ಬುಸುಗುಡುವ ದ್ವೇಷಾಗ್ನಿ ನಡುವೆ ಪ್ರೀತಿ...
ಪ್ರಿಯೆ,
ನಾಡಿದ್ದು ಫೆಬ್ರವರಿ ೧೪. ಅದು ಪ್ರೇಮಿಗಳಿಗಾಗಿ ಮೀಸಲಾದ ದಿನ ಅಂತ ಹೇಳ್ತಾರೆ. ಆದರೆ ಈ ಪತ್ರವನ್ನು ಆ ದಿನದ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆಂದು ತಿಳಿದುಕೊಳ್ಳಬೇಡ. ಏಕೆಂದರೆ ನಿನಗೇ ಗೊತ್ತು ನನಗೆ ಇಂತಹಾ ದಿನಾಚರಣೆಗಳು ಇಷ್ಟವಿಲ್ಲವೆಂಬುದು. ಪ್ರತಿದಿನವೂ ನಾವು ಪ್ರೀತಿಯನ್ನು ಪೂಜಿಸಿ ಆಚರಿಸುತ್ತಿರುವಾಗ ಇನ್ನು ಪ್ರತ್ಯೇಕ ದಿನ ಬೇಡ ಅಂತ ನೀನು ಕೂಡ ಹೇಳಿದ್ದೆ. ಹಾ...ಅದಿರಲಿ, ನಿನಗೊಂದು ವಿಷಯ ಹೇಳ್ಬೇಕು. ಅದನ್ನು ಈ ಪತ್ರದ ಮೂಲಕವೇ ಹೇಳ್ಬೇಕು ಅಂತ ಈ ಪತ್ರ ಬರೆಯುತ್ತಿದ್ದೇನೆ.
ಮೊನ್ನೆ ಹೀಗೆ ಆಫೀಸ್‌ನಲ್ಲಿ ಕುಳಿತಿದ್ದಾಗ ಥಟ್ಟನೆ ನನ್ನ ಜಿ-ಮೇಲ್ ಚಾಟ್ ಬಾಕ್ಸ್‌ನಲ್ಲಿ ಪ್ರೀತಿ ಕುರಿತ ಒಂದು ಸಾಲು ಬಂದು ಕೂತಿತು. ಆ ಸಾಲು ಏನೆಂದರೆ; “ಯಾವಾಗ್ಲೂ ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ ಮಾತ್ರ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತೆ”. ‘ಪ್ರೀತಿ’ ಎಂಬ ಎರಡಕ್ಷರದ ಮಾತೇ ನಮ್ಮಿಬ್ಬರ ನಡುವೆ ಕೋಟಿ ಭಾವನೆಗಳನ್ನು ಹುಟ್ಟಿಸಿರುವಾಗ ಕಾಲೇಜಿನಲ್ಲಿ ಒಟ್ಟಿಗೆ ಕಲಿಯುತ್ತಿದ್ದ ಓರ್ವ ಗೆಳತಿ ಕಳುಹಿಸಿದ್ದ ಆ ಸಾಲು ನನ್ನ ಮನವನ್ನು ಆಕರ್ಷಿಸಿತ್ತು.
ಹೌದು ಅದೇ ಶಾಶ್ವತ ಪ್ರೀತಿ. ಅಲ್ಲಿರುವುದು ಸ್ವಾರ್ಥವೆಂದರೆ ಏನೆಂದೇ ಅರಿಯದ, ನಿಷ್ಕಲ್ಮಷ ಭಾವನೆಯ ಸಂಚಾರ. ಅಲ್ಲಿ ಸೃಷ್ಟಿಯಾಗುವುದು ಮನಸ್ಸು ಮನಸ್ಸುಗಳ ನಡುವಿನ ಹಚ್ಚಹಸುರಿನ ನೈಜ ಪ್ರೀತಿ ಅಷ್ಟೆ.
ಹಾಗಾದರೆ ಇಂತಹ ಒಂದು ಅತ್ಯಂತ ಸುಲಲಿತ, ವರ್ಣನೆಗೂ ಮೀರಿದ, ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರೀತಿ ನಮ್ಮ ಕೈಗೆಟಕದಾಗಿರುವುದು ಏಕೆ? ಆ ಎರಡಕ್ಷರದ ಪ್ರೀತಿ ಬಹುದೂರದಲ್ಲಿ ನಿಂತು ಜನರೊಂದಿಗೆ ಆಟವಾಡುತ್ತಿರುವಾದದರೂ ಏಕೆ? ಬಿಸಿಲ್ಗುದುರೆಯಂತೆ ಕಾಡುತ್ತಿರುವುದು ಏಕೆ? ಮರೀಚಿಕೆಯಾಗಿ ಮನಸ್ಸಿಗೆ ನೋವುಣಿಸುತ್ತಿರುವುದು ಏಕೆ? ಇತಿಹಾಸವನ್ನೆಲ್ಲಾ ಮರೆತು ಸಂತಸದ ಭವಿಷ್ಯಕ್ಕೆ ನಾಂದಿ ಹಾಡುವ ಪ್ರೀತಿಯ ಹಿಂದೆ ಸಾವಿರಾರು ಮೈಲಿಗಟ್ಟಲೆ ಅಹರ್ನಿಶಿ ಓಡಿ ಬಂದಿದ್ದರೂ ನಮ್ಮ ಕೈಗೆ ಏಕೆ ಸಿಕ್ಕಿಲ್ಲ?
ಕಾಲ ಇಷ್ಟು ಬದಲಾಗಿದ್ದರೂ, ಜಗತ್ತಿನಲ್ಲಿ ಹಿಂದೆಂದೂ ಕಂಡರಿಯದಷ್ಟು ಪರಿವರ್ತನೆಯಾಗಿದ್ದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಅರಿಯುವಷ್ಟು ದೊಡ್ಡವರಾಗಿದ್ದರೂ, ಕೆಲವು ಕಟ್ಟುಪಾಡುಗಳಿಂದ ಹೊರಬರದಿರುವುದು ಅಥವಾ ಯಾರೋ ನಮ್ಮ ಪೂರ್ವಜರು ಹಾಕಿದ ಗೆರೆಯನ್ನು ದಾಟಿ ಮುನ್ನುಗ್ಗದಿರುವುದು ಇಂತಹುದಕ್ಕೆ ಕಾರಣವಾಗಿರಬಹುದೇ?
ವಿಶ್ವದೆಲ್ಲೆಡೆ ಹೊತ್ತಿ ಉರಿಯುತ್ತಿರುವ ಎಲ್ಲಾ ಘರ್ಷಣೆ, ಅನಾಹುತ, ವೈರತ್ವ ಅಥವಾ ಇನ್ಯಾವುದೇ ಪರಿಯ ವಿಪರೀತಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಪ್ರೀತಿಯಿಂದ ಖಂಡಿತಾ ಸಾಧ್ಯವಿದೆ. ಅದನ್ನು ಸಾಧಿಸಲು ಇಂದು ಸಾವಿರಾರು ಮನಸ್ಸುಗಳು ತುಡಿಯುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹುಳಿ ಹಿಂಡುವ ಕಾರ್ಯ, ಇನ್ನಷ್ಟು ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.
ಮೊನ್ನೆ ಮುಂಬೈನಲ್ಲಿ ಭಯೋತ್ಪಾದಕರು ರುದ್ರನರ್ತನಗೈದು ನೂರಾರು ಜನರನ್ನು ಬಲಿತೆಗೆದುಕೊಂಡಿದ್ದಾಗ ಮನಸ್ಸು ಕರಗಿ ಹೋಗಿತ್ತು. ಜೀವ ತೆತ್ತ ಅಮಾಯಕರ ಮೇಲೆ ಅಗಾಧ ಕನಿಕರ, ಪ್ರೀತಿ ಮೂಡಿತ್ತು. ಅದೇ ಹೊತ್ತಿಗೆ ಹಿಂದೂ-ಮುಸ್ಲಿಂ ನಡುವೆ ಅಂತರ ಮಾತ್ರ ಹೆಚ್ಚುತ್ತಲೇ ಹೋಗಿತ್ತು. ಇನ್ನು ಕಂಧಮಾಲ್, ಮಂಗಳೂರಿನಲ್ಲಿ ಮತಾಂತರ ವಿಷಯವಾಗಿ ಹಿಂದೂ-ಕ್ರಿಶ್ಚಿಯನ್ ಸಮುದಾಯದ ನಡುವೆ ದ್ವೇಷಾಗ್ನಿ ಹೊತ್ತಿ ಉರಿಯಿತು. ಹಲವಾರು ಮಂದಿ ಈ ಅಗ್ನಿಯಲ್ಲಿ ಹೊತ್ತಿ ಉರಿದರು. ಈ ಎರಡು ಸಮುದಾಯದ ನಡುವೆ ಬಹಳ ಆಳಕ್ಕೆ ಇಳಿದಿದ್ದ ದ್ವೇಷ ಇಂದು ಇನ್ನಷ್ಟು ಆಳಕ್ಕೆ ಇಳಿದಿದೆ. ಹಲವು ಮಂದಿ ಮೂಲಭೂತವಾದಿ ಸಂಘಟನೆಗಳನ್ನು ಹಿಗ್ಗಾ-ಮುಗ್ಗ ಜರೆಯುತ್ತಾ ಹೋದರೇ ವಿನಾ ಯಾರೂ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಲಿಲ್ಲ. ಅದೇನೆಂದರೆ ಜನಸಾಮಾನ್ಯರು ಕೂಡ ಏಕೆ ಇಂತಹ ದ್ವೇಷಾಗ್ನಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ ಎಂಬುದು? ಈಗ ಪ್ರೀತಿ, ಸಹಬಾಳ್ವೆ ಎಂಬುದು ಇಲ್ಲಿ ಗಗನಕುಸುಮವಾಗಿದ್ದು, ಕೋಮುದ್ವೇಷದ ಕೆಂಪು ಜ್ವಾಲೆ ವಿಸ್ತಾರವಾಗಿ ಹರಡಿದೆ.
ಇನ್ನು ಗಡಿ ವಿಷಯಗಳತ್ತ ಮುಖ ಮಾಡಿದರೆ ಅಲ್ಲೂ ಪ್ರೀತಿ, ಪ್ರೇಮ ಎಂಬುದು ಮಾಯವಾಗಿದೆ ಅನ್ನಿಸುವುದಕ್ಕಿಂತ, ಪ್ರೀತಿ, ಪ್ರೇಮವನ್ನು ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದನಿಸುತ್ತದೆ. ಅಲ್ಲೂ ಸಂಘಟನೆಗಳದ್ದೇ ಪಾರಮ್ಯ. ಏನೂ ಅರಿಯದ ಮುಗ್ಧ ಮಂದಿಯ ತಲೆಯಲ್ಲಿ ದ್ವೇಷದ ಬೀಜ ಬಿತ್ತುವ ಕರಾಳ ಜಾಲ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಂಬಿಕೆಗೆ ಅನರ್ಹವಾದ ಮಾತೇನಲ್ಲ.
ನಾನು ನಿನಗೆ ಹೇಳ ಹೊರಟಿರುವುದೇನೆಂದರೆ, ಮತ-ಧರ್ಮ-ಬಣ್ಣದ ಹೆಸರಲ್ಲಿ ಮನುಷ್ಯ ಮನುಷ್ಯರ ನಡುವೆ ದ್ವೇಷದ ಬೆಂಕಿ ರೌದ್ರಾವತಾರ ತಾಳಿ, ದೇಶದೆಲ್ಲೆಡೆ ಹಬ್ಬಿ ಹೊಗೆಯಾಡುತ್ತಿರುವಾಗ ಪರಸ್ಪರ ನಂಬುಗೆಯ, ಸಹಬಾಳ್ವೆಯ ಪ್ರೀತಿ ನಮ್ಮ ಜನರಲ್ಲಿ ಮಾಯವಾಗಿ ಹೋಗಿದೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನಮ್ಮಿಬ್ಬರ ಪ್ರೀತಿ ಮುನ್ನುಗ್ಗುತ್ತಿದೆ. ಇದುವರೆಗೆ ನಮ್ಮ ಪ್ರೀತಿಗೆ ಜಾತಿ-ಧರ್ಮವೆಂಬ ಕೊಳ್ಳಿ ದೆವ್ವದ ಕೆಂಗಣ್ಣು ಬಿದ್ದಿರಲಿಲ್ಲ. ಆದರೆ ಈಗಾಗುತ್ತಿರುವ ಬೆಳವಣಿಗೆ ನಮ್ಮನ್ನು ಎಚ್ಚರಿಸಿದೆ. ನಮ್ಮಿಬ್ಬರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ, ಬಾಹ್ಯ ಕರಾಳ ಶಕ್ತಿಗಳು ನಮಗೇನಾದರೂ ಮಾಡಬಹುದು. ಆದರೆ ಅದಕ್ಕೆ ಬಗ್ಗಬೇಕಾಗೇನೂ ಇಲ್ಲ. ಹಾಗಾಗಿ ನೀನು ಹೆದರುವ ಅಗತ್ಯವಿಲ್ಲ. ಕೆಲವು ತಿಂಗಳಲ್ಲಿ ನಾನೂ ನೀನಿದ್ದಲ್ಲಿಗೆ ಬರುತ್ತೇನೆ. ಅಷ್ಟು ದಿನ ಧೈರ್ಯದಿಂದಿರು... ಏಕೆಂದರೆ ನಮ್ಮದು ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ...
ಇಂತಿ ನಿನ್ನವ
ರಾಘು
Thursday, 5 February 2009
Subscribe to:
Posts (Atom)