Friday, 5 December 2008

ನೂರೊಂದು ಕನಸು...ಕನಸಾಗೇ ಉಳಿಯಿತು...

ನನ್ನ ಬಾಡಿದ್ದ ಬದುಕಿಗೆ ಹೊಳೆವ ದೀಪ್ತಿಯಾದವಳು ನೀನು, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು, ಎಲ್ಲರ ನಿಂದನೆಗೆ ಗುರಿಯಾಗಿ, ಕಡಿದ ಬಾಳೆ ಗಿಡದಂತಾಗಿದ್ದ ಈ ಖಾಲಿ ಮನಸ್ಸಿಗೆ ಆತ್ಮವಿಶ್ವಾಸ ತುಂಬಿ ಮತ್ತೆ ನನ್ನಲ್ಲಿ ಹೊಸ ಹುರುಪು ಮೊಳಕೆಯೊಡೆಯುವಂತೆ ಮಾಡಿದ ನನ್ನ ರತ್ನ ನೀನು. ಕೈಯಲ್ಲಿ ಒಂದು ಕೆಲಸವೂ ಇಲ್ಲದೆ, ಭವಿಷ್ಯವೇ ಬರಿದಾಗಿ ಕಾಣುತ್ತಿದ್ದಾಗ, ನಿನ್ನ ಸಂಗಡದಿಂದ ಹೊಸ ಉದ್ಯೋಗ ಪ್ರಾಪ್ತಿಯಾಗುವಂತೆ ಮಾಡಿದ್ದು ನೀನು.

ಆವತ್ತು ಯಾವುದೋ ವಿಷಯಕ್ಕೆ ಎಲ್ಲರೂ ನನ್ನ ಸ್ನೇಹಕ್ಕೆ ತಿಲಾಂಜಲಿ ಇಟ್ಟಾಗ ಮತ್ತೆ ನನ್ನ ಸಮರ್ಥನೆಗೆ ಸಾಥ್ ನೀಡಿದ ಸಂಗಾತಿ ನೀನು. ಬೇರೆ ಕಡೆ ಉದ್ಯೋಗ ನಿಮಿತ್ತ ತೆರಳುವ ವೇಳೆಗೆ ಯಾವೊಬ್ಬನೂ ಬರದೇ ಇದ್ದರೂ, ನನ್ನಲ್ಲಿ ಸ್ಪೂರ್ತಿ ತುಂಬಿ, ಅತ್ಯಂತ ಆದರದಿಂದ ಬೀಳ್ಕೊಟ್ಟು, ಆ ನಿಲ್ದಾಣದಲ್ಲೇ ನಮ್ಮ ಪ್ರೀತಿ ಬಗ್ಗೆ ನೀನು ಒತ್ತಿ ಒತ್ತಿ ಹೇಳುತ್ತಿದ್ದಾಗ, ನೀನು ನನ್ನೊಂದಿಗಿಲ್ಲದಿದ್ದಾಗ ಯಾಕೀ ಉದ್ಯೋಗ ಎಂದಿದ್ದೆ ನಾನು. ನನ್ನ ಕಣ್ಣಿನಿಂದ ಒಂದು ಹನಿ ಉದುರಿದ ಕೂಡಲೇ ಗೊಳೋ ಎಂದು ಅಂತಿದ್ದ ನಿನ್ನನ್ನು ಸಮಾಧಾನ ಪಡಿಸುವಾಗಲೇ ಹೊತ್ತು ಮೀರಿತ್ತು. ಹೇಗೋ ಒಲ್ಲದ ಮನಸ್ಸಿನಿಂದ ಆ ಕ್ಷಣದಲ್ಲಿ ನಾವಿಬ್ಬರೂ ಬೇರ್ಪಡಬೇಕಾಯಿತು.

ಅಂದು ನೀನು ನಿಲ್ದಾಣದಲ್ಲಿ ಅತ್ತಷ್ಟು ಬೇರೆಂದೂ ಅತ್ತಿರಲಿಲ್ಲ ಎಂದು ನೀನು ಫೋನ್‍ನಲ್ಲಿ ಹೇಳುತ್ತಲೇ ಇರುತ್ತಿದ್ದಿ. ನೀನು ಅತ್ತದ್ದಕ್ಕೆ ನನಗೆ ಒಂಚೂರು ಬೇಸರವಿಲ್ಲ. ಏಕೆಂದರೆ ನೀನು ನನ್ನನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತೀಯಾ ಎಂದು ನನಗೆ ಗೊತ್ತು. ಆ ಪ್ರೀತಿ ನಮ್ಮಿಂದ ಒಂದು ಕ್ಷಣವನ್ನೂ ಕಳೆಯುವುದು ಅಶ್ವಮೇಧ ಯಾಗ ಮಾಡಿದಷ್ಟೇ ಕಷ್ಟ ಎಂಬುದು ಒಬ್ಬ ಪ್ರೇಮಿಯಾಗಿ ನನಗೆ ಗೊತ್ತು. ಅದಕ್ಕಾಗಿಯೇ ಅಳುವಷ್ಟು ಅತ್ತು ಬಿಡು ಎಂದು ನಿಧಾನವಾಗಿಯೇ ನಾನು ಸಮಾಧಾನ ಮಾಡಿದ್ದು.

