Wednesday, 17 September 2008

ಓಸಿಯನ್ 'ಟಾಕೀಸ್'ನಲ್ಲಿ 'ಗುಲಾಬಿ'ಯ ಕಂಪು


ಅದು ನವದೆಹಲಿಯ ಸಿರಿಫೋರ್ಟ್ ಸಾಂಸ್ಕೃತಿಕ ಸಮುಚ್ಛಯ. ಅಲ್ಲಿ ಜಪಾನ್, ಕೊರಿಯಾ, ಇಸ್ರೇಲ್, ಪಾಕಿಸ್ತಾನ, ಶ್ರೀಲಂಕಾ, ಅಮೆರಿಕ, ಇಂಡೋನೇಷಿಯಾ, ಮೊರೊಕ್ಕೊ, ಈಜಿಪ್ಟ್, ಹಾಂಗ್‌ಕಾಂಗ್, ಸಿರಿಯಾ, ಫ್ರಾನ್ಸ್, ಭಾರತ ಸೇರಿದಂತೆ ಹತ್ತಾರು ದೇಶಗಳ 200ಕ್ಕಿಂತಲೂ ಅಧಿಕ ಚಲನಚಿತ್ರಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಕಲಾತ್ಮಕತೆಯಲ್ಲಿ ಅವೆಲ್ಲಾ ಒಂದಕ್ಕಿಂತ ಒಂದು ಹೆಚ್ಚೇ ಎನ್ನಿ. ಜುಲೈ 10ರಿಂದ ಆರಂಭವಾಗಿದ್ದ ಸಿನಿಮಾ ಉತ್ಸವದಲ್ಲಿ ಬರೀ ಚಿತ್ರಗಳು ಮಾತ್ರವಲ್ಲ ನಾನಾ ದೇಶಗಳ, ಬಗೆಬಗೆಯ ಭಾಷೆಯ ಜನರು ನೆರೆದಿದ್ದರು. ಇಂಗ್ಲಿಷ್ ಬಾರದ ಅದೆಷ್ಟೋ ದೇಶದ ಜನರೂ ಇದ್ದುದ್ದರಿಂದ 'ಸಾಮಾನ್ಯ ಸಂವಹನ ಭಾಷೆ'ಯಾಗಲು ಇಂಗ್ಲಿಷ್‌ಗೆ ಕೂಡಾ ಅಲ್ಲಿ ಕಷ್ಟವೇ ಆಗಿತ್ತು. 'ಓಸಿಯನ್ಸ್ ಸಿನಿಫ್ಯಾನ್ ಚಲಚಿತ್ರೋತ್ಸವ' ಅಂದರೆ ಹಾಗೆಯೇ. ಅಲ್ಲಿ ಭಾಷೆಯ ಗಡಿ ಇಲ್ಲ; ಇದ್ದಿದ್ದರೆ ಕನ್ನಡ ಈ ಚಿತ್ರೋತ್ಸವದಲ್ಲಿ ಮೆರೆಯುವ ಸಾಧ್ಯತೆಯಿತ್ತೇ?

ಈ ಬಾರಿಯ 10ನೇ 'ಓಸಿಯನ್ (ಅರಬ್ ಹಾಗೂ ಏಷ್ಯಾ) ಚಲನಚಿತ್ರೋತ್ಸವ' ಕೂಡಾ ವಿಶೇಷತೆ ಮೆರೆಯದೆ ಇರಲಿಲ್ಲ. ಆದರೆ ಕನ್ನಡಿಗರಾದ ನಮಗೆ ಎಲ್ಲಕ್ಕಿಂತ ವಿಶೇಷವಾಗಿ ಕಂಡದ್ದು, ಕನ್ನಡದ ಇಬ್ಬರು ಪ್ರತಿಭಾವಂತರು ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದದ್ದು.

