ನಿಜವಾದ ಭಯೋತ್ಪಾದಕರು ಯಾರು?
ಬಹುಶಃ ಕಳೆದ ರಾತ್ರಿ ಮುಂಬೈಯ ಬಹುತೇಕ ಮಂದಿಗೆ ಕಂಡೂ ಕೇಳರಿಯದ ಕರಾಳ ರಾತ್ರಿ. ಗುಜರಾತ್‌ನಿಂದ ಮೀನುಗಾರರ ದೋಣಿಯಲ್ಲಿ ಜಲಮಾರ್ಗದ ಮೂಲಕ ರಾಜಾರೋಷವಾಗಿ ಮುಂಬೈ ನಗರಿಗೆ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು, ಹಲವು ನಾಗರಿಕರನ್ನು ಹತ್ಯೆಗೈದದ್ದು ಮಾತ್ರವಲ್ಲ, ಇಡೀ ಮುಂಬೈ ನಗರವೇ ತತ್ತರಿಸುವಂತೆ ಮಾಡಿದ್ದಾರೆ.
ಮಾಲೇಗಾಂವ್ ಸ್ಫೋಟದ ಬಳಿಕ ಎರಡನೇ ಬಾರಿ ಉಗ್ರರು ಮುಂಬೈ ನಗರವನ್ನು ಗುರಿಯಾಗಿಸಿದ್ದಾರೆ. ಭಾರತದ ಪ್ರಮುಖ ವಾಣಿಜ್ಯ ನಗರಿ ಉಗ್ರರ ದಾಳದಲ್ಲಿ ಸಿಲುಕಿದೆ. ಎಟಿಎಸ್ ಪಡೆಯ ಮುಖ್ಯಸ್ಥ ಹಾಗೂ ಮಾಲೇಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಕರ್ಕರೆ ಅವರು ಉಗ್ರರೊಂದಿಗಿನ ಹೋರಾಟದಲ್ಲಿ ಬಲಿಯಾಗಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಸಲಾಸ್ಕರ್ ತಮ್ಮ
ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿಯಾಗಿದೆ. ಮತ್ತೊಬ್ಬ ಪೊಲೀಸ್ ಅಮಿತ್ ಕಾಮ್ಟೆ ಅವರೂ ಜೀವ ತೆತ್ತಾಗಿದೆ... ಒಟ್ಟು ಈಗಾಗಲೇ ೧೯ ಪೊಲೀಸರು ಉಗ್ರರೊಂದಿಗಿನ ಕಾಳಗದಲ್ಲಿ ಮೃತಪಟ್ಟಾಗಿದೆ ಎಂದು ವರದಿಯಾಗಿದೆ. ನೂರಾರು ಮಂದಿ ನಾಗರಿಕರು ದಾಳಿಗೆ ಸಿಲುಕಿ, ಹಲವಾರು ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.
ದೆಹಲಿಯಲ್ಲಿರುವ ನಾವು ಮುಂಜಾನೆ ಟಿವಿ ನೋಡುತ್ತಿದ್ದಾಗ ಮುಂಬೈ ಹೊತ್ತಿಉರಿಯುತ್ತಿರುವುದು ಸ್ಪಷ್ಟವಾಗಿತ್ತು. ಉಗ್ರರು ನೂರಾರು ಮಂದಿ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ತಾಜ್ ಹೋಟೆಲ್ ಹೊರಗೆ ಕಾಣುತ್ತಿದ್ದ ದೃಶ್ಯಗಳೆಲ್ಲಾ ಹೃದಯಕಲಕುವಂತಿದ್ದವು. ಪೊಲೀಸರ ವಾಹನವನ್ನೇ ಹೈಜಾಕ್ ಮಾಡಿದ ಉಗ್ರರು ಕಾರಿನೊಳಗಿಂದಲೇ ಗುಂಡಿನ ದಾಳಿ ನಡೆಸುತ್ತಿದ್ದ ದೃಶ್ಯ ಆಧುನಿಕ ಜಗತ್ತಿನ ರಕ್ಕಸರು ರುದ್ರ ನರ್ತನ ನಡೆಸುತ್ತಿರುವಂತಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಯೋಚಿಸದೆ ಪೊಲೀಸರು ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸುತ್ತಿದ್ದರು.
ಆದರೆ ಇಷ್ಟೆಲ್ಲಾ ಆಗುತ್ತಿರುವಾಗ ನಮ್ಮ ಮನೆಯ ಹೊರಗಿನಿಂದ ಜಯಘೋಷಗಳ ಸದ್ದು ಕೇಳಿಬರುತ್ತಿತು. ದೆಹಲಿಯಲ್ಲಿ ಇನ್ನೊಂದು ದಿನದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಯಾವುದೋ ಪಕ್ಷದ ಕಾರ್ಯಕರ್ತರು ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗೇ ಅಟ್ಟಹಾಸದ ಮೂಲಕವೇ ನಡೆಸುತ್ತಿದ್ದರು. ಅದೇ ಹೊತ್ತಿಗೆ ನನ್ನ ಮೊಬೈಲ್ ಒಂದು ಮೆಸೇಜ್ ಕೂಡ ಬಂತು. ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನೆಷ್ಟು ಹೆಣಗಳು ಉರುಳುತ್ತವೋ ಎಂಬುದನ್ನು ನಾವು ಕಾದುನೋಡಬೇಕಷ್ಟೆ ಎಂದೆಲ್ಲಾ ಮೆಸೇಜ್ ತುಂಬಿಹೋಗಿತ್ತು. ಸರಿ ಆ ಮೆಸೇಜ್ ಒತ್ತಟ್ಟಿಗಿರಲಿ, ಇದುವೆರೆಗೆ ಮಾಧ್ಯಮಗಳಲ್ಲಿ ನೋಡಿದ್ದ ಕೆಸರೆರೆಚಾಟಗಳನ್ನು ಎಸ್‌ಎಂಎಸ್‌ನಲ್ಲೂ ಓದುವ ದುರ್ಗತಿ ಬಂತೇ ಎಂದು ಆಶ್ಚರ್ಯವಾಯಿತು. ಹೌದು ಇನ್ನೆರಡು ದಿನಗಳಲ್ಲಿ ಚುನಾವಣೆ ಇರುವಾಗ ಮುಂಬೈನಲ್ಲಿ ಉಗ್ರರ ದಾಳಿಯಿಂದ ನಡುಗಿ ಹೋಗಿದ್ದರೆ, ಪ್ರತಿ ಪಕ್ಷಗಳಿಗೆ ಇದಕ್ಕಿಂತ ಸಂತೋಷದ ಸುದ್ದಿ ಬೇರೇನಿದೆ ತಾನೆ? ಚುನವಣಾ ಪ್ರಚಾರದಾದ್ಯಂತ ಇದು ಆಡಳಿತ ಸರ್ಕಾರದ ವೈಫಲ್ಯ ಎಂದು ಅದನ್ನೇ ಎತ್ತಿಹಿಡಿಯುತ್ತಾ, ಇಂತಹ ಬರ್ಬರ ಸ್ಥಿತಿಯಲ್ಲೂ ಅದನ್ನೇ ಚುನಾವಣಾ ಅಸ್ತ್ರವನ್ನಾಗಿ, ಜನಸಾಮಾನ್ಯರನ್ನು ಓಲೈಸುವ ಈ ಕೀಳು ಮಟ್ಟದ ರಾಜಕೀಯ ಫುಡಾರಿಗಳು ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ, ನಮ್ಮ ದೇಶದ ಅಮಾಯಕರು ಇನ್ನೆಷ್ಟು ಜನರು ನೆತ್ತರ ಹೊಳೆಯನ್ನು ಹರಿಸಬೇಕಿದೆ ಎಂಬೆಲ್ಲಾ ಕರಾಳ ಪ್ರಶ್ನೆಗಳು ಮನದಲ್ಲಿ ಮೂಡದೇ ಇರಲಿಲ್ಲ. ಮೊನ್ನೆತಾನೆ ಮಾಲೇಗಾಂವ್ ಸ್ಫೋಟ ಸಂಭವಿಸಿ ಇಡೀ ಮಹಾರಾಷ್ಟ್ರವೇ ನಲುಗಿಹೋಗಿತ್ತು. ಉಗ್ರ ನಿಗ್ರಹ ದಳ ನಡೆಸಿದ ತನಿಖೆ ಮೂಲಕ ಕೆಲವು ಸ್ವಯಂಘೋಷಿತ ಸ್ವಾಮೀಜಿಗಳು ಈ ಉಗ್ರಕೃತ್ಯವನ್ನು ನಡೆಸಿದ್ದು ಎಂದು ತಿಳಿದು ಬಂದ ಕೂಡಲೇ ಕಾಂಗ್ರೆಸ್‌ನ ಹಲವು ಮಂದಿಯಲ್ಲಿ ಹರ್ಷದ ಹೊನಲು ಮೂಡಿತ್ತು. ಇನ್ನೇನು ಸಾರ್ವತ್ರಿಕ ಚುನಾವಣೆ ದೂರದಲ್ಲೇನಿಲ್ಲ. ಹಾಗೇ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿದ್ದ ಕಾರಣ ಕಾಂಗ್ರೆಸ್ ಮಂದಿಗೆ ‘ಹಿಂದೂ ಭಯೋತ್ಪಾದನೆ’ಯೇ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ಇಷ್ಟು ದಿನಗಳ ಕಾಲ ‘ಇಸ್ಲಾ ಭಯೋತ್ಪಾದನೆ’ ಎಂದು ಬೊಬ್ಬಿಡುತ್ತಿದ್ದ ಮಂದಿಯ ವಿರುದ್ಧ ಧ್ವನಿಯೆತ್ತಲು ಕಾಂಗ್ರೆಸ್ ಇದು ದೊಡ್ಡ ಉಡುಗೊರೆಯಾಗೇ ದೊರೆಯಿತು.
