ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ ತಂದೆ ಫೋನ್ ಮಾಡಿದರು. ಸರಿ, ಹಾಗೆ ಮಾತನಾಡುತ್ತಿದ್ದೆ. ಅವರು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಯಕ್ಷಗಾನದ ಚೆಂಡೆಯ ಇಂಪು ತಂದೆಯವರ ಮಾತಿನ ಕಂಪಿನೊಂದಿಗೆ ನವಿರಾಗಿ ಕೇಳುತ್ತಿತ್ತು. ನಿಜಹೇಳಬೇಕೆಂದರೆ ಯಕ್ಷಗಾನಕ್ಕಿಂತ ಚೆಂಡೆ ಬಡಿಯುವುದನ್ನು ಕೇಳುವುದರಲ್ಲೇ ನಾನು ಹೆಚ್ಚು ಆನಂದವನ್ನು ಕಾಣುತ್ತೇನೆ. ಅದೇನೋ ಗೊತ್ತಿಲ್ಲ. ಚಿಕ್ಕಂದಿನಲ್ಲಿ ಅಪ್ಪ-ಅಮ್ಮನ ಒತ್ತಾಯಕ್ಕೆ ರಾತ್ರಿಯಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಚೆಂಡೆ ಶಬ್ದವನ್ನು ಆಲಿಸುತ್ತಿದ್ದೆಯೇ ವಿನಾ ರಂಗದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಆ ಪೌರಾಣಿಕ ಪ್ರಸಂಗಗಳು ಅರ್ಥವಾಗುತ್ತಲೂ ಇರಲಿಲ್ಲ. ಅದು ಬೇರೆ ಪ್ರಶ್ನೆ ಬಿಡಿ.

ತಂದೆ ಕಾರ್ಯನಿಮಿತ್ತ ಯಕ್ಷಗಾನ ನಡೆಯುತ್ತ್ತಿದ್ದ ಸ್ಥಳದ ಬಳಿ ಬಂದಿದ್ದರೂ ಅವರು ಯಕ್ಷಗಾನ ನೋಡಲು ತೆರಳಿರಲಿಲ್ಲ. ಆದರೆ ಆ ಭಾಗವತಿಗೆ ಹಾಗೂ ಚೆಂಡೆಯ ಶಬ್ದ ಮಾತ್ರ ಇಡೀ ಊರಿಗೆ ಕೇಳುತ್ತಿತ್ತು. ತಂದೆಯ ಫೋನ್‌ನ ಮೂಲಕ ಆ ಆನಂದವನ್ನು ನಾನು ಪಡೆಯುವಂತವನಾಗಿದ್ದೆ. ಆ ಹಳ್ಳಿಯಲ್ಲಿದ್ದ ಯಕ್ಷಗಾನ ಅಭಿಮಾನಿಗಳ ಆಸೆ ಪೂರೈಸುತ್ತಿದ್ದ ಯಕ್ಷಗಾನ ತಂಡಕ್ಕೆ ಅಲ್ಲಿನ ನಾಗರಿಕರು ಅಭಿನಂದನೆ ಸಲ್ಲಿಸಿದ್ದರೂ ನಾನು ಕೂಡ ಇಲ್ಲಿ ಬರೆಯುವ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಕನಿಷ್ಠ ಕೆಲವು ನಿಮಿಷಗಳ ಮಟ್ಟಿಗಾದರೂ ಈ ಗಿಜಿಗುಡುವ ಯಾಂತ್ರಿಕ ಜೀವನದ ನಡುವೆ ಒಂದಿಷ್ಟು ಹೊತ್ತು ನನ್ನ ಮನಸ್ಸನ್ನು ಶಾಂತಗೊಳಿಸಿದ್ದಕ್ಕೆ. ಮುಖ್ಯವಾಗಿ ನಾನು ನನ್ನ ತಂದೆಗೆ ಥ್ಯಾಂಕ್ಸ್ ಹೇಳಬೇಕು. ಫೋನ್ ಮಾಡಿ ಆ ಯಕ್ಷಗಾನದ ವೈಭವವನ್ನು ನನ್ನ ಕಿವಿ ಹಾಗೂ ಕಣ್ಣ ಮುಂದಿರಿಸಿದ್ದಕ್ಕೆ.
ಅದೆಷ್ಟು ದಿನವಾಯಿತು ನೋಡಿ... ಯಕ್ಷಗಾದ ಸವಿಯುಣದೆ ವರ್ಷಗಳೇ ಕಳೆದಿವೆ. ಶಾಲೆಗೆ, ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ಯಾವತ್ತೂ ಯಕ್ಷಗಾನ ನೋಡಬೇಕೆಂದು ಈ ಪರಿಯ ಆಸಕ್ತಿ ನನ್ನ ಮನದಲ್ಲಿ ಮೂಡಿರಲಿಲ್ಲ. ನಮ್ಮ ಸಾಂಪ್ರದಾಯಿಕ ಕಲೆಗಳ ಬಗ್ಗೆ ನಿರ್ಲಕ್ಷವಹಿಸುವ ಯುವಜನಾಂಗದವರಲ್ಲಿ ಅಂದು ನಾನೂ ಒಬ್ಬನಾಗಿದ್ದೆ. ಹಾಗಿದ್ದರೂ ಚಂಡೆ ಶಬ್ದ ಕೇಳಬೇಕೆಂದು ಯಾವತ್ತೂ ಅನಿಸುತ್ತಿತ್ತು.
ಈಗೀಗ ಯಕ್ಷಗಾನವನ್ನು, ಆ ಚಂಡೆಯ ನಿನಾದವನ್ನು ಸದಾ ಕೇಳಬೇಕೆಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿದೆ. ಎರಡು ವರ್ಷವಾಯಿತು. ಒಂದು ಪ್ರಸಂಗವನ್ನೂ ಸರಿಯಾಗಿ ನೋಡಿಲ್ಲ. ಕಳೆದ ವರ್ಷ ದೆಹಲಿಯಲ್ಲಿ ಕನ್ನಡ ಯಕ್ಷಗಾನ ಏರ್ಪಡಿಸಿದ್ದರು. ಆದರೆ ಅದು ಯಾಕೋ ನನ್ನ ಮನಸ್ಸಿಗೆ ಅಷ್ಟರಮಟ್ಟಿಗೆ ತೃಪ್ತಿ ನೀಡಿರಲಿಲ್ಲ.
ಅದಿರಲಿ. ತಂದೆಯ ಬಳಿ ಮಾತನಾಡಿದ ಬಳಿಕ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಈಗಲೂ ನನಗೆ ಉತ್ತರ ಕಂಡುಕೊಳ್ಳಲಾಗುತ್ತಿಲ್ಲ. ಅದೇಕೆ ಯಕ್ಷಗಾನದ ಮೇಲೆ ಈ ಪರಿಯ ಆಸಕ್ತಿ ಮೂಡಿದೆ? ಯಕ್ಷಗಾನವನ್ನು ಒಮ್ಮೆ ನೋಡಿ ನನ್ನ ಹಸಿವನ್ನು ನೀಗಿಸಿಕೊಳ್ಳಬೇಕೆಂದು ಯಾಕೆ ಮನಸ್ಸು ಹಾತೊರೆಯುತ್ತಿದೆ? ಈ ಒಲವಿನ ಭಾವನೆ ಅದೇಕೆ ಅಂದು ಬಂದಿರಲಿಲ್ಲ? ಬಹುಶಃ ಪೇಟೆಯ ಬದುಕು ನನ್ನ ಮನವನ್ನು ಆ ರೀತಿ ಪರಿವರ್ತಿಸಿರಬಹುದೇ?
ಥಳಥಳಿಸುವ ಮಾಲ್‌ಗಳು, ಸಾಂಪ್ರದಾಯಿಕ ಬದುಕು ಏನೆಂಬುದನ್ನೇ ಮರೆತಿರುವ ಮೂಢರು, ಕೇವಲ ಸ್ವಹಿತಾಸಕ್ತಿಗಾಗಿ ಬೇರೆಯವರ ಬೆನ್ನು ಬಗ್ಗಿಸುವ ಕಾರ್ಪೊರೇಟ್‌ಗಳು, ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕೆಂದು ತನ್ನತನವನ್ನೇ ಮರೆಯುವ ‘ಪ್ರಜ್ಞಾವಂತರು’, ಹವಾನಿಯಂತ್ರಿತ ಗಾಜಿನ ಕೊಠಡಿಯಲ್ಲಿ ಕುಳಿತು ಭಾರತ ಹಳ್ಳಿಗಳು ಅಭಿವೃದ್ಧಿಯಾಗುತ್ತಿವೆ ಎನ್ನುವ ಮಹಾನ್ ಚಿಂತಕರು... ಇವರೆಲ್ಲರ ನಡುವೆ ಬದುಕು ಸಾಗಿಸುತ್ತಿರುವ ನಮ್ಮಂಥವರು...
ಬಹುಶಃ ಇಂತಹ ವಿಚಿತ್ರಗಳ ನಡುವೆ ದಿನದೂಡುವಾಗ ಮನಸ್ಸು ರಿಫ್ರೆಶ್ ಆಗಬೇಕೆಂಬ ಬಯಕೆಯಿಂದ ಯಕ್ಷಗಾನ ನೋಡಲೇಬೇಕೆಂದು ಹಂಬಲ ಮನದಲ್ಲಿ ಆವರಸಿತೇನೋ... ಮುಂದೆ ಹೋದಂತೇ ಇನ್ನು ಏನೆಲ್ಲಾ ಬಯಕೆಗಳು ಮನದಲ್ಲಿ ಮೂಡುತ್ತವೆಯೋ... ಕುತೂಹಲದಿಂದ ಕಾದುನೋಡುತ್ತಿದ್ದೇನೆ...