ಅದೇನೆ ಇರಲಿ, 3 ವರ್ಷಗಳ ಮೇಲಾಯ್ತು. ಒಂದು ಬಾರಿಯೂ ನಾನು ಮನೆಗೆ ಹೋಗಿಲ್ಲ. ಕೇವಲ ದೂರವಾಣಿ ಮೂಲಕ ನನ್ನ ಹೆತ್ತವರೊಂದಿಗೆ ಸಂವಹಿಸುತ್ತಿದ್ದೇನೆ. ಅವರಿಗೂ ನನ್ನನ್ನು ನೋಡಬೇಕೆಂಬ ತವಕ. ಆ ತುಡಿತ ನನ್ನಲ್ಲೂ ಇದೆ. ಇಲ್ಲಿಗೆ ಬಂದ ಆರು ತಿಂಗಳೊಳಗೆ ನಾನು ವಾಪಸಾಗಬೇಕೆಂದಿದ್ದೆ. ಅಪ್ಪ ಅಮ್ಮನನ್ನು, ಹಾಗೇ ನಿನ್ನನ್ನು ನೋಡಬೇಕೆಂಬ ಮಹದಾಸೆ ಮನಸ್ಸಿನ ತುತ್ತ ತುದಿಯಲ್ಲಿತ್ತು. ಅದರ ಜೊತೆಗೆ ನಮ್ಮ ಹಳ್ಳಿಗೆ ಹತ್ತಿರವಿದ್ದ ನಗರದ ಬ್ರಾಂಚಿನಲ್ಲೇ ನೀನು ಕೆಲಸ ಮಾಡಬಹುದು. ಟ್ರಾನ್‍ಸ್ಫರ್ ಮಾಡಲು ನನ್ನಿಂದ ಅಡ್ಡಿಯಿಲ್ಲ ಎಂದು ನನ್ನ ಬಾಸ್ ಹೇಳಿದ್ದರು. ಆದರೆ ಅವಕಾಶವನ್ನು ನಾನು ತಿರಸ್ಕರಿಸಿದ್ದೆ.

ಕಾರಣ ನಿನಗೆ ಗೊತ್ತು, ನನಗೆ ಗೊತ್ತು; ಆದರೆ ನಾನು ಫೋನಾಯಿಸಿದಾಗ ಸದಾ ನನ್ನ ಹೆತ್ತವರು ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ಏನೋ ಒಂದು ಉತ್ತರ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಊರಿಗೆ ಬಂದರೆ ನಿನ್ನನ್ನು ನೋಡಲು, ಮಾತನಾಡಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ನೀನೇ ಇಲ್ಲದ ಮೇಲೆ ಯಾವ ಸುಖಕ್ಕಾಗಿ ನಾನು ಬರಬೇಕು? ಹೌದು, ನನ್ನ ಹೆತ್ತವರನ್ನು ನೋಡಬೇಕು. ಅವರನ್ನು ಕಾಣದೆ ವರ್ಷಗಳಾಗಿವೆ. ಆದರೆ ನಿನ್ನನ್ನು ಕಳೆದುಕೊಂಡ ದು:ಖದಲ್ಲಿ ಅಪ್ಪ ಅಮ್ಮನಲ್ಲಿ ನಾನು ಲೋಕಾಭಿರಾಮವಾಗಿ ಹೇಗೆ ಮಾತನಾಡಲು ಸಾಧ್ಯ? ವರ್ಷಗಳ ನಂತರ ಮಗ ಊರಿಗೆ ಬಂದರೂ ನಮ್ಮಲ್ಲಿ ಸರಿಯಾಗಿ ಮಾತನಾಡಿಲ್ಲ ಎಂಬ ಕೊರಗು ಅವರನ್ನು ಕಾಡದೇ ಇರದು. ನಾನು ಬಂದರೆ ಒಂದು ರೀತಿಯಲ್ಲಿ ಅವರಿಗೂ ಬೇಸರ. ಆದರೆ ಹಾಗೆ ಮಾಡಲು ಖಂಡಿತಾ ಒಪ್ಪಿಗೆಯಿಲ್ಲ. ಆದರೆ ನಾನು ಬರದಿರದ ಹಿಂದಿನ ವಾಸ್ತವವನ್ನು ಹೇಗೆ ಅವರಿಗೆ ವಿವರಿಸಲಿ?

ಗೆಳತಿ, ಊರು ಬಿಟ್ಟು ಬಂದಿದ್ದರೂ, ನಿನ್ನ ನೆನೆಯದೇ ಒಂದು ಕ್ಷಣವೂ ಮುಂದುವರಿಯುತ್ತಿರಲಿಲ್ಲ. ನಿನ್ನಲ್ಲಿ ಒಂದಕ್ಷರ ಮಾತನಾಡದಿದ್ದರೂ ನನಗೆ ದಿನದೂಡಲಾಗುತ್ತಿರಲಿಲ್ಲ. ಆದರೆ ದಿನಕಳೆದಂತೆ ನೀನೆ ನನ್ನನ್ನು ದೂರ ಮಾಡಿದೆ. ಏಕೆ ಹೀಗೆ ಮಾಡುತ್ತಿದ್ದಿ ಎಂದು ಕೇಳಿದರೂ ನೀನು ನನ್ನಲ್ಲಿ ಏನನ್ನೂ ಹೇಳಲಿಲ್ಲ. ಅದೊಂದು ದಿನ ಮಾಮೂಲಿಯಂತೆ ನನ್ನ ಇ-ಮೇಲ್ ನೋಡುತ್ತಿದ್ದ ಸಂದರ್ಭದಲ್ಲಿ ನೀನು ಕಳುಹಿಸಿದ್ದ ಆಮತ್ರಣ ಪತ್ರಿಕೆ ನೋಡಿ ದಂಗುಬಡಿದಂತಾಗಿದ್ದೆ ನಾನು! ಎರಡು ದಿನ ಆಫೀಸಿಗೂ ತೆರಳಿರಲಿಲ್ಲ. ನಿನ್ನ ನೆನಪಿನಲ್ಲೇ ದಿನ ದೂಡುತ್ತಿದ್ದ ನನಗೆ ಈ ರೀತಿಯ ಮೋಸ ಏಕೆ ಮಾಡಿದೆ?

ನಿನ್ನಲ್ಲಿ ಉತ್ತರವನ್ನು ನಾನು ಇದುವರೆಗೆ ಕೇಳಿಲ್ಲ. ಆ ಬಳಿಕ ಒಂದು ಬಾರಿಯೂ ನಾವು ಮಾತನಾಡಿಲ್ಲ. ಅದೇಗೋ ನಿನ್ನ ಮದುವೆ ಸಮಾರಂಭದ ಚಿತ್ರಗಳನ್ನು ನಾನು ನೋಡಿದ್ದೆ. ರೇಷ್ಮೆ ಸೀರೆ ಸುತ್ತಿದ್ದ ನಿನ್ನನ್ನು ಮೊದಲ ಬಾರಿ ಸೀರೆಯಲ್ಲಿ ಕಂಡಿದ್ದ ನಾನು ಆ ಸೌಂದರ್ಯವನ್ನು ಹಾಡಿ ಹೊಗಳಬಲ್ಲೆ. ಆದರೆ ಆ ಹಕ್ಕನ್ನು ನಾನಿಂದು ಕಳೆದುಕೊಂಡಿದ್ದೇನೆ ಎಂದು ಅತ್ಯಂತ ನೋವಿನಿಂದ ಹೇಳಿದರೂ, ನಿನ್ನಲ್ಲಿ ಮಾತನಾಡಬೇಕೆಂದು ಮನಸ್ಸು ಹೇಳುತ್ತಿದೆ. ಆದರೆ ಅದು ಅಸಾಧ್ಯ ಎಂದು ಗೊತ್ತಿದ್ದರೂ ನನ್ನ ಮನಸ್ಸೊಪ್ಪುತ್ತಿಲ್ಲ. ನಿನ್ನ ನೋಡಬೇಕು, ನಿನ್ನಲ್ಲಿ ಜಗಳವಾಡಬೇಕೆಂದು ಮನಸ್ಸು ಸಾರಿ ಹೇಳುತ್ತಿದ್ದರೂ, ವಿಧಿ ತನ್ನದೇ ಆಟವಾಡಿದೆ.

ಅಪ್ಪ, ಅಮ್ಮ; ನಾನು ನಿಜವಾಗಿಯೂ ಇದೇ ಕಾರಣಕ್ಕಾಗಿ ಊರಿಗೆ ಬಂದಿಲ್ಲ...ಬರುವ ಯೋಚನೆ ಕೂಡ ಮಾಡಿಲ್ಲ :-(