ಒಟ್ಟಾರೆ ಭಯೋತ್ಪಾದಕರೆಂಬ ಆಧುನಿಕ ಯುಗದ ರಾಕ್ಷಸರ ನಡುವೆ, ಜಡ ವ್ಯವಸ್ಥೆಗೆ ಅಂಟಿಕೊಂಡು ನಾಚೆಕೆಗೇಡಿನ ರಾಜಕೀಯದ ನಡುವೆ, ಬರೀ ಸ್ವಾರ್ಥ, ಅಧಿಕಾರ ದಾಹದಿಂದ ಯಾರ ಬೆನ್ನಿಗೂ ಚೂರಿ ಹಾಕಲು ತಯಾರಾಗಿರುವ, ಜನಸಾಮಾನ್ಯ ಧ್ವನಿಯಗಿರುತ್ತೇವೆ ಎಂದು ಪ್ರಮಾಣ ವಚನ ಮಾಡಿ, ಜನಸಾಮಾನ್ಯರಿಗೆ ಧ್ವನಿ ಎತ್ತದಂತೇ ಮಾಡುವ, ಐದು ವರ್ಷದುದ್ದಕ್ಕೂ ತಮ್ಮ ಜೇಬನ್ನು ಬೇಕಾದಷ್ಟು ತುಂಬಿಸಿ, ದೇಶದ ನಿರ್ಗತಿಕ ಮಂದಿಯ ಜೀವದೊಂದಿಗೆ ಪ್ರತಿದಿನ, ಪ್ರತಿಕ್ಷಣವೂ ಆಟವಾಡುವ ಜಗತ್ತಿನ ಅತಿಕೆಟ್ಟ, ಅತ್ಯಂತ ಹೇಸಿಗೆಯ ಜೀವನ ನಡೆಸುತ್ತಿರುವ ಮಹಾನ್ ರಾಜಕಾರಣಿಗಳ ನಡುವೆ ಇಂದು ನಾವು ಬದುಕುತ್ತಿದ್ದೇವೆ.
ಕಳೆದ ಆರೇಳು ತಿಂಗಳಿನಿಂದ ಇಡೀ ರಾಷ್ಟ್ರವೇ ಭಯೋತ್ಪಾಕರ ನಿರಂತರ ದಾಳಿಯಿಂದ ಕಂಗೆಟ್ಟುಹೋಗಿದ್ದರೂ, ಯಾವೊಬ್ಬ ಜನಪ್ರತಿನಿಧಿ ಕೂಡ ಜನಸಾಮಾನ್ಯನ ಬದುಕಿನ ಬಗ್ಗೆ ಯೋಚಿಸಿಲ್ಲ. ದಾಳಿಗಳಲ್ಲಿ ಗಾಯಗೊಂಡ, ಮೃತಪಟ್ಟ ಮಂದಿಯ ಕುಟುಂಬಕ್ಕೆ ಸಾವಿರಗಟ್ಟಲೆ ಸಹಾಯಧನ ಘೋಷಿಸಿ, ಅದನ್ನೂ ನೀಡದೇ, ಈಗ ಮತ್ತೊಂದು ಉದ್ರ ದಾಳಿ ನಡೆದಾಗ ಮತ್ತೆ ಅದೇ ರಾಗ ಎಳೆಯುತ್ತಿದ್ದಾರೆ. ಅತ್ತ ಮುಂಬೈನಲ್ಲಿ ಅಮಾಯಕ ಮಂದಿಯ ಮಾರಣಹೋಮವಾಗುತ್ತಿದ್ದರೆ ಇತ್ತ ರಾಜಕೀಯ ಫುಡಾರಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸದ್ಯ ಬಿಜೆಪಿ, ಕಾಂಗ್ರೆಸ್ ಇಬ್ಬರಿಗೂ ಭಯೋತ್ಪಾದನೆಯೇ ಚುನಾವಣೆಯ ಪ್ರಮುಖ ಅಸ್ತ್ರ. ಆದರೆ ಇವರ ‘ಬ್ಲೇಮ್ ಗೇಮ್’ನ ಮಧ್ಯೆ ನರಳುತ್ತಿರುವವರು ಏನೂ ಅರಿಯದ ಅಮಾಯಕರು. ಈಗ ಹೇಳಿ ನಿಜವಾದ ಭಯೋತ್ಪಾದಕರು ಯಾರೆಂಬುದನ್ನು?
Thursday, 27 November 2008
Subscribe to:
Post Comments (Atom)
2 comments:
ದೇಶದ ಜನ ಅದರಲ್ಲೂ ಮುಖ್ಯವಾಗಿ ಮುಂಬಯಿ ಜನ ರಾಜಕಾರಣಿಗಳನ್ನು ನಂಬುವುದನ್ನು ಬಿಟ್ಟಿದ್ದಾರೆ. ಮೂರು ದಿನ ತಾಜ್ ಹೋಟೆಲ್ ಎದುರುಗಡೆ ಇದ್ದ ಕ್ಯಾಮಾರಗಳಲ್ಲಿ ರಾಜಕಾರಣಿಗಳು ನುಸುಳದಿದ್ದುದು ಆಶ್ಚರ್ಯ!!
ಒಲವಿನಿಂದ
ಬಾನಾಡಿ
nice pa u r intel
Post a Comment