು, ಬೀದರ್, ದಾವಣೆಗೆರೆ ಮತ್ತು ಬಿಜಾಪುರದಲ್ಲಿ ೩, ಚಿತ್ರದುರ್ಗ, ದಕ್ಷಿಣಕನ್ನಡ ೨ ಹಾಗೂ ಮೈಸೂರಿನಲ್ಲಿ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ! ಕಳೆದ ಒಂಬತ್ತು ವರ್ಷಗಳಿಂದ ಕರ್ನಾಟಕ ಬರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕ್ಕೆ ಈ ಬಾರಿಯ ಬರ ಇನ್ನಷ್ಟು ಘಾಸಿಗೋಳಿಸಿರುವುದು ದುರಂತ. ೨೦೦೮-೦೯ರಲ್ಲಿ ಸುಮಾರು ೩೩೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಗಳಲ್ಲಿ ದಾಖಲಾಗಿದ್ದು, ಸದ್ಯದ ವಿಪರೀತ ಬರ ಪರಿಸ್ಥಿತಿಯಿಂದಾಗಿ ಈ ಸಂಖ್ಯೆ ಇನ್ನಷ್ಟು ಏರಲಿದೆ ಎಂಬ ಆತಂಕ ಕಾಡತೊಡಗಿದೆ.
ಹಾಗೆಂದ ಮಾತ್ರಕ್ಕೆ ರೈತರ ಆತ್ಮಹತ್ಯೆಗೆ ಸಂಪೂರ್ಣ ಸರ್ಕಾರವೇ ಹೊಣೆ ಎಂದೆನ್ನಲಾಗದು. ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಹಳ್ಳಿಗಳ ನಿರ್ಲಕ್ಷಿಸುವ ಅಧಿಕಾರಶಾಹಿಯ ದುರ್ವರ್ತನೆಗಳು, ಕೆಲವೊಮ್ಮೆ ತಮ್ಮ ಇತಿ-ಮಿತಿ ಅರಿಯದೆ ತಂದುಕೊಂಡ ಆರ್ಥಿಕ ಹೊರೆಗಳು ರೈತರ ಆತ್ಮಹತ್ಯೆಗಳಿಗೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಾವುಗಳನ್ನು ತಪ್ಪಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮಾತ್ರ ಇಂದಿಗೂ ಪ್ರಶ್ನಾರ್ಹವಾಗೇ ಉಳಿದಿವೆ. ಸರ್ಕಾರದ ಚಿಂತನೆ, ಯೋಜನೆಗಳು ಸಕಾಲದಲ್ಲಿ ರೈತರನ್ನು ತಲುಪುವಂತಾಗಿದ್ದಾರೆ ಈ ಪರಿಯ ಅನಾಹುತ ಇಂದು ನಮ್ಮ ಕಣ್ಣಮುಂದಿರುತ್ತಿರಲಿಲ್ಲ. ಹಾಗೆ ನೋಡಿದರೆ ದೇಶದಲ್ಲಿನ ಕೋಟ್ಯಾಧಿಪತಿ ಉದ್ಯಮಿಗಳು, ಎಲ್ಲ ಪಕ್ಷಗಳು, ಪ್ರತಿಯೊಬ್ಬ ರಾಜಕಾರಣಿ, ಏರ್‌ಕಂಡಿಷನ್ ಕೋಣೆಯಲ್ಲಿ ಕುಳಿತು ಭಾರತ ಪ್ರಕಾಶಿಸುತ್ತಿದೆ ಎಂದು ಬೊಬ್ಬಿಡುವ ಕಾರ್ಪೊರೇಟ್‌ಗಳು, ನಗರಗಳಲ್ಲಿ ಕುಳಿತು ಝಗಮಗಿಸುವ ಬದುಕಿನೊಂದಿಗೆ ಥಳಥಳಿಸುತ್ತಿರುವ ನಾವು, ಈ ಸಮಾಜ, ವ್ಯವಸ್ಥೆ ಎಲ್ಲರೂ ಅನ್ನದಾತನ ಆಕ್ರಂದನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ನೇರ ಹೊಣೆ. ಇದು ವಾಸ್ತವ ಮತ್ತು ಎಲ್ಲರೂ ಒಪ್ಪಲೇಬೇಕಾದ ಸತ್ಯ.
ಗ್ರಾಮೀಣ ಭಾರತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರಿಂದಲೇ ಇಂದು ಎಲ್ಲಾ ಕರಾಳ ವಿಪರ್ಯಾಸಗಳಿಗೂ ನಾವು ಸಾಕ್ಷಿಯಾಗುತ್ತಿದ್ದೇವೆ. ಗ್ರಾಮೀಣ ಭಾರತೀಯರನ್ನು ನಾವು ಎಲ್ಲಿರವರೆಗೆ ಕೆಟ್ಟದಾಗಿ ಕಾಣುತ್ತೇವೆ ಎಂದರೆ ನಮ್ಮ ಮನೆ ನಾಯಿಗೂ, ಬಡ ನಿರ್ಗತಿಕನಿಗೂ ವ್ಯತ್ಯಾಸವೇ ಇರುವುದಿಲ್ಲ. ನಮ್ಮ ನಡೆ, ವರ್ತನೆಗಳೇ ನಗರ ಮತ್ತು ಗ್ರಾಮಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿರುವುದು. ಅದೆಲ್ಲಾ ಇರಲಿ, ಇನ್ನು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಮಾಡುತ್ತೇವೆ ಎಂಬ ಭಾವ ಇಂದಿನ ಯುವಜನಾಂಗದಲ್ಲಂತೂ ಖಂಡಿತಾ ಇಲ್ಲ. ಎಲ್ಲ ಹೆತ್ತವರೂ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದೇ ಬಯಸುತ್ತಾರೆ. ಅದಕ್ಕಾಗಿ ಲಕ್ಷಗಟ್ಟಲೆ ಹಣಸುರಿಯಲು ತಯಾರಾಗಿರುತ್ತಾರೆ. ಆದರೆ ಯಾರೊಬ್ಬನೂ ತನ್ನ ಮಗ ಯಶಸ್ವಿ ಕೃಷಿಕ ಆಗಬೇಕೆಂದು ಬಯಸುವುದೇ ಇಲ್ಲ. ಏಕೆಂದರೆ ಎಲ್ಲಿಯವರೆಗೆ ನಮ್ಮ ದೇಶದ ರೈತರೂ ಮುಖ್ಯವಾಹಿನಿಗೆ ಬರುವುದಿಲ್ಲವೋ, ಎಲ್ಲಿಯವೆರೆಗೆ ನಮ್ಮ ರೈತರನ್ನು ‘ನಮ್ಮವರೆಂದು’ ಸ್ವೀಕರಿಸುವುದಿಲ್ಲವೋ, ಎಲ್ಲಿಯವೆರೆಗೆ ನಗರ-ಗ್ರಾಮಗಳ ಅಂತರ ಕಡಿಮೆಯಾಗುವುದಿಲ್ಲವೋ, ಎಲ್ಲಿಯವರೆಗೆ ರೈತ ಆತ್ಮಹತ್ಯೆ ಕೊನೆಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಕೃಷಿ ಎಂದರೆ ಎಲ್ಲರಿಗೂ ಅಲರ್ಜಿಯಾಗಿಯೇ ಇರಲಿದೆ ಮತ್ತು ರೈತನ ಮಗ ರೈತನಾಗಿಯೇ ಇರುತ್ತಾನೆ. ನಮ್ಮ ‘ನ್ಯಾಯ’ವೂ ಇದೇ!!
Sunday, 6 September 2009
Subscribe to:
Post Comments (Atom)
1 comment:
ನಿಮ್ಮ ಲೇಖನದ ಒಳಸುಳಿಯಲ್ಲಿರುವ ನಗ್ನಸತ್ಯ ನನಗೆ ಅರ್ಥವಾಗುತ್ತದೆ. ಏಕೆ೦ದರೆ ನಾನು ಸಹ ಮೂಲತಃ ಕೃಷಿಕ. ಸರಕಾರಗಳ ಯೋಜನೆ grass root level ಗೆ ಮುಟ್ಟುತ್ತಿಲ್ಲ ಎ೦ಬುದು ಬೇಸರದ ವಿಷಯ.
Post a Comment