Friday, 24 September 2010

ಬಹಿಷ್ಕೃತರ ಬದುಕಿನ ಬೆಳಕಿಂಡಿ

ಲೈಂಗಿಕ ಕಾರ್ಯಕರ್ತರೇ ನಡೆಸುವ ವಿಶಿಷ್ಟ ಹೊಟೇಲ್ ಅರಮನೆಗಳ ನಗರಿ ಮೈಸೂರಿನಲ್ಲಿದೆ. ಅಲ್ಲಿಗೆ ಇತ್ತೀಚಿಗೆ ಭೇಟಿ ನೀಡಿದ್ದೆ.

ಬೆಳಗ್ಗಿನ ಉಪಾಹಾರಕ್ಕೆಂದು ಆ ಹೊಟೇಲ್ ಒಳಗಡೆ ಕಾಲಿಡುತ್ತಿದ್ದಂತೆ, ಎದುರಿಗಿದ್ದ ದೃಶ್ಯ ಸಾಮಾನ್ಯವಾಗಿರಲಿಲ್ಲ. ಹೊಟೇಲ್ ಎದುರುಭಾಗದಲ್ಲೇ ಕುಳಿತಿದ್ದ ಕ್ಯಾಶಿಯರ್ ಗ್ರಾಹಕರನ್ನು ಸ್ವಾಗತಿಸುತ್ತಿದ್ದದ್ದು, ಸರ್ವರ್‌ಗಳು ತಿಂಡಿ-ತಿನಿಸುಗಳನ್ನು ಪೂರೈಸಲು ಸಜ್ಜುಗೊಂಡದ್ದು, ಅಂತೆಯೇ ಬಾಣಸಿಗರು ಎಲ್ಲಾ ತಿಂಡಿ-ತಿನಿಸುಗಳೊಂದಿಗೆ ಸಿದ್ಧಗೊಂಡಿದ್ದದ್ದು ಹೊಟೇಲ್‌ವೊಂದರಲ್ಲಿ ಕಂಡುಬರುವಂತಹ ಸಾಮಾನ್ಯ ದೃಶ್ಯವೇ ಆಗಿತ್ತು. ಆದರೆ ಈ
ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದ ಕಾರ್ಮಿಕರು ಮಾತ್ರ ಸಾಮಾನ್ಯರಾಗಿರಲಿಲ್ಲ. ಸಮಾಜದಲ್ಲೆದುರಾಗಿದ್ದ ಎಲ್ಲಾ ಅಡೆತಡೆಗಳನ್ನು ಹಿಂದಿಕ್ಕಿ ಮುನ್ನುಗ್ಗಿದ ಆ ಕಾರ್ಮಿಕರು ನಿಜಕ್ಕೂ ಅಸಾಮಾನ್ಯರಾಗೇ ಕಂಡುಬಂದಿದ್ದರು.
ವಿಶ್ವವಿಖ್ಯಾತ ಐತಿಹಾಸಿಕ ಮೈಸೂರು ಅರಮನೆಯ ಹಿಂದಿನ ರಸ್ತೆಯ ಅಂತಿಮ ತಿರುವಿನಲ್ಲಿ ನೆಲೆಗೊಂಡಿರುವ ಹೊಟೇಲ್ ’ಆಶೋದಯ’ ಈ ಎಲ್ಲಾ ವಿಭಿನ್ನ, ಅಪರೂಪದ ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಗಿದೆ. ಪುರುಷ-ಸ್ತ್ರೀ ಲೈಂಗಿಕ ಕಾರ್ಯಕರ್ತೆಯರು, ಲಿಂಗಪರಿವರ್ತಿತರು ಮತ್ತು ಮಂಗಳಮುಖಿಯರು ಈ ಹೊಟೇಲ್‌ನ ಕಾರ್ಮಿಕರು! ಈ ಹೊಟೇಲನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ಅವರದ್ದೇ. ಇಲ್ಲಿ ಲೈಂಗಿಕ ಕಾರ್ಯಕರ್ತರ ಜೊತೆಗೆ ಸಾಮಾನ್ಯ ವರ್ಗದ ಜನರು ಕೂಡ ಸರ್ವರ್, ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಸಮಾಜದಿಂದ ಹೊರತಳ್ಳಲ್ಪಟ್ಟ, ಬಹಿಷ್ಕಾರಕ್ಕೊಳಗಾದ ಲೈಂಗಿಕ ಕಾರ್ಯಕರ್ತರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆಶೋದಯ ಎಂಬ ಹೆಸರಿಗೆ ತಕ್ಕಂತೆ ತುಳಿತಕ್ಕೊಳಗಾದ ವರ್ಗದ ಭರವಸೆಯ ಆಶಾಕಿರಣವೇ ‘ಹೊಟೇಲ್ ಆಶೋದಯ.’


ಲೈಂಗಿಕ ಕಾರ್ಯಕರ್ತರೂ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದಲೇ ಆರಂಭವಾದ ’ಆಶೋದಯ’ ಎಂಬ ಸರ್ಕಾರೇತರ ಸಂಸ್ಥೆಯ ಕೂಸು ಈ ’ಹೊಟೇಲ್ ಆಶೋದಯ’. ಸಾಮಾನ್ಯರಂತೆ ನಾವು ಕೂಡ ಹೊಟೇಲ್ ಉದ್ಯಮ ಆರಂಭಿಸಿ ಏಕೆ ನಮ್ಮ ಸಮುದಾಯದ ಜನರಿಗೆ ಹಾಗೂ ಸಾರ್ವಜನಿಕ ವರ್ಗಕ್ಕೆ ನೆರವಾಗರಬಾರದು ಎಂದುಕೊಂಡು ಈ ಹೊಟೇಲನ್ನು ಆರಂಭಿಸಿದೆವು ಎಂದು ವಿವರಣೆ ನೀಡಿದರು ಲೈಂಗಿಕ ಕಾರ್ಯಕರ್ತ ಮತ್ತು ಆಶೋದಯ ಸಂಸ್ಥೆ ಸದಸ್ಯ ಪ್ರಕಾಶ್. ಹೊಟೇಲ್ ಪ್ರಾರಂಭವಾದಲ್ಲಿಂದ ಕ್ಯಾಶಿಯರ್ ಜವಾಬ್ದಾರಿ ಪ್ರಕಾಶ್ ಹೆಗಲ ಮೇಲಿತ್ತಾದರೂ, ಆಶೋದಯದ ಅಂಗ ಸಂಸ್ಥೆ ‘ಅಮೂಲ್ಯ ಜೀವನ್ ನೆಟ್‌ವರ್ಕ್’ನಲ್ಲಿ ಬಿಡುವಿಲ್ಲದ ಕೆಲಸಗಳಿದ್ದ ಕಾರಣ ಕ್ಯಾಶಿಯರ್ ವ್ಯವಹಾರಗಳನ್ನು ಸಾರ್ವಜನಿಕ ವರ್ಗದ ಹಿರಿಯ ನಾಗರಿಕ ತಿಮ್ಮಯ್ಯ ಆಚಾರ್ ಅವರು ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಪ್ರಕಾಶ್ ಕೆಲವೊಮ್ಮೆ ಬಂದು ಕ್ಯಾಶಿಯರ್ ಕೆಲಸ ಮಾಡುವುದರ ಜೊತೆಗೆ, ಸಾಂಬಾರ್ ಹಂಡೆಯಲ್ಲಿ ಸೌಟು ಅಲ್ಲಾಡಿಸುವುದುಂಟು!

ಮುಂಜಾನೆಯಂದ ಸಂಜೆ ೫ ಅಥವಾ ೫.೩೦ರ ತನಕ ಆಶೋದಯ ಹೊಟೇಲ್ ಹಾಗೂ ಕಚೇರಿ ತೆರೆದಿರುತ್ತದೆ. ಆ ಬಳಿಕ ಇಲ್ಲಿನ ಲೈಂಗಿಕ ಕಾರ್ಯಕರ್ತರು ತಮ್ಮ ವೃತ್ತಿಗೆ ತೆರಳುತ್ತಾರೆ. ಹೊಟೇಲ್‌ನಲ್ಲಿ ಕಾರ್ಯ ನಿರ್ವಹಿಸುವ ಒಟ್ಟು ಎಂಟು ಮಂದಿಯಲ್ಲಿ ಐವರು ಲೈಂಗಿಕ ಕಾರ್ಯಕರ್ತರಾಗಿದ್ದು ಹೊಟೇಲ್ ಕೆಲಸಗಳನ್ನು ಒಂದು ಸೇವೆಯಾಗಿ ಸ್ವೀಕರಿಸಿದ್ದಾರೆ. ಇನ್ನುಳಿದ ಮೂರು ಮಂದಿ ಸಾರ್ವಜನಿಕ ವರ್ಗದವರಾಗಿದ್ದು, ಹೊಟೇಲ್ ಕೆಲಸವೇ ಅವರ ವೃತ್ತಿ. ಈ ಎಲ್ಲಾ ಕಾರ್ಮಿಕರು ದಿನಗೂಲಿಯನ್ನೇ ಪಡೆಯುತ್ತಿದ್ದಾರೆ. ಉತ್ತಮ ಲಾಭ ಕಂಡುಬಂದಲ್ಲಿ ಅವರ ಆದಾಯ ಮಟ್ಟವೂ ಏರುತ್ತದೆ.




ಲೈಂಗಿಕ ಕಾರ್ಯಕರ್ತರ ಮೇಲಿನ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶ ಮತ್ತು ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದೇ ವೇದಿಕೆಗೆ ತರುವ ಮಹತ್ವಾಕಾಂಕ್ಷೆ ೨೦೦೪ರಲ್ಲಿ ಆಶೋದಯ ಸಂಸ್ಥೆಯ ಹುಟ್ಟಿಗೆ ನಾಂದಿ ಹಾಡಿತು.
ಡಾ. ಸುಶೇನಾ, ಡಾ. ಸುಂದರ್ ರಾಮನ್, ಸೆಂಥಿಲ್ ಹಾಗೂ ಕಾವೇರಿ ಎಂಬ ನಾಲ್ಕು ಮಂದಿ ನಮ್ಮ ಪ್ರಧಾನ ಸಮಿತಿಯಲ್ಲಿದ್ದರು. ಆರಂಭದಲ್ಲಿ ನಾವೇ ಕೆಲವು ಲೈಂಗಿಕ ಕಾರ್ಯಕರ್ತರು ಈ ಸಂಸ್ಥೆಯಲ್ಲಿದ್ದೆವು ಮತ್ತು ಸಾಮಾನ್ಯ ಸಮುದಾಯದ ಕೆಲವರು ತಾಂತ್ರಿಕ ನೆರವು ನೀಡುತ್ತಿದ್ದರು. ದಿನ ಸಾಗಿದಂತೆ ಮೈಸೂರಿನ ಹಲವು ಲೈಂಗಿಕ ಕಾರ್ಯಕರ್ತ/ರ್ತೆಯರು ನಮ್ಮ ಸಂಸ್ಥೆ ಸೇರಲಾರಂಭಿಸಿದರು ಎಂದು ವಿವರಿಸಿದರು ಆಶೋದಯದ ಉಪ ನಿರ್ದೇಶಕ, ಹೊಟೇಲ್ ಯೋಜನೆಯ ಸಂಯೋಜಕ ಮತ್ತು ಲೈಂಗಿಕ ಕಾರ್ಯಕರ್ತ ಅಕ್ರಂ ಪಾಶಾ.




ಆಶೋದಯ ಅಕ್ಯಾಡೆಮಿಯಲ್ಲಿ ಪಾಶಾ ಅವರು ಶೈಕ್ಷಣಿಕ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವೈಯಕ್ತಿಕ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿನ ಮಹಿಳಾ, ಲಿಂಗಪರಿವರ್ತಿತ ಹಾಗೂ ಪುರುಷ ಲೈಂಗಿಕ ಕಾರ್ಯಕರ್ತರಿಗೆ ಏಡ್ಸ್ ತಡೆಗಟ್ಟುವ ಕುರಿತಾದ ಆರೋಗ್ಯ, ಕಾನೂನು ವಿಚಾರ ಹಾಗೂ ಕೌಶಲ್ಯವೃದ್ಧಿಗೆ ತರಬೇತಿ ನೀಡುತ್ತೇವೆ ಎನ್ನುತ್ತಾರೆ ಪಾಶಾ.
ಏಡ್ಸ್ ಮಹಾಮಾರಿ ಹರಡದಂತೆ ಸಂರಕ್ಷಣಾ ಸೂತ್ರಗಳನ್ನು ಬಳಸಿಕೊಂಡೇ ವೇಶ್ಯಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳುವ ಇಲ್ಲಿನ ಸದಸ್ಯರು, ಕಾಂಡೊಮ್ ಬಳಸದೆ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ಇಲ್ಲಿನ ಕಾರ್ಯಕರ್ತರು ಪಾಲ್ಗೊಳ್ಳುವುದಿಲ್ಲ ಎಂದು ವಾದಿಸುತ್ತಾರೆ. ೨೦೦೪ರಲ್ಲಿ ನಮ್ಮ ಸಂಸ್ಥೆ ಮೂಲಕ ಏಡ್ಸ್ ಪ್ರಮಾಣದ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಅಂದು ಕಂಡುಬಂದಿದ್ದ ಪ್ರಮಾಣ ಯಾವುದೇ ಕಾರಣಕ್ಕೆ ಏರಿಕೆಯಾಗಬಾರದು ಎಂದು ನಾವಂದುಕೊಂಡಿದ್ದೆವು. ನಾವು ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟಿಎಸ್‌ಐ ಜೊತೆ ಆಶೋದಯ ಸಂಸ್ಥೆ ತಾಂತ್ರಿಕ ಸಲಹೆಗಾರ್ತಿ ಫಾತಿಮಾ ಅವರು ಮಾಹಿತಿ ಹಂಚಿಕೊಂಡರು.


ಹೊಟೇಲ್ ಉದ್ಯಮದಿಂದ ಬರುವ ಹೆಚ್ಚಿನ ಹಣವನ್ನು ಆಶೋದಯದ ’ಕೇರ್ ಹೋಂ’ ನಿರ್ವಹಣೆಗೆಂದು ಮೀಸಲಿಡಲಾಗುತ್ತದೆ. ಹೊಟೇಲ್ ಆರಂಭವಾದಂದಿನಿಂದ ಇಂದಿನವರೆಗೆ ಇಲ್ಲಿನ ಹಣವನ್ನು ನಾವು ಶೋಷಿತ ಲೈಂಗಿಕ ಕಾರ್ಯಕರ್ತರ ನೆರವಿಗಾಗಿ ಬಳಸಿಕೊಂಡಿದ್ದೇವೆ. ಹಲವು ಅನಾರೋಗ್ಯ ಪೀಡಿತ ಕಾರ್ಯಕರ್ತರು ನಮ್ಮ ಕೇರ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೊಂದು ಬಾರಿ ವೈದ್ಯರು ಕೇರ್ ಹೋಮ್‌ಗೆ ಭೇಟಿ ನೀಡುತ್ತಿರುತ್ತಾರೆ. ಬಡ ಲೈಂಗಿಕ ಕಾರ್ಯಕರ್ತರಿಗೆ ಕೇರ್ ಹೋಮ್ ಹೊಸ ಬದುಕನ್ನು ಒದಗಿಸಿದೆ ಎಂದು ಆಶೋದಯದ ಕಾರ್ಯವಿಸ್ತರಣೆ ಕುರಿತು ಲೈಂಗಿಕ ಕಾರ್ಯಕರ್ತೆ ನಾಗರತ್ನಮ್ಮ ಅವರು ಮಾಹಿತಿ ನೀಡಿದರು. ಮಂಡ್ಯ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಕೇರ್ ಹೋಮ್ ಕಾರ್ಯ ನಿರ್ವಹಿಸುತ್ತಿದೆ.




ಲೈಂಗಿಕ ಕಾರ್ಯಕರ್ತೆ ಶಶಿಕಲಾ ಅವರಿಗೆ ಆಶೋದಯ ಸೇರುವ ಮುನ್ನ ಕಾಂಡೊಮ್ ಎಂದರೆ ಏನೆಂದೇ ತಿಳಿದಿರಲಿಲ್ಲ. ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಬಳಸಲಾಗುವ ವಿಧಾನಗಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಆದರೆ ಆಶೋದಯ ಸೇರಿದ ಬಳಿಕ ನನಗೆ ಕಾಂಡೊಮ್ ಬಗ್ಗೆ ಅರಿವು ಮೂಡಿಸಿದರು. ಮೊದಲೆಲ್ಲಾ ನಮ್ಮ ಗ್ರಾಹಕರು ಕರೆದ ಕೂಡಲೇ ನಾನು ವೇಶ್ಯಾವಾಟಿಕೆಗೆ ತೆರಳುತ್ತಿದ್ದೆ ಎಂದು ಆಶೋದಯದಿಂದಾದ ಪ್ರಯೋಜನದ ಬಗ್ಗೆ ಶಶಿಕಲಾ ಹೇಳಿಕೊಂಡರು. ಒಂದು ವೇಳೆ ತಮ್ಮ ಗಿರಾಕಿಗಳಲ್ಲಿ ಕಾಂಡೊಮ್ ಇಲ್ಲ ಎಂದಾದರೆ ಈ ಕಾರ್ಯಕರ್ತರೇ ಕಾಂಡೊಮ್ ಇಟ್ಟುಕೊಂಡಿರುತ್ತಾರೆ. ಕಾಂಡೊಮ್ ಬಳಕೆ ಬೇಡ ಎಂದರೆ ನಾವು ಸೆಕ್ಸ್‌ಗೆ ಒಪ್ಪುವುದಿಲ್ಲ ಎನ್ನುತ್ತಾರೆ ಅವರು.

ಹೊಟೇಲ್ ಆಶೋದಯದಲ್ಲಿ ಗ್ರಾಹಕರಿಗೆ ಉಣಬಡಿಸುವ ಜೊತೆಗೆ ಕ್ಯಾಟರಿಂಗ್ ಸೇವೆಯನ್ನೂ ಒದಗಿಸಲಾಗುತ್ತಿದೆ. ಹಲವು ವಿದ್ಯಾಸಂಸ್ಥೆಗಳು, ಪಾಲಿಕೆ ಕಚೇರಿ ಹಾಗೂ ವಿವಿಧ ಕಂಪನಿಗಳಿಗೆ ಇಲ್ಲಿಂದ ಆಹಾರಗಳನ್ನು ಪೂರೈಸಲಾಗುತ್ತಿದೆ. ಅವರ ಈ ಸೇವೆಗೆ ಉತ್ತಮ ಪ್ರತಿಕ್ರಿಯೆಯೂ ಕೇಳಿಬಂದಿದೆ.
ಆರಂಭದ ದಿನಗಳಲ್ಲಿ ಕೇವಲ ಲೈಂಗಿಕ ಕಾರ್ಯಕರ್ತರೇ ಹೊಟೇಲ್ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆದರೆ ಹೊಟೇಲ್‌ನ್ನು ಸಾರ್ವಜನಿಕ ವರ್ಗ ಒಪ್ಪುತ್ತಿದ್ದಂತೆಯೇ ಕೆಲವರು ಇಲ್ಲಿ ಕೆಲಸಕ್ಕಾಗಿ ಮುಂದೆ ಬಂದರು. ಇದು ನಿಜಕ್ಕೂ ನಮ್ಮಲ್ಲಿ ಅಚ್ಚರಿ ತಂದಿತ್ತು. ಸಾರ್ವಜನಿಕ ಹಾಗೂ ಲೈಂಗಿಕ ಕಾರ್ಯಕರ್ತರ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಹೊಟೇಲ್ ಆಶೋದಯದ ಪಾತ್ರ ಬಹುದೊಡ್ಡದು ಎಂದು ಉದ್ಯಮವನ್ನು ಕೊಂಡಾಡಿದರು ಹಿರಿಯ ಸದಸ್ಯೆ ರತ್ನಮ್ಮ. ಮೊದಲು ರತ್ನಮ್ಮ ಅವರೇ ಮುಂದೆ ನಿಂತು ಅಡುಗೆ ಕಾರ್ಯದಿಂದ ಹಿಡಿದು, ಹೊಟೇಲ್ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಅವರು ತಮ್ಮ ಜವಾಬ್ದಾರಿಯನ್ನು ಇತರರಿಗೂ ವಹಿಸಿ ಅವರಿಗೂ ವೇದಿಕೆ ಒದಗಿಸಿದ್ದಾರೆ. ರತ್ನಮ್ಮ ಅವರು ಆಶೋದಯದ ಮಾಜಿ ಅಧ್ಯಕ್ಷೆ ಕೂಡ. ಸದ್ಯ ಯಶೋಧ ಅವರು ಸಂಸ್ಥೆಯಲ್ಲಿ ನಡೆದ ಚುನಾವಣೆ ಮೂಲಕ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಆಶೋದಯ ಹೊಟೇಲ್ ಕಟ್ಟಡದ ಮೇಲ್ಭಾಗದಲ್ಲೇ ಆಶೋದಯ ಸಂಸ್ಥೆಯ ಕಚೇರಿಯಿದ್ದು, ಹೆಚ್ಚಿನೆಲ್ಲಾ ಸದಸ್ಯರು ದಿನಂಪ್ರತಿ ಇಲ್ಲಿಗೆ ಭೇಟಿ ನೀಡಿ ತಮ್ಮ ಅನುಭವ, ನೋವು, ಭಾವನೆ ಹಾಗೂ ಸಮಸ್ಯೆಗಳನ್ನು ಸಂಸ್ಥೆಯ ಇತರ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಈ ವಿಚಾರ ವಿನಿಮಯದಿಂದಾಗಿ ಕಾರ್ಯಕರ್ತರ ಹಲವು ಸಮಸ್ಯೆಗಳಿಗೆ ಪರಿಹಾರ ಪ್ರಾಪ್ತಿಯಾಗಿದೆ. ತಮ್ಮ ಸಂಗಾತಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಕೂಡ ಲೈಂಗಿಕ ಕಾರ್ಯಕರ್ತರು ನಿವಾರಿಸಿಕೊಳ್ಳುವಲ್ಲಿ ಆಶೋದಯ ಸಹಕಾರಿಯಾಗಿದೆ ಎಂದು ಸದಸ್ಯರು ನೆನೆಸಿಕೊಳ್ಳುತ್ತಾರೆ. ಆಶೋದಯದ ಮೂಲಕ ಹೊಸಬದುಕನ್ನು ಕಂಡುಕೊಂಡಿರುವ ಹಲವು ಕಾರ್ಯಕರ್ತರು ಇಂದು ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ ಎಂಬುದು ಇಲ್ಲಿನ ಅಚ್ಚರಿಗಳಲ್ಲೊಂದು. ಮೈಸೂರಿನಲ್ಲಿರುವ ಒಂದು ಆಶೋದಯ ದೇಶದ ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ತಲುಪಲು ಸಾಧ್ಯವಿಲ್ಲ. ಇಂತಹ ಹಲವು ಆಶೋದಯಗಳ ಜನನವಾಗಬೇಕು ಎಂದು ಅಭಿಪ್ರಾಯಪಡುತ್ತಾರೆ ಕಾರ್ಯಕರ್ತ ಜಿನೇಂದ್ರ.


ಅನಾಥ ಮಕ್ಕಳಿಗೆ ರಕ್ಷಣೆ ನೀಡುವುದು, ಅಪರಿಚಿತ, ಅನಾಥ ಲೈಂಗಿಕ ಕಾರ್ಯಕರ್ತರು ನಿಧನ ಹೊಂದಿದಾಗ ಶವಸಂಸ್ಕಾರ ನೆರವೇರಿಸುವುದು ಸೇರಿದಂತೆ ಅಕ್ರಮ ಮಕ್ಕಳ ಸಾಗಣೆ, ಮಕ್ಕಳು (೧೮ ವರ್ಷದಿಂದ ಕೆಳಗೆ) ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ವಿರುದ್ಧವೂ ಧ್ವನಿ ಎತ್ತುವ ಕಾರ್ಯ ಆಶೋದಯ ಸದಸ್ಯರಿಂದ ನಡೆಯುತ್ತಿದೆ. ಕಳೆದ ವರ್ಷ ಭೀಕರ ಮುಸಲಧಾರೆಯಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆಂದೇ ಆಶೋದಯ ರೂ ೫೦,೦೦೦ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿತ್ತು.

ವೇಶ್ಯಾವಾಟಿಕೆ ನಮ್ಮ ವೃತ್ತಿ. ಇದನ್ನು ಸಮಾಜ ಒಪ್ಪಿಕೊಳ್ಳಬೇಕು. ಯಾರೂ ಕೂಡ ನಮ್ಮ ಮೇಲೆ ಕನಿಕರ ತೋರುವ ಅಗತ್ಯವಿಲ್ಲ. ಪ್ರಾಮಾಣಿಕ ಮಾರ್ಗದಲ್ಲೇ ನಾವು ನಮ್ಮ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಒತ್ತಾಯದ ಲೈಂಗಿಕ ಸಂಪರ್ಕಕ್ಕೆ ನಾವು ಮುಂದಾಗಿಲ್ಲ ಮತ್ತು ಯಾರ ಹಣವನ್ನೂ ಕಬಳಿಸಿಲ್ಲ ಎಂದು ಲಿಂಗಪರಿವರ್ತಿತ ಗಿರಿಜಾ ಹೇಳುತ್ತಾರೆ.

ವಿಶ್ವಬ್ಯಾಂಕ್ ನೀಡಿದ್ದ ರೂ. ೧.೫ ಲಕ್ಷ ನೆರವಿನಿಂದ ೨೦೦೮ರಲ್ಲಿ ಹೊಟೇಲ್ ಆಶೋದಯ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಲೈಂಗಿಕ ಕಾರ್ಯಕರ್ತರು ತಮ್ಮ ಮನೋಧರ್ಮವನ್ನೇ ಬದಲಿಸಿಕೊಂಡಿದ್ದಾರೆ. ಹಲವರಲ್ಲಿ ಕೀಳರಿಮೆ ಮಾಯವಾಗಿದೆ. ತಾವೂ ಸಮಾಜದ ಒಂದು ಭಾಗವಾಗಿದ್ದೇವೆ ಎಂಬ ಹರ್ಷ ರಾರಾಜಿಸುತ್ತಿದೆ. ಬದುಕನ್ನು ಕಟ್ಟುವಲ್ಲಿ ಸೋತು ಹೆಣಗಾಡುವ ಲೈಂಗಿಕ ಕಾರ್ಯಕರ್ತರಿಗೆ ಭರವಸೆಯ ಬೆಳಕಿಂಡಿಯಾಗಿರುವ ಮೈಸೂರಿನ ಆಶೋದಯ ಶೋಷಿತ ವರ್ಗಕ್ಕೆ ಹೊಸ ಬದುಕೊಂದನ್ನು ಕಟ್ಟಿಕೊಟ್ಟಿದೆ.

Thursday, 9 September 2010

ಬಡವನ ಮೇಲೆ ಬುಲ್ಡೋಜರ್

‘ಅಭಿವೃದ್ಧಿ ಹೆಸರಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ವಿಶೇಷ ವಿತ್ತ ವಲಯ ನಿರ್ಮಾಣಕ್ಕಾಗಿ ಎರಡನೇ ಹಂತದ ೨೦೩೫ ಎಕರೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಕೆಐಎಡಿಬಿ ತನ್ನ ‘ಕರ್ತವ್ಯಕ್ಕೆ ಸಿದ್ಧಗೊಂಡಿದೆ. ಹಳ್ಳಿಗರೂ ಕೂಡ ‘ಯುದ್ಧಕ್ಕೆ ಸಿದ್ಧರಾಗಿದ್ದಾರೆ

ಒಂಜಿ ಸಾಮಾನು ದಾದಾಂಡಲ ದೀಕ ಪಂಡ ಜಾಗ ಇಜ್ಜಿ ಮಾರ್ರೆ... ತೂಲೆ ಇರೆಗ್ ಕೊರ್ನ ಪೆಲಕ್ಕಾಯಿನ್ ಸೊಳೆ ಪಾಡ್ರೆ ತಡ್ಪೆ ಸಮೆತ ಇಜ್ಜಿ (ಏನಾದರೂ ಸಾಮಗ್ರಿ ಇಡೋಣ ಎಂದರೆ ಈಗ ಜಾಗವಿಲ್ಲ... ನಿಮಗೆ ಕೊಟ್ಟ ಹಲಸಿನ ಸೊಳೆಯನ್ನು ಇಡಲು ಒಂದು ತಡ್ಪೆ ಕೂಡ ಇಲ್ಲ) ಎಂದು ಮೇರಿ ಪತ್ರಾವೋ ಅವರು ಅಡುಗೆ ಕೋಣೆ ಬಳಿ ನಿಂತು ತಮ್ಮ ಸೆರಗಿನಿಂದ ಕಣ್ಣೀರನ್ನು ಒರೆಸುತ್ತಿದ್ದ ದೃಶ್ಯವೇ ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ತಂದಿಟ್ಟಿರುವ ಅವಾಂತರಗಳನ್ನು ಬಯಲುಗೊಳಿಸಿದ್ದವು.ಮೇರಿ ಪತ್ರಾವೋ ಗ್ರೆಗರಿ ಪತ್ರಾವೋ ಅವರ ತಾಯಿ. ಏಪ್ರಿಲ್ ೨೮ರಂದು ಕೆಐಎಡಿಬಿ ಅಧಿಕಾರಿಗಳ ನೇತೃತ್ವದಲ್ಲಿ ಮನೆ ಕೆಡವಲು ಮುಂದಾಗಿದ್ದ ಅಧಿಕಾರಿಗಳನ್ನು ಗ್ರೆಗರಿ ಕುಟುಂಬ ಅಂಗಲಾಚಿ ಬೇಡಿಕೊಂಡಿದ್ದರೂ, ಆ ಮನೆಯನ್ನು ನೆಲಸಮಗೊಳಿಸಲಾಗಿತ್ತು. ಕೆಐಎಡಿಬಿ, ಮೇರಿ ಪತ್ರಾವೋ ಸೇರಿದಂತೆ ಅವರ ಕುಟುಂಬದ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪ ಮಾಡಿ ಪ್ರಕರಣವನ್ನೂ ದಾಖಲಿಸಿತ್ತು. ನಾನು ಮನೆಯನ್ನು ಕೆಡವಬೇಡಿ ಎಂದು ವಿರೋಧ ವ್ಯಕ್ತಪಡಿಸಿದಾಗ ಆ ಜನ ನನ್ನ ಕೈಯನ್ನು ಹಿಡಿದು ಎಳೆದಿದ್ದರ ನೋವು ನನಗೆ ಇಂದೂ ಕಾಡುತ್ತಿದೆ ಎಂದು ೭೫ ವರ್ಷದ ಮೇರಿ ಪತ್ರಾವೋ ನೋವು ಹಂಚಿಕೊಂಡರು.




ಸಾವಯವ ಕೃಷಿ ಮೂಲಕ ಜೀವನಕ್ಕೆ ಒಂದು ಪ್ರಾಮಾಣಿಕ ದಾರಿ ಕಂಡುಕೊಂಡಿದ್ದ ಹೋರಾಟ ಮನೋಭಾವದ, ಸ್ವಾವಲಂಬಿ ಕೃಷಿಕ ಗ್ರೆಗರಿ ಪತ್ರಾವೋ. ಆದರೆ ಯಾವಾಗ ಅವರ ಜಮೀನಿನ ಮೇಲೆ ಎಸ್‌ಇಝಡ್, ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ಕರಾಳ ಕಣ್ಣುಗಳು ಬಿದ್ದವೋ ಅಂದಿನಿಂದ ಪತ್ರಾವೋ ಕುಟುಂಬ ನೆಮ್ಮದಿಯಾಗಿ ಉಂಡಿಲ್ಲ. ಅಂತಿಮವಾಗಿ ಇದೇ ವರ್ಷದ ಏಪ್ರಿಲ್ ೨೮ರಂದು ಕೆಐಎಡಿಬಿ ಮನೆ ಕೆಡವಲು ಯಾವುದೇ ಮುಂಚಿತ ಮಾಹಿತಿ ನೀಡದೆ ಮತ್ತು ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಏಕಾಏಕಿಯಾಗಿ ಬಂದು ಪತ್ರಾವೋ ಕುಟುಂಬದ ಮನೆಯನ್ನೇ ಧ್ವಂಸಗೊಳಿಸಿತು. ಗ್ರೆಗರಿ ಪತ್ರಾವೋ ಪ್ರಕಾರ ಮನೆಯ ಪಂಚನಾಮೆಯನ್ನೂ ಮಾಡಲಾಗಿಲ್ಲ. ಮೇರಿ ಪತ್ರಾವೋ ಅವರು ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಪೆಟ್ಟಿಗೆಯಲ್ಲಿದ್ದ ೮೦ ಸಾವಿರ ಹಣ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಾರೆ. ಕನಿಷ್ಠ ಅವುಗಳನ್ನು ಸುಭದ್ರವಾಗಿ ತೆಗೆದಿಟ್ಟುಕೊಳ್ಳಲು ಅವಕಾಶವನ್ನೂ ನೀಡಲಿಲ್ಲ ಎನ್ನುತ್ತಾರೆ ಗ್ರೆಗರಿ ಪತ್ರಾವೋ.

ಕೃಷಿ ಕುಟುಂಬ ಎಂದ ಮೇಲೆ ಅವರ ಮನೆಯಲ್ಲಿ ಜಾನುವಾರುಗಳು ಸೇರಿದಂತೆ ಕೃಷಿ ಮಾಡಲು ಬೇಕಾದ ಎಲ್ಲಾ ಸಾಮಗ್ರಿಗಳು ಇರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿದ ಕೆಐಎಡಿಬಿ ಅದೇ ದಿನ ಪತ್ರಾವೋ ಕುಟುಂಬವನ್ನು ಎಸ್‌ಇಝಡ್ ಪರ ಕೆಲಸ ಮಾಡುತ್ತಿರುವ ಗುತ್ತೇದಾರ ಯಾದವ ಕೋಟ್ಯಾನ್ ಅವರ ಮನೆಯಲ್ಲಿ ಉಳಿದುಕೊಳ್ಳುವಂತೆ ಸೂಚಿಸಿತು. ಆ ಹೊತ್ತಿಗೆ ಗ್ರೆಗರಿ ಮನೆಯಲ್ಲಿದ್ದ ಸಾಮಗ್ರಿಗಳನ್ನಲ್ಲಾ ಕೋಟ್ಯಾನ್ ನಿವಾಸಕ್ಕೆ ಕೊಂಡೊಯ್ದಾಗಿತ್ತು. ಆದರೆ ಬೇರೆ ಗ್ರಾಮದಲ್ಲಿರುವ ಕೋಟ್ಯಾನ್ ನಿವಾಸಕ್ಕೆ ತೆರಳಲು ನಿರಾಕರಿಸಿದ ಪತ್ರಾವೋ ಆ ರಾತ್ರಿಯಂದು ಧೋ ಎಂದು ಸುರಿಯುತ್ತಿದ್ದ ಮಳೆಯೊಂದಿಗೆ ಮರವೊಂದರ ಅಡಿಯಲ್ಲೇ ದಿನ ಕಳೆದರು. ಪರಿಣಾಮವಾಗಿ ಅಸ್ವಸ್ಥಗೊಂಡಿದ್ದ ಮೇರಿ ಪತ್ರಾವೋ ಮಾರನೇ ದಿನ ಆಸ್ಪತ್ರೆ ಸೇರಿದ್ದರು. ನಂತರದ ೧೫ ದಿನಗಳನ್ನು ನೆಲಸಮಗೊಂಡಿದ್ದ ಮನೆಯ ಬಳಿಯೇ ಇರುವ ಸಣ್ಣ ತಗಡಿನ ಶೆಡ್ಡಲ್ಲೇ ತಮ್ಮ ೨ ಕೋಣ, ೨ ಎತ್ತು, ಆರು ದನ, ೩ ಕರು, ೪ ನಾಯಿ, ೫೦-೬೦ ಕೋಳಿ ಮತ್ತು ೨ ಪ್ರೀತಿಯ ಬೆಕ್ಕುಗಳೊಂದಿಗೆ ಪತ್ರಾವೋ ಕುಟುಂಬ ಅಲ್ಲೇ ದಿನಕಳೆಯಿತು.
ಒಟ್ಟಾರೆ ಪತ್ರಾವೋ ಕುಟುಂಬ ಇಂದು ದಿಕ್ಕಾಪಾಲಾಗಿ, ತಮ್ಮ ಹಳೆ ಮನೆಯ ಬಳಿ ಇರುವ ಶೆಡ್ಡೊಂದರಲ್ಲಿ ದಿನದೂಡುತ್ತಿದೆ. ಆ ಶೆಡ್ಡಿಗೆ ಟಿಎಸ್‌ಐ ಭೇಟಿ ನೀಡಿದ್ದಾಗ ಮನೆ ಮುಂದೆಯೇ ಕೋಳಿಗಳು, ನಾಯಿ, ಬೆಕ್ಕುಗಳು ಅತ್ತಿತ್ತ ಓಡಾಡುತ್ತಿದ್ದವು. ಅವುಗಳಿಗೆ ಉಳಿದುಕೊಳ್ಳಲು ಬೇರೆ ಜಾಗವಿಲ್ಲ.




ನನ್ನ ಜಾಗವನ್ನು ಬಿಟ್ಟು ನಾನು ಎಲ್ಲಿಗೂ ಕದಲುವುದಿಲ್ಲ ಎಂದು ಗ್ರೆಗರಿ ಹೇಳುವುದಕ್ಕೂ ಕಾರಣವಿದೆ. ಅವರು ಮಾಡಿರುವ ಕೃಷಿ ಪ್ರತಿಯೊಬ್ಬ ರೈತನಿಗೂ ಮಾದರಿ ಎಂದರೆ ಅತಿಶಯೋಕ್ತಿ ಎನಿಸದು. ಗ್ರೆಗರಿ ಅವರು ಹೇಳಿದಂತೆಯೇ ಅವರು ತಮ್ಮ ಜಮೀನಿನಲ್ಲಿ ಸುಮಾರು ೪೦೦೦ ಅಡಿಕೆ ಮರ, ೨೫೦ ತೆಂಗಿನ ಮರ, ೨೦೦೦ ವೆನಿಲಾ ಬಳ್ಳಿ, ೨೫೦ ಬಾಳೆಗಿಡ, ೫೦೦ ವೀಳ್ಯದ ಎಲೆ ಬಳ್ಳಿ, ಮೂರು ಕಾಲದಲ್ಲೂ ಬೆಳೆಯಲಾಗುವ ಭತ್ತ, ೧೦೦೦ ಗೇರು ಮರ, ೬೫ ಮಾವಿನ ಮರ, ೫೦-೬೦ ಹಲಸಿನ ಮರ, ೧೫ ಹುಣಸೆ ಮರ, ೨-೩ ಸಂಪಿಗೆ ಮರ, ೫೦ ಪುನರ್ಪುಳಿ ಮರ, ೨೫ ನೊರೆಕ್ಕಾಯಿ ಮರ, ೫೦ ಮಲ್ಲಿಗೆ ಗಿಡ, ೭-೮ ಪಪ್ಪಾಯಿ ಮರ, ೫೦ ಹೆಬ್ಬಲಸು, ೧೨ ಜೀಗುಜ್ಜೆ ಮರ ಸೇರಿದಂತೆ ಹಲವು ಕೃಷಿ ಮಾಡಿದ್ದಾರೆ. ಹಾಗಿರುವಾಗ ಸರ್ಕಾರ ೨.೨೪ ಕೋಟಿ ರೂ ಹಣ ಕೊಟ್ಟರೂ ಅದು ನನಗೆ ಬೇಡ ಎನ್ನುವ ಗ್ರೆಗರಿ ಮಾತಿನಲ್ಲಿ ಖಂಡಿತಾ ತಥ್ಯವಿದೆ.




ಹಾಗೆ ನೋಡಿದರೆ ಏಕ ಬೆಳೆ ಬೆಳೆವ ಅಥವಾ ಬರಡು ಭೂಮಿಯಲ್ಲಿ ಮಾತ್ರ ಕೈಗಾರಿಕೆಗಳನ್ನು ನಡೆಸಬೇಕು ಎಂದು ಕಾನೂನಿದೆ. ಹಾಗಾದರೆ ಈ ಕಾನೂನು ಗ್ರೆಗರಿ ಪತ್ರಾವೋ ಕುಟುಂಬಕ್ಕೆ ಏಕೆ ಅನ್ವಯವಾಗಿಲ್ಲ?

ಅಂತಿಮವಾಗಿ ರೈತನೊಬ್ಬ ದಶಕಗಳಿಂದಲೂ ಭೂಮಿ ನೀಡುವುದಿಲ್ಲ ಎಂದು ಎಸ್‌ಇಝಡ್, ಎಂಆರ್‌ಪಿಎಲ್ ಮತ್ತು ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಇಲಾಖೆ) ವಿರುದ್ಧ ಹೋರಾಟ ನಡೆಸಿದ್ದರ ಫಲವಾಗಿ ದೊರೆತ ಪುರಸ್ಕಾರ ಇದು! ೧೮೮೬ರ ಇಸವಿಯ ಹಂಚನ್ನು ಬಳಸಿ ಕಟ್ಟಿದ್ದ ಮನೆ ಇಂದು ನಾಮಾವಶೇಷವಾಗಿ ನೆಲಸಮಗೊಂಡಿದ್ದರೂ ಕೆಐಎಡಿಬಿ ಮನೆ ಧ್ವಂಸಗೊಳಿಸಲು ಬಳಸಿಕೊಂಡಿದ್ದ ಮಾರ್ಗ ಮಾತ್ರ ನಿಜಕ್ಕೂ ಪ್ರಶ್ನಾರ್ಹ. ಕೆಐಎಡಿಬಿ ಮತ್ತು ಪೊಲೀಸರು ಬಂದಿದ್ದ ವೇಳೆ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಉಲ್ಲಾಸ್ ಭಂಡಾರಿ ಮತ್ತು ರಾಜೇಶ್ ಅಲಿಯಾಸ್ ಜೂನಿಯರ್ ಉಪೇಂದ್ರ ಎಂದು ಖ್ಯಾತಿವೆತ್ತ ಗೂಂಡಾಗಳು ಏತಕ್ಕಾಗಿ ಗ್ರೆಗರಿ ನಿವಾಸದ ಬಳಿ ಬಂದಿದ್ದರು? ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಅವರು ತಮ್ಮ ಕೆಲಸಕ್ಕೆ ಗೂಂಡಾಗಳನ್ನು ಬಳಸಿಕೊಂಡದ್ದು ವಿಡಿಯೋ ಚಿತ್ರೀಕರಣದಲ್ಲೂ ಸಾಬೀತಾಗಿದೆ. ಆದರೆ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಈ ಗೂಂಡಗಳು ಯಾರೆಂದೇ ಗೊತ್ತಿಲ್ಲ!



ಅಭಿವೃದ್ಧಿಗಾಗಿ ಪತ್ರಾವೋ ಕುಟುಂಬ ತನ್ನ ಭೂಮಿಯನ್ನು ಕೊಟ್ಟಿರುವ ಬಗೆಯನ್ನು ಒಮ್ಮೆ ಗಮನಿಸಿ: ಮೇರಿ ಪತ್ರಾವೋ ಅವರು ತೋಕೂರಿನಲ್ಲಿದ್ದ ತಮ್ಮ ೨.೪೦ ಎಕರೆ ಭೂಪ್ರದೇಶವನ್ನು ಕೊಂಕಣ ರೈಲ್ವೇ ಯೋಜನೆಗೆ, ಹಾಗೇ ತಕೂರಿನಲ್ಲಿದ್ದ ೨.೬೨ ಎಕರೆ ಪ್ರದೇಶವನ್ನು ಜಾಸ್ಕೋ ಸಂಸ್ಥೆಗೆಂದು ನೀಡಿದ್ದಾರೆ. ಆದರೆ ಆ ಪ್ರದೇಶವನ್ನು ಬಳಿಕ ನಾಗಾರ್ಜುನ ಯೋಜನೆಗೆ ಹಸ್ತಾಂತರಿಸಲಾಯಿತು. ೧೯೮೪ರಲ್ಲಿ ಕೆಐಎಡಿಬಿ ಎಂಆರ್‌ಪಿಎಲ್‌ಗೆಂದು ಪತ್ರಾವೋ ಅವರ ೧೪.೨೭ ಎಕರೆ ಭೂಮಿಯನ್ನು ನೀಡಲು ನೊಟೀಸ್ ಜಾರಿ ಮಾಡಿತು. ೧೯೯೬ರಲ್ಲಿ ಎಂಆರ್‌ಪಿಎಲ್ ೧೪.೨೭ ಎಕರೆ ಪ್ರದೇಶದಲ್ಲಿನ ೫೨ ಸೆಂಟ್ಸ್ ಜಾಗವನ್ನು ವಶಪಡಿಸಿಕೊಂಡಿತು. ೨೦೦೯ರಲ್ಲಿ ೧.೪೫ ಎಕರೆ ಭೂಪ್ರದೇಶ ಯುಪಿಸಿಎಲ್ (ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್) ಯೋಜನೆಗೆ ನಿಗದಿಯಾಯಿತು. ಈ ಮಧ್ಯೆ ೨೦೦೭ರಲ್ಲಿ ಕೆಐಎಡಿಬಿ ಹಲವು ವಿವಿಧ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಬರುವ ಪೆರ್ಮುದೆ ಹಾಗೂ ಕಳವಾರು ಗ್ರಾಮದ ೧೭೧ ಎಕರೆ ಭೂಪ್ರದೇಶವನ್ನು ಎಸ್‌ಇಝಡ್‌ಗೆ ಹಸ್ತಾಂತರಿಸುವುದಾಗಿ ನೊಟೀಸ್ ಜಾರಿ ಮಾಡಿತು. ಅದರಲ್ಲಿ ಗ್ರೆಗರಿ ಅವರ ಭೂಮಿಗೂ ನೊಟೀಸ್ ಜಾರಿಯಾಗಿತ್ತು. ಆದರೆ ಇಂದು ಅವರ ಮನೆ ನೆಲಸಮಗೊಂಡಿರುವುದು ಎಂಆರ್‌ಪಿಎಲ್ ಯೋಜನೆ ವಿಸ್ತರಣೆಗಾಗಿ.

ಈ ಬಗ್ಗೆ ವಿಶೇಷ ಭೂಸ್ವಾಧೀನ ಅಧಿಕಾರಿ ಕೃಷ್ಣಮೂರ್ತಿ ಅವರಲ್ಲಿ ಕೇಳಿದರೆ, ಎಸ್‌ಇಝಡ್ ಈ ಭೂಮಿಯನ್ನು ನಮಗೆ ಸರಂಡರ್ ಮಾಡಿತು. ಹಾಗಾಗಿ ಇದನ್ನು ಎಆರ್‌ಪಿಎಲ್ ಬಳಸಿಕೊಳ್ಳಲಿದೆ ಎಂದರು. ಒಟ್ಟಾರೆ ಈ ಎಲ್ಲಾ ಭೂ ಹಸ್ತಾಂತರ ಹಾಗೂ ದಶಕಗಳ ಕಾಲದ ಹೋರಾಟದಿಂದ ಕಂಗೆಟ್ಟಿರುವ ಗ್ರೆಗರಿ ತಮ್ಮಲ್ಲಿ ಒಂದು ರಾಶಿ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಕೋರ್ಟು-ಕಚೇರಿ ಎಂದು ಇಂದಿಗೂ ತಿರುಗಾಡುತ್ತಲೇ ಇದ್ದಾರೆ.

ಕೆಐಎಡಿಬಿ ಅಮಾನವೀಯ, ಅನಾಗರಿಕ ವರ್ತನೆಗೆ ಶಿಕ್ಷೆಯಾಗಲೇಬೇಕು, ರೈತನ ಬದುಕಿನ ಸ್ವರೂಪವನ್ನೇ ಹಾಳು ಮಾಡಿದ ಇವರು ಖಂಡಿತಾ ಮನುಷ್ಯರಲ್ಲ, ರಾಕ್ಷಸರು. ರೈತರ ಶಾಪ ಇವರಿಗೆ ತಟ್ಟದೆ ಇರುವುದಿಲ್ಲ ಎಂದು ಗುಡುಗುತ್ತಾರೆ ಪತ್ರಾವೋ. ಪತ್ರಾವೋ ಕುಟುಂಬ ಕರ್ತವ್ಯಕ್ಕೆ ಅಡ್ಡಿಪಡಿಸಿತು ಎಂದು ಕೆಐಎಡಿಬಿ ಮೇರಿ ಪತ್ರಾವೋ ವಿರುದ್ಧ ಕೇಸು ದಾಖಲು ಮಾಡಿದ್ದರೂ, ನಾವು ಕೇಸು ದಾಖಲು ಮಾಡಿಯೇ ಇಲ್ಲ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿ ಎಸ್. ಕೃಷ್ಣಮೂರ್ತಿ ಟಿಎಸ್‌ಐಗೆ ತಿಳಿಸಿದ್ದಾರೆ. ಏಪ್ರಿಲ್ ೨೯ರಂದು ಅವರು ಕೇಸು ದಾಖಲು ಮಾಡಿದ್ದಾರೆಂದೇ ನಾವು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದು ಎನ್ನುತ್ತಾರೆ ಗ್ರೆಗರಿ ಪತ್ರಾವೋ. ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ೨೫ ದಿನಗಳ ನಿರಂತರ ಉಪವಾಸ ಸತ್ಯಾಗ್ರಹ ಮಾಡಿದ್ದ ಗ್ರೆಗರಿ ಮನೆ ಧ್ವಂಸ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ.

ಗಮನಿಸಬೇಕಾದ ಅಂಶ ಎಂದರೆ ಪತ್ರಾವೋ ಕುಟುಂಬ ಭೂಮಿ ಕಳೆದುಕೊಂಡಿರುವುದು ಮೊದಲನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ. ಈ ಹಂತಕ್ಕೆ ಈಗಾಗಲೇ ೧೮೦೦ ಎಕರೆ ಭೂಮಿ ವಶಪಡಿಸಿಕೊಂಡಾಗಿದ್ದು ಅಲ್ಲಿ ದೊಡ್ಡ ಮಟ್ಟದ ಕೈಗಾರಿಕೆಗಳೂ ಆರಂಭವಾಗಿವೆ.

ಎರಡನೇ ಹಂತದಲ್ಲಿ ೨೦೩೫ ಎಕರೆ ಭೂ ಸ್ವಾಧೀನಕ್ಕೆ ಈಗಾಗಲೇ ಕೆಐಎಡಿಬಿ ಸಿದ್ಧತೆ ಮಾಡಿಕೊಂಡಿದ್ದು ಹಲವಾರು ಕುಟುಂಬಗಳು ತಮ್ಮ ಕೃಷಿ ಪ್ರದೇಶಗಳನ್ನು ಕಳೆದುಕೊಳ್ಳಲಿವೆ. ಕುಡುಬಿ ಜನಾಂಗದವರು ನೆಲೆಸಿರುವ ಕುಡುಬಿಪದವಿನಲ್ಲಿನ ೧೫.೩೪ ಎಕರೆ ಭೂಪ್ರದೇಶವನ್ನು ಅದಾಗಲೇ ಎರಡು ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಗಿದೆ. ಆ ಜನಾಂಗದ ಭೂಮಿ ಸೇರಿದಂತೆ ಹಲವು ಕುಟುಂಬಗಳ ಬದುಕೇ ಬಂಜರಾಗಿಬಿಟ್ಟಿದೆ.

ಪೆರ್ಮುದೆ ಗ್ರಾಮದಲ್ಲಿನ ಸುಮಾರು ೭ ಎಕರೆ ಪ್ರದೇಶದಲ್ಲಿ ಅತ್ಯಂತ ಸುಂದರ ಮಾದರಿಯಲ್ಲಿ ಕೃಷಿ ಮಾಡಿಕೊಂಡಿರುವ ಲಾರೆನ್ಸ್ ಅವರ ಮನೆ ಬಳಿ ತೆರಳಿದರೆ ಹಚ್ಚಹಸಿರು ಎದ್ದುಕಾಣುತ್ತದೆ. ಅವರು ಮಾಡಿರುವ ಕೃಷಿ ನಮಗೆಲ್ಲಾ ಮಾದರಿ ಎಂದು ಹೇಳುವ ಪೆರ್ಮುದೆಯ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಉಪಾಧ್ಯಾಯರು ನಾನು ಖಂಡಿತಾ ಈ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅದೇನೆ ಆಗಲಿ ನಾವು ಹೋರಾಟಕ್ಕೆ ಸಿದ್ಧ ಎನ್ನುತ್ತಾರೆ. ನಮ್ಮ ಮಾತುಕತೆಯನ್ನು ಗಮನಿಸುತ್ತಿದ್ದ ಉಪಾಧ್ಯಾಯರ ೮೩ ವರ್ಷದ ತಾಯಿ ವರದ ಅವರು, ನಾನು ಸತ್ತರೆ ಇಲ್ಲೇ ಸಾಯುವುದು. ನನ್ನ ಪ್ರಾಣವನ್ನಾದರೂ ನೀಡುವೆ, ಆದರೆ ಭೂಮಿಯನ್ನಲ್ಲ. ಇದೇನು ಅವರ ಅಪ್ಪನ ಮನೆ ಆಸ್ತಿಯಾ ಎಂದು ಪ್ರಶ್ನಿಸಿದರು. ಆದರೆ ಕೆಐಎಡಿಬಿ ಪ್ರಕಾರ ಇಲ್ಲಿರುವುದು ಫಲವತ್ತಾದ ಭೂಮಿ ಅಲ್ಲ. ಬೆಟ್ಟಗುಡ್ಡಗಳಿಂದ ಕೂಡಿದ್ದ ಭೂಮಿಯಲ್ಲಿ ನೀವೆಂತಹ ಕೃಷಿ ಮಾಡುತ್ತೀರಿ ಎಂಬುದು ಕೆಐಎಡಿಬಿ ಅಧಿಕಾರಿಗಳ ಪ್ರಶ್ನೆ. ಆದರೆ ವಾಸ್ತವ ಹಾಗಿಲ್ಲ, ಅದು ಫಲವತ್ತಾದ ಜಾಗವೇ ಎಂಬುದು ಕೆಐಎಡಿಬಿಗೂ ಗೊತ್ತು, ಎಸ್‌ಇಝಡ್‌ಗೂ ಗೊತ್ತು. ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಕುಟುಂಬಗಳಿಗೂ ಗತಿಯೂ ಗ್ರೆಗರಿ ಪತ್ರಾವೋ ಕುಟುಂಬಕ್ಕೇ ಉಂಟಾದ ಗತಿಯಾದಲ್ಲಿ ಅಚ್ಚರಿಯೇನಿಲ್ಲ ಬಿಡಿ.


ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನ!
ಎಂಎಸ್‌ಇಝಡ್ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳು ಅಂದರೆ ಕೈಗಾರಿಕೆಗಳಿಗೆ ಭೂಮಿ ನೀಡಿರುವ ಕುಟುಂಬದವರಿಗೆ ಉದ್ಯೋಗ ನೀಡಲಿದ್ದೇವೆ ಎಂದು ಎಸ್‌ಇಝಡ್ ಭರವಸೆ ನೀಡಿತ್ತು. ಇದಕ್ಕಾಗಿ ೧೦ನೇ ತರಗತಿ ಪಾಸಾಗಿರುವ ಅಲ್ಲಿನ ಕುಟುಂಬದ ಮಕ್ಕಳಿಗೆ ಮಂಗಳೂರಿನ ಯೆಯ್ಯಾಡಿ ಬಳಿ ಇರುವ ಕೆಪಿಟಿ (ಕರ್ನಾಟಕ ಪಾಲಿಟೆಕ್ನಿಕ್)ಯಲ್ಲಿ ವಿಶೇಷವಾಗಿ ಸ್ಪೆಷಲ್ ಕೋರ್ಸಸ್ ಇನ್ ಕೆಮಿಕಲ್, ಮೆಕ್ಯನಿಕಲ್ ಅಂಡ್ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಷಯದಲ್ಲಿ ಮೂರು ವರ್ಷಗಳ ತರಬೇತಿ ಶಿಕ್ಷಣವನ್ನು ನೀಡುತ್ತಿದೆ. ಈಗಾಗಲೇ ಶಿಕ್ಷಣದ ೫ ಸೆಮೆಸ್ಟರ್‌ಗಳು ಮುಗಿದಿದ್ದು ಒಂದು ಸೆಮೆಸ್ಟರ್ ಬಾಕಿ ಇದೆ. ಆದರೆ ಸಮಸ್ಯೆ ತಲೆದೋರಿರುವುದು ಶಿಕ್ಷಣದಲ್ಲಲ್ಲ. ಆದರೆ ನೀಡಿದ್ದ ಉದ್ಯೋಗ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಲಿದೆ ಎಂಬುದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿದೆ.

ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮಾತನಾಡಿಸಲೆಂದು ಟಿಎಸ್‌ಐ ‘ಕೆಪಿಟಿಗೆ ಭೇಟಿ ನೀಡಿದ್ದಾಗ ಅಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಆ ಕಾಲೇಜಿನ ಪ್ರಾಂಶುಪಾಲರಲ್ಲಿ ಕೇಳಿದಾಗ, ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ ಎಂದರು.
ಎಲ್ಲಾ ಮಕ್ಕಳಿಗೆ ಉದ್ಯೋಗ ದೊರಕುವುದು ಸಾಧ್ಯವಿಲ್ಲ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆ. ಎಸ್‌ಇಝಡ್ ತನ್ನ ನಿರೀಕ್ಷೆಯ ಪ್ರಮಾಣದಷ್ಟು ಅಭಿವೃದ್ಧಿ ಸಾಧಿಸಲು ವಿಫಲವಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ನೀಡಲಾಗುತ್ತಿರುವ ಶಿಕ್ಷಣದ ಅವಧಿಯೂ ಕೊನೆಗೊಳ್ಳುವ ದಿನಗಳು ದೂರವಿಲ್ಲ. ಹಾಗಾಗಿ ಮನನೊಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಎಸ್‌ಇಝಡ್ ನೇರ ಹೊಣೆಯಾಗಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸಿದ ‘ಕೆಪಿಟಿಯ ಓರ್ವ ಸಿಬ್ಬಂದಿ.

ಕಾಲೇಜು ನೀಡಿರುವ ದಾಖಲೆ ಪ್ರಕಾರ ಇಲ್ಲಿ ಎಂಎಸ್‌ಇಝಡ್ ವ್ಯಾಪ್ತಿಗೆ ಒಳಪಟ್ಟ ೪೦೯ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ೩೧೯ ವಿದ್ಯಾರ್ಥಿ ಮತ್ತು ೮೯ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಟಿಎಸ್‌ಐ ಭೇಟಿ ನೀಡಿದ್ದ ಒಂದು ದಿನದ ನಂತರ ಅಂದರೆ ಜುಲೈ ೨೭ರಂದು ತಮ್ಮ ತರಗತಿ ಬಹಿಷ್ಕಾರ ಹಿಂತೆಗೆದುಕೊಂಡಿದ್ದರು. ಪೆರ್ಮುದೆಯ ಸಂಯುಕ್ತ ಹಿತರಕ್ಷಣಾ ಸಮಿತಿ, ಎಸ್‌ಇಝಡ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಮುಖ್ಯಮಂತ್ರಿಯವರ ಆಪ್ತಸಹಾಯಕ ಹಾಗೂ ಎಂಎಸ್‌ಇಝಡ್‌ನ ನಿರ್ದೇಶಕ ಮತ್ತು ಸಂಯೋಜಕ ಐ.ಎಸ್.ಎನ್. ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹಾಗೇ ಇನ್ನು ೧೦-೧೨ ದಿನಗಳೊಳಗಾಗಿ ತಾವು ಅಲ್ಲಿಗೆ ಬರುವುದಾಗಿಯೂ ಅವರು ಹೇಳಿದ್ದರು ಎನ್ನಲಾಗಿದೆ.

ಟಿಎಸ್‌ಐಗೆ ಮಾಹಿತಿ ನೀಡಿದ ಸಿಬ್ಬಂದಿ ಪ್ರಕಾರ ಎಂಎಸ್‌ಇಝಡ್ ವಿದ್ಯಾರ್ಥಿಗಳಿಗೆ ಎಂಎಸ್‌ಇಝಡ್‌ನಲ್ಲಿ ಬಿಟ್ಟರೆ ಬೇರೆಲ್ಲೂ ಕೆಲಸ ಸಿಗುವುದು ತುಂಬಾ ಕಷ್ಟದ ಮಾತು. ಏಕೆಂದರೆ ಅವರಲ್ಲಿ ಕೈಗಾರಿಕೆಗೆ ಬೇಕಾಗುವ ಕೌಶಲ್ಯ ಇಲ್ಲ. ಹಾಗೇ ಅವರಿಗೆ ಕಡಿಮೆ ಅಂಕಗಳನ್ನು ನೀಡಬಾರದು ಎಂದು ಎಸ್‌ಇಝಡ್ ತಾಕೀತು ಮಾಡಿದೆ. ಒಟ್ಟಾರೆ ಕೆಪಿಟಿಯಲ್ಲಿ ಬೋಧಿಸುತ್ತಿರುವ ಉಪನ್ಯಾಸಕರು ಈ ಕೆಲಸಕ್ಕೆ ಹೆಚ್ಚುವರಿ ವೇತನ ಪಡೆಯುತ್ತಿದ್ದಾರೆ. ಸಂಸ್ಥೆಗೂ ಕೂಡ ಲಾಭವಾಗಿದೆ. ನಷ್ಟವಾಗುವುದು ಮಾತ್ರ ಖಂಡಿತಾ ವಿದ್ಯಾರ್ಥಿಗಳಿಗೆ. ಏಕೆಂದರೆ ಇಲ್ಲಿನ ಸರ್ಟಿಫಿಕೇಟ್‌ನ್ನು ಹಿಡಿದುಕೊಂಡು ಹೋದರೆ ಖಂಡಿತ ಅವರಿಗೆ ಬೇರೆ ಕಡೆ ಉದ್ಯೋಗ ಸಿಗದು. ಇದು ಎಸ್‌ಇಝಡ್ ಅಧಿಕಾರಿಗಳು ಗ್ರಾಮಸ್ಥರು ಹಳ್ಳಿ ಜನರನ್ನು ತಮ್ಮ ವಿರುದ್ಧ ತಿರುಗಿಬೀಳದಂತೆ ಮಾಡಿಕೊಂಡಿರುವ ತಂತ್ರವಷ್ಟೇ.

ಒಟ್ಟಾರೆ ಕಡಲೂರಿನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಅಭಿವೃದ್ಧಿಯ ಹೆಸರಲ್ಲಿ ಹಳ್ಳಿಗರು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕೆಪಿಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿಬಿಟ್ಟಿದೆ. ಅದರ ನಡುವೆಯೇ ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು, ತೆಂಕ ಎಕ್ಕಾರಿನ ನಿವಾಸಿಗಳು ತಮ್ಮ ಮನೆಬಿಟ್ಟುಕೊಡಲು ಸಜ್ಜುಗೊಳ್ಳಬೇಕಿದೆ. ಮಂಗಳೂರಿನ ಹಳ್ಳಿಗಾಡಿನಲ್ಲಿ ಉಬ್ಬುಬ್ಬಿ ವಿಶಾಲವಾಗಿ ಹರಡಿ ಹೋಗಿದ್ದ ಹಚ್ಚಹಸಿರಿನ ವಸುಂಧರೆ ಎಸ್‌ಇಝಡ್, ಎಂಆರ್‌ಪಿಎಲ್ ಸೇರಿದಂತೆ ಕೈಗಾರಿಕಾ ಕಂಪನಿಗಳ ಕಬಂಧಬಾಹುಗಳಲ್ಲಿ ಸಿಲುಕಿ ತನ್ನ ದಿನಗಳನ್ನು ಎಣಿಸಿಕೊಳ್ಳಬೇಕಿದೆ.