'ಗಿರೀಶ್ ಕಾಸರವಳ್ಳಿ' ಅವರ 'ಗುಲಾಬಿ ಟಾಕೀಸ್' ಭಾರತೀಯ ಚಿತ್ರಗಳ ವಿಭಾಗದಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿಗೆ ಪಾತ್ರವಾಯಿತು. ಕಾಸರವಳ್ಳಿ ಚಿತ್ರ ಅಂದಮೇಲೆ ಪ್ರಶಸ್ತಿ ಸಿಗದೆ ಇರುವುದು ಹೇಗೆ ಹೇಳಿ? ಈ ಮೊದಲೇ ಅವರ ಹಿಂದಿನ ಕೆಲವು ಚಿತ್ರಗಳಿಗೆ ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರಕಿದ್ದವು. ಈಗ 'ಗುಲಾಬಿ ಟಾಕೀಸ್'ನ ಸರದಿ. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದವರು ತಮ್ಮ ಅದ್ಭುತ ನಟನಾ ಶಕ್ತಿಯ ಮೂಲಕ ಕನ್ನಡಿಗರ ಮನೆ-ಮನಗಳನ್ನು ಗೆದ್ದಿರುವ ಹಿರಿಯ ನಟಿ ಉಮಾಶ್ರೀ.

ಸಿರಿಫೋರ್ಟ್‌ನಲ್ಲಿ 'ಗುಲಾಬಿ ಟಾಕೀಸ್' ಪ್ರದರ್ಶನಗೊಂಡಾಗ ಚಿತ್ರ ವೀಕ್ಷಿಸಲು ಬೆರಳೆಣಿಕೆಯಷ್ಟು ಕನ್ನಡಿಗರು (ಇತರ ಭಾಷಿಗರನ್ನು ಹೊರತುಪಡಿಸಿ) ಕೂಡಾ ಇರಲಿಲ್ಲ. ಆದರೆ ಕಾಸರವಳ್ಳಿ ಅವರು ತೆರೆಯ ಮೇಲೆ ಮೂಡಿಸಿದ ದೃಶ್ಯಕಾವ್ಯ ಆಸ್ವಾದಿಸಲು ಇತರ ಭಾಷಿಕರಿಗೆ ಯಾವುದೇ ಅಡ್ಡಿಯಾಗಲಿಲ್ಲ.

11 ದಿನಗಳ ಕಾಲ ನವದೆಹಲಿಯ ಸಿರಿಫೋರ್ಟ್‌ನಲ್ಲಿ ನಡೆದ ಚಿತ್ರೋತ್ಸವಕ್ಕೆ ತೆರೆ ಎಳೆಯುವ ದಿನದ ಆ ಸುಂದರ ಸಂಜೆಯಂದು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಪ್ರಶಸ್ತಿ ಪಡೆದ ಚಿತ್ರದ ನಿರ್ಮಾಪಕ ಬಸಂತ್ ಕುಮಾರ್ ಪಾಟಿಲ್ ಸಂತಸ ಹಂಚಿಕೊಂಡರು. "ಚಿತ್ರಕ್ಕೆ ಪ್ರಶಸ್ತಿ ದೊರಕಿದ್ದು ನಿಜವಾಗಿಯೂ ಖುಷಿ ತಂದಿದೆ. ನಮ್ಮೆಲ್ಲರ ಪರಿಶ್ರಮಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರು ಚಿತ್ರ ಮೆಚ್ಚಿದರು. ಪ್ರಶಸ್ತಿಗಿಂತ ಜನರ ಪ್ರಶಂಸೆಗಳು ನನಗೆ ಸಂತಸ ನೀಡಿದೆ" ಎಂದು ನುಡಿದರು.

