ಈತನಿಗೆ ಇನ್ನಾರು ಸಾಟಿ?
ಕನ್ನಡದ ಕಂಪು ಅವರ ಹೃದಯದಲ್ಲೇ ಬೇರೂರಿತ್ತು. ಕನ್ನಡ ಭಾಷೆಯಲ್ಲಿ ಅವರಿಗಿದ್ದ ಹಿಡಿತವನ್ನು ಕಂಡೇ ನಾನಂದು ನಿಬ್ಬರಗಾಗಿದ್ದೆ. ಕನ್ನಡ ಭಾಷೆಯನ್ನು ಬಲ್ಲವ ಸುಲಲಿತವಾಗಿ ಕನ್ನಡ ಮಾತನಾಡಿದರೆ ಅದರಲ್ಲಿ ಅಂಥದ್ದೇನೂ ವಿಶೇಷ ಇಲ್ಲ ಬಿಡಿ ಎಂದನಿಸುವುದು ನಿಜ. ಆದರೆ ನಾನೀಗ ಹೇಳಲು ಹೊರಟಿರುವುದು ಒಬ್ಬ ಕನ್ನಡಿಗನ ಕುರಿತಾಗಿಯಂತೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವರು ಒಬ್ಬ ಭಾರತದವರೇ ಅಲ್ಲ! ಅವರು ಸದ್ಯ ಇರುವುದು ಜರ್ಮನಿಯಲ್ಲಿ. ಹೊರದೇಶದವರಾಗಿದ್ದರೂ, ವಿಶೇಷವಾಗಿ ಹೇಳಬೇಕೆಂದರೆ ಭಾರತದ ಸಂಸ್ಕೃತಿ, ಸಂಪ್ರದಾಯ, ಭಾಷೆ, ನುಡಿ-ನಾಡು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕನ್ನಡ ಭಾಷೆಯನ್ನು ಅರಳು ಹುರಿದಂತೆ ಮಾತನಾಡುವ ಅವರು ಕನ್ನಡ ನಾಡಿನ ಹಿರಿ-ಕಿರಿಯ ಸಾಹಿತಿಗಳು ಹಾಗೂ ಅವರ ಕುರಿತಾಗಿ ಹೆಚ್ಚಿನದೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಕನ್ನಡ ಸಾಹಿತ್ಯ ಅವರ ನಾಲಿಗೆಯಲ್ಲಿ ಸತ್ವಯುತವಾಗಿ ಹರಿದಾಡುತ್ತಿದೆ! ಅವರ ಮಹತ್ಸಾಧನೆಗಳ ಬಗ್ಗೆ ಇಣುಕು ಹಾಕುತ್ತಾ ಹೋದರೆ ಇನ್ನೂ ಒಂದು ಆಶ್ಚರ್ಯಕಾರಿ ಸತ್ಯ ನಿಮ್ಮ ಕಣ್ಮುಂದೆ ಬಂದು ಕುಳಿತುಕೊಳ್ಳುತ್ತದೆ. ಹೌದು, ಅವರು ಕನ್ನಡ ಭಾಷೆಯಲ್ಲೇ ಡಾಕ್ಟರೇಟ್ ಪದವಿ ಗಳಿಸಿದ್ದಾರೆ!!
ಹೆಸರು ರಾಬರ್ಟ್ ಜೆಯ್ದೆನ್ ಬೊಸ್. ದೇಶ ನೆದರ್ ಲ್ಯಾಂಡ್(ಹಾಲೆಂಡ್). ಹುಟ್ಟಿದ್ದು ಕೆನಡಾದಲ್ಲಿ. ತಂದೆ ಹಾಲೆಂಡ್ನವರಾದರೆ ತಾಯಿ ಇಂಡೋನೇಷಿಯಾದವರು. ಸರಿ, ಮೂರು ದೇಶಗಳ ರಕ್ತ ಅವರ ದೇಹದಲ್ಲಿ ಹರಿಯುತ್ತಿದ್ದರೂ, ಅವರ ಮೈಯಲ್ಲಿ ಕನ್ನಡದ ರಕ್ತ ಪ್ರಕಾಶಮಾನವಾಗಿ ಮಿಂಚುತ್ತಿದೆ ಎನ್ನಲಡ್ಡಿಯಿಲ್ಲ ಬಿಡಿ. ಕಳೆದ ವರ್ಷ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಈ ವ್ಯಕ್ತಿಯ ಜೊತೆ ಮಾತನಾಡುವ ಭಾಗ್ಯ ನನ್ನದಾಗಿತ್ತು. ಒಂದೇ ಸಮನೆ ಕನ್ನಡದಲ್ಲಿ ಉಸುರುತ್ತಿದ್ದ ಅವರ ಮಾತುಗಳೇ ನನ್ನ ಹುಬ್ಬೇರಿಸುವಂತೆ ಮಾಡಿತ್ತು.
ರಾಬರ್ಟ್ ಅವರು ಜೈನ ಧರ್ಮಕ್ಕೆ ಮತಾಂತರ ಹೊಂದಿದ ವ್ಯಕ್ತಿ. ಜೈನ ಧರ್ಮದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಅಭಿಲಾಷೆ ಅವರದ್ದು. ಪ್ರಸ್ತುತ ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಧಾರ್ಮಿಕ ದಾರ್ಶನಿಕತೆಗಳ ಅಡಿಪಾಯವಿರುವ ``ಇಂದಾಲಜಿ'' ಎಂಬ ವಿಷಯದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ವೀರಶೈವ, ಜೈನತತ್ವಗಳ ಬಗ್ಗೆ ಅತಿಯಾದ ಆಸಕ್ತಿ ಹಾಗೂ ಗೌರವ ಹೊಂದಿದ್ದಾರೆ.
ಜರ್ಮನಿಯ ಮ್ಯೂನಿಕ್ನಲ್ಲಿ 1989ರಂದು ``ಕನ್ನಡ ಗದ್ಯ ಸಾಹಿತ್ಯದಲ್ಲಿ ಇರುವ ಸಂಸ್ಕೃತಿಯ ವೈಶಿಷ್ಟ್ಯದ ಕಥಾವಸ್ತುಗಳು'' ಎಂಬ ವಿಷಯದ ಕುರಿತು ಡಾಕ್ಟರೇಟ್ ಪದವಿ ಗಳಿಸಿದ ಅವರು, ಹಾಲೆಂಡ್ ನ ಯೂಟ್ರೆಕ್ಟ್ನಲ್ಲಿ ಇದ್ದ ಕೋಟದ ಪರಮೇಶ್ವರ ಐತಾಳ್ ಅವರಿಂದ ಕನ್ನಡ ಅಭ್ಯಸಿಸಿದರು. ಜೈನ ಧರ್ಮದ ಮೇಲಿನ ಆಸಕ್ತಿ ಅವರನ್ನು ಜೈನ ಧರ್ಮವನ್ನು ಕಲಿಯಲು ಪ್ರೇರೇಪಿಸಿತು.
ಶಿವರಾಮ ಕಾರಂತರ ''ಮೂಕಜ್ಜಿಯ ಕನಸುಗಳು'', ''ಹುಚ್ಚುಮನಸ್ಸಿನ ಹತ್ತುಮುಖಗಳು'', ''ಮೈಮನಗಳ ಸುಳಿಯಲ್ಲಿ'', ಕೃತಿಗಳನ್ನು ಎಂದು ಎದೆಯುಬ್ಬಿಸಿ ಹೇಳುವ ರಾಬರ್ಟ್ ಅವರಿಗೆ ಕಾರಂತರ ''ಚೋಮನ ದುಡಿ'' ಹೃದಯಕ್ಕೆ ಬಾರೀ ಹತ್ತಿರವಾಗಿದೆಯಂತೆ. ಹೌದು, ಕಾರಂತರ ಕಾದಂಬರಿಗಳೆಂದರೇ ಎಂಥವರೂ ಪ್ರೀತಿಸುತ್ತಾರೆ ಅಲ್ಲವೇ.
''ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ನಾನು ಹಾ.ಮಾ. ನಾಯಕರ ಬಳಿ ಹೋಗುತ್ತಿದ್ದೆ. ನಾನು ಇಂದು ಈ ಇಷ್ಟು ಕನ್ನಡ ಮಾತನಾಡುತ್ತೇನೆ ಎಂದರೆ ಅದರಲ್ಲಿ ನಾಯಕರ ಪಾತ್ರ ಬಹುಮುಖ್ಯವಾದುದು'' ಎಂದು ನಗು ನಗುತ್ತಾ ಅತ್ಯಂತ ಖುಷಿಯಿಂದ ಅವರು ಹೇಳುತ್ತಿದ್ದಾಗ, ಅಯ್ಯೋ, ನನ್ನ ಕನ್ನಡ ಮಾಷ್ಟ್ರು ಇವರೇ ಆಗಬಾರದೇ ಎಂದು ನನಗನಿಸಿದ್ದು ಖಂಡಿತಾ ಸುಳ್ಳಲ್ಲ!
ಒಟ್ಟು ಒಂಭತ್ತು ಭಾಷೆಗಳಲ್ಲಿ ಹಿಡಿತ ಸಾಧಿಸಿರುವ ಇವರಿಗೆ, ಸಂಸ್ಕೃತ, ಕನ್ನಡ, ಪ್ರಾಕೃತ, ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ಉರ್ದು ಹಾಗೂ ಪಾಲಿ ಭಾಷೆಗಳನ್ನು ಮಾತನಾಡುತ್ತಾರೆ. ನಾನು ತುಳುನಾಡಿನವನಾದ್ದರಿಂದ, ತುಳು ಬರುತ್ತಾ ಎಂದು ಕೇಳಿದರೆ, ``ಒಂತೆ ಒಂತೆ ಬರ್ಪುಂಡು, ಆಂಡ ಪಾತೆರುಜಿ ಆತೆ'' ಎಂದು ಮುಗುಳ್ನಗಬೇಕೆ??
ಇಂದಿನ ಆಧುನಿಕ ಯುಗದಲ್ಲೂ ನಮ್ಮಲ್ಲಿ ಸಾಂಪ್ರದಾಯಿಕ ಮಡಿವಂತರಿಗೇನೂ ಕಡಿಮೆ ಇಲ್ಲ ಬಿಡಿ. ತಮ್ಮದೇ ಆದ ವಿಚಿತ್ರ ಕಟ್ಟುಪಾಡುಗಳನ್ನು ಈಗಲೂ ಅನುಸರಿಕೊಂಡು ಹೋಗುತ್ತಿರುವರು ನಮ್ಮ ನಡುವೆಯೇ ಇದ್ದಾರೆ. ಇಂಥವರಿಂದ ಸಮಾಜದ ಕೆಳವರ್ಗದ ಹಾಗೂ ಇನ್ನಿತರ ವರ್ಗದ ಜನರು ಇಂದಿಗೂ ನೋವನ್ನು ಅನುಭವಿಸುವುದು ಇದ್ದದ್ದೇ. ಅಂತರಂಗದ ಮಡಿವಂತಿಕೆಯನ್ನು ಕಾಯ್ದುಕೊಳ್ಳದಿದ್ದರೂ, ತೋರಿಕೆಯ ಮಡಿವಂತಿಗೆ ದುಂಬಾಲು ಬಿದ್ದು ಸಾಮಾನ್ಯ ವರ್ಗದವರನ್ನು ನೀಚ ದೃಷ್ಟಿಯಿಂದ ಕಾಣುವ 'ಸ್ವಯಂಘೋಷಿತ' ಮಡಿವಂತರಿಂದ ರಾಬರ್ಟ್ ಅವರಿಗೂ ನೋವುಂಟಾಗಿದೆ! ಆದರೆ ಇವರಿಗೆ ಆದದ್ದು ಕೊಂಚ ಬೇರೆ ರೀತಿಯ ಅನುಭವ.
ಒಮ್ಮೆ ಮಾಧ್ವ ಸಿದ್ಧಾಂತದ ಕುರಿತು ಅವರು ಮಾತನಾಡುತ್ತಿದ್ದಾಗ, ಕೆಲವು ಸಾಂಪ್ರದಾಯಿಕ ಮಡಿವಂತರು, ''ಮುಂದಿನ ಜನ್ಮದಲ್ಲಿ ನೀವು ಮಾಧ್ವರಾಗಿ ಹುಟ್ಟಿಬನ್ನಿ. ಆಮೇಲೆ ಮಾಧ್ವ ಸಿದ್ಧಾಂತದ ಕುರಿತು ಮಾತನಾಡುವಿರಂತೆ'' ಎಂದು ತೆಗಳಿದ್ದನ್ನು ಅತ್ಯಂತ ಬೇಸರದಿಂದ ಹೇಳುತ್ತಾರೆ.
ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಕಲಿಯಲು ಆಸಕ್ತಿ ತೋರಿತಾಗ ಆತನ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೆ ಹೊರತು, ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದಾಗ, ನಿರಾಶೆ ಹಾಗೂ ಕೊರಗು ಅವರ ಮೊಗದಲ್ಲಿ ಅಚ್ಚೊತ್ತಿ ಕೂತಿತ್ತು.
ಅದೇನೆ ಇರಲಿ, ವಿದೇಶಿಗನೊಬ್ಬ ಕನ್ನಡವನ್ನು ಇಷ್ಟು ಸುಂದರವಾಗಿ, ಸ್ವಚ್ಛಂದವಾಗಿ, ಅಷ್ಟೇ ಕೋಮಲ ಧ್ವನಿಯಿಂದ ಮಾತನಾಡುತ್ತಾನೆ ಎಂದಾದರೆ, ನಮ್ಮ ನಡವಳಿಕೆ ಬಗ್ಗೆ ಪ್ರಶ್ನೆ ಮೂಡದೆ ಖಂಡಿತಾ ಇರದು. ಕನ್ನಡ ನಮ್ಮ ಮಾತೃಭಾಷೆ. ಆದರೆ ಪಾಶ್ಚಾತ್ಯರ ಇಂಗ್ಲಿಷ್ ಭಾಷೆಗೆ ನಾವು ಸೋತಾಗಿದೆ. ಹೌದು, ಇಂದು ಇಂಗ್ಲಿಷ್ ಬೇಕು. ಆದರೆ ನಮಗೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದರೂ ನಾವು ಕಣ್ಮುಚ್ಚಿ ಕುಳಿತಿದ್ದೇವೆ ಎಂದರೆ ಅದಕ್ಕೆ ಏನನ್ನಬೇಕು? ಇದು ನಮ್ಮ ಸ್ವಂತಿಕೆಯ ಪ್ರಶ್ನೆ. ನಮ್ಮವರು ರಾಬರ್ಟ್ ರಂಥವರನ್ನು ನೋಡಿ ಕಲಿವಂಥದ್ದು ಸಾಕಷ್ಟಿದೆ.
ಮಸ್ತಕಾಭಿಷೇಕದ ದಿನದಂದು ರತ್ನಗಿರಿ ಬೆಟ್ಟದಲ್ಲಿ ಮಿಂದು ಮೊಳಗುತ್ತಿದ್ದ ಗೊಮ್ಮಟ ಒಂದು ಕಡೆ ಸಂತೋಷ ಕುಣಿದಾಡಿದಂತೆ ಕಂಡುಬರುತ್ತಿದ್ದರೆ, ಇತ್ತ ನಾನು, ವಿದೇಶದಿಂದ ಬಂದ, ಅಷ್ಟೇ ಆತ್ಮೀಯನಂತೆ ಕಂಡು ಬಂದ, ಆಕಸ್ಮಿಕವಾಗಿ ಭೇಟಿ ಮಾಡಿದ ರಾಬರ್ಟ್ ಅವರೊಂದಿಗೆ ಮಾತುಕತೆ ನಡೆಸಿ ಮನದೊಳಗೇ ಹರ್ಷಚಕಿತನಾಗಿ ನಲಿದಾಡುತ್ತಿದ್ದೆ.