ತನ್ನದೇ ಹೊಸ ಬದುಕನ್ನು ರೂಪಿಸಿಕೊಳ್ಳಲು ಹೊರಟ ಮಹಿಳೆಯೊಬ್ಬರನ್ನು ಸಮಾಜ, ರಾಜಕೀಯ, ಮಾಧ್ಯಮಗಳ ಹಸಿವು ನುಂಗಿ ಹಾಕಿದ ದಾರುಣ ಘಟನೆಯಿದು. ಸ್ವಲ್ಪ ಮಾನವೀಯತೆ, ವಿವೇಚನೆ ತೋರಿದ್ದಲ್ಲಿ ಆ ಜೀವ ಉಳಿದು ಬಿಡುತ್ತಿತ್ತು. ಆದರೆ, ಅದಕ್ಕೆ ಯಾರೂ ಅವಕಾಶ ಮಾಡಿಕೊಡಲಿಲ್ಲ. ಕೊನೆಗೆ ಹೊಸ ಬದುಕಿನ ಹೊಂಗನಸಿನ ನಡುವೆಯೇ ಆ ಜೀವ ನೇಣಿಗೆ ಶರಣಾಯಿತು.
ಕರ್ನಾಟಕದ ಉಡುಪಿಯಲ್ಲಿ ಪ್ರಾರಂಭವಾದ ಈ ಪ್ರಕರಣ ರಾಷ್ಟ್ರದ ರಾಜಧಾನಿ ದೆಹಲಿವರೆಗೂ ಬರಬಹುದು ಎಂದು ಯಾರಿಗೂ ಅನಿಸಿರಲಿಲ್ಲ. ಇದುವರೆಗೆ ಸುದ್ದಿಯಾಗದಿದ್ದ ದೆಹಲಿಯ ಯಾವುದೋ ಮೂಲೆಯಲ್ಲಿರುವ ದ್ವಾರಕಾದ ಶಮಾ ಅಪಾರ್ಟ್‌ಮೆಂಟ್ ಇಂದು ಕರ್ನಾಟಕದ ಬಹುತೇಕ ನಾಗರಿಕರಿಗೆ ಅಪರಿಚಿತವೇನಲ್ಲ. ಒಟ್ಟಾರೆ ರಾಜ್ಯದೆಲ್ಲೆಡೆ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಉಡುಪಿ ಶಾಸಕ, ಬಿಜೆಪಿಯ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಪ್ರಕರಣ ನವದೆಹಲಿಯಲ್ಲಿ ದುರಂತ ಅಂತ್ಯ ಕಾಣುವುದರೊಂದಿಗೆ ಸಾಕಷ್ಟು ಕುತೂಹಲ ಹಾಗೂ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.
ಈಗ ಪ್ರಕರಣದ ಕೇಂದ್ರಬಿಂದುವಾಗಿ ಹೊರಹೊಮ್ಮಿರುವ ಅತುಲ್ ರಾವ್, ಮೂಲತಃ ಶಾಸಕ ರಘುಪತಿ ಭಟ್‌ಗೆ ಪರಮಾಪ್ತನಾಗಿದ್ದ. ಆ ಹಿನ್ನೆಲೆಯಲ್ಲಿಯೇ ಅವರ ಪತ್ನಿಗೂ ಆತ ಆತ್ಮೀಯನಾಗಿದ್ದು. ಆತನೊಂದಿಗೆ ಸೇರಿ, ತನ್ನದೇ ಅಪಹರಣದ ನಾಟಕವಾಡಿ ಮನೆತೊರೆದು ಹೊರಟ ಪದ್ಮಪ್ರಿಯ ಉಡುಪಿಯಿಂದ ಗೋವಾಕ್ಕೆ ತೆರಳಿದ್ದು, ನಂತರ ಅಲ್ಲಿಂದ ದೆಹಲಿಗೆ ತಲುಪಿದ್ದು, ದ್ವಾರಕಾದ ಶಮಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದು, ಕೊನೆಗೆ ಜೂನ್ 15ರಂದು ಆತ್ಮಹತ್ಯೆಗೆ ಶರಣಾಗಿದ್ದು... ಇವೆಲ್ಲಾ ಈಗ ಇತಿಹಾಸ. ಆದರೆ ಆಕೆಯ ಆತ್ಮಹತ್ಯೆಯೊಂದಿಗೆ ಎಲ್ಲವೂ ಮುಗಿದು ಹೋಯಿತೆ? ಖಂಡಿತಾ ಇಲ್ಲ. ಈ ಪ್ರಕರಣದೊಳಗೆ ಹುದುಗಿರುವ ನಿಗೂಢಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕಷ್ಟು ಪ್ರಶ್ನೆಗಳು ಹುಟ್ಟುವುದಂತೂ ಖಚಿತ.
ಹಲವು ಗೊಂದಲಗಳ ನಡುವೆ ನವದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಜೂನ್ 16ರಂದು ಪದ್ಮಪ್ರಿಯ ದೇಹದ ಮರಣೋತ್ತರ ಪರೀಕ್ಷೆ ಆರಂಭವಾದ ನಂತರ ಅಲ್ಲಿಗೆ ಭೇಟಿ ನೀಡಿದ ಪತಿ ರಘುಪತಿ ಭಟ್ ಮಾಧ್ಯಮಗಳ ಮುಂದೆ ಏಕಾಏಕಿ ದಾಳಿ ಮಾಡಿದ್ದು ಅತುಲ್ ವಿರುದ್ಧ. ನನ್ನ ಪತ್ನಿಯನ್ನು ಬಲವಂತವಾಗಿ ದೆಹಲಿಗೆ ಕರೆತಂದುದೇ ಅತುಲ್. ಆಕೆಯನ್ನು ಮರುಳು ಮಾಡಿ ಈ ದುರಂತಕ್ಕೆ ಕಾರಣನಾದವನು ಅವನೇ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇಂದಿಗೂ ನಾನವಳ ಮೇಲೆ ಅಪಾರ ನಂಬಿಕೆ, ಪ್ರೀತಿ ಇರಿಸಿದ್ದೇನೆ. ಆಕೆ ಬೇರೆಯವರೊಂದಿಗೆ ಹೋಗುವಂತಹ ಮಹಿಳೆ ಅಲ್ಲ ಎಂಬುದಾಗಿ ಕಣ್ಣೀರಿಟ್ಟರು.
ಸರಿ, ತನ್ನ ಧರ್ಮಪತ್ನಿಯ ಮೇಲೆ ಭಟ್ ಇರಿಸಿರುವ ನಂಬಿಕೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬುದನ್ನು ಒಪ್ಪತಕ್ಕದ್ದೇ. ಆದರೆ ಉಡುಪಿಯಿಂದ ದೆಹಲಿಯವರೆಗೆ ಒಬ್ಬ ಮಹಿಳೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಬರಲು ಸಾಧ್ಯವೇ? ಅದೂ ಪ್ರಭಾವಿ ಕುಟುಂಬಕ್ಕೆ ಸೇರಿದ ಪದ್ಮಪ್ರಿಯರಂಥ ಮಹಿಳೆಯನ್ನು! ದೆಹಲಿಯ ದ್ವಾರಕದಲ್ಲಿರುವ ಶಮಾ ಅಪಾರ್ಟ್‌ಮೆಂಟ್‌ಗೆ ಭೇಟಿಯಿತ್ತಾಗ ದೊರೆತ ಮಾಹಿತಿ ಹಾಗೂ ದಾಖಲೆಗಳು ಈ ಪ್ರಕರಣದ ದಾರುಣ ಅಂತ್ಯಕ್ಕೆ ಅತುಲ್ ಒಬ್ಬನೇ ಕಾರಣನಲ್ಲ ಎಂಬುದನ್ನು ಸ್ವಷ್ಟವಾಗಿ ಹೇಳುತ್ತವೆ.
ಅತುಲ್ ಉಡುಪಿಯಿಂದ ಪದ್ಮಪ್ರಿಯ ಅವರನ್ನು ದೆಹಲಿಗೆ ಕರೆದುಕೊಂಡು ಬಂದಿದ್ದೇನೋ ನಿಜ. ಆದರೆ ಬಲವಂತವಾಗಿ ಅಲ್ಲ. ಇದಕ್ಕೆ ಪದ್ಮಪ್ರಿಯರ ಸಮ್ಮತಿಯೂ ಇತ್ತು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಅತುಲ್ ಸ್ಥಳೀಯರಲ್ಲಿ ಪದ್ಮಪ್ರಿಯ ತನ್ನ ಪತ್ನಿ ಎಂದೇ ಹೇಳಿಕೊಂಡಿದ್ದ. ಆ ಹೊತ್ತಿಗೆ ಅತುಲ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದಿದ್ದ ಕಾರಣ ಸ್ಥಳೀಯರು ಪದ್ಮಪ್ರಿಯ ಆತನ ಪತ್ನಿ ಎಂದೇ ಭಾವಿಸಿದ್ದರು. ಹೀಗೆ ಆಡಳಿತ ಪಕ್ಷದ ಪ್ರಭಾವಿ ಶಾಸಕರೊಬ್ಬರ ಪತ್ನಿಯನ್ನು ಅತುಲ್ ತನ್ನ ಪತ್ನಿ ಎಂದು ಧೈರ್ಯವಾಗಿ ತಿಳಿಸಿರುವುದು ಹಾಗೂ ಇದಕ್ಕೆ ಪದ್ಮಪ್ರಿಯ ಅವರ ಸಮ್ಮತಿ ಇದ್ದಿದ್ದನ್ನು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಯೋಜನೆ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಅತುಲ್ ಮೇ 22ರಂದೇ ದ್ವಾರಕಾದ ಶಮಾ ಅಪಾರ್ಟ್‌ಮೆಂಟ್ ಮಾಲೀಕ ಲಖ್ವೀಂದರ್ ಸಿಂಗ್‌ನೊಂದಿಗೆ ವಾಸ್ತವ್ಯ ದಾಖಲೆ ಪತ್ರ (ರೆಂಟ್ ಅಗ್ರೀಮೆಂಟ್) ಮಾಡಿಕೊಂಡಿದ್ದಾನೆ. ಜೊತೆಗೆ ಈ ದಾಖಲೆ ಪತ್ರದಲ್ಲಿ ಪ್ರೇಮ್ ಲಾಲ್ ಹಾಗೂ ಸುನಿಲ್ ಕೆ. ಆರ್. ಶರ್ಮ ಎಂಬ ಇಬ್ಬರು ಸಾಕ್ಷಿದಾರರು ಸಹಿ ಮಾಡಿದ್ದಾರೆ. ಮುಂಗಡ ಬಾಡಿಗೆ (ರನ್ನಿಂಗ್ ಮಂತ್ ರೆಂಟ್) ಸೇರಿದಂತೆ ತಿಂಗಳ ಬಾಡಿಗೆ ಎಂದು ಒಟ್ಟು 26,200 ರೂ. ಹಾಗೂ ಸ್ಟ್ಯಾಂಪ್ ಡ್ಯೂಟಿ ಎಂದು 3,320 ರೂ.ಗಳನ್ನು ಅತುಲ್ ಶಮಾ ಅಪಾರ್ಟ್‌ಮೆಂಟ್ ಮಾಲೀಕ ಲಖ್ವಿಂದರ್ ಸಿಂಗ್‌ಗೆ ನೀಡಿ, ಪದ್ಮಪ್ರಿಯ ಅವರ ದೆಹಲಿ ವಾಸಕ್ಕೆ ಅಪಹರಣ ನಾಟಕಕ್ಕಿಂತ ಮೊದಲೇ ಸಿದ್ಧತೆ ನಡೆಸಿದ್ದ ಎಂದು ದಾಖಲೆಗಳು ದೃಢಪಡಿಸುತ್ತವೆ.
ಇವೆಲ್ಲಾ ಸಾಲದು ಎಂಬಂತೆ ಅತುಲ್ ತನ್ನ 'ಮಡದಿ'ಗೆ (ಅತುಲ್ ಹೇಳಿದ್ದ ಪ್ರಕಾರ) ದೆಹಲಿಯಲ್ಲಿ ಓಡಾಡಲು ಕಾರು ಬೇಕೆಂದು ಡಿಎಲ್ 2ಸಿಡಿ 6949 ನಂಬರಿನ 'ವ್ಯಾಗನ್ ಆರ್' ಕಾರೊಂದನ್ನು ಖರೀದಿಸಿದ್ದ. ದ್ವಾರಕಾ ಅಪಾರ್ಟ್‌ಮೆಂಟ್‌ನ ತನ್ನ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದ ಮಾರ್ಕೆಟ್ ಒಂದರಲ್ಲಿ ಪರಿಚಯವಾದ ಮಂಜಿತ್ ಮೋಟಾರ್‍ಸ್‌ನ ಮೆಕ್ಯಾನಿಕ್ ಬಳಿ ತನಗೆ ಕಾರೊಂದರ ಅಗತ್ಯವಿದೆ ಎಂದು ತಿಳಿಸಿದ ಅತುಲ್, ದ್ವಾರಕಾ ಮೋಟಾರ್‍ಸ್ ಹಾಗೂ ಫೈನಾನ್ಸ್ ಮೂಲಕ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದಾನೆ.
ಮೆಕ್ಯಾನಿಕ್ ಮೂಲಕ ದ್ವಾರಕಾ ಬಳಿ ಇರುವ ದ್ವಾರಕಾ ಮೋಟಾರ್‍ಸ್ ಹಾಗೂ ಫೈನಾನ್ಸ್‌ಗೆ ಜೂನ್ 2ರಂದು ಆಗಮಿಸಿದ ಅತುಲ್ ಕಾರು ಖರೀದಿ ವ್ಯವಹಾರ ನಡೆಸಿದ್ದಾನೆ. ಜೊತೆಗೆ ಫೈನಾನ್ಸ್ ಮಾಲೀಕನಿಗೆ ಮುಂಗಡವಾಗಿ 10,000 ರೂ. ನೀಡಿದ್ದಾನೆ. ನಂತರ ಜೂನ್ 12ರಂದು ದ್ವಾರಕಾ ಫೈನಾನ್ಸ್‌ಗೆ ಅತುಲ್ ಹಾಗೂ ಪದ್ಮಪ್ರಿಯ ತೆರಳಿ ಮಾತುಕತೆ ನಡೆಸಿ, ಕಾರಿನ ಸಂಪೂರ್ಣ ವೆಚ್ಚ ಪಾವತಿಸಿದ್ದಾರೆ. ಫೈನಾನ್ಸ್ ಮಾಲೀಕ ಹೇಳುವ ಪ್ರಕಾರ ಅತ್ಯಂತ ಗಡಿಬಿಡಿಯಿಂದಿದ್ದ ಅತುಲ್, ತಾನು ಈಗಲೇ ಬೆಂಗಳೂರಿಗೆ ಹೋಗಬೇಕಿದೆ, ಆದಷ್ಟು ಬೇಗ ಎಲ್ಲಾ ವ್ಯವಹಾರಗಳನ್ನು ಮುಗಿಸಬೇಕು ಎಂದು ಹೇಳುತ್ತಿದ್ದ. ಮಂಜಿತ್ ಮೋಟಾರ್‌ನ ಮೆಕ್ಯಾನಿಕ್ ಕಾರನ್ನು ಅದೇ ದಿನ 12:40ಕ್ಕೆ ಅಪಾರ್ಟ್‌ಮೆಂಟ್‌ಗೆ ಕೊಂಡೊಯ್ದಿದ್ದು, ಕಾರನ್ನು ಪದ್ಮಪ್ರಿಯ ಅವರಿಗೆ ಹಸ್ತಾಂತರಿಸಿ ತೆರಳಿದ್ದಾನೆ. ಈ ಕಾರು ವ್ಯವಹಾರದ ಕುರಿತಾದ ಎಲ್ಲಾ ಮಾಹಿತಿಗಳು, ದಾಖಲೆಗಳು ಟಿಎಸ್‌ಐ ಬಳಿ ಇವೆ.
ಒಟ್ಟಾರೆ ಈ ಎಲ್ಲಾ ಅಂಶಗಳಿಂದ ಬಹಳ ಹಿಂದಿನಿಂದಲೇ ಪದ್ಮಪ್ರಿಯ ದೆಹಲಿಯಲ್ಲಿ ಬಂದು ನೆಲೆಸಲು ತಯಾರಿ ನಡೆಸಿದ್ದರು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಮತ್ತೊಂದು ಅಚ್ಚರಿಯ ಅಂಶ ಏನೆಂದರೆ ಜೂನ್ 15ರಂದು ಡಿಎಲ್ 4ಸಿಎವೈ 6666 ನಂಬರ್ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ 10 ಗಂಟೆಗೆ ಫ್ಲ್ಯಾಟ್ ನಂಬರ್ 20ಕ್ಕೆ ಆಗಮಿಸಿದ್ದು, 12 ಗಂಟೆಯವರೆಗೆ ಅಲ್ಲೇ ಇದ್ದ ಎಂದು ರಿಜಿಸ್ಟರ್ ಹೇಳುತ್ತದೆ. ಆ ವ್ಯಕ್ತಿಯ ಬಗ್ಗೆ ಗಾರ್ಡ್ ಬಳಿ ಕೇಳಿದಾಗ, ಆತ ಯಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾನೆ. ಅದೇ ದಿನ ಪದ್ಮಪ್ರಿಯ ನೇಣು ಹಾಕಿಕೊಂಡಿದ್ದು!
ಅದೇ 15ರಂದು ಅಪರಾಹ್ನ 2:30ಕ್ಕೆ ಅತುಲ್ ಆಗಮಿಸಿದ್ದು, 30 ನಿಮಿಷಗಳ ಕಾಲ ಪದ್ಮಪ್ರಿಯ ಜೊತೆ ಮಾತುಕತೆ ನಡೆಸಿದ್ದಾನೆ. ರಿಜಿಸ್ಟರ್‌ನಲ್ಲಿ ಅತುಲ್+3 ಎಂದು ದಾಖಲಾಗಿತ್ತು. ಆದರೆ ಗಾರ್ಡ್ ಹೇಳುವ ಪ್ರಕಾರ ಅತುಲ್ ಜೊತೆ ಇಬ್ಬರು ವ್ಯಕ್ತಿಗಳು ಮಾತ್ರ ಇದ್ದರು. ಆದರೆ ಆ ವ್ಯಕ್ತಿಗಳು ಯಾರೆಂದು ಇದುವರೆಗೆ ತಿಳಿದುಬಂದಿಲ್ಲ. ಈ ಮುನ್ನ ಪೊಲೀಸರಲ್ಲಿ ಅತುಲ್ ಜೊತೆ ಇನ್ನು ಮೂವರು ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು ಎಂದು ಹೇಳಲಾಗುತ್ತಿರುವ ಬಗ್ಗೆ ಕೇಳಿದಾಗ, ಪೊಲೀಸರು ಅತುಲ್ ಒಬ್ಬನೇ ತೆರಳಿದ್ದಾನೆ ಎಂದು ಉತ್ತರಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಯಾರು ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ.
ಕರ್ನಾಟಕದ ಗೃಹ ಸಚಿವ ವಿ.ಎಸ್. ಆಚಾರ್ಯ ಜೂನ್ 16ರಂದು ಪದ್ಮಪ್ರಿಯ ಮರಣೋತ್ತರ ಪರೀಕ್ಷೆ ನಡೆಯುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದರು. ಆಚಾರ್ಯ ಬಳಿ, ಕೋಲಾರದ ಮಾಲೂರಿನಲ್ಲಿ ಪತ್ತೆಯಾಗಿದ್ದಾರೆ ಎಂಬ ತಪ್ಪು ಮಾಹಿತಿಯಿಂದ ಪದ್ಮಪ್ರಿಯ ಅವರಿಗೆ ಶಾಕ್ ಆಗಿರಬಹುದಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ, ಶಾಕ್ ಹೇಗೆ ಆಗುತ್ತದೆ? ಅವರು (ಪದ್ಮಪ್ರಿಯ) ದೆಹಲಿಯಲ್ಲಿ ಇರುವ ವಿಷಯ ಪೊಲೀಸರಿಗೆ ಗೊತ್ತಾಗಿದೆ ಎಂದು ತಿಳಿದ ಮೇಲೆ ಪದ್ಮಪ್ರಿಯ ಅವರಿಗೆ ಶಾಕ್ ಆಗಿರಬಹುದು. ದುರದೃಷ್ಟವಷಾತ್ ಅವರು ಆತ್ಮಹತ್ಯೆಗೆ ಶರಣಾದರು. ಇಟ್ಸ್ ನಾಟ್ ಇನ್ ಎನಿಬಡೀಸ್ ಹ್ಯಾಂಡ್ಸ್ ಎಂಬ ವಿವೇಚನಾರಹಿತ ಉತ್ತರ ನೀಡಿದ್ದರು. ಕರ್ನಾಟಕದ ಸರ್ಕಾರ, ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ಸ್ವಲ್ಪ ವಿವೇಚನೆ ತೋರಿದ್ದರೆ ಪದ್ಮಪ್ರಿಯ ನೇಣಿಗೆ ಶರಣಾಗುತ್ತಿರಲಿಲ್ಲ. ಟಿಎಸ್‌ಐಗೆ ತಿಳಿದ ಮಾಹಿತಿಯ ಪ್ರಕಾರ ಪದ್ಮಪ್ರಿಯ ದೆಹಲಿಯಲ್ಲಿ ಇರುವ ವಿಷಯ ಜೂನ್ 13ರಂದೇ ಅತುಲ್ ಮೂಲಕ ರಘುಪತಿ ಭಟ್ ಮತ್ತು ಅವರ ಗೆಳೆಯರಿಗೆ ಗೊತ್ತಾಗಿದೆ. ಆ ಕ್ಷಣದಿಂದಲೇ ಮೊಬೈಲ್ ಮೂಲಕ ಪದ್ಮಪ್ರಿಯ ಮೇಲೆ ಒತ್ತಡ ಹೇರುವ ತಂತ್ರ ಕೂಡ ಆರಂಭವಾಗಿದೆ. ಈ ತಂತ್ರಕ್ಕೆ ಅತುಲ್ ಅವರನ್ನು ಸಾಧನವಾಗಿ ಬಳಸಿಕೊಳ್ಳಲಾಗಿದೆ. ಆಗ ಮಾಧ್ಯಮದವರನ್ನು ದಾರಿ ತಪ್ಪಿಸುವ ಸಲುವಾಗಿ 'ಮಾಲೂರು ನಾಟಕ'ದ ಬಲೆ ಹೆಣೆಯಲಾಯಿತು. ಬಿಜೆಪಿ ಸರ್ಕಾರ ಈ ಪ್ರಕರಣವನ್ನು 'ತನ್ನ ಪ್ರತಿಷ್ಠೆ' ಎಂದುಕೊಂಡು ಅತಿಯಾಗಿ ವರ್ತಿಸಿದ್ದು, ಮಾಧ್ಯಮಗಳು ಮುಗಿಬಿದ್ದದ್ದು, ರಘುಪತಿ ಭಟ್- ವಿ.ಎಸ್. ಆಚಾರ್ಯ ಒತ್ತಡದ ತಂತ್ರ ಹೇರಿದ್ದರಿಂದಲೇ ಪದ್ಮಪ್ರಿಯ ನೇಣಿಗೆ ಶರಣಾದದ್ದು.
'ಮಾಲೂರು ನಾಟಕ'ದ ಬದಲಾಗಿ ಪ್ರಕರಣದ ಕುರಿತು ಆಗ ಪೊಲೀಸರು ಮೌನವಹಿಸಿದ್ದರೆ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿ ಆ ಪರಿಯ ಅಲೆ ಎಬ್ಬಿಸುತ್ತಿರಲಿಲ್ಲ. ಇದು ಪದ್ಮಪ್ರಿಯ ಸಾವಿಗೆ ಒಂದು ಕಾರಣವೂ ಹೌದು ಎಂಬ ಅನೇಕರ ವಾದವನ್ನೂ ಇಲ್ಲಿ ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಪದ್ಮಪ್ರಿಯ ಅವರ ಫ್ಲ್ಯಾಟ್‌ಗೆ ಪೊಲೀಸರು ತೆರಳಿದ್ದ ಸಂದರ್ಭದಲ್ಲಿ ಕನ್ನಡ ಸುದ್ದಿ ವಾಹಿನಿಯೊಂದು ಬಿತ್ತರವಾಗುತ್ತಿತ್ತು ಎಂಬುದನ್ನು ಪೊಲೀಸರೇ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ ಜೂನ್ 14ರಂದು ಮಾಧ್ಯಮಗಳ ಕಣ್ಣಿಗೆ ಮಣ್ಣೆರೆಚಲು ಹೂಡಿದ 'ಮಾಲೂರು ಪ್ರಹಸನ' ಪದ್ಮಪ್ರಿಯ ಅವರ ದುರಂತ ಅಂತ್ಯದಲ್ಲಿ ಹೆಚ್ಚಿನ ಪಾತ್ರವಹಿಸಿತು.
ಜೂನ್ 15ರ ರಾತ್ರಿ 2.30ರ ಸುಮಾರಿಗೆ ಪದ್ಮಪ್ರಿಯ ಅವರ ಮೃತ ದೇಹ ವೀಕ್ಷಿಸಿದ್ದ ಗೃಹಸಚಿವ ವಿ.ಎಸ್. ಆಚಾರ್ಯ ಅವರು ಹೇಳುವ ಪ್ರಕಾರ, ಒಂದು ವೇಳೆ 2-10 ಗಂಟೆಗಳ ಮುನ್ನವೇ ನೇಣಿಗೆ ಶರಣಾಗಿದ್ದಾರೆ ಎಂದಾದರೆ, ಅತುಲ್ ಆ ದಿನ 2.30 ಕ್ಕೆ ಪದ್ಮಪ್ರಿಯ ಬಳಿ ತೆರಳಿ ಮಾಡಿದ್ದಾದರೂ ಏನು? ಪೊಲೀಸರು ಆತನನ್ನು ಪದ್ಮಪ್ರಿಯ ಬಳಿ ಹೋಗುವಂತೆ ಹೇಳಿ ಕಂಡುಕೊಂಡ ಸತ್ಯವಾದರೂ ಏನು? ಆ ದಿನ ಅತುಲ್ ಒಬ್ಬನನ್ನೇ (ರಿಜಿಸ್ಟರ್‌ನಲ್ಲಿ ಅತುಲ್+3 ಎಂದು ದಾಖಲಾಗಿದೆ) ಅಪಾರ್ಟ್‌ಮೆಂಟ್ ಫ್ಲ್ಯಾಟ್‌ಗೆ ಕಳುಹಿಸಿದ್ದು ಏಕೆ? ಆ 30 ನಿಮಿಷಗಳ ನಡುವೆ ಅತುಲ್, ಪದ್ಮಪ್ರಿಯ ಜೊತೆ ಮಾತುಕತೆ ನಡೆಸಿದ್ದಾನೆ ಎಂದಾದರೆ, ಕರ್ನಾಟಕ ಪೊಲೀಸರು ದೆಹಲಿ ಪೊಲೀಸರ ಸಹಾಯದಿಂದ ಅದೇ ಹೊತ್ತಿನಲ್ಲಿ ಪದ್ಮಪ್ರಿಯ ಅವರನ್ನು ವಶಕ್ಕೆ ತೆಗೆದುಕೊಳ್ಳಬಹುದಿತ್ತಲ್ಲವೇ? ಇಲ್ಲಿ ಹುಟ್ಟುವ ಇನ್ನೊಂದು ಪ್ರಶ್ನೆಯೆಂದರೆ, ಅತುಲ್ ಮೂಲಕ ತನ್ನನ್ನು (ಪದ್ಮಪ್ರಿಯ ಅವರನ್ನು) ಕರೆದೊಯ್ಯುವ ಹುನ್ನಾರ ಕರ್ನಾಟಕ ಪೊಲೀಸರದ್ದು ಎಂಬ ವಿಷಯದ ಅರಿವಾಗಿ, ಭಯಬೀತರಾದ ಪದ್ಮಪ್ರಿಯ, ಆ ಬಳಿಕ ಆತ್ಮಹತ್ಯೆ ಮಾಡಿಕೊಂಡರೆ? ಉತ್ತರಗಳು ಮಾತ್ರ ಇನ್ನೂ ನಿಗೂಢವಾಗೇ ಇದೆ.
ಪತಿ ರಘುಪತಿ ಭಟ್ ಅವರಿಂದ ಸಂಪೂರ್ಣ ದೂರವಾಗಿ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಗಟ್ಟಿ ನಿರ್ಧಾರ ಮಾಡಿಯೇ ಪದ್ಮಪ್ರಿಯ ದೆಹಲಿಗೆ ಬಂದದ್ದು. ಅದಕ್ಕೆ ಅತುಲ್ ನೆರವಾಗಿದ್ದಾರೆ. ಇನ್ನು ಪೊಲೀಸ್ ಮೂಲಗಳು ಹೇಳುವ ಪ್ರಕಾರ ಅವರಿಬ್ಬರಿಗೆ ಆತ್ಮೀಯ ಸಂಬಂಧ ಇತ್ತು. ಅದು ಅವರವರ ವೈಯಕ್ತಿಕ ಪ್ರಶ್ನೆಗಳು. ಆದರೆ, ಒಬ್ಬ ಮಹಿಳೆ ತನ್ನ ಪತಿಯ ಮೇಲಿನ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡು ತನ್ನದೇ ಆದ ಹೊಸ ಬದುಕಿಗಾಗಿ ಹಂಬಲಿಸಿದ್ದನ್ನು ತಪ್ಪು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆ ವಿಷಯ ಸ್ಪಷ್ಟವಾದ ಮೇಲೆ ಅಂತಹ ಒಬ್ಬ ದಿಟ್ಟ ಮಹಿಳೆಯ ಮೇಲೆ ಒಂದು ರಾಜ್ಯ ಸರ್ಕಾರವೇ ಒತ್ತಡ ಹೇರಿ ಬಲವಂತವಾಗಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು ಮಾತ್ರ ಹೇಯ ಕೃತ್ಯ.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಪದ್ಮಪ್ರಿಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬದುಕಿದ್ದಾಗ ಸಂಬಂಧಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿಯೊಬ್ಬ, ಪತ್ನಿ ಹೆಣವಾದ ಮೇಲೆ ಕಣ್ಣೀರಿನ ಹೊಳೆ ಹರಿಸಿ, ಶವಕ್ಕೆ ಬೆಂಕಿಯಿಟ್ಟೂ ಆಗಿದೆ. ಆದರೀಗ, ಕೇವಲ ಅತುಲ್ ಒಬ್ಬನನ್ನೇ ಈ ಸಾವಿಗೆ ಕಾರಣ ಎಂದು ಬೊಟ್ಟು ಮಾಡುವ ಬದಲು, ಪದ್ಮಪ್ರಿಯ ಅವರು ಅತುಲ್‌ನೊಂದಿಗೆ ದೆಹಲಿಗೆ ಬಂದು ನೆಲೆಸುವಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು ಏಕೆ? ಎಂಬುದರ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ಆ ತನಿಖೆ ಮಾಡಿ, ನಂತರ ಹೊರಬೀಳುವ ಸತ್ಯವನ್ನು ಅರಗಿಸಿಕೊಳ್ಳುವ ತಾಕತ್ತು ಬಿಜೆಪಿ ಸರ್ಕಾರಕ್ಕಿದೆಯೇ?
Thursday, 3 July 2008
Subscribe to:
Post Comments (Atom)
No comments:
Post a Comment