ಚಿತ್ರದ ತಂತ್ರಜ್ಞರಾದಿಯಾಗಿ ಎಲ್ಲರೂ ಹೇಳುವಂತೆ, ಪ್ರಧಾನ ಭೂಮಿಕೆಯಲ್ಲಿರುವ ಉಮಾಶ್ರೀ ಅವರ ನಟನೆಯಂತೂ ಅತ್ಯದ್ಭುತ. ಕರಾವಳಿಯ ಮೀನುಗಾರ ಕುಟುಂಬದ ಮುಸ್ಲಿಂ ಮಹಿಳೆ ಗುಲಾಬಿ (ಗುಲ್‌ನಾಬಿ) ಪಾತ್ರದಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಅವರು ಮುಗ್ಧತೆ ಮತ್ತು ಗಾಂಭೀರ್ಯ ಮೇಳೈಸಿದ ಪಾತ್ರವನ್ನು ನಿರ್ವಹಿಸುವಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ. ಅವರ ಆ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ದೊರಕಿದೆ. ಕಾಸರವಳ್ಳಿ ಅವರ ಹಿಂದಿನ ಹಲವು ಚಿತ್ರಗಳಲ್ಲಿದ್ದಂತೆ ಇಲ್ಲಿ ಕೂಡ ಮಹಿಳಾ ಪ್ರಾತಿನಿಧ್ಯವೇ ಎದ್ದು ಕಾಣುತ್ತದೆ. ಎಂತಹ ಸಂಕಷ್ಟದ ಸಂದರ್ಭವನ್ನೂ ನಿಭಾಯಿಸುವ ತಾಕತ್ತು ಮಹಿಳೆಗೆ ಕರಗತ ಎಂಬುದನ್ನು 'ಗುಲಾಬಿ' ಪಾತ್ರದ ಮೂಲಕ ನಿರೂಪಿಸಿದ್ದಾರೆ. ಸಂಪೂರ್ಣ ಸಿನಿಮಾ 'ಕುಂದಗನ್ನಡ'ದಲ್ಲಿದ್ದರೂ, ಉಮಾಶ್ರೀ ಸೇರಿದಂತೆ ಇತರ ನಟರ ಸಂಭಾಷಣೆ ನವಿರಾಗಿ ಮೂಡಿಬಂದಿದೆ. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, "ಇಂದು ನನಗೆ ಈ ಪ್ರಶಸ್ತಿ ಬಂದಿದೆ ಎಂದರೆ ಅದಕ್ಕೆ ನಿರ್ದೇಶಕರೇ ಕಾರಣ. ಇಡೀ ಕರ್ನಾಟಕದ ಜನತೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ" ಎಂದಾಗ ಅವರ ಮೊಗದಲ್ಲಿ ಸಂತೃಪ್ತಿಯ ಕಳೆ ಎದ್ದು ಕಾಣುತ್ತಿತ್ತು.

ಗುಲಾಬಿ ಪಾತ್ರದ ಕುರಿತು ಮಾತನಾಡಿದ ಕಾಸರವಳ್ಳಿ ಅವರು, "ಗುಲಾಬಿಯ ಒಂಟಿತನ, ಪ್ರೇಮ-ಪ್ರೀತಿಯ ಹಪಹಪಿಯನ್ನು ಇಲ್ಲಿ ಬಿಂಬಿಸಲಾಗಿದೆ. ಒಂದು ಯಂತ್ರದ (ಟಿವಿ) ಮೂಲಕ ಆಕೆ ಇಡೀ ಸಮುದಾಯವನ್ನು ಆಕರ್ಷಿಸುತ್ತಾಳೆ. ಹೀಗೆ ಆಕೆ ತನ್ನ ಗಂಡನ ಪ್ರೀತಿ, ಊರಿನ ಪ್ರೀತಿ, ಸಮುದಾಯದ ಪ್ರೀತಿಗೂ ಪಾತ್ರಳಾಗುತ್ತಾಳೆ. ಆದರೆ ಅದೇ ಯಂತ್ರ ಸಮಾಜ ವಿಭಜನೆಗೂ ಇಲ್ಲಿ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ನಾನು 'ಇಮೇಜ್ ಮೇಕಿಂಗ್' ಪ್ರಕ್ರಿಯೆಯ ರಾಜಕೀಯತೆಯನ್ನು ಜನರಿಗೆ ತೋರಿಸುವ ಯತ್ನ ಮಾಡಿದ್ದೇನೆ" ಎಂದು ಹೇಳುತ್ತಾರೆ.

ಕೇವಲ ಗುಲಾಬಿಯ ನೋವು-ನಲಿವುಗಳು ಮಾತ್ರವಲ್ಲ, ಹಳ್ಳಿಯ ಜನರ ಹಾಗೂ ಅವರ ಕೌಟುಂಬಿಕ ಬದುಕಿನ ಚಿತ್ರಣವನ್ನು ಕಾಸರವಳ್ಳಿ ಅವರು ನೈಜತೆಯಿಂದ ಚಿತ್ರಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತ ಪುರುಷರಿಗೆ ಕೌಟುಂಬಿಕ ಜೀವನ ನಿಭಾಯಿಸಲಾಗದೆ ಸಂಕಷ್ಟ ಎದುರಾಗುವುದು, ಪತ್ನಿ ಹಾಗೂ ಮಕ್ಕಳು ಬಡತನದ ಬೇಗೆಯಲ್ಲಿ ಸಿಲುಕಿ ಒದ್ದಾಡುವುದು, ಹಾಗೇ ಆ ಸಂದರ್ಭದಲ್ಲಿ ವಾಸಣ್ಣ ಅಥವಾ ಸುಲೈಮಾನ್ ಪರವಾಗಿ ದುಡಿಯುವುದೋ ಎಂಬ ತುಮುಲಗಳು ಗಂಡಂದಿರ ಮನದಲ್ಲಿ ಸೃಷ್ಟಿಯಾಗುವಂಥ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಕಾಸರವಳ್ಳಿ ಯಶಸ್ವಿಯಾಗಿದ್ದಾರೆ.

ಚಿತ್ರದುದ್ದಕ್ಕೂ ಜಾಗತೀಕರಣದ ಪರಿಣಾಮಗಳು ಸೂಚ್ಯವಾಗಿ ಒಡಮೂಡಿದೆ. ಇದರ ಜೊತೆಗೆ ದುಬೈನಲ್ಲಿ ನೆಲೆಸಿದ್ದು, ಹಳ್ಳಿಯಲ್ಲಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದ ಸುಲೈಮಾನ್ ಹಾಗೂ ಅದೇ ಹಳ್ಳಿಯಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ನಿರತನಾಗಿದ್ದ ವಾಸಣ್ಣ ಇವರಿಬ್ಬರಿಂದಲೂ ಹಳ್ಳಿ ಜನರು ಶೋಷಣೆಗೊಳಗಾಗುವುದನ್ನು ವಿವಿಧ ಸನ್ನಿವೇಶಗಳಲ್ಲಿ ತೆರೆದಿಡಲಾಗಿದೆ.

ತಮ್ಮ ಪರಿಧಿಯೊಳಗೆ ಬದುಕನ್ನು ಕಂಡುಕೊಳ್ಳಲಾರದ ಮಾನವನ ಅನಿಶ್ಚಿತತೆಯನ್ನು ಬಿಂಬಿಸುವುದರ ಜೊತೆಗೆ ಹಳ್ಳಿಯಲ್ಲಿನ ಅತೃಪ್ತಿ ಮತೀಯ ಸಂಘರ್ಷಕ್ಕೆ ಕಾರಣವಾಗುವ ಬಗೆಯನ್ನು ಚಿತ್ರದಲ್ಲಿ ಕಾಣಬಹುದು. "ಒಂದು ಸಂಕೀರ್ಣವಾದ ಚಿತ್ರಕಥೆ ಬರೆದು, ಸಮಾಜದ ಎಲ್ಲಾ ಮುಖಗಳನ್ನು ಅನಾವರಣಗೊಳಿಸಿದ್ದೇನೆ" ಎನ್ನುವ ಕಾಸರವಳ್ಳಿ, "ಇಲ್ಲಿ ಹಿಂದೂಗಳೆಲ್ಲರೂ ಕೆಟ್ಟವರು ಅಥವಾ ಒಳ್ಳೆಯವರು ಹಾಗೂ ಮುಸ್ಲಿಮರೆಲ್ಲಾ ಕೆಟ್ಟವರು ಅಥವಾ ಒಳ್ಳೆಯವರು ಎಂದು ಚಿತ್ರಿಸಲಾಗಿಲ್ಲ. ಗುಲಾಬಿಯನ್ನು ಊರಿನಿಂದ ಹೊರ ಅಟ್ಟಿದ್ದು ಆರ್ಥಿಕ ಕಾರಣದಿಂದಾಗಿಯೇ ವಿನಾ ಆಕೆ ಮುಸ್ಲಿಂ ಎಂದಲ್ಲ. ಆಕೆಯ ಗಂಡನೂ ಹಲವು ಅನ್ಯಾಯಗಳನ್ನು ಮಾಡಿದ್ದಾನೆ. ಆಕೆಯನ್ನು ಓಡಿಸುವ ಹಿಂದೆ ಹಳ್ಳಿಯ ಆರ್ಥಿಕತೆಯ ಕಾರಣವೂ ಇದೆ. ಮತ್ತೊಂದು ವಿಚಾರ ಏನೆಂದರೆ ನೋಡುಗರು ಮುಸ್ಲಿಮರಿಂದಲೇ ಇಂದು ಜಗತ್ತಿನಲ್ಲಿ ಎಲ್ಲಾ ಅನ್ಯಾಯಗಳು ನಡೆಯುತ್ತಿವೆ ಎಂದು ಯೋಚಿಸಿದರೆ ಅವರಿಗೆ ಈ ಸಿನಿಮಾವೇ ಒಂದು ದೊಡ್ಡ ಅಪರಾಧವಾಗಿ ಕಾಣಬಹುದು' ಎಂದು ವಿವರಣೆ ನೀಡುತ್ತಾರೆ.

ಒಟ್ಟಾರೆ ಕನ್ನಡ ಸಿನಿಮಾವೊಂದು ಇಂದು ಮತ್ತೊಮ್ಮೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ್ದಾರೆ ಗಿರೀಶ್ ಕಾಸರವಳ್ಳಿ. ಕಾಸರವಳ್ಳಿ ಅವರ ಚಿತ್ರಕ್ಕೆ ಅಂತರ್ ರಾಷ್ಟ್ರೀಯ ಪ್ರಶಸ್ತಿ ಲಭಿಸುತ್ತಿರುವುದು ಇದು ಮೊದಲನೇ ಬಾರಿ ಅಲ್ಲದಿದ್ದರೂ, ಉಮಾಶ್ರೀ ಅವರ ಪರಿಶ್ರಮಕ್ಕೆ ತಕ್ಕ ಫಲವೆಂಬಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರೆತಿದ್ದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅಂದಹಾಗೆ 'ಓಸಿಯನ್ಸ್ ಸಿನಿಫ್ಯಾನ್' ಚಲಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ತೀರ್ಪುಗಾರರು ಹಾಗೂ ಸಿನಿಮಾ ಪ್ರಿಯರ ಮನಮೆಚ್ಚಿದ 'ಗುಲಾಬಿ ಟಾಕೀಸ್' ಕಲಾತ್ಮಕ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಬಾಚಿಕೊಂಡಿದ್ದರೂ ಚಿತ್ರ ವೀಕ್ಷಿಸುವಾಗ ಇದು ಯಾವುದೇ ಕಮರ್ಷಿಯಲ್ ಚಿತ್ರಕ್ಕೆ ಕಡಿಮೆಯಿಲ್ಲದಂತೆ ತೋರುವುದು ಮಾತ್ರ ನಿಜ.

------------------------------------------------------------------------------------------------------------------------

ಕಾಸರವಳ್ಳಿ ಅವರು ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ...

ಈ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರಾ?

ಸಿನಿಮಾ ಮಾಡಿದಾಗ ಅದು ಚೆನ್ನಾಗಿದೆಯೋ ಅಥವಾ ಕೆಟ್ಟದಾಗಿದೆಯೋ ನನಗೆ ಗೊತ್ತಾಗುವುದಿಲ್ಲ. ಚಿತ್ರ ವೀಕ್ಷಿಸಿದ ಬಳಿಕ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೂ, ಇನ್ನು ಕೆಲವರು ಅತ್ಯದ್ಭುತವಾಗಿದೆ ಎಂದು ಬೆನ್ನು ತಟ್ಟಿದರು. ಪ್ರಕಾಶ್ ಬೆಳವಾಡಿ, ಜಿ.ಎಸ್. ಭಾಸ್ಕರ್ ಮತ್ತು ಪಿ. ಶೇಷಾದ್ರಿ ಅವರು ಸೇರಿದಂತೆ ಕೆಲವರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಆ ನಂತರ ಚಲನಚಿತ್ರೋತ್ಸವಗಳಿಗೂ ನಾನು ಈ ಚಿತ್ರವನ್ನು ಕಳುಹಿಸಿದೆ. ಖ್ಯಾತ ವಿಮರ್ಶಕರಾದ ವಿದ್ಯಾರ್ಥಿ ಚಟರ್ಜಿ, ಪ್ರಸನ್ನ ರಾಮಸ್ವಾಮಿ ಅವರು ಹಲವು ವರ್ಷಗಳ ನಂತರ ಅತ್ಯದ್ಭುತ ಚಿತ್ರ ನೀಡಿದ್ದೀರಿ ಎಂದು ಶ್ಲಾಘಿಸಿದರು. ಮೊದಲ ಸ್ಕ್ರೀನಿಂಗ್ ನೋಡಿದ ನಂತರ ಕೆಲವು ಪ್ರೇಕ್ಷಕರಿಂದ ಇವತ್ತಿನ ಸಂದರ್ಭಕ್ಕೆ ಚಿತ್ರ ಯೋಗ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಅಂದೇ ಉಮಾಶ್ರೀ ಅವರಿಗೆ ಪ್ರಶಸ್ತಿ ಬರಬಹುದೇನೋ ಅಂದುಕೊಂಡೆ.

ಕರಾವಳಿ ಪ್ರದೇಶದಲ್ಲಿ ಚಿತ್ರ ಮಾಡುವಾಗ ಎಂತಹ ಸವಾಲಿತ್ತು?

ನಿಜ ಹೇಳಬೇಕೆಂದ್ರೆ ನಮಗೆ ಕರಾವಳಿ ಪ್ರದೇಶದ ಬಗ್ಗೆ ಹೆಚ್ಚಿನ ಪರಿಚಯ ಇರಲಿಲ್ಲ. ಇಂತಹ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಂಡು ಚಿತ್ರ ಮಾಡುವುದು ಸವಾಲೇ ಆಗಿತ್ತು.

'ಗುಲಾಬಿ' ಪಾತ್ರಕ್ಕೆ ಉಮಾಶ್ರೀ ಅವರ ಆಯ್ಕೆಗೆ ಕಾರಣ?

ನಮ್ಮಲ್ಲಿ ಕೆಲವರು ಉಮಾಶ್ರೀ ಅವರು ಕೇವಲ ಕಾಮಿಡಿ ಪಾತ್ರಕ್ಕೆ ಮಾತ್ರ ಯೋಗ್ಯರು ಎಂದು ಅವರ ಹಿನ್ನೆಲೆ ತಿಳಿಯದೆ ವಾದಿಸುತ್ತಾರೆ. ಒಳ್ಳೆ ಪಾತ್ರ ಮಾಡಿಕೊಂಡು ಬಂದಿದ್ದರೂ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿದ್ದರೆ ಅದು ನಿರ್ದೇಶಕನ ತಪ್ಪು. ನಾನು ಮೊದಲು ನೋಡುವುದೇನೆಂದರೆ ಭಾವನೆಯನ್ನು ಹೊರ ಚೆಲ್ಲಬಹುದಾದ ಮುಖಲಕ್ಷಣ ಹಾಗೂ ಬಾಡಿ ಲಾಂಗ್ವೇಜ್. ಜೊತೆಗೆ ರಂಗಭೂಮಿ ಹಿನ್ನೆಲೆ ಹಾಗೂ ಪಾತ್ರ ನಿಭಾಯಿಸುವ ಚಾಕಚಕ್ಯತೆ ಕೂಡ ಉಮಾಶ್ರೀ ಅವರಲ್ಲಿತ್ತು.

ಚಿತ್ರ ಸಂಪೂರ್ಣವಾಗಿ 'ಕುಂದಗನ್ನಡ' ಭಾಷೆಯಲ್ಲಿದೆ. ಕಲಾವಿದರಿಗೆ ಈ ಭಾಷೆ ಮೊದಲೇ ತಿಳಿದಿತ್ತೇ?

ಚಿತ್ರದಲ್ಲಿ ನಾಲ್ಕು ನಟರು ಬಿಟ್ಟರೆ ಉಳಿದವರು ಕುಂದಾಪುರದವರೇ. ಎಂ.ಡಿ. ಪಲ್ಲವಿ ಅವರು ನೇತ್ರುವಿನ ಪಾತ್ರದಲ್ಲಿದ್ದರೆ, ಕೆ.ಜಿ. ಕೃಷ್ಣಮೂರ್ತಿ ಅವರು ಗುಲಾಬಿ ಗಂಡನ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಕೆಲಸ ಸುಲಭವಾಗಲು ಭಂಡಾರ್ಕ್ಸರ್ ಕಾಲೇಜಿನ ಹುಡುಗಿಯೊಬ್ಬಳೂ ಸಹಾಯ ಮಾಡಿದಳು. ಸಂಭಾಷಣೆ ಯಾವ ರೀತಿ ಇರಬೇಕು ಎಂಬ ಬಗ್ಗೆ ಆಕೆ ನಟರಿಗೆ ಸತತವಾಗಿ ಹೇಳಿಕೊಡುತ್ತಿದ್ದಳು. ಇನ್ನು ಡಬ್ಬಿಂಗ್ ಸಮಯದಲ್ಲಿ ನಟ ರಘು ಪಾಂಡೇಶ್ವರ್ ಕೂಡ ಯಾವ ರೀತಿಯಲ್ಲಿ ಮಾತನಾಡಬೇಕೆಂದು ತಿಳಿಹೇಳುತ್ತಿದ್ದರು. ಇಲ್ಲಿ ಒಂದು ಮಾತ್ರ ಸ್ಪಷ್ಟ. ಭಾಷೆ ಬಗ್ಗೆ ಎಚ್ಚರ ಇದ್ದವರು ಯಾವುದೇ ಭಾಷೆಯನ್ನು ಕೂಡ ಬೇಗ ಕಲಿಯುತ್ತಾರೆ. ಎಚ್ಚರ ಇಲ್ಲದಿದ್ದರೆ ಕೊನೆಯವರಿಗೂ ಅದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಒಟ್ಟಾರೆ 'ಇಗೋ' ಬಿಟ್ಟು ನಿಜ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ.

'ಗುಲಾಬಿ ಟಾಕೀಸ್'ಗೆ ಪ್ರೇರಣೆ...?

2006ರ ಓಸಿಯನ್ ಚಲನಚಿತ್ರೋತ್ಸವದಲ್ಲಿ ನನ್ನ 'ನಾಯಿ ನೆರಳು' ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲಿ ನಾನು ಹೊರಗಿನ ಲಾಬಿಯಲ್ಲಿ ಕುಳಿತಿದ್ದೆ. ಹೀಗೆ ಯೋಚಿಸುತ್ತಿದ್ದಾಗ ಥಟ್ಟನೆ ಮೀನುಗಾರರ ಸಮಸ್ಯೆ ಬಗ್ಗೆ ಚಿತ್ರ ಮಾಡಬೇಕೆಂದು ಲೆಕ್ಕಹಾಕಿದೆ. 'ಇಮೇಜ್ ಮೇಕಿಂಗ್' ಹೇಗೆ ನಮ್ಮಲ್ಲಿ ಪೂರ್ವಸಿದ್ಧವಾದ ನಂಬಿಕೆ ಹಾಗೂ ಅನಿಸಿಕೆಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ತೋರಿಸುವ ಉದ್ದೇಶದಿಂದ 'ಗುಲಾಬಿ ಟಾಕೀಸ್'ನ್ನು ಮಾಡುವ ಕೆಲಸಕ್ಕೆ ಕೈಹಾಕಿದೆ.

ನಿಮ್ಮ ಹೆಚ್ಚಿನ ಎಲ್ಲಾ` ಚಿತ್ರಗಳಂತೆ ಇದೂ ಸ್ತ್ರೀ ಪ್ರಧಾನ ಚಿತ್ರ.... ಇದಕ್ಕೆ ನಿರ್ದಿಷ್ಟ ಕಾರಣವೇನಾದರು ಇದೆಯೇ?

ನಿರ್ದಿಷ್ಟ ಕಾರಣ ಅಂತ ಹೇಳುವುದು ಕಷ್ಟ. ಅವರ ತಾಳ್ಮೆಯ ಶಕ್ತಿ, ಸಮಸ್ಯೆ ನಿರ್ವಹಿಸುವ ರೀತಿ, ಸೋಲಬಾರದು ಅನ್ನೋ ಒತ್ತಾಸೆಯಿಂದ ಅವರು ಗೆಲ್ಲುತ್ತಾ ಸಾಗುವುದು ನನಗೆ ಇಷ್ಟವಾಗುತ್ತವೆ. ಗುಲಾಬಿಯೂ ಹಾಗೇ. ಊರಿನಿಂದ ಆಕೆಯನ್ನು ಹೊರದಬ್ಬಿದರೂ, 'ಎಲ್ಲಿಯ ತನಕ ಹೆಂಗಸರು ಬಸಿರಾಗುತ್ತಾರೋ ಅಲ್ಲಿಯತನಕ ನನ್ನ ಸೂಲಗಿತ್ತಿಯ ಕೆಲಸಕ್ಕೆ ದಕ್ಕೆ ಬಾರದು. ನಾನು ಹೆದರೋದಿಲ್ಲ, ಬೇರೆ ಕಡೆ ಹೋಗಿ ನನ್ನ ಕೆಲಸ ಮಾಡಿ ಬದುಕುತ್ತೇನೆ' ಎಂದು ಧೈರ್ಯದಿಂದ ನುಡಿಯುತ್ತಾಳೆ. ಈ ಕೆಚ್ಚು ನನ್ನ ಮನ ತಟ್ಟಿತು.


No comments: