ಅಬ್ಬಬ್ಬಾ ಎಂಥ ಮಾರಾಯ್ರೆ... ಏನು ಸೆಕೆ ಅಂತೀರಿ..? ಅಯ್ಯಯ್ಯೋ ಇದು ಬಾರೀ ಕಷ್ಟವಪ್ಪಾ. ಹೊಸದಾಗಿ ಈ ದೆಹಲಿಗೆ ಬಂದವರಿಗಂತೂ ಇಂತಹ ವಿಚಿತ್ರ ಸೆಕೆಯನ್ನು ಅನುಭವಿಸುವುದು ತೀರಾ ಕಷ್ಟ. ಅದರಲ್ಲಿ ನೀವಿನ್ನು ನೋಯ್ಡಾದಲ್ಲಿ ಬಂದು ನೆಲೆಸಲು ನಿರ್ಧರಿಸಿದರಂತೂ ಬಿಸಿಯ ಬೇಗೆಯನ್ನು ತಡೆಯಲಾರದೆ ಒಮ್ಮೆ ನಮ್ಮ ಊರಿಗೆ ಓಡಿ ಹೋಗುವ ಅಂಥ ಅನಿಸದಿದ್ದರೆ ಮತ್ತೆ ನೋಡೋಣ...

ಕಳೆದ ವರ್ಷ ಇದೇ ಹೊತ್ತಿಗೆ ದೆಹಲಿ ಹಾಗೂ ಉತ್ತರ ಭಾರತದ ಹಲವೆಡೆ ಒಳ್ಳೆ ಮಳೆಯಾಗಿತ್ತು. ಹಾಗಾಗಿ ಅಂಥಾ ವಿಪರೀತವಾದ ದೇಹವನ್ನೆಲ್ಲಾ ವಿಚಿತ್ರವಾಗಿ ಕಾಡುವಂತಹ ಸೆಕೆಯನ್ನು ಅನುಭವಿಸಬೇಕಾದಂಥ ದುರ್ಗತಿ ನಮಗೆ ಕಾಡಿರಲಿಲ್ಲ. ಸೆಕೆ ಪ್ರಮಾಣ ಅತ್ಯಂತ ಅಧಿಕ ಮಟ್ಟದಲ್ಲಿರುವಂಥ ಜೂನ್, ಜುಲೈನಂಥ ತಿಂಗಳಲ್ಲೂ ಒಳ್ಳೆ ಮಳೆಯಾಗಿದ್ದರಿಂದ ರಜಾಯಿ ಹೊದ್ದು ಮಲಗಿದ್ದ ನೆನಪು ಇನ್ನೂ ಇದೆ. ಆದರೆ ಇಂದು ಅದು ಯಾವುದರಾ ಅನುಭವ ಇದುವೆರೆಗೆ ಆಗೇ ಇಲ್ಲ. ಅದೂ ಅಲ್ಲದೆ ನೋಯ್ಡಾಕ್ಕೆ ಬಂದ ನಂತರ ಇಲ್ಲಿನ ಬರಡು ಬದುಕು, ಮರುಭೂಮಿಯಲ್ಲಿ ಇದ್ದಂಥ ಅನುಭವ ನಿಜಕ್ಕೂ ಹೊರಗಿನಿಂದ ಬಂದ ಜನರನ್ನು ವಾಪಸು ಊರಿಗೆ ಹೆಜ್ಜೆ ಹಾಕಲು ಪ್ರೇರೇಪಿಸಿದರೆ ಅದರಲ್ಲಿ ಅಚ್ಚರಿ ಪಡಬೇಕಾದದ್ದು ಏನೂ ಇಲ್ಲ ಬಿಡಿ. ನೋಯ್ಡಾ ಒಂದು ಮಹಾನ್ ಸಿಟಿ ಎಂದು ಕಂಡು ಬಂದರೂ ಇಲ್ಲಿರುವುದು ಬರೀ ಕಾಂಕ್ರಿಟ್ ಕಾಡು ಮಾತ್ರ. ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ಮುಗಿಲು ಮುಟ್ಟಿದ ಅಪಾರ್ಟ್‌ಮೆಂಟ್ ಕಟ್ಟಡಗಳು, ಮಿನುಗುವ ಶಿಪ್ರಾ ಮಾಲ್, ಜನರ ಸುಳಿಯಲ್ಲಿ ಹುದುಗಿಹೋಗಿರುವ ಅಟ್ಟಾ ಮಾರ್ಕೆಟ್ ಹಾಗೂ ಗ್ರೇಟ್ ಇಂಡಿಯಾ ಮಾಲ್...ಹೋ ನಾನು ರೋಮನ್ ಸಿಟಿಯಲ್ಲಿದ್ದೇನೋ ಎಂದು ಕಂಡು ಬಂದರೂ ದೆಹಲಿ ನೀಡಿದ Liveliness and refreshingly different scenario ಒಂದು ಕ್ಷಣವೂ ನನಗೆ ಇಲ್ಲಿ ಕಂಡುಬರಲಿಲ್ಲ. ಎಲ್ಲವೂ ಖಾಲಿ ಖಾಲಿ... ಕೆಲವೊಮ್ಮೆ ಮನಸ್ಸಿಗೆ ಖುಷಿ ನೀಡುವ ಮದ್ರಾಸ್ ಕೆಫೆ ಬಿಟ್ಟರೆ, ದುಬಾರಿ ಬೆಲೆಗಳ ದಿನಸಿಗಳು ಇಲ್ಲಿ ಯಾವಾಗಲೂ ನನ್ನ ಜೇಬನ್ನು ಮುಟ್ಟಿ ನೋಡುವಂತೆ ಮಾಡುತ್ತವೆ.

ದೆಹಲಿಯಲ್ಲಿದ್ದಾಗ ತರಕಾರಿ, ಮನೆ ಸಾಮಾನು ಸೇರಿದಂತೆ ಎಲ್ಲವೂ ತುಂಬಾ ಚೀಪ್ ಹಾಗೂ ಕೈಗೆಟಕುವಂಥ ಬೆಲೆಯಲ್ಲಿ ದೊರಕುತ್ತಿದ್ದವು. ಆದರೆ ಇಲ್ಲಿ ಹಾಗಿಲ್ಲ. ಸದಾ ಸನಿಹದಲ್ಲೇ ಇರುವ, ಈಗ ವಿಷವಾಗಿ ಹರಿಯುತ್ತಿರುವ ಯಮುನಾ ನದಿಯ ವಾಸನೆಯನ್ನು ಮೂಗಿನೊಳಗೆ ಎಳೆದುಕೊಂಡೆ ಏಳಬೇಕಾದ ದುಸ್ಥಿತಿ ನಮ್ಮದು. ಯಾರಾದರೂ ಯಮುನಾ ಇಂದಿಗೂ ಜೀವನದಿಯಾಗಿ ಹರಿಯುತ್ತಿದ್ದಾಳೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರೆ ಒಮ್ಮೆ ಇಲ್ಲಿ ಬಂದು ಇಣುಕುಹಾಕಿ ನೋಡಿ. ವಾಸ್ತವದ ಕಹಿಸತ್ಯಗಳು ಹಾಗೂ ಯಮುನಾಳ ಇಂದಿನ ನಿಜಮುಖ ಇಂದು ಬಯಲಾಗಿದೆ. Thanks to man made Developments! ಯಮುನಾಳನ್ನು ಅಕ್ಷರಶಃ ಅತ್ಯಾಚಾರ ಮಾಡಲಾಗಿದೆ ಎಂದರೂ ಖಂಡಿತಾ ತಪ್ಪೇನಿಲ್ಲ. ವಿಶಾಲವಾಗಿ ನದಿ ಹರಿಯಬೇಕಿದ್ದ ಪ್ರದೇಶಗಳಲ್ಲೆಲ್ಲಾ ಇಂದು ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿದ್ದು, ಮುಂಬರುವ ದುರಂತಕ್ಕೆ ನಾವಿಂದೇ ಸಾಕ್ಷಿಯಾಗಬೇಕಾದ ಅನಿವಾರ್ಯ ಸ್ಥಿತಿ ನಮ್ಮಮುಂದೆ ನಿಂತು ರುದ್ರ ನರ್ತನವಾಡುತ್ತಿದೆ.
ಈಗ ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ ನನಗೆ ಇಂದಿಗೂ ದೆಹಲಿ ಬೋರ್ ಹೊಡೆಸಿರಲಿಲ್ಲ. ಯಾವತ್ತೂ ಅತ್ತಿತ್ತ ತಿರುಗಾಡುತ್ತಲೇ ಇದ್ದೆ. ಸಿರಿಫೋರ್ಟ್ ಸಾಂಸ್ಕೃತಿಕ ಅಡ್ಡೆ, ಇಂಡಿಯಾ ಗೇಟ್, ಕುತುಬ್ ಮಿನಾರ್, ಸೆಲೆಕ್ಟ್ ಸಿಟಿ ಮೆಟ್ರೋ ಮಾಲ್, ಕಲ್ಕಾಜಿಯ ಮರೆಯಲಾಗದ ಅಲಕಾನಂದ ಮಾರ್ಕೆಟ್, ತನ್ನ ಸ್ವಾದವನ್ನು ಇಂದಿಗೂ ಕಟ್ಟಿಕೊಡುವ ಕಲ್ಕಾಜಿ ಛೋಲೆ ಬಟೋರೆ, ಆ ಜ್ಯೂಸ್ ಅಂಗಡಿ, ಕುಚ್ಚಿಲಕ್ಕಿ ನೀಡಿ ಊರಿನ ಊಟ ನೆನಪಿಸುತ್ತಿದ್ದ ಕೇರಳ ಅಂಕಲ್ ಶಶಿ ಕುಮಾರ್, ದೆಹಲಿಗೆ ಮೊದಲು ಬಂದಾಗ ನಮಗೆ ಮನೆ ತೋರಿಸಿದ್ದ ಸೊಂಟ ಮುರುಕ ಹಾಗೂ ಅವನ ಹೆಂಡತಿ ಮಾರಿಮುತ್ತು, ನಮ್ಮ ಮನೆ ಓನರ್ ರಾಜ್ ಕುಮಾರ್ ಭಯ್ಯ, ಮನೆಯಿಂದ 4 ಕಿ.ಮೀ ದೂರದಲ್ಲಿದ್ದ ನೆಹರೂ ಪ್ಲೇಸ್ ಮತ್ತು ಕಾಂಪ್ಲೆಕ್ಸ್ಸ್, ಮೋಹನ್ ಸಿಂಗ್ ಮಾರ್ಕೆಟ್‌ನ ತಮಿಳು ಡಾಬಾ, ರಾಜಕೀಯಕ್ಕೆ ಹೆಸರುವಾಸಿಯಾದ ದೆಹಲಿ ಕರ್ನಾಟಕ ಸಂಘ, ವೈವಿಧ್ಯೆತೆಯ ಈ ಮುಖವಾಗಿದ್ದ ಲಜ್‌ಪತ್‌ನಗರ್ ಸೆಂಟ್ರಲ್ ಮಾರ್ಕೆಟ್,.. ಅಯ್ಯೋ ಹೇಳಿ ಸುಖವಿಲ್ಲ..ಅವುಗಳ ದರ್ಶನ ಯಾವತ್ತೂ ಆಗುತ್ತಿತ್ತು. ಒಂದು ರೀತಿಯ freshness ಇತ್ತು. ಸಮಯ ಕಳೆಯಲು ಸಾಕಷ್ಟು ಹಾದಿಗಳೂ ಇದ್ದವು.
ಆದರೆ ಇಂದು ಯಾಕೋ ಮನಸ್ಸು ಖಾಲಿ ಹೊಡೆಯುತ್ತಿದೆ. ಇಡೀ ದೇಹವೇ ಬೇಸರದಲ್ಲಿ ಬೆಂದು ಹೋದ ಅನುಭವವಾಗುತ್ತಿದೆ. ಆದರೂ ಬಂದದ್ದು ಬರಲಿ ಎಂದು ದಿನದೂಡುತ್ತಲೇ ಇದ್ದೇನೆ. ಬಿರು ಬಿಸಿಲಿನಲ್ಲೂ ಬತ್ತದ ಭರವಸೆಯಂತೆ